ಕೆ.ಎಸ್. ವೈಶಾಲಿ
ಡಾ. ಕೆ. ಎಸ್. ವೈಶಾಲಿ ಸಂಗೀತಲೋಕದ ಸಾಧಕಿ, ಪ್ರಾಧ್ಯಾಪಕಿ, ಸಾಮಾಜಿಕ ಕಳಕಳಿಯ ಚಿಂತಕಿ ಮತ್ತು ಬರಹಗಾರ್ತಿ.
ವೈಶಾಲಿ ಅವರು ಕೆ.ಎಚ್. ಶ್ರೀನಿವಾಸ್ ಮತ್ತು ಶಾಲಿನಿ ಶ್ರೀನಿವಾಸ್ ದಂಪತಿಯ ಸುಪುತ್ರಿ.
ವಿದುಷಿ ವೈಶಾಲಿ ಅವರು ಗದುಗಿನ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಶ್ರೇಷ್ಠ ಪರಂಪರೆಗೆ ಸೇರಿದ ಹಿರಿಯ ಹಾರ್ಮೋನಿಯಂ ವಿದ್ವಾಂಸರಾದ 'ಸಂಗೀತ ಮಹಾಮೋಪಾಧ್ಯಾಯ' ಪಂಡಿತ್ ಆರ್.ವಿ.ಶೇಷಾದ್ರಿ ಗವಾಯಿಗಳ ಶಿಷ್ಯೆ. ವೈಶಾಲಿ ಅವರು ಅಥ್ರೌಲಿ - ಜೈಪುರ ಘರಾನಾದ ಪ್ರಸಿದ್ಧ ಗಾಯಕಿ ಸಂಗೀತ ಸರಸ್ವತಿ ಶ್ರೀಮತಿ ಕಿಶೋರಿ ಅಮೋನ್ಕರ್ ಅವರಿಂದಲೂ ಮಾರ್ಗದರ್ಶನ ಪಡೆದವರು.
ವೈಶಾಲಿ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದಿಂದ ಪ್ರಥಮ ದರ್ಜೆ ಸಂಗೀತ ವಿಶಾರದ ಪದವಿಯನ್ನು ಪಡೆದರು ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಸಾಧನೆ ಮಾಡಿದರು.
ವೈಶಾಲಿ ಅವರು ಸಂಗೀತದಲ್ಲಿ ಮಾತ್ರವಲ್ಲದೆ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ., ಎಂ.ಫಿಲ್, ಮತ್ತು ಪಿಎಚ್.ಡಿ ಸಾಧನೆ ಮಾಡಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ವೈಶಾಲಿ ಅವರ ಸಂಗೀತ ಕಾರ್ಯಕ್ರಮಗಳು ದೇಶದ ಎಲ್ಲ ಪ್ರಸಿದ್ಧ ಸಂಗೀತ ವೇದಿಕೆಗಳಲ್ಲಿ ಮಾತ್ರವಲ್ಲದೆ ಯುನೈಟೆಡ್ ಕಿಂಗ್ಡಂ, ಅಮೆರಿಕ ಸೇರಿದಂತೆ ವಿದೇಶಗಳಲ್ಲೂ ನಡೆಯುತ್ತ ಬಂದಿವೆ. ಅವರ ಅನೇಕ ಸಂಗೀತದ ಆಲ್ಬಮ್ಗಳು ಪ್ರಸಿದ್ಧಿ ಪಡೆದಿವೆ.
ಡಾ. ಕೆ. ಎಸ್. ವೈಶಾಲಿ ಅವರ ಸಂಗೀತ, ಸಂಸ್ಕೃತಿ ಮತ್ತು ಸಾಹಿತ್ಯಗಳ ಕುರಿತಾದ ಚಿಂತಾನಾತ್ಮಕ ಬರಹಗಳು ನಾಡಿನ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮೂಡಿವೆ. ಅವರ ಬರಹಗಳಲ್ಲಿ ನೊಬೆಲ್ ಪುರಸ್ಕೃತ ಫಾಮುಕ್ ಅವರ 'ಸ್ನೋ' ಕೃತಿಯ ಕನ್ನಡ ಭಾಷಾಂತರ 'ಹಿಮ' ಕೃತಿಯೂ ಸೇರಿದೆ. 'ಪದ್ಮರಾಗ' ಎಂಬ ಇವರ ಕೃತಿ ಬಂಗಾಳಿ ಮೂಲ ರುಕಿಯ ಶೇಖಾವತ್ ಹುಸೇನ್‌ರ ಕಿರು ಕಾದಂಬರಿಯ ಅನುವಾದವಾಗಿದೆ. Prisoning Rhythms ಇವರ ಇಂಗ್ಲಿಷ್ ಕೃತಿ.
ಡಾ. ಕೆ. ಎಸ್. ವೈಶಾಲಿ ಅವರಿಗೆ ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಸಂಗೀತ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈಶಾಲಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ಕಾಮೆಂಟ್‌ಗಳು