ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ84


ಭಗವದ್ಗೀತಾ ದರ್ಶನ

ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಭೀಷ್ಮ ಪರ್ವ - ಮೂರನೆಯ ಸಂಧಿ

ಸೂ. ರಾಯದನುಜರಘಟ್ಟಿ ಪಾಂಡವ
ರಾಯ ಜಂಗಮಜೀವ ನಿರ್ಜಿತ
ಮಾಯ ನಿಜವನು ತೋರಿ ಪಾರ್ಥನನೊಲಿದು ಬೋಧಿಸಿದ

ಹಳಚಲನುವಾಯ್ತು ಭಯಸೇನಾ
ಜಲಧಿ ಕಳಕಳ ಮಿಗಲು ಮಾರುತಿ
ಮೊಳಗಿದನು ಪೌಂಡ್ರಕವ ಭೂಪನನಂತವಿಜಯವನು
ಇಳೆ ಹಿಳೆಯೆ ಮಣಿಪುಷ್ಪಕದ ನಿ
ರ್ಮಲ ಸುಘೋಷದೊಳಮಮ ಕೋಳಾ
ಹಳಿಸಿದುದು ಸಹದೇವ ನಕುಲರು ಸಮರಕನುವಾಯ್ತು  ೧

ಕೇಳು ಜನಮೇಜಯ ಧರಿತ್ರೀ
ಪಾಳ ಹಿಮಕರ ಕುಲಲಲಾಮರು 
ಕಾಳೆಗಕೆ ಕೈದಟ್ಟಿ ಹರಿದುದು ಕಳನ ಚೌಕದಲಿ
ಆಳು ಗಜಬಜಿಸಿತ್ತು ರಾವುತ
ರೋಳಿ ಸೇರಿತು ಸರಸದಲಿ ದೆ
ಖ್ಖಾಳಿಸಿದುದಿಭರಥನಿಕಾಯದ ಬೆರಳ ಬೊಬ್ಬೆಯಲಿ  ೨

ಹಿಂಡೊಡೆದು ಮುಂಗುಡಿಯ ತಾ ಕಯಿ
ಕೊಂಡು ದೂವಾಳಿಯಲಿ ರಥವನು 
ಮಂಡಳಿಸಿ ಕೆಲ್ಲಯಿಸಿ ಲುಳಿಯಲಿ ಲಲಿತಪೇರಯವ
ಚಂಡಗತಿಚಾಳನೆಯಲುಬ್ಬಟೆ
ಗೊಂಡಿಸದೆ ವೇಡೆಯವ ಕೊಳ್ಳದೆ 
ಗಾಂಡಿವಿಯ ಕೈಮನದ ಲಾಗನು ಪಡೆದನಸುರಾರಿ  ೩

ಮುರವಿಜಯ ನಿಜಪಾಂಚಜನ್ಯವ
ನಿರದೆ ಫಲಗುಣ ದೇವದತ್ತ
ಸ್ಫುರಿತರವವನು ರಚಿಸಿದನು ಮೂಲೋಕ ಮೈಮರೆಯೆ
ತುರಗವನು ಬೋಳಯಿಸಿ ವಾಘೆಯ 
ತಿರುಹಿ ಚಮ್ಮಟಿಗೆಯಲಿ ತೇಜಿಯ
ಬರಿಯ ಬೆದರಿಸಿ ಕೃಷ್ಣ ಪಾರ್ಥನ ರಥವ ಲುಳಿವಡೆದ   ೪

ಚಟುಳ್ ಹಯಖುರ ಖಂಡಿತೋರ್ವೀ
ನಿಟಿಲ ನಿರ್ಗತ  ಬಹಳ ಧೂಳೀ
ಪಟಲ ಧೂಸರ ಸಕಲ ಜಗದಸುರಾರಿ ನಲವಿನಲಿ
ಪಟುಗತಿಯ ಗರುವಾಯಿಯಲಿ ಸಂ
ಘಟಿಸಿ ಹಯವನು ಸುಳಿಸಿದನು ಚೌ
ಪಟದೊಳೊಯ್ಗಾರಿಸುತ ಬೋಳಯಿಸಿದನು ಕಂಧರವ   ೫

ಗತಿಗೆ ಕುಣಿದವು ನಾಸಿಕದ ಹೂಂ
ಕೃತಿಯ  ಫೇನೋನ್ನತಿಯ  ಬಳಿಯವ
ಗತಿಯ ಕಬ್ಬಿಯ ಕೊಂಡಿಗಳ ಘಣಘಣಿತ ನಿಸ್ವನದ
ವಿತತ ಸೃಕ್ವದ ಲೋಳಿಗಳ ಸಂ
ಸೃತ ಜತರಜ ಸ್ವೇದಜಲ ಲಾ
ಲಿತ ಹಯಾದಳ ಕಳನ ಗೆಲಿದವು ಹರಿಯ ನೇಮದಲಿ  ೬

ನಿಲಿಸಿದನು ಫಲುಗುಣನ ರಥವನು
ತಳಪಟದೊಳೇನೈ ಮಹಾರಥ
ರಳವಿಗೊಡ್ಡಿದೆ ನಿನ್ನೊಳುಂಟೇ ಕೈಮನದ ಕಡುಹು
ಲುಳಿಯ ಬಿಲುವಿದ್ಯಾಚಮತ್ಕೃತಿ
ಯಳವು ಗರುಡಿಯೊಳಲ್ಲದೀ ರಿಪು
ಬಲಕೆ ತೋರಿಸಬಹುದೆ ಹೇಳೆಂದರ್ಜುನನ ಜರೆದ   ೭

ಸಹಸವೇನದು ಜೀಯ ನೆರೆದಿ
ರ್ದಹಿತಬಲವೆನಗಾವ ಘನ ಬಿ
ನ್ನಹವ ಕೇಳೈ ಕೃಷ್ಣ ಕೌರವರಾಯರೊಡ್ಡಿನಲಿ
ಬಹಳ ಬಲರಿವರಾರು ಸೇನಾನಿ
ವಹದಲಿ ನಾಯಕರ ವಿವರಿಸ
ಬಹರೆ ಬೆಸಸೆನೆ ನುಡಿದನು ನಗೆಯ ಮೊಳೆ ಮಿನುಗೆ   ೮

ಆದಡರ್ಜುನ ನೋಡು ಸೈನ್ಯ ಮ
ಹೋದಧಿಯ ಮಧ್ಯದಲಿ ಮೆರೆವವ
ನಾ  ದುರಂತ ಪರಾಕ್ರಮವನು ಗಂಗಾಕುಮಾರಕನು 
ಕಾದಲರಿದಪನಖಿಲಬಲ ವಿಭು
ವಾದನಿವನತಿಬಲನು ಕಾಲನ
ಸಾಧಿಸಿದ ಛಲದಂಕಮಲ್ಲನು ಭೀಷ್ಮ ನೋಡೆಂದ    ೯

ಮಿಸುಪ ತುದಿವೆರಳಂಬುಗೊಲೆಗೇ
ರಿಸಿದ ಬಿಲು ಮಣಿಮಯದ ಗದ್ದುಗೆ
ರಸುಮೆಗಳ ಜೋಡಿನಲಿ ಹೊಂದೇರಿನ ವಿಡಾಯಿಯಲಿ
ಮಸೆಗೆಣೆಯ ಬತ್ತಳಿಕೆ ತಿಗುರೇ
ರಿಸಿದ ಮೈ ಕತ್ತುರಿಯ ತಿಲಕದ
ನೊಸಲಿನಾತನ ನೋಡು ಗರುಡಿಯ ಜಾಣ ದ್ರೋಣನನು   ೧೦

ರಾಯನಾತನ ಬಳಿಯಲಾ ಕ
ರ್ಣಾಯತಾಸ್ತ್ರರು ಕಾರ‍್ಮುಕದ ಸ್ವಾ
ಧ್ಯಾಯಸಿಧ್ಧರು ಹತ್ತುಸಾವಿರ ಮಕುಟವರ್ಧನರು
ಸಾಯಲಂಜದ ಸಿತಗರದೆ ತ
ನ್ನಾಯತದೊಳಪ್ರತಿಮ ರೌದ್ರದ
ನಾಯಕರ ನೆರವಿಯೊಳು ಶಲ್ಯನೃಪಾಲ ನೋಡೆಂದ  ೧೧

ಗಣನೆಗೈದದ ಹೆಗಲ ಹಿರಿಯು
ಬ್ಬಣದ ಕನಿಕದ ಝಗೆಯ ತಲೆಗ
ಡ್ಡಣೆಯ ನೇಣಿನ ಹೊಗರ ಮೋರೆಯ ಕೆಂಪಿನಾಲಿಗಳ
ಮಣಿಮಯದ ತೇರುಗಳಲಾ ಸಂ
ದಣಿಯವರು ಮಾದ್ರೇಶನದು ಫಲು
ಗುಣ ನಿರೀಕ್ಷಿಪುದಿತ್ತಲೊಂದಕ್ಷೋಹಿಣೀ ಬಲವ  ೧೨

ಕಳಶ ಸಿಂಧದ ಥಟ್ಟು ಸಮ್ಮುಖ
ದಳವಿಯಲಿ ವಿಕ್ರಮ  ದವಾಗ್ನಿಯ
ಝಳದೊಳುರೆ ಕಾಹೇರಿದಾಲಿಯ ಬಿಗಿದ ಹುಬ್ಬುಗಳ
ಹಿಳುಕನವುಕಿದ ತುದಿವೆರಳ ನಡು
ಗಳದ ಕಪ್ಪಿನ ನೊಸಲ ನಯನದ
ಬಲುಭುಜನ ನೋಡಾತನಶ್ವತ್ಥಾಮ ನಿಸ್ಸೀಮ          ೧೩

ಈತನೊಡ್ಡಿನ ಸಾರೆ ಸಂಗರ
ಕಾತು ಕೊಂಡದೆ ಕೃಪನ ದಳಸಂ
ಘಾತವೊಂದಕ್ಷೋಣಿ  ಸುಭಟರ ಸಾಲ ಮಧ್ಯದಲಿ
ಆತ ಗೌತಮವನ ಬಳಿಯಲ
ಭೀತ ಬಾಹ್ಲಿಕ ವಿಂಧ್ಯರದೆ  ವಿ
ಖ್ಯಾತರೊಂದಕ್ಷೋಣಿ ಕೌರವ ಸೈನ್ಯಶರಧಿಯಲಿ ೧೪

ಈತ ಮಾಳವನೀತ ಕೊಂಕಣ
ನೀತ ಗುಜ್ಜರನೀತ ಬರ್ಬರ
ನೀತ ಕೋಸಲನೀತ ಖೇಟಕನೀತ ಹಮ್ಮೀರ
ಈತ ಕೇರಳನೀತ ಸಿಂಹಳ
ನೀತ ಬೋಟಕನೀತ ಚೀನಕ
ನೀತ ಮಾಗಧನೀತ ದ್ರಾವಿಡನೀತ ಗೌಳನೃಪ           ೧೫

ಆಳುಗೆಲಸಕೆ ಕೆಲಬರರಸನ
ಖೇಳಮೇಳಕೆ ಕೆಲರು ಕೆಲಬರು
ಬಾಲೆಯರ ಕೊಳುಕೊಡೆಯ ಬಳಗದ ಬಂಧುಕೃತ್ಯದಲಿ
ತೋಳ ಬಲುಹೊರೆಗಲಸಿ ಕೆಲಬರು
ಮೇಲೆ ನಮ್ಮಯ ಹಗೆಗೆ ಕೆಲಬರು 
ಕಾಳಗದ  ಕಾರ‍್ಮುಕ ನೃಪಾಲರ ನೆರವಿಯದೆಯೆಂದ  ೧೬

ತಳಿತ ಪಲ್ಲವ ಸತ್ತಿಗೆಯ ಹೊಳ
ಹೊಳೆವ ಮೌಳಿಯ ರತುನ ಲಹರಿಯ 
ಚಲಿಸಿ ಚಿಮ್ಮುವ ಚಮರಿ ಸೀಗುರಿಗಳ ವಿಡಾಯಿಯಲಿ
ಹಲಗೆಯಲಿ ತೆತ್ತಿಸಿದ ಹಾವಿನ
ಹಳವಿಗೆಯ ಹೊಂದೇರ ನೃಪಮಂ
ಡಳಿಯ ಮಧ್ಯದೊಳಾತ ದುರ್ಯೋಧನ ಮಹೀಪಾಲ  ೧೭

ಅಳಲಿದುರಗನ ನೆರವಿ ಟೊಪ್ಪಿಗೆ
ಗಳೆದ ಸಾಳ್ವನ ಹಿಂಡು ಹಸಿದ
ವ್ವಳಿಪ ಸಿಂಹದ ಹಂತಿ ಕುಪಿತ ಕೃತಾಂತನೊಡ್ಡವಣೆ
ಕೊಲೆಗೆಲಸಕುಬ್ಬೆದ್ದ ರುದ್ರನ
ಬಲವಿದೆನೆ ಹರಹರ ಮಹಾರಥ
ರಳವಿಗೊಟ್ಟಿದೆ ನೋಡು ದುರ‍್ಯೋಧನ  ಸಹೋದರರ    ೧೮

ಲುಳಿಯ ಮಿಂಚಿನ ಮಂದೆ ಸುಗತಿಯ
ಝಳಕದನಿಲನ ಥಟ್ಟು ಬೀದಿಯ 
ಬಳಿಗೆ ಪುರುಷಾಮೃಗದ ಗಾವಳಿಯೆನೆ ವಿಲಾಸದಲಿ
ಹೊಳೆವ ಚಮರಿಯ ಸುತ್ತು ಝಲ್ಲಿಯ
ನೆಲಕುಗಿವ ಜೋಡುಗಳ ತೇಜಿಯ
ದಳವ ನೋಡೈ ಪಾರ್ಥ ಬಳಸಿದೆ ಕಲಿಜಯದ್ರಥನ   ೧೯

ತೋರದಲಿ ಕುಲಗಿರಿಯ ಸತ್ವದ
ಸಾರದಲಿ ವಜ್ರವನು ದನಿಯಲಿ
ಕಾರ ಬರಸಿಡಿಲಂದವಿದನುಗಿದೊಂದು ಮಾಡಿದನು
ವಾರಿಜೋದ್ಭವನೆನಲು ಝಾಡಿಯ
ಭಾರಿ ರೆಂಚೆಯ ಕೈಯ ಖಡ್ಗದ
ವಾರಣದ ಮಧ್ಯದಲಿಹನು ಭಗದತ್ತ ನೋಡೆಂದ   ೨೦

ಹೊಗರೊಗುವ ಸೂನಿಗೆಯ ಸುಪತಾ
ಕೆಗಳ ಸಿಂಧದ ಹೊಳೆವ ಹೊಂಗಂ
ಬುಗೆಯ ಹೂಡಿದ ಹಯದ ಸೂತರ ಗಳದ ಗರ್ಜನೆಯ
ಅಗಿವ ಚೀತ್ಕಾರದ ಛಡಾಳದ
ವಿಗಡ ರಥಿಕರ ರಹಿಯ ರಥವಾ
ಜಿಗಳ ನೋಡೈ ಪಾರ್ಥ ಭೂರಿಶ್ರವನ ಸೈನ್ಯವಿದು   ೨೧

ಹಲಗೆ ಕಡಿತಲೆ ಹರಿಗೆ ಖಂಡೆಯ
ಹೊಳೆವ ಮಡ್ಡು ಕಠಾರಿ ಡೊಂಕಣಿ
ಬಿಲು ಸರಳು ತೋಡಿಟ್ಟಿ ಮುದ್ಗರ ಪಿಂಡಿವಾಳ ಚಯ
ತಲೆಯ ನೇಣಿನ ಕೈಯ ಚೌರಿಯ
ಲುಳಿಯ ಜೋಡಿನ ಕಟಿಯ ಗಂಟೆಯ
ದಳವನ್ನೀಕ್ಷಿಸು ಪಾರ್ಥ ದುಶ್ಯಾಸನನ ಪಯದಳವ   ೨೨

ವೀರನಭಿಮನ್ಯು ವಿನವೊಲು ರಣ
ಧೀರನಾತನ ನೋಡು ಕರ್ಣ ಕು
ಮಾರಕರು ವೃಷಸೇನನಗ್ಗದ ಚಿತ್ರಸೇನಕರು
ಚಾರುಲಕ್ಷಣರವರು ನೂರು ಕು
ಮಾರರದೆ  ದುರ‍್ಯೋಧನಾತ್ಮಜ
ರಾರುವನು ಕೈಕೊಳ್ಳರವದಿರು ಸುಬಲ ನಂದನರು  ೨೩

ರಾಯನಣುಗರ ಗಂಡ ಕೌರವ
ರಾಯದಳ ಶೃಂಗಾರ ಮಲೆವರಿ
ರಾಯಮರ್ದನನೆಂಬ ಬಿರುದಿನಲುಲಿವ ಕಹಳೆಗಳ
ಜೀಯ ಜಯಜಯಯೆಂಬ ಪಂಡಿತ
ಗಾಯಕರ ಮಧ್ಯದಲಿ ಬೆರಳಲಿ
ಸಾಯಕವ ತಿರುಹುವನು  ತಾ ಕಲಿಕರ್ಣ ನೋಡೆಂದ   ೨೪

ಕರಿಘಟೆಯ ಕುರುವದಲಿ ಹಯಮೋ
ಹರದ ತೆರೆಮಾಲೆಯಲಿ ಬಲುಝ
ಲ್ಲರಿಯ ಬುದ್ಬುದ ತತಿಯಲಸ್ತ್ರದ ಕಿಡಿಯ ವಡಬನಲಿ
ಬಿರುದರಾಯರ ರತುನರಾಜಿಯ
ಲರಿಬಲಾರ್ಣವ ಗಜರು ಮಿಗಿಲ
ಳ್ಳಿರಿಯುತದೆ ಬಹುವಿಧದ ವಾದ್ಯವಿಡಾಯ ರಭಸದಲಿ  ೨೫

ಆಳ ಮಯವಖಿಳೋರ‍್ವಿ ಪದಹತ
ಧೂಳಿಮಯವಾಕಾಶ ರಥತುರ
ಗಾಳಿಮಯ ದಿಗುಜಾಲವೇನೆಂಬೆನು ಮಹಾದ್ಭುತವ
ಕಾಳೆಗಕೆ ನೀನಲ್ಲದವನಿಯೊ
ಳಾಳ ಕಾಣೆನು ಪಾರ್ಥ ಸಾಕಿ
ನ್ನೇಳು ಬಾಣವ ತೂಗು ಮಾತಾಡಿಸು ಮಹಾಧನುವ    ೨೬

ಎಲೆ ಧನಂಜಯ ಹಗೆಯ ಹೆಚ್ಚಿದ
ಹಳುವವಿದೆಲಾ ವಜ್ರಿಸುತ ನಿ
ನ್ನಳವಿಯಲಿ ತರುಬಿದೆ ಸುಯೋಧನ ಸೈನ್ಯ ಗಿರಿನಿಕರ
ಎಲೆ ಸಮೀರಜನನುಜ ರಿಪುಬಲ
ವಿಲಯ ಮೇಘ ನಿಕಾಯವಿದೆ ಭುಜ
ಬಲವ ತೋರೈ ತಂದೆ ನೋಡುವೆನೆಂದನಸುರಾರಿ  ೨೭

ಮೆಟ್ಟಿ ನೋಡಿದನಹಿತ ರಾಯರ
ಥಟ್ಟುಗಳ ತೆರಳಿಕೆಯನುತ್ಸಹ
ಗೆಟ್ಟು ಫಲುಗುಣ ಸೆಡೆದು ಮನದಲಿ ನೊಂದು ತಲೆವಾಗಿ
ಕೆಟ್ಟ ಕಾಯದ ಸುಖಕಳುಪಿ ಒಡ
ಹುಟ್ಟಿದರ ಕೈಯರ ಕೊಂದರೆ
ಮುಟ್ಟದೇ‌ ಕಡುಪಾಪ ಘನಪರಿತಾಪ ತನಗೆಂದ  ೨೮

ಕೆಲರೊಡಹುಟ್ಟಿದರು ಗುರುಗಳು
ಕೆಲರು ಕೆಲಬರು ಮಾವ ಮೈದುನ
ನಳಿಯ ಮಗ ಹಿರಿಮಯ್ಯ ಮುತ್ತಯ ಮೊಮ್ಮನೆನಿಸುವರು
ಕಳದೊಳಿನಿಬರ ಕೊಂದು ಶಿವಶಿವ
ಕೆಲವು ದಿವಸದ ಸಿರಿಗೆ ಸೋಲಿದು 
ಮುಳುಗುವೆನೆ ಭವಸಿಂಧುವಿನೊಳಾನೆನುತ ಮನಮುರಿದ   ೨೯

ಇದಿರುಗಾಣದೆ ಕೊಲೆಗೆ ನಿರ್ಬಂ
ಧದಲಿ ಬೆಸಸುವ ಕೃಷ್ಣನಕಟಾ
ಮದಮುಖನೊ ದುರ್ಭೋದಕನೊ ವಂಚಕನೊ ಘಾತಕನೊ
ಯದುಗಳನ್ವಯದೊಳಗೆ ಕರುಣಾ
ಸ್ಪದರು ಜನಿಸರಲಾ ಮುರಾರಿಯ
ಹೃದಯ ಬೆಟ್ಟಿತೆನುತ್ತ ಫಲುಗುಣ ತೂಗಿದನು ಶಿರವ  ೩೦

ನರಕಕರ‍್ಮವ ಮಾಡಿ ಇಹದೊಳು
ದುರಿತ ಭಾಜನನಾಗೆ ಕಡೆಯಲಿ
ಪರಕೆ ಬಾಹಿರನಾಗಿ ನಾನಾಯೋನಿಯೊಳು ಸುಳಿದು
ಹೊರಳುವನುವನು  ಕೃಷ್ಣದೇವನು
ಕರುಣಿಸಿದನೇ‌ ಹಿತವನೇ ಹರ
ಹರ ಮಹಾದೇವೊಂದು ಬೋಳಕೆ ಬದುಕಿದೆನುಯೆಂದ  ೩೧

ಮುಳಿಯಲಾಗದು ಕೃಷ್ಣ ನಿಮ್ಮನು
ತಿಳುಹಲಾನು ಸಮರ್ಥನೇ ಕುಲ
ಕೊಲೆಗೆ ಕೊಕ್ಕರಿಸಿದೆನು ನನೆದೆನು ಕರುಣ ವಾರಿಯಲಿ
ಬಲುಹನೀ ಮುಖದಲ್ಲಿ ತೋರುವ
ಡಳುಕಿದೆನು ಸಾಮ್ರಾಜ್ಯ ಸಂಪ
ತ್ತಿಳೆಯ ಸಂಕಲಭ್ರಾಂತಿ ಬೀತುದು ದೇವ ಕೇಳೆಂದ   ೩೨

ಎಡಹಿದರೆ  ರುಜೆರುಗಿಯಾಪ
ತ್ತಡಸಿದರೆ ಮೇಣಾವ ತೆರದಿಂ
ದೊಡಲುವಿಡಿದರೆ ಮರಣ ತಪ್ಪದು ಸುರರಿಗೊಳಗಾಗಿ
ಕೆಡುವ ಕಾಯವ ನಚ್ಚಿ ಬಂಧುಗ
ಳೊಡನೆ ವೈರವ ಮಸೆದು ನರಕಕೆ 
ಕೆಡೆವನೇ ತಾನೆನುತ ರಥದೊಳು ಬಿಲ್ಲನಿಳುಹಿದನು ೩೩

ಕರಗಲಂತಃಕರಣ ಚಿಂತಾ
ತುರನು ಸಂಗ್ರಾಮದ ವಿರಕ್ತಿಯೊ
ಳಿರಲು ಕಂಡನು ಕಮಲನಾಭನು ನಗುತ ಮನದೊಳಗೆ
ತರಳನಿವನದ್ವೈತಕಲೆಯಲಿ
ಪರಿಣತನು ತಾನಲ್ಲ ನೆವದಿಂ
ನರನ ಬೋಧಿಸಬೇಕೆನುತ ನುಡಿಸಿದನು ಫಲುಗುಣನ  ೩೪

ಏನು ಫಲುಗುಣ ಸಮರದಲಿ ದು
ಮ್ಮಾನವಾವುದು ಹದನು ಶೌರ‍್ಯಕೆ
ಹಾನಿಯೆಲ್ಲಾ ತ್ರಿಜಗಚೌಪಟಮಲ್ಲ ನೀನೆನಿಪ
ಮಾನಗರ್ವವು ಮುರಿಯದೇ ರಿಪು
ಸೇನೆ ನಗದೇ ತೆತ್ತ ಸಮವ
ನೀನುಪೇಕ್ಷಿಸಿ ನೋಡಲಹುದೇ ಬಿಲ್ಲ ಹಿಡಿಯೆಂದ  ೩೫

ಆವ ನಿನ್ನಯ ಕ್ಷತ್ರಧರ‍್ಮವ
ಭಾವಿಸಿದೆ ಮೇಣಾವ ಶಶಿವಂ
ಶಾವಳಿಯ ನೆಮ್ಮುಗೆಯ ನೆಗಳಿದೆ ತೆತ್ತ ಕಾಳೆಗಕೆ
ಅವ ನಿನ್ನಗ್ಗಳಿಕೆಗುಚಿತವ 
ತೀವಿ ಬಯಸಿದೆ ಕದನಮುಖದಲಿ
ಹೇವ ವೀರರೊಳಿಲ್ಲಲಾ ವಿಸ್ಮಯವಿದಕಟೆಂದ  ೩೬

ಅಲಗಿನೊರಸೊರಸಿಲ್ಲ ಕೈಮೈ
ಗಳಲಿ ಮುಳುಗಿದ್ ಬಾಣವಿಲ್ಲ
ಗ್ಗಳಿಸಿ ನೊಸಲಲಿ ಮುರಿದ ಭಲ್ಲೆಯವಿಲ್ಲ ನೋಡುವರೆ
ಕಲಹದಲಿ ಪಡಿಮುಖದ ಘಾಯದ
ಚಲರಕುತದೊರವಿಲ್ಲ ನೀ ಮು
ನ್ನಳುಕಿ ಕೈದುವ ಹಾಯ್ಕಿದೈ ಸರಿಯೆಲ್ಲ ನಿನಗೆಂದ  ೩೭

ತರುಣಿಯರ ಮುಂದಸ್ತ್ರಶಸ್ತ್ರವ
ತಿರುಹಬಹುದುಬ್ಬೇಳಬಹುದ
ಬ್ಬರಿಸಬಹುದೆನಗಾರು ಸರಿ ನಾ ಧೀರನೆನಬಹುದು
ಕರಿತುರಗ ಬಹಳಶಸ್ತ್ರೋ
ತ್ಕರ ಕೃಪಾಣದ ಹರಹಿನಲಿ ಮೊಗ
ದಿರುಹದಿಹ ಕಲಿಯಾರು ಕುಂತೀಸೂನು ಕೇಳೆಂದ  ೩೮

ಬಂಧುಹನನಕೆ ಮನದರಲು ಭವ
ವಿಂಧ್ಯದಲಿ ಬೆಳ್ಳಾಗಿ ರೌರವ 
ಸಿಂಧುವಿನೊಳೋಲಾಡದಿಹನೇ ಪರಮಪಾತಕನು
ಸಂಧಿಯಲಿ ನಮ್ಮವನಿ ಋಣಸಂ
ಬಂಧವುಂಟೇ ಬರಲಿ ರಣದಭಿ
ಸಂಧಿ ಸಾಕಿನ್ನೆನುತ ಫಲುಗುಣ ಶಿರವ ಬಾಗಿದನು  ೩೯

ಎಲವೊ ಫಲುಗುಣ ನುಡಿದ ಭಾಷೆಯ
ಸಲಿಸಿ ಕಾನನದೊಳಗೆ ತೊಟ್ದನೆ
ತೊಳಲಿ ಹದಿಮೂರಬುದ ಬಂದಾಪತ್ತನನುಭವಿಸಿ
ನೆಲನ ಭಾಗವ ಬೇಡಿ ಸಂಧಿಗೆ
ಕಳುಹಿದರೆ ಕೌರವನು ನೂಕಿಸಿ
ಕಳೆದ ನಿಮಗಿನ್ನಾವ ಹೊಲ್ಲೆಹವೆಂದನಸುರಾರಿ  ೪೦

ಎವಗೆ ನೀನುತ್ತರನ ಕಥೆವೇ
ಳುವೆ ನಗುವೆಯಾತನಿಗೆ ನೀನೀ
ಬವರದೊಳು ಗುರುವಾದೆ ಲೋಗರ ನಿಂದೆ ತನಗಹುದು
ಲವಲವಿಕೆಯಲಿ ಕಾದಬೇಕೆ
ಮ್ಮವನಿಯನು ಕೈಕೊಳಲುಬೇಕೆಂ
ಬವಗಡೆಯತನವೆತ್ತಲಡಗಿತು ಪಾರ್ಥ ಹೇಳೆಂದ  ೪೧

ಬಲುಹ ನೀ ನೋಡುವರೆ ಪರಮಂ
ಡಳಿಕರನು ತಂದೊಡ್ಡು ಬಳಿಕೆ
ನ್ನಳವನೀಕ್ಷಿಸು ಸೆಡೆದೆನಾದಡೆ ನಿಮ್ಮ ಮೈದುನನೆ
ಕೊಲುವೆನೆಂತೈ ಭೀಷ್ಮರನು ಮನ
ವಳುಕದೆಂತೈ ತಪ್ಪುವೆನು ಗುರು
ಗಳಿಗೆ ಕೃಪಗುರುಸುತರನಿರಿವುದಿದಾವ ನಯವೆಂದ   ೪೨

ಹೊಳೆದು ಹೋಹೈಶ್ವರ‍್ಯ ಕೋಸುಗ
ತಲೆಯ ಮಾರಿಯಧರ‍್ಮ ಕೋಟಿಯ
ಘಳಿಸಿ ಬಳಿಕಾ ಫಲವನಲಸದೆ ಭವಭವಂಗಳಲಿ
ತೊಳಲಿ ಬಳಲುವ ಜೀವಭಾವದೊ
ಳುಳಿವುದಾವುದು ಲಾಗು ಮೂಢರ
ಬಳಕೆಗಾವಂಜುವೆವು ಸಮರಕೆ ಶರಣು ಶರಣೆಂದ    ೪೩

ಲಾಲಿಸದೆ  ಕುಲಛಲವ ನೀತಿಯ
ಪಾಲಿಸದೆ  ಕೊಲೆಗಡುಕತನದೊಳು
ಮೇಲುಗಾಣದೆ  ಬಂಧುಗಳ ಗುರುಗಳ  ಸಹೋದರರ
ಕೋಲ ಮೊನೆಯಲಿ ಕೊಂದು ನೆತ್ತರ
ಗೂಳನುಂಬವೊಲಖಿಳ ರಾಜ್ಯದ
ಮೇಲೆ ಸೊಗಸುವ ಸಿರಿಯನೊಲ್ಲೆನು ಕೊಲುವನಲ್ಲೆಂದ   ೪೪

ಆರನೈ ನೀ ಕೊಲುವೆ ನಿನ್ನಿಂ
ದಾರು ಸಾವರು ದೇಹವೆನೊ ನಿಜ
ಧೀರನಾತ್ಮನ ಕೊಲುವೆಯೊ ದಿಟ ನಿನ್ನ ಬಗೆಯೇನು
ಚಾರುದೇಹಕೆ ಭೂತ ನಿಕರಕೆ 
ವೈರವಿಲ್ಲುಳಿದಂತೆ ವಿಗತವಿ
ಕಾರನಚಲನಗಮ್ಯನದ್ವಯನಾತ್ಮ ನೋಡೆಂದ  ೪೫

ತನುವಳಿದ ಬಳಿಕಿನಲಿ ತನು ಸಂ
ಜನಿಸುಗೆಂಬುದು ಭವವ ಬಳಸುವ
ತನುವಿನಲಿ ಕೌಮಾರ ಯೌವನ ವಾರ್ಧಿಕಂಗಳಲಿ
ತನು ವಿಕಾರಿಸುವದು ಸುಕರ‍್ಮದ
ವಿನುತ ದುಷ್ಕೃತವೆನಿಪ ಹುಸಿ ಕ
ಲ್ಪನೆ ಶರೀರಕ್ಕಲ್ಲದಾತ್ಮಂಗಿಲ್ಲ ಕೇಳೆಂದ          ೪೬

ಅಳಿವನಲ್ಲುದಯಿಸುವನಲ್ಲ
ಗ್ಗ ಳಿಸುವವನಲ್ಲಡಗುವವನ
ಲ್ಲಳಿವ ದೇಹದ ಬಗೆಗೆ ಹೊಣೆಯೇ ಸಚ್ಚಿದಾತ್ಮಕನು
ಕಳಚಿದಡೆ ಕಳಚುವುದು ಕಾಯವಿ
ದುಳಿದಡುಳಿವುದು ಚಿನುಮಯಂಗೀ
ಕಳಕಳದ ಕಾಲಾಟ ಕೊಳ್ಳದು ಪಾರ್ಥ ಕೇಳೆಂದ   ೪೭

ನಿನಗೆ ಸಾವವನಲ್ಲ ನಿನ್ನಂ
ಬಿನಲಿ ನೋವವನಲ್ಲ ದಿಟ ನೀ
ಮುನಿದು ಗಗನಕ್ಕಲಗನುಗಿದಡೆ ಗಗನವಳುಕುವುದೇ
ತನುವಿನೀ ಗುಣಧರ‍್ಮ ಕರ‍್ಮದ
ಹೊನಲು ಹೊಗುವುದೆ ನಿತ್ಯನಿರ್ಮಲ
ಚಿನುಮಯಾತ್ಮನನೆಲೆ ವೃಥಾಹಂಕಾರವೇಕೆಂದ  ೪೮

ಆದಡೆಲೆ ಮುರವೈರಿ ಕೇಳಿದಿ
ರಾದ ಬಾಂಧವರನಿಬರನು
ಕಾದಿ ಕೊಂದನು ಪಾರ್ಥ ಪಾತಕನೆನ್ನದೇ ಲೋಕ
ಈ ದುರಂತಕ್ಕೇನುಗತಿಯಪ
ವಾದವಾವಂಗಾದುದಾತನ
ವೈದಿಕನು ಇಹಪರಕೆ ಬಾಹಿರನೆಂದನಾ ಪಾರ್ಥ ೪೯

ಮರುಳೆ ಫಲುಗುಣ ಕೇಳು ಸೂರ್ಯನ
ಕಿರಣ ಹೊಲೆಯನ ಚರಿಸಿದರೆ ಹೊಲೆ
ಹೊರುವುದೇ ಸ್ನಾನದಲಿ ವಿಧಿಸಲು  ಬಹುದೆ ನೋಡಿದನ
ಪರಮತತ್ವಜ್ಞಾನ ನಿಷ್ಠನ
ಚರಿತವೇ ಸುಚರಿತ್ರವಾತಂ
ಗಿರದು ಕೇಳು ಸುಕರ‍್ಮದುಷ್ಕಾರ‍್ಮಾದಿ ಗುಣಲೇಪ   ೫೦

ಕೊಂದೆ ನಾನೆನಗಾಯ್ತು ಪಾತಕ
ವೆಂದು ಮನದಲಿ ಮರುಗುವಾತನ
ಬಂದಿಯಲಿ ಹೊಣೆಗೊಂಬವಾಹಂಕಾರ ಮಮಕಾರ
ಕಂದು ಕಲೆ ತನಗಣೆತ್ತಣದು ನಿ
ರ್ದ್ವಂದ್ವಕನು ಮೃತ ಜಾತ ತಾನ
ಲ್ಲೆಂದು ಕಂಡರವಂಗೆ ಪಾಪವಿಲೇಪವಿಲ್ಲೆಂದ           ೫೧

ಹರಿಯೆ ಚಿತ್ತಯಿಸೈಯಹಿಂಸಾ
ಪರಮಧರ‍್ಮವು ಎಂಬ ವಾಕ್ಯದ
ಸರಣಿ ಸಾರೋದ್ಧಾರವಲ್ಲಾ ಸಕಲದರುಶನಕೆ
ನೆರಯಿನಿಬರ ತನ್ನವರ ಕೊರ
ಳರಿತದಲಿ ಕೊಕ್ಕರಿಸದಿರ್ದಡೆ
ನರಕದೊಳು ನೂರೊಂದು ಕುಲ ಮುಳುಗಾಡದಿರದೆಂದ   ೫೨

ನಿರುತವರ್ಜುನಾ ಕೇಳಹಿಂಸಾ
ಪರಮಧರ‍್ಮದ ತತ್ಸ್ವರೂಪವ
ನೊರೆವೆನಾಲಿಸು ಸಚ್ಚಿದಾನಂದೈಕಘನವೆನಿಪ
ನಿರುಪಮಾತ್ಮನ ನಿಲವನರಿಯದೆ
ನರಕಿ ಜಡನಾ ಜೀವವೆಂಬೀ
ತರಳತನವೇ ಹಿಂಸೆಯರಿವಡಹಿಂಸೆ ಕೇಳೆಂದ          ೫೩

ನೆರವಿ ಬೇರೊಂದಿಲ್ಲ ಭೂತದ
ಹರಹು ಕರಣೇಂದ್ರಿಯದ ಸಂದಣಿ
ಮರುತ ಪಂಚಕ ಬುದ್ಧಿ ಕರ‍್ಮೇಂದ್ರಿಯದ ಕಾಲೆಣಿಕೆ
ನೆರೆಯಲೊಂದಾಗಿಹುದು ಕಲ್ಪನೆ
ಹರೆದು ಜೀವಭ್ರಾಂತಿ ಬೀತಡೆ
ಪರಮ ತಾನಿಹನಲ್ಲಿ ಕೊಲುವರೆ ಸಾವನಲ್ಲೆಂದ  ೫೪

ಕರ‍್ಮವೇಹೂಡುವುದು ತನುವನು
ಕರ‍್ಮವೇ ಸಲಹುವುದು ಕಡೆಯಲಿ
ಕರ‍್ಮವೇ ಕಳಚುವುದು ಜೀವಭ್ರಮೆಯ ಬಾಹಿರರ
ಕರ‍್ಮ ತಾನೇನಾದಡಾಗಲಿ
ನಿರ‍್ಮಮತೆಯಲಿ ಮಾಡಿ ನಮ್ಮಲಿ
ನಿರ‍್ಮಿಸಲು ಕಲಿಪಾರ್ಥ ನೀ ನಿರ್ಲೇಪನಹೆಯೆಂದ   ೫೫

ಅಸುರರಿಪು ಕೇಳಾದಿಯಲಿ ಬಂ
ಚಿಸಿದ ಕರ‍್ಮವು ಜೀವರನು ಬಂ
ಧಿಸಲು ತದ್ಗುಣದೋಷ ಕರ್ತೃವನೇಕೆ ತಾಗುವುದು
ಪಸರಿಸಿತಲಾ ಸ್ಮಾರ್ತ ಮಾರ್ಗ
ಪ್ರಸರ ಕೊಂದಡೆ ಪಾಪ ಪಾವನ
ವೆಸಗೆ ಪುಣ್ಯವೆನಿಪ್ಪ ವಿವರಕ್ಕೇನು ನೆಲೆಯೆಂದ   ೫೬

ಸುಕೃತ ದುಷ್ಕೃತವೆಂಬವೇ ಬಾ
ಧಕವು ಜೀವರಿಗೀಯಹಂಕೃತಿ
ವಿಕಳತೆಗೆ ತಾ ಬೀಜ ಜನ್ಮದ ಚುಟ್ಟುಮುರಿಗಳಿಗೆ
ಸಕಲಕರ್ತೃತ್ವಾದಿ ಭೋಕ್ತೃ
ತ್ಪಕವಿದಾತ್ಮಂಗಿಲ್ಲ ಪಿತ್ತಾ
ಧಿಕನು ತಿರುಗುತ ಲೋಕ ತಿರುಗುವುದೆಂಬ ತೆರನಂತೆ  ೫೭

ಮರುಳೆ ಫಲುಗುಣ ಕೇಳು ಸಚರಾ
ಚರವೆನಿಪ ಜಗವೆನ್ನ ಲೀಲಾ
ಚರಿತದಲಿ ತೋರುವುದು ಹರೆವುದು ನನ್ನ ನೇಮದಲಿ
ನಿರುತ ನೀ ಕೇಳುವರೆ ತಿರ‍್ಯಜ್
ನರಸುರಾದಿಗಳೆಂಬ ಸಚರಾ
ಚರವಿದಾನಲ್ಲದೆ ವಿಚಾರಿಸಲನ್ಯವಿಲ್ಲೆಂದ                ೫೮

ಜಗದೊಳಾನೇ ಚರಿಸುವೆನು ತ
ಜ್ಜಗವಿದೆಲ್ಲವು ನನ್ನ ಮಾಯೆಯೊ
ಳೊಗೆದು ತೋರಿಸಿ ಸುಳಿಸೆ ಸುಳಿವುದು ಹಿಡಿಯಲಡಗುವುದು
ಮಗುವುತನದೊಳು ಕೂಡಿ ಮೆರೆವುದು
ಜಗವದಲ್ಲದೆ ನಿಜವ ಬೆರೆಸುತ
ವಿಗಡರಿಗೆ ಪರತತ್ವ ಚಿನುಮಯರೂಪ ತಾನೆಂದ  ೫೯

ಬೀಸಿದರೆ ಸಿಲುಕುವರು ಮಾಯಾ
ಪಾಶದೊಳಂಹಕಾರಿಗಳು ತ
ದ್ದೇಶಕಾಲಕ್ರಿಯೆಗಳಲಿ ನಿರ‍್ವಾಹವನು ಬೆದಕಿ
ಬೇಸರುವರಂತಿರಲಿ ಮಾಯಾ
ವೈಸಿಕದ ಸಮ್ಮೋಹನದ ಕಾ
ಳಾಸವರಿವವರೆನ್ನನರಿವರು ಪಾರ್ಥ ಕೇಳೆಂದ            ೬೦

ಏಕನಾತ್ಮನನಂತನಚಲನ
ಶೋಕನದ್ವಯನಮಲಭವನ
ಲೋಕನಿಸ್ಪೃಹನಮಿತನಕ್ರಿಯನಹತನಭ್ರಮನು
ಲೋಕಗತಿ ಮಾಯಾವಿಲಾಸ ವಿ
ವೇಕಿಗಳಿಗಿದು ಬಯಲು ಫಲುಗುಣ
ಸಾಕು ಗರ‍್ವವ ಬೀಳುಕೊಡು ಸೆಳೆ ಶರವ ಹಿಡಿ ಧನುವ  ೬೧

ಜಡನಲಾ ನರನೆಸ ತಿಳುಹಲು
ಬಿಡ ವಿಕಾರವನೆಂದು ಖಾತಿಯ
ಹಿಡಿಯಲಾಗದು ಸಲುಗೆಗಂಜಿಕೆಯೇಕೆ ಬಿನ್ನಹವು
ಬಿಡು ಜಗೌಘಾನೀಕ ನಿಮ್ಮಡಿ
ಯೊಡಲೊಳಗಣಿತವಿಹವು ಗಡ ಮಿಗೆ
ನುಡಿಯಲಮ್ಮೆನು ತತ್ಸ್ವರೂಪವ ತೋರಬೇಕೆಂದ  ೬೨

ಈ‌ ದಿವಿಜರೀ ಚಂದ್ರ ಸೂರಿಯ
ರೀ ದಿಶಾವಳಿಯೀ ಗಗನವೀ
ಮೇದಿನೀತಳವೀ ಸಮೀರಣನೀ ಜಲಾನಲರು
ಈ‌ ದನುಜರೀ ಮನುಜರೀ ನೀ
ನಾದಿಯಾಗಿಹ ಹರಹು ನಿನ್ನ ವಿ
ನೋದರೂಪಿನ ನಿರುಗೆಯನು ನೀ ತೋರಬೇಕೆಂದ  ೬೩

ಹರೆದು ಮೋಹಿಸುವೀ ಚರಾಚರ
ನೆರೆದು ನಿಮ್ಮಯ ರೋಮಕೂಪದ
ಹೊರೆಯೊಳಗೆ ಹೊಳೆದಾಡುತಿಹುದೆಂಬಗ್ಗಳಿಕೆಗಳಿಗೆ
ಹುರುಳೆನಿಪ ಹೇರಾಳದಂಗದ
ಸಿರಿಯ ತೋರೈ ಕೃಷ್ಣ ನಿರ‍್ಮಲ
ಪರಮತತ್ವವನೊಲ್ಲೆ ನಿಮ್ಮಯ ಭಕ್ತಿ ಸಾಕೆಂದ   ೬೪

ದಾಸನಾನೆಗಮಲಮೂರ್ತಿ ವಿ
ಲಾಸವನು ತೋರುವುದು ಸಲಹುವು
ದೈಸರವನೈ ತಾನು ಸಮ್ಯಗ್ ಜ್ಞಾನಭಾಜನಕೆ
ಮೀಸಲಳಿಯದ ಮಿಕ್ಕ ಬಯಕೆಯ
ಪಾಶ ತಾಗದ ನಿನ್ನ ಲೀಲೆಯ
ಭಾಸುರ ಶ್ರೀಮೂರ್ತಿಯನು ಮೈದೋರಬೇಕೆಂದ  ೬೫

ಆದಡರ್ಜುನ ನೋಡೆನುತ ಕಮ
ಲೋದರನು ಕೈಕೊಂಡನಗ್ಗದ
ನಾದಿಪುರುಷ ಶ್ರೀನಿಜವ ವಿಶ್ವಾತ್ಮಕಾಕೃತಿಯ 
ವಾದಿಸುವ ಷಟ್ತರ್ಕಗಿರ್ಕದ
ಭೇದ ಕೊಳ್ಳದ ಸಕಲ ಲೋಕದ
ಬೀದಿ ವಿಸಟಂಬರಿವ ವಿಮಲ ವಿರಾಟ ರೂಪವನು  ೬೬

ಬಿಳಿದು ಕರಿದೆಂಬಾರು ವರ್ಣದ
ಹೊಲಬು ಹೊದ್ದದ ಸೂರ‍್ಯಕೋಟಿಯ
ಹೊಳಹು ನಖದೀಧಿತಿಯ ಹೋಲದ ನಿಜದ ಹೊಸಪರಿಯ
ಅಳವಿನಳತೆಯ ಜಗದ ವಾರ್ತೆಯ
ಸುಳಿವು ಸೋಂಕದ ಸಕಲ ಲೋಕ
ಪ್ರಳಯ ಕಾರಣ ತೆಗೆದನಗ್ಗದ ವಿಶ್ವರೂಪವನು   ೬೭

ಕಾಣರುಳಿದವರೀತನೊಬ್ಬನ
ಕಾಣಿಕೆಗೆ ಕೌತುಕವ ಕರೆದನು
ಶೋಣಿತಾಮಲಬಹಳತೇಜದ ಹೊದರ ಹೊಯಿಲಿನಲಿ
ಕಾಣಲರಿಯವನಂತವೇದ
ಶ್ರೇಣಿ ಶಿವಶಿವ ರಾಯ ಪಾರ್ಥನ
ಜಾಣತನವೆಂತುಂಟೊ ವಿರೂಪನ ರೂಪ ಸೆರೆವಿಡಿದ  ೬೮

ಉಬ್ಬಿದನು ಹರುಷದಲಿ ಕಂಗಳ
ಗಬ್ಬ ಮುರಿದುದು ಮದದ ನಿಗುರಿನ
ಹಬ್ಬುಗೆಯ ಹೊಲಬಳಿಯೆ ನಾಲಗೆಯುಡುಗೆ ಹೆಡತಲೆಗೆ
ಸಬ್ಬಗತನೈ ಶಿವಶಿವಾ ಬಲು
ಮಬ್ಬಿನಲಿ ಮುಂದರಿಯದೆನ್ನಯ
ಕೊಬ್ಬನೇವಣ್ಣಿಸುವೆನೆನುತಡಿಗಡಿಗೆ ಬೆರಗಾದ  ೬೯

ಇದೆ ನಿರಂಜನತತ್ವ ಸಾಮ್ರಾ
ಜ್ಯದ ಸಘಾಟಿಕೆ ನಾವು ಕಡು ಮೂ
ರ್ಖದಲಿ ಮೈಮರೆದೆವು ಶರೀರದ ಬಂಧುಕೃತ್ಯದಲಿ
ಯದುಗಳನ್ವಯದಾತ ನಮಗೊ
ಳ್ಳಿದನು ಸೋದರಭಾವನೆಂದೇ
ಮುದಮುಖದಿ ಕಡುಗೇಡ ಕೆಟ್ಟೆನು ಶಿವಶಿವಾಯೆಂದ  ೭೦

ಪರುಷ ಕಲ್ಲೆಂದಳುಕಿ ಸುರತರು
ಮರನು ತೆಗೆಯೆಂದಮರಧೇನುವ
ಪರರ ಮನೆಯಲಿ ಮಾರಿ ಚಿಂತಾಮಣಿಗೆ ಕ್ಕೈದುಡುಕಿ
ಹರಳು ತೆಕ್ಕೆಯಿದೆಂಬ ಪಾಪಿಗೆ
ಪರಮಗುರು ನಾನಾದೆನೈ ಮುರ
ಹರನ ಮೈದುನನೆಂದು ಗರ್ವಿಸಿ ಕೆಟ್ಟೆನಕಟೆಂದ  ೭೧

ನೊರಜು ತಾನೆತ್ತಲು ಮಹತ್ವದ
ಗಿರಿಯದೆತ್ತಲು ಮಿಂಚು ಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿ ಸೂರಿಯರ
ನರಮೃಗಾಧಮನೆತ್ತಲುನ್ನತ
ಪರಮತತ್ವವಿದೆತ್ತಲಕಟಾ
ಮರುಳು ನನ್ನವಗುಣವದಾವುದ ಕಡೆಗೆ ಹಲುಬುವೆನು   ೭೨

ಮೇಳ ಗಡ ನಮಗೀತನಲಿ ಭೂ
ಪಾಲಕರು ಗಡ ನಾವು ಸಾರಥಿ
ಯಾಳು ಗಡ ಹರಿ ನಾವು ವೀರರು ಗಡ ವಿಚಿತ್ರವಲ
ಮೇಲುಗಾಣದ ಪಾರ್ಥನೆಂಬೀ
ಕಾಳುಮೂಳನ ವಿಧಿಯನೇಪರಿ
ವೇಳುವೆನು ಹರಯೆನುತ ಕಂಗಳನೆವೆಗಳಲಿ ಬಿಗಿದ   ೭೩

ಅಡಿಗಡಿಗೆ ಕಣ್ದೆರೆದು ಮುಚ್ಚುವ
ನಡಿಗಡಿಗೆ ಮೈಬೆದರಿ ಬೆರಗಹ
ನಡಿಗಡಿಗೆ ಮೆಯ್ಯೊಲೆವನುಬ್ಬಿದ ರೋಮ ಪುಳಕದಲಿ
ಅಡಿಗಡಿಗೆ ಮನನಲಿದು ಹೊಂಗುವ
ನಡಿಗಡಿಗೆ ಭಯಗೊಂಡು ಕರಗುವ
ನೊಡಲನವನಿಗೆ ಹರಹಿ ನಿಡುದೋಳುಗಳ ನೀಡಿದನು   ೭೪

ಮುರಹರ ತಾಯಸ್ವ ಕರುಣಾ
ಕರ ಪರಿತ್ರಾಯಸ್ವ ಲಕ್ಷ್ಮೀ
ವರ ಪರಿತ್ರಾಯಸ್ವ ದನುಜಾಂತಕ ಪರಿತ್ರಾಹಿ
ಚರಣಭಜಕ ಕುಟುಂಬಕನೆ ಘನ
ದುರಿತ ವಿಪಿನ ಕೃಶಾನುವೇ ಭವ
ಹರ ನಿರೀಕ್ಷಿಸು ರಕ್ಷಿಸೆನ್ನೆನುತ್ತ ಹೊರಳಿದನು             ೭೫

ದೇವ ಭಕ್ತಜನಾರ್ತಪಾಲಕ
ದೇವ ಬಹಳ ಕೃಪಮಹಾರ್ಣವ
ದೇವ ಸರ‍್ವೇಶ್ವರ ಸದಾನ್ಮಕ ಸಕಲ ನಿಷ್ಕಳನೆ
ಸೇವಕರಲಾರೈವರೇ ಸುಗು
ಣಾವಗುಣವನು ನಿಮ್ಮ ಭೃತ್ಯನ
ಭಾವ ಬೆಚ್ಚಿತು ವಿಶ್ವರೂಪವ ಬೀಳುಕೊಡಿಯೆಂದ    ೭೬

ಲೋಕವರಿಯಲನಂತವೇದವು
ಮೂಕನಾದನು ಜೀಯ ಜಡನವಿ
ವೇಕಿ ಮಾನವ ಮಶಕವಿದು ನಿಮ್ಮಳತೆಗೈದುವುದೇ
ಸಾಕ್ಷಿಕೊಳ್ಳೈ ಕೃಷ್ಣ ನೋಡಲು
ನೂಕದೆನ್ನೆವೆ ಸೀವುತಿದೆ ಕರು
ಣಾಕರನೆ ಕೈಗಾವುದೈ ಕೃಪೆ ಮಾಡಬೇಕೆಂದ              ೭೭

ಎಳನಗೆಯ ಸಿರಿಮೊಗದ ಚೆಲುವಿನ
ಹೊಳೆಹೊಳೆವ ನಿಟ್ಟೆಸಳುಗಂಗಳ
ತೊಳಪ ಕದಪಿನ ಮಿಸುಪ ಕಾಂತಿಯ ಮಕರಕುಂಡಲದ
ಲಲಿತಕಂಠದ ಕೌಸ್ತುಭೋರ
ಸ್ಥಳದ ನಿಡುದೋಳುಗಳ ಕೋಮಲ
ತಳಿತ ಪೀತಾಂಬರದ ಮುನ್ನಿನ ರೂಪ ತೋರೆಂದ   ೭೮

ಅಳಕ ನಿಚಯದ ಕುಂಭಿನೊಸಲಿನ
ತಳಿತೆವೆಯ ನಿಡುಹುಬ್ಬುಗಳ ಕೋ
ಮಲ ಸುಮುಕ್ತಾಫಲಕೆ ಸೆಣಸುವ ದಂತಪಂಕ್ತಿಗಳ
ಲಲಿತಚುಬುಕದ ಚಾರುತರ ಕೆಂ
ದಳದ ಸುಳಿನಾಭಿಯ ಸವರ್ತುಳ
ವಿಳಸಿತೋರುದ್ವಯದ ಮುನ್ನಿನ ರೂಪ ತೋರೆಂದ   ೭೯

ಪರಮ ಚಿನುಮಯ ನೀನು ಕರ‍್ಮದ
ಸರಣಿಯೆನ್ನದು ನೀ ಚರಾಚರ
ಭರಿತ ಭಾರಿಯ ವಿಶ್ವಮಯನವ್ಯಕ್ತನದ್ವಯನು
ನರನ ಮತಿಯಿದು ಮಂದಮತಿ ಗೋ
ಚರಿಸಲರಿವುದೆ ದೇವ ಕರುಣಿಸು
ಕರುಣಿಸೈ ಮೈದೋರು ತನ್ನೊಡನಾಡಿತನದನುವ  ೮೦

ನಳಿನನಾಭ ಮುಕುಂದ ಮಂಗಳ
ನಿಳಯ ಭಕ್ತವ್ಯಸನಿ ದೈತ್ಯ
ಪ್ರಳಯ ಪಾವಕ ಭಕ್ತವತ್ಸಲ ಭಕ್ತ ಸುರಧೇನು
ಲಲಿತಮೇಘಶ್ಯಾಮ ಸೇವಕ
ಸುಲಭ ಶೌರಿ ಮುರಾರಿ ಭಕ್ತಾ
ವಳಿ ಕುಟುಂಬಕ ಕೃಷ್ಣ ಕೇಶವ ಕರುಣಿಸೆನಗೆಂದ  ೮೧

ಪರಮಪುಣ್ಯಶ್ಲೋಕ ಪಾವನ
ಚರಿತ ಚಾರುವಿಲಾಸ ನಿರ‍್ಮಲ
ವರ ಕಥನ ಲೀಲಾ ಪ್ರಯುಕ್ತ ಪ್ರಕಟ ಭುವನಶತ
ನಿರುವಯವ ನಿರ್ದ್ವಂದ್ವ ನಿಸ್ಪೃಹ
ನಿರುಪಮಿತ ನಿರ‍್ಮಾಯ ಕರುಣಾ
ಕರ ಮಹಾತ್ಮ ಮನೋಜವಿಗ್ರಹ ಕರುಣಿಸೆನಗೆಂದ   ೮೨

ದೇವ ಲಕ್ಷ್ಮೀಕಾಂತ ವರರಾ
ಜೀವಲೋಚನ ಭೂತಭಾವನ
ರಾವಣಾಂತಕ ಗೋಪವೇಷ ವಿಲಾಸ ಜಯವಾಸ
ದೇವಕೀನಂದನ ಯಶೋದಾ
ದೇವಿಯುನ್ನತಪುಣ್ಯಫಲ ತಲೆ
ಗಾವುದೈ ತರುವಲಿಗೆ ತೋರೈ ಮುನ್ನಿನಾಕೃತಿಯ  ೮೩

ನಿಗಮನಿಕರವ ಸೆಳೆವ ತಿರುಗುವ
ನಗಕೆ ಬೆನ್ನನು ಕೂಡುವ ಜಲನಿಧಿ
ಮಗುಚೆ ಮಹಿಯನು ಮೊಗೆವ ಮಗುವಿನ ನುಡಿಗೆ ಮೈಗೊಡುವ
ಗಗನಕಂಘ್ರಿಯನಿಡುವ ತಾಯ
ಕ್ಕೆಗಳಿಗಕ್ಕೆಯ ತೋರ್ಪ ರಾಣಿಯ
ಸೊಗಸ ಸಲಿಸುವ ಕೃಪೆಯೆನೆನ್ನಲಿ ತೋರಬೇಕೆಂದ    ೮೪

ಮರೆದು ನಾಲಗೆಗೊನೆಗೆ ನಾಮದ
ನಿರುಗೆ ನೆಲೆಗೊಳೆ ನಿನ್ನನೇ ಸಲೆ
ತೆರುವ ಬಿರುದನು ಬಲ್ಲೆನೊರಲಿದು ನಿನ್ನ ಹಲುಬಿದರೆ
ಉರುವ ಹೆಂಗುಸಿನುನ್ನತಿಕೆಯಲಿ
ಸೆರಗು ಬೆಳೆದುದ ಕಂಡೆನೈ ಸೈ
ಗರೆವುದೈ ಕಾರುಣ್ಯವರುಷವನೆನ್ನ ಮೇಲೆಂದ            ೮೫

ಹಸುಳೆಗಮರಾಚಲದ ಹೊರೆ ಸೈ
ರಿಸುವುದೇ ಮರಿಹುಲ್ಲೆ ಸಿಂಹದ
ಮಸಕಕಿದಿರೇ ಲತೆಯ ಎಳಗುಡಿ ಮಾಳಿಗೆಗೆ ತೊಲೆಯೆ
ಸಸಿದರಳೆ ಸಿಡಿಲೆರಗಿದರೆ ಜೀ
ವಿಸುವುದೇ ನಿಮ್ಮಡಿಯ ವಿಶ್ವ
ಪ್ರಸರರೂಪಿಂಗಾನು ಲಕ್ಷ್ಯವೆ ಸಲಹಬೇಕೆಂದ           ೮೬

ಅಣಲೊಳಷ್ಟಾದಶ ಮಹಾಕ್ಷೋ
ಹಿಣಿಗಳಡಗಿದವೆಂಬುದಿದು ಭೂ
ಷಣವೆ ಜೀಯ ಮುರಾರಿ ನಿನ್ನಯ ರೋಮಕೂಪದಲಿ
ಗಣನೆಗೆಟ್ಟಜರುದ್ರಸುರಸಂ
ದಣಿಗಳಿವೆ ಜಠರದ ಜಗಂಗಳ
ನೆಣಿಸಬಲ್ಲವರಾರು ಸಾಕಿನ್ನೆನ್ನ ಸಲಹೆಂದ           ೮೭

ವಿಶ್ವ ನಿನ್ನಯ ಮಾಯೆ ನಿರ‍್ಮಲ
ವಿಶ್ವರೂಪವನು ನೀನು ಬಗೆವಡೆ
ವಿಶ್ವ ನಿನ್ನೊಳು ಸುಳಿವುದಳಿವುದು ಲಲಿತಲೀಲೆಯಲಿ
ವಿಶ್ವವಲ್ಲಭ ನೀನು ನಿನ್ನದು
ವಿಶ್ವಪಾಲನೆ ವಿಶ್ವಚೇಷ್ದಕ
ವಿಶ್ವದಾಧಾರನೆ ಜಡಾತ್ಮನ ಸಲಹಬೇಕೆಂದ          ೮೮

ವೀರ ದೈತ್ಯಕುಠಾರ ಗಳಿತವಿ
ಕಾರ ಗೋಪೀಜಾರ ಲಲಿತವಿ
ಹಾರ ನಿಗಮವಿದೂರ ಸುಖಸಾಕಾರ ಗತಪಾರ
ಧೀರ ಜಗದಾಧಾರ ಲಸದಾ
ಚಾರ ಕಮಲಾಗಾರ ಭುವನಾ
ಧಾರ ನಿರ್ಜಿತಮಾರ ಮುರಹರ ಸಲಹಬೇಕೆಂದ  ೮೯

ಭಯದ ಬಿಗುಹಿನ ಭಾರ ಭಕುತಿಯ
ನಯದ ಬಿನ್ನಹದೋಜೆಯನು ಚಿನು
ಮಯನು ಕೇಳಿದು ಮೆಚ್ಚಿ ಡಿಂಗರಿಗಂಗೆ ನಗುತೆಂದ
ನಿಯತವೇ ನೀನಲ್ಲಲೇ ಸೇ
ನೆಯನು ಕೊಲುವನು ಕಾವವನು ನಿ
ಶ್ಚಯವ ನಿನ್ನೊಳು ತಿಳಿದು ಬಿನ್ನಹ ಮಾಡು ಸಾಕೆಂದ ೯೦

ಎನಿತು ಜಗವಡಗಿದವು ಕೌರವ
ರೆನಿಬರಡಗಿತು ನೋಡು ಧರ‍್ಮನ
ತನಯ ಭೀಮಾರ್ಜುನರು ಭೀಷ್ಮದ್ರೋಣ ಮೊದಲಾದ
ಎನಿಬರಡಗಿತು ಬಾಂಧವ
ಹನನ ನಿನಗುಂಟಾದಡೀಗಳೆ
ನೆನೆದು ಬಿನ್ನಹ ಮಾಡೆನುತ ಪಾರ್ಥಂಗೆ ಹರಿ ನುಡಿದ  ೯೧

ಗುರುಗಳಿಗೆ ನಾ ತಪ್ಪೆನೆಂದೇ
ಮುರಿದಡೆನಗದು ಖಾತಿ ಭೀಷ್ಮನು
ವರಪಿತಾಮಹನೆಂದು ಹೊಳೆದರೆ ಬಳಿಕಸತಹ್ಯವದು
ಅರಿಬಲವು ಮುನ್ನುರಿವುದೋ ನೀ
ನರಿವೆಯೋ ಲೇಸಾಗಿ ಎನ್ನೊಳು
ನರ ನಿರೀಕ್ಷಿಸೆನುತ್ತ ನುಡಿದನು ದಾನವಧ್ವಂಸಿ           ೯೨

ನೆನೆದಡಜಕೋಟಿಗಳು ನಿಮ್ಮಯ
ಮನದೊಳಗೆ ಜನಿಸುವರುಪೇಕ್ಷೆಯೊ
ಳನಿತು ಕಮಲಜರಳಿವರೆಂದರೆ ನಿಮ್ಮ ಮಹಿಮೆಯನು
ನೆನೆಯಲಳವೇ ಜೀಯ ಸಾಕಿ
ನ್ನನುವರದೊಳೆನಗೇನ ಬೆಸಸಿದ
ರನಿತ ತಾ ಮುಖದಿರುಹಿದರೆ ಡಿಂಗರಿಗನಲ್ಲೆಂದ  ೯೩

ಮರಳಿ ಮುನ್ನಿನ ರೂಪನಂಗೀ
ಕರಿಸಿ ವಾಘೆಯ ಕೊಂಡು ತುರಗವ
ತಿರುಹಿ ಲುಳಿವಡೆಸುತ್ತ ಪಾರ್ಥಗೆ ಮಾಯೆಯನು ಬೀಸಿ
ಶರ ಧನುವ ಕೊಳ್ಳೇಳು ಕೈಕೋ
ಪರಬಲದ ತೋಟಿಯನು ತೋರೈ
ಬಿರುದ ಘಾತಕತನವನೆಂದನು ನಗುತ ಮುರವೈರಿ   ೯೪

ಮೋಹ ಮಿಗೆ ಪಾಂಡವ ಮಮ ಪ್ರಾ
ಣಾಹಿಯೆಂಬೀ ಬಿರುದ ಸಲಿಸಲು
ಗಾಹಿನಲಿ ಮೇದಿನಿಯ ತಿಣ್ಣವನಿಳುಹಲೋಸುಗರ
ಆಹವದೊಳರ್ಜುನನ ರಥದೊಳು
ವಾಹಕನು ತಾನಾಗಿ ಶರಣ
ಸ್ನೇಹ ಸಂಸಾರಾನುರಾಗನು ಸುಳಿಸಿದನು ರಥವ  ೯೫

ಸಂಕ್ಷಿಪ್ತ ಭಾವ
Lrphks Kolar

ಕೃಷ್ಣನು ಗೀತಾಚಾರ್ಯನಾಗಿ ಅರ್ಜುನನ ಕಳವಳವನ್ನು ದೂರ ಮಾಡಿದ್ದು.

ರಣರಂಗದಲ್ಲಿ ವೀರರೆಲ್ಲರೂ ಅವರವರ ಶಂಖಗಳನ್ನು ಊದಿದರು. ಪಾಂಚಜನ್ಯವನ್ನು ಕೃಷ್ಣನೂ ದೇವದತ್ತವನ್ನು ಅರ್ಜುನನೂ ಊದಿದರು. ಅರ್ಜುನನ ರಥದ ಸಾರಥ್ಯವನ್ನು ಕೈಗೊಂಡ ಕೃಷ್ಣನನ್ನು ಅರ್ಜುನನು ಕೌರವರ ಪಾಳಯದ ಪ್ರಮುಖರನ್ನು ತೋರಿಸೆಂದನು.

ಭೀಷ್ಮರನ್ನು ನೋಡು. ಆತನೇ ಸೇನಾನಿ. ಅತ್ತಕಡೆ ದ್ರೋಣರು , ಶಲ್ಯರಿದ್ದಾರೆ. ಅವರ ಸೈನ್ಯವೂ ಸಾಕಷ್ಟು ದೊಡ್ಡದಿದೆ. ಅಲ್ಲಿ ಅಶ್ವತ್ಥಾಮ ಇದ್ದಾನೆ. ಮಾಳವ, ಕೊಂಕಣ, ಗುಜ್ಜರ, ಮಾಗಧ, ದ್ರಾವಿಡ ಮೊದಲಾದವರಿದ್ದಾರೆ. ಹಾವನ್ನು ಧ್ವಜವಾಗುಳ್ಳ ದುರ್ಯೋಧನನನ್ನು ನೋಡು. ಅವನ ಪಕ್ಕದಲ್ಲಿ ಅವನ ಸಹೋದರರು ಇದ್ದಾರೆ. ಜಯದ್ರಥ, ಭಗದತ್ತ ಮುಂತಾದ ವೀರರಿದ್ದಾರೆ. ಅಭಿಮನ್ಯುವಿನಂತೆ ವೀರರಾದ ಕರ್ಣತನಯರು ಇದ್ದಾರೆ. ಕರ್ಣನಿದ್ದಾನೆ ಎಂದು ಸಕಲರ ಪರಿಚಯ ಹೇಳಿ ಇನ್ನು ಯುದ್ಧವನ್ನು ಆರಂಭಿಸು ಎಂದ.

ಆಗ ಅರ್ಜುನನ ಮನದಲ್ಲಿ ವಿಷಾದ ಭಾವ ಹುಟ್ಟಿತು. ಗುರು, ಹಿರಿಯರನ್ನು, ಬಂಧು ಬಳಗದವರನ್ನು, ಸಂಬಂಧಿಗಳನ್ನು ಕೊಂದು ಈ ಭೂಮಿಯನ್ನು ಪಡೆಯಬೇಕೇ? ಇದಕ್ಕಿಂತ ನರಕ ಮತ್ತೊಂದಿಲ್ಲ. ನಾನು ಈ ಯುದ್ಧ ಮಾಡಲಾರೆ. ಈ ಕೃಷ್ಣನು ಏಕೆ ಇಷ್ಟೆಲ್ಲ ಪ್ರಚೋದಿಸಿದನು? ಎಂದು ಆಲೋಚಿಸುತ್ತ ಬಿಲ್ಲನ್ನು ಇಳಿಸಿದನು.

ಆಗ ಕೃಷ್ಣನು ಅರ್ಜುನನನ್ನು ಪರಿಪರಿಯಾಗಿ ಸಂತೈಸುತ್ತ ರಣದಲ್ಲಿ ಹೀಗೆ ಅಳುಕಿದರೆ ಅಪಕೀರ್ತಿ ಬರುವುದು. ಉತ್ತರನ ಕಥೆಯನ್ನು ನೀನು ಹೇಳಿ ನಕ್ಕಿದ್ದೆ. ಈಗೇನಾಯಿತು? ಬಂಧುಗಳನ್ನು ಕೊಲ್ಲಲಾರೆ ಎನುತ್ತೀ. ಅವರಿಂದ ಎಷ್ಟು ಕಷ್ಟಪಟ್ಟಿರಿ, ಶಪಥ ಮಾಡಿದಿರಿ, ಶಸ್ತ್ರಗಳನ್ನು ಸಂಪಾದಿಸಿದಿರಿ..ಈಗ ಹೀಗೇಕೆ ಎಂದನು. ಆದರೆ ಅರ್ಜುನನ ವಿಷಾದ ಭಾವ ಹೋಗಲಿಲ್ಲ. ಕೊನೆಯಲ್ಲಿ ಕೃಷ್ಣನು ಅರ್ಜುನನಿಗೆ ಪರತತ್ತ್ವವನ್ನು ಬೋಧಿಸಲು ಅನುವಾದನು.  ಇದೇ ಪ್ರಸಿದ್ಧವಾದ, ಪರಮ ಪವಿತ್ರವಾದ ಭಗವದ್ಗೀತೆ. ಕೃಷ್ಣನು ಗೀತಾಚಾರ್ಯನಾದನು.

ನಿಧಾನವಾಗಿ, ಅರ್ಜುನನಿಗೆ ಮನದಟ್ಟಾಗುವಂತೆ ಹೇಳತೊಡಗಿದನು. ಯಾರನ್ನು ನೀನು ಕೊಲುವೆನೆಂದುಕೊಳ್ಳುತ್ತೀ? ದೇಹವನ್ನೋ, ಆತ್ಮವನ್ನೋ? ಆತ್ಮನು ಶಾಶ್ವತನು. ಅವ್ಯಯನು. ಇವನಿಗೆ ಹುಟ್ಟುಸಾವುಗಳಿಲ್ಲ. ನಿನ್ನಿಂದ ಇವನಿಗೆ ಏನೂ ಹಾನಿಯಾಗದು. ನಾನು ಕೊಂದೆ, ನನಗೆ ಪಾತಕವಾಯಿತು ಎನ್ನುವುದನ್ನು ಬಿಡು. ಮಮಕಾರ ಬಿಟ್ಟು ಕರ್ಮದಲ್ಲಿ ತೊಡಗು. ಫಲಾಪೇಕ್ಷೆ ಬೇಡ. ಒಳ್ಳೆಯದು ಕೆಟ್ಟದ್ದು ಎಂದೇನೂ ಇಲ್ಲ. ಭಕ್ತಿ, ಜ್ಞಾನ, ನಿಸ್ವಾರ್ಥತೆಗಳೇ ಮುಖ್ಯ. ಇಡೀ ಜಗತ್ತು ನನ್ನಲ್ಲಿದೆ. ಇದನ್ನು ನಿರ್ವಹಿಸುವವನು ನಾನು ಎಂದನು. 

ಆಗ ಅರ್ಜುನನು ಇವನ ವಿಶ್ವರೂಪವನ್ನು ನೋಡಲು ಬಯಸಿ ಕೇಳಿಕೊಂಡನು. ಸೂರ್ಯ, ಚಂದ್ರ, ದೇವತೆಗಳು, ಸಕಲ ಜೀವಿಗಳು, ಇಡೀ ಬ್ರಹ್ಮಾಂಡ ಅವನ ಶರೀರದಲ್ಲಿ ಅಡಗಿರುವುದನ್ನು ಕೃಷ್ಣನು ತನ್ನ ವಿರಾಟ್ ಸ್ವರೂಪದ ಮೂಲಕ ತೋರಿಸಿದ. ದಿವ್ಯ ಚಕ್ಷುಗಳನ್ನು ಪಡೆದ ಅರ್ಜುನನಿಗೆ ಮಾತ್ರ ಇದು ಕಂಡಿತು. ನೋಡಿದ..ನೋಡಿದ..ನೋಡಿ ಬೆರಗಾದ . ಆದರೆ ಬಹಳ ಹೊತ್ತು ನೋಡಲಾಗಲಿಲ್ಲ. ಮರಳಿ ಮುನ್ನಿನ ರೂಪವನ್ನು ಕರುಣಿಸು ಎಂದು ಬೇಡಿಕೊಂಡ. ಅಡಿಗಡಿಗೆ ಕಣ್ಣುಗಳನ್ನು ತೆರೆಯುತ್ತ, ಮತ್ತೆ ಹೆದರಿ ಮುಚ್ಚುತ್ತ ತಾನು ಎಷ್ಟು ಅಲ್ಪನು. ಈ ಕೃಷ್ಣನನ್ನು ಭಾವನೆಂಬ ಸಲಿಗೆಯಲ್ಲಿ ನಡೆಸಿಕೊಂಡೆನಲ್ಲ ಎಂದು ಮರುಗಿದ. ಎಳೆ ನಗೆಯ, ಸಿರಿಮೊಗದ ಮೊದಲಿನ ರೂಪವನ್ನು ಕರುಣಿಸು. ಇನ್ನು ನನ್ನ ಅಹಂಕಾರ ಮುಗಿಯಿತು. ನೀನು ಹೇಳಿದಂತೆ ಕೇಳುವೆ. ಯುಧ್ಧ ಮಾಡುವೆ ಎಂದನು. ನನ್ನನ್ನು ರಕ್ಷಿಸು, ಕ್ಷಮಿಸು ಎಂದು ಪರಿಪರಿಯಾಗಿ ಬೇಡಿಕೊಂಡ. ವಿಷ್ಣುವಿನ ದಶಾವತಾರದ ರೂಪಗಳನ್ನು ಸ್ಮರಿಸಿ ಅವರೆಲ್ಲರನ್ನು ಕಾಯ್ದ ಕರುಣಿ, ನನ್ನನ್ನು ರಕ್ಷಿಸು ಎಂದನು. ಎಲ್ಲವೂ ನಿನ್ನ ಲೀಲೆ ಎಂದು ನಮಿಸಿದ. 

ಕೊನೆಯಲ್ಲಿ ಕೃಷ್ಣನು ತನ್ನ ಮೊದಲಿನ ರೂಪವನ್ನು ಧರಿಸಿ ಎಂದಿನಂತೆ ತನ್ನ ಸಾರಥಿಯ ಕೆಲಸವನ್ನು ಕೈಗೊಂಡ. ಅರ್ಜುನನ ಮನದ ಅಳುಕು ದೂರವಾಯಿತು. ಮಹಾಭಾರತದ ಈ ಪ್ರಸಂಗ ಮನೆಮನೆಯಲ್ಲಿಯೂ ಭಗವದ್ಗೀತೆಯ ರೂಪವನ್ನು ತಾಳಿ ಕೃಷ್ಣನ ಕೃಪೆಯನ್ನು ಎಲ್ಲರಿಗೂ ನೀಡುತ್ತಿದೆ.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಪರಿವಿಡಿ (Index)

ಸಂಪರ್ಕ ಫಾರ್ಮ್

ಕಳುಹಿಸಿ