ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀಮಾಲಾ ಮೂರ್ತಿ


 ಶ್ರೀಮಾಲಾ ಮೂರ್ತಿ


ವೈದ್ಯಕೀಯ ವೃತ್ತಿಯಲ್ಲಿರುವ  ಡಾ. ಶ್ರೀಮಾಲಾ ಮೂರ್ತಿ ಅವರು ಅಮೆರಿಕದಲ್ಲಿ ಭಾರತೀಯ ಯೋಗ, ಸಾಹಿತ್ಯ, ಸಂಸ್ಕೃತಿಗಳನ್ನು ಆಪ್ತವ್ರತವೆಂಬಂತೆ ಪೋಷಿಸಿಕೊಂಡು ಬಂದಿರುವ ವಿಶಿಷ್ಟರು. ವಿಶ್ವದ ವಿವಿಧ ಪ್ರಾಂತೀಯ ಮತ್ತು ಧರ್ಮೀಯರ ಒಂದುಗೂಡುವಿಕೆ ಸಾಂಸ್ಕೃತಿಕ ಮತ್ತು ಸಹಕಾರ ಬಾಂಧವ್ಯ ಬೆಸುಗೆಯಲ್ಲೂ ಇವರ ಸೇವೆ ಅನುಪಮವಾದದ್ದು. ಶ್ರೀಮಾಲಾ ಅವರು ಸಂಗೀತಜ್ಞೆ.  ವೀಣಾವಾದಕಿ.  ಕನ್ನಡ ಸಾಹಿತ್ಯ ಪ್ರೇಮಿ. 

ಶ್ರೀಮಾಲಾ ಅಮೆರಿಕದಲ್ಲಿರುವ ಭಾರತೀಯ ಹೃನ್ಮನಗಳು ತಮ್ಮಲ್ಲಿ  ಅಂತರ್ಗತವಾಗಿರುವ ಭಾರತೀಯ ಸಾಂಸ್ಕೃತಿಕ  ಒಲವನ್ನು  ನಿರಂತರವಾಗಿ ಕಂಡುಕೊಳ್ಳಲು ಸ್ಥಾಪಿಸಿಕೊಂಡಿರುವ ಕೈಗನ್ನಡಿಯೋಪಾದಿಯ ಒಕ್ಕೂಟ ‘ಹಿಂದೂ ಸ್ವಯಂಸೇವಕ ಸಂಘ’ದ ಇಂಡಿಯಾನಾ ವಿಭಾಗದ ಸಂಚಾಲಕಿ. ಈ ಒಕ್ಕೂಟ  ನಡೆಸುತ್ತಿರುವ ಸಾಮೂಹಿಕ  ಚಟುವಟಿಕೆಗಳು ವೈವಿಧ್ಯಪೂರ್ಣವಾಗಿವೆ.  ಈ ಚಟುವಟಿಕೆಗಳಲ್ಲಿ  ಪ್ರಮುಖವಾದುದು ಅಮೆರಿಕದಲ್ಲಿರುವ ಭಾರತೀಯರನ್ನು ಮಾತ್ರವಲ್ಲದೆ  ಅಮೆರಿಕದಲ್ಲಿರುವ ವಿಶ್ವದೆಲ್ಲೆಡೆಯ  ಜನಾಂಗವನ್ನು ಆಕರ್ಷಿಸಿರುವ  ‘ಸೂರ್ಯನಮಸ್ಕಾರ ಅಭಿಯಾನ’.   ಈ ಒಕ್ಕೂಟವು ಕಳೆದ 19 ವರ್ಷಗಳಿಂದ   ಕೈಗೊಂಡಿರುವ ‘ಸೂರ್ಯನಮಸ್ಕಾರ ಯಜ್ಞ’ದಲ್ಲಿ ಅಸಂಖ್ಯಾತ ವಿಶ್ವಸಮೂಹವನ್ನು ಪಾಲ್ಗೊಳ್ಳುವಂತೆ ಮಾಡುತ್ತಿದೆ.  ಜೊತೆಗೆ ಭಾರತೀಯ ಯೋಗವನ್ನು ಜನಪ್ರಿಯಗೊಳಿಸುವ ಕೆಲಸವನ್ನೂ ನಿರಂತರವಾಗಿ ಮಾಡುತ್ತಿದೆ.

ಶ್ರೀಮಾಲಾ ಅವರು ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ಮಕ್ಕಳಲ್ಲಿ ಭಾರತೀಯ  ಸಂಸ್ಕಾರಗಳನ್ನು ಜೀವಂತವಾಗಿರಿಸುವ ‘ಬಾಲ ಪ್ರಮುಖ್’ ಅಭಿಯಾನದ ನೇತೃತ್ವವನ್ನೂ ಸಹಾ ಅತ್ಯಂತ ಅಕ್ಕರೆ ಹಾಗೂ ಆತ್ಮೀಯ ಸಾಂಸ್ಕೃತಿಕ ಕಾಳಜಿಗಳಿಂದ  ನಿರ್ವಹಿಸುತ್ತಿದ್ದಾರೆ. 

ಸರ್ವಧರ್ಮ, ಸರ್ವ ಪ್ರಾಂತೀಯ, ಸರ್ವದೇಶೀಯ, ಸರ್ವ ಸಂಸ್ಕೃತಿಗಳ ನಡುವೆ ಸೇತುವೆಯಂತಿರುವ ‘ Centre for Interfaith cooperation' ಚಟುವಟಿಕೆಗಳಲ್ಲೂ ಶ್ರೀಮಾಲಾ ಸಕ್ರಿಯರಾಗಿದ್ದಾರೆ.

ಶ್ರೀಮಾಲಾ ಅವರು ತಮ್ಮ ದಿವಂಗತ ತಂದೆಯವರು  ಮುದ್ರಾ ಯೋಗ ಮತ್ತು ಯೋಗ ಚಿಕಿತ್ಸೆಗಳಿಗೆ ನೀಡಿದ ಕೊಡುಗೆಯ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಅಪಾರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಭಾವನಾತ್ಮಕ ಒಂಟಿತನ ಹೆಚ್ಚಾಗುತ್ತಿರುವ ಇಂದಿನ ಯುಗದ ಹಿನ್ನೆಲೆಯಲ್ಲಿ, ಶ್ರೀಮಾಲಾ ಅವರು ಅಮೆರಿಕದಲ್ಲಿರುವ ಹಿರಿಯ ನಾಗರಿಕರ ದೈಹಿಕ, ಭಾವನಾತ್ಮಕ ಮತ್ತು ಅರಿವಿನ ಆರೋಗ್ಯವನ್ನು ಸುಧಾರಿಸಲು ಉಚಿತ ಕಾರ್ಯಾಗಾರಗಳು ಮತ್ತು ತರಗತಿಗಳನ್ನು ನಡೆಸುತ್ತಿದ್ದಾರೆ. ಮಹಿಳೆಯರ ಆರೋಗ್ಯವು ಅವರ ಮತ್ತೊಂದು ಕಾಳಜಿಯಾಗಿದ್ದು, (ವೀಣೆಯ) ನಾದ ಸಂಸ್ಕಾರದಿಂದ ಮತ್ತು ಚಕ್ರಧ್ಯಾನದಿಂದ ಗರ್ಭಿಣಿಯರಿಗೆ ಮತ್ತು ಅಸಕ್ತ ಸ್ತ್ರೀಯರಿಗೆ ಸ್ವಾಸ್ಥ್ಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. 

ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಅವರು ಎಲ್ಲಾ ಯೋಗ ಸಾಧಕರನ್ನು ಒಟ್ಟುಗೂಡಿಸುವ ಕಾರ್ಯಕ್ರಮವನ್ನು ಸಂಘಟಿಸುತ್ತ ಬಂದಿದ್ದಾರೆ.   ಧ್ಯಾನಕ್ಕಾಗಿ ಲೈವ್ ವೀಣಾ ಸಂಗೀತವನ್ನು ಪರಿಚಯಿಸಿದ್ದಾರೆ. ಕಳೆದ  ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಆರ್ಟ್ ಆಫ್ ಲಿವಿಂಗ್, ಇಶಾ ಫೌಂಡೇಷನ್, ಯೋಗ ಮಿತ್ರ ಮಂಡಲ, ಸಿದ್ಧಿ ಸಮಾಧಿ ಯೋಗ ಸಮೂಹಗಳು ಒಳಗೊಂಡಂತೆ 8 ವಿಭಿನ್ನ ಯೋಗ ಗುಂಪುಗಳು ಜೊತೆಗೂಡಿದ ಆಯೋಜನೆಯಲ್ಲಿ 250 ಕ್ಕೂ ಹೆಚ್ಚು ಮಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಶ್ರೀಮಾಲಾ ಅವರು ಯೋಗ ಮತ್ತು ಆಯುರ್ವೇದದ ಗುಣಾತ್ಮಕ ಶಕ್ತಿಯನ್ನು ಉತ್ತೇಜಿಸಲು ಮೀಸಲಾಗಿರುವ 'ಯೋಗಕುಲಂ'ನಲ್ಲಿಯೂ  ಸಕ್ರಿಯರಾಗಿದ್ದಾರೆ. "ವಸುಧೈವ ಕುಟುಂಬಕಂ" ಎಂಬ ಆಶಯಕ್ಕೆ
ಅನುಗುಣವಾಗಿ, ವೈಯಕ್ತಿಕ ಬೆಳವಣಿಗೆಗೆ ಸ್ಫೂರ್ತಿ ನೀಡಲು, ಸಾಮಾಜಿಕ ಯೋಗಕ್ಷೇಮವನ್ನು ಹೆಚ್ಚಿಸಲು ಮತ್ತು ಸಾರ್ವತ್ರಿಕ ಏಕತೆಯ ಆಳವಾದ ಪ್ರಜ್ಞೆಯನ್ನು ಬೆಳೆಸಲು, ಎಲ್ಲರಿಗೂ ಆರೋಗ್ಯಕರ ಮತ್ತು ಹೆಚ್ಚು ಸಂಪರ್ಕಿತ ಜಗತ್ತನ್ನು ಸೃಷ್ಟಿಸಲು 'ಯೋಗಕುಲಂ’ ಶ್ರಮಿಸುತ್ತಿದೆ. ಇತ್ತೀಚೆಗೆ ಈ ಸಮೂಹವು ಯೋಗದ ಅಧಿಕೃತ ಕಲಿಕೆ ಮತ್ತು ಜ್ಞಾನದ ಬಗ್ಗೆ ಜಾಗೃತಿ ಮೂಡಿಸಲು ಸ್ವಯಂಸೇವಕರನ್ನು ಸಿದ್ಧಪಡಿಸಲು 100 ಗಂಟೆಗಳ ಪ್ರಮಾಣೀಕರಣ ಕಾರ್ಯಕ್ರಮವನ್ನು ನಡೆಸಿತು. ಇದರಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಲ್ಲಿ,  ಇತರರನ್ನು ಅನ್ವೇಷಿಸಲು ಮತ್ತು ಇನ್ನಷ್ಟು ಕಲಿಯಲು ಪ್ರೇರೇಪಿಸುವ ಜವಾಬ್ದಾರಿಯನ್ನು ಹೊರುವ ಆಶಯವನ್ನು ಮೂಡಿಸಲಾಯಿತು.

ಶ್ರೀಮಾಲಾ ಅವರು ವಿಶ್ಬದ ಬೇರೆ ಬೇರೆಡೆಯಿಂದ ಬಂದ ವಿವಿಧ ನಂಬಿಕೆಯುಳ್ಳ ಗುಂಪುಗಳ ನಡುವೆ ತಿಳುವಳಿಕೆಯನ್ನು ಉತ್ತೇಜಿಸಲು ಅಂತರಧರ್ಮ ಸಹಕಾರ ಕೇಂದ್ರದ ಭಾಗವಾಗಿದ್ದಾರೆ. ಅವರು ಬಹುಧರ್ಮ ಗುಂಪುಗಳು/ಶಾಲಾ ಮಕ್ಕಳಿಗೆ ಹಿಂದೂ ದೇವಾಲಯ ಪ್ರವಾಸಗಳನ್ನು ನಡೆಸುತ್ತಿದ್ದಾರೆ.  ದೀಪಾವಳಿಯನ್ನು ಆಚರಿಸಲು ಇವರು ಎಪಿಸ್ಕೋಪಲ್ ಚರ್ಚ್‌ಗೆ ಆಹ್ವಾನಿಸಲ್ಪಟ್ಟಿದ್ದಾರೆ.

ಶ್ರೀಮಾಲಾ ಅವರು ಸದುದ್ದೇಶಗಳಿಗಾಗಿನ ನಿಧಿಸಂಗ್ರಹ ಕಾರ್ಯಕ್ರಮಗಳಿಗೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತ ಬಂದಿದ್ದಾರೆ. ಉಗಾಂಡಾದ ಒಂದು ಬಾಲಕಿಯರ ಶಾಲೆಗೆ ಶೌಚಾಲಯಗಳನ್ನು ನಿರ್ಮಿಸಲು ಹಾಗೂ  ಕ್ರಿಸ್ಟಲ್ ಡಿಹಾನ್ ಫೌಂಡೇಶನ್ ಮೂಲಕ ಮೆಕ್ಸಿಕೊ ಮತ್ತು ಭಾರತದ ಶಾಲೆಗಳಿಗೆ ಸಹಾಯಧನ ನೀಡಲು ಇವರು ವೀಣಾವಾದನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. 

ವೃತ್ತಿಯಲ್ಲಿ ವೈದ್ಯಕೀಯ ಸಂಶೋಧಕಿಯಾಗಿ, ಮದ್ಯಪಾನೀಯೇತರ ಕೊಬ್ಬಿನ ಯಕೃತ್ತಿನ ಕಾಯಿಲೆಗಳು ಮತ್ತು PCOD ಹೊಂದಿರುವ ಮಹಿಳೆಯರಿಗೆ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ನಮ್ಮ ಪೂರ್ವ ಪರಂಪರೆ ದಯಪಾಲಿಸಿರುವ ಜ್ಞಾನದ ಬಗ್ಗೆ ಅಪಾರ ಗೌರವ ಹೊಂದಿರುವ ಶ್ರೀಮಾಲಾ ಅವರಿಗೆ ಈ ನಿಟ್ಟಿನಲ್ಲಿ ಸೇವೆ ನೀಡುತ್ತಿರುವುದರ ಕುರಿತು ಧನ್ಯತಾಭಾವವಿದೆ. "ಬದುಕಿನಲ್ಲಿ ಉತ್ತಮ ಧ್ಯೇಯವನ್ನು ಹೊಂದುವುದು ಮತ್ತು ಅದಕ್ಕಾಗಿ ಜೀವಿಸುವುದು ಸೌಭಾಗ್ಯ" ಎಂಬ ನಮ್ರಭಾವ ಇವರದ್ದಾಗಿದೆ.

ಶ್ರೀಮಾಲಾ ಅವರ ಈ ಸಹಭಾಗಿತ್ವದಲ್ಲಿ ಅವರ ಪತಿ ಉದಯ್ ಮೂರ್ತಿ ಮತ್ತು ಅವರ ಇಬ್ಬರ ಮಕ್ಕಳೂ ಭಾಗಿ.  ಜೊತೆಗೆ ಅವರ ದಿವಂಗತ ತಂದೆ ಅವರಿಗೆ ನಿರಂತರ ಸ್ಫೂರ್ತಿ. 

ಸಾಂಸ್ಕೃತಿಕ ಭಾವಗಳು ಎಲ್ಲಿ ಕಂಡರೂ ಆಪ್ತವಾಗಿ ಕಾಣುವ ಶ್ರೀಮಾಲಾ ನನಗೆ 'ಕನ್ನಡ ಸಂಪದ' ಪುಟ ಪ್ರಾರಂಭವಾದಾಗಿನಿಂದ ನಿರಂತರವಾಗಿ ಅಕ್ಕರೆಯ ಬೆಂಬಲವಾಗಿ ನಿಂತು, ಹೃದಯತುಂಬಿ ಅಣ್ಣಾ ಎಂದು ಕರೆಯುತ್ತಾ ನನಗೊಂದು ವಿಶೇಷ‍ ಭಾಗ್ಯ ನೀಡಿದ್ದಾರೆ.

ಆತ್ಮೀಯ ಸಹೋದರಿ ಶ್ರೀಮಾಲಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Sreemala Murthy🌷🌷🌷




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ