ವಿಜಯಶ್ರೀ ಹಾಲಾಡಿ
ವಿಜಯಶ್ರೀ ಹಾಲಾಡಿ
ವಿಜಯಶ್ರೀ ಹಾಲಾಡಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ಏಪ್ರಿಲ್ 28, ವಿಜಯಶ್ರೀ ಅವರ ಜನ್ಮದಿನ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದ ಮುದೂರಿ ಎಂಬ ಹಳ್ಳಿ ಇವರ ಹುಟ್ಟೂರು. ತಂದೆ ಬಾಬುರಾವ್. ತಾಯಿ ಎಂ.ರತ್ನಾವತಿ. ವಿಜಯಶ್ರೀ ಕನ್ನಡ ಎಂ.ಎ. ಮತ್ತು ಬಿ.ಎಡ್ ವ್ಯಾಸಂಗದಲ್ಲಿ ಟಿ.ಎಂ.ಎ ಪೈ ಚಿನ್ನದ ಪದಕದೊಂದಿಗೆ ಪ್ರಥಮ ರ್‍ಯಾಂಕ್ ಸಾಧನೆಯನ್ನು ಮಾಡಿದವರು. ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಇವರು ಮೂಡಬಿದ್ರಿಯಲ್ಲಿ ನೆಲೆಸಿದ್ದಾರೆ.
ವಿಜಯಶ್ರೀ ಅವರ ಬರಹಗಳು ಎಲ್ಲ ಪ್ರಮುಖ ನಿಯತಕಾಲಿಕಗಳ ಮೂಲಕ ಓದುಗರನ್ನು ಆಕರ್ಷಿಸಿವೆ. ಇವರು ರೇಖಾಚಿತ್ರ ಕಲಾವಿದೆಯೂ ಆಗಿದ್ದಾರೆ.
ವಿಜಯಶ್ರೀ ಹಾಲಾಡಿ ಅವರ ಪ್ರಕಟಿತ ಕವನ ಸಂಕಲನಗಳಲ್ಲಿ 'ಬೀಜ ಹಸಿರಾಗುವ ಗಳಿಗೆ', 'ಅಲೆಮಾರಿ ಇರುಳು' (ಕಿರುಕವಿತೆಗಳು), 'ಸಾಕು ಬೆಳಕಿನ ಮಾತು', 'ಕತ್ತಲೆಗೆ ಎಷ್ಟೊಂದು ಬಣ್ಣ' ಸೇರಿವೆ. 'ಕಣ್ಣ ಕಾಡಿನ ಹಾಡು' ಅವರ ಪ್ರಕಟಿತ ಪ್ರಬಂಧ ಸಂಕಲನ. 'ಉಮ್ಮಲ್ತಿ ಗುಡಿಯ ಸಾಕ್ಷಿ' (ಕರ್ನಾಟಕ ಲೇಖಕಿಯರ ಸಂಘದ ಪ್ರಥಮ ಬಹುಮಾನವಾದ ತ್ರಿವೇಣಿ ದತ್ತಿ ಪ್ರಶಸ್ತಿ ಪಡೆದ ಕೃತಿ) ಅವರ ಪ್ರಕಟಿತ ಕಥಾ ಸಂಕಲನ.
ವಿಜಯಶ್ರೀ ಹಾಲಾಡಿ ಅವರು ಮಕ್ಕಳಿಗಾಗಿ ರಚಿಸಿದ ಪ್ರಕಟಿತ ಕೃತಿಗಳಲ್ಲಿ 'ಓತಿಕ್ಯಾತ ತಲೆ ಕುಣ್ಸಿ' ಮಕ್ಕಳ ಕವಿತೆಗಳು, 'ಸೂರಕ್ಕಿ ಗೇಟ್' ಮಕ್ಜಳ ಕಾದಂಬರಿ (ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಪಡೆದ ಕೃತಿ), 'ಜಂಬಿಕೊಳ್ಳಿ ಮತ್ತು ಪುಟ್ಟವಿಜಿ' ಮಕ್ಕಳಿಗಾಗಿ ಅನುಭವ ಕಥನ, 'ಪಪ್ಪು ನಾಯಿಯ ಪೀಪಿ' ಮಕ್ಕಳ ಕವಿತೆಗಳು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕೃತಿ), 'ಕಾಡಂಚಿನ ಊರಿನಲ್ಲಿ' ಮಕ್ಕಳಿಗಾಗಿ ಅನುಭವ ಕಥನ, ‘ಪಟ್‍ಪಟೆಕಾಯಿ ಚಟ್‍ಪಟ' ಮಕ್ಕಳ ಕವಿತೆಗಳು, 'ಗುಬ್ಬಚ್ಚಿಮನೆ ಎಂಬ ಕನ್ನಡ ಶಾಲೆ' ಮಕ್ಕಳ ನಾಟಕ ಸೇರಿವೆ.
ವಿಜಯಶ್ರೀ ಹಾಲಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ಪ್ರಥಮ ಬಹುಮಾನವಾದ ತ್ರಿವೇಣಿ ದತ್ತಿ ಪ್ರಶಸ್ತಿ, ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ,, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ, ಜಿ.ಬಿ. ಹೊಂಬಳ ಮಕ್ಕಳ ಕೃತಿಯ ಪುರಸ್ಕಾರ, ಡಿಸೋಜ ಎಚ್ಚೆಸ್ವಿ ಪುಟಾಣಿ ಸಾಹಿತ್ಯ ಪುರಸ್ಕಾರ, ಸೇಡಂನ ಅಮ್ಮ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ವಿಜಯಶ್ರೀ ಹಾಲಾಡಿ ಅವರ ಮೂರು ಮಕ್ಕಳ ಕವಿತೆಗಳು ಹಾಗೂ 'ಕಾಡಂಚಿನ ಊರಿನಲ್ಲಿ' ಮಕ್ಕಳ ಕೃತಿಯ ಒಂದು ಕಥನ ಪಠ್ಯಪುಸ್ತಕಗಳಲ್ಲಿ ಸೇರಿವೆ.
ವಿಜಯಶ್ರೀ ಹಾಲಾಡಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Vijayashree M Halady
🌷🌷🌷

ಕಾಮೆಂಟ್‌ಗಳು