ಡಿ. ಎ. ಶಂಕರ್
ಡಿ. ಎ. ಶಂಕರ್
ಪ್ರೊ. ಡಿ. ಎ. ಶಂಕರ್ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ವಿಮರ್ಶಕರಾಗಿ, ಕವಿಯಾಗಿ, ನಾಟಕಕಾರರಾಗಿ, ಇಂಗ್ಲಿಷ್‌ನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಕರಾಗಿ ಪ್ರಸಿದ್ಧರಾಗಿದ್ದಾರೆ.
ಶಂಕರ್ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ 1937ರ ಮೇ 15ರಂದು ಜನಿಸಿದರು. ತಂದೆ ಡಿ. ಆಶ್ವತ್ಥ ನಾರಾಯಣರಾವ್. ತಾಯಿ ಲಕ್ಷ್ಮೀದೇವಮ್ಮ. ಮೈಸೂರಿನ ಸದ್ವಿದ್ಯಾ ಪಾಠಶಾಲೆ, ಶಾರದಾ ವಿಲಾಸ ಹೈಸ್ಕೂಲು, ಮಹಾರಾಜ ಕಾಲೇಜು ಮುಂತಾದೆಡೆಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), ಇಂಗ್ಲೆಂಡ್‌ನ ಷೆಫೀಲ್ಡ್ ವಿಶ್ವವಿದ್ಯಾಲಯಕ್ಕೆ ಸಂಶೋಧನ ಪ್ರಬಂಧ ಮಂಡಿಸಿ ಎಂ.ಎ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯಕ್ಕೆ ‘ಅಮೆರಿಕನ್ ಇಂಗ್ಲಿಷ್ ಸಾಹಿತ್ಯ’ ಪ್ರೌಢ ಪ್ರಬಂಧ ಮಂಡಿಸಿ ಪಿಎಚ್.ಡಿ. ಗಳಿಸಿದರು.
ಶಂಕರ್ ಮೈಸೂರು ವಿಶ್ವವಿದ್ಯಾಲಯದಲ್ಲಿನ ಇಂಗ್ಲಿಷ್ ವಿಭಾಗದ ಸ್ನಾತಕೋತ್ತರ ತರಗತಿಗಳ ಪ್ರಾಧ್ಯಾಪಕರಾಗಿ ನಿವೃತ್ತರಾದರು. ನಿವೃತ್ತಿಯ ನಂತರ ಇಂಗ್ಲಿಷ್ ವಿಭಾಗದ ಮೊಟ್ಟಮೊದಲ ಎಮರಿಟಸ್ ಪ್ರೊಫೆಸರ್ ಆಗಿ ನೇಮಕಗೊಂಡಿದ್ದರು. ಕೆಲಕಾಲ ಮಂಗಳೂರು ವಿಶ್ವವಿದ್ಯಾಲಯ ಮತ್ತು ಪಾಂಡಿಚೆರಿ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಇವಲ್ಲದೆ ಯು.ಜಿ.ಸಿ ರಿಸರ್ಚ್‌ಫೆಲೊ ಆಗಿ, ಬ್ರಿಟಿಷ್ ಕೌನ್ಸಿಲ್ ಸ್ಕಾಲರ್ ಆಗಿ, ಸ್ಕಾಲರ್ – ಇನ್ – ರೆಸಿಡೆನ್ಸ್ ಹೈದರಾಬಾದ್ (ಎರಡು ಬಾರಿ), ಕೆನೆಡದ ಬ್ರಿಟಿಷ್ ಕೊಲಂಬಿಯಾದ ವಿಶ್ವವಿದ್ಯಾಲಯದ ಶಾಸ್ತ್ರಿ ಇಂಡೋ ಕೆನೆಡಿಯನ್ ಫೆಲೊ ಆಗಿ, ಬ್ರಿಟಿಷ್ ಕೌನ್ಸಿಲ್ ವಿಸಿಟರ್ ಆಗಿ, ಸಿಮ್ಲಾದ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ ಫೆಲೊ ಆಗಿ ಕಾರ‍್ಯನಿರ್ವಹಿಸಿದರು.
ಪ್ರೊ. ಡಿ. ಎ. ಶಂಕರ್ ಅವರು ಕವಿಯಾಗಿ, ನಾಟಕಕಾರಾಗಿ, ವಿಮರ್ಶಕರಾಗಿ, ಭಾಷಾಂತರಕಾರರಾಗಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಸಾಹಿತ್ಯಾರಾಧನೆ ತಂದೆಯಿಂದ ಬಂದ ಬಳುವಳಿ. ತಂದೆಯವರು ಪುಸ್ತಕ ಪ್ರೇಮಿಯಾಗಿದ್ದು ಅವರ ಇಂಗ್ಲಿಷ್ – ಸಂಸ್ಕೃತ ಭಾಷಾ ಪ್ರೌಢಿಮೆಯಿಂದ ಇವರಲ್ಲೂ ಪ್ರೇರಣೆ ಮೂಡಿತು. ಇವರ ಪ್ರಮುಖ ಕಾವ್ಯ ಕೃತಿಗಳೆಂದರೆ ‘ನಿಮ್ಮಲ್ಲೊಬ್ಬ’, ‘ಪವಾಡ’, ಹಾಗೂ ‘ಬೆಳಕಿನ ಮರ’. ಮಹತ್ವದ ವಿಷಯಗಳನ್ನು ತವಕವಿರದೆ ನಿರೂಪಿಸುವ, ಕ್ರಿಯಾಶೀಲ, ಅರ್ಥಪೂರ್ಣ ಕವನಗಳು ಶಾಂತತೆಯ ಒಡಲಿನಿಂದ ಹೊಮ್ಮಿ ಬಂದಿರುವುದೇ ‘ನಿಮ್ಮಲ್ಲೊಬ್ಬ’ ಕವನ ಸಂಕಲನದ ವಿಶೇಷತೆ.
ಶಂಕರ್ ಅವರ ನಾಟಕ ಕೃತಿಗಳಲ್ಲಿ ಕರಿಭಂಟ ಮತ್ತು ಇತರ ನಾಟಕಗಳು; ಮುದ್ದುರಾಜರುಗಳ ಪ್ರಸಂಗ ಎಂಬ ಪ್ರಹಸನ; ಹೈದರಾಲಿ, ಟಿಪ್ಪುಸುಲ್ತಾನ್, ಕಾರುಣ್ಯ ಮೂರ್ತಿ ಭಗವಾನ್ ಬುದ್ಧ, ಮುಂತಾದವುಗಳು ಸೇರಿವೆ. ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಪ್ರಸಂಗ ಒಂದನ್ನು ಐತಿಹಾಸಿಕ ವ್ಯಕ್ತಿಯಾಗಿ ಚಿತ್ರಿಸಿ ಜಾನಪದ ಚೌಕಟ್ಟಿನಿಂದ ಆಧುನಿಕ ರಂಗಭೂಮಿಗೆ ಹೊಂದಿಸಿ ಬರೆದ ನಾಟಕ ‘ಕರಿಭಂಟ’. ಹೈದರಾಲಿಯು ಮೈಸೂರು ಸೈನ್ಯ ಸೇರಿದಾಗ ಅರಸರಾಗಿದ್ದ ಇಮ್ಮಡಿ ಕೃಷ್ಣರಾಜ ಒಡೆಯರ ದಳವಾಯಿಯಾಗಿದ್ದ ನಂಜರಾಜಯ್ಯನು ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದುದನ್ನು ಕಡೆಗಾಣಿಸಲು ಹೈದರಾಲಿಯು ನಡೆಸುವ ತಂತ್ರ – ಪತಿತಂತ್ರ, ಒತ್ತಡ – ಪ್ರತಿಒತ್ತಡ, ಕುಟಿಲ ಕಾರ‍್ಯಾಸ್ಥಾನಗಳನ್ನು ಬಯಲಿಗೆಳೆಯುವ ನಾಟಕ ‘ಹೈದರಾಲಿ’. ಕೈತಪ್ಪಿ ಹೋಗಿದ್ದ ಮೈಸೂರು ರಾಜ್ಯವನ್ನು ಮರಳಿ ಪಡೆಯಲು ಮಹಾರಾಣಿ ಲಕ್ಷ್ಮಮ್ಮಣ್ಣಿಯವರ ಪ್ರಯತ್ನ, ಫ್ರೆಂಚರ ನೆರವಿನಿಂದ ಇಂಗ್ಲಿಷರನ್ನು ಓಡಿಸುವ ಹುನ್ನಾರ ನಡೆಸುವ ಟಿಪ್ಪು, ಚತುರ ವ್ಯವಹಾರಿ ದಿವಾನ್ ಪೂರ್ಣಯ್ಯ ಮುಂತಾದವರುಗಳ ಅಮೋಘ ಪಾತ್ರ ಚಿತ್ರಣದ ‘ಟಿಪ್ಪೂಸುಲ್ತಾನ್’ ವಿಶಿಷ್ಟ ನಾಟಕ.
ಭಾಷಾಂತರದಲ್ಲೂ ಮಹಾನ್ ಕೆಲಸ ಮಾಡಿದ ಶಂಕರ್‌ರವರು ತೇಜಸ್ವಿಯವರ ಕರ್ವಾಲೊ (CARVALHO), ಕುಬಿ ಮತ್ತು ಇಯಾಲ (KUBI AND IYALA SELECTED SHORT STORIES, Ed. G.S.AMUR), ಯು.ಆರ್. ಅನಂತಮೂರ್ತಿಯವರ ಆಕಾಶ ಮತ್ತು ಬೆಕ್ಕು (THE SKY AND THE CAT) ಮತ್ತು ಕ್ಲಿಪ್ ಜಾಯಿಂಟ್, ಎಸ್. ಎಲ್. ಭೈರಪ್ಪನವರ ಸಾಕ್ಷಿ (THE WITNESS), ಚದುರಂಗರ ವೈಶಾಖ (UNDER THE TROPICAL SUN), ವೈದೇಹಿಯವರ SOLILOQUIES OF SAUGANDHI IN CONTEMPORARY INDIAN SHORT STORIES (Ed. SHANTINATH DESAI), ಶಿವರಾಮ ಕಾರಂತರ ಸರಸಮ್ಮನ ಸಮಾಧಿ (A Shrine for Sarasamma), ಕನಕದಾಸರ ರಾಮಧಾನ್ಯ ಚರಿತೆ, ಕೀರ್ತನೆಗಳು, ನಳ ಚರಿತ್ರೆಗಳನ್ನು ಉಳ್ಳ 'ಗೋಲ್ಡನ್ ಫ್ಲಾಶ್’, ಅಕ್ಕಮಹಾದೇವಿ ಮುಂತಾದವುಗಳ ಮೂಲಕ ಇಂಗ್ಲಿಷ್ ಓದುಗರಿಗೆ ಕನ್ನಡ ಸಾಹಿತ್ಯವನ್ನು ಪರಿಚಯಿಸಿದ್ದಾರೆ. ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದವುಗಳಲ್ಲಿ ಆಲ್ಬರ್ಟ್ ಕಾಮುನ ದಿ ಔಟ್ ಸೈಡರ್ ‘ಅನ್ಯ’ ಆಗಿ, ಮುಲ್ಕರಾಜ್ ಆನಂದರ ಅನ್ಟಚಬಲ್ ‘ಅಸ್ಪೃಶ್ಯ’ ಆಗಿ ಫ್ರೆಂಚ್ ಲೇಖಕ ವಾಲ್ಟೇರ್‌ನ ಪ್ರಸಿದ್ಧ ಕಾದಂಬರಿ ‘ಕಾಂಡೀಡ್’, ಕಾಮುನ ಕಾಲಿಗುಲ ಅಂಡ್ ಕ್ರಾಸ್ ಪರ‍್ಪಸ್ ಕೃತಿಯು ‘ಕಾಲಿಗುಲ ಮತ್ತು ತಪ್ಪಿದ ಎಳೆ’ ಯಾಗಿ ಕನ್ನಡಕ್ಕೆ ಭಾಷಾಂತರಗೊಂಡ ಪ್ರಮುಖ ಕೃತಿಗಳಾಗಿವೆ. ಇವಲ್ಲದೆ ‘ಪುರುಷ ಪರೀಕ್ಷೆ’, ‘ಜೈನ ಕಥಾಕೋಶ’, ‘ಕೂಲಿ’ ಮುಂತಾದವುಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅಡಿಗರ ಉದ್ವಿಗ್ನ ಗದ್ಯ ಕುರಿತು, ಭೈರಪ್ಪನವರ ‘ದಾಟು’, ಕೃಷ್ಣ ಆಲನಹಳ್ಳಿಯವರ ‘ತಪ್ತ’, ಅನಂತಮೂರ್ತಿಯವರ ‘ಭಾರತೀಪುರ’ ಮುಂತಾದ ಕೃತಿಗಳ ಮೇಲೆ ಮಾಡಿದ ವಿಮರ್ಶೆಗಳು ವಾದ- ವಿವಾದ – ಸಂವಾದಗಳನ್ನು ಸೃಷ್ಟಿಸಿದ್ದರ ಫಲವಾಗಿ ರಚಿತವಾದ ವಿಮರ್ಶಾ ಕೃತಿಗಳು ನಿರ್ವಹಣೆ (೧೯೭೬), ವಸ್ತುವಿನ್ಯಾಸ (೧೯೮೪) ಮತ್ತು ಅನುಕ್ರಮ (೨೦೦೭) ಮುಂತಾದವುಗಳು. ರಮಣ ಮಹರ್ಷಿಗಳ ತಾತ್ವಿಕ ಚಿಂತನೆಗಳು ಪಂಡಿತ ಪಾಮರರಿಗೆ ಅರ್ಥವಾಗುವಂತೆ ರಚಿಸಿರುವ ಕೃತಿ ‘ಭಗವಾನ್ ಶ್ರೀ ರಮಣ ವಚನಾಮೃತ’. 'ಗಾಂಧಿಯೊಳಗಿನ ಮಹಿಳಾ ವಿಚಾರಧಾರೆಗಳು' ಎಂಬ ಕೃತಿಯನ್ನೂ ರಚಿಸಿದ್ದಾರೆ.
ಶಂಕರ್ ಅವರ ಸಮರ್ಥ ಭಾಷಾಂತರ, ಸೃಜನಶಿಲತೆಯನ್ನು ಪರಿಗಣಿಸಿ ‘ಗೋಲ್ಡನ್ ಫ್ಲಾಶ್’ಗೆ ಅನುವಾದ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಲಿತರ ಚಿತ್ರಣದ ಬದುಕಿನ ‘ಕೂಲಿ’ಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ, ಟಿಪ್ಪೂಸುಲ್ತಾನ್ ನಾಟಕಕ್ಕೆ ನಾಟಕ ಅಕಾಡಮಿ ಪುರಸ್ಕಾರ, ಕರ್ನಾಟಕ ರಾಜ್ಯ ಪ್ರಶಸ್ತಿ, ಜೀವಮಾನದ ಸಾಧನೆಗಾಗಿ ಕಾಂತಾವರ ಸಾಹಿತ್ಯ ಪುರಸ್ಕಾರ, ವರ್ಧಮಾನ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
On the birthday of great scholar Prof. D. A. Shankar
ಕಾಮೆಂಟ್‌ಗಳು