ಬಿ. ಚಂದ್ರಶೇಖರ್
ಬಿ. ಚಂದ್ರಶೇಖರ್
ಪ್ರೊ. ಬಿ.ಸಿ ಎಂದೇ ಖ್ಯಾತರಾಗಿದ್ದ ಬಿ. ಚಂದ್ರಶೇಖರ್ ನಟ, ನಿರ್ದೇಶಕ, ನಾಟಕಕಾರ, ರಂಗತಜ್ಞ, ರಂಗ ಶಿಕ್ಷಕರಾಗಿ ಅಮೂಲ್ಯ ಕೊಡುಗೆ ನೀಡಿದವರು.
ಚಂದ್ರಶೇಖರ್ 1916ರ ಮೇ 16 ರಂದು ಹಾಸನದಲ್ಲಿ ಜನಿಸಿದರು. ಅವರ ತಂದೆ ಪ್ರಸಿದ್ಧ ವಕೀಲರಾಗಿದ್ದ ಬೆಳವಾಡಿ ರಾಮಸ್ವಾಮಯ್ಯ. ತಾಯಿ ಗುಂಡಮ್ಮ. ಹಾಸನ, ಬೆಂಗಳೂರು, ಮೈಸೂರುಗಳಲ್ಲಿ ಚಂದ್ರಶೇಖರರ ವಿದ್ಯಾಭ್ಯಾಸ ನೆರವೇರಿತು. ಇಂಗ್ಲಿಷ್‌ನಲ್ಲಿ ಬಿ.ಎ. (ಆನರ್ಸ್), ಎಂ.ಎ. ಪದವಿ ಪಡೆದ ಚಂದ್ರಶೇಖರ್ ಅವರು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿ, ತುಮಕೂರು, ಮೈಸೂರು, ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ಗಳಲ್ಲಿ ಪ್ರಾಧ್ಯಾಪನ ನಡೆಸಿದರು. ಬೆಂಗಳೂರು ವಿಶ್ವವಿದ್ಯಾಲಯ ಆರಂಭಿಸಿದ ನಾಟಕ, ನೃತ್ಯ, ಸಂಗೀತದ ವಿಷಯದಲ್ಲಿ ಕರ್ನಾಟಕಕ್ಕೆ ಅನ್ವಯವಾಗುವಂತಹ ರಂಗ ಶಿಕ್ಷಣದ ಪಠ್ಯಕ್ರಮವನ್ನು ರೂಪಿಸಿದ ಕೀರ್ತಿ ಪ್ರೊ. ಬಿ. ಚಂದ್ರಶೇಖರ್ ಅವರದ್ದು.
ಬಾಲ್ಯದಿಂದಲೂ ನಾಟಕದತ್ತ ಒಲವು ಮೂಡಿಸಿಕೊಂಡಿದ್ದ ಚಂದ್ರಶೇಖರರು ಹವ್ಯಾಸಿ ರಂಗಭೂಮಿಯ ಹಲವಾರು ಪ್ರಥಮಗಳನ್ನು ದಾಖಲಿಸಿದವರಾಗಿದ್ದಾರೆ. ಕನ್ನಡದ ಪ್ರಪ್ರಥಮ ಅಸಂಗತ ನಾಟಕ ’ಬೊಕ್ಕ ತಲೆಯ ನರ್ತಕಿ’ ನಿರ್ದೇಶಿಸಿದರು. ತುಘಲಕ್, ಮೃಗಗಳಿಗಂಜಿದೊಡೆಂತಯ್ಯ, ಯಮಳ ಪ್ರಶ್ನೆ, ಅಪಕಾರಿ ಕಥೆ, ಚಿರಸ್ಮರಣೆ, ಮಣ್ಣಿನ ಬಂಡಿ (ಮೃಚ್ಛಕಟಿಕ) ಮುಂತಾದುವುಗಳನ್ನು ಮೊದಲ ಬಾರಿಗೆ ನಿರ್ದೇಶಿಸಿದ ಕೀರ್ತಿ ಪ್ರೊ. ಬಿ. ಸಿ. ಅವರದ್ದು. ಅವರು ಬೆಂಗಳೂರಿನ ’ಲಿಟಲ್ ಥಿಯೇಟರ್ಸ್’ ಸ್ಥಾಪಕ ಸದಸ್ಯರಲ್ಲೊಬ್ಬರು. ಸಂಸ್ಥೆಗಾಗಿ ಪಾತ್ರಧಾರಿಯಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಅವರು ನಿರ್ವಹಿಸಿದ ಸೇವೆಗಳು ಅನುಪಮವಾದದ್ದು. ಈ ತಂಡದ ಪ್ರಥಮ ನಾಟಕ ’ದಿ ಪ್ರಾಡಿಜಿಯಸ್ ಸ್ನಾಬ್’ನಲ್ಲಿ ಮಾನ್ಸಾಯರ್ ಬೊಲ್ಡಾನ ಎಂಬ ಮುಖ್ಯಪಾತ್ರವಹಿಸಿ ಅವರು ತೋರಿದ ನಟನಾಕೌಶಲ ಅದ್ವಿತೀಯವೆನಿಸಿತ್ತು. ನಂತರ ಅದೇ ತಂಡಕ್ಕೆ ಅವರು ಅನೇಕ ಇಂಗ್ಲಿಷ್ ನಾಟಕಗಳ ನಿರ್ದೇಶನವನ್ನೂ ಕೈಗೊಂಡರು.
ಪ್ರೊ. ಬಿ. ಸಿ. ಅವರು ಕನ್ನಡದಲ್ಲಿ ಕಟ್ಟೆ ಪುರಾಣ, ಸಂತೆ ಸುದ್ದಿಯಲ್ಲಿ, ಟೊಳ್ಳುಗಟ್ಟಿ, ನಂಕಪ್ನಿ ಮುಂತಾದ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಇಂಗ್ಲಿಷ್‌ನಲ್ಲೂ ಅವರು ಬಹಳಷ್ಟು ನಾಟಕಗಳಲ್ಲಿ ಅಭಿನಯಿಸಿದ್ದರು. ಪ್ರೊ. ಬಿ. ಸಿ. ಅವರು ನಿರ್ದೇಶಿಸಿದ ನಾಟಕಗಳ ಸಂಖ್ಯೆಯೇ ಸುಮಾರು ಮೂವತ್ತಕ್ಕೂ ಹೆಚ್ಚು. ಆಕಾಶವಾಣಿಗಾಗಿ ಸತ್ತವನ ಸಂತಾಪ, ಸ್ಮಶಾನ ಕುರುಕ್ಷೇತ್ರ, ರಕ್ತಾಕ್ಷಿ, ಬಿರುಗಾಳಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ ಹಲವಾರು ನಾಟಕಗಳನ್ನೂ ನಿರ್ದೇಶಿಸಿದ್ದರು.
ಲಂಕೇಶರ ‘ಅನುರೂಪ’, ಎನ್. ಲಕ್ಷ್ಮೀ ನಾರಾಯಣ್‌ರವರ ‘ಮುಯ್ಯಿ’, ವಿಜಯ ಗುಜ್ಜಾರರ ‘ಕುರಿದೊಡ್ಡಿ ಕುರುಕ್ಷೇತ್ರ’. TUSK OF YOUNG FILMS CORPORATION OF PARIS ಮುಂತಾದ ಚಿತ್ರಗಳಲ್ಲಿ ಪ್ರೊ.ಬಿ. ಚಂದ್ರಶೇಖರರು ನಟಿಸಿದ್ದರು.
ಪ್ರೊ. ಬಿ. ಸಿ. ಅವರು ಸಂಚಯನ, ಸಂಭವಾಯಿ ಯುಗೇ ಯುಗೇ ಸೇರಿದಂತೆ ಸುಮಾರು 17 ನಾಟಕಗಳನ್ನು ರಚಿಸಿದ್ದರು.
ಪ್ರೊ. ಬಿ. ಚಂದ್ರಶೇಖರ್ ಅವರಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕಾರ ಸಂದಿತ್ತು. 1991ರಲ್ಲಿ ರಂಗಾಸಕ್ತರು ’ಬಹುರೂಪಿ’ ಎಂಬ ಗೌರವಗ್ರಂಥವನ್ನು ಅರ್ಪಿಸಿದರು.
ಪ್ರೊ. ಬಿ. ಚಂದ್ರಶೇಖರ್ ಅವರು ಡಿಸೆಂಬರ್ 13, 2000ವರ್ಷದಲ್ಲಿ ಈ ಲೋಕವನ್ನಗಲಿದರು.
On the birth anniversary of great name in theatre Prof. B. Chandrashekhar
ಕಾಮೆಂಟ್‌ಗಳು