ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲಕ್ಷ್ಮೀತಾತಾಚಾರ್


 ಲಕ್ಷ್ಮೀತಾತಾಚಾರ್


ಮೇಲುಕೋಟೆಯ ಡಾ. ಲಕ್ಷ್ಮೀತಾತಾಚಾರ್  ನಾಡಿನ ಮಹಾನ್ ಸಂಸ್ಕೃತ ವಿದ್ವಾಂಸರೂ ಸಂಶೋಧಕರೂ ಆಗಿದ್ದವರು.  

ಲಕ್ಷ್ಮೀತಾತಾಚಾರ್ಯರು ಶೈಕ್ಷಣಿಕವಾಗಿ ಸಂಸ್ಕೃತ ಮತ್ತು ತತ್ವಶಾಸ್ತ್ರ ಪ್ರಧಾನ ವಿಷಯಗಳನ್ನು ಆಯ್ದು  ಮೈಸೂರು ವಿಶ್ವವಿದ್ಯಾಲಯ ಬಿ.ಎ. ಪದವಿಯನ್ನು 8 ನೇ ಶ್ರೇಯಾಂಕದಲ್ಲಿ  ಹಾಗೂ ಮದ್ರಾಸ್ ವಿಶ್ವವಿದ್ಯಾಲಯದ ಎಂ.ಎ. ಸಂಸ್ಕೃತ ಪದವಿಯನ್ನು  ಎರಡು ಚಿನ್ನದ ಪದಕಗಳೊಂದಿಗೆ ಮೊದಲ ರ್‍ಯಾಂಕ್ ಸಾಧನೆಗಳಲ್ಲಿ ಗಳಿಸಿದ್ದರು.

ಪ್ರೊ.ಎಂ.ಎ. ಲಕ್ಷ್ಮೀತಾತಾಚಾರ್ ಸಾಂಪ್ರದಾಯಿಕ ಸಂಸ್ಕೃತ ವಿದ್ವಾಂಸರಾಗಿದ್ದು, ಅವರು ಎಲ್ಲಾ ಭಾರತೀಯ ಜ್ಞಾನ ವ್ಯವಸ್ಥೆಗಳಲ್ಲಿ ಪರಿಣತಿ ಹೊಂದಿದ್ದರು. 

ಮಾಹಿತಿ ತಂತ್ರಜ್ಞಾನ, ಕೃಷಿ, ತೋಟಗಾರಿಕೆ,  ಮುಂತಾದ ವೈವಿಧ್ಯಮಯ ಕ್ಷೇತ್ರಗಳಿಗೆ ಭಾರತೀಯ ಮೂಲದ ಜ್ಞಾನ ವ್ಯವಸ್ಥೆಗಳ ಪ್ರಸ್ತುತತೆಯನ್ನು ಜಗತ್ತಿಗೆ ಸಾಬೀತುಪಡಿಸಲು ಅವರು ನಿರಂತರವಾಗಿ ಶ್ರಮಿಸಿದ್ದರು.  100ಕ್ಕೂ ಹೆಚ್ಚು ವಿವಿಧ ಪ್ರಕಟಣೆಗಳ ರಚನೆ ಮತ್ತು ಸಂಪಾದನೆಯಲ್ಲಿ  ಮಹತ್ವದ ಕೊಡುಗೆ ನೀಡಿದ್ದರು. 

ಲಕ್ಷ್ಮಿತಾತಾಚಾರ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು.  ಮುಂದೆ ಮೇಲುಕೋಟೆಯಲ್ಲಿ ಅಕಾಡೆಮಿ ಆಫ್ ಸಂಸ್ಕೃತ ರಿಸರ್ಚ್ ಅನ್ನು ಸ್ಥಾಪಿಸಿದರು. 'ಸಂಸ್ಕೃತಿ ಫೌಂಡೇಷನ್' ಸ್ಥಾಪಿಸಿ ಆ ಮೂಲಕ ರಿಷಿ ಕೃಷಿ ಪದ್ಧತಿ ಹಾಗೂ ದಿನ ನಿತ್ಯ ಜೀವನದಲ್ಲಿ ಸಂಸ್ಕೃತ ಅಧ್ಯಯನಗಳನ್ನು ಇಂದಿನ ಆಧುನಿಕ ತಂತ್ರಜ್ಞಾನದೊಂದಿಗೆ ಬದುಕಿಗೆ ಅನುಸಂಧಾನಗೊಳಿಸಿ ಹೇಗೆ ಉನ್ನತರೀತಿಯಲ್ಲಿ ಬದುಕಬಹುದು ಎಂಬ ಕುರಿತು ಸಮಾಜಮುಖಿ ಸಂಶೋಧನೆಗಳನ್ನು ನಡೆಸಿದ್ದರು.

ಭಾರತದಲ್ಲಿ ಜಾನಪದದ ಮೂಲಕ ಮಾತಿನಲ್ಲಿ ಹರಿದು ಬಂದಿರುವ ಜ್ಞಾನವನ್ನು ಸಂರಕ್ಷಿಸುವುದು ಮುಖ್ಯ ಎಂಬುದು ಪ್ರೊ.  ಲಕ್ಷ್ಮೀತಾತಾಚಾರ್ಯರ ಖಚಿತ ಅಭಿಪ್ರಾಯವಾಗಿತ್ತು.  ಸಾಕ್ಷರತೆ ಎಂದರೆ ವ್ಯಕ್ತಿಗೆ ಹಸರು ಬರೆಯುವುದನ್ನು ಕಲಿಸುವುದು ಎಂದು ನಂಬಿರುವ ಮಿಥ್ಯ ವ್ಯವಸ್ಥೆಗಳ ಬಗ್ಗೆ ಖೇದ ವ್ಯಕ್ತಪಡಿಸುತ್ತಿದ್ದ ಅವರು ಜಾನಪದ ಗೀತೆಗಳನ್ನು ಹಾಡುವ ಕಲಾವಿದರಿಗಿದ್ದ ಜ್ಞಾನಕ್ಕಿಂತ  ಕೇವಲ ಓದಿ ಬರೆಯಲು ಕಲಿತವನ ಜ್ಞಾನ ಹೇಗೆ ಶ್ರೇಷ್ಠ ಎಂದು ಮುಕ್ತವಾಗಿ
ಪ್ರಶ್ನಿಸುತ್ತಿದ್ದರು. ಅವರು ಭಾರತೀಯ ಭಾಷಾ ಧ್ವನಿಗ್ರಹಣ ಸಾಫ್ಟ್ವೇರ್ ತಂತ್ರಜ್ಞಾನ ಅಭಿವೃದ್ಧಿಗಾಗಿಯೂ ಕೆಲಸ ಮಾಡಿದ್ದರು.

ನ್ಯಾಶನಲ್ ಮಿಷನ್ ಆಫ್ ಮ್ಯಾನುಸ್ಕ್ರಿಪ್ಟ್ಸ್ ಪ್ರಕಾರ ಭಾರತೀಯ ಹಸ್ತಪ್ರತಿಗಳ ಸಂಖ್ಯೆ ಕಡೇ ಪಕ್ಷ ಒಂದು ಮಿಲಿಯನ್ ಸಂಖ್ಯೆಯಲ್ಲಿದ್ದು ಅವುಗಳಲ್ಲಿ ಶೇಕಡಾ ಹತ್ತರಷ್ಟನ್ನು ಓದುವುದಕ್ಕೆ ಅನುವುಗೊಳಿಸುವ ಪ್ರಯತ್ನವೂ ಇನ್ನೂ ಆಗಿಲ್ಲವೆನ್ನುತ್ತಿದ್ದ ಪ್ರೊ. ಲಕ್ಷ್ಮೀತಾತಾಚಾರ್ಯರು ನಮ್ಮ ಹಿಂದಿನವರು ಉಪಯೋಗವಿಲ್ಲದ್ದನ್ನು ಜೋಪಾನವಾಗಿರಿಸುವಷ್ಟು ಮೂರ್ಖರಿರಲಿಲ್ಲ, ಈ ಭಂಡಾರಗಳಲ್ಲಿ ಲೋಹಶಾಸ್ತ್ರ, ವೈಮಾನಿಕ ಶಾಸ್ತ್ರದಂತಹ ಮಹತ್ವದ ವಿಚಾರಗಳನ್ನೊಳಗೊಂಡಂತೆ ಜ್ಞಾನಪರಿಧಿಯ ಬಹುತೇಕ ಸಾಧ್ಯತೆಗಳ ಒಳನೋಟಗಳೂ ಇವೆ ಎನ್ನುತ್ತಿದ್ದರು.

ಯಾರಾದರೂ ಏನಾದರೂ ಕೆಲಸ ಮಾಡುತ್ತಾರೆ ಎಂದರೆ ಭಾರತದ ವ್ಯವಸ್ಥೆಗಳು ನೂರು ತೆರನಾದ ಸಂಕಷ್ಟಗಳನ್ನು ತಂದಿಡುತ್ತವೆ. ಪ್ರೊ. ಲಕ್ಷ್ಮೀತಾತಾಚಾರ್ಯರಿಗೆ ಒದಗಿದ್ದೂ ಅದೇ.  

ಡಾ. ಲಕ್ಷ್ಮೀತಾತಾಚಾರ್ ಅವರು 2021ರ ಮೇ 15ರಂದು ತಮ್ಮ 84ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು. 

Remembrance of great scholar Prof. Lakshmi Thathachar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ