ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡಿ. ವಿ. ಬಡಿಗೇರ


 ಡಿ. ವಿ. ಬಡಿಗೇರ


ಕವಿ ಡಿ.ವಿ. ಬಡಿಗೇರ ಅವರು  'ಚುಟುಕಗಳು ಜೇನಿನ ಹನಿಗಳು’ ಎಂದು ಭಾವಿಸಿ ಚುಟುಕ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರು.

ಡಿ. ವಿ. ಬಡಿಗೇರ ಅವರು 1951ರ ಮೇ 3ರಂದು ಬೆಟಗೇರಿಯಲ್ಲಿ ಜನಿಸಿದರು. ತಂದೆ ವಿರೂಪಾಕ್ಷಪ್ಪ, ತಾಯಿ ಜಾನಮ್ಮ. ವಿದ್ಯಾಭ್ಯಾಸ ಬೆಟಗೇರಿಯಲ್ಲಿ ನಡೆದು ಬಿ.ಎ. ಪದವಿ ಪಡೆದರು. 

'ಕೆಲಸವಿಲ್ಲದಿದ್ದರಿಂದ ಕವಿಯಾದೆ’ ಎಂದು ಹೇಳಿಕೊಳ್ಳುತ್ತಿದ್ದ ಬಡಿಗೇರರವರು ಕಂದಾಯ ಇಲಾಖೆಯಲ್ಲಿ 1977ರಲ್ಲಿ ಉದ್ಯೋಗಿಯಾಗಿ ಸೇರಿದರು. ಉದ್ಯೋಗ ಸಿಕ್ಕಿತೆಂದು ಕವನ ಬರೆಯುವುದನ್ನು ನಿಲ್ಲಿಸದೆ ನಿಂತಲ್ಲಿ, ಕುಂತಲ್ಲಿ ರಚಿಸಿದ ಹನಿಗವನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ  ಬೆಳಕು ಕಂಡಿವು. 

ಬಡಿಗೇರ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಕವನ ರಚಿಸಲು ತೊಡಗಿದ್ದನ್ನು ಕಂಡು, ಗುರುತಿಸಿ ಬೆನ್ನು ತಟ್ಟಿದವರು ಜೆ.ಟಿ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಬಿ.ಬಿ. ಮಹಿಷವಾಡಿಯವರು. 

"ಕಚ್ಚಿದರೆ ಕಬ್ಬಿನಂತೆ, ಹಿಂಡಿದರೆ ಜೇನಿನಂತೆ, ಮೂಸಿದರೆ ಹೂವಿನಂತೆ, ಬೀಸಿದರೆ ಬಾರುಕೋಲಿನಂತೆ, 
ಕುಳ್ಳಗಿದ್ದರೂ ರೂಪವತಿ ಹೆಣ್ಣಿನಂತೆ" 

ಎಂದು ಎಸ್.ವಿ. ರಂಗಣ್ಣನವರು ಹೇಳಿದ್ದನ್ನು ಅಕ್ಷರಶಃ ಪಾಲಿಸಿ, ಮಾತು ಮಥಿಸಿ ಬಂದ ನವನೀತ, ಹಾಸ್ಯವಿಡಂಬನೆ ಇದರ ತಾಳ-ಸಂಗೀತ, ಕಾವ್ಯಕ್ಷೇತ್ರದ ಕಾಮನಬಿಲ್ಲು ಎಂದು ನಿರೂಪಿಸಿ ರಚಿಸಿದ ಬಡಿಗೇರ ಅವರ ಹನಿಗವನವಿಲ್ಲದ ವಿಶೇಷಾಂಕಗಳೇ ಇರಲಿಲ್ಲ.  ಸಾವಿರ ಹನಿಗವನದ ಸರದಾರರೆನಿಸಿದರು. 

ಬಡಿಗೇರ ಹನಿಗವನ ಸಾಹಿತಿಗಳ ಪ್ರತಿನಿಯಾಗಿ ಹೋರಾಟ ನಡೆಸಿದರು. ಇದರಿಂದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಹನಿಗವನ ಗೋಷ್ಠಿ ಸೇರ‍್ಪಡೆಯಾಯಿತು. ಕಲಬುರ್ಗಿ, ಮುಧೋಳ, ಹಾಸನ, ತುಮಕೂರುಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ, ಬಾನುಲಿಯಲ್ಲಿ  ಕವನ ವಾಚನ, ಭಾಷಣ ಕಾರ‍್ಯಕ್ರಮ ನೀಡಿದರು. ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಝೇಂಕಾರ ಕಾರ‍್ಯಕ್ರಮದಲ್ಲಿ ಒಂದು ತಿಂಗಳ ಕಾಲ ಸಂಗೀತದೊಂದಿಗೆ ಕವನ ಪ್ರಸಾರ, ಧಾರವಾಡದ ಆಕಾಶವಾಣಿ ಕೇಂದ್ರದ ಭಾವಸಂಗಮ ಕಾರ‍್ಯಕ್ರಮದಲ್ಲೂ ಕವನ ಪ್ರಸಾರ ನಡೆಯಿತು.

‘ಆಫೀಸಿನಲ್ಲಿ ಜಲಜಾಕ್ಷಿ’ ಡಿ. ವಿ. ಬಡಿಗೇರ ಅವರ ಮೊದಲ ಕವನ ಸಂಕಲನ, ನಂತರ ‘ಮದನೋತ್ಸವ’, ‘ನವದೀಪ್ತಿ’, ‘ಸ್ನೇಹಾ’ ಮುಂತಾದ ಹನಿಗವನ, ಕವನ ಸಂಕಲನಗಳು ಪ್ರಕಟಗೊಂಡವು. ಸಿ.ವಿ. ಕೆರಿಮನಿಯವರೊಡನೆ ಗದಗ ಜಿಲ್ಲೆಯ ಕಲಾವಿದರು ಮತ್ತು ಗದಗ ಜಿಲ್ಲೆಯ ಬರಹಗಾರರು ಕೃತಿ ಸಂಪಾದಿಸಿದರು. 

ಡಿ. ವಿ. ಬಡಿಗೇರ ಅವರಿಗೆ ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ, ಮುಕ್ತಕ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ, ಕಲಾ ವಿಕಾಸ ಸಿರಿ ರಾಜ್ಯ ಪ್ರಶಸ್ತಿ, ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ, ಗದಗ ಜಿಲ್ಲಾ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವಗಳು ಸಂದವು.

ಡಿ. ವಿ. ಬಡಿಗೇರ ಅವರು ಕಬ್ಬಿಗರ ಕೂಟದ ಸಂಸ್ಥಾಪಕ ಕಾರ‍್ಯದರ್ಶಿಯಾಗಿ, ಗದಗ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ‍್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

On the birthday of poet D. V. Badigera 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ