ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರ್. ಚಂದ್ರಸಿಂಗ್


 ಆರ್. ಚಂದ್ರಸಿಂಗ್


ವಿದ್ವಾನ್ ಆರ್. ಚಂದ್ರಸಿಂಗ್ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿದ್ದವರು. 

ಚಂದ್ರಸಿಂಗ್ ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿ 1918ರ ಮೇ 15ರಂದು ಜನಿಸಿದರು. ತಂದೆ ರತನ್‌ಸಿಂಗ್‌.  ತಾಯಿ ಕಮಲಾಬಾಯಿ. 

ಚಂದ್ರಸಿಂಗ್ ಹುಟ್ಟಿದ ಐದು ತಿಂಗಳಲ್ಲಿ ತಂದೆ, ಐದು ವರ್ಷದವನಾಗಿದ್ದಾಗ ತಾಯಿಯ ಪ್ರೀತಿಯಿಂದ ವಂಚಿತರಾಗಿ ಮಧುರೆ ಸೇರಿದರು. ಮಧುರಾ ಬಾಯ್ಸ್ ನಾಟಕ ಮಂಡಲಿಯಲ್ಲಿ ಬಾಲನಟನಾಗಿ ಅನೇಕ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದರು. ಅಂದಿನ ನಟರಿಗೆ ಹಾಡುವುದು ಅಗತ್ಯವಾಗಿದ್ದರಿಂದ  ಸಂಗೀತ ಕಲಿತರು. 

ಚಂದ್ರಸಿಂಗ್ ಅವರಿಗೆ ನಾಯನಾ ಪಿಳ್ಳೆ, ಕಾಂಚೀಪುರಂ ಜಯರಾಮಶರ್ಮ, ಪಿ.ವಜ್ರವೇಲು ಮುಂತಾದವರಲ್ಲಿ ಪ್ರಾರಂಭಿಕ ಸಂಗೀತ ಶಿಕ್ಷಣ ದೊರಕಿತು.  ಪುದುಕೋಟೈ ಸ್ವಾಮಿನಾಥ ಪಿಳ್ಳೆಯವರಲ್ಲಿ ಹೆಚ್ಚಿನ ಶಿಕ್ಷಣ ನಡೆಯಿತು.   

ಚಂದ್ರಸಿಂಗ್ ಬೆಂಗಳೂರಿಗೆ ಬಂದು ಸ್ಥಳೀಯ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡತೊಡಗಿದರು. ಪಲ್ಲವಿ ಎಸ್‌.ಚಂದ್ರಪ್ಪ ಅವರೊಡನೆ ಜಂಟಿಯಾಗಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದರು. ಗಾಯನ ಸಮಾಜದ ವಾರ್ಷಿಕ ಸಂಗೀತೋತ್ಸವಗಳು, ಕರ್ನಾಟಕ ಗಾನಕಲಾ ಪರಿಷತ್ತು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮುಂತಾದೆಡೆ ಅಪರೂಪದ ಪಲ್ಲವಿಗಳನ್ನು ಹಾಡಿ ಪ್ರಸಿದ್ಧಿ ಪಡೆದರು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಲಿಯ ವಿಶೇಷ ಸಂಗೀತ ಪರೀಕ್ಷಾ ಮಂಡಲಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 

ಸಂಗೀತ ನೃತ್ಯ ಅಕಾಡೆಮಿಯಿಂದ ಚಂದ್ರಸಿಂಗ್ ಅವರ ಕ್ಲಿಷ್ಟ ಪಲ್ಲವಿಗಳ ಪ್ರಾತ್ಯಕ್ಷಿಕೆಯ ವಿಡಿಯೋ ಚಿತ್ರೀಕರಣವಾಯಿತು. ಕನಕದಾಸರ ೪೦ ದೇವರನಾಮಗಳಿಗೆ ರಾಗ ಸಂಯೋಜನೆ ಮಾಡಿ, ಸ್ವರ ಸಾಹಿತ್ಯ ಗಾಯನಗಂಗಾ ಮಾಸಪತ್ರಿಕೆಯಲ್ಲಿ ಪ್ರಕಟಿಸಿದರು.

ಚಂದ್ರಸಿಂಗ್ ಅವರಿಗೆ ವಿದ್ವಾಂಸರಾದ ಮೈಸೂರು ವಾಸುದೇವಾಚಾರ್ಯರಿಂದ ಗಾಯನ ಸಮಾಜದ ವಾರ್ಷಿಕ ಸಮ್ಮೇಳನದಲ್ಲಿ ಡಾ. ಬಿ. ದೇವೇಂದ್ರಪ್ಪನವರು ಸ್ಥಾಪಿಸಿದ್ಧ ಮಾರುತಿ ಸೇವಾ ಸಂಗೀತ ಸಮಾಜದಿಂದ ಗಾನಶೇಖರ ಬಿರುದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಮೀನಾಕ್ಷಿ ಸುಂದರಂ ಕಲ್ಚರ್‌ ಪರ್‌ಫಾರ್ಮಿಂಗ್‌ ಆರ್ಟ್ಸ್‌ ‌ವತಿಯಿಂದ ಸನ್ಮಾನ ಮುಂತಾದ ಗೌರವಗಳು ಸಂದವು.  

ಅರ್. ಚಂದ್ರಸಿಂಗ್ ಅವರು 1988ರ ಸೆಪ್ಟೆಂಬರ್ 13ರಂದು ನಿಧನರಾದರು.


On the birth anniversary of Vidwan. R. Chandra Singh 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ