ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕನ್ನಡ ಪತ್ರಿಕೆಗಳು : 1901ರಿಂದ 1950


 ಕನ್ನಡ ಪತ್ರಿಕೆಗಳು : 1901ರಿಂದ 1950


ನಿನ್ನೆಯ ದಿನ ಕನ್ನಡ ಪತ್ರಿಕೆಗಳ ಪ್ರಾರಂಭಿಕ ಘಟ್ಟದ ಬಗ್ಗೆ ಪ್ರಸ್ತಾಪಿಸಿದ್ದೆ. ಕನ್ನಡ ಪತ್ರಿಕೆಗಳ ದೃಷ್ಟಿಯಿಂದ 1843-1900 ರವರೆಗಿನದು ಆರಂಭಿಕ ಘಟ್ಟ.

1901-1950ರವರೆಗಿನದು ಎರಡನೆಯ ಹಂತ. ಇದು ಬೆಳೆವಣೆಗೆಯ ಕಾಲ. ಹೋರಾಟದ ಕಾಲವೂ ಹೌದು. ಇಡೀ ದೇಶಕ್ಕೆ ದೇಶದ ಎಲ್ಲ ಕ್ಷೇತ್ರಗಳಿಗೆ ಈ ಅವಧಿ ಹೋರಾಟದ ಕಾಲ. ತನ್ನ ಅಸ್ತಿತ್ವವನ್ನು ಸಾಬೀತುಪಡಿಸಬೇಕಾದ ಕಾಲ. ಪತ್ರಿಕೋದ್ಯಮ ಇದಕ್ಕೆ ಹೊರತಾಗಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಒತ್ತು ನೀಡುವ, ಕನ್ನಡ ರಾಜ್ಯವನ್ನು ಸ್ಥಾಪಿಸುವ, ಹೋರಾಟದ ಜೊತೆ ತನ್ನ ಕಾಲ ಮೇಲೆ ತಾನು ನಿಲ್ಲಲು ಪತ್ರಿಕೆಗಳು ಹೋರಾಡಿದ ಕಾಲ 20ನೆಯ ಶತಮಾನದ ಮೊದಲರ್ಧದ್ದು.

ಕನ್ನಡ ಪತ್ರಿಕೆಗಳ ದೃಷ್ಟಿಯಿಂದ 20ನೆಯ ಶತಮಾನದ ಆರಂಭ ಕಾಲ ಮೈಸೂರು ಸಂಸ್ಥಾನದ ವ್ಯಾಪ್ತಿಯ ಪತ್ರಿಕೆಗಳಿಗೆ ಉತ್ತೇಜಕವಾದ ಕಾಲವಾಗಿರಲಿಲ್ಲ. ದಿವಾನ್ ರಂಗಾಚಾರ್ಲು ಅವರ ತರುವಾಯ ಮೈಸೂರು ಸಂಸ್ಥಾನದ ದಿವಾನರಾದ ಕೆ. ಶೇಷಾದ್ರಿ ಅಯ್ಯರ್ ಪತ್ರಿಕೆಗಳ ಬಗ್ಗೆ ತೀವ್ರ ಅಸಹನೆ ಹೊಂದಿದವರಾಗಿದ್ದರು. ಅದೇ ಹೊತ್ತಿಗೆ ಚಾಮರಾಜ ಒಡೆಯರ್ ನಿಧನರಾಗಿ ಅಪ್ರಾಪ್ತ ವಯಸ್ಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದರು. ಇದು ದಿವಾನರ ಪ್ರಭುತ್ವವನ್ನು ಹೆಚ್ಚಿಸಿತ್ತು. ಶೇಷಾದ್ರಿ ಅಯ್ಯರ್ ಬಳಿಕ ದಿವಾನರಾಗಿ ಬಂದ ವಿ.ಪಿ. ಮಾಧವರಾಯರು ಪತ್ರಿಕೆಗಳ ಮೇಲೆ ಕೆಂಗಣ್ಣು ಬೀರಿದರು. ಇವರ ಅನಂತರ ಬಂದ ದಿವಾನ್ ಪಿ.ಎನ್. ಕೃಷ್ಣಮೂರ್ತಿಯವರಂತೂ ಮೈಸೂರು ಸ್ಟ್ಯಾಂಡರ್ಡ್ ಪತ್ರಿಕೆಯ ಪ್ರತಿನಿಧಿಯನ್ನು ಪ್ರಜಾಪ್ರತಿನಿಧಿ ಸಭೆಯಿಂದ ಹೊರಗಟ್ಟಿ ಪತ್ರಿಕೆಗಳಿಗೆ ಪಾಠ ಕಲಿಸುವುದಾಗಿ ಎಚ್ಚರಿಸಿದ್ದರು. ನಿರಂತರವಾಗಿ ದಿವಾನರುಗಳ ದುರಾಗ್ರಹಕ್ಕೆ ತುತ್ತಾಗಿ ಪತ್ರಿಕೆಗಳು ಅನುಭವಿಸಿದ ಶಿಕ್ಷೆಯೆಂದರೆ 1908ರ ಮೈಸೂರು ಸಂಸ್ಥಾನದ ಪತ್ರಿಕಾ ಪ್ರತಿಬಂಧಕ ಶಾಸನ. ಈ ಶಾಸನಕ್ಕನುಗುಣವಾಗಿ ಮೈಸೂರ ಸಂಸ್ಥಾನದಲ್ಲಿ ಪತ್ರಿಕೆ ಪ್ರಕಟಿಸುವವರು ಸರ್ಕಾರದ ಪುರ್ವಾನುಮತಿಯನ್ನು ಪಡೆಯಬೇಕಿತ್ತು. ಸರ್ಕಾರ ಯಾವ ಸಮಯದಲ್ಲಿ ಬೇಕಾದರೂ ಯಾವುದೇ ಪತ್ರಿಕೆಗೆ ನೀಡಿದ್ದ ಅನುಮತಿಯನ್ನು ವಾಪಸ್ಸು ಪಡೆಯಬಹುದಿತ್ತು. ಅನುಮತಿ ಪಡೆಯದೇ ಅಥವಾ ಅನುಮತಿ ರದ್ದಾದ ಬಳಿಕವೂ ಪತ್ರಿಕೆ ಹೊರಡಿಸುವವರು ಶಿಕ್ಷೆಗೆ ಗುರಿಯಾಗಬೇಕಿತ್ತು. ರಾಜ್ಯದಿಂದ ಅಂಥವರನ್ನು ಗಡಿಪಾರು ಮಾಡಲಿಕ್ಕೂ ಕಾನೂನಿನಲ್ಲಿ ಅವಕಾಶವಿತ್ತು. ಹೀಗೆ ಸರ್ಕಾರದ ದುರಾಗ್ರಹಕ್ಕೆ ತುತ್ತಾದವರಲ್ಲಿ ಕನ್ನಡ ನಡೆಗನ್ನಡಿ ಪತ್ರಿಕೆಯ ಸಂಪಾದಕರಾಗಿದ್ದ ಎಂ. ಗೋಪಾಲ ಅಯ್ಯಂಗಾರ್ ಮತ್ತು ಎಂ. ಶ್ರೀನಿವಾಸ ಅಯ್ಯಂಗಾರ್ ಸಹೋದರರನ್ನು ಹೆಸರಿಸಬೇಕು. 1895ರಲ್ಲೇ ಆರಂಭವಾಗಿದ್ದ ಇವರ ಪತ್ರಿಕೆ 1908ರ ಪತ್ರಿಕಾ ಶಾಸನಕ್ಕೆ ಪ್ರತೀಕಾರವಾಗಿ ಬೆಂಗಳೂರಿನಿಂದ ಅನಿವಾರ್ಯವಾಗಿ ಮದರಾಸಿಗೆ ವರ್ಗಾವಣೆಗೊಳ್ಳಬೇಕಾಯ್ತು. ಈ ಅವಧಿಯಲ್ಲಿ ಆದ ಸಾಮಾಜಿಕ ಸಂಘಟನೆಗಳ ಫಲವಾಗಿ ಕೆಲವು ಸಮುದಾಯಗಳು ತಮ್ಮ ಮುಖವಾಣಿಯಾಗಿ ಪತ್ರಿಕೆಗಳನ್ನು ಹೊರತಂದವು. ಅವುಗಳಲ್ಲಿ ಬೆಂಗಳೂರಿನಿಂದ ಒಕ್ಕಲಿಗರ ಸಂಘದವರು ಹೊರತಂದ ಒಕ್ಕಲಿಗರ ಪತ್ರಿಕೆ (1906) ನಗರದಲ್ಲಿ ಬೇಗ ಜನಪ್ರಿಯತೆ ಗಳಿಸಿತು.

ಕನ್ನಡದ ಹೆಸರಾಂತ ಲೇಖಕ ಡಿ.ವಿ. ಗುಂಡಪ್ಪ (ನೋಡಿ) ಭಾರತಿ ಎಂಬ ರಾಷ್ಟ್ರೀಯ ದಿನಪತ್ರಿಕೆಯನ್ನು 1907ರಲ್ಲಿ ಆರಂಭಿಸಿದರು. 1908ರ ಕರಾಳ ಪತ್ರಿಕಾ ಶಾಸನಕ್ಕೆ ಪ್ರತಿರೋಧವಾಗಿ ಭಾರತಿಯ ಪ್ರಕಟಣೆ ನಿಲ್ಲಿಸಿದರು. ವಿಶ್ವಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ತಿರುಮಲೆ ತಾತಾಚಾರ್ಯ ಶರ್ಮರು ತಮ್ಮ ಸಂಪಾದಕೀಯ ಅಂಕಣವನ್ನು ಖಾಲಿ ಬಿಡುವ ಮೂಲಕ ಶಾಸನಕ್ಕೆ ತಮ್ಮ ಪ್ರತಿಭಟನೆ ಸೂಚಿಸಿದರು. ವೆಂಕಟಕೃಷ್ಣಯ್ಯನವರೂ ತಮ್ಮ ಪ್ರಕಟಣೆಗಳನ್ನು ನಿಲ್ಲಿಸಿ ಈ ಶಾಸನಕ್ಕೆ ವಿರೋಧ ವ್ಯಕ್ತಪಡಿಸಿದರು. 

ಮುಂದೆ ಮೈಸೂರು ಸಂಸ್ಥಾನಕ್ಕೆ ಎಂ. ವಿಶ್ವೇಶ್ವರಯ್ಯ ದಿವಾನರಾಗಿ ಬಂದ ಬಳಿಕ ಪರಿಸ್ಥಿತಿ ಬದಲಾಯಿತು. ಇವರ ಕಾಲದಲ್ಲಿ ಶಾಸನಕ್ಕೆ ತಿದ್ದುಪಡಿ ಮಾಡಲಾಯಿತು. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಪೂರ್ಣ ಗೌರವವಿದ್ದ ವಿಶ್ವೇಶ್ವರಯ್ಯನವರಿಂದಾಗಿ ಮೈಸೂರು ಸಂಸ್ಥಾನದಲ್ಲಿ ಕಮರಿಹೋಗಿದ್ದ ಕನ್ನಡ ಪತ್ರಿಕೆಗಳು ಮತ್ತೆ ಚಿಗುರಲು ಅನುಕೂಲವಾಯಿತು. ಪತ್ರಿಕೋದ್ಯಮಕ್ಕೆ ಪುರಕವಾದ ಈ ವಾತಾವರಣದಲ್ಲಿ ಕನ್ನಡದ ಉತ್ಕೃಷ್ಟ ಪತ್ರಕರ್ತರಾಗಿ ಬೆಳೆದ ಡಿ. ವಿ. ಗುಂಡಪ್ಪನವರು 1907ರಲ್ಲೇ ಬೆಂಗಳೂರಿನಿಂದ ಸಮಾಚಾರ ಸಂಗ್ರಹವೆಂಬ ದಿನಪತ್ರಿಕೆ ಹೊರಡಿಸಿದ್ದರು. ಇವರ ಇನ್ನಿತರ ಪತ್ರಿಕಾ ಸಾಹಸಗಳೆಂದರೆ ಸುಮತಿ (1909) ಎಂಬ ವಾರಪತ್ರಿಕೆ. ಕರ್ನಾಟಕ (1913-21) ಎಂಬ ಅರ್ಧವಾರ ಪತ್ರಿಕೆ, ಕರ್ನಾಟಕ ಜೀವನ ಎಂಬ (1916) ಮಾಸಪತ್ರಿಕೆ ಹಾಗೂ ಕರ್ನಾಟಕ ಜನಜೀವನ ಮತ್ತು ಅರ್ಥಸಾಧಕ ಪತ್ರಿಕೆಗಳು (1909-23).

20ನೆಯ ಶತಮಾನದ ಆರಂಭದಲ್ಲಾಗಲೇ ಕನ್ನಡದ ಪತ್ರಿಕೋದ್ಯಮವನ್ನೂ ಸೇರಿಸಿ ಇಡೀ ಭಾರತೀಯ ಪತ್ರಿಕೋದ್ಯಮಕ್ಕೆ ಸ್ವಾತಂತ್ರ್ಯ ಹೋರಾಟದ ಗಾಳಿ ಬೀಸತೊಡಗಿತ್ತು. 1884ರಲ್ಲೇ ಸ್ಥಾಪನೆಗೊಂಡ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಂಪೂರ್ಣ ಸ್ವರಾಜ್ಯ ತನ್ನ ಗುರಿಯೆಂದು ಘೋಷಿಸಿತ್ತು. ಬಾಲ ಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಮೋತಿಲಾಲ್ ಘೋಷ್ ಮೊದಲಾದ ಕಾಂಗ್ರೆಸ್ಸಿನ ನಾಯಕರು ಬ್ರಿಟಿಷರ ಜೊತೆ ಸಂಗ್ರಾಮಕ್ಕೆ ಇಳಿದಿದ್ದರು. ವಿಶೇಷವೆಂದರೆ ಈ ನಾಯಕರೆಲ್ಲರಿಗೂ ಒಂದಿಲ್ಲೊಂದು ಪತ್ರಿಕೆಯ ಜೊತೆ ಸಂಪರ್ಕವಿತ್ತು. ಇದು ಕಾರಣವಾಗಿ ಭಾರತೀಯ ದೇಶಭಾಷಾ ಪತ್ರಿಕೋದ್ಯಮವೇ ನೇರವಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿದಂತೆ ಭಾಸವಾಗತೊಡಗಿತ್ತು. ಆಂಗ್ಲರ ಒಡೆತನವಿದ್ದ ಇಂಗ್ಲಿಷ್ ಪತ್ರಿಕೆಗಳನ್ನು ಹೊರತುಪಡಿಸಿ ಇತರ ಎಲ್ಲಾ ದೇಶ ಭಾಷಾ ಪತ್ರಿಕೆಗಳು ಸ್ವಾತಂತ್ರ್ಯದ ಪರವಾಗಿದ್ದುವು. ಸ್ವಾತಂತ್ರ್ಯ ಚಳವಳಿಗೆ ಒತ್ತುಕೊಟ್ಟು ವರದಿಗಳನ್ನು ಪ್ರಕಟಿಸುತ್ತಿದ್ದುವು. 1920ರ ಬಳಿಕ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚುಕ್ಕಾಣಿ ಹಿಡಿದ ಮಹಾತ್ಮಾ ಗಾಂಧಿ ಸ್ವತಃ ಶ್ರೇಷ್ಠ ಪತ್ರಕರ್ತರಾಗಿದ್ದರು. ಕಾಂಗ್ರೆಸ್ಸಿನ ಮೊದಲ ಸಾಲಿನ ನಾಯಕರಾದ ಜವಾಹರಲಾಲ್ ನೆಹರೂ ಪತ್ರಿಕೆ ನಡೆಸುತ್ತಿದ್ದರು. ಆ ಕಾಲದ ಹಿರಿಯ ಕಾಂಗ್ರೆಸ್ ನಾಯಕರಿಗೆಲ್ಲ ಪತ್ರಿಕಾ ಸಂಪರ್ಕವಿತ್ತೆಂದು ಸಾಮಾನ್ಯವಾಗಿ ಅಭಿಪ್ರಾಯ ಪಡಬಹುದು.
ದೇಶ ಭಾಷಾ ಪತ್ರಿಕೆಗಳಲ್ಲಿ ಕಂಡುಬಂದ ಈ ಪರಿಸ್ಥಿತಿಯಿಂದ ಕನ್ನಡ ಪತ್ರಿಕೋದ್ಯಮ ಭಿನ್ನವಾಗಿರಲಿಲ್ಲ. ಆಗಿನ ಕಾಲದಲ್ಲಿ ಪ್ರಕಟಗೊಂಡ ಪತ್ರಿಕೆಗಳ ಹೆಸರನ್ನು ಗಮನಿಸಿದರೆ ಅವುಗಳಿಗಿದ್ದ ಸ್ವರಾಜ್ಯದ ಕನಸು, ನವ ಆರಂಭದ ಹುಮ್ಮಸ್ಸು, ದೇಶ ಸಾಕಾರಗೊಳ್ಳಬೇಕೆಂಬ ಆಸೆ ವ್ಯಕ್ತವಾಗುತ್ತದೆ. ಮೈಸೂರಿನ ದೇಶಾಭಿಮಾನಿ (1898), ತಾಯಿನಾಡು (1926), ಶಿವಮೊಗ್ಗದ ಶುಭೋದಯ (1914), ಬೆಂಗಳೂರಿನ ಭಾರತೀ (1902), ನವಜೀವನ (1929), ಉಡುಪಿಯ ಸತ್ಯಾಗ್ರಹ (1921), ಉದಯ ಭಾರತ (1927), ಉಡುಪಿಯ ದೇಶಬಂಧು (1926), ಮಂಗಳೂರಿನ ದೇಶಭಕ್ತ (1980), ಬಿಜಾಪುರದ ನವೀನ ಭಾರತ (1922), ಹುಬ್ಬಳ್ಳಿಯ ದೇಶಬಂಧು (1930), ಮಂಡ್ಯದ ಭಾರತ ವರ್ಷ (1909), ತುಮಕೂರಿನ ಭಾರತ ಸಂದೇಶ (1927). ಹೀಗೆ 20ನೆಯ ಶತಮಾನದ ಮೊದಲ ಮೂರು ದಶಕಗಳಲ್ಲಿ ಪ್ರಕಟಗೊಂಡ ಪತ್ರಿಕೆಗಳಲ್ಲಿ ಸ್ವರಾಜ್ಯದ ಹೊಸ ದೇಶದ ಕನಸು ನಿಚ್ಚಳವಾಗಿ ಪ್ರಕಟವಾಗುತ್ತದೆ.

ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಹೊತ್ತಿನಲ್ಲೇ ಕನ್ನಡಿಗರು ಇನ್ನೊಂದು ಹೋರಾಟದಲ್ಲಿ ತೊಡಗಿಕೊಂಡಿದ್ದರು. ಅದು ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ಭಾಗಗಳನ್ನೆಲ್ಲ ಒಂದು ಆಡಳಿತಾಂಗವಾಗಿ ಕಟ್ಟಿ ಹೊಸ ಕನ್ನಡ ರಾಜ್ಯವನ್ನು ರಚಿಸಬೇಕೆಂಬ ಕನಸು. ಅನೇಕರಿಗೆ ಭಾರತದ ಉದಯದಷ್ಟೇ ಕರ್ನಾಟಕ ಏಕೀಕರಣ (ನೋಡಿ) ಮುಖ್ಯವಾಗಿತ್ತು. ಅದಕ್ಕಾಗಿ ಪ್ರಾಣತೆರಲೂ ಜನ ಸಿದ್ಧವಿದ್ದರು. ಈ ಭಾವನೆಯನ್ನು ಆ ಕಾಲದ ಪತ್ರಿಕೆಗಳ ಹೆಸರುಗಳಲ್ಲೇ ಕಾಣುತ್ತೇವೆ. ಬಿಜಾಪುರದ ಕರ್ನಾಟಕ ಭಾಷಾ ಸೇವಕ (1894), ಕರ್ನಾಟಕ ವೃತ್ತ (1892), ಕರ್ನಾಟಕ ವೈಭವ (1892), ಬೆಂಗಳೂರಿನ ಕರ್ನಾಟಕ (1913-21), ಕರ್ನಾಟಕ ಜೀವನ (1916), ಬೆಳಗಾಂವಿಯ ಸಂಯುಕ್ತ ಕರ್ನಾಟಕ (1929), ನಂಜನಗೂಡಿನ ಕರ್ನಾಟಕ ನಂದಿನಿ (1916) ಹೀಗೆ ಸರ್ವವೂ ಕರ್ನಾಟಕಮಯವಾಗಿದ್ದ ಕಾಲವದು. ಹಾಗೆಯೇ ಮಂಗಳೂರಿನ ಕನ್ನಡ ಕೋಗಿಲೆ (1916), ಬೆಂಗಳೂರಿನ ಕನ್ನಡ ಜ್ಯೋತಿ (1937), ಕನ್ನಡ ವಾಣಿ (1933), ಮಂಗಳೂರಿನ ಕನ್ನಡ ಕೇಸರಿ (1885) ಮುಂತಾಗಿ ಕನ್ನಡ ಪ್ರಜ್ಞೆ ಜಾಗೃತಗೊಳ್ಳ್ಳುತ್ತಿರುವುದನ್ನು ಪತ್ರಿಕೆಗಳ ಹೆಸರುಗಳ ಮೂಲಕವೇ ಗುರುತಿಸಬಹುದು.
ಸುದೀರ್ಘ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಕನ್ನಡಿಗರ ಒತ್ತಾಸೆಯ ಫಲವಾಗಿ, ಭಾಷಾವಾರು ಪ್ರಾಂತ್ಯಗಳ ರಚನೆಯ ವೇಳೆ ಕನ್ನಡ ರಾಜ್ಯವೂ ಉದಯವಾಯಿತು. ವಿಶೇಷವೆಂದರೆ ಪ್ರಜೆಗಳ ಅಭೀಪ್ಸೆ ಸಾಕಾರಗೊಂಡು ಭಾರತ ಸರ್ಕಾರ ಮೈಸೂರು ರಾಜ್ಯ ರಚಿಸಿ ಪ್ರಜೆಗಳ ಆಶಯಕ್ಕೆ ಮಾನ್ಯತೆ ಬಂದುದರ ಪ್ರತಿಬಿಂಬವೋ ಎನ್ನುವಂತೆ 1930 ರಿಂದ 50ರ ಅವಧಿಯಲ್ಲಿ ಪ್ರಕಟವಾದ ಅನೇಕ ಪತ್ರಿಕೆಗಳ ಹೆಸರುಗಳಿವೆ. ಉದಾಹರಣೆಗೆ ಕನ್ನಡದಲ್ಲಿ ಹಿರಿಯ ದಿನಪತ್ರಿಕೆ ಪ್ರಜಾವಾಣಿ ಪ್ರಾರಂಭವಾದುದು 1948ರಲ್ಲಿ. ಪ್ರಜಾಬಂಧು (1932), ಪ್ರಜಾಮತ (1931) ಈ ಪತ್ರಿಕೆಗಳು ಈ ಮೊದಲು ಪ್ರಕಟವಾಗುತ್ತಿದ್ದವು.

20ನೆಯ ಶತಮಾನ ಆದಿಯಿಂದ ಸುಮಾರು ಐದು ದಶಕಗಳ ಕಾಲದವರೆಗೆ ಕನ್ನಡ ಪತ್ರಿಕೋದ್ಯಮದಲ್ಲಿ ಮಹತ್ತರ ಸಾಧನೆ ಮಾಡಿದ ಅನೇಕ ಪತ್ರಿಕೆಗಳು ಜೀವ ತಳೆದುವು. ಹಾಗೆಯೇ ಕರ್ನಾಟಕ ಸಂದರ್ಭಕ್ಕೆ ಬಹುಮುಖ್ಯ ಕೊಡುಗೆಗಳನ್ನು ನೀಡಿದ ಅನೇಕ ಮಹನೀಯರೂ ಈ ಅವಧಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದು ಉಲ್ಲೇಖನೀಯ. ಈ ಅವಧಿಯಲ್ಲಿ ಹುಟ್ಟಿದ್ದ ಹೆಚ್ಚಿನ ಪತ್ರಿಕೆಗಳು ಈಗ ಇಲ್ಲ. ಪತ್ರಕರ್ತರೂ ಇಲ್ಲ. ಆದರೆ ಕನ್ನಡ ಪತ್ರಿಕಾ ಚರಿತ್ರೆಯಲ್ಲಿ ದಾಖಲಾಗಲೇಬೇಕಾದ ಕೆಲವು ಹೆಸರುಗಳಿವೆ. ಪಿ. ಆರ್. ರಾಮಯ್ಯನವರ ತಾಯಿನಾಡು (1926), ಎನ್.ಎಸ್. ಸೀತಾರಾಮಶಾಸ್ತ್ರಿಗಳ ದೇಶಬಂಧು (1931), ಎಂ. ಸೀತಾರಾಮ ಶಾಸ್ತ್ರಿಗಳ ವೀರಕೇಸರಿ (1928), ತಿರುಮಲೆ ತಾತಾಚಾರ್ಯ ಶರ್ಮರ ವಿಶ್ವಕರ್ನಾಟಕ (1925), ಬಿ.ಎನ್. ಗುಪ್ತರ ಪ್ರಜಾಮತ (1931), ಆಲೂರು ವೆಂಕಟರಾಯರ ಜಯಕರ್ನಾಟಕ (1922), ಕಡೆಂಗೋಡ್ಲು ಶಂಕರ ಭಟ್ಟರ ರಾಷ್ಟ್ರಬಂಧು (1928), ಎಚ್.ಕೆ. ವೀರಣ್ಣಗೌಡರ ಚಿತ್ರಗುಪ್ತ (1928), ಪಿ.ಶೇಷಪ್ಪನವರ ಕಿಡಿ (1949) ಇವು ಈ ಅವಧಿಯಲ್ಲಿ ಬಹು ಪಾಲು ಕನ್ನಡ ಪತ್ರಿಕೋದ್ಯಮ ನಾಯಕತ್ವ ವಹಿಸಿದ್ದವು.

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ