ಕಾಡು ಕುದುರೆ ಓಡಿ ಬಂದಿತ್ತಾ
ಕಾಡು ಕುದುರೆ ಓಡಿ ಬಂದಿತ್ತಾ…
ಕಾಡು ಕುದುರೆ ಓಡಿ ಬಂದಿತ್ತಾ
ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ
ಹೆಸರಿನ ಗುಟ್ಟ ಒಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ
ಜಾರಿಬಿದ್ದ ಉಲ್ಕೀ ಹಾಂಗ
ಕಾಡಿನಿಂದ ಚಂಗನೆ ನೆಗೆದಿತ್ತ ||ಪ||
ಮೈಯಾ ಬೆಂಕಿ ಮಿರುಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ
ಧೂಮಕೇತು ಹಿಂಬಾಲಿತ್ತ
ಹೌಹಾರಿತ್ತ ಹರಿದಾಡಿತ್ತ
ಹೈಹೈ ಅಂತ ಹಾರಿಬಂದಿತ್ತ ||೧||
ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರಗತಿತ್ತ
ಬಿಗಿದ ಕಾಂಡ ಬಿಲ್ಲಿನಿಂದ
ಬಿಟ್ಟ ಬಾಣಧಾಂಗ ಚಿಮ್ಮಿ
ಹದ್ದ ಮೀರಿ ಹಾರಿ ಬಂದಿತ್ತ ||೨||
ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು
ಏಳಕೊಳ್ಳ ತಿಳ್ಳೀ ಹಾಡಿ
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ ||೩||
ಚಿತ್ರ: ಕಾಡು ಕುದುರೆ
ಗೀತೆರಚನೆ, ಸಂಗೀತ: ಚಂದ್ರಶೇಖರ ಕಂಬಾರ,
ಗಾಯನ: ಶಿವಮೊಗ್ಗ ಸುಬ್ಬಣ್ಣ, ಕಲ್ಪನಾ ಶಿರೂರು
ಇದು ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರಗೀತೆ. ಡಾ. ಚಂದ್ರಶೇಖರ ಕಂಬಾರ ಅವರನಿರ್ದೇಶನದ ‘ಕಾಡುಕುದುರೆ’ ಚಿತ್ರದ್ದು. ಗೀತೆಯನ್ನು ಹಾಡಿ ರಾಷ್ಟ್ರ ಪ್ರಶಸ್ತಿ ಪಡೆದ ಗಾಯಕ11.08.2022ರಂದು ನಮ್ಮನ್ನಗಲಿದ ಡಾ. ಶಿವಮೊಗ್ಗ ಸುಬ್ಬಣ್ಣ
ಕಾಮೆಂಟ್ಗಳು