ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಂದ್ರಶೇಖರ್


ಸಿಗನಣ್ಣಾ ‌ಇನ್ನು‌ ಸಿಗನಣ್ಣಾ ‌
ನಮ್ಮ‌ ಚಂದ್ರ‌ನಂತಹ ಋಷಿಯು ಸಿಗನಣ್ಣಾ 

ಇಂದು  ವಿಜ್ಞಾನ ಲೋಕದ ಮಹಾ ತಪಸ್ವಿ  ಚಂದ್ರಶೇಖರ್ ‌ಅವರ ಜನ್ಮದಿನ.  ನಮ್ಮ ಹಿರಿಯರಾದ ಸಂಪಿಗೆ ತೋಂಟದಾರ್ಯ ಅವರಿಗೆ, ಈ ಮಹಾನ್ ವಿಜ್ಞಾನಿಯ ಬಗ್ಗೆ ಅಪಾರ ಗೌರವ. ಇವರು ಚಂದ್ರಶೇಖರ್ ಅವರ ಜೀವನ ಚರಿತ್ರೆ  'ಚಂದ್ರ' ಅನುವಾದ ಮಾಡಿದ್ದಾರೆ. ಅದನ್ನು ಪ್ರೊ. ಕೆ.ಸಿ.ವಾಲಿ ಅವರು ಬರೆದಿದ್ದು, ಇದು ಚಂದ್ರ ಅವರ ಅಧಿಕೃತ  ಜೀವನ ಚರಿತ್ರೆ ಎಂದು ಪರಿಗಣಿತವಾಗಿದೆ.  ಹಾಗೆಂದು ಚಂದ್ರ ಅವರೇ ಒಮ್ಮೆ ಹೇಳಿದ್ದರು.  

ಇಂದು ಸಂಪಿಗೆ ತೋಂಟದಾರ್ಯ ಅವರ ಬಳಿ ಸಂಭಾಷಿಸುವಾಗ ಅವರು, ಚಂದ್ರಶೇಖರ್ ಅವರು ನಿಧನರಾದಾಗ ಬರೆದಿದ್ದ ಒಂದು ಕವಿತೆಯ ಮಾತು ಬಂತು.  ಈ ಕವಿತೆ ಚಂದ್ರಶೇಖರ್ ಅವರ ಕುರಿತ ಸಮಸ್ತ ವಿರಾಟ್ ಸ್ವರೂಪವನ್ನೇ ತೆರೆದಿಡುವಂತಾಗಿದೆ.  ಹೀಗಾಗಿ ಈ ಕವಿತೆಯನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ. 

ಚಂದ್ರಶೇಖರ್ ನಿಧನರಾದ ಸುದ್ದಿ ‌ಕೇಳಿ...

ಸಿಗನಣ್ಣಾ ಇನ್ನು‌ ಸಿಗನಣ್ಣಾ

ಸಿಗನಣ್ಣಾ ‌ಇನ್ನು‌ ಸಿಗನಣ್ಣಾ ‌
ನಮ್ಮ‌ ಚಂದ್ರ‌ನಂತಹ 
            ಋಷಿಯು ಸಿಗನಣ್ಣಾ .

ಸಪ್ತ ಋಷಿಗಳು ಗುಪ್ತದಲಿ 
                         ‌‌‌    ಸೇರಿ 
ಒಂದಾಗಿ ಮೂರ್ತಿವೆತ್ತು‌ 
                        ಬಂದಂತಿಹ  
ಜಗ ವಂದಿತ ಈ ಚಂದ್ರ
      ಮಹರ್ಷಿ ,ಇನ್ನು ‌ಸಿಗನಣ್ಣಾ.

ಸುಖವ ಬಯಸದೆ ಪದವಿ‌ 
                            ಬಯಸದೆ 
ಉಗ್ರ ಏಕಾಗ್ರತೆಯಲಿ  ಅಚಲ 
                             ನಿಷ್ಠೆಯಲಿ 
ನಿಸರ್ಗ ಚೆಲುವನರಿವ ಒಂದೇ 
                            ಗುರಿಯಲಿ 
ಸಾಗುವ ಈ ಉಗ್ರ 
          ತಪಸ್ವಿಯಂತಹವ 
                   ಇನ್ನು‌  ಸಿಗನಣ್ಣಾ .

ನಕ್ಷತ್ರಗಳ ಜಾತಕವನು 
  ಜಾಲಾಡುವ ಜ್ಯೋತಿರ್ವಿಜ್ಞಾನಿ 
ತರುಣ ಚಂದ್ರ ಹೇಳಿದನು :
" ಉರಿದು‌ ನಂದಿದ ಚಿಕ್ಕೆ 
  ದ್ರವ್ಯದ ಸೆಳೆತಕ್ಕೆ ‌ಸಿಕ್ಕೆ‌
ಕೊನೆಗೆ ತಲುಪುವ ದಿಕ್ಕೆ
ಅದರ ಭಾರದ ಗತಿಯಕ್ಕೆ ;
ಒಂದು  ದಶಾಂಶ ನಾಲ್ಕು
 ಸೂರ್ಯ ಭಾರ ಮೀರಿದ ಚಿಕ್ಕೆ
ಸಾಗೇ ಸಾಗುವುದು ದೈತ್ಯ 
  ಗುರುತ್ವ ಬಲದ ಬಲೆಗೆ ಸಿಕ್ಕೆ 
ಶ್ವೇತಕುಬ್ಜದಾಚೆಗೂ  ಕುಗ್ಗಿ ಕುಗ್ಗಿ     
 ಆಗುವುದು ಅತಿ ಸಾಂದ್ರ ತೆಕ್ಕೆ".

ಇದನೊಪ್ಪದ ಪಿತಾಮಹ 
ಎಡಿಂಗ್ಟನ್ ಅಪಹಾಸ್ಯಗೈಯಲು
ನೊಂದು ಬೆಂದ ತರುಣ 
ಚಂದ್ರನೆದೆ ಉರಿವ ಒಲೆಯೊಲು 
ಧಗಧಗಿಸಿ ಅಂದು‌ಕೊಂಡ :
"ಜಗವು‌ ಕೊನೆಯಾಗುವುದು ಗಿಡಚಿಕ್ಕುವ ಶಬ್ದದಿಂದಲ್ಲ 
ಯಾರಿಗೂ ಕೇಳಿಸದ ದುಃಖದ 
             ‌‌‌‌‌              ಬಿಕ್ಕಿನಿಂದ ".

ತಪ್ಪಿಲ್ಲ ಎನ್ನಲಿ‌ 
ಆದರೇನು‌ ಕೇಳಲಾರದು ಜಗ 
        ‌‌‌‌‌‌‌‌‌                     ಒಪ್ಪದಲಿ 
ಇರಲಿ.
ತೆಪ್ಪೆಗೆ ಅದನೊತ್ತಟ್ಟಿಗೆ ಬಿಟ್ಟು
ಮತ್ತೊಂದು ಗಿರಿ 
   ಶಿಖರವನೇರುವಾ ಹಾರುವಾ 
ಎಂದು ದೃಢ ನಿರ್ಧಾರಗೈದು 
ಇಂಗ್ಲೆಂಡನೂ ತಾಯ್ನಾಡನೂ 
          ‌‌‌‌‌‌                    ತೊರೆದು 
ಅರಿವಿನ ದಾರಿ ಹಿಡಿಯಲು
ವಿವೇಕಾನಂದ ‌ಪ್ರಜ್ವಲಿಸಿದ ಅಮೆರಿಕಾದ ಶಿಕಾಗೋಗೆ 
             ‌ ‌‌‌‌               ತೆರಳಿದ .
ಈ ವಿಜ್ಞಾನದ ‌ವಿವೇಕಾನಂದ 
 ಇಂತಹವನು ಇನ್ನು ‌ಸಿಗನಣ್ಣಾ.

ಆತ ಬಯಸಿದ್ದು ಮಹತ್ 
           ಬಾಳಿದ್ದು ಮಹತ್ 
ಆತ ಅರಿತದ್ದು ಮಹತ್ 
            ಕೊಟ್ಟಿದ್ದು ಮಹತ್ 
' ನಕ್ಷತ್ರಗಳು ಗ್ಯಾಲಕ್ಸಿಯಲಿ 
                       ಹರಡಿದ ಬಗೆ
ನಕ್ಷತ್ರ ಸಾಗುವಾಗ
         ಉಳಿದವುಗಳ ಸೆಳೆತಕೆ 
ಸಿಕ್ಕಿ " ನಡೆ ತಡೆ " ಗೆ ಸಿಲುಕಿದ 
                                ವಿಚಿತ್ರ ,
ಆಕಾಶದ ನೀಲಕೆ ಗಣಿತದ
                      ಮಣಿಹಾರ ,
ಕಾಂತಕ್ಷೇತ್ರದಲಿ ಬಿಸಿ ದ್ರವಗಳ 
                    ನಡವಳಿಕೆ ಸಾರ ,
ಸಾಮಾನ್ಯ ‌ಸಾಪೇಕ್ಷತ್ವದ 
                    ಸಾಂದ್ರ ನೋಟ ,
ಗಿರಿ ಗಿರಿ ತಿರುಗುವದು‌‌ ಸ್ಥಿರತೆ 
                ‌ ‌         ಪಡೆವ‌ ಆಟ ,
ಮತ್ತೂ,
ಮೊದಲ‌ ದಿನಗಳಲಿ ಹಿಡಿದು 
                               ಬಿಟ್ಟಿದ್ದ 
ಅತಿ ಸಾಂದ್ರ‌ ತೆಕ್ಕೆಗೆ 
                ಕಾಳರಂಧ್ರದ ಮಾಟ
ನ್ಯೂಟ್ರಾನು ನಕ್ಷತ್ರದ ನೋಟ 
"ಚಂದ್ರಶೇಖರ. ಮಿತಿ " ಗೆ
              ವಾಸ್ತವದ ಕಿರೀಟ ,
ಹೀಗೇ ...
ಹಲವು ಹತ್ತು ‌ಮಹತ್‌ 
                 ಸಂಶೋಧನೆಗಳು 
ಬೃಹತ್ ಹೊತ್ತುಗೆಗಳು  ಪತ್ರಿಕೆಗಳು ಉಪನ್ಯಾಸ ,  ‌ಪ್ರತಿಯೊಂದರಲೂ‌ ಇವನು‌ 
                ವ್ಯಾಸ ವಾಲ್ಮೀಕಿ 
   ಇಂತಹವನು‌ ಇನ್ನು‌ ಸಿಗನಣ್ಣಾ 

ಬಂದವು ಬಂದವು ಪದವಿಗಳು 
   ಪ್ರಶಸ್ತಿಗಳು ಹಿಂಡುಹಿಂಡಾಗಿ ,
ನೊ‌ಬೆಲ್ ಪ್ರಶಸ್ತಿ ಕೂಡ ಬಂತು
  ತಡವಾಗಿ ಬಹುಶಃ ನಾಚುತ್ತಾ .
ಯಾವುದೂ ಆತನ ತಲೆ
                  ತಿರುಗಿಸುವುದಿಲ್ಲ 
ಸ್ಥಿತ ಪ್ರಜ್ಞೆಯ ಏಕಾಗ್ರತೆಯ ತಪದ ದಾರಿಗೆ ಅಡ್ಡಿಯಾಗಲು 
                 ಆತ ಬಿಡುವುದಿಲ್ಲ .
ಸದಾ ,
ಅದೇ ಮೊದಲ ವಿದ್ಯಾರ್ಥಿಯ 
ಅದೇ ಮೊದಲ ತರುಣ
                          ವಿಜ್ಞಾನಿಯ
ಅದೇ ಮೊದಲ ಪ್ರೊಫೆಸರನ
ಆಸಕ್ತಿ, ಉತ್ಸಾಹ , ಶ್ರದ್ಧೆ
                           ನಿರಂತರ ;
ಮಾನವತೆಯ ಒಳ್ಳೆತನವೆಲ್ಲಾ
               ಹೆಪ್ಪುಗಟ್ಟಿ ಕೂಡಿದ 
ಸುಸಂಸ್ಕೃತ ಸಭ್ಯ ಸರಳ ಸಜ್ಜನ 
                         ಸತ್ಯ ‌ಮಾರ್ಗಿ
ಸುಬ್ರಹ್ಮ ಸುಬ್ರಹ್ಮಣ್ಯನ್
       ಚಂದ್ರಶೇಖರ್ ಸರ್ 
ನಮನ ನಿಮಗೆ ನಿಮ್ಮ ಅದಮ್ಯ
                             ಚೇತನಕೆ .
ಆತನೇ ಹೇಳಿದ ನುಡಿ :
" ಸರಳತೆ ನಿಜದ ಕುರುಹು
 ಸೌಂದರ್ಯ ಸತ್ಯದ ಹೊಳಹು"

ಇದು ಅವರಿಗೂ ಅನ್ವಯ 
                             ಅರ್ಪಿತ 
ಸತ್ಯ ಶಿವ ಸುಂದರಗಳ ಬೆಳಕ 
ತೋರುವೀ ಚಂದ್ರನೆಂಬ 
                             ಚೈತನ್ಯ.
    ಇಂತಹವನಿನ್ನು ಸಿಗನಣ್ಣಾ!!.

-- ಸಂಪಿಗೆ ತೋಂಟದಾರ್ಯ. Thontadarya Sampige
23-8-1995 
ಭೌತಶಾಸ್ತ್ರ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ 
ಧಾರವಾಡ.580003.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ