ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಂಜುಳಾ ಬಬಲಾದಿ

 


ಮಂಜುಳಾ ಬಬಲಾದಿ

ಮಂಜುಳಾ ಬಬಲಾದಿ ಹಲವಾರು ನಿಟ್ಟಿನಲ್ಲಿ ಕ್ರಿಯಾಶೀಲರು.  ಹಲವು ವರ್ಷಗಳ ಹಿಂದೆ ನಾನು ಸೈಕ್ಲಿಂಗ್ ಸವಾರಿ ಪ್ರಾರಂಭಿಸಿದ್ದೆ ಅವರ ಪ್ರೇರಣೆಯಿಂದ.  ಸೈಕ್ಲಿಂಗ್ ಮಾತ್ರವಲ್ಲದೆ ವಿವಿಧ ರೀತಿಯ ಆತ್ಮ ಸಂತೋಷ ಪ್ರೇರಿತ ವ್ಯಾಯಾಮ, ಪ್ರಕೃತಿ ಪ್ರೇಮ, ಸಾಹಿತ್ಯ ಪ್ರೇಮ, ಸಂಗೀತ ಪ್ರೇಮ,  ಕಲಿಕೆ, ಬೋಧನೆ, ಬರಹ, ಪ್ರವಾಸ, ಚಾರಣ, ಸಮಾಜ ಹಿತಚಿಂತನೆ, ಆತ್ಮೀಯ ಮನೋಧರ್ಮ  ಹೀಗೆ ಹಲವು ನಿಟ್ಟಿನಲ್ಲಿ ಅವರು ಸಕ್ರಿಯರು.

ಕನ್ನಡ ಮಾತೃಭಾಷಾ ಮಾಧ್ಯಮದಲ್ಲೇ ಹೈಸ್ಕೂಲು  ತನಕದ ಓದನ್ನು ನಡೆಸಿದ ಮಂಜುಳಾ ಮುಂದೆ ಇಂಜಿನಿಯರಿಂಗ್ ಪದವೀಧರರಾಗಿ ಪ್ರತಿಷ್ಟಿತ ಐ.ಟಿ ಉದ್ಯೋಗಸ್ಥೆಯಾಗಿದ್ದರೂ ಕವಿತೆ, ಲಲಿತ ಬರಹ, ಕನ್ನಡ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ, ಅಂತರಜಾಲದಲ್ಲಿನ ಸ್ನೇಹಸೇತುವೆಗಳಲ್ಲಿ ಆತ್ಮೀಯ ಕನ್ನಡ ಸಂಭಾಷಣೆ, ಸಂವಾದ ಮುಂತಾದವುಗಳಿಂದ ತಮ್ಮ ಪ್ರೀತಿಯ ಕನ್ನಡ ಭಾಷೆಗೆ ಅತ್ಯಂತ ಆಪ್ತರಾಗಿದ್ದಾರೆ. ಕನ್ನಡೇತರರ ಮಕ್ಕಳಿಗೆ ಆಪ್ತವಾಗಿ ಕನ್ನಡ ಕಲಿಸುತ್ತಾರೆ. ಅವರು ತಮ್ಮ ಖುಷಿಗಾಗಿ ಚೆನ್ನಾಗಿ ಹಾಡುತ್ತಾರೆ ಕೂಡಾ.

ಮಾತೃ ಹೃದಯಿ ಜವಾಬ್ಧಾರಿ, ಐ.ಟಿ ತಂತ್ರಜ್ಞೆಯ ಕಾರ್ಯಬಾಹುಳ್ಯ, ಬೃಹತ್ ಬೆಂಗಳೂರು ಬದುಕಿನಲ್ಲಿ ಅನಿವಾರ್ಯವಾಗುವ ನೂರೆಂಟು ಹೊಂದಾಣಿಕೆಗಳು ಇತ್ಯಾದಿಗಳನ್ನು ನಿರ್ವಹಿಸುತ್ತಲೇ ಮಂಜುಳಾ ಮೇಲೆ ಹೇಳಿದ ಮತ್ತು ಅದಕ್ಕೂ ಮೀರಿದ ವಿಶಾಲ ವ್ಯಾಪ್ತಿಯ ಚಟುವಟಿಕೆಗಳಲ್ಲಿ ತಮ್ಮನ್ನು ವ್ಯಾಪಿಸಿಕೊಂಡಿದ್ದಾರೆ. 

ಮಳೆ, ಬಿಸಿಲು, ಹಸಿವೆ ನೀರಡಿಕೆಗಳ ಪರಿವೆಯೂ ಇಲ್ಲದಂತೆ ಮಂಜುಳ ತಮ್ಮ ಸೈಕಲ್ ಮೇಲೆ ಹಲವು ಸಹಸ್ರ ಮೈಲುಗಳ ಯಶಸ್ವಿ ಪಯಣ ಸಾಗಿಸಿದ್ದಾರೆ. ಅವುಗಳಲ್ಲಿ ಹಿಮಾಲಯದ ಅತಿ ಎತ್ತರದ ರಸ್ತೆ ಇರುವ ಪ್ರದೇಶಗಳು, ಯೂರೋಪ್ ಮತ್ತು ಅಮೆರಿಕದ ಹಲವು ಪ್ರದೇಶಗಳು ಕೂಡಾ ಸೇರಿವೆ. ಜೊತೆಗೆ ಅವರು ಉದ್ಯೋಗದ ನಿಮಿತ್ತವಾಗಲಿ ಅಥವಾ ಇನ್ಯಾವುದೇ ಕಾರಣಕ್ಕಾಗಲಿ ಎಲ್ಲಿಗೇ ಪಯಣಿಸಿದರೂ ಅಲ್ಲಿ ಸೈಕಲ್ ತುಳಿಯದೆ ಬರುವುದಿಲ್ಲ. ಕೊಡಗಿನ ವೈವಿಧ್ಯಮಯ ಮಳೆಯಡಿಯಲ್ಲಿ ಸೈಕಲ್ ಸವಾರಿ ಕುರಿತು ಹೇಳುವಲ್ಲಿ ಅಲ್ಲಿನ ಮಳೆಯಲ್ಲಿ ಮಂಜುಳಾ ಕಂಡಿರಬಹುದಾದ ಮಿಂಚು, ಅವರು ವಿವರಿಸುವ ಉತ್ಸಾಹಿ ಮೊಗದಲ್ಲಿ ನಮಗೂ ಗೋಚರಿಸಿದಂತೆನಿಸುತ್ತದೆ. ಅವರ ಈ ಅನುಭಾವದ ಸೊಗಸುಗಾಥೆಯ ಬರಹ ಪತ್ರಿಕೆಗಳಲ್ಲಿ ಸಹಾ ಸುಂದರವಾಗಿ ಮೂಡಿಬಂದಿತ್ತು. ಹಲವಾರು ವಿದ್ಯಾಸಂಸ್ಥೆಗಳು ಮತ್ತು ಸಮಾಜಸೇವಾ ಬೆಂಬಲಿತ ಉದ್ದೇಶವುಳ್ಳ ನಿಧಿ ಸಂಗ್ರಹಣಾ ಸೈಕಲ್ ಯಾತ್ರೆಗಳಲ್ಲೂ ಮಂಜುಳಾ ಬಬಲಾದಿ ಭಾಗವಹಿಸಿದ್ದಾರೆ. 

ಮಂಜುಳಾ ಸೈಕ್ಲಿಂಗ್ ಮಾತ್ರವಲ್ಲದೆ ಜಾಗಿಂಗ್, ಸ್ವಿಮ್ಮಿಂಗ್, ಸ್ಕೇಟಿಂಗ್, ಜಿಮ್  ಮುಂತಾದ ವಿಭಿನ್ನ ರೂಪಗಳ ವ್ಯಾಯಾಮಗಳನ್ನೂ ಹಿತಮಿತವಾಗಿ  ತಮ್ಮ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಯೋಗಾಭ್ಯಾಸದಲ್ಲಿ ಪರಿಣತಿ ಸಾಧಿಸಿರುವುದರ ಜೊತೆಗೆ, ತರಬೇತು ನೀಡುವ ಉನ್ನತ ಅರ್ಹತೆಯನ್ನು ಸಹಾ ಗಳಿಸಿದ್ದು ಆಸಕ್ತಿ ಉಳ್ಳವರಿಗೆ ತರಬೇತಿಯನ್ನು ಸಹಾ ನೀಡುತ್ತಿದ್ದಾರೆ.  

ಮಂಜುಳಾ ಅವರಿಗೆ ಕಾವ್ಯ, ಲಲಿತ ಬರಹಗಳ ರೂಪಕಗಳಲ್ಲಿ ಅವರದ್ದೇ ಆದ ವಿಶೇಷತೆಯಿದೆ. ಇದಕ್ಕೆ ಒಂದು ಉದಾಹರಣೆಯಾಗಿ ಅವರ ಗ್ಯಾಂಗ್ಟಾಕ್, ಡಾರ್ಜಿಲಿಂಗ್ ಪ್ರವಾಸದ ಕುರಿತಾಗಿ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ಮೂಡಿಬಂದ ‘ಮಳೆಯಲಿ ಜೊತೆಯಲಿ’ ಬರಹವನ್ನು ಗಮನಿಸಬಹುದು. ಇಲ್ಲಿನ ವರ್ಣನೆಗಳನ್ನು ಕಾಣುವಾಗ ಪ್ರಕೃತಿಯ ಪ್ರತಿಯೊಂದು ಎಳೆಯನ್ನೂ ಬಿಡಿ ಬಿಡಿಯಾದ ಸೂಕ್ಷ್ಮಜ್ಞತೆಯಲ್ಲಿ ತೆಗೆದು ಬದುಕಿನಲ್ಲಿ ಅನುಭಾವದಲ್ಲಿ ಹೇಗೆ ತಾನೇ ಇವರಿಗೆ ಬೆಸೆಯಲು ಸಾಧ್ಯವಾಯ್ತು ಎಂಬಷ್ಟು ಆಪ್ತ ಅಚ್ಚರಿ ಮೂಡಿಸುತ್ತಾರೆ. ಅವರು ಪರ್ವತಾರೋಹಣದಲ್ಲಾಗಲಿ, ಸೈಕ್ಲಿಂಗ್ ಯಾತ್ರೆಗಳಲ್ಲಾಗಲಿ, ಪ್ರವಾಸಗಳಲ್ಲಾಗಲಿ, ಪ್ರತಿ ನಿತ್ಯದ ಸೈಕಲ್ ಸವಾರಿ, ವಾಕಿಂಗ್ ಹೀಗೆ ಯಾವುದೇ ಚಟುವಟಿಕೆಯಲ್ಲಿ  ಪ್ರಕೃತಿಯೊಂದಿಗೆ ಆಪ್ತ ತಲ್ಲೀನತೆ ಕಾಣುತ್ತಾರೆ. ಓದು, ಗಾನ ಪ್ರೀತಿ, ಮನಮಂಥನ, ಧ್ಯಾನ, ಮೌನ ಇವೆಲ್ಲವುಗಳನ್ನೂ ತಮ್ಮ ಮನೋಧರ್ಮದೊಂದಿಗೆ ಸಮರಸದಿಂದ ಬೆಸೆದಿದ್ದಾರೆ.

ಮಂಜುಳಾ ಅವರ ಜೊತೆ ನನಗೆ ಸಿಕ್ಕಿರುವ ಸೈಕ್ಲಿಂಗ್, ಪ್ರಕೃತಿ ವೀಕ್ಷಣೆ, ಕಾಫಿ ಮತ್ತು ಸಂವಾದಗಳಲ್ಲಿ  ನಾನು ಕಲಿತಿರುವುದು ಅಪಾರ.  ಅದರಲ್ಲಿ ಎಲ್ಕಕ್ಕಿಂತ ಮುಖ್ಯವಾದದ್ದು 'ಈಗ, ಈ ಕ್ಷಣದಲ್ಲಿ ಹೇಗೆ ಇರಬೇಕು' ಎಂಬುದು.

ಆತ್ಮೀಯ ಮಂಜುಳಾ ಬಬಲಾದಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.

Happy birthday Manjula Babaladi 🌷🌷🌷

ಕಾಮೆಂಟ್‌ಗಳು

  1. ಇವರ ಹುಟ್ಟೂರು, ತಂದೆ ತಾಯಿಗಳ ಬಗ್ಗೆ ಬರೆಯಿರಿ. ಪ್ರಸ್ತುತ ವಾಸ ಸಂಸಾರ ಕಾಯಕ ಇತ್ಯಾದಿಗಳನ್ನು ಲೇಖನದಲ್ಲಿ ಸೇರಿಸಿ.

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ