ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿದ್ಯಾ ನಟರಾಜ್


 ವಿದ್ಯಾ ನಟರಾಜ್ 


ವಿದುಷಿ ವಿದ್ಯಾ ನಟರಾಜ್  ಮಹಾನ್ ಶಾಸ್ತ್ರೀಯ ಸಂಗೀತಗಾರರು ಮತ್ತು ಸಂಗೀತಶಾಸ್ತ್ರಜ್ಞರ ಕುಟುಂಬದಿಂದ ಮೂಡಿಬಂದ  ಸಂಗೀತ ಸಾಧಕಿ. ಭಾರತೀಯ ಕಲಾ ಪರಂಪರೆಗಳನ್ನು ವಿದೇಶದಲ್ಲಿ ಬೆಳಗುತ್ತಿರುವ ವಿದ್ಯಾ ಅವರು ಪಾಶ್ಚಾತ್ಯ ಸಂಗೀತದಲ್ಲೂ ಗಣನೀಯ ಜ್ಞಾನ ಗಳಿಸಿದ್ದಾರೆ. 

ಮೇ 26 ವಿದ್ಯಾ ಅವರ ಜನ್ಮದಿನ. ವಿದ್ಯಾ ಅವರು ಮೈಸೂರಿನ ಹೆಸರಾಂತ ವೀಣಾ ವಿದ್ವಾಂಸರು, ಗಾಯಕರು  ಮತ್ತು ವಾಗ್ಗೇಯಕಾರರಾದ  ವಿದ್ವಾನ್ ಆರ್.ವಿಶ್ವೇಶ್ವರನ್ ಅವರ ಸುಪುತ್ರಿ. 
ಬಾಲ್ಯದಿಂದಲೇ  ಸಂಗೀತ ಸಾಗರದಲ್ಲಿ ಅವರ ಬಾಳು ಪುನೀತಗೊಂಡಿತು.  ತಮ್ಮ ತಂದೆ ಆರ್.ವಿಶ್ವೇಶ್ವರನ್ ಅವರ ಕಟ್ಟುನಿಟ್ಟಿನ  ಮಾರ್ಗದರ್ಶನದಲ್ಲಿ ಅವರಲ್ಲಿನ ಸಂಗೀತ ಪ್ರತಿಭೆ ಅರಳಿತು.

ವಿದ್ಯಾ ನಟರಾಜ್ ಎಳೆಯ ವಯಸ್ಸಿನಲ್ಲೇ ತಮ್ಮ ಸೃಜನಶೀಲ ಸಂಗೀತ ಪಯಣವನ್ನು ಆರಂಭಿಸಿದರು. ಸಂಗೀತ, ನೃತ್ಯ ಮತ್ತು ಸೌಂದರ್ಯಶಾಸ್ತ್ರದಲ್ಲಿ ಮೂರು ಚಿನ್ನದ ಪಾದಕಗಳೊಂದಿಗೆ ಪದವಿ ಪಡೆದ ಅವರು,  ಮೈಸೂರು ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಮತ್ತೆ ಮೂರು ಚಿನ್ನದ ಪಾದಕಗಳೊಂದಿಗೆ  ಸ್ನಾತಕೋತ್ತರ ಪದವಿಯನ್ನೂ ಪಡೆದರು. ಮುಂದೆ ತಮ್ಮ  ಸಂಗೀತ ಕಚೇರಿಗಳು ಮತ್ತು ವೈವಿಧ್ಯ ಕಾರ್ಯಕ್ರಮಗಳ ಮೂಲಕ ಬೆಳೆದರು. ಲಂಡನ್‌ನ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್‌ನಿಂದ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಪಿಯಾನೋ, ಗಾಯನ ಮತ್ತು ಶಾಸ್ತ್ರಾಧ್ಯಯನಗಳನ್ನು ಕೈಗೊಂಡರು. 

ವಿದ್ಯಾ ಅವರ ಸಂಗೀತ ವೃತ್ತಿಜೀವನವು 35 ವರ್ಷಗಳನ್ನು ಮೀರಿ ಸಾಗಿದೆ. ತಮ್ಮ  ಒಂಬತ್ತನೇ ವಯಸ್ಸಿನಲ್ಲೇ ಅವರು ತಮ್ಮ ಮೊದಲ ಸಂಗೀತ ಕಚೇರಿ ನೀಡಿದ್ದರು. ಅವರು ಸತತ 10 ವರ್ಷಗಳ ಕಾಲ ರಾಷ್ಟ್ರೀಯ ಪ್ರತಿಭಾ ವಿದ್ಯಾರ್ಥಿವೇತನ ಸ್ವೀಕರಿಸಿದ ರಾಜ್ಯದ ಮೊದಲ ಪ್ರತಿಭೆ. ಅವರಿಗೆ  ಹಲವಾರು ಪ್ರಶಸ್ತಿಗಳು, ಪುರಸ್ಕಾರಗಳು ಸಂದಿವೆ. ಆಕಾಶವಾಣಿಯ ಶ್ರೇಣೀಕೃತ ಗಾಯಕಿಯಾದ  ಅವರು  ಅನೇಕ  ಸಂಗೀತ ಕಚೇರಿಗಳು ಮತ್ತು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದಾರೆ. ಭಾರತೀಯ ಸಂಗೀತದ ಹಿನ್ನೆಲೆಯಿಂದ ವಿಶ್ವ ಸಂಗೀತದಲ್ಲಿನ ನಾನಾ ಪ್ರಯೋಗಗಳಲ್ಲಿ ಅವರು ಅಪಾರ ಆಸಕ್ತಿ ಹೊಂದಿದ್ದಾರೆ. 

ವಿದ್ಯಾ ಕೆನಡಾದ ಬ್ರಾಂಪ್ಟನ್‌ನಲ್ಲಿ ಕರ್ನಾಟಕ ಸಂಗೀತಕ್ಕಾಗಿ ಶಾಲೆಯನ್ನು ಸ್ಥಾಪಿಸಿದ್ದಾರೆ.  ಸಂಗೀತದ ಮೂಲಕವೇ ಪೂಜೆ, ತಪಸ್ಸು ಹಾಗೂ ಧ್ಯಾನ ಎಂದು ನಂಬಿರುವ ವಿದ್ಯಾ ಅವರು ತಮ್ಮ ಸಂಗೀತ ಶೈಕ್ಷಣಿಕ ಸಂಸ್ಥೆಯನ್ನು' ಧ್ಯಾನ' ಎಂದೆ ಹೆಸರಿಸಿದ್ದಾರೆ. ಸಂಗೀತವನ್ನು ಅದರ ಮೂಲ ತತ್ವಗಳ  ಶ್ರದ್ಧೆಯಲ್ಲೇ  ಸಾಧನೆ ಮಾಡಬೇಕು ಎನ್ನುವ ಮೌಲ್ಯಗಳನ್ನು ತಮ್ಮ  ಶಿಷ್ಯವೃಂದದಿಂದ ಅಪೇಕ್ಷಿಸುವ ಅವರು ನಮ್ಮ ಕರ್ನಾಟಕ ಸಂಗೀತದ  ಸಂಸ್ಕೃತಿಯನ್ನು ಉನ್ನತ ಮಟ್ಟದಲ್ಲಿ ಮುಂದುವರಿಸುತ್ತಾ ಸಾಗಿದ್ದಾರೆ. 
 
ವಿದ್ಯಾ ನಟರಾಜ್ "ನನ್ನ  ಸಂಗೀತವೇ ನನ್ನ ಪರಿಚಯ" ಎನ್ನುತ್ತಾರೆ.  ಅಪಾರ ಸಂಗೀತ ನಿಷ್ಠೆಯ ಸಾಧಕಿ ವಿದ್ಯಾ ನಟರಾಜ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Vidya Nataraj 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ