ಆರ್. ವಿಜಯರಾಘವನ್
ಆರ್. ವಿಜಯರಾಘವನ್
ಆರ್. ವಿಜಯರಾಘವನ್ ಮಹತ್ವದ ಬರಹಗಾರರು.
ವಿಜಯರಾಘವನ್ 1956ರ ಆಗಸ್ಟ್ 15ರಂದು ಜನಿಸಿದರು. ಸ್ಥಳ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿ ಗ್ರಾಮ. ತಂದೆ ಎಂ. ಎನ್. ರಾಮಕುಮಾರ್. ತಾಯಿ ಸೀತಮ್ಮ. ಚಿಕ್ಕಂದಿನಲ್ಲೇ ತಾಯಿ ತೀರಿಕೊಂಡರು. ಅವರಿಗೆ 8 ಮಕ್ಕಳು. ಕಾರ್ಪಣ್ಯದ ಬದುಕಿನಲ್ಲಿ ಬಾಲ್ಯ ಕಳೆದ ವಿಜಯರಾಘವನ್ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿ ಪಡೆದರು..
ವಿಜಯರಾಘವನ್ ಪದವಿ ಪಡೆದ ಬಳಿಕ ಕೆಲಕಾಲ ವ್ಯವಸಾಯ ಮಾಡಿದರು. ಮಾಡುತ್ತಲೆ ಕತೆ ಬರೆದರು. ಕೆಲಕಾಲ ರಾಜ್ಯ ಸರ್ಕಾರದ ಸೇವೆಯಲ್ಲಿ ಕೆಲಸ ಮಾಡಿ, ಬಳಿಕ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಉದ್ಯೋಗ ಮಾಡಿದರು. ವಿಜಯರಾಘವನ್ ಈಗ ನಿವೃತ್ತರಾಗಿ ಕೋಲಾರದಲ್ಲಿ ನೆಲೆಸಿದ್ದಾರೆ. ಇವರಿಗೆ ಒಬ್ಬ ಮಗಳು, ಅಳಿಯ, ಮೊಮ್ಮಗ ಇದ್ದಾರೆ. ಪತ್ನಿ ಅನಸೂಯ. ಸಂಗೀತ, ಸಾಹಿತ್ಯದ ಹೊರತಾಗಿ ಚಿತ್ರಕಲೆ, ವಿಜ್ಞಾನ ಇವರ ಆಸಕ್ತಿಯ ವಲಯಗಳು.
ವಿಜಯರಾಘವನ್ ಉದ್ಯೋಗದ ಜೊತೆಗೇ ಬರೆದರು. ಕತೆ, ಕವಿತೆ, ಪ್ರಬಂಧ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ವಿಮರ್ಶೆ, ವ್ಯಕ್ತಿ ಚಿತ್ರ ಎಲ್ಲದರಲ್ಲೂ ಪರಿಶ್ರಮ ಮಾಡಿ ಅನುವಾದದಲ್ಲೂ ಅಪಾರ ಕೆಲಸ ಮಾಡಿದ್ದಾರೆ. ಸಾಹಿತ್ಯಕ್ಕೆ ಇವರು ಮೊದಲಿಟ್ಟಿದ್ದು ಸೋದರಮಾವ ಎನ್. ನರಹರಿಯವರ ಪ್ರೇರಣೆಯಿಂದ. ಅವರು ಆಗ ಮಲ್ಲಿಗೆಯಲ್ಲಿ ಇದ್ದರು. ನಾಡಿನ ಎಲ್ಲ ಪತ್ರಿಕೆಗಳಲ್ಲೂ ಇವರ ಬರಹಗಳು ಪ್ರಕಟಗೊಂಡಿವೆ.
ವಿಜಯರಾಘವನ್ ಅವರ ಮೊದಲ ಕವನ ಸಂಕಲನ 'ಮಂಜು' 1986ರಲ್ಲಿ ಬಂತು ಪುಟ್ಟದಾದರೂ ಬಹುಜನ ಪ್ರೀತಿ ಗಳಿಸಿತು. ಬಳಿಕ ಬರೆದದ್ದು ಅಪರಿಮಿತದ ಕತ್ತಲೊಳಗೆ ಕಾದಂಬರಿ. ಇದು ಅನೀವನ್ ಎಡ್ಜಸ್ ಹೆಸರಿನಲ್ಲಿ ಪರಿಷ್ಕಾರಗೊಂಡು ಯೇತಿ ಬುಕ್ಸ್ ವತಿಯಿಂದ ಪ್ರಕಟವಾಯಿತು. ನಂತರ ‘ಇರುವ ಸಂಗತಿ’ ಕವನ ಸಂಕಲನ ಬಂತು. ಲಲ್ಲಾದೇವಿ, ಹಫೀಝ್, ಅಲ್ಲಮನ ಇಂಗ್ಲಿಷ್ ಭಾಷಾಂತರ, ಉಮರನ ಹೊಸ ಅನುವಾದ, ರೂಮಿಯ ಅನುವಾದ ಮಾಡಿದ್ದಾರೆ. ಅಲ್ಲದೆ ಕೆ ಸತ್ಯನಾರಾಯಣರ ಕಾಲಜಿಂಕೆ ಪ್ರಕಟಗೊಳ್ಳಲಿದೆ. ಹೀಗೆ ಇವರ ಸುಮಾರು 40ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಜಾನಪದ ಲೋಕ ಇವುಗಳಿಗೆ ಬರೆದಿದ್ದಾರೆ. ಕನ್ನಡದ ಮಹತ್ವದ ಯೋಜನೆಯಾದ 'ನಾನು ಮೆಚ್ಚಿದ ನನ್ನ ಕತೆ' ಮಾಲಿಕೆಯಲ್ಲಿ ಮೊದಲ 4 ಪುಸ್ತಕಗಳಿಗೆ ಸಹಸಂಪಾದಕರಾಗಿದ್ದರು. ಬಳಿಕ 3 ಸಂಪುಟಗಳನ್ನು ಇವರೇ ಸಂಪಾದಿಸಿದ್ದಾರೆ. ಮಾಸ್ತಿ ಪ್ರಶಸ್ತಿಗೆ ಎರಡು ಬಾರಿ, ಸಾಹಿತ್ಯ ಅಕಾಡೆಮಿಗಾಗಿ ಪುಸ್ತಕಗಳ ಆಯ್ಕೆಯಲ್ಲೂ ದುಡಿದಿದ್ದಾರೆ.
ವಿಜಯರಾಘವನ್ ಅವರ ಅನುಸಂಧಾನ ಕಾವ್ಯಕೃತಿಗೆ ಮುದ್ದಣ ಪ್ರಶಸ್ತಿ, ಪುತಿನ ಪ್ರಶಸ್ತಿ ಸಂದಿದೆ. ಕಾವ್ಯಕ್ಷೇತ್ರದ ಸಾಧನೆಗಾಗಿ ಮಾಸ್ತಿ ಪುರಸ್ಕಾರ ದೊರೆತಿದೆ. ಕೋಲಾರ ತಾಲೂಕು ನಾಲ್ಕನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವವೂ ಇವರಿಗೆ ಸಂದಿದೆ.
ಪೂಜ್ಯ ಹಿರಿಯ ಸಾಧಕರಾದ ವಿಜಯರಾಘವನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
Happy birthday Vijayaraghavan Ramakumar Sir 🌷🙏🌷
ಕಾಮೆಂಟ್‌ಗಳು