ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಹೊನ್ನಯ್ಯ ಶೆಟ್ಟರು


 ಕೆ. ಹೊನ್ನಯ್ಯ ಶೆಟ್ಟರು


ಕಟಪಾಡಿ ಹೊನ್ನಯ್ಯ ಶೆಟ್ಟಿ ಅವರು ಕಳೆದ ಶತಮಾನದ ಶ್ರೇಷ್ಠ ಪತ್ರಿಕೋದ್ಯಮಿಯಾಗಿ, ಶಿಕ್ಷಕರಾಗಿ, ಗಾಂಧೀ ವಾದಿಯಾಗಿ, ಅನೇಕ ಪ್ರತಿಭೆಗಳನ್ನು ಬೆಳೆಸಿದ ಪ್ರಕಾಶಕರಾಗಿ, ಪುಸ್ತಕ ವ್ಯಾಪಾರಿಯಾಗಿ, ಹಲವು ನಿಟ್ಟಿನಲ್ಲಿ ಸಮಾಜಮುಖಿಯಾಗಿ  ಸ್ಮರಣೀಯರೆನಿಸಿದ್ದಾರೆ.

ಹೊನ್ನಯ್ಯ ಶೆಟ್ಟರು 1905ರ ಮೇ 18ರಂದು ಉಡುಪಿ ತಾಲ್ಲೂಕಿನ ಕೆಮ್ತೂರು ಗ್ರಾಮದಲ್ಲಿ ಜನಿಸಿದರು.

ಹೊನ್ನಯ್ಯ ಶೆಟ್ಟರು ತಮ್ಮ ಬದುಕನ್ನು ಆರಂಭಿಸಿದ್ದು ಓರ್ವ ಶಿಕ್ಷಕರಾಗಿ.  ತಾವು ಕಲಿಸುತ್ತಿದ್ದ ಉಡುಪಿಯ ಅನಂತೇಶ್ವರ ಶಾಲೆಯನ್ನು ಜಿಲ್ಲೆಯಲ್ಲೇ ಮಾದರಿ ಶಾಲೆಯನ್ನು ರೂಪಿಸಿದರು.  ಅದೇ ಸಂದರ್ಭದಲ್ಲಿ (1929ರಲ್ಲಿ) ಶಾಲಾ ಮಕ್ಕಳಿಗಾಗಿ ಅವರು ಬರೆದ 'ಮುಗುಳು' ಶಿಶುಕಾವ್ಯ ಅಂದಿನ ದಿನಗಳಲ್ಲಿ ಮಕ್ಕಳ ಸಾಹಿತ್ಯದ ಒಂದು ಮೈಲಿಗಲ್ಲೆನಿಸಿತು.  ಈ ಕವಿತಾ ಸಂಕಲನ ಕನ್ನಡ ನಾಡಿನಲ್ಲೆಲ್ಲ ಸಂಚಲನವನ್ನು ಮೂಡಿಸಿ ಕಿರಿಯರನ್ನು ಮಾತ್ರವಲ್ಲದೆ ಹಿರಿಯರ ಮನಸ್ಸನ್ನೂ ಸೆರೆ ಹಿಡಿಯಿತು. ಆಗಿನ ಸರಕಾರ ಶಾಲೆಗಳಲ್ಲಿ ಈ ಕೃತಿಯನ್ನು ಪಠ್ಯವಾಗಿ ಶಿಫಾರಸು ಮಾಡಿದ್ದರಿಂದ, ಅಂದಿನ ಯುಗದಲ್ಲೇ ಅನೇಕ ಮರುಮುದ್ರಣಗಳನ್ನು ಕಂಡಿತು.  ಅದರಲ್ಲಿನ 'ಹಸಿದವರಿಗೆ ಇಲ್ಲ’ ಎಂಬ ಕವಿತೆ ಇಂತಿದೆ: 

ವರುಷ ಒಂದು ಸಂದಿತು
ಹೊಸತು ಹಬ್ಬ ಬಂದಿತು
ತಿನಲು ಉಣಲು ಸಿಕ್ಕಿತು
ಕುಣಿಯಲೆಮಗೆ ಆಯಿತು.

ಕುರುಡಿ ಸುಬ್ಬಿ ಬಂದಳು
ಬೇಡಿ ಕಾಡಿ ನಿಂದಳು
ಅಮ್ಮ- ‘ಹೋಗು’ಎಂದಳು;
‘ಏನು ಇಲ್ಲ’- ಅಂದಳು.

ಕುರುಡಿ ಸುಬ್ಬಿ ನಡೆಯುತ
ಹೋದಳಾಗ ಮರುಗುತ
ನೆರೆಯ ಪುಟ್ಟ ನೋಡುತ
ಮನೆಗೆ ಬಂದನಾಡುತ.

ಅಮ್ಮ ಕರೆದಳವನನು
ಕೊಟ್ಟಳವಗೆ ತಿನಿಸನು
ಹಸಿದ ಜನಕೆ ಇಲ್ಲವೆ?
ಅವರಿಗೇನು ಸಲ್ಲವೇ?

ಹಸಿದ ಜನಕೆ ಉಣಿಸುವ!
ಅವರ ಹೊಟ್ಟೆ ತಣಿಸುವ!
ಹಸಿದ ಜನಕೆ ತಿನಿಸುವ!
ಅವರನೇಕೆ ದಣಿಸುವ!

ಮುಂದೆ ಶೆಟ್ಟರು ಸಾಹಿತ್ಯ ಮತ್ತು ಪತ್ರಿಕಾ ರಂಗಕ್ಕೆ ಬಂದರು. ಸಾಹಿತ್ಯ ಸಂಘಟಕರಾಗಿ ಅವರು ಹಲವು ಪ್ರತಿಭೆಗಳನ್ನು ಬೆಳಗಿಸಿ  'ಕಿರಿಯರ ಪ್ರಪಂಚ' ಎಂಬ ಪ್ರಾತಿನಿಧಿಕ ಕಾವ್ಯ ಸಂಪುಟವನ್ನೂ, 'ಮಧುವನ' ಎಂಬ ಪ್ರಾತಿನಿಧಿಕ ಕಥಾಸಂಕಲನವನ್ನೂ ಮೂಡಿಸಿದರು.  ಇದು ಕನ್ನಡ ಸಾಹಿತ್ಯಲೋಕದ ವಿಶಿಷ್ಟ ಪ್ರಥಮಗಳಲ್ಲೊಂದು. 
 
ಹೊನ್ನಯ್ಯ ಶೆಟ್ಟರು ಏಕಕಾಲಕ್ಕೆ ಮೂರು ಪತ್ರಿಕೆಗಳನ್ನು ಹೊರತರುತ್ತಿದ್ದ ದಿಟ್ಟ ಸಾಹಸಿ.  ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪಿ. ಬಿ. ಶೆಟ್ಟರಿಂದ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ 'ನವಯುಗ' ವಾರಪತ್ರಿಕೆ ಕಾರಣಾಂತರಗಳಿಂದ ಉಡುಪಿಗೆ ಸ್ಥಳಾಂತರಗೊಂಡಾಗ ಅದನ್ನು ನಡೆಸುವ ಹೊಣೆ ಹೊತ್ತವರು ಹೊನ್ನಯ್ಯ ಶೆಟ್ಟರು. 

ಹೊನ್ನಯ್ಯ ಶೆಟ್ಟರು ಪತ್ರಕರ್ತ ಎನ್. ಎಸ್. ಫಣಿಯಾಡಿ ಅವರು ನಿಧನರಾದಾಗ ಅನಾಥವಾದ 'ಅಂತರಂಗ' ವಾರಪತ್ರಿಕೆಗೆ ಪುನಶ್ಚೇತನ ಕೊಟ್ಟರು. ಇದರಲ್ಲಿ ಸದಭಿರುಚಿಯ ಲೇಖನಗಳನ್ನು ಪ್ರಕಟಿಸಿ
ಜನರಲ್ಲಿ ಸಾಹಿತ್ಯಿಕ ಒಲವು ಚಿಗುರುವಂತೆ ಮಾಡಿದರು.

ಈ ನಡುವೆ ಹೊನ್ನಯ್ಯ ಶೆಟ್ಟರು 'ಬಾಲಚಂದ್ರ' ಎಂಬ ಶೈಕ್ಷಣಿಕ ಪತ್ರಿಕೆಯನ್ನು ಸ್ಥಾಪಿಸಿದರು.  

'ನವಯುಗ' ಪತ್ರಿಕೆ ಶಿವರಾಮ ಕಾರಂತರು, ಕು. ಶಿ. ಹರಿದಾಸ ಭಟ್ಟರು, ಕಯ್ಯಾರ ಕಿಞ್ಞಣ್ಣ ರೈ ಅಂತ ಮಹಾನ್ ಸಾಹಿತಿಗಳ ಬರಹವನ್ನೂ ಬೆಳಗಿಸಿತ್ತು.  ಕನ್ನಡದ ಮುಂದಿನ ಯುಗದ ಅನೇಕ ಪ್ರತಿಭೆಗಳನ್ನೂ ಬೆಳಗಿಸಿತು.  

ಹೊನ್ನಯ್ಯ ಶೆಟ್ಟರು ಕನ್ನಡದ ಜೊತೆಗೆ ತುಳು ಭಾಷೆಗೂ ಮಹತ್ವ ನೀಡಿದರು.  ಕನ್ನಡದಲ್ಲಿ ವಾರಕ್ಕೊಂದು ಮತ್ತು ತುಳುವಿನಲ್ಲಿ ತಿಂಗಳಿಗೊಂದರಂತೆ ಮೌಲಿಕ ಕೃತಿಗಳನ್ನು ಹೊರತಂದು ಅನೇಕ ಲೇಖಕರಿಗೆ ಉತ್ತೇಜನ ನೀಡಿದರು.  ಏಕಕಾಲಕ್ಕೆ ಮೂರು ವಾರಪತ್ರಿಕೆಗಳ ಜೊತೆ ಜೊತೆಗೆ ಕನ್ನಡ ಮತ್ತು ತುಳು ಸೇರಿ ತಿಂಗಳಿಗೆ ನಾಲ್ಕು ಕೃತಿಗಳನ್ನೂ ತರುವ ಅವರ ಕಾಯಕ ಆರ್ಥಿಕ ಕಷ್ಟ ನಷ್ಟಗಳ ನಡುವೆಯೂ ನಡೆಯಿತು.

ಆರ್ಥಿಕ ಹೊರೆ ಮತ್ತು ಅವಿರತ ಪರಿಶ್ರಮದಿಂದ ತಮ್ಮ ಆರೋಗ್ಯಕ್ಕೆ ತೊಂದರೆ ಆದಾಗ, ಹೊನ್ನಯ್ಯ ಶೆಟ್ಟರಿಗೆ 'ಬಾಲಚಂದ್ರ' ಮತ್ತು ಅಂತರಂಗ ಪತ್ರಿಕೆಗಳನ್ನು ನಿಲ್ಲಿಸುವುದು ಅನಿವಾರ್ಯವಾಯಿತು.  ಆದಾಗ್ಯೂ 'ನವಯುಗ' ಪತ್ರಿಕೆ ಮುಂದುವರೆದು 1972ರಲ್ಲಿ ಸುವರ್ಣ ಮಹೋತ್ಸವ ಸಂಭ್ರಮ ಕಂಡಿತು. 

ಮಹಾತ್ಮ ಗಾಂಧೀಜಿ ಅವರ ತತ್ತ್ವದ ಅನುಯಾಯಿಗಳಾಗಿದ್ದು ಅಪ್ಪಟ ಖಾದಿಧಾರಿಗಳಾಗಿದ್ದ  ಹೊನ್ನಯ್ಯ ಶೆಟ್ಟರು ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ  ಸಕ್ರಿಯರಾಗಿ ದುಡಿದರು. 

1974ರ ಜೂನ್ 1ರಂದು ಹೊನ್ನಯ್ಯ ಶೆಟ್ಟರು ನಿಧನರಾದರು.  'ನವಯುಗ' ಎಂಬ ಅವರ ಪತ್ರಿಕಾ ಯುಗವೂ ಸ್ಥಗಿತಗೊಂಡದ್ದು, ಕೆಲವೊಂದು ವಿಶಿಷ್ಟ ಯುಗಗಳು ಒಬ್ಬೊಬ್ಬ ಮಹನೀಯರಿಂದಲೇ ಉದಿಸಿ ಅವರಿಂದಲೇ ಕೊನೆಗಳ್ಳುತ್ತವೆ ಎಂಬ ಇತಿಹಾಸದ ಆವರ್ತನೆಗೆ ತಾದ್ಯಾತ್ಮ ಭಾವ ಮೂಡಿಸುವಂತ ಘಟನೆಯಾಗಿ ಇತಿಹಾಸದ ಭಾಗವಾಯ್ತು. 

ತಮ್ಮ ತಂದೆಯವರ ಸಿದ್ದಾಂತಗಳನ್ನು ಪಾಲಿಸಿಕೊಂಡು ಬಂದಿರುವ ಹೊನ್ನಯ್ಯ ಶೆಟ್ಟರ ಸುಪುತ್ರರಾದ ಪ್ರಶಾಂತ ಶೆಟ್ಟಿ ಅವರು ತಮ್ಮ ತಂದೆಯವರು ಉಡುಪಿಯಲ್ಲಿ ಸ್ಥಾಪಿಸಿದ ನವಭಾರತ ಪುಸ್ತಕ ಭಂಡಾರದ ಮೂಲಕ ಸಾಹಿತ್ಯ ಸೇವೆ ನೀಡುತ್ತಿದ್ದಾರೆ.  ಹೊನ್ನಯ್ಯ ಶೆಟ್ಟರ ಸುಪುತ್ರಿ ಉಷಾ ಪಿ. ರೈ Usha Rai ಅವರು ಬರೆಹಗಾರ್ತಿಯಾಗಿ, ಕಲಾವಿದೆಯಾಗಿ, ಸಾಹಿತ್ಯ ಸಂಘಟಕರಾಗಿ ಅಮೂಲ್ಯ ಸೇವೆ ನೀಡುತ್ತ ಬಂದಿದ್ದಾರೆ. 

On the birth anniversary of Great journalist, publisher, teacher, writer and Gandhian K. Honnaiah Shetty 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ