ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗೇಶ ರಾವ್


ಹೆಚ್. ಆರ್. ನಾಗೇಶರಾವ್ 

ಹೆಚ್.ಆರ್.ನಾಗೇಶರಾವ್ ಅವರು ಕನ್ನಡ ನಾಡು ಕಂಡ ಮಹಾನ್ ಪತ್ರಿಕಾ ಸಂಪಾದಕರು.  ಕನ್ನಡ ಪತ್ರಿಕೋದ್ಯಮದ ಅನೇಕ ಶ್ರೇಷ್ಠರು ಕಲಿತದ್ದು ಅವರ ಗರಡಿಯಲ್ಲಿ.

ನಾಗೇಶರಾವ್ 1927ರ ಅಕ್ಟೋಬರ್ 20ರಂದು ಜನಿಸಿದರು.  ಅವರದು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಹಾಲ್ದೊಡ್ಡೇರಿ ಗ್ರಾಮ.  ತಂದೆ ಕೃಷಿಕರಾಗಿದ್ದ ರಂಗಣ್ಣ.  ತಾಯಿ ಕಿಟ್ಟಮ್ಮ (ಕೃಷ್ಣವೇಣಿ). ಇವರು ಈ ದಂಪತಿಯ ಎರಡನೆಯ ಮಗ. ಇವರ ತಾಯಿ ಮಕ್ಕಳಿಗೆ ಓದಲು ಅನುಕೂಲವಾಗಲೆಂದು ಹಳ್ಳಿ ಬಿಟ್ಟು ತುಮಕೂರಿನಲ್ಲಿ ಸಣ್ಣ ಮನೆಯೊಂದನ್ನು ಬಾಡಿಗೆಗೆ ಹಿಡಿದು ಮಕ್ಕಳನ್ನು ಓದಿಸಲು ನಿರ್ಧರಿಸಿದರು. ಅಪ್ಪ ರಂಗಣ್ಣ ಹಳ್ಳಿಯಲ್ಲೇ ಉಳಿದು ತೋಟ-ಗದ್ದೆ ನೋಡಿಕೊಳ್ಳುತ್ತಿದ್ದರು.  

ನಾಗೇಶರಾವ್ ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕಿಳಿದರು. 1940 ರ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ತುಮಕೂರಿನ ಸನ್ಮಿತ್ರ 

ವಿದ್ಯಾರ್ಥಿ ವೃಂದದಲ್ಲಿ ನಾಗೇಶರಾವ್ ಅವರದು ಪ್ರಧಾನ ಪಾತ್ರ. ಇಂಟರ್‌ಮೀಡಿಯಟ್ ಕಲಿಯುತ್ತಿದ್ದಾಗಲೇ ಕೈಬರಹದ ಪತ್ರಿಕೆಗಳನ್ನು ಹೊರಡಿಸುತ್ತಿದ್ದರು. ಹೋರಾಟದ ರೋಮಾಂಚಕ ವರದಿಗಳನ್ನು ಸಂಕಲಿಸಿ, ನಕಲು ಮಾಡಿ, ಹಸ್ತಪ್ರತಿಗಳನ್ನು ಸುತ್ತ ಮುತ್ತ ಹಂಚುವ ಹವ್ಯಾಸ ಅವರಿಗಿತ್ತು.  ನಾಗೇಶರಾವ್ ವಿದ್ಯಾರ್ಥಿ ಸಂಘದ ಗ್ರಂಥಪಾಲಕರೂ ಆಗಿದ್ದರು.  1942ರ  ಆಗಸ್ಟ್‌ನಲ್ಲಿ ದೇಶದ ಎಲ್ಲ ವಿದ್ಯಾರ್ಥಿಗಳಂತೆ ತುಮಕೂರಿನ ವಿದ್ಯಾರ್ಥಿಗಳೂ ಚಳವಳಿ-ಬಹಿಷ್ಕಾರ-ಮುಷ್ಕರಗಳಲ್ಲಿ ಭಾಗಿಯಾಗಿದ್ದರು.  1944ರಲ್ಲಿ ಪತ್ರಕರ್ತರ ಸಮಾವೇಶ  ತುಮಕೂರಿನಲ್ಲಿ ನಡೆದಾಗ ಹೆಚ್.ಆರ್.ನಾಗೇಶರಾವ್ ವಿದ್ಯಾರ್ಥಿ ಸ್ವಯಂಸೇವಕರಾಗಿದ್ದರು. 1945ರಲ್ಲಿ ಇಂಟರ್‌ಮೀಡಿಯಟ್ ಕಾಲೇಜು ವಿದ್ಯಾರ್ಥಿ ಸಂಘದ ವಾರ್ಷಿಕ ಸಾಹಿತ್ಯ ಸ್ಫರ್ಧೆಯಲ್ಲಿ ನಾಗೇಶರಾವ್ ಅವರ ಪ್ರಬಂಧಕ್ಕೆ ಮೊದಲ ಬಹುಮಾನ ಸಂದಿತ್ತು. 

ತಾಯಿನಾಡು ಪಿ. ಆರ್. ರಾಮಯ್ಯ, ಫೆಡರಲ್ ಇಂಡಿಯಾ ಅಂಡ್ ಇಂಡಿಯನ್ ಸ್ಟೇಟ್ಸ್ ಪತ್ರಿಕೆಯ ಸಂಪಾದಕ ಹೆಚ್.ಶ್ರೀಕಂಠಯ್ಯ, 'ನಗುವನಂದ' ಹಾಸ್ಯ ಪತ್ರಿಕೆಯ ಸಂಪಾದಕ ಕೆ.ಜೀವಣ್ಣರಾವ್ ಮತ್ತು ದೇಶಬಂಧು ದೈನಿಕದ ಸಂಪಾದಕ ಎನ್.ಎಸ್.ವೆಂಕೋಬರಾವ್ ಮುಂತಾದವರಿಂದ ಪ್ರಭಾವಿತರಾದ ನಾಗೇಶರಾವ್ ತಾವೂ ಪತ್ರಿಕೋದ್ಯಮಕ್ಕೆ ಇಳಿಯಲು ನಿರ್ಧರಿಸಿದರು.  ನಾಗೇಶರಾವ್ ಅವರ ಚೊಚ್ಚಲ ಲೇಖನಗಳು ವಿದ್ಯಾರ್ಥಿ ವಿಚಾರ ವಿಲಾಸ ಪುಸ್ತಕದಲ್ಲಿ ಪ್ರಕಟವಾದವು. 

ವಿಜ್ಞಾನ ವಿಷಯದಲ್ಲಿ ಇಂಟರ್‌ಮೀಡಿಯಟ್ ಪರೀಕ್ಷೆ ಮುಗಿಸಿದ ನಾಗೇಶರಾವ್ 1945ರಲ್ಲಿ ಬಿ.ಎಸ್‍ಸಿ ಓದಲು ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಬಂದರು. ಆ ವರ್ಷದ ಅಡ್ಮಿಶನ್ ಮುಗಿದಿದ್ದರಿಂದ ಮುಂದಿನ ಅಕ್ಯಾಡೆಮಿಕ್ ವರ್ಷದ ತನಕ ಸುಮ್ಮನೆ ಇರುವ ಬದಲು ವೈಟ್‌ಫೀಲ್ಡ್ನಲ್ಲಿದ್ದ ಮಿಲಿಟರಿ ಆರ್ಡ್‌ನೆನ್ಸ್ ಡಿಪೋದಲ್ಲಿ ಲೆಕ್ಕಪತ್ರ ನೋಡಿಕೊಳ್ಳುವ ತಿಂಗಳಿಗೆ 70 ರುಪಾಯಿ ಸಂಬಳದ ಕೆಲಸಕ್ಕೆ ಸೇರಿದರು. ಇದನ್ನು ತಿಳಿದು, ಇವರಿಗೆ ತುಮಕೂರಿನ ಪ್ರೌಢಶಾಲೆಯ ಉಪಾಧ್ಯಾಯರಾಗಿದ್ದ ಏ.ಟಿ.ಶಾಮಾಚಾರ್ ಒಂದು ದಿನ ಬೆಂಗಳೂರಿನಲ್ಲಿ ನಾಗೇಶರಾವ್ ಅವರನ್ನು ಭೇಟಿ ಮಾಡಿದರು. ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದ್ದ ಯುವಕ ಗುಮಾಸ್ತಗಿರಿಯಲ್ಲಿ ಕಳೆದುಹೋಗಬಹುದೆಂಬ ಆತಂಕ ಅವರಿಗಿತ್ತು. ಹೀಗಾಗಿ ತಮಗೆ ಪರಿಚಯವಿದ್ದ ತಾಯಿನಾಡು ಪತ್ರಿಕೆಯ ಸಂಪಾದಕರಾಗಿದ್ದ ಪಿ.ಬಿ.ಶ್ರೀನಿವಾಸನ್ ಅವರಿಗೆ ಪತ್ರವೊಂದನ್ನು ಬರೆದು ನಾಗೇಶರಾವ್ ಅವರ ಕೈಗಿತ್ತರು. ಹೀಗೆ ನಾಗೇಶರಾವ್  ಆರ್ಡ್‌ನೆನ್ಸ್ ಡಿಪೋ ಕೆಲಸಕ್ಕೆ ರಾಜೀನಾಮೆ ನೀಡಿ 'ತಾಯಿನಾಡು' ಸೇರಿದರು. 

'ತಾಯಿನಾಡು' ಪತ್ರಿಕೆಯ ಕಚೇರಿಯನ್ನು ಪ್ರವೇಶಿಸಿದ ನಾಗೇಶರಾವ್ 1946ರ ಜನವರಿ 4ರಂದು ಸಂಪಾದಕರನ್ನು ಭೇಟಿಯಾಗಿ ಉಪಸಂಪಾದಕರಾಗಿ ನೇಮಕಗೊಂಡರು. ಹಿಂದೆ ಸಂಪಾದಿಸುತ್ತಿದ್ದಕ್ಕಿಂತ ಅರ್ಧ 35 ರೂಪಾಯಿ ಇವರ ಸಂಬಳ. ಆಗಲೇ ಹಿರಿಯ ಉಪಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಕೆ. ಅನಂತಸುಬ್ಬರಾವ್ ಅವರ  ಮಾರ್ಗದರ್ಶನದಲ್ಲಿ ನಾಗೇಶರಾವ್ ಅತಿ ಶೀಘ್ರದಲ್ಲೇ ಸಂಪಾದಕರ ಮೆಚ್ಚುಗೆ ಗಳಿಸಿದರು. ಸಂಪಾದಕೀಯ ಪುಟದ ಉಸ್ತುವಾರಿಯ ಜತೆಗೆ ನಿತ್ಯವೂ ಸಂಪಾದಕೀಯ ಹಾಗೂ ಟೀಕಾಂಕಣ 'ನಾರದ ಉವಾಚ' ಬರೆಯುವ ಹೊಣೆಗಾರಿಕೆ ನಾಗೇಶರಾವ್ ಅವರದಾಯಿತು. ಕಾಲಕ್ರಮೇಣ ಸಂಪಾದಕರ ನಂತರದ ಸ್ಥಾನದಲ್ಲಿ ಇಡೀ ಪತ್ರಿಕೆಯನ್ನು ರೂಪಿಸುವ ಜವಾಬ್ದಾರಿ ನಾಗೇಶರಾವ್ ಹೊತ್ತುಕೊಂಡರು. ನಾರದ ಉವಾಚ ಅಂದಿನ ಮೈಸೂರು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರನ್ನೂ ಸೆಳೆದಿತ್ತು. ಒಮ್ಮೆ ನಾರದ ಉವಾಚದ ಬರಹಗಾರರು ಯಾರೆಂದು ತಿಳಿಯಲು ತಾಯಿನಾಡು ಕಚೇರಿಗೆ ಆಗಮಿಸಿ ನಾಗೇಶರಾವ್ ಅವರ ಆಗಮನಕ್ಕೆ ಕಾದು ಕುಳಿತಿದ್ದ ಪ್ರಸಂಗವೂ ನಡೆಯಿತು. ತಾಯಿನಾಡು ಪತ್ರಿಕೆಯಲ್ಲಿ ಅಂದು ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತರಲ್ಲಿ ಹೆಸರುವಾಸಿಯಾದವರು ಎಸ್.ಆರ್.ಕೃಷ್ಣಮೂರ್ತಿ, ಕೆ.ಸತ್ಯನಾರಾಯಣ, ನಾಗಮಣಿ ಎಸ್.ರಾವ್, ಡಚ್ಚ ಎಂದೇ ಹೆಸರಾಗಿದ್ದ ಡಿ.ಎಚ್.ಶ್ರೀನಿವಾಸ, ಕುಲಮರ್ವ ಬಾಲಕೃಷ್ಣ ಮುಂತಾದವರು.

ತಾಯಿನಾಡು ಪತ್ರಿಕೆಯನ್ನು ಪಿ. ಆರ್. ರಾಮಯ್ಯನವರು ಮಾರಾಟ ಮಾಡಿದಾಗ ಆ ಪತ್ರಿಕೆಯ ಆಡಳಿತ ಮತ್ತು ಸಂಪಾದಕ ಮಂಡಳಿ ಧೋರಣೆಗಳನ್ನು ಇಷ್ಟಪಡದ ನಾಗೇಶರಾವ್ 1958ರಲ್ಲಿ ಆ ಪತ್ರಿಕೆಯಿಂದ ಹೊರಬಂದು ಸಂಯುಕ್ತ ಕರ್ನಾಟಕ ಸೇರಿದರು. ದೆಹಲಿಯಲ್ಲಿ ಪ್ರೆಸ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯದಲ್ಲಿ ಮುದ್ರಣ ಮಾಧ್ಯಮದ ಬಗ್ಗೆ ಪ್ರೌಢ ತರಬೇತಿ ಪಡೆದ ನಂತರ ನಾಗೇಶರಾವ್ ಅವರು ಪತ್ರಿಕೆಯ ಮುಖ್ಯ ಉಪಸಂಪಾದಕರಾದರು. ಅವರು ಆಗ ಪತ್ರಿಕೆಗೆ ಬರೆಯುತ್ತಿದ್ದ ಚಿಟಿಕೆ ಚಪ್ಪರ ನಿತ್ಯ ಟೀಕಾಂಕಣ ಬಹು ಜನಪ್ರಿಯವಾಗಿತ್ತು. ಕೆಲದಿನಗಳಲ್ಲಿ ಉಸ್ತುವಾರಿ ಸುದ್ದಿ ಸಂಪಾದಕರಾಗಿ ಪತ್ರಿಕೆಯ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ನಂತರ ಸುದ್ದಿ ಸಂಪಾದಕ ಹುದ್ದೆ ಅವರದಾಯಿತು. ಸಂಪಾದಕೀಯ ಬರಹಗಳ ಜತೆಗೆ ಯುವ ಪತ್ರಕರ್ತರ ತಂಡವನ್ನು ಕಟ್ಟುವ ಹೊಣೆಗಾರಿಕೆ ನಾಗೇಶರಾವ್ ಅವರದಾಗಿತ್ತು. ಹಿಂದಿನ ಅಚ್ಚು-ಮೊಳೆ ಜೋಡಣೆಯ ಪುಟ ಕಟ್ಟುವ ದಿನಗಳಲ್ಲಿ ಅತಿ ಕಡಿಮೆ ಸಮಯದಲ್ಲಿ ಪುಟ ವಿನ್ಯಾಸ ಮಾಡುವವರೆಂಬ ಹೆಗ್ಗಳಿಕೆ ಅವರದಾಗಿತ್ತು. ಮುಂಗಡ ಪತ್ರ ಮಂಡಣೆಯಾದ ಮರುದಿನದ ಪುಟ ವಿನ್ಯಾಸ ಅವರದೇ ಆಗಿರುತ್ತಿತ್ತು. ಸಾಹಿತ್ಯ, ಕ್ರೀಡೆ, ಸಿನಿಮಾ, ರಾಜಕೀಯ ವಿಷಯಗಳಲ್ಲಿ ಸಮಾನ ಆಸಕ್ತಿ ಹೊಂದಿದ್ದ ಅವರು ಸಂದರ್ಭಕ್ಕನುಸಾರವಾಗಿ ವಿಶೇಷ ಲೇಖನಗಳನ್ನು ಸಿದ್ಧಪಡಿಸುತ್ತಿದ್ದರು. ಕಾಲೇಜು ದಿನಗಳಿಂದಲೂ ವಿಜ್ಞಾನ ವಿದ್ಯಾರ್ಥಿ ಹಾಗೂ ವಿಜ್ಞಾನ ಬರಹಗಾರರಾಗಿದ್ದ ನಾಗೇಶರಾವ್ ಸ್ವತಃ ವಿಜ್ಞಾನ ಲೇಖನಗಳನ್ನು ಬರೆಯುವದರ ಜತೆಗೆ ವಿಜ್ಞಾನಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ವಿಶೇಷ ಪ್ರಾಶಸ್ತ್ಯ ನೀಡುತ್ತಿದ್ದರು, ಹಾಗೆಯೇ ವಿಜ್ಞಾನ ಲೇಖಕರನ್ನು ಪ್ರೋತ್ಸಾಹಿಸುತ್ತಿದ್ದರು. ಇಂಥದೊಂದು ಪ್ರೇರಣೆಯಿಂದಲೇ ಅವರ ಮಗ ಹಾಲ್ದೊಡ್ಡೇರಿ ಸುಧೀಂದ್ರ ವಿಜ್ಞಾನ ಬರಹದಲ್ಲಿ ತೊಡಗುವಂತಾಯಿತು.  ಸಂಯುಕ್ತ ಕರ್ನಾಟಕ ಹಸ್ತಾಂತರವಾಗಿ ಕೆಲಕಾಲ ಮುಚ್ಚಿದಾಗಲೂ ಹೋರಾಟ ನಡೆಸಿ ಪತ್ರಿಕೆ ಉಳಿಸಿದರು. 31 ಅಕ್ಟೋಬರ್ 1985 ರಂದು ಸೇವಾನಿವೃತ್ತರಾದರು.

ನಾಗೇಶರಾವ್ 'ಎನ್‌ಎ' ಕಾವ್ಯನಾಮದಲ್ಲಿ ವಿನೋದ ಹಾಸ್ಯ ಮಾಸಪತ್ರಿಕೆಗೆ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ನಗೆಲೇಖನ/ಅಣಕವಾಡುಗಳ ರಚನೆ ಮಾಡಿದ್ದರು. ಆನಂದ ಜ್ಯೋತಿ ಮಾಸಪತ್ರಿಕೆಯಲ್ಲಿ ರಾಜಕೀಯ ಮುಖಂಡರುಗಳ ಕಾಲ್ಪನಿಕ ಭೇಟಿಗಳು, ಚಿತ್ರಗುಪ್ತ ಸಾಪ್ತಾಹಿಕ, ರಾಮರಾಜ್ಯ ಪಾಕ್ಷಿಕ, ವಿಶ್ವಬಂಧು ಸಾಪ್ತಾಹಿಕ, ವಿಜಯಮಾಲಾ ಮಾಸಿಕ ಹಾಗೂ ಕತೆಗಾರ ಮಾಸಿಕಗಳಲ್ಲಿ ಇದೇ ಕಾವ್ಯನಾಮದ ಮೂಲಕ ಲಘು ಹಾಗೂ ವೈಜಾರಿಕ ಬರಹಗಳು ಮತ್ತು ವಾರ್ತಾವಲೋಕನಗಳನ್ನು ಮಾಡಿದ್ದರು.

ನಾಗೇಶರಾವ್ ಅವರು ನಗೆನಾಣ್ಯ (ನಗೆ ಹನಿಗಳ ಸಂಗ್ರಹ),   ಅದೃಷ್ಟ ಚಕ್ರ (ಅದೃಷ್ಟ ಪುಸ್ತಕ); ಪತ್ತೇದಾರಿ ಕಾದಂಬರಿಗಳಾದ ಸೂತ್ರಧಾರಿ, ರಕ್ತದ ಮಡುವಿನಲ್ಲಿ, ಭಯಪಿಶಾಚಿ, ಹಿತಶತ್ರು; ನಗೆ ಬಾಂಬು (ಹಾಸ್ಯ ಲೇಖನಗಳ ಸಂಗ್ರಹ), ನಾರೀಲೋಕದಲ್ಲಿ ನಾರದರು, ಕಂಕಣದ ಸಂಕಲ್ಪ (ಸಾಮಾಜಿಕ ನಾಟಕ)  ಮುಂತಾದ ಕೃತಿ ಪ್ರಕಟಿಸಿದ್ದರು. 

ನಾಗೇಶರಾವ್ ಅವರಿಗೆ 1999ರ ಕರ್ನಾಟಕ ಪತ್ರಿಕಾ ಅಕ್ಯಾಡೆಮಿ ಪುರಸ್ಕಾರವನ್ನು ಸಲ್ಲಿಸಲಾಯಿತು.  

ನಾಗೇಶ ರಾವ್ ಅವರು 2003 ವರ್ಷ ಆಗಸ್ಟ್ 3ರಂದು ನಿಧನರಾದರು. ಅವರಿಂದ ಪತ್ರಿಕಾಲೋಕದಲ್ಲಿ ಅರಳಿದ ಪ್ರತಿಭಾ ಸಂಪನ್ನರು ಅನೇಕ.  ಈ ಮಹಾನ್ ಚೇತನಕ್ಕೆ ನಮನ🌷🙏🌷

On the birth anniversary of Great name in Kannada Journalism H. R. Nagesh Rao 🌷🙏🌷 





ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ