ಶುಭಾ ಗಿರಣಿಮನೆ
ಶುಭಾ ಗಿರಣಿಮನೆ
ಶುಭಾ ಗಿರಣಿಮನೆ ಪ್ರತಿಭಾನ್ವಿತ ಬರಹಗಾರ್ತಿ.
ಜನವರಿ 15, ಶುಭಾ ಅವರ ಜನ್ಮದಿನ.
ಮೂಲತಃ ಇವರು ಕೈಗಾ ಕೊಡಸಳ್ಳಿ ಮುಳುಗಡೆ ಪ್ರದೇಶದವರು. ಇವರ ಊರು ಕಳಚೆ ಎನ್ನುವ ಗುಡ್ಡಗಾಡು ಪ್ರದೇಶವಾಗಿತ್ತು. ನಂತರ ಸುಮಾರು ಊರುಗಳಿಗೆ ಸ್ಥಳಾಂತರಗೊಂಡರು. ತಂದೆ ನರಸಿಂಹ ತಾಯಿ ಯಮುನಾ. ಪ್ರಸಕ್ತ ಇವರು ತಮ್ಮ ಕುಟುಂಬದೊಂದಿಗೆ ಸಿರ್ಸಿಯಲ್ಲಿ ವಾಸವಾಗಿದ್ದಾರೆ.
ಕೃಷಿ ಕುಟುಂಬದವರಾದ ಶುಭಾ ಅವರು ಹಠ ಹೊತ್ತು ತಾವೇ ಏನಾದರು ಮಾಡಬೇಕು ಎಂದು ಸಾಹಿತ್ಯ ಕೃಷಿ ಆರಂಭಿಸಿದರು. 2009 ರಲ್ಲಿ ಮೊದಲು ಬರೆಯಲೇಬೇಕು ಎಂದು ಬರೆಯಲಾರಂಭಿಸಿ 2010ರಲ್ಲಿ ಮೊದಲ ಪುಸ್ತಕ ಪ್ರಕಟ ಮಾಡಿದರು. ಓದುತ್ತ ಕಲಿತರು, ಕಲಿಯುತ್ತಾ ಓದಿದರು. ಇದುವರೆಗೂ ಆರು ಪುಸ್ತಕ ಪ್ರಕಟಿಸಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಮೂಡಿವೆ. ಇವರ ಅಂಕಣಗಳೂ ಹೆಸರಾಗಿವೆ. ಇವರು 'ತತ್ವನಿಷ್ಠ' ಪತ್ರಿಕೆಗೆ ಪತ್ರಕರ್ತೆ. 'ಗ್ರಾಮನಿಷ್ಟ' ಕಾರ್ಯಕ್ರಮಕ್ಕೆ ಕೋ ಆರ್ಡಿನೇಟರ್.
ಗರ್ಭದಾಳ, ಮುಸುಕಿನ ಯುದ್ಧ, ಅನುರಾಗ ಅರಳಿದಾಗ ಇವು ಶುಭಾ ಅವರ ಕಾದಂಬರಿಗಳು. ಸ್ತ್ರೀ ಸೂಕ್ತ ಅಂಕಣ ಬರಹಗಳ ಸಂಕಲನ. 'ಮಣ್ಣಿನ ಮಡಿಕೆ' ಪುಟ್ಟ ಕಥೆಗಳ ಸಂಕಲನ. ಹೆಣ್ಣಿನ ಬಗ್ಗೆ ಬರೆದ ಕೃತಿ 'ಅವಳೆಂದರೆ'. ಇನ್ನೂ ಹಲವು ಕೃತಿಗಳನ್ನು ಇವರು ಪ್ರಕಟಿಸಲಿದ್ದಾರೆ.
ಬಹುಮುಖಿ ಆಸಕ್ತಿಗಳುಳ್ಳ ಶುಭಾ ಅವರು ಹವ್ಯಾಸಿ ಲಿಪಿ ಅಧ್ಯಯನಾಸಕ್ತರೂ ಆಗಿದ್ದು ತಿಗಳಾರಿ, ಗ್ರಂಥ, ನಾಗರಿ, ನಂದಿನಾಗರಿ, ಶಾರದಾ, ಕನ್ನಡ ಮೋಡಿ, ಕನ್ನಡದ ಲಿಪಿಗಳಾದ ಶಾತವಾಹನ, ಕದಂಬ, ಚಾಲುಕ್ಯರ ಲಿಪಿ ಮುಂತಾದ ಲಿಪಿಗಳಲ್ಲಿ ಪರಿಣತಿ ಸಾಧಿಸಿದ್ದಾರೆ.
ಪ್ರತಿಭಾನ್ವಿತೆ ಶುಭಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Shubha Giranimane 🌷🌷🌷

ಕಾಮೆಂಟ್ಗಳು