ಮೇದಿನಿ ಕೆಸವಿನಮನೆ
ಮೇದಿನಿ ಕೆಸವಿನಮನೆ
ಶಿಕ್ಷಣ ಕ್ಷೇತ್ರದಲ್ಲಿರುವ ಮೇದಿನಿ ಕೆಸವಿನಮನೆ ಅವರು ಬಹುಮುಖಿ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ಏಪ್ರಿಲ್ 29, ಮೇದಿನಿ ಅವರ ಜನ್ಮದಿನ. ಮೂಲತಃ ಸಾಗರದವರಾದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು ಶಿವಮೊಗ್ಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.
ಮೇದಿನಿ ಅವರ ಕಥೆ, ಕವಿತೆ, ವಿಮರ್ಶೆ, ಚಿಂತನದಂತಹ ಬಹುಮುಖಿ ಬರಹಗಳು ನಾಡಿನ ಪ್ರಸಿದ್ಧ ನಿಯತಕಾಲಿಕಗಳಲ್ಲಿ ನಿರಂತರವಾಗಿ ಕಂಗೊಳಿಸುತ್ತಿವೆ.
ಮೇದಿನಿ ಅವರ 'ಮಿಸ್ಸಿನ ಡೈರಿ' ಕೃತಿ, ಶಿಕ್ಷಕಿಯಾಗಿ ಅವರ ಮಕ್ಕಳೊಂದಿಗಿನ ಶ್ರೀಮಂತ ಅನುಭವವನ್ನು ಒಳಗೊಂಡಿದ್ದು, ವಿದ್ವತ್ ಲೋಕ ಮತ್ತು ಓದುಗಲೋಕದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ. ಪ್ರಖ್ಯಾತ ಕೃಷಿ ವಿಜ್ಞಾನಿ ಮತ್ತು ಬರಹಗಾರರಾದ ಡಾ. ಕೆ. ಎನ್. ಗಣೇಶಯ್ಯ ಅವರು ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ: "ಸಾಹಿತ್ಯ ರಚನೆಗೆ ವಸ್ತುವನ್ನು ಹುಡುಕುತ್ತ ಎಲ್ಲೆಲ್ಲೋ ಸುತ್ತಾಡಬೇಕಿಲ್ಲ; ಹೆಕ್ಕಿ ತೆಗೆಯುವ
ಚಮತ್ಕಾರ ಇದ್ದರೆ ಇದ್ದಲ್ಲೆ ಅದನ್ನು ಕಾಣಬಹುದು ಎನ್ನುವುದಕ್ಕೆ ಮೇದಿನಿಯವರ 'ಮಿಸ್ಸಿನ ಡೈರಿ' ಒಂದು ಅದ್ಭುತ ದೃಷ್ಟಾಂತ. ಮುಗ್ಧ ಮನಸ್ಸಿನ ಚಿಣ್ಣರೊಂದಿಗಿನ ಸಹವಾಸದಲ್ಲಿ ತಾವು ಅನುಭವಿಸಿದ ಅಪರೂಪದ ಘಟನೆಗಳನ್ನು ಹೆಕ್ಕಿತೆಗೆದು, ಅವನ್ನು ಮುತ್ತುಗಳಂತೆ ಪೋಣಿಸಿ ತಯಾರಿಸಿರುವ 'ಮಿಸ್ಸಿನ ಡೈರಿ' ಎಲ್ಲಾ ಮಿಸ್ ಗಳ ಡೈರಿಯೂ ಆಗಿದ್ದರೂ, ಅದು ಮೇದಿನಿಯವರ ಡೈರಿಯಾಗಿ ರಚನೆಗೊಳ್ಳಲು ಕಾರಣ ಅವರ ಚಮತ್ಕಾರ; ಮಕ್ಕಳ ಮನದಾಳಕ್ಕೆ ಪಾತಾಳಗರಡಿ ಹಾಕಿ ನೋಡಬಲ್ಲ ಅವರದು 'ಕ್ಷ-ಕಣ್ಣು' (x-ray eyes). ನನಗಂತೂ ಅವರು ಸಾಮಾನ್ಯ ಘಟನೆಯಲ್ಲೂ ಮಕ್ಕಳ ಮನಸ್ಸನ್ನು ಅವಲೋಕಿಸಬಲ್ಲ ಮನಶ್ಶಾಸ್ತ್ರ ತಜ್ಞೆಯಾಗಿ ಕಂಡರು. ಅವರದ್ದು ವಿಭಿನ್ನವಾದ 'ಮನೋ-ಕಣ್ಣು'. ಅವರದ್ದು ಲಕ್ಷಾಂತರ ಮಿಸ್ ಗಳು ಅನುಕರಿಸಬಹುದಾದ ದಿನಚರಿ. ಹಾಗೆಂದೆ 'ಮಿಸ್ಸಿನ ಡೈರಿ' ಲಕ್ಷಾಂತರ ಮಿಸ್‍ಗಳು ಕೂಡ ಓದಬೇಕಾದ ಕೈಪಿಡಿ. ನಾನು ಪ್ರತಿ ಪುಟವನ್ನೂ ಓದಿದೆ ಎಂದರೆ... ನನಗೇ ಆಶ್ಚರ್ಯ- ಈ ಮಿಸ್ಸಿನ ಡೈರಿ".
ಮೇದಿನಿ ಅವರು ಮಕ್ಕಳಿಗಾಗಿ "ಶ್ರೀ ಶ್ರೀಧರ ಸ್ವಾಮಿ" ಕಥೆಗಳು ಕೃತಿಯನ್ನು ಪ್ರಕಟಿಸಿದ್ದು, ಅದು ಇಂಗ್ಲಿಷಿನಲ್ಲೂ ತರ್ಜುಮೆಗೊಂಡು ಪ್ರಕಟಗೊಂಡಿದೆ.
ಬಹುಮುಖಿ ಪ್ರತಿಭಾನ್ವಿತೆ, ಶಿಕ್ಷಕಿ, ಬರಹಗಾರ್ತಿ ಮೇದಿನಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Medini Ks 🌷🌷🌷
ಕಾಮೆಂಟ್‌ಗಳು