ರಾಮೋಜಿ ರಾವ್
ರಾಮೋಜಿ ರಾವ್
ರಾಮೋಜಿ ರಾವ್ ಮಹಾನ್ ಕನಸುಗಾರ ಮತ್ತು ಉದ್ಯಮಿಯಾಗಿದ್ದವರು. ಉಪ್ಪಿನಕಾಯಿಯಿಂದ ಮೊದಲ್ಗೊಂಡು ರಾಮೋಜಿ ಫಿಲಂ ಸಿಟಿ ನಿರ್ಮಾತೃವಾಗಿ ಅವರು ಬೆಳೆದು - ಬೆಳೆಸಿದ ಎತ್ತರ ಅಸಾಮಾನ್ಯವಾದದ್ದು. ಜಾಹೀರಾತು ಸಂಸ್ಥೆ ಸ್ಥಾಪಕರಾಗಿ, ಪತ್ರಿಕೋದ್ಯಮಿಯಾಗಿ, ಟಿTV ವಾಹಿನಿಗಳ ಒಡೆಯರಾಗಿ, ಚಿತ್ರೋದ್ಯಮಿಯಾಗಿ, ಆರ್ಥಿಕ ವಲಯದ ಮಾರ್ಗದರ್ಶಿ ಸಂಸ್ಥೆಗಳ ಸ್ತಾಪಕರಾಗಿ, ಶಿಕ್ಷಣ ಸಂಸ್ಥೆಗಳ ಸ್ಥಾಪಕರಾಗಿ, ಹೋಟೆಲ್ ಉದ್ದಮಿಯಾಗಿ ಹೀಗೆ ಅವರು ಬಹುಮುಖಿ ಸಾಧಕರು. ಇಂದು ಅವರ ಸಂಸ್ಮರಣೆ ದಿನ.
ರಾಮೋಜಿ ರಾವ್ 1936ರ ನವೆಂಬರ್ 16 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದರು.. 'ಮಾಧ್ಯಮ ವ್ಯಾಪಾರವಲ್ಲ, ಸಮಾಜವನ್ನು ಜಾಗೃತಗೊಳಿಸುವ ವೇದಿಕೆ' ಎಂದು ನಂಬಿದ್ದ ಇವರು 1969ರಲ್ಲಿ 'ಅನ್ನದಾತ' ಎಂಬ ಮಾಸ ಪತ್ರಿಕೆ ಆರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಬಂದರು. ಬಳಿಕ 'ಈನಾಡು' ದಿನಪತ್ರಿಕೆ ಆರಂಭಿಸಿದರು. ಇದು ಪ್ರಾರಂಭವಾದ 4 ವರ್ಷಗಳಲ್ಲಿ ಓದುಗರ ನೆಚ್ಚಿನ ಪತ್ರಿಕೆಯಾಗಿ ಹೊರಹೊಮ್ಮಿತು. ಜೊತೆಗೆ ಇವರು ಆರಂಭಿಸಿದ 'ಸಿತಾರಾ' ಸಿನಿ ಪತ್ರಿಕೆಯೂ ಜನಪ್ರಿಯಗೊಂಡಿತು.
ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ರಾಮೋಜಿ ಅವರು ಕೃಷಿ ಲೋಕಕ್ಕೆ ನೀಡಿದ ಕೊಡುಗೆಯೂ ಅಪಾರ. 'ಕರದೀಪಿಕೆ' ಎಂಬ ಪುಸ್ತಕವನ್ನೂ ಪ್ರಕಟ ಮಾಡಿ, ಕೃಷಿವಿಜ್ಞಾನ ಕೇಂದ್ರಗಳು ಮತ್ತು ರೈತರ ನಡುವಣ ಸೇತುವೆಯಾದರು.
ಯಶಸ್ವಿ ಉದ್ಯಮಿಯಾಗಿ, ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದ ರಾಮೋಜಿ ಅವರು 'ಈಟಿವಿ' ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನಲ್ಲಿ ಪ್ರಖ್ಯಾತರಾದರು. ಒಂದು ಚಾನೆಲ್ ಆದದ್ದು ಹನ್ನೆರಡಾಯಿತು. ರಾಮೋಜಿ ಫಿಲ್ಮ್ ಸಿಟಿ ನಿರ್ಮಾಣ ಇವರ ಜೀವನದ ಹೆಗ್ಗುರುತೆನಿಸಿತು. ಇದು ವಿಶ್ವದ ಅತಿ ದೊಡ್ಡ ಫಿಲ್ಮ್ ಸಿಟಿ ಎಂಬ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಫಿಲ್ಮ್ಸಿಟಿಯು ದೇಶದ ಜನಪ್ರಿಯ ಪ್ರವಾಸಿ ತಾಣವಾಗಿಯೂ ಪ್ರಖ್ಯಾತಗೊಂಡಿದೆ. ವಿಶ್ವದ ಅತಿ ದೊಡ್ಡ ಥೀಮ್ ಪಾರ್ಕ್ ಹಾಗೂ ಸಿನಿಮಾ ಸ್ಟುಡಿಯೋ ಎಂಬ ಹೆಗ್ಗಳಿಕೆಯೂ ರಾಮೋಜಿ ಫಿಲ್ಮ್ ಸಿಟಿಗೆ ಇದೆ.
ರಾಮೋಜಿ ರಾವ್ ನಿರ್ಮಿಸಿದ ಉದ್ಯಮಗಳಲ್ಲಿ ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್ವರ್ಕ್, ರಮಾದೇವಿ ಪಬ್ಲಿಕ್ ಸ್ಕೂಲ್, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಗಳು ಸೇರಿವೆ.
ರಾಮೋಜಿ ಅವರು ಪೃಕೃತಿ ವಿಕೋಪಗಳಾದ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು: ನೆರವು ನೀಡುವಲ್ಲಿಯೂ ಮುಂಚೂಣಿಯಲ್ಲಿದ್ದರು.
ರಾಮೋಜಿ ರಾವ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ, ನಾಲ್ಕು ಫಿಲಂಫೇರ್, ಐದು ನಂದಿ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ರಾಮೋಜಿ ರಾವ್ ಅವರು 2024ರ ಜೂನ್ 8ರಂದು ಈ ಲೋಕವನ್ನಗಲಿದರು.
On Remembrance Day of Great visionary and entrepreneur Ramoji Rao 🌷🙏🌷
ಕಾಮೆಂಟ್ಗಳು