ರೂಪ ಗುರುರಾಜ್
ರೂಪ ಗುರುರಾಜ್
ರೂಪ ಅವರದ್ದು ಬಹುರೂಪಿ ವ್ಯಕ್ತಿತ್ವ. ಸದಾ ಹಸನ್ಮುಖಿಯಾದ ರೂಪ ಅವರು ರೇಡಿಯೋ ಉದ್ಘೋಷಕಿ, ವಾರ್ತಾವಾಚಕಿ, ಬರಹಗಾರ್ತಿ, ಕಾರ್ಯಕ್ರಮ ನಿರೂಪಕಿ, ರೂಪದರ್ಶಿ, ಅಭಿನಯ ಕಲಾವಿದೆ, ಸಂಘಟನಾ ಚತುರೆ, ಸಮಾಜಮುಖಿ ಹೀಗೆ ಹಲವು ರೂಪಗಳಲ್ಲಿ ಪರಿಚಿತರು.
ಅಕ್ಟೋಬರ್ 3, ರೂಪ ಅವರ ಹುಟ್ಟುಹಬ್ಬ. ಇವರು ಬೆಂಗಳೂರಿನವರು.
ರೂಪ ಗುರುರಾಜ್ ಅವರ ಧ್ವನಿ ಬೆಂಗಳೂರು ದೂರದರ್ಶನದ ಚಂದನ ವಾಹಿನಿ, ಆಕಾಶವಾಣಿ, ಎಫ್.ಎಂ ರೈನ್ ಬೋ, ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಹೀಗೆ ಬಹು ಮಾಧ್ಯಮಗಳಲ್ಲಿ ಚಿರಪರಿಚಿತವಾದದ್ದು.
ರೂಪ ಅವರು ಕಾರ್ಯಕ್ರಮ ನಿರೂಪಕಿಯಾಗಿ 2018 ರ ಅಮೇರಿಕಾದ ಡೆಲ್ಲಾಸ್ ದಲ್ಲಿ ಜರುಗಿದ "ಅಕ್ಕ ಸಮ್ಮೇಳನ", ಉತ್ತರ ಕ್ಯಾಲಿಫೋರ್ನಿಯಾದ "ಕನ್ನಡ ಕೂಟ", ಕತಾರ್ ಕನ್ನಡ ರಾಜ್ಯೋತ್ಸವ, ಕೊಯಮತ್ತೂರಿನ ಇಶಾ ಫೌಂಡೇಷನ್ ಉತ್ಸವ, ಉಡುಪಿ ಪರ್ಯಾಯ ಉತ್ಸವ ಸೇರಿದಂತೆ ದೇಶ - ವಿದೇಶಗಳಲ್ಲಿ ನಡೆದಿರುವ 800 ಕ್ಕೂ ಅಧಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜ್ರಂಭಿಸಿದ್ದಾರೆ.
ರೂಪ ಅವರು ಆಯ್ದ ಕಿರುತೆರೆ, ಚಲನಚಿತ್ರಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿದ್ದಾರೆ.
ರೂಪ ಅವರು ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. "ವಿಶ್ವವಾಣಿ ಕ್ಲಬ್ ಹೌಸ್"ನಲ್ಲಿ ಸತತವಾಗಿ ಕಳೆದ ನಾಲ್ಕುವರ್ಷಗಳಿಂದ ಸಹ ನಿರೂಪಕಿಯಾಗಿದ್ದಾರೆ. ಲೇಖಕಿಯಾಗಿ ಇವರ ಕವನ ಸಂಕಲನ "ರೂಪಾಂತರ" ಹಾಗೂ ಇದುವರೆಗೆ 4 ಸಂಪುಟಗಳಲ್ಲಿ "ಒಂದೊಳ್ಳೆ ಮಾತು" ಕೃತಿಗಳು ಪ್ರಕಟಗೊಂಡಿವೆ. ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡಿರುವ ರೂಪ ಗುರುರಾಜ್, "ಮನಃಪ್ರಸಾದ" ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದಾರೆ.
ಬಹುಮುಖಿ ಸಾಧಕಿ ಆತ್ಮೀಯರಾದ ರೂಪ ಗುರುರಾಜ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Roopa Gururaj 🌷🌷🌷
ಕಾಮೆಂಟ್‌ಗಳು