ಸರಸ್ವತಿ ರಾಜವಾಡೆ
ಸರಸ್ವತಿಬಾಯಿ ರಾಜವಾಡೆ
ಸರಸ್ವತಿ ಬಾಯಿ ರಾಜವಾಡೆಯವರು ಸ್ವಾತಂತ್ರ್ಯಪೂರ್ವದಲ್ಲಿ ಸಾಹಿತ್ಯಿಕವಾಗಿ ಮತ್ತು ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡು, ಮಹಿಳೆಯರ ಸರ್ವತೋಮುಖ ಬೆಳವಣಿಗೆಗಾಗಿ ದುಡಿದವರು. ‘ಗಿರಿಬಾಲೆ’ ಎಂಬುದು ಇವರ ಕಾವ್ಯನಾಮ. ಇಂದು ಅವರ ಸಂಸ್ಮರಣೆ ದಿನ.
ಸರಸ್ವತಿಬಾಯಿ ಉಡುಪಿ ಬಳಿಯ ಒಳಂಜಾಲ ಎಂಬಲ್ಲಿ 1913 ರ ಅಕ್ಟೋಬರ್ 3ರಂದು ಜನಿಸಿದರು. ಸರಸ್ವತಿಬಾಯಿ ಅವರ ತಂದೆ ನಾರಾಯಣ ರಾವ್. ತಾಯಿ ಕಮಲಾಬಾಯಿ. ಇವರು ಮಹಾರಾಷ್ಟ್ರದ ಮೂಲದವರು. ಒಂದೆಡೆ ಕಿತ್ತು ತಿನ್ನುವ ಬಡತನವಾದರೆ ಮತ್ತೊಂದೆಡೆ ಹುಟ್ಟುವ ಮೊದಲೇ ಸಂಸಾರದಲ್ಲಿ ವಿರಕ್ತಿ ಹೊಂದಿ ತಂದೆ ಹೊರಟುಹೋದದ್ದರಿಂದ ಸರಸ್ವತಿಬಾಯಿ ತಂದೆಯ ಮುಖವನ್ನೇ ಕಾಣದ ಮಗುವಾದರು. ಇದಕ್ಕೆ ಸಾಲದೆಂಬಂತೆ ತಂದೆಯ ಈ ರೀತಿಯ ನಡವಳಿಕೆಗೆ ತನ್ನ ಮಗುವೇ ಕಾರಣವೆಂದು ಜಿಗುಪ್ಸೆ ತಾಳಿದ ತಾಯಿಯ ಪ್ರೀತಿಯಿಂದಲೂ ವಂಚಿತರಾದರು.
ಸರಸ್ವತಿಬಾಯಿ ಐದು ವರ್ಷದ ಬಾಲಕಿಯಾಗಿದ್ದಾಗ ಹೂಮಾರಲು ಹೋಗುತ್ತಿದ್ದರಂತೆ. ಸರಸ್ವತಿಬಾಯಿಗೆ ಮೊದಲಿನಿಂದಲೂ ಓದಿನಲ್ಲಿ ತುಂಬಾ ಆಸಕ್ತಿ. ತಾಯಿಯನ್ನು ಕಾಡಿಬೇಡಿ ಪುಸ್ತಕ, ಸ್ಲೇಟನ್ನು ಕೊಂಡು ಶಾಲೆಯಲ್ಲಿ ಕಲಿಯತೊಡಗಿದರು. ಕೆಲವು ಸಮಯ ರಂಗದ ಮೇಲೆ ಪಾತ್ರಧಾರಿಯಾಗಿದ್ದ ಈ ಸೌಂದರ್ಯವತಿ ಸರಸ್ವತಿಬಾಯಿ ರಾಜವಾಡೆ ಚಿತ್ರರಂಗದ ಪ್ರಾರಂಭಿಕ ಯುಗವಾದ ಮೂಕಿಚಿತ್ರಗಳಲ್ಲೂ ಪಾತ್ರಧಾರಿಯಾಗಿದ್ದರಂತೆ. ಉತ್ತಮ ಗಾಯಕಿಯಾಗಿದ್ದ ಅವರು ನಾಡಿನಾದ್ಯಂತ ವಾದ್ಯಗೋಷ್ಠಿಯೊಂದಿಗೆ ಸಂಚರಿಸಿ ತಮ್ಮ ಗಾನಸುಧೆಯನ್ನು ಹರಿಸಿದ್ದರಂತೆ. ಆದರೆ ಇವೆಲ್ಲಾ ಹೆಚ್ಚುಕಾಲ ಮುಂದುವರಿಯದೆ ಅವರು ತಮ್ಮ ಬಡತನದ ಬದುಕಿಗೆ ಹಿಂದಿರುಗುವಂತಾಯಿತು.
ತಾಯಿಗೆ ಇವಳ ಮದುವೆ ಮಾಡಿದರೆ ಸಾಕೆಂದು 15ರ ಹರೆಯದ ಹುಡುಗಿಯನ್ನು 52ರ ವಯಸ್ಸಿನ ರಾಯಶಾಸ್ತ್ರಿ ರಾಜವಾಡೆಯವರಿಗೆ ಮದುವೆ ಮಾಡಿಸಿದರು. ಇವರು ಸಿಂಗಪುರದಲ್ಲಿ ಅಕೌಂಟೆಂಟ್ ಜನರಲ್ ಆಗಿದ್ದರಿಂದ ಶ್ರೀಮಂತಿಕೆಯೇನೋ ಗಿರಿಬಾಲೆಗೆ ಕಾದಿತ್ತು! ಬಾಲ್ಯದಲ್ಲಿ ತಾಳಲಾರದ ಬಡತನದಿಂದ ಬೇಸತ್ತು ‘ದೇವರು ಭಕ್ತರ ಕಷ್ಟ ನಿವಾರಿಸುತ್ತಾನೆ, ಇಷ್ಟಾರ್ಥ ನೆರವೇರಿಸುತ್ತಾನೆಂದು ತಿಳಿದು, ಕಲೆಕ್ಟರ್ ಗಂಡನನ್ನು ಕೊಡು, ಐಶ್ವರ್ಯವನ್ನು ಕೊಡು’ ಎಂದು ಬೇಡಿ ಪತ್ರ ಬರೆದಿದ್ದರಂತೆ. ಪತ್ರ ತಲುಪಿತೋ ಇಲ್ಲವೋ! ಆದರೆ ತಥಾಸ್ತು ಎಂದ ದೇವರು ಎಲ್ಲವನ್ನೂ ಕೊಟ್ಟ ಆದರೆ ದೊರೆತದ್ದು ಹೀಗೆ.
ಗಂಡನ ಮನೆಗೆ ತೆರಳಿದ ನಂತರವೇ ತಿಳಿದದ್ದು, ಇದೊಂದು ಬಂಗಾರದ ಪಂಜರವೆನ್ನುವುದು. ಎಲ್ಲವನ್ನು ಸಂಶಯಿಸುವ ಗಂಡ. ಅವರು ಅಂದಿನ ದಿನಗಳಲ್ಲಿ ಹೆಚ್ಚು ವಾಸವಿದ್ದದ್ದು ತಂಜಾವೂರು ಮತ್ತು ಸಿಂಗಪುರಗಳಲ್ಲಿ. ಹತ್ತಿಕ್ಕಿದ ಭಾವನೆಗಳು ಮತ್ತು ಒಂಟಿತನ ಅವರನ್ನು ತೀವ್ರವಾಗಿ ಕಾಡುತ್ತಿದ್ದವು. ಕಡೆಗೆ ಮನೆಗೆ ಬರುತ್ತಿದ್ದ ಪತ್ರಿಕೆಗಳನ್ನು ಓದತೊಡಗಿದ್ದಲ್ಲದೆ, ಮನೆಕೆಲಸದ ಹುಡುಗನಿಂದ ತಮಿಳು ಭಾಷೆಯನ್ನು ಕಲಿತರು. ಅವರು ಮೊದಲು ಕಥೆ ಬರೆದದ್ದು ತಮಿಳಿನಲ್ಲಿ. ಕನ್ನಡದಲ್ಲಿ ಬರೆದ ಮೊದಲ ಕತೆ ‘ನನ್ನ ಅಜ್ಞಾನ’. ಇದು ಕಂಠೀರವ ಪತ್ರಿಕೆಯಲ್ಲಿ ಪ್ರಕಟಗೊಂಡು ಬಹುಮಾನ ಬಂದಿದ್ದರಿಂದ ಉತ್ತೇಜಿತರಾಗಿ ಬರೆವಣಿಗೆಯನ್ನು ರೂಢಿಸಿಕೊಳ್ಳಲು ಮತ್ತಷ್ಟು ಪ್ರೇರಿತರಾದರು.
ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದನ್ನು ತನ್ನ ಗಂಡನಿಗೆ ಮೊದಲು ತಿಳಿಸದಿದ್ದರೂ, ಇದು ಹೇಗೋ ತಿಳಿದು ಕಡೆಗೆ ಗಂಡನ ಪ್ರೋತ್ಸಾಹದಿಂದಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕುಳಿತು ಉತ್ತಮ ಅಂಕ ಪಡೆದು ಉತ್ತೀರ್ಣರಾದರು. ನಂತರ ಹಿಂದಿ ರಾಷ್ಟ್ರಭಾಷಾ, ವಿಶಾರದ ಪರೀಕ್ಷೆಗಳಲ್ಲೂ ಉತ್ತೀರ್ಣರಾದರು. ಹೀಗೆ ಇವರು ಹಿಂದಿ, ತಮಿಳು, ಸಂಸ್ಕೃತ, ಇಂಗ್ಲಿಷ್, ಮರಾಠಿ, ಕನ್ನಡ ಭಾಷೆಗಳನ್ನು ಕಲಿತರು. ಅವರಿಗೆ 28ರ ವಯಸ್ಸಿನಲ್ಲಿ ವೈಧವ್ಯ ಪ್ರಾಪ್ತವಾಯಿತು. ನಂತರದಲ್ಲಿ ಬೆಂಗಳೂರಿನಲ್ಲಿ ಕೆಲಕಾಲ ನೆಲೆಸಿದ್ದ ಅವರು ನಂತರ ತಮ್ಮ ಕೊನೆಗಳಿಗೆಯವರೆಗೆ ಉಡುಪಿಯಲ್ಲಿ ನೆಲೆಸಿದ್ದರು.
1929ರಲ್ಲಿ ಬರೆವಣಿಗೆಯನ್ನು ಪ್ರಾರಂಭಿಸಿದ ಸರಸ್ವತಿಬಾಯಿ ರಾಜವಾಡೆಯವರು ಸುಮಾರು 65 ಕತೆಗಳನ್ನು ಬರೆದರು. ಮೊದಲ ಕಥಾ ಸಂಕಲನವಾದ ‘ಆಹುತಿ ಇತ್ಯಾದಿ ಕಥೆಗಳು’ 1938ರಲ್ಲಿ ಪ್ರಕಟಗೊಂಡ ಸಂದರ್ಭದಲ್ಲಿ ‘ದಿ ಹಿಂದೂ’ ಪತ್ರಿಕೆಯಲ್ಲಿ ವಿಮರ್ಶಕರೊಬ್ಬರು ‘ದಿ ಅನ್‌ಕ್ರೌನ್ಡ್ ಕ್ವೀನ್ ಆಫ್ ಶಾರ್ಟ್ ಸ್ಟೋರೀಸ್’ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ತಮ್ಮ ಕತೆಗಳಲ್ಲಿನ ವೈವಿಧ್ಯತೆ, ವಸ್ತುವಿನ ಆಯ್ಕೆ, ಕಥಾರಚನೆ, ನಿರೂಪಣಾತಂತ್ರ ಮುಂತಾದ ಸಾಹಿತ್ಯಿಕ ಗುಣಗಳಿಂದ ಸರಸ್ವತಿಬಾಯಿ ರಾಜವಾಡೆಯವರು ತಾವೊಬ್ಬ ಪ್ರತಿಭಾನ್ವಿತ ಲೇಖಕಿ ಎಂಬುದನ್ನು ನಿರೂಪಿಸಿದ್ದರು. ನಂತರ ಬಂದ ಇವರ ಮತ್ತೆರಡು ಕಥಾ ಸಂಕಲನಗಳೆಂದರೆ ‘ಕದಂಬ’ ಹಾಗೂ ‘ಪ್ರೇಮ ವಿವಾಹ’. ಇವರು ಬರೆದ ಕಾದಂಬರಿ ‘ವಿಮಲೆ’.
ಕತೆ, ಕವನಗಳನ್ನು ಬರೆಯ ತೊಡಗಿದ ಗಿರಿಬಾಲೆಯವರು 1946ರಲ್ಲಿ ‘ಕಥಾವಳಿ’ ಎಂಬ ಪತ್ರಿಕೆಯ ವನಿತಾ ವಿಭಾಗದ ಸಂಪಾದಕತ್ವದ ಹೊಣೆಯನ್ನು ಹೊತ್ತುಕೊಂಡು ‘ಅಕ್ಕನ ಓಲೆ’ ಎಂಬ ಅಂಕಣವನ್ನು ಪ್ರಾರಂಭಿಸಿ ಹಲವಾರು ಭಗಿನಿಯರಿಗೆ ಮಾರ್ಗದರ್ಶಕರಾದರು. ಅಂಕಣದ ಮೂಲಕ ಹಲವಾರು ಸಮಸ್ಯೆಗಳನ್ನೆತ್ತಿ, ಉತ್ತರಿಸಿ, ಚಿಂತನೆಗೆ ದಾರಿಮಾಡಿದರು. ‘ಚಾರು ಚಯನ’ ಎಂಬ ಇನ್ನೊಂದು ಅಂಕಣದಲ್ಲಿ ಉದಯೋನ್ಮುಖ ಲೇಖಕಿಯರ ಕತೆ, ಕವನಗಳನ್ನು ಪ್ರಕಟಿಸಿ ಉತ್ತೇಜನ ನೀಡಿದರು. 1951ರ ವರ್ಷದಲ್ಲಿ ‘ನಿಸರ್ಗ’ ಎಂಬ ಮತ್ತೊಂದು ಪತ್ರಿಕೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಬರೆದರು. ಹೀಗೆ ಹಲವಾರು ಪತ್ರಿಕೆಗಳ ಸಂಪರ್ಕದಿಂದ ಗಿರಿಬಾಲೆ, ವೀಣಾಪಾಣಿ, ವಿಶಾಖ ಎಂಬ ಕಾವ್ಯನಾಮಗಳಿಂದ ಬರೆಯತೊಡಗಿದರು.
ಹಲವಾರು ಕವಿತೆಗಳನ್ನು ಬರೆದ ಗಿರಿಬಾಲೆಯವರ ‘ಕಲಿಯೋಣ’ ಮೊದಲ ಕವನವು ಕಥಾವಳಿಯಲ್ಲಿ 1948ರಲ್ಲಿ ಪ್ರಕಟವಾಯಿತು. ಅದರಲ್ಲಿ
“ಚೇತರಿಸಿ ಭಗಿನಿಯರೇ!
ಸಾಕಿನ್ನು ತೂಕಡಿಕೆ
ಕ್ರೀತದಾಸಿಯರಾಗಿ
ಬಾಳಿದುದು ಸಾಕಾಯ್ತು”
ಎಂದು ಎಚ್ಚರಿಸುತ್ತಾ ಜಡತ್ವವನ್ನು ತೊರೆದು ಕ್ರಿಯಾಶೀಲ ಬದುಕನ್ನು ರೂಡಿಸಿಕೊಂಡು ಮಹಿಳೆಯರ ಏಳಿಗೆಗಾಗಿ ದುಡಿಯಬೇಕೆಂದು ಕರೆನೀಡಿದರು.
ನಾಟಕ ಪ್ರಕಾರದಲ್ಲಿಯೂ ದುಡಿದ ಗಿರಿಬಾಲೆಯವರು ‘ಪರಿಣಯ’ ಎಂಬ ಮರಾಠಿ ಪ್ರಹಸನವನ್ನು 1949 ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಲ್ಲದೆ 1952ರಲ್ಲಿ ಸ್ವತಂತ್ರ ನಾಟಕ ‘ಸಾರ್ಥಕ ಜೀವನ’ ಎಂಬುದನ್ನು ರಚಿಸಿದರು. ಈ ನಾಟಕದ 3ನೆಯ ಅಂಕದ ಏಳು ಮತ್ತು ಎಂಟನೆಯ ದೃಶ್ಯಗಳು ‘ಮಂಥರೆ ಕಂಡ ಅಂತರಂಗ’ ಎಂಬ ಹೆಸರಿನಲ್ಲಿ 1961ರಲ್ಲಿ ಪ್ರಕಟವಾಯಿತು. ವಾಲ್ಮೀಕಿ ರಾಮಾಯಣದಲ್ಲಿ ರಾಮನ ಪಟ್ಟಾಭಿಷೇಕದ ಸುದ್ದಿಯನ್ನು ಮಂಥರೆ ಕೈಕೇಯಿಗೆ ತಿಳಿಸಿ, ಅವಳಿಗೆ ಹೊಟ್ಟೆಕಿಚ್ಚು ಉಂಟಾಗುವಂತೆ ಉದ್ದೀಪನಗೊಳಿಸಿದರೆ, ಇಲ್ಲಿ ಇವರು ಮಂಥರೆಯ ಅಂತರಂಗವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ.
ಮರಾಠಿಯಿಂದ ಅನುವಾದಿಸಿದ ಮತ್ತೊಂದು ನಾಟಕವೆಂದರೆ ‘ಬಿರುಗಾಳಿ’ (1957) ಮತ್ತು ಹಿಂದಿಯಿಂದ ಅನುವಾದಿಸಿದ ನಾಟಕ ‘ಪ್ರಕಾಶ’. 1961ರಲ್ಲಿ ರಚಿಸಿದ ನಾಟಕ ‘ಸಹೋದರ’. ಇವಲ್ಲದೆ ಸಂತ ಮೀರ, ಸಂಸಾರ, ಡೆಪ್ಟಿ ಕಲೆಕ್ಟರ್ ಮುಂತಾದ ನಾಟಕಗಳನ್ನು ರಚಿಸಿರುವುದಲ್ಲದೆ ನಾಟಕದ ಪಾತ್ರಧಾರಿಯಾಗಿಯೂ ರಂಗದ ಮೇಲೆ ಬಂದಿರುವುದು ಒಂದು ವಿಶೇಷ.
ಕೆಲ ಪತ್ರಿಕೆಗಳ ಸಂಪಾದಕಿ, ಅಂಕಣಕಾರ್ತಿಯಾಗಿ ಪಡೆದ ಅನುಭವದಿಂದ ಸರಸ್ವತಿಬಾಯಿ ರಾಜವಾಡೆಯವರೇ 1952ರಲ್ಲಿ ಪ್ರಾರಂಭಿಸಿದ ಪತ್ರಿಕೆ ‘ಸುಪ್ರಭಾತ’. ಇದರಲ್ಲಿ ಮಹಿಳಾ ಲೇಖನಗಳಿಗೇ ಪ್ರಾಧಾನ್ಯತೆ ನೀಡಿ, ಮಹಿಳೆಯರೇ ತಮಗೆ ಬೇಕಾದ್ದು ಮತ್ತು ಬೇಡದ್ದನ್ನು ಯಥಾರ್ಥವಾಗಿ ಚಿತ್ರಿಸಲು ಅನುಕೂಲ ಕಲ್ಪಿಸಿದರು. ವೈವಿಧ್ಯಮಯ ವಸ್ತುವಿನ 50ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದು ಮಹಿಳೆಯರಿಗೆ ದಾರಿದೀಪವಾದರು.
ಸಮಾಜಸೇವೆಯಲ್ಲಿಯೂ ತೊಡಗಿಕೊಂಡಿದ್ದ ಸರಸ್ವತಿಬಾಯಿ ರಾಜವಾಡೆ ಅವರು ಉಡುಪಿಯ ಸರಕಾರಿ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಹಣ ಸಹಾಯ ಮಾಡಿದರು. ಕಡೆಗೆ ಆಧ್ಯಾತ್ಮಿಕದತ್ತ ವಾಲಿದ ಸರಸ್ವತಿಬಾಯಿವರು ಕೃಪಾಂತರಂಗ ಭಾಗ 1 ಮತ್ತು 2; ಸ್ತವನಾಂಜಲಿ, ಶ್ರೀಶಾರದಾಂಬ ಸ್ತುತಿಗೀತೆಗಳು, ಶ್ರೀಶಾರದಾದೇವಿ ಭಕ್ತರಿಗೆ ಪ್ರಕಟಿಸಿದ ಮಹಿಮೆಗಳು ಮುಂತಾದ ಕೃತಿಗಳನ್ನು ರಚಿಸಿದ್ದಲ್ಲದೆ 1976ರಲ್ಲಿ ಉಡುಪಿಯ ಚಿಟ್ಟಾಡಿಯಲ್ಲಿ ಶಾರದಾಂಬ ದೇಗುಲವನ್ನು ಜೀರ್ಣೋದ್ಧಾರ ಮಾಡಿಸಿ, ಶಾರದಾಂಬ ಸೇವೆಗಾಗಿ ನಿಂತು ಭಕ್ತರಿಗೆ ದಾರಿ ತೋರಿಸುತ್ತಾ ವಿರಕ್ತ ಬದುಕನ್ನು ರೂಡಿಸಿಕೊಂಡರು.
ಸರಸ್ವತಿಬಾಯಿ ರಾಜವಾಡೆ ಅವರ ಸಾಹಿತ್ಯದ ಕೊಡುಗೆಗಾಗಿ ಅಖಿಲ ಕರ್ನಾಟಕ ಲೇಖಕಿಯರ ಸಂಘವು 1988ರಲ್ಲಿ ನಡೆದ ಎರಡನೆಯ ಲೇಖಕಿಯರ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಿದ್ದಲ್ಲದೆ, 1994 ರಲ್ಲಿ ಅನುಪಮಾ ಪ್ರಶಸ್ತಿಯನ್ನು ಪ್ರಕಟಿಸಿದಾಗ ಅದನ್ನು ಸ್ವೀಕರಿಸುವ ಮುನ್ನವೇ 1994ರ ಏಪ್ರಿಲ್ 23 ರಂದು ಈ ಲೋಕದಲ್ಲಿ ಎಲ್ಲವನ್ನೂ ಬಿಟ್ಟಗಲಿದರು.
ವೈದೇಹಿ ಅವರು ಸರಸ್ವತಿಬಾಯಿ ಅವರೊಡನೆ ಹಲವಾರು ಬಾರಿ ಮಾತುಕತೆಗಳನ್ನು ನಡೆಸಿ ಅವರ ಬದುಕಿನ ಘಟನೆಗಳನ್ನು ದಾಖಲಿಸಿದ್ದಾರೆ. ಸರಸ್ವತಿಬಾಯಿ ರಾಜವಾಡೆ ಅವರನ್ನು ಕೆಲವೊಂದು ಬಾರಿ ಭೇಟಿಯಾಗಿದ್ದ ನೀನಾಸಂ ಪ್ರಖ್ಯಾತಿಯ ಕೆ. ವಿ. ಸುಬ್ಬಣ್ಣನವರು ಸರಸ್ವತಿಬಾಯಿ ರಾಜವಾಡೆ ಅವರ ಬದುಕು ಮತ್ತು ಸಾಧನೆಯ ಕುರಿತು ತಮ್ಮ ‘ಮಾತುಕತೆ’ಯಲ್ಲಿ ಪ್ರಸ್ತಾಪಿಸುತ್ತಾ, ಸರಸ್ವತಿಬಾಯಿಯವರು ಎಂಭತ್ತು ವಯಸ್ಸಿನಲ್ಲಿದ್ದಾಗಲೂ, ಅವರಲ್ಲಿದ್ದ ಸೌಂಧರ್ಯ ತೇಜಸ್ಸು ತಮಗೆ ಬಾಣ, ಕಾಳಿದಾಸರ ಕಾವ್ಯಕನ್ನಿಕೆಯ ನೆನಪನ್ನು ತಂದುಕೊಟ್ಟಿತು ಎಂದಿದ್ದಾರೆ.
ಈ ಮಹಾನ್ ಚೇತನಕ್ಕೆ ನಮನ.
writer and social reformer Saraswathi Bhai Rajawade🌷🙏🌷
ಕಾಮೆಂಟ್‌ಗಳು