ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೊಳಲ್ಕೆರೆ ವೆಂಕಟೇಶ್


 ಹೊಳಲ್ಕೆರೆ ವೆಂಕಟೇಶ್


ಹೊಳಲ್ಕೆರೆ ಲಕ್ಷ್ಮೀ ವೆಂಕಟೇಶ್  ಸಕ್ರಿಯ ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಬಹುಮುಖಿ ಸುಸಂಸ್ಕೃತ ಹವ್ಯಾಸಗಳುಳ್ಳವರಾಗಿದ್ದರು.  ಕನ್ನಡ ವಿಕಿಪೀಡಿಯಾ ಆರಂಭವಾದ ಮೊದಲ ಹತ್ತು ವರ್ಷಗಳಲ್ಲಿ ಅದರಲ್ಲಿ ಅವರಷ್ಟು ಬರಹಗಳನ್ನು ತುಂಬಿದವರು ಮತ್ತೊಬ್ಬರಿರಲಿಲ್ಲ. 

ಎಚ್. ಆರ್. ಲಕ್ಷ್ಮೀ ವೆಂಕಟೇಶ್ ಅವರು 1944ರ ಜನವರಿ 24ರಂದು ಜನಿಸಿದರು. ತಂದೆ ಚಿತ್ರದುರ್ಗದ ಚೀರನಹಳ್ಳಿ ಮತ್ತು ಕುಡಿನೀರಕಟ್ಟೆ ಗ್ರಾಮಗಳ ಶ್ಯಾನುಭೋಗರಾಗಿದ್ದ ಎಚ್. ವಿ. ರಂಗರಾವ್.  ತಾಯಿ ರಾಧಮ್ಮ.  ಇವರ ಒಬ್ಬ ಸಹೋದರ ದಿವಂಗತ ಪ್ರೊ. ಎಚ್. ಆರ್. ರಾಮಕೃಷ್ಣ ರಾವ್ ಕನ್ನಡದ ಮಹಾನ್ ವಿಜ್ಞಾನ ಬರಹಗಾರ, ಪ್ರಾಧ್ಯಾಪಕ, ಸಮಾಜಸೇವಕ ಮತ್ತು ಚಿಂತಕರಾಗಿ ಪ್ರಸಿದ್ಧರಾಗಿದ್ದವರು.  ಇವರ ಮತ್ತೊಬ್ಬ ಸಹೋದರ ಪ್ರೊ. ಎಚ್. ಆರ್. ಚಂದ್ರಶೇಖರ್ ಅಂತರರಾಷ್ಟ್ರೀಯ ಮಟ್ಟದ  ಶ್ರೇಷ್ಠಭೌತಶಾಸ್ತ್ರಜ್ಞರು ಮಾತ್ರವಲ್ಲದೆ, ಭಾರತೀಯ  ಪುರಾತನ  ಸಾಂಸ್ಕೃತಿಕ  ಮೌಲ್ಯಗಳ  ಕುರಿತಾಗಿಯೂ  ತಮ್ಮ  ಭೌತಶಾಸ್ತ್ರದಲ್ಲಿನ  ಸಾಧನೆಯ  ಮಟ್ಟದ್ದಷ್ಟೇ  ಎತ್ತರದ  ಸಾಧನೆಯನ್ನು  ಮಾಡಿದ್ದು ಅಮೆರಿಕದ ನಿವಾಸಿಯಾಗಿದ್ದಾರೆ. 

ಹೊಳಲ್ಕೆರೆ ವೆಂಕಟೇಶ್ ಅವರು ಕೇಂದ್ರ ಸರ್ಕಾರದ ಐಸಿಎಆರ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ ನಿವೃತ್ತರಾಗಿದ್ದರು.  ಮುಂಬೈ ವಲಯದ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರು ನಿರಂತರ ಸಕ್ರಿಯರಾಗಿದ್ದರು.  ವೆಂಕಟೇಶ್ ಅವರು ವಿಕಿಪೀಡಿಯಾದಲ್ಲಿ ಅಪಾರ ಸಂಖ್ಯೆಯ  ಕನ್ನಡ ಮತ್ತು ಇಂಗ್ಲಿಷ್ ಬರಹಗಳನ್ನು ಮಾಡಿದವರು.  ಕನ್ನಡ ವಿಕಿಪೀಡಿಯಾದಲ್ಲಂತೂ ಅವರು ಪ್ರಾರಂಭದಿಂದಲೂ ಅಪರಿಮಿತ ಬರಹ ಮಾಡಿದವರು.

ವೆಂಕಟೇಶ್ ಅವರ ಸಾಹಿತ್ಯಾಸಕ್ತಿ ಅಪಾರ. ಅಂತೆಯೇ ಅವರ ಸಂಗೀತ ಮತ್ತು ಇತರ ಸಾಂಸ್ಕೃತಿಕ ಆಸಕ್ತಿಗಳು ಕೂಡ.  ಅವರೊಬ್ಬ ಅತ್ಯುತ್ತಮ ಛಾಯಾಗ್ರಾಹಕರಾಗಿದ್ದರು. ಹಿರಿಯ ವಯಸ್ಸಿನಲ್ಲೂ ಅವರ ಚಟುವಟಿಕೆಗಳ ವಿಸ್ತಾರ ದಂಗುಬಡಿಸುವಂತದ್ದಾಗಿತ್ತು.

ಎಲ್ಲರೊಡನೆ ನಸುನಗುತ್ತ, ಕ್ರಿಯಾಶೀಲರಾಗಿ, ಸಮಾಜಮುಖಿಯಾಗಿ, ನಮ್ಮೆಲ್ಲರನ್ನೂ ಪ್ರೇರಿಸಿ, ಪ್ರೋತ್ಸಾಹಿಸುತ್ತಿದ್ದ ಹೊಳಲ್ಕೆರೆ ವೆಂಕಟೇಶರ 2025 ಅಕ್ಟೋಬರ್ 30ರಂದು ನಿಧನರಾದರು.  ನನ್ನ ಕುರಿತು ಅಪರಿಮಿತ ಅಕ್ಕರೆ ಪ್ರೀತಿ ವಾತಲ್ಯ ತುಂಬಿಕೊಂಡಿದ್ದ ವೆಂಕಟೇಶರ ಆತ್ಮಕ್ಕೆ ಆಪ್ತ ನಮನ🌷🙏🌷

Great Kannada Lover Holalkere Venkatesh Sir 🌷🙏🌷 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ