ಧರ್ಮೇಂದ್ರ
ಧರ್ಮೇಂದ್ರ
ಧರ್ಮೇಂದ್ರ ಚಲನಚಿತ್ರರಂಗದಲ್ಲಿ ಸ್ಫುರದ್ರೂಪ, ಪ್ರತಿಭೆ, ಯಶಸ್ಸು ಎಲ್ಲವೂ ಒಂದೆಡೆ ಸಂಭವಿಸಿದ್ದ ನಟ.
ಧರ್ಮೇಂದ್ರ ನೂರಕ್ಕೂ ಹೆಚ್ಚು ಯಶಸ್ವೀ ಚಿತ್ರಗಳಲ್ಲಿ ನಟಿಸಿದ ವಿರಳ ಯಶಸ್ವೀ ನಟ. ಜೊತೆಗೆ ಮದುವೆಯಾಗಿ ಹಲವು ಮಕ್ಕಳಿದ್ದರೂ ಕನಸಿನ ಕನ್ಯೆ ಹೇಮಾಮಾಲಿನಿಯೂ ಈತನಿಗೇ ಹೂಮಾಲೆ ಹಾಕಿದರು.
ಧರ್ಮೇಂದ್ರ ಪಂಜಾಬಿನ ಲುಧಿಯಾನ ಜಿಲ್ಲೆಯ ನಸ್ರಾಲಿ ಎಂಬ ಹಳ್ಳಿಯಲ್ಲಿ 1935ರ ಡಿಸೆಂಬರ್ 8ರಂದು ಜನಿಸಿದರು. ತಂದೆ ಕೇವಲ್ ಕಿಶನ್ ಸಿಂಗ್ ಡಿಯೋಲ್ ಶಾಲಾ ಮುಖ್ಯೋಪಾಧ್ಯಾಯರಾಗಿದ್ದರು. ತಾಯಿ ಸತ್ವಂತ್ ಕೌರ್. ಲುಧಿಯಾನದ ಪಖೋವಲ್ ತೆಹಸಿಲ್ ರೈಕೋಟ್ ಬಳಿಯ ಡಂಗೋನ್ ಇವರ ಪೂರ್ವಜರ ಊರು.
ಧರ್ಮೇಂದ್ರ ತಮ್ಮ ಆರಂಭಿಕ ಜೀವನವನ್ನು ಸಹನೆವಾಲ್ ಗ್ರಾಮದಲ್ಲಿ ಕಳೆದರು. ಲುಧಿಯಾನದ ಲಾಲ್ಟನ್ ಕಲಾನ್ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಓದಿದರು. 1952ರಲ್ಲಿ ಫಗ್ವಾರಾದಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿದರು.
ಫಿಲ್ಮ್ಫೇರ್ ನಿಯತಕಾಲಿಕವು ರಾಷ್ಟ್ರೀಯವಾಗಿ ಆಯೋಜಿಸಿದ್ದ ನವಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ ಧರ್ಮೇಂದ್ರ ವಿಜೇತರಾದರು. ವಿಜೇತರಾದವರಿಗೆ ಮುಖ್ಯ ಪಾತ್ರ ನೀಡಿ ಚಿತ್ರ ನಿರ್ಮಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಆ ಚಲನಚಿತ್ರ ನಿರ್ಮಾಣಗೊಳ್ಳಲೇ ಇಲ್ಲ. ಧರ್ಮೇಂದ್ರ 1960ರಲ್ಲಿ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದಲ್ಲಿ ನಟಿಸಿದರು.
ಧರ್ಮೇಂದ್ರ ಖ್ಯಾತ ತಾರೆ ನೂತನ್ ಜೊತೆಯಾಗಿ ಸೂರತ್ ಔರ್ ಸೀರತ್, ಬಂಧಿನಿ, ದಿಲ್ ನೆ ಫಿರ್ ಯಾದ್ ಕಿಯಾ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಮಾಲಾ ಸಿನ್ಹಾ ಅವರೊಂದಿಗೆ ದುಲ್ಹನ್ ಏಕ್ ರಾತ್ ಕಿ ಅನ್ಪಾದ್, ಪೂಜಾ ಕೆ ಫೂಲ್, ಬಹರೇನ್ ಫಿರ್ ಭಿ ಆಯೆಂಗಿ, ಆಂಖೇನ್ ಚಿತ್ರಗಳಲ್ಲಿ; ನಂದಾ ಜೊತೆ ಆಕಾಶದೀಪ್ ಚಿತ್ರದಲ್ಲಿ; ಸಾಯಿರಾ ಬಾನು ಜೊತೆ ಶಾದಿ, ಆಯೀ ಮಿಲನ್ ಕಿ ಬೇಲಾ ಚಿತ್ರಗಳಲ್ಲಿ ನಟಿಸಿದರು. ಧರ್ಮೇಂದ್ರ ಮತ್ತು ಮೀನಾ ಕುಮಾರಿ ಯಶಸ್ವಿ ಜೋಡಿಯಾಗಿ ಮೈ ಭಿ ಲಡ್ಕಿ ಹೂನ್, ಕಾಜಲ್, ಪೂರ್ಣಿಮಾ, ಫೂಲ್ ಔರ್ ಪತ್ತರ್, ಮಜ್ಲಿ ದೀದಿ, ಚಂದನ್ ಕಾ ಪಲ್ನಾ ಎಂಬ ಚಿತ್ರಗಳಲ್ಲಿ ನಟಿಸಿದರು.
ಫೂಲ್ ಔರ್ ಪತ್ಥರ್ 1966ರ ಅತಿ ಹೆಚ್ಚು ಗಳಿಕೆಯ ಚಲನಚಿತ್ರವಾಯಿತು. ಹೃಷಿಕೇಶ್ ಮುಖರ್ಜಿ ಅವರ 'ಅನುಪಮಾ’ ಚಿತ್ರದಲ್ಲಿ ಶರ್ಮಿಳಾ ಠಾಗೂರ್ ಜೊತೆಗಿನ ಅವರ ಅಭಿನಯ ವ್ಯಾಪಕವಾಗಿ ಮೆಚ್ಚುಗೆ ಗಳಿಸಿತು. ಆ ಚಿತ್ರದಲ್ಲಿನ ಅಭಿನಯವನ್ನು ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ತಂದಿತು. ಪ್ರೇಮಚಿತ್ರಗಳಲ್ಲಿ ಮತ್ತು ಆಕ್ಷನ್ ಚಿತ್ರಗಳಲ್ಲಿ ಹೀಗೆ ಎಲ್ಲದರಲ್ಲೂ ಯಶಸ್ಸು ಕಂಡರು. 1971ರ ಯಶಸ್ವಿ ಚಿತ್ರ 'ಮೇರಾ ಗಾಂವ್ ಮೇರಾ ದೇಶ್' ಅವರ ಮತ್ತೊಂದು ಯಶಸ್ವೀ ಚಿತ್ರ.
ಧರ್ಮೇಂದ್ರ ಹೇಮಾ ಮಾಲಿನಿ ಜೋಡಿ ಅತ್ಯಂತ ಜನಪ್ರಿಯವಾಯಿತು. ರಾಜಾ ಜಾನಿ, ಸೀತಾ ಔರ್ ಗೀತಾ, ಶರಾಫತ್, ನಯಾ ಜಮಾನಾ, ಪತ್ತರ್ ಔರ್ ಪಾಯಲ್, ತುಮ್ ಹಸೀನ್ ಮೈ ಜವಾನ್, ಜುಗ್ನು, ದೋಸ್ತ್, ಚರಸ್, ಮಾ, ಚಾಚಾ ಭಟಿಜಾ, ಆಜಾದ್ ಮತ್ತು ಶೋಲೆ ಸೇರಿದಂತೆ ಈ ಜೋಡಿ ಅಪಾರ ಯಶಸ್ಸು ಗಳಿಸಿತು. ಶೋಲೆ ಚಿತ್ರದಲ್ಲಿನ ಅವರ ಅಭಿನಯವೂ ಸ್ಮರಣೀಯ.
ಧರ್ಮೇಂದ್ರ ತಮ್ಮ ಪುತ್ರರನ್ನೂ ಚಿತ್ರರಂಗಕ್ಕೆ ತರಲು ಹಲವು ಚಿತ್ರಗಳನ್ನು ನಿರ್ಮಿಸಿದರು. ಭಾರತೀಯ ಜನತಾ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದಿದ್ದರು. ಅವರಿಗೆ ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಧರ್ಮೇಂದ್ರ 2025ರ ನವೆಂಬರ್ 24ರಂದು ನಿಧನರಾದರು.
Respects to departed soul most beautiful actor of our times Dharmendra 🌷🙏🌷

ಕಾಮೆಂಟ್ಗಳು