ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಎಸ್. ಉಮೇಶ್

 


ಮಹಾನ್ ಕಲಾವಿದ ಎಂ. ಎಸ್. ಉಮೇಶ್ ಇನ್ನಿಲ್ಲ


ಮಹಾನ್ ಅಭಿನಯ ಕಲಾವಿದ ನಮ್ಮ ಉಮೇಶ್ ನಿಧನರಾಗಿದ್ದಾರೆ.

“ಅಯ್ಯಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಬಿಟ್ರಲ್ಲ.  ನಾನೇನೂ  ಬೇಕೂ ಅಂತ ಹೀಗ್  ಮಾಡ್ಲಿಲ್ಲ..... ಹೇಳ್ಕೊಳ್ಳೋಣ ಅಂದ್ರೆ ನನ್ಹೆಂಡ್ತಿ ಕೂಡಾ ಊರಲ್ಲಿಲ್ವೆ..”  ಹೀಗೆ ತಮ್ಮ ಅಸಾಮಾನ್ಯ ರೀತಿಯ ಸಂಭಾಷಣೆ, ಅಭಿನಯ, ಅಭಿವ್ಯಕ್ತಿಗಳಿಂದ ಕನ್ನಡ ಚಿತ್ರರಸಿಕರ ಮನವನ್ನು ಇನ್ನಿಲ್ಲದಂತೆ ಗೆದ್ದವರು ಎಂ. ಎಸ್. ಉಮೇಶ್. 

ಉಮೇಶ್‌ 1945ರ ಏಪ್ರಿಲ್ 22ರಂದು ಮೈಸೂರಿನಲ್ಲಿ ಜನಿಸಿದರು.  ತಂದೆ ಎ.ಎಲ್. ಶ್ರೀಕಂಠಯ್ಯ,. ತಾಯಿ ನಂಜಮ್ಮ. ತೊಟ್ಟಿಲು ಕೂಸಾಗಿದ್ದಾಗಲೇ ರಂಗಪ್ರವೇಶಿಸಿದ್ದರಿಂದ ರಂಗಭೂಮಿಯತ್ತ ಒಲವು ಅವರಿಗೆ ಹುಟ್ಟಿನಿಂದಲೇ ಬಂತು.   ಅವರು ಬಾಲ ಪಾತ್ರಗಳಲ್ಲಿ ತನ್ಮಯತೆಯಿಂದ ಅಭಿನಯಿಸಿದರು. ದೃಶ್ಯಕ್ಕೆ ತಕ್ಕಂತೆ ಮೂಡ್ ಬರಿಸಲು ಕಲ್ಲು ಸಕ್ಕರೆ ಆಸೆ ತೋರಿಸಿ ಬಾಲಪಾತ್ರಗಳಲ್ಲಿ ಅವರಿಗೆ ಅಭಿನಯಿಸಲು ಪ್ರಚೋದನೆ ನೀಡಲಾಗುತ್ತಿತ್ತಂತೆ.  ರಂಗಭೂಮಿಯಲ್ಲಿ 74 ವರ್ಷಗಳ ಕಾಲ ಹಾಗೂ ಚಿತ್ರರಂಗದಲ್ಲಿ 64 ವರ್ಷಗಳ ಕಾಲ ನಟಿಸಿದ ಅಸಾಮಾನ್ಯ ಹಾಸ್ಯನಟರೀತ.  

ಕೆ.  ಹಿರಣ್ಣಯ್ಯ ಮಿತ್ರ ಮಂಡಲಿಯಲ್ಲಿ ಅ.ನ.ಕೃ. ಅವರು ಬರೆದ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಿಜ್ಜಳನ ಮಗನ ಪಾತ್ರಧಾರಿಯಾಗಿ ರಂಗಪ್ರವೇಶ ಮಾಡಿದ್ದು ಬುದ್ಧಿ ಬಂದ ನಂತರದ ಉಮೇಶ್ ಅವರ ಮೊದಲ ರಂಗಾನುಭವ. ಇದಕ್ಕೆ ಮೊದಲೇ ಅವರು ಹಲವಾರು ನಾಟಕಗಳಲ್ಲಿ ಬಾಲನಟನ ಪಾತ್ರವಹಿಸಿದ್ದರು. ಗುಬ್ಬಿ ವೀರಣ್ಣನವರ ಕಂಪನಿಯಲ್ಲೂ ಅವರಿಗೆ ಬಾಲನಟನ ಪಾತ್ರಗಳು ದೊರಕಿದ್ದವು. ದಶಾವತಾರ ನಾಟಕದಲ್ಲಿ ಇವರ ಪ್ರಹ್ಲಾದನ ಪಾತ್ರದ ಅಭಿನಯವನ್ನು  ಮೆಚ್ಚಿದ ಮಾಸ್ತಿಯವರು ಹತ್ತು ರೂಪಾಯಿ ಸಂಭಾವನೆ ನೀಡಿದ್ದರು.  ಗುಬ್ಬಿ ವೀರಣ್ಣನವರು ಇವರು ಬಾಲ್ಯದಲ್ಲಿದ್ದಾಗ ರಂಗ ಶಿಕ್ಷಣ ಕೊಡುತ್ತ ಅಭಿನಯವನ್ನು ಕಲಿಸಿದ ಗುರುಗಳು. ಎಂ.ಸಿ.ಮಹಾದೇವ ಸ್ವಾಮಿಯವರ ಕನ್ನಡ ಥಿಯೇಟರ್ಸ್  ಕಂಪನಿಯಲ್ಲೂ ಉಮೇಶ್ ಬಾಲನಟನಾಗಿ ಪಾತ್ರವಹಿಸಿದ್ದರು.

ಉಮೇಶರಿಗೆ ನಟನೆಯ ಜೊತೆಗೆ ಹಲವಾರು ವಾದನ ಕಲೆಗಳೂ ಕರಗತವಾಗಿದ್ದವು.  ಮಾಸ್ಟರ್‌ ಹಿರಣ್ಣಯ್ಯನವರ ಕಂಪನಿಯಲ್ಲಿ ಪಿಯಾನೋ ವಾದಕರಾಗಿ, ಕುಂಚಕಲಾವಿದರಾಗಿ, ಎನ್. ಶ್ರೀಕಂಠ ಮೂರ್ತಿಗಳ ನಾಟಕ ಕಂಪನಿಯಲ್ಲಿ ಹಾರ್ಮೋನಿಯಂ ವಾದಕರಾಗಿ ಉಮೇಶ್  ಖ್ಯಾತಿ ಗಳಿಸಿದ್ದರು.  ಅವರು ಹಾಡಬಲ್ಲವರಾಗಿದ್ದರು ಕೂಡಾ.   1959ರಲ್ಲಿ ಅಭಿನಯಿಸಿದ್ದ  ಚಂದ್ರಹಾಸನ ಪಾತ್ರ ಪಡೆದ ಜನಮೆಚ್ಚುಗೆಯಿಂದ,   ಬಿ. ಆರ್‌.ಪಂತುಲು ಅವರ   ‘ಮಕ್ಕಳ ರಾಜ್ಯ’ ಚಲನಚಿತ್ರದ ಪ್ರಧಾನ ಪಾತ್ರಕ್ಕೆ ಆಯ್ಕೆಯಾದರು.   ಇವರನ್ನು ಹೀಗೆ ಆಯ್ಕೆಮಾಡಿದವರು ಅಂದಿನ ದಿನದಲ್ಲಿ ಪಂತುಲು ಅವರ ಸಹಾಯಕರಾಗಿದ್ದ ಎಸ್. ಆರ್ ಪುಟ್ಟಣ್ಣ ಕಣಗಾಲರು.  ಈ ಮಧ್ಯೆ ನಾಟಕಕಾರ ಎಚ್.ಕೆ. ಯೋಗಣ್ಣವರ ಉದಯ ಕಲಾ ನಾಟಕ ಮಂಡಲಿಯಲ್ಲಿ ಇವರು ಕೆಲ ಕಾಲ ನಟನಾ ವೃತ್ತಿಯಲ್ಲಿದ್ದರು.

ಮುಂದೆ 1974ರಲ್ಲಿ ಉಮೇಶ್,  ಪುಟ್ಟಣ್ಣ ಕಣಗಾಲರ ‘ಕಥಾ ಸಂಗಮ’ ಚಲನಚಿತ್ರದ ತಿಮ್ಮರಾಯಿ ಪಾತ್ರಕ್ಕೆ  ಆಯ್ಕೆಯಾದರು.  ಇದಾದ ನಂತರ ಅವರ  ಚಿತ್ರರಂಗದ ನಂಟು ಬೆಳೆಯುತ್ತಾ ಬಂದಿತು. ಗೋಲ್ ಮಾಲ್ ರಾಧಾಕೃಷ್ಣ, ಗುರು ಶಿಷ್ಯರು ಮುಂತಾದ ಚಿತ್ರಗಳಿಂದ ಅವರ ಜೀವಿತ ವರ್ಷದ ಕೊನೆಯವರೆಗಿನ ಅವರ ಪಾತ್ರಗಳನ್ನು ಮೆಚ್ಚದಿರುವವರೇ ಇಲ್ಲ.  ಅವರು ಅಜ್ಜಿ ಪಾತ್ರದಲ್ಲೂ ನಟಿಸಿದ್ದಾರೆ. 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಉಮೇಶರದ್ದು. ತಿಮ್ಮರಾಯಿ ಪಾತ್ರಕ್ಕೆ ಉತ್ತಮ ಪೋಷಕನಟ ಪ್ರಶಸ್ತಿ, 1994ರಲ್ಲಿ ನಾಟಕ ಅಕಾಡಮಿ ಪ್ರಶಸ್ತಿ, 1997ರಲ್ಲಿ ಮಹಾನಗರ ಪಾಲಿಕೆ ಪ್ರಶಸ್ತಿ, ಆತ್ಮಚರಿತ್ರೆ ‘ಬಣ್ಣದ ಘಂಟೆ’ಗೆ ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಹಲವಾರು  ಗೌರವಗಳು ಉಮೇಶರನ್ನು ಅರಸಿಬಂದಿದ್ದವು.  ಉಮೇಶರ 50 ವರ್ಷದ ಚಿತ್ರರಂಗದಲ್ಲಿನ ಕಾಯಕವನ್ನು ಚಿತ್ರರಂಗ ಗೌರವಿಸಿತ್ತು.  ಈಗ ಅದಕ್ಕೆ ಮುಂದೆ ಒಂದೂವರೆ ದಶಕ ಸೇರಿತ್ತು. 

ಉಮೇಶರು ಹಲವಾರು ಪತ್ರಿಕೆಗಳ ಅಂಕಣ ಬರಹಗಾರರೂ ಆಗಿದ್ದರು. ಅಮ್ಮಾವರ ಆಜ್ಞೆ, ಎಲ್ಲರೂ ನಮ್ಮವರೇ ಉಮೇಶರು ರಚಿಸಿದ ನಾಟಕಗಳು. ಕಿರುತೆರೆಗೆ ಬರೆದು ನಿರ್ದೇಶಿಸಿದ್ದು ನಮ್ಮೂರಲ್ಲೊಂದು ನಾಟಕ, ಸಮಸ್ಯೆಯ ಸರಮಾಲೆ, ರಿಜಿಸ್ಟರ್‌ ಫೋಸ್ಟ್, ಅಂಚು-ಸಂಚು, ಗೌಡತಿ ಗೌರಮ್ಮ, ಸಂಸಾರದಲ್ಲಿ SOMEಕ್ರಾಂತಿ, ಜೋಕ್ಸ್‌ಫಾಲ್ಸ್, ಗಲಿಬಿಲಿ ಸಂಸಾರ ಮುಂತಾದುವು.

ಉಮೇಶ್ ಎಂದರೆ ಹಿರಿಯ ನಟರಿಗೂ ಗೌರವವಿತ್ತು.  ರಾಜಕುಮಾರ್ ಅವರ ಕಟ್ಟ ಕಡೆಯ ಚಿತ್ರಗಳವರೆಗೆ ಬಹುತೇಕ ಚಿತ್ರಗಳಲ್ಲಿ ಉಮೇಶ್ ನಟಿಸಿದ್ದರು.   ಒಮ್ಮೆ ಉಮೇಶರ ಹುಟ್ಟು ಹಬ್ಬ ಎಂದು ಅರಿತ ವಿಷ್ಣುವರ್ಧನ ಅವರು ಸಿನಿಮಾ ಸೆಟ್ಟಿನಲ್ಲೇ ಅವರ ಹುಟ್ಟುಹಬ್ಬ ಆಚರಿಸುವ ಏರ್ಪಾಡು ಮಾಡಿ ಈ ನಟನಿಗೆ ಗೌರವ ಸಲ್ಲುವಂತೆ ನಡೆದುಕೊಂಡರು.  “ಅಂದಿನ ಕಪ್ಪು ಬಿಳುಪು ಜಗತ್ತಿನಿಂದ ಇಲ್ಲಿಯವರೆಗಿನ  ಕನ್ನಡ ಚಿತ್ರರಂಗದ ಯಾತ್ರೆ ಅದ್ಬುತ. ಈ ಯಶಸ್ಸಿನ ಹಾದಿಯನ್ನು ನೋಡಿರುವ ನಾನೇ ಪುಣ್ಯವಂತ” ಎಂಬುದು ಉಮೇಶರ ಮಾತಾಗಿತ್ತು.  ಇಂತಹ ಪ್ರತಿಭಾವಂತ ಕಲಾವಿದರನ್ನು ನೋಡಿರುವ ನಾವೂ ಪುಣ್ಯವಂತರೇ.  

ಬದುಕಿನ ಬಂಡಿಗಾಗಿ ಹಿರಿಯವಯಸ್ಸಿನಲ್ಲೂ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಲೇಬೇಕಾದ ಅನಿವಾರ್ಯತೆ ಉಮೇಶ್ ಅಂತಹ ಕಲಾವಿದರಿಗಿತ್ತು ಎಂಬುದು ಮತ್ತೊಂದು ವಾಸ್ತವ ಜಗತ್ತನ್ನು ತೆರೆದಿಡುತ್ತದೆ. 

ಉಮೇಶರು ಇತ್ತೀಚಿನ ತಿಂಗಳುಗಳಲ್ಲಿ ಆಸ್ಪತ್ರೆ ವಾಸವನ್ನು ಅನುಭವಿಸುವಾಗಲೂ ನಾನು ಚೆನ್ನಾಗಿದ್ದೇನೆ ಚಿಂತಿಸದಿರಿ ಎಂದಿದ್ದ ಜೀವ.  ತನ್ನ ಬದುಕಿನ ಚಿಂತೆಗಳು ಅಪಾರ ಇದ್ದರೂ ಲೋಕಕ್ಕೆ ಒಲವು ನಲಿವು ಹಂಚಿದ ಈ ಜೀವ ಎಂದೆಂದಿಗೂ ಅಮರ. 

Respects to departed soul Great actor M.S. Umesh 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ