ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಧನಂಜಯ ಕುಂಬ್ಳೆ


 ಧನಂಜಯ ಕುಂಬ್ಳೆ


ಶಿಕ್ಷಣ ಕ್ಷೇತ್ರದಲ್ಲಿರುವ  ಡಾ.‍ ಧನಂಜಯ ಕುಂಬ್ಳೆ ಅವರು ಸಾಹಿತ್ಯಕೃಷಿ ಮತ್ತು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. 

ಧನಂಜಯ ಕುಂಬ್ಳೆಯವರು ಕಾಸರಗೋಡಿನ ಕುಂಬಳೆಯಲ್ಲಿ  1975ರ ಡಿಸೆಂಬರ್ 11ರಂದು ಜನಿಸಿದರು. ಪ್ರಸ್ತುತ ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ನಿವಾಸಿಯಾಗಿದ್ದಾರೆ. ಕಲ್ಲಿಕೋಟೆ ವಿಶ್ವವಿದ್ಯಾಲಯದಲ್ಲಿ ಬಿ. ಎ. ಪದವಿ, ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ‘ಅರುಣಾಬ್ಜ ಮತ್ತು ಕುಮಾರವ್ಯಾಸ: ತೌಲನಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್‌.ಡಿ ಗಳಿಸಿದ್ದಾರೆ. 

ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ, ಮೂಡುಬಿದಿರೆಯ ಆಳ್ವಾಸ್ ಪದವಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಧನಂಜಯ ಕುಂಬ್ಳೆಯವರು  ಈಗ  ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ.


ಧನಂಜಯ ಕುಂಬ್ಳೆಯವರ ಪ್ರಕಟಿತ ಕೃತಿಗಳಲ್ಲಿ 'ಮೊದಲ ಪಾಪ’, 'ನಾನು ಮತ್ತು ಆಕಾಶ’, 'ಹಾಡು ಕಲಿತ ಹಕ್ಕಿಗೆ’, 'ಹಣತೆ ಹಾಡು' (ಕವನ ಸಂಕಲನಗಳು); 'ಕಜಂಪಾಡಿ ರಾಮ’, 'ಪ್ರಗತಿಶೀಲ ಲೇಖಕ ನಿರಂಜನ', 'ಬಹುಭಾಷಾ ವಿದ್ವಾಂಸ ವೆಂಕಟರಾಜ ಪುಣಿಂಚತ್ತಾಯ' (ವ್ಯಕ್ತಿಚಿತ್ರ ಕೃತಿಗಳು); 'ಕುಮಾರವ್ಯಾಸನ ಕಾಲ ನಿರ್ಣಯ - ಹೊಸಬೆಳಕು’ , 'ಐತಿಹ್ಯಗಳು ಕಟ್ಟಿಕೊಡುವ ತುಳುನಾಡಿನ ಇತಿಹಾಸ’, 'ಅರುಣಾಬ್ಜ ಮತ್ತು ಕುಮಾರವ್ಯಾಸ' ತೌಲನಿಕ ಅಧ್ಯಯನ, 'ಷಟ್ಪದಿ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು' (ಸಂಶೋಧನ ಕೃತಿಗಳು)  ಮುಂತಾದವು ಸೇರಿವೆ.  ಇವರು 'ನವೀನ’ ಎಂಬ ಕನ್ನಡದ ಅಂಚೆ ಕಾರ್ಡು ಪತ್ರಿಕೆಯ ಸಂಪಾದಕರಾಗಿದ್ದರು. ಪಾಲ್ಗಡಲ ಮುತ್ತುಗಳು, ಸಿರಿಗನ್ನಡ, ಯಕ್ಷಗಾನ ಪ್ರಸಂಗಗಳು, ಪಳಕಳ ಸೀತಾರಾಮ ಭಟ್ಟರ ಮಕ್ಕಳ ಕತೆಗಳ  ಸಮಗ್ರ ಸಂಪುಟಗಳು, ಸಾಧಕ ಸಂಭ್ರಮ, ಕನಕದಾಸರ ಕೀರ್ತನೆಗಳು, Rethinking Education in contemporary India ಮುಂತಾದ ಕೃತಿಗಳನ್ನು ಇವರು ಸಂಪಾದಿಸಿದ್ದಾರೆ. ಕೆಲಕಾಲ ಕನ್ನಡಪ್ರಭ, ಪ್ರಜಾವಾಣಿ ಪತ್ರಿಕೆಗಳಲ್ಲಿ ಅರೆಕಾಲಿಕ ಪತ್ರಕರ್ತರಾಗಿದ್ದ ಇವರು ಹೊಸದಿಗಂತ ಪತ್ರಿಕೆಯಲ್ಲಿ 'ನಿಸ್ವನ' ಎಂಬ ಅಂಕಣವನ್ನು ಮೂಡಿಸಿದ್ದರು.

ಧನಂಜಯ ಕುಂಬ್ಳೆಯವರು ಅನೇಕ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.  ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾಗಿ, ಪ್ರಸಾರಾಂಗದ ಸಹಾಯಕ ನಿರ್ದೇಶಕರಾಗಿ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ರಾಣಿ ಅಬ್ಬಕ್ಕ ಅಧ್ಯಯನ ಪೀಠ ಹಾಗೂ ಎನ್.ಜಿ ಪಾವಂಜೆ ಲಲಿತಕಲಾ ಪೀಠಗಳ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.   ಬೆಂಗಳೂರಿನಲ್ಲಿರುವ ಕರ್ನಾಟಕ ಸರಕಾರದ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ನಾಮನಿರ್ದೇಶಿತ ಸದಸ್ಯರಾಗಿ, ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.  ಕುಪ್ಪಂ ದ್ರಾವಿಡ ವಿವಿ, ಕೇರಳದ ಕಣ್ಣೂರು ವಿವಿ, ಶಿವಮೊಗ್ಗ ಕುವೆಂಪು ವಿವಿ, ಮಂಗಳೂರು ವಿವಿಯ ಕನ್ನಡ ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಿವಿಯ ಸಾಂಸ್ಕೃತಿಕ ನೀತಿ ಸಮಿತಿಯ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ನುಡಿಸಿರಿ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯಾಗಿ ಹತ್ತು ಸಮ್ಮೇಳನಗಳ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾಗಿದ್ದಾರೆ. ಅನೇಕ ವಿಚಾರಗೋಷ್ಠಿ, ಉಪನ್ಯಾಸ, ಕವಿಗೋಷ್ಠಿ, ಜಿಲ್ಲಾ, ತಾಲೂಕು ಸಾಹಿತ್ಯ ಸಮ್ಮೇಳನ  ಮುಂತಾದ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.

ಧನಂಜಯ ಕುಂಬ್ಳೆಯವರಿಗೆ ಪೇಜಾವರ ಸದಾಶಿವ ರಾವ್ ರಾಜ್ಯಮಟ್ಟದ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಪುನರೂರು ಟ್ರಸ್ಟ್ ನ ಮುದ್ದಣ ಕಾವ್ಯ ಪ್ರಶಸ್ತಿ - 2011, 2020ನೇ ಸಾಲಿನ ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿವೆ.

ಡಾ.‍ ಧನಂಜಯ ಕುಂಬ್ಳೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Dhananjaya Kumble Kumble 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ