ಮಧುರಾ ಕರ್ಣಮ್
ಮಧುರಾ ಕರ್ಣಂ
ಮಧುರಾ ಕರ್ಣಮ್ ಅವರು ಬಹುಮುಖಿ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ಡಿಸೆಂಬರ್ 10, ಮಧುರಾ ಕರ್ಣಮ್ ಅವರ ಜನ್ಮದಿನ. ಇವರು ಜನಿಸಿದ್ದು ಬೆಳಗಾವಿಯಲ್ಲಿ. ವಿಜ್ಞಾನದಲ್ಲಿ ಬಿ.ಎಸ್ಸಿ. ಹಾಗೂ ಎಲ್.ಎಲ್.ಬಿ. ಪದವಿಗಳನ್ನು ಗಳಿಸಿದ ಇವರಿಗೆ ಓದುವ ದಿನಗಳಲ್ಲೇ ಸಾಹಿತ್ಯಾಭಿರುಚಿ ಜೊತೆಗೂಡಿತ್ತು.
ಮಧುರಾ ಕರ್ಣಮ್ ಅವರು ದೆಹಲಿಯಲ್ಲಿ ನೆಲೆಸಿದ್ದ ಸಮಯದಲ್ಲಿ ದೆಹಲಿ ಕರ್ನಾಟಕ ಸಂಘದ 'ಅಭಿಮತ' ಮಾಸಪತ್ರಿಕೆಯ ಮೂಲಕ ಅವರ ಕತೆಗಳು ಪ್ರಕಟವಾಗತೊಡಗಿದವು. ಮುಂದೆ ಬೆಂಗಳೂರಿನಲ್ಲಿ ನೆಲೆಸಿದ ಮೇಲೆ ಇವರ ಸಾಹಿತ್ಯಕೃಷಿಗೆ ವ್ಯಾಪಕ ವಿಸ್ತಾರ ದೊರಕಿತು.
ಬಹುಮುಖಿ ಬರಹಗಾರ್ತಿಯಾದ ಮಧುರಾ ಕರ್ಣಮ್ ಅವರ ಹೆಚ್ಚಿನ ಬರಹಗಳು ಕಥೆ ಮತ್ತು ನವಿರು ಹಾಸ್ಯ ರೂಪಕಗಳಲ್ಲಿದ್ದು ಇವು ಸುಮಾರು 200 ರಷ್ಟು ಸಂಖ್ಯೆಯಲ್ಲಿ ಕನ್ನಡದ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಕಂಗೊಳಿಸಿ ಅನೇಕ ಬಹುಮಾನಗಳನ್ನೂ ಗಳಿಸಿವೆ.
ಮಧುರಾ ಕರ್ಣಮ್ ಅವರ ಬರಹಗಳು ಹಾಸ್ಯಲೇಖನ - ಪ್ರಬಂಧ - ಕಥೆಗಳ ಸಂಕಲನಗಳಾಗಿ, ಕಾದಂಬರಿಗಳಾಗಿ ಹಾಗೂ ಜೀವನ ಚರಿತ್ರೆ ಕೃತಿಗಳಾಗಿ ಪ್ರಕಟಗೊಂಡಿವೆ. ಇವುಗಳಲ್ಲಿ ಮರಳಿ ಬಂದನಾ ವಸಂತ, ಅವಳ ಭಾವಗಳ ಸುತ್ತ, ಋಣ, ಗುಂಡ ಪುರಾಣ, ಜೀವಧಾರಾ, ಆಕ್ರಮಣ, ಆಲದ ನೆರಳು, ಅವತಾರ, ಒಳಗಣ ಜ್ಯೋತಿ, ಬುವಿಯ ಚುಕ್ಕೆ, ಸುಪ್ತಸಾಗರ, ತಿರುವುಗಳು, ದಡ, ಮಲ್ಲಿಗೆ ಬಳ್ಳಿಯ ಅನುಬಂಧಗಳು ಪ್ರಬಂಧಗಳ ಸಂಕಲನ ಮುಂತಾದವು ಸೇರಿವೆ.
ಮಧುರಾ ಕರ್ಣಮ್ ಅವರು ಅನೇಕ ಕವಿಗೋಷ್ಠಿಗಳಲ್ಲಿ ಕವಿತಾವಾಚನವನ್ನು ಮಾಡಿದ್ದಾರೆ. ಆಕಾಶವಾಣಿಯಲ್ಲಿ ಅನೇಕ ಕತೆ ಮತ್ತು ಹಾಸ್ಯದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ. ದೂರದರ್ಶನದಲ್ಲಿ ಇವರ ಸಂದರ್ಶನ ಮತ್ತು ಅಡುಗೆ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ರಂಗೋಲಿ ಕಲೆಯಲ್ಲಿ ಪ್ರವೀಣರಾದ ಇವರು ಅನೇಕ ರಾಜ್ಯಮಟ್ಟದ ಬಹುಮಾನಗಳನ್ನು ಗಳಿಸಿದ್ದಾರೆ.
ಮಧುರಾ ಕರ್ಣಮ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ನಿರುಪಮಾ ದತ್ತಿ ಪ್ರಶಸ್ತಿ, ತ್ರಿವೇಣಿ ಪ್ರಶಸ್ತಿ, ಮುಂಬೈನ ಸುಶೀಲಾಬಾಯಿ ಶೆಟ್ಟಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ.ಇಂದಿರಾ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ, ಲೇಖಿಕಾ ಸಾಹಿತ್ಯ ವೇದಿಕೆ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಆತ್ಮೀಯ ಸರಳ ಸಹೃದಯಿ, ಸ್ನೇಹಮಯಿ ಸಾಧಕರಾದ ಮಧುರಾ ಕರ್ಣಮ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Madhura Karnam 🌷🌷🌷

ಕಾಮೆಂಟ್‌ಗಳು