ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪದ್ಮಪ್ರಸಾದ್ ಎಸ್.ಪಿ.


 ಪದ್ಮಪ್ರಸಾದ್ ಎಸ್.ಪಿ.


ಡಾ. ಎಸ್.ಪಿ. ಪದ್ಮಪ್ರಸಾದ್‌ ಜಾನಪದ, ಕಾವ್ಯ, ನಾಟಕ, ವಿಮರ್ಶೆ, ಪ್ರವಾಸ ಕಥನ, ಸಂಪಾದನೆ..  ಹೀಗೆ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯಕೃಷಿ ಮಾಡಿ ಹೆಸರಾಗಿದ್ದಾರೆ.

ಪದ್ಮಪ್ರಸಾದ್ ಅವರು 1949ರ ಡಿಸೆಂಬರ್ 9ರಂದು  ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಜನಿಸಿದರು. ತಂದೆ ಎಸ್.ಪಿ. ಪಾಯಪ್ಪಶೆಟ್ಟಿ.  ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣವನ್ನು ಹೊಸನಗರದಲ್ಲಿ ಪಡೆದು ಮುಂದೆ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿಯನ್ನು,  ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿಯನ್ನು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂಧ  ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ. ಗಳಿಸಿದರು. 

ಪದ್ಮಪ್ರಸಾದ್ ಅವರು ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.  ಜಾನಪದ, ಕಾವ್ಯ, ನಾಟಕ, ವಿಮರ್ಶೆ, ಕಥೆ, ಲಲಿತ ಪ್ರಬಂಧ, ಕಾದಂಬರಿ, ಜೀವನ ಚರಿತ್ರೆ, ಪ್ರವಾಸ, ಗ್ರಂಥಸಂಪಾದನೆ ಹೀಗೆ ಬಹು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳ ರಚನೆ ಮಾಡಿದ್ದಾರೆ. ಜಾನಪದ ಮತ್ತು ಜೈನಕಥಾ ಸಾಹಿತ್ಯ, ಹಾಡ್ಹೇಳೆ ತಂಗಿ ದನಿ ಎತ್ತಿ, ಜೈನ ಜನಪದಗೀತೆಗಳು ಮೊದಲಾದ ಜಾನಪದ ಸಾಹಿತ್ಯ ಕೃತಿಗಳು; ಕೆರೆಗೆ ಹಾರ, ನಗೆ ಚೆಲ್ಲಿದ ಹುಡುಗಿ, ಜಲಿಯನ್ ವಾಲಾ ಬಾಗ್, ಮೊದಲಾದ ನಾಟಕಗಳು; ನನ್ನ ಜನ, ನನ್ನ ಕಿಟಕಿಯ ಆಚೆ, ಆರೋಹಣ, ದ್ರಾಕ್ಷಿ ಗೊಂಚಲು, ದೀಪಾವಳಿಯ ಬಳಿಕ ಮೊದಲಾದ ಕವಿತಾ ಸಂಕಲನಗಳು; ಬೃಂದಾವನ, ಮಗುವೆಂಬ ಮುದ್ದು ಕವಿತೆ ಮುಂತಾದ ಲಲಿತ ಪ್ರಬಂಧ ಸಂಕಲನಗಳು; ಶೈಕ್ಷಣಿಕ ಸಂಶೋಧನೆ, ಶಾಲಾ ನಿರ್ವಹಣೆ, ಭಾರತದಲ್ಲಿ ಪ್ರೌಢ ಶಿಕ್ಷಣ, ಉದಯೋನ್ಮುಖ ಭಾರತದಲ್ಲಿ ಶಿಕ್ಷಣ, ಶಿಕ್ಷಣ ಮತ್ತು ರಾಷ್ಟ್ರೀಯ ಕಾಳಜಿಗಳು ಮೊದಲಾದ ಶೈಕ್ಷಣಿಕ ಕೃತಿಗಳು; ಪಾಯಣ್ಣ ಕವಿಯ ಪ್ರಾಚೀನ ಜೈನ ನಾಟಕಗಳು, ಆಧುನಿಕ ಜೈನ ಪುಣ್ಯ ಪುರುಷರು ಮಾಲಿಕೆಯಲ್ಲಿ ಎಂಟು ಗ್ರಂಥಗಳೂ ಸೇರಿ ಹಲವು ಸಂಪಾದಿತ ಕೃತಿಗಳು; ಸಿ.ಪಿ.ಕೆ. ಒಂದು ಕಾವ್ಯಾಭ್ಯಾಸ, ಕಮಲಾ ಹಂಪನಾ ಒಂದು ಸಾಂಸ್ಕೃತಿಕ ಅಧ್ಯಯನ, ಆಸ್ವಾದನೆ ನಿಕಷ ಮೊದಲಾದ ವಿಮರ್ಶಾ ಕೃತಿಗಳು; ಜೀವನ ಚರಿತ್ರೆ, ಭಾರತ ಮತ್ತು ವಿದೇಶಗಳಲ್ಲಿನ ವ್ಯಾಪಕ ಪ್ರವಾಸದ ಕುರಿತಾದ ಸಾಂಸ್ಕೃತಿಕ ಅನುಭವ  ಕೃತಿಗಳು ಹೀಗೆ ಇದುವರೆಗೆ ಇವರ 84 ವಿದ್ವತ್ಪೂರ್ಣ ಗ್ರಂಥಗಳು ಪ್ರಕಟಗೊಂಡಿವೆ. ಇವರ "ಕನ್ನಡ ಜೈನ ಸಾಹಿತ್ಯ ಚರಿತ್ರೆ"ಯ ಆರು ಸಂಪುಟಗಳಲ್ಲಿ,  ಕ್ರಿ. ಶ. 6ನೇ ಶತಮಾನದಿಂದ 21 ನೇ ಶತಮಾನದ ವರೆಗೆ ಜೈನ ಕೃತಿಕಾರರು ಕನ್ನಡ ಜ್ಞಾನ ಕೋಶಕ್ಕೆ ಕೊಟ್ಟ ಕೊಡುಗೆಯ ಬಗ್ಗೆ 3800 ಪುಟಗಳಷ್ಟು ವಿಮರ್ಶಾತ್ಮಕ ಲೇಖನಗಳಿವೆ.

ಪದ್ಮಪ್ರಸಾದ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ ಸೇರಿ ಅನೇಕ ಗೌರವಗಳು ಸಂದಿವೆ.   ‘ಸುವರ್ಣ ಪದ್ಮ’, ‘ಸತ್ವ’  ಮುಂತಾದ ಅಭಿನಂದನ ಗ್ರಂಥಗಳು ಸಂದಿವೆ. 

ಪೂಜ್ಯ ವಿದ್ವಾಂಸರೂ, ಹಿರಿಯ ಸಾಧಕರೂ ಆದ ಡಾ. ಎಸ್.ಪಿ. ಪದ್ಮಪ್ರಸಾದ್‌ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

On the birthday of scholar and writer Dr S. P.  Padmaprasad 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ