ಮತ್ಸ್ಯಗಂಧಿ
ಮತ್ಸ್ಯಗಂಧಿ
ಯಮುನಾ ನದಿಯ ಅಂಬಿಗರ ಮುಖಂಡ ಉಚ್ಜಿಶ್ರವಸ್ ಎಂಬಾತ ಮನೆಯಲ್ಲಿ ಯಾರೊಂದಿಗೊ ಮಾತನಾಡುತ್ತಿದ್ದ ಬಲಿಷ್ಠವಾದ ಮೀನೊಂದನ್ನು ತಂದ ಅಂಬಿಗರು ಅಡಿಗೆಗೆ ಅದನ್ನು ಸೀಳಿದಾಗ ಆ ಮೀನಿನ ಗರ್ಭದಲ್ಲಿ ಒಂದು ಹೆಣ್ಣು ಮಗು, ಒಂದು ಗಂಡು ಮಗು. ಅವು ಅಳಲಾರಂಭಿಸಿದಾಗ ಹೊರಗಿದ್ದ ಉಚ್ಚಿ ಶ್ರವಸ್ಸಿಗೆ ಆಶ್ಚರ್ಯ. ಅಡಿಗೆ ಮನೆಯಿಂದ
ಮಕ್ಕಳ ಅಳು ಕೇಳಿಬಂದರೆ ಅಪುತ್ರಕನಾದವನಿಗೆ ಅಚ್ಚರಿಯಾಗದಿದ್ದೀತೆ? ಉತ್ಸುಕತೆ ತಾಳಲಾರದೆ ಅವನೇ ಅಡಿಗೆ ಮನೆಗೆ ನುಗ್ಗಿದ. ದಾಶರಾಜನ (ಉಚ್ಚಿ ಶ್ರವಸ್ಸು) ಮುಖ ನೋಡಿ ಅಂಬಿಗರಿಗೆ ಮಹದಾನಂದವಾಯಿತು. ತಮ್ಮ ಒಡೆಯನಿಗೆ ಎರಡು ಮಕ್ಕಳು ಸಿಕ್ಕಂತಾಯಿತಲ್ಲ ಎಂಬ ಧನ್ಯತಾಭಾವದ ಉದ್ಗಾರವನ್ನು ತೆಗೆದರು. ಮಕ್ಕಳನ್ನು ಎತ್ತಿಕೊಂಡು ಹಿಗ್ಗಿದ ದಾಶರಾಜ. ಇಂಥ ಆಶ್ಚರ್ಯಗಳು ಅವನಿಗೆ ಹೊಸದೇನಲ್ಲವಲ್ಲ ಮಕ್ಕಳಿಬ್ಬರನ್ನೂ ಪತ್ನಿಯ ಕೈಗೆ ಕೊಟ್ಟು ರಾಜಪುರೋಹಿತರಿಗೆ ಹೇಳಿಕಳಿಸಿದ. ರಾಜಪುರೋಹಿತರಿಗೆ ಮಕ್ಕಳನ್ನು ನೋಡಿದ ಕೂಡಲೇ ಮುಖ ಅರಳಿತು. ಹಿಂದು-ಮುಂದುಗಳನ್ನು ಸರಳವಾಗಿ ನಿರೂಪಿಸಬಲ್ಲ ಪುರೋಹಿತರ ಹೇಳಿದರು:
“ದಾಶರಾಜ, ನೀನು ಪುಣ್ಯವಂತ. ಈ ಮಕ್ಕಳು ಉಪರಿಚರ ವಸುವಿನ ಸತ್ತ್ವಸಂಜಾತರು, ಅದ್ರಿಕೆ ಎಂಬ ಅಪ್ಸರೆ ಬ್ರಹ್ಮನ ಶಾಪದಿಂದ ಮೀನಾಗಿ ಹುಟ್ಟಿದಳು. ಗಗನ ಸಂಚಾರಿಯಾಗಿದ್ದ ಉಪರಿಚರ ವಸುವಿನ ವೀರ್ಯವು ಈಕೆಯ ಗರ್ಭದಲ್ಲಿ ಸೇರಿ ಹೀಗೆ ಎರಡು ಮಕ್ಕಳಾಗಿ ಬೆಳೆದಿವೆ.”
ಉಪರಿಚರ ವಸು? ಹಾಗೆಂದರೆ?”
"ಅವನೊಬ್ಬ ವಸು, ಕೃತಿ ಎಂಬ ಚಂದ್ರವಂಶದ ಪುರುಷನ ಮಗ. ಇಂದ್ರನ ಸಲಹೆಯಂತೆ ಉಗ್ರ ತಪಸ್ಸಿಗೆ ಕುಳಿತ ಮಹಾನುಭಾವ ಈತ. ಇಂದ್ರನೆ ಇವನಿಗೆ ಒಂದು ವಿಮಾನವನ್ನು ದಯಪಾಲಿಸಿದ್ದ. ಅದರಲ್ಲಿ ಕುಳಿತು ಆಕಾಶದಲ್ಲಿ ಸಂಚಾರ ಮಾಡುತ್ತಿದ್ದುದರಿಂದ ಈತನಿಗೆ "ಉಪರಿಚರ ವಸು" ಎಂದು ಹೆಸರಾಯಿತು.”
ದಾಶರಾಜ ನಕ್ಕ. “ರಾಜಪುರೋಹಿತರೇ, ಅರಮನೆಯಲ್ಲಿ ಹೇಳುವಂತೆ ಹೇಳಿದರೆ ಎಲ್ಲರಿಗೂ ಅರ್ಥವಾದೀತೇ? ಇಲ್ಲಿ ನನ್ನ ಪತ್ನಿ, ಸಹೋದರರು, ಸೇವಕರು ಎಲ್ಲ ಕೇಳುತ್ತಿದ್ದಾರೆ. ಆದುದರಿಂದ ದಯವಿಟ್ಟು ವಿವರವಾಗಿ ತಿಳಿಸಿ. ಅದ್ರಿಕೆ ಎಂಬ ಶಾಪಗ್ರಸ್ತ ಮಹಿಳೆ ಈ ಗರ್ಭ ನುಂಗಿದ್ದು ಹೇಗೆ ...??
“ಆಯಿತಪ್ಪ. ಈ ವಸು ಚೇದಿ ದೇಶದ ದೊರೆ. ಅವನಿಗೆ ಇಂದ್ರನ ಕೃಪೆಯಿಂದ ಒಂದು ವಿಮಾನ ದೊರಕಿತ್ತು. ವೈಜಯಂತಿ ಎಂಬ ದೇವಕಮಲದ ಹಾರ ಪ್ರಾಪ್ತವಾಗಿತ್ತು ವಜ್ರ ಕವಚದಂತೆ ಆ ಹಾರವು ಅವನ ದೇಹವನ್ನು ಶಸ್ತ್ರಾಸ್ತ್ರಗಳು ನಾಟದಂತೆ ಕಾಪಾಡುತ್ತಿದ್ದವು. ಅಷ್ಟೇ ಅಲ್ಲದೆ ಅವನ ಬಳಿ ಬಯಸಿದುದನ್ನು ನೀಡುವ ವೈರಣದಂಡವೂ ಇತ್ತು.
ಒಮ್ಮೆ ತಂದೆಯ ತಿಥಿಯ ದಿನ ಜಿಂಕೆಯ ಮಾಂಸವನ್ನು ಬೇಟೆಯಾಡಿ ತರಲು ಹೊರಟ. ತನ್ನ ಕೊನೆಯ ಹೆಂಡತಿ ಗಿರಿಕೆಯ ನೆನಪು ಅವನನ್ನು ಬಾಧಿಸುತ್ತಿತ್ತು ದಣಿದು ಒಂದೆಡೆ ಮಲಗಿದರೆ ಅಲ್ಲೂ ಗಿರಿಕೆಯೆ ಬಗೆಗೇ ಸ್ವಪ್ನ. ಆಗ ಸ್ಚಲನವಾದ ವೀರ್ಯವನ್ನು ಒಂದು ಎಲೆಯಲ್ಲಿ ಮಡಚಿಟ್ಟು ಒಂದು ಗಿಡುಗನ ಮೂಲಕ ಅದನ್ನು ಗಿರಿಕೆಗೆಂದು ಕಳಿಸಿದ. ದಾರಿಯಲ್ಲಿ ಆ ಗಿಡುಗ ಯಮುನಾ ನದಿಯನ್ನು ದಾಟುತ್ತಿದ್ದಾಗ ಇನ್ನೊಂದು ಗಿಡುಗ ಅದರ ಮೇಲೆರಗಿತು. ಆಗ ಆ ಎಲೆ ನದಿಗೆ ಬಿದ್ದು ನಾನು ಹೇಳಿದ ಮೀನಿನ ಗರ್ಭವನ್ನು ಸೇರಿತು. ಆ ಮೀನೇ ನಿನ್ನ ಅಂಬಿಗರಿಗೆ ಬಲೆಯಲ್ಲಿಸಿಕ್ಕಿ ಬಿದ್ದ ಮೀನು. ಗೊತ್ತಾಯಿತೇ...?”
ಅರ್ಥವಾಯಿತು ಎಂಬಂತೆ ಎಲ್ಲ ತಲೆಯಾಡಿಸತೊಡಗಿದರು. ದಾಶರಾಜನಿಗೆ ಆ ಮುದ್ದು ಮಕ್ಕಳನ್ನು ರಮಿಸುತ್ತಿರುವ ತನ್ನ ಪತ್ನಿಯ ಸಡಗರವನ್ನು ಕಂಡು ಎರಡು ಮಕ್ಕಳನ್ನೂ ತನ್ನ ಮನೆಯಲ್ಲಿಯೇ ಇರಿಸಿಕೊಳ್ಳುವ ಆಲೋಚನೆ ಬಂದಿತು.
ವಿನಯದಿಂದ:
“ಈ ಎರಡು ಮಕ್ಕಳನ್ನೂ ನಾನು ಪ್ರೀತಿಯಿಂದ ಸಾಕಿಕೊಳ್ಳಲೆ?'' ಎಂದು ಕೇಳಿದ. ರಾಜಪುರೋಹಿತರು ಮೌನ ವಹಿಸಿ ಒಮ್ಮೆ ದಾಶರಾಜನ ಪತ್ನಿಯ ಕಡೆ ನೋಡಿದರು. ಆಕೆ ಕಣ್ಣುಗಳಲ್ಲೇ ಗಂಡನೊಂದಿಗೆ ಮಾತಾಡಿ ಆಗಿತ್ತು. ಈಗ ಎರಡು ಮಕ್ಕಳನ್ನು ಅಕ್ಕರೆಯಿಂದ ಎದೆಗವಚಿಕೊಂಡು ಆಸೆಗಣ್ಣುಗಳಿಂದ ಪುರೋಹಿತರ ಕಡೆಗೇ ನೋಡುತ್ತಿದ್ದಳು.
“ಭದ್ರೇ, ನಿನ್ನ ಹಿಗ್ಗು ನನಗೆ ಅರ್ಥವಾಗುತ್ತದೆ. ಆದರೆ ನೀನು ಎರಡು ಮಕ್ಕಳನ್ನೂ ಬಯಸುವುದು ಸರಿಯಲ್ಲ. ನಿನ್ನಂತೆ ಮಕ್ಕಳಿಗಾಗಿ ಹಂಬಲಿಸುತ್ತಿರುವ ನತದೃಷ್ಟನೊಬ್ಬನಿಗೆ ಒಂದು ಮಗುವನ್ನು ಪ್ರದಾನ ಮಾಡು. ಉಭಯರಿಗೂ ಹಿತವಾಗುತ್ತದೆ. ಇಬ್ಬರು ಮಕ್ಕಳೂ ಚಂದ್ರವಂಶವನ್ನು ಬೆಳಗಿಸುತ್ತಾರೆ."
ತಮ್ಮ ಮಾತೆಂದರೆ ವೇದವಾಕ್ಯ. ಹಾಗಿದ್ದಲ್ಲಿ ನಾನು ಈ ಹೆಣ್ಣು ಮಗುವನ್ನು ಇರಿಸಿಕೊಳ್ಳುತ್ತೇನೆ. ನನ್ನ ಕುಲಕಸುಬನ್ನೆಲ್ಲ ಹೇಳಿಕೊಟ್ಟು ಗಂಡು ಮಗುವಿನಂತೆಯೇ ಶ್ರದ್ಧೆಯಿಂದ ಬೆಳಸುತ್ತೇನೆ. ಈ ಗಂಡು ಮಗುವನ್ನು ತಾವೇ ಯೋಗ್ಯರೊಬ್ಬರಿಗೆ ಕೊಡುವುದು ಲೇಸು.”
“ಮತ್ಸ್ಯ ದೇಶದ ರಾಜನೂ ಸಂತಾನವಿಲ್ಲದೆ ಸಂಕಟಪಡುತ್ತಿದ್ದಾನೆ. ಅಲ್ಲಿ ಮಗು ಬೆಳೆಯಲಿ.....”
ದಾಶರಾಜನ ಮಗಳು ಸತ್ಯವತಿ ಹೆತ್ತ ತಾಯಿಯ ಸಂಸರ್ಗದಿಂದ "ಮತ್ಸ್ಯಗಂಧಿ' ಎನಿಸಿಕೊಂಡಳು. ಮೀನು ಹಿಡಿಯುವುದು ಅವಳಿಗೆ ತುಂಬ ಪ್ರಿಯವಾದ ವೃತ್ತಿಗಳಾಗಿದ್ದುವು. ಉಡಿಯಲ್ಲಿ ಮೀನು ತುಂಬಿಸಿಕೊಳ್ಳುತ್ತಿದ್ದುದರಿಂದ ಗೆಳತಿಯರೆಲ್ಲ ಅವಳನ್ನು ಮತ್ಸ್ಯಗಂಧಿ ಎಂದೇ ಕರೆಯತೊಡಗಿದರು. ಗಂಧನ ಎಂದೂ ಕೆಲವರು ಕರೆಯುತ್ತಿದ್ದರು. ರೂಪ, ಯೌವನ, ನಡತೆ, ಧೈರ್ಯ ಊರ ಮಾತಾಗಿತ್ತು. ಪ್ರವಾಸೀ ನೌಕೆ ನಡೆಸುತ್ತಿದ್ದ ದಾಶರಾಜನಿಗೆ ಮಗಳ
ಕಾರ್ಯನಿರ್ವಹಣಕ್ಷಮತೆ ಕಂಡು ಆಶ್ಚರ್ಯವಾಗಿತ್ತು. ಕೊನೆಕೊನೆಗಂತೂ ದಾಶರಾಜ ಮಗಳಿಗೇ ಓಡು ನಡೆಸುವ ಜವಾಬ್ದಾರಿ ಕೊಟ್ಟು ತಾನು ಬೇರೆ ಕೆಲಸಗಳಲ್ಲಿ ತೊಡಗುತ್ತಿದ್ದ.
ಒಮ್ಮೆ ಪರಾಶರ ಮುನಿಗಳು ದೋಣಿಯನ್ನೇರಲು ಬಂದರು. ಪರಾಶರರು ವಸಿಷ್ಟ ಋಷಿಗಳ ಮೊಮ್ಮಗ.
ಗರ್ಭದಲ್ಲಿರುವಾಗಲೇ ವೇದಪಠನದಲ್ಲಿ ಪಟುವಾಗಿದ್ದವರು. ಅಪೂರ್ವ ಜ್ಯೋತಿಷಜ್ಞಾನ ಪಡೆದ ತೇಜಸ್ವಿ. ಯಮುನೆಯ ತೀರದಲ್ಲಿ ದೋಣಿಯ ಒಡತಿಯಾದ ಮಹಾ ರೂಪವತಿ ಗಂಧನ ನಿಂತಿದ್ದಾಳೆ. ಅವರ ದೃಷ್ಟಿರೇಖೆ ಅವಳ ರೂಪವೃತ್ತವನ್ನು ಛೇದಿಸಿತು. ಅವಳ ಜನ್ಮರಹಸ್ಯವನ್ನೆಲ್ಲ ಅವರ ಕಣ್ಣು ಭೇದಿಸಿತು. ಅಸಾಮಾನ್ಯಳೂ, ಧೈರ್ಯಸ್ಥಳೂ, ಕ್ಷಾತ್ರಸತ್ವದವಳೂ ಆದ ಈಕೆಯನ್ನು ಕೂಡಿ ಮಹಾಪುರುಷನೊಬ್ಬನ ಜನನಕ್ಕೆ ಪಾತ್ರವಾಗುವ ಯೋಗ ತನಗೆ ಬಂದಿದೆ ಎಂದು ಧ್ಯಾನದಿಂದ ಅರಿತರು. ಇವರ ವರ್ತನೆಯಿಂದ ಸತ್ಯವತಿ ಕಂಗಾಲಾದಳು. "ಋಷಿವರ್ಯರೇ, ನಾನು ಸಾಮಾನ್ಯ ಹೆಣ್ಣು, ಮುಗ್ದೆ ಮೀನಿನ ವಾಸನೆಯೂ ನನ್ನ ಮೈಗಂಟಿಕೊಂಡು ಮುಜುಗರ ಮಾಡುತ್ತಿದೆ” ಎಂದು ಸ್ಪಷ್ಟವಾಗಿ ಹೇಳಿದಳು. ಆದರೆ ಪರಾಶರರು ಕೇಳುತ್ತಾರೆಯೆ?
“ಮಂಗಲೆ, ನೀನೇನೂ ಹೆದರಬೇಕಾಗಿಲ್ಲ ನಿನ್ನ ಕನ್ನೆತನ ಕೆಡದಿರುವಂತೆ ನಾನು ನೋಡಿಕೊಳ್ಳುತ್ತೇನೆ. ಮೀನಿನ ವಾಸನೆ ನಿನ್ನ ಮೈಯಲ್ಲಿದೆ ಎಂದೆಯಲ್ಲವೆ? ಈ ನೀರನ್ನು ಚಿಮುಕಿಸುತ್ತೇನೆ. ಈಗ ನೋಡು.”
ಸತ್ಯವತಿಯ ಮೂಗಿಗೆ ಒಂದು ಹೊಸ ಬಗೆಯ ಕಂಪು ಬಂದು ಬಡಿಯಿತು. ತನ್ನ ದೇಹದಲ್ಲೇ ಈ ಕಂಪು ಹೊರಡುತಿದೆ ಹಾಗಾದರೆ "ನಾನಿನ್ನು ಮತ್ಸ್ಯಗಂಧಿಯಲ್ಲ!" ಎಂದುಕೊಂಡು ಸಡಗರಿಸಿದಳು. ಪರಾಶರರು ಯಮುನೆಯ ದ್ವೀಪಗಳಲ್ಲಿ ಈ ಯೋಜನಗಂಧಿಯೊಂದಿಗೆ ವಿಹರಿಸಿದರು. ಅವರ ಪ್ರೀತಿಯ ಫಲವೇ ವೇದವ್ಯಾಸ. ವ್ಯಾಸ ಅಭ್ರಶ್ಯಾಮ ವರ್ಣದವನು. ಕನಕ ಪಿಂಗಳ ಜಟಾ ಪರಿಬದ್ಧನಾಗಿ ಕಾಣಿಸಿಕೊಂಡ. ಉಳಿದ ಮಕ್ಕಳಂತೆ ತಾಯಗರ್ಭದಲ್ಲಿ ನವಮಾಸ ಆರೈಕೆ ಪಡೆಯದೆ ಅವನು ಒಂದೇ ದಿವಸದಲ್ಲಿ ಹುಟ್ಟಿದ ಸದ್ಯೋಜಾತ. ತಂದೆಯ ಎತ್ತರಕ್ಕೆ ಬೆಳೆದು ನಿಂತ ಮಹಿಮಾಪುರುಷ.
“ಭದ್ರೆ, ನಿನ್ನಿಂದ ಈ ಮಹಾಪುರುಷನನ್ನು ಪಡೆಯುವುದಷ್ಟೇ ನನ್ನ ಉದ್ದೇಶವಾಗಿತ್ತು. ನಾನೇನೂ ಗೃಹಸ್ಥನಲ್ಲ ಕಾಮಿಯಲ್ಲ ವಿಧಿ ನನ್ನನ್ನು ಇಂಥದೊಂದು ಮಹತ್ಕಾರ್ಯಕ್ಕೆ ಬಳಸಿಕೊಂಡಿದೆ ಅಷ್ಟೆ. ಇವನು ಯಮುನೆಯ ದ್ವೀಪದಲ್ಲಿ ಹುಟ್ಟಿದ್ದರಿಂದ ದ್ವೈಪಾಯನ ಎಂದು ಹೆಸರಿಡುತ್ತೇನೆ. ನೀಲಾಂಬುದ ಶ್ಯಾಮನಾದುದರಿಂದ 'ಕೃಷ್ಣ' ದ್ವೈಪಾಯನ ಎಂದು ಬೇಕಾದರೂ ಕರೆಯಬಹುದು. ಮುಂದೆ ವೇದಪುರಾಣಗಳನ್ನೆಲ್ಲ ವೈಧಾನಿಕವಾಗಿ ಸಂಪಾದಿಸುವ ಈತ 'ವ್ಯಾಸ', 'ವೇದವ್ಯಾಸ'
ಎಂಬ ಅಭಿಧಾನಗಳಿಂದಲೂ ಪ್ರಸಿದ್ಧನಾಗುತ್ತಾನೆ'' ಎಂದು ಅವರು ಹೇಳಿದರು.
ಸತ್ಯವತಿಯ ಹಿಗ್ಗು ಹೇಳತೀರದು. ಬೆಟ್ಟದಂತೆ ಬೆಳೆದು ನಿಂತ ಮಗನ ಮೈದಡವುತ್ತ ಅವರ್ಣನೀಯ ಆನಂದವನ್ನು ಅನುಭವಿಸುತ್ತಿದ್ದಳು. ಅವಳ ಆನಂದ ಹೆಚ್ಚು ಕಾಲ ಉಳಿಯುವಂಥದಾಗಿರಲಿಲ್ಲ ಅಪ್ಪ ಮಗ ಇಬ್ಬರೂ ಸತ್ಯವತಿಯನ್ನು ಬಿಟ್ಟು ಹೊರಟು ನಿಂತರು. ಹೆಣ್ಣಿನ ಅಳು ಪರಾಶರರನ್ನು ವಿಚಲಿತಗೊಳಿಸಲಿಲ್ಲ. ದೃಢ ಸ್ವರದಲ್ಲಿ ಹೇಳಿದರು:
“ನೋಡು, ಎಲ್ಲವನ್ನೂ ಮರೆತುಬಿಡು. ನಿನಗೆ ಪುನಃ 'ಕನ್ನತ್ವ'ವನ್ನು ಕರುಣಿಸಿದ್ದೇನೆ. ನೀನು ಲೋಕನಿಂದೆಗೆ ಗುರಿಯಾಗುವುದಿಲ್ಲ ಉತ್ತಮ ಗೃಹಿಣಿಯಾಗಿ ಬಾಳುತ್ತೀಯೆ”' ಎಂದು ಹೇಳಿ ಹೊರಡಲನುವಾದರು.
ಮಗನ ಕಡೆ ತಾಯಿ ಕಣ್ಣಾಡಿಸಿದಳು. ಆದರೆ ಮಗ ಅಪ್ಪನಿಗಿಂತ ಹೆಚ್ಚಿನ ತರಾತುರಿಯಲ್ಲಿದ್ದವ. ಆತ ಹೆಚ್ಚು ಮಾತಿನವನೂ ಅಲ್ಲ. ಹೋಗುವಾಗ ಆತ ಹೇಳಿದ್ದು ಒಂದೇ ಮಾತು. ಧ್ವನಿವಿಶಿಷ್ಟವಾದ ಮಾತು.
"ನೆನೆ ವಿಪತ್ತಿನೊಳು"
ತಾಯಿ ಆ ಒಂದು ಆಪ್ತವಾಕ್ಯದಿಂದ ಅರಳಿಕೊಂಡಳು.
ಕಾಲವಾಹಿನಿ ಹೀಗೇ ಸಾಗಿತ್ತು. ಮತ್ತೆ ದೋಣಿ ನಡೆಸುವ ಕಾಯಕ ಮುಂದವರಿಯಿತು. ಋತುಪಟಲಗಳು ಆವರ್ತಿಸಿದುವು.
ಆಧಾರ: ಅ. ರಾ. ಮಿತ್ರರ ಕುಮಾರವ್ಯಾಸಭಾರತ ಕಥಾಮಿತ್ರ
Matsyagandhi

ಕಾಮೆಂಟ್ಗಳು