ಗೋಟುವಾದ್ಯಂ ನಾರಾಯಣ ಅಯ್ಯಂಗಾರ್
ಗೋಟುವಾದ್ಯಂ ನಾರಾಯಣ ಅಯ್ಯಂಗಾರ್
ಇಂದು "ನಾದಯೋಗಿ" ಶ್ರೀ ಗೋಟುವಾದ್ಯಂ ನಾರಾಯಣ ಅಯ್ಯಂಗಾರ್ (1903-59) ಅವರ 123ನೇ ಜನ್ಮ ದಿನಾಚರಣೆ.
ಗೋಟುವಾದ್ಯಂ ನಾರಾಯಣ ಅಯ್ಯಂಗಾರ್ ಅವರು ಶ್ರೀ ತಿರುವಿದೈಮರುದೂರ್ ಸಖಾ ರಾಮರಾವ್ ಅವರ ಶಿಷ್ಯರಾಗಿ, ಚಿತ್ರವೀಣವನ್ನು ಪುನರುತ್ಥಾನಗೊಳಿಸಿ ಅದಕ್ಕೆ ಗೋಟುವಾದ್ಯಂ ಎಂದು ಹೆಸರಿಸಿದರು. ಅವರ ಆಕರ್ಷಕ ಶೈಲಿಯು ಅವರ ಮಗ ಶ್ರೀ ಚಿತ್ರವೀಣ ನರಸಿಂಹನ್ ಅವರಿಗೆ ಬಂದು, ಮುಂದೆ ನರಸಿಂಹನ್ ಅವರ ಮಗ ಮತ್ತು ನಾರಾಯಣ ಅಯ್ಯಂಗಾರ್ ಅವರ ಮೊಮ್ಮಗ ಶ್ರೀ ಚಿತ್ರವೀಣಾ ರವಿಕಿರಣ್ ಅವರ ಮೂಲಕ ಇಂದು ವಿಶ್ವದಾದ್ಯಂತ ವ್ಯಾಪಿಸಿದೆ.
ಕನ್ನಡದಲ್ಲಿ ವಿಜ್ಞಾನ ಬರಹಗಳಿಗೆ ಪ್ರಸಿದ್ಧರಾದ ಜಿ.ಟಿ. ನಾರಾಯಣರಾಯರು ಪ್ರಸಿದ್ಧ ಸಂಗೀತ ವಿಮರ್ಶಕರೂ ಆಗಿದ್ದವರು. ಹೀಗಾಗಿ ಅವರಿಗೆ ತುಂಬಾ ಜನ ಸಂಗೀತಗಾರರ ನಿಕಟ ಪರಿಚಯವಿತ್ತು.
ಐವತ್ತರ ದಶಕದಲ್ಲಿ ಮಂಗಳೂರಿನಲ್ಲಿ ಜಿ.ಟಿ.ಎನ್. ಪ್ರಾಧ್ಯಾಪಕರಾಗಿದ್ದಾಗ ಒಂದು ದಿನ ಅವರ ಕಾಲೇಜಿಗೆ ಒಬ್ಬ ತೇಜಸ್ವಿ ತರುಣರೊಬ್ಬರು ಕಾಣಲು ಬಂದರು. ತನ್ನ ಹೆಸರು ನರಸಿಂಹನ್ ಎಂದೂ, ತಾನು ಗೋಟುವಾದ್ಯ ವಿದ್ವಾಂಸ ಮೈಸೂರು ನಾರಾಯಣ ಅಯ್ಯಂಗಾರ್ಯರ ಪುತ್ರನೆಂದೂ ಪರಿಚಯ ಮಾಡಿಕೊಂಡರು. ತನ್ನ ತಂದೆ ಅವರನ್ನು ಭೇಟಿಮಾಡಲು ಇಚ್ಛಿಸಿರುವುದಾಗಿಯೂ, ಈಗ ಸಧ್ಯಕ್ಕೆ ಅವರು ಛತ್ರದಲ್ಲಿದ್ದಾರೆಂದೂ, ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ಒದಗಿದೆಯೆಂದು ಹೇಳಿದಾಗ, 'ಇಂಥ ದೊಡ್ಡ ವಿದ್ವಾಂಸರ ಸ್ಥಿತಿ ಹೀಗಾಯಿತೆ?' ಎಂದು ದುಃಖವಾಗಿ ಜಿಟಿಎನ್ ಅವರಿದ್ದಲ್ಲಿಗೆ ಹೋದರು. ಹರಕು ಚಾಪೆಯ ಮೇಲೆ ಕುಳಿತಿದ್ದ ಗೋಟುವಾದ್ಯ ಭೀಷ್ಮರನ್ನು ನೋಡಿ ಅವರಿಗೆ ವೇದನೆಯಾಯಿತು. ಅವರಿಂದ ಒಂದು ಕಚೇರಿ ನಡೆಸಿ ಸಾಕಷ್ಟು ಹಣ ಸಂಗ್ರಹಿಸಿ ಕೊಡುವ ನಿರ್ಧಾರ ಮಾಡಿದರು. ಆದರೆ ಮಂಗಳೂರಿನಲ್ಲಿ ಅಂದಿನ ದಿನದಲ್ಲಿ ಕರ್ನಾಟಕ ಸಂಗೀತದ ಅಭಿಮಾನಿಗಳು ಕಡಿಮೆ. ಆದರೂ ತಮ್ಮ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಸಹಕಾರದಿಂದ ಅಂತೂ ಒಂದು ಗೋಟುವಾದ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಯ್ತು. ಪತ್ರಿಕೆಗಳಲ್ಲಿ ಸಾಕಷ್ಟು ಪ್ರಚಾರವನ್ನೂ ಮಾಡಲಾಯ್ತು. ಅಂತೂ ಸುಮಾರು ಮುನ್ನೂರು ರುಪಾಯಿಯಷ್ಟು ಹಣ ಸಂಗ್ರಹವೂ ಆಯಿತು.
ಆ ವಿದ್ವಾಂಸರು ಮೂರುಗಂಟೆಗಳ ಕಾಲ ಅಪೂರ್ವವಾದ ಕಾರ್ಯಕ್ರಮ ನಡೆಸಿಕೊಟ್ಟು ಎಲ್ಲರ ಪ್ರಶಂಸೆಗೆ ಪಾತ್ರರಾದರು. ನಂತರ ಅವರಿಗೆ ಶ್ರೀಮಂತರೊಬ್ಬರು ಗೌರವಧನ ನೀಡಿ ಮದ್ರಾಸಿಗೆ ಕಳುಹಿಸಿಕೊಡುವ ಏರ್ಪಾಟೂ ಆಯಿತು. ಇದಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ಎನ್.ರವಿಕಿರಣ್ ಎಂಬ ಬಾಲಪ್ರತಿಭೆ ಗೋಟುವಾದ್ಯದಲ್ಲಿ ಅಪ್ರತಿಮ ಸಾಧನೆ ಮಾಡಿದ ವಿಷಯ ಎಲ್ಲ ಪತ್ರಿಕೆಗಳಲ್ಲಿಯೂ ಪ್ರಕಟವಾಗಿ ಆತನ ಸಭಾ ಕಾರ್ಯಕ್ರಮ ವೀಕ್ಷಿಸಲು ಜನಸಾಗರವೇ ಸೇರುತ್ತಿತ್ತು. ಅಂತಹ ಒಂದು ಕಾರ್ಯಕ್ರಮ ಮೈಸೂರಿನಲ್ಲಿಯೂ ಏರ್ಪಾಡಾಗಿತ್ತು. ಅಲ್ಲಿ ಜಿಟಿಎನ್ ಅವರೂ ಶ್ರೋತೃಗಳಾಗಿದ್ದರು. ಬೈಠಕ್ಕು ಮುಗಿದಮೇಲೆ ಅಪರಿಚಿತರೊಬ್ಬರು ಜಿಟಿಎನ್ ಅವರ ಬಳಿ ಬಂದು ತಾನು ನರಸಿಂಹನ್ ಎಂದೂ, ಈಗ ಕಚೇರಿ ನಡೆಸಿದ ಬಾಲಕ ತನ್ನ ಮಗನೆಂದೂ ಇಪ್ಪತ್ತು ವರ್ಷಗಳ ಹಿಂದೆ ತಾನು ಮಂಗಳೂರಿಗೆ ಬಂದಿದ್ದೂ, ಆಗ ಜಿಟಿಎನ್ ಅವರು ಮಾಡಿದ ಸಹಾಯ ಎಲ್ಲವನ್ನೂ ಬಿಚ್ಚಿಟ್ಟಾಗ ಆ ಪುಟ್ಟ ಬಾಲಮಾಂತ್ರಿಕ ನಾರಾಯಣ ಅಯ್ಯಂಗಾರ್ಯರ ಮೊಮ್ಮಗನೆಂದೂ ತಿಳಿದು ಬಂತು. ತಮ್ಮ ತಂದೆಯೇ ರವಿಕಿರಣನಲ್ಲಿ ಮರುಹುಟ್ಟು ಪಡೆದಿರುವಂತೆ ತೋರುತ್ತದೆ ಎಂದು ನರಸಿಂಹನ್ ಅವರು ನುಡಿದಾಗ ಜಿಟಿಎನ್ ಪುಳಕಿತಗೊಂಡರು. ಈ ಪ್ರಸಂಗವನ್ನು ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಎಂ.ಎನ್. ಸುಂದರರಾಜ್ ಎಂಬುವರು ಕನ್ನಡಪ್ರಭದಲ್ಲಿ ಹಂಚಿಕೊಂಡದ್ದನ್ನು ನಾನು ಓದಿದ್ದು.
On the birth anniversary of Vidwan Gotuvadyam Narayana Iyengar 🌷🙏🌷

ಕಾಮೆಂಟ್‌ಗಳು