ಶುಭಾ ವೆಂಕಟೇಶ ಅಯ್ಯಂಗಾರ್
ಶುಭಾ ವೆಂಕಟೇಶ ಅಯ್ಯಂಗಾರ್
ಡಾ. ಶುಭಾ ವೆಂಕಟೇಶ ಅಯ್ಯಂಗಾರ್ ಅವರು ಏರೋಸ್ಪೇಸ್ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡಿರುವ ನಮ್ಮ ಹೆಮ್ಮೆಯ ಕನ್ನಡತಿ. ಅವರಿಗೆ ಪ್ರಸಕ್ತ ಸಾಲಿನ ಪದ್ಮಶ್ರೀ ಗೌರವ ಸಂದಿದೆ.
ಶುಭಾ ಅವರು 1954ರ ಮೇ 14ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ವೆಂಕಟೇಶ ಅಯ್ಯಂಗಾರ್. ತಾಯಿ ರಾಜಮ್ಮ. ಶುಭಾ ಅವರು ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ಆನರ್ಸ್ ಹಾಗೂ ಸೆಂಟ್ರಲ್ ಕಾಲೇಜಿನಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಗಳಿಸಿದರು.
1974ರಲ್ಲಿ ಎನ್‌ಎಎಲ್ ಸೇರಿದ ಶುಭಾ ಅವರು ಸಿಎಸ್‌ಐಆರ್ ಫೆಲೋಶಿಪ್ ಪಡೆದು ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಗಳಿಸಿದರು. 1982ರಲ್ಲಿ ವಿಜ್ಞಾನಿಯಾಗಿ ವೃತ್ತಿ ಜೀವನ ಆರಂಭಿಸಿ ಮೆಟೀರಿಯಲ್ ಸೈನ್ಸ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪೈಲಟ್‌ಗಳು ವಿಮಾನ ಓಡಿಸುವ ಹಾಗೂ ನಿಗದಿತ ನಿಲ್ದಾಣಗಳಲ್ಲಿ ಇಳಿಸಲು ಸೂಕ್ತ ಮಾರ್ಗದರ್ಶನ ಮಾಡುವ ‘ದೃಷ್ಟಿ’ ತಂತ್ರಜ್ಞಾನವನ್ನು ಶುಭಾ ಅಭಿವೃದ್ದಿಪಡಿಸಿದರು. ಈಗ ವಾಯುಪಡೆಯಲ್ಲೂ ಇದೇ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದು ಸಂಪೂರ್ಣ ದೇಸಿ ನಿರ್ಮಿತ ತಂತ್ರಜ್ಞಾನ.
ಶುಭಾ ಅವರು ಹೈದರಾಬಾದಿನ ಡಿಆರ್‌ಡಿಎಲ್ ರೂಪಿಸಿದ ಅಗ್ನಿಮಿಸೈಲ್ ಯೋಜನೆಯಲ್ಲೂ ಪ್ರಮುಖ ಪಾತ್ರ ವಹಿಸಿದರು. ಏರೋಸ್ಪೇಸ್‌ಗೆ ಸಂಬಂಧಿಸಿದ ಹಲವು ಸಂಶೋಧನಾ ಚಟುವಟಿಕೆಗಳಲ್ಲೂ ಇವರ ಕೊಡುಗೆ ಸಂದಿದೆ. ಏರೋಸ್ಪೇಸ್ ಸಂಶೋಧನೆಯಲ್ಲಿ ಪರಿಣತಿ ಹೊಂದಿರುವ ಪ್ರಮುಖ ಮಹಿಳಾ ವಿಜ್ಞಾನಿಯಾದ ಶುಭಾ 2020ರಲ್ಲಿ ನಿವೃತ್ತಿಯಾಗಿದ್ದಾರೆ.
ಶುಭಾ ಅವರಿಗೆ 2024ರಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರಶಸ್ತಿ ಸಂದಿತ್ತು. 2026ರಲ್ಲಿ ಅವರಿಗೆ ಪದ್ಮಶ್ರೀ ಗೌರವ ಸಂದಿರುವುದು ಸಂತಸದ ವಿಷಯವಾಗಿದೆ. ಡಾ. ಶುಭಾ ವೆಂಕಟೇಶ ಅಯ್ಯಂಗಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
Padmashree Awardee Aerospace Scientist Dr. Shubha Venkatesh Iyengar 🌷🙏🌷

ಕಾಮೆಂಟ್‌ಗಳು