ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಜಿ. ಸುಶೀಲಮ್ಮ


 ಎಸ್. ಜಿ. ಸುಶೀಲಮ್ಮ ಅವರಿಗೆ ಪದ್ಮಶ್ರೀ ಗೌರವ

Padmashree Award to Great social worker S.G. Susheelamma of Sumangali Ssvashrama 🌷🙏🌷

ಎಸ್. ಜಿ. ಸುಶೀಲಮ್ಮ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಮೂಲಕ ಅಪಾರ ಸಮಾಜಸೇವೆಗೆ ಹೆಸರಾದವರು. ಅವರಿಗೆ ಈಗ ಪದ್ಮಶ್ರೀ ಗೌರವ ಹುಡುಕಿಕೊಂಡು ಬಂದಿದೆ. 

ಎಸ್.ಜಿ. ಸುಶೀಲಮ್ಮ ಅವರು 1939ರ ಮೇ 24ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಸ್.ಗಣೇಶಪ್ಪ. ತಾಯಿ ಚೆನ್ನಮ್ಮ. ಪದವಿಪೂರ್ವ ಶಿಕ್ಷಣವನ್ನು ಪಡೆದ ಎಸ್.ಜಿ.ಸುಶೀಲಮ್ಮ 1959ರಿಂದ 1967ರ ವರೆಗೆ ರೆಂಕೋ ಕಾರ್ಖಾನೆಯಲ್ಲಿ (ಬಿಎಚ್.ಇ.ಎಲ್) 15 ವರ್ಷ ಸೇವೆ ಸಲ್ಲಿಸಿ, 1963ರಲ್ಲಿ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಸಮಾಜಸೇವೆಯಲ್ಲಿ ತೊಡಗಿದರು. 

ಸುಶೀಲಮ್ಮ ಅವರು 1974ರಿಂದ 1978ರ ವರೆಗೆ ಭುವನೇಶ್ವರಿ ಮಹಿಳಾ ಮಂಡಳಿಯಲ್ಲಿ ವಾರ್ಡನ್ ಆಗಿ ಕಾರ್ಯನಿರ್ವಹಿಸಿದರು. 1975ರಲ್ಲಿ ಬೆಂಗಳೂರಿನ ಹೆಬ್ಬಾಳದ ನೆರೆಯಲ್ಲಿರುವ ಚೋಳನಾಯಕನಹಳ್ಳಿಯಲ್ಲಿ ಸುಮಂಗಲಿ ಸೇವಾಶ್ರಮ ಎಂಬ ಸಂಸ್ಥೆಯನ್ನು ಬಡವರು, ಅನಾಥರು, ನಿರಾಶ್ರಿತ ಮಕ್ಕಳು ಮತ್ತು ಮಹಿಳೆಯರ ಸೇವೆಗಾಗಿ ಈ ಸಂಸ್ಥೆ  ಪ್ರಾರಂಭಿಸಿದರು. 1976ರಲ್ಲಿ ಬಸವಾನಂದ ನರ್ಸರಿ, 1979ರಲ್ಲಿ ಸುಮಂಗಲಿ ಯುವತಿ ಮಂಡಳಿಯನ್ನು ಸ್ಥಾಪಿಸಿದರು. 1985ರಲ್ಲಿ ಚೋಳನಾಯಕನಹಳ್ಳಿಯಲ್ಲಿ ಬಸವಾನಂದ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು. ಇದಲ್ಲದೆ ಮಹಿಳೆಯರಿಗೆ ಸ್ವಯಂ ಉದ್ಯೋಗ ವ್ಯವಸ್ಥೆ ಹಾಗೂ ಮಹಿಳಾ ಒಕ್ಕೂಟಗಳ ರಚನೆ ಮಾಡಿದರು. ಶಿಶು ಸಂರಕ್ಷಣಾ ಕೇಂದ್ರವನ್ನು ಸ್ಥಾಪನೆ ಮಾಡುವವರಿಗೆ ತರಬೇತಿ ನೀಡುವ ವ್ಯವಸ್ಥೆಯನ್ನೂ ಮಾಡಿದರು. 

ಪ್ರಾರಂಭದಿಂದ ಸುಮಂಗಲಿ ಸೇವಾಶ್ರಮದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿರುವ ಎಸ್.ಜಿ.ಸುಶೀಲಮ್ಮನವರು 1987ರಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಮಹಿಳಾ ಮಂಡಲದ ಒಕ್ಕೂಟದ ಅಧ್ಯಕ್ಷರಾಗಿ ಮತ್ತು ಜಾಲಹಳ್ಳಿಯ ಸಮೂಹ ಸಾಮಾಜಿಕ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ, 1989ರಲ್ಲಿ ಬೆಂಗಳೂರು ನಗರ ಜಿಲ್ಲಾ ಮಹಿಳಾ ಮಹಾಮಂಡಲದ ಸಂಸ್ಥಾಪಕ ಅಧ್ಯಕ್ಷರಾಗಿ, 1990ರಲ್ಲಿ ದೊಡ್ಡಬಳ್ಳಾಪುರದ ಸದ್ಗುರು ಅಮರಜ್ಯೋತಿ ವಿಶ್ವಕುಂಡಲ ಯೋಗ ಆಶ್ರಮದ ಅಧ್ಯಕ್ಷರಾಗಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಬಹೋಪಯೋಗಿ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಗೂ ಅನೇಕ ಸಂಘ-ಸಂಸ್ಥೆಗಳಿಗೆ ಪದಾಧಿಕಾರಿಗಳಾಗಿ, ಸಲಹೆಗಾರರಾಗಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ.

ಸುಶೀಲಮ್ಮ ಅವರಿಗೆ 1985ರಲ್ಲಿ ಕರ್ನಾಟಕ ರಾಜ್ಯದ ಮಕ್ಕಳ ಕಲ್ಯಾಣಕ್ಕಾಗಿ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರೀಯ ಮಕ್ಕಳ ಕಲ್ಯಾಣ ಪ್ರಶಸ್ತಿ, 1991ರಲ್ಲಿ ಕೌಟುಂಬಿಕ ಘಟಕದ ಉತ್ತಮ ಸೇವೆಗಾಗಿ ರಾಷ್ಟ್ರೀಯ ಪ್ರಶಸ್ತಿ, 1992ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಅತ್ಯುತ್ತಮ ಸಾಮಾಜಿಕ ಸೇವಾ ಪ್ರಶಸ್ತಿ ಮತ್ತು ಉತ್ತಮ ನಾಗರೀಕ ಪ್ರಶಸ್ತಿ, 1994ರಲ್ಲಿ ಅತ್ಯುತ್ತಮ ಗ್ರಾಮೀಣ ಸೇವೆ ಸಲ್ಲಿಸಿದ್ದಕ್ಕಾಗಿ ಜಾನಕಿದೇವಿ ಬಜಾಜ್ ಪುರಸ್ಕಾರ, 1995ರಲ್ಲಿ ಮೈಸೂರು ದಸರಾ ಪ್ರಶಸ್ತಿ, 1998ರಲ್ಲಿ ರಾಜ್ಯ ಸರ್ಕಾರದ ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, 2000ದಲ್ಲಿ ಸಮಾಜ ಸೇವೆಗಾಗಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 2001ರಲ್ಲಿ ಮಾನವ ಹಕ್ಕುಗಳ ಪ್ರಶಸ್ತಿ ಹಾಗೂ ರಾಜೀವಗಾಂಧಿ ಶಿರೋಮಣಿ ಪ್ರಶಸ್ತಿ, ಭೀಮಕ್ಕ ಪ್ತಶಸ್ತಿ, ಬಸವಾತ್ಮಜೆ ಪ್ರಶಸ್ತಿ, ದೇವರಾಜ ಅರಸು ಪ್ರಶಸ್ತಿ,  ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾಕ್ಟರೇಟ್, ಕರ್ನಾಟಕ ರಾಜ್ಯದ ರಾಷ್ಟ್ರೀಯ ಬಸವ ಪುರಸ್ಕಾರ, ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರದಾನ ಮಾಡಿದ ಡಾ. ದುರ್ಗಾಬಾಯಿ ದೇಶಮುಖ್ ರಾಷ್ಟ್ರೀಯ ಪ್ರಶಸ್ತಿ, ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ  ಸೇರಿ ಅನೇಕ ಗೌರವಗಳು ಸಂದಿವೆ. ಇದೀಗ ಪದ್ಮಶ್ರೀ ಗೌರವ ಅವರನ್ನರಸಿ ಬಂದಿರುವುದು ಸಂತೋಷದ ವಿಷಯ.

ಮಹಾನ್ ಸಮಾಜ ಸೇವಕಿ ಎಸ್. ಜಿ. ಸುಶೀಲಮ್ಮನವರಿಗೆ ಹೃತ್ಪೂರ್ವಕ ಅಭಿನಂದನೆಗಳು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ