ಅಹಲ್ಯೆ
ಪರಿಚಯ
ರಾಮಾಯಣದಲ್ಲಿ ಬರುವ ಒಂದು ಪಾತ್ರ ಅಹಲ್ಯೆಯದು. ಇಂದ್ರನ ಮೋಹಕ್ಕೆ ಬಲಿಯಾಗಿ, ಒಂದು ಕ್ಷಣ ಸೋತ ತಪ್ಪಿಗೆ ಪತಿಯಿಂದ ದೂರವಾಗಿ ಎಷ್ಟೋ ವರ್ಷಗಳ ಬಾಳನ್ನು ಕಲ್ಲಿನಂತೆ ಏಕಾಂಗಿಯಾಗಿ ಸವೆಸಿ ಕೊನೆಯಲ್ಲಿ ಶ್ರೀರಾಮನ ಕೃಪೆಯಿಂದ ಮರುಹುಟ್ಟು ಪಡೆದವಳು ಇವಳು.
ಅಹಲ್ಯೆಯ ಪಾತ್ರ ಬಹಳವಾಗಿ ಮನಸ್ಸನ್ನು ಕಾಡುತ್ತದೆ. ಡಿವಿಜಿಯವರ ಶ್ರೀರಾಮ ಪರೀಕ್ಷಣಂ ನಲ್ಲಿ ಅಹಲ್ಯೆಯ ಪ್ರಶ್ನೆ, ವಾಲ್ಮೀಕಿ ರಾಮಾಯಣದ ಅಹಲ್ಯೆ, ಕುವೆಂಪುರವರ ರಾಮಾಯಣ ದರ್ಶನಂ ನಲ್ಲಿನ ಅಹಲ್ಯೆ,ಹೀಗೆ...ಇವುಗಳ ಜೊತೆಗೆ ಪುತಿನ ರವರ ಗೀತನಾಟಕ ಅಹಲ್ಯೆ ಒಂದು ಸುಂದರ ರೂಪವಾಗಿ ನಿಲ್ಲುತ್ತದೆ.
ಇಂದ್ರನ, ಮನ್ಮಥನ, ಗೌತಮನ, ಅಹಲ್ಯೆಯ, ಕೌಶಿಕನ, ಅಪ್ಸರೆಯರ ಪಾತ್ರಗಳು ಜೀವ ತಳೆದಂತೆ ಭಾಸವಾಗುತ್ತವೆ. ಮಕ್ಕಳ ಎಳೆನುಡಿಗಳು ಮನದಲ್ಲಿ ಉಳಿಯುತ್ತವೆ. ಪ್ರಕೃತಿಯ ಸೌಂದರ್ಯ, ವರ್ಷಧಾರೆಯ ಭೀಕರತೆ, ಮನ್ಮಥನ ಚಮತ್ಕಾರ, ಯಾಗಶಾಲೆಯ ಪವಿತ್ರತೆ, ತಪಸ್ಸಿನ ಮಗ್ನತೆಗಳ ಜೊತೆಗೆ ಕಥೆ ಸಾಗುತ್ತದೆ.
ಈ ಗೀತನಾಟಕದ ಸೊಗಸನ್ನು ಎಲ್ಲ ಸಹೃದಯರೊಂದಿಗೆ ಹಂಚಿಕೊಳ್ಳುತ್ತ, ಸರಳವಾಗಿ ಗದ್ಯರೂಪದಲ್ಲಿ ವಿವರಿಸುತ್ತ ಸವಿಯಬೇಕೆಂಬುದು ತಿರು ಶ್ರೀಧರರ ಮನದಾಸೆ. ಅದು ನನ್ನದೂ ಕೂಡಾ. ಹೀಗಾಗಿ ಇದರ ಓದು,ಬರಹ ಅವರ ಪ್ರೇರಣೆಯಿಂದ ಮೊದಲಾಗಿ ಈಗ ತಮ್ಮ ಮುಂದೆ ಬರುತ್ತಿದೆ. ದೋಷಗಳನ್ನು ಮನ್ನಿಸಿ ಪ್ರೋತ್ಸಾಹಿಸಿರೆಂದು ತಮ್ಮಲ್ಲಿ ಮನವಿ. ಕವಿ ಪು. ತಿ. ನ ರವರಿಗೆ ನಮಿಸುತ್ತ ಅವರ ಗೀತನಾಟಕ ಅಹಲ್ಯೆ ನಿಮಗಾಗಿ. ನಮಸ್ಕಾರ.
ಪುತಿನ ಅವರ ಅಹಲ್ಯೆ ಗೀತನಾಟಕ
ನಿರೂಪಣೆ:. ಸುಬ್ಬುಲಕ್ಷ್ಮಿ
ಅಹಲ್ಯೆ 11
ದೃಶ್ಯ ೬
(ಪರ್ಣ ಶಾಲೆಯಲ್ಲಿ ಅಹಲ್ಯೆ ಹಸುಳೆಯ ತಲೆಯನ್ನು ತೊಡೆಯ ಮೇಲಿಟ್ಟು ಮಲಗಿಸಿಕೊಂಡು ನುಡಿದಾಡುತ್ತಿರುವಳು.)
ಮಗು
ಇಂದು ಬಂದಿದ್ದರೇ ನಮ್ಮಯ್ಯನೆಡೆಗೆ ನೀನೊರೆದ ದೇವತೆಗಳೇ ನಾಡ ಕಡೆಗೆ ? ನನಗೆ ಭಯವಾಯ್ತಮ್ಮ ನಿನ್ನ ಕಾಣದೆಯೆ;
ನನ್ನನೂ ಜೊತೆಗೊಯ್ಯೆ ನಾಳೆ ತಪ್ಪದೆಯೆ.
ಅಹಲೈ
ಅಂತಾಗಲೆನ್ನಯ್ಯ ಕರೆದೊಯ್ದೆ, ನಾಳೆ, ಇಂದು ಮಲಗೆಲೆ ಕಂದ ಹಾಸಿಗೆಯ ಮೇಲೆ.
ಮಗು
ಅಮ್ಮ ನೀನೆನಗೊಂದು ಸವಿಯ ಕತೆ ಹೇಳೆ
ಅಪ್ಸರೆಯರಿರುತಿರುವ ನಾಡ ಕತೆ ಹೇಳೆ.
ಅಹಲೈ
ಎಂತೊರೆಯಲಣ್ಣಯ್ಯ ಆ ನಾಡ ಕತೆಯ
ಎಲ್ಲ ಲೋಗರ ಕನಸ ಲೋಕದಚ್ಚರಿಯ ? ಅಲ್ಲಿ ಇರುಳೇ ಇಲ್ಲ ನಮ್ಮನಂಜಿಸಲು ಬೇಕಾದುದೆಲ್ಲವಿದೆ ನಮ್ಮ ನಂಬಿಸಲು.
ಮಗು
ಹುಲ್ಲೆ ಕರುವಲ್ಲಿ ಹುದೆ, ಕರಿಗಣಿಕೆ ಹಣ್ಣು ರಸಬಾಳೆ ದಾಳಿಂಬೆ ಚಕ್ಕೋತ ಹಣ್ಣು ?
ಅಹಲೈ
ಇಷ್ಟೆ ಸಾಕೇ ಕಂದ, ಸಾಕೆ ನಿನಗಿನಿಸು ? ಬೇಕಾದ ಹಣ್ಣಿಹುದೊ ಅಲ್ಲಿ ದಿನದಿನಸು !
ಮಗು
ಆಮೇಲೆ
ಅಹಲೈ
ಕುಡಿಯಲಮೃತವು ಅಲ್ಲಿ-ಗದರಿಪರ ಕಾಟ ಇಲ್ಲದಾಡಲು ಇಹುದು ನಂದನದ ತೋಟ.
ನಗುನಗುವ ಜನವಲ್ಲಿ-ಅಳುವ ಸೊಲ್ಲಿಲ್ಲ-
ಬಯಸಿದೊಡೆ ದೊರಕುವುದು ಬೇಡಿದಿನಿತೆಲ್ಲಾ.
ದಿವವೆಂಬರಾ ನಾಡ; -ಇಂದ್ರನೆಂಬರಸು ವೈಭವದೊಳಾಳುತಿಹನಿಂದ್ರಾಣಿವೆರಸು. ಅವಳ ಪುಣ್ಯವೆ ಪುಣ್ಯ-ಮೂಜಗದ ಕನಸು
ಆಯಿತಾ ಭಾಗ್ಯವತಿಗಿರವಿನೊಳೆ ನನಸು ! ಮಳೆಯರಾಯನೆನ್ನುವರು, ಬೆಳೆರಾಯನವನು,
ತಿರೆಯೆಲ್ಲ ವಾತನೇ ಪೊರೆಯುತಿರುವವನು.
ಕಂದಮ್ಮ...........
ನಿದ್ದಿಸಿದನೀ ಮುದ್ದನೇಮಾಯೆಗಾಯ್ತಮ್ಮ
ಈ ನಾಡು ? ನಾ ಬಗೆದ ಕನಸೆ ಮೂಡಿ ಬಂದ ತೆರನೀ ಜೊನ್ನ ಈ ಗಾಳಿ ಈ ಕಂಪು"
ಎನಗೆನಿಪುದಿಳೆಯಿಂದು ದಿವಕೆ ಜೋಡಿ. ರೆಕ್ಕೆಗೊಂಡೇರಿತೇ ಪುಷ್ಪಕದ ತೆರದಿ ಕರಿಮುಗಿಲ ಮೇರೆಯುಳಿದೀ ನಾಡು ಭರದಿ ?
ಇಂತಹುದು ಕನಸಿನೊಳು-ನನಸಲ್ಲವಿದುವು; ಹಗುರವಾಗುಲ್ಲಸಕೆ ತವರಾಯಿತಿರವು. ಅಲ್ಲಗೋ ದೂರದೊಳು ಕಾಣುವಚ್ಚರಿ ಏನು ?
ಆರ ಮೂರ್ತಿಯದವ್ವ, ಬರುವರಾರಿಂತು ?
ಇಚ್ಛೆ ಕೈಗೂಡಿತೇ ಪತಿದೇವ ಬರುತಿರೆ ತಪದ ಸಿದ್ದಿಯ ಪಡೆದು ದಿವ್ಯತೆಯನಾಂತು ?
ಧೀರಗತಿ, ನೆಲಸೋಕಿ ಸೋಕದೊಲು ನಡೆ ಹಗುರ,
ಪರಿವೇಷಗೊಂಡಿರುವ ಸೌಮ್ಯತೇಜ ! ತಿರೆನಡೆವ ಸುರನಂತೆ ಹೊಸ ತೆರದಿ ಬರುವಿವರ
ಕಂಡು ಬೆಚ್ಚರಿಸುವುದು ಮನಕೆ ಸಾಜ. ಧಿಕ್, ನನ್ನ ಅಲಸತೆಗೆ, ಬಗೆಯ ಕಳವಳಕೆ !
ಆಣಿಗೈಯದಿಂತಿಹನೆ ಪತಿಯ ಸ್ವಾಗತಕೆ !
(ಒಳಕ್ಕೆ ಹೋಗಿ ಅರ್ಘ್ಯಪಾದ್ಯಗಳನ್ನು ಅಣಿಮಾಡುವಳು. )
ಇಂದ್ರ
(ಗೌತಮವೇಷದಿಂದ ಪ್ರವೇಶಿಸಿ)
ಸತಿ ಮೊದಲೆ ಬೆಚ್ಚದೊಲು ಪತಿರೂಪವಾಂತೆ; ದಿಟವರಿಯಲೇನೆಸಪಳೋ ಕಾಣೆ ಕಾಂತೆ. ಗೌತಮನ ಮನೆ ಎನ್ನ ಕಪಟದೊಳಹೊಕ್ಕು
ಕಂಡಿತೆನೆ, ಭಯ ಮಿಗುವುದೆನ್ನುಲ್ಲಸಕ್ಕೂ
ಅಹಲೈ
ಹ(ಅರ್ಘಪಾದ್ಯಗಳೊಡನೆ ಪ್ರವೇಶಿಸಿ)
ಸ್ವಾಗತಮೆ, ನನ್ನಿನಿಯ, ನೋಂಪಿ ಕೊನೆಗೊಂಡಿತೇ
ಮನೆಯಾಸೆ ಮರಳಿತೇ, ನನ್ನಾಸೆ ಫಲಿಸಿತೇನು?
ಈ ನಲವು ನನ್ನಿಯೋ ? ಚಿತ್ತದುದ್ರಾಂತಿಯೋ ?
ಏ ಮಾಯೆ ಇರುಳಿದುವು; ಬಗೆದುದನುವುದೇನು
ಗೌತಮ
ನಾ ಬಂದುದಚ್ಚರಿಯೆ, ಪ್ರಿಯೆ, ಇಲ್ಲಿ ಬೆರಗೇನು ?
ನನ್ನೊಳಗನಿಂದರಿತೆ, ಏವೇಳ್ವೆನದ ನಾನು?
ಪೆರೆಗಣ್ಣ ನಿಶೆ ತೆರೆದಳರಳರಳಿ ಕಂಪಾಯ್ತು,
ತಂಗಾಳಿ ಮೈಮೇಲೆ ತಣುವಾಗಿ ಹರಿಯಿತ್ತು.
ಅಪ್ಸರೆಯ ಗೀತಕೂ ಇನಿಡಾದ ಹಾಡೊಂದು
ಧ್ಯಾನದಾಳದೊಳಿದ್ದ ಮನಕೆ ಎಚ್ಚರ ತಂದು,
ಇಂತೆಂದಿತೆಲೆ ಮರುಳೆ, ನಿನ್ನಿನಿಯಳಿಂದೊಂಟಿ,
ಇಂದಿಂತು ಅಗಲುವರೆ? - ಎನಲೆದ್ದೆ ಕಲಕಂಠಿ
ಈ ಚೆಲುವಿನಿರುಳಿನೊಳು, ಬಾ ಒಲವನರ್ಚಿಸುವ!
ಅಹಲ್ಯೆ
ಎಂದುಮಿಲ್ಲದ ರೀತಿ, ಎಂದುಮಿಲ್ಲದ ಮಾತು !
ನಂಬಲೇ? ಬಂದನೆನೆ ನನ್ನಿನಿಯ ನನಗೋತು?
ಇಂದ್ರ
ನಿನ್ನಿನಿಯ ನಾನೈಸೆ _ ಇಲ್ಲಿ ಸಂದೆಗವೇಕೆ?
ಪೂರ್ಣೇಂದುವದನೆ ಬಾ, ಸಲಿಸೆನ್ನ ಹಾರೈಕೆ
( ಮುಂದೆ ಮುಟ್ಟ ಹೋಗುವನು )
೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಪರ್ಣಶಾಲೆಯಲ್ಲಿ ಅಹಲ್ಯೆ ಮಗುವನ್ಬು ಮಲಗಿಸುತ್ತಿರುವಳು. ಮಗು ದೇವಲೋಕದ ಅಪ್ಸರೆಯರು, ದೇವತೆಗಳು ಇಂದೂ ಬಂದಿದ್ದರೆ? ಎಂದು ಕೇಳಿ ನಾಳೆ ಅವರನ್ನು ನೋಡಲು ನನ್ನನ್ನೂ ಕರೆದುಕೊಂಡು ಹೋಗು ಎನ್ನುವುದು. ಅಹಲ್ಯೆ ಆಗಲಿ ಎನ್ನುವಳು. ಮಗು ಅಪ್ಸರೆಯರಿರುವ ನಾಡಿನ ಕಥೆ ಹೇಳು ಎನ್ನುವುದು.
ಅಹಲ್ಯೆ ದೇವಲೋಕವನ್ನು ಕುರಿತು ಹೇಳತೊಡಗುವಳು. ಅಲ್ಲಿ ಇರುಳೆಂಬುದೇ ಇಲ್ಲ. ಅಂಜಿಕೆಯಿಲ್ಲ. ಸಾಕಷ್ಟು ಹಣ್ಣುಗಳುಂಟು. ಸೊಗಸುಂಟು. ಮಗು ತನಗೆ ತಿಳಿದಿರುವ ಹಣ್ಣುಗಳ ಹೆಸರು ಹೇಳಿ ಅವು ಇವೆಯೆ ಎನ್ನಲು ಅದಕ್ಕಿಂತಲೂ ಹೆಚ್ಚು ಇವೆ. ಅಲ್ಲಿ ಇಂದ್ರ ರಾಜ. ಇಂದ್ರಾಣಿಯೊಂದಿಗೆ ಇರುವನು. ಅವಳ ಪುಣ್ಯವೇ ಪುಣ್ಯ. ಅಲ್ಲಿ ಎಲ್ಲೆಡೆಯೂ ನಗು. ಅಳುವೇ ಇಲ್ಲ. ಅವನನ್ನು ಮಳೆರಾಯ, ಬೆಳೆರಾಯ ಎನ್ನುವರು. ಭೂಮಿಯನ್ನು ಪೊರೆಯುವವನೇ ಅವನು ...ಅಷ್ಟರಲ್ಲಿ ಮಗು ನಿದ್ರಿಸಿರುವನು.
ಅಂದಿನ ಇರುಳಿನ ಸೊಗಸು, ಗಾಳಿ ಎಲ್ಲ ಅವಳಿಗೆ ಅಚ್ಚರಿಯನ್ನು ತಂದಿದೆ. ದೂರದಲ್ಲಿ ಪತಿಯು ಬರುತ್ತಿರುವುದನ್ಬು ಕಂಡು ಬಹಳ ಆಶ್ಚರ್ಯ ಪಡುವಳು. ತಪಸ್ಸು ಮುಗಿದು ಅವರ ಇಚ್ಛೆ ಕೈಗೂಡಿತೇ ಎಂದುಕೊಳ್ಳುವಳು. ಅವರು ಬರುತ್ತಿರುವ ಹೊಸರೀತಿಗೆ ಬೆರಗಾಗುವಳು. ತಟ್ಟನೆ ಅರ್ಘ್ಯ ಪಾದ್ಯಗಳನ್ನು ಅಣಿ ಮಾಡಿಕೊಳ್ಳುವಳು.
ಇಂದ್ರನು ಮೊದಲಿಗೆ ಅವಳ ಪತಿಯ ರೂಪದಲ್ಲಿಯೆ ಹೋಗಲು ನಿರ್ಧರಿಸಿ ಅದರಂತೆ ಬರುವನು. ಅಹಲ್ಯೆ ಸ್ವಾಗತಿಸುವಳು. ಮನೆಯ ಆಸೆ, ಮಡದಿಯ ನೆನಪು ಬಂದಿತೇ ಎನ್ನುವಳು.
ಮುನಿವೇಷದ ಇಂದ್ರನು ತಾವು ಬಂದುದು ಅಚ್ಚರಿಯೆ ಎನ್ನುವನು. ತನ್ನ ಮನದಲ್ಲಿ ಅಪ್ಸರೆಯ ಗೀತಕ್ಕೂ ಮಿಗಿಲಾದ ಭಾವವೊಂದು ಎಚ್ಚರಿಸಿತು. ಧ್ಯಾನದಲ್ಲಿದ್ದ ನನ್ನನ್ನು ಎಚ್ಚರಿಸಿತು. ಇನಿಯಳು ಒಂಟಿಯಾಗಿದ್ದಾಳೆ ಹೋಗು ಎಂದು ಮನ ಹೇಳಿತು.ಬಂದೆ. ಬಾ, ಒಲವನ್ನು ಅರ್ಚಿಸೋಣ ಎನ್ನುವನು.
ಎಂದಿನಂತಿಲ್ಲದ ಅವನ ರೀತಿ, ಮಾತುಗಳು ಅಹಲ್ಯೆ ಗೆ ಅನುಮಾನ ಮೂಡಿಸಿದವು. ಇಂದ್ರನು ಅವಳನ್ನು ಮುಟ್ಟಲು ಹೋಗುವನು.
ಅಹಲ್ಯೆ 12
ಅಹಲೈ
(ದಿಟ್ಟಿಸಿ ನೋಡಿ ಬೆಚ್ಚಿ ಹಿಮ್ಮೆಟ್ಟಿ)
ಉಹು ಅಲ್ಲ, ಅಬ್ಬಯ್ಯ ! ಏಗೈವೆ, ಪತಿಯಲ್ಲ-
ಪತಿವೇಷವಾಂತಿರುವ ಮಾಯಾವಿ ಈ ಹೊಲ್ಲ !
ಇಂದ್ರ
(ಸ್ವರೂಪವಾಂತು)
ಬೆದರದಿರು, ಹೇ ಭೀರು, ಏತಕೀ ದಿಗಿಲು? ನೀ ನೆನೆದೆ, ನಾನಾದೆ ನಿನ್ನಭೀಷ್ಟದೊಲು.
ಅಹಲೈ
(ಭ್ರಾಂತಳಾಗಿ, ಬಾಯಿಕಟ್ಟಿಹೋದವಳಂತೆ)
ಎಲೆ ದುರುಳ ನೀನಾರು, ಈ ಕಪಟವೇಕೆ? ಎನಿತು ಧೈರ್ಯವೊ ನಿನಗೆ ಮುನಿಸತಿಯ ಕೆಣಕೆ ?
ಇಂದ್ರ
ಒಲುಮೆ ಸೆಳತಕೆ ಸಂದ ಸುರರ ದೊರೆ ನಾನು-
ತ್ರಿಜಗವಂದಿತನಿಂದು ನಿನಗಾದ ಶರಣು.
ಅಹಲೈ
(ಅದೇ ಬೆರಗಿನ ಭಾವದಲ್ಲಿ)
ಹೇ ದಿವ್ಯದರ್ಶನನೆ, ದಿವದರಸೆ ನೀನು ! ಹೆರರ ಸತಿಗಾಶಿಸುವ ನಿನ್ನ ಘನವೇನು ?
ಇಂದ್ರ
ಏನೆಂಬೆನೆಲೆ ಚೆಲುವೆ ಈ ಮರುಳತನಕೆ ?
ಹೊರತೇನು, ನನ್ನರಸಿ, ಒಲಿದಿರುವ ಮನಕೆ?
ಒಲಿದವಗೆ ಹಿರಿದೊಲವು, ಅದಕು ಘನವಿಲ್ಲೆ;
ನನ್ನೆಲ್ಲ ಭಾಗ್ಯಕ್ಕೂ ಮಿಗಿಲಾದೆ ನಲ್ಲೆ.
ಅಹಲೈ
ಹೇ ಭ್ರಾಂತದೇವತೆಯೆ ಹೋಗು ಬಳಿವಿಡಿದು
ನಿನ್ನ ಬಗೆ ನೀನರಿತು ನನ್ನಾಸೆ ತೊರೆದು.
ಇಂದ್ರ
ನನ್ನ ನಾನರಿತಿಹೆನು, ನಿನ್ನ ನೀನರಿಯೆ, ರೂಢಿಗೇತರ ನುಡಿವೆ, ಎಲೆ ಮುಗುದೆ, ಅರಿಯೆ.
ನಿನ್ನೆಲ್ಲ ಆಸೆಗಳ ಸಲಿಸಬಲ್ಲವನು ನಿನ್ನೊಲುಮೆ ಭಿಕ್ಷೆಯನು ಬೇಡಿ ನಿಂದಿಹನು.
ಅಹಲೈ
ಓ ಸತ್ವದರ್ಶನನೆ ಇಂತೊರೆಯಬೇಡೈ
ನನ್ನ ಮರ್ಮವ ಹಿಡಿದು ಇಂತು ನುಡಿ ಬೇಡೈ
ಇಂದ್ರ
ಮರುಳ ಗೌತಮನೆಂತು ನನ್ನ ಸಮನಹನು-
ತಪದಿ ದೇಹವ ಬರಿದೆ ಒಣಗಿಸುತ್ತಿಹನು !
ಆ ನಚ್ಚ ಬಿಡು, ನಲ್ಲೆ, ಕನ್ನಡಿಯ ಗಂಟು ! ನಿನ್ನ ಬಯಕೆಗಳೆಲ್ಲ ಸಲೆ ನಾನೆ ನಂಟು.
ಅಹಲೈ
ಹೇ ಸರ್ವಶಕ್ತನೇ, ಎನ್ನ ಕೆಡುಶಕುತಿ.
ಇಂದ್ರ
ಎನ್ನಿಂದಲಹುದೊಲವೆ ನಿನ್ನಾಸೆಮುಕುತಿ.
ನಂದನದ ತೋಟದೊಳು ಮಂದಾರ ಮುಡಿದು
ಕಲ್ಪಲತೆ ಮಾಡದೊಳು ಸವಿಯ ಸೊದೆಗುಡಿದು
ಮರೆಯೊಳಗೆ ಕಿನ್ನರಿಯರೊರೆವ ಗೀತಕ್ಕೆ ಮನಸೋಲುತಪ್ಪ ಬಾ ದಿವನ ಮೋದಕ್ಕೆ !
ಅಹಲೈ
ಓ ಮನೋವಿಭ್ರಾಂತಿ, ಓ ಆಸೆ ಕಣಸೆ !
ಇಂದ್ರ
ಭ್ರಾಂತಿಯಲ್ಲವು ಕಾಂತೆ, ನನ್ನಿ ಇದು ನನಸೆ.
ತಾರೆಗಳ ನೂಪುರವ ತೊಡಿಸುವೆನು ಅಡಿಗೆ
ಕೊಂಕುಪೆರೆಯನು ತಂದು ಮುಡಿಸುವೆನು ಮುಡಿಗೆ
ಕ್ಷೀರಪಥ ಮೇಖಲೆಯನೊಪ್ಪಿಸುವೆ ಕಟ್ಟಿಗೆ ಕೊನೆಗೆನ್ನ ಮಕುಟವನೆ ಮುಡಿಪಿಡುವೆ ನಿನಗೆ !
ಅಹಲೈ
ನನ್ನಿರವು ಕುರುಡಾಗಿ ಕೋರೈಪ ಬೆಳಕೆ, ಮೊದಲಿರುಳೆ ಸೈ ಎನಿಪೆ ನೀನೆನ್ನ ಮನಕೆ.
ಇಂದ್ರ
ಮಂಗ ಮಾಣಿಕವನ್ನು ಬಿಸುಡುವೊಲು ಮುಗುದೆ
ಬಳಿಸಂದ ಭಾಗ್ಯವನು ಬಿಸುಡದಿರು ಬರಿದೆ.
ಅಹಲೈ
ಶರಣಾದೆ ಶರಣಾದೆ, ದೇವ, ನಿನಗಿಂದು-
ಸತಿಯ ಗೆಲೆ ಬಯಸದಿರು ಮರೆಯಾಗು ನಂದು.
ಇಂದ್ರ
ಸತಿತನವನೆಂತಳಿವೆ, ಭೀರು, ಒಲಿದೆನಗೆ?
ಮೊದಲಿಳೆಯ ಮಡದಿಯರು ಸಲುವರಮರರಿಗೆ.
ಅಹಲೈ
ಹರಕೆ ಇಡೆ ಮಂಗಳಕೆ, ಏನೊರೆವೆಯಿಂದು ?
ಹಿಂಗೆನ್ನ ಬೀಳಾಸೆ, ಕನಸೆ ಮರಸೊಂದು.
ಇಂದ್ರ
ಇಂತೆಯೇ ನಿನ್ನಿಚ್ಛೆ; ಎಲೆ ಬೆರಗಿನಬಲೆ? ಕನಿಕರಿಪವರೆಗಿಹೆನು ನಿನ್ನ ಹಂಬಲೊಳೆ.
(ಮರೆಯಾಗುವನು)
ಅಹಲೈ
ಮುಂಚಿತಚ್ಚರಿಬೆಳಕು, ಕವಿಯಿತಿರುಳು; ಮರೆಯಾಯಿತೀ ಕಣಸು, ದಿಟ್ಟಿ, ಬಯಲು;
ಶಾಂತವಾಗೆಲೆ ರಾಗ ಹೃದಯದಾವೇಗ ! ಭ್ರಾಂತೆ ನಾ ಭ್ರಾಂತೆ ನಾನೇಗೈವೆನೀಗ?
ಗಾಳಿ ದನಿಗಳು
ಮರುಳ ಹೆಣ್ಣೆ ಏನ ಗೈದೆ?
ಸಾವವರೆಗು ಮರುಗಲಾದೆ.
ಎಲ್ಲರಾಸೆ ತಪದ ಪುಣ್ಯ
ಹುಚ್ಚಿ, ಈ ಸುರವರೇಣ್ಯ !
ಇಂಥ ಭಾಗ್ಯ ಬಾಳಿಗಹುದು ಯುಗಕೊಮ್ಮೆಗೆ, ಹೋಯ್ತು ಹರಿದು ! ಮುರುಟಿದೆಯಲ ನೀನೆ ಮಳ್ಳಿ
ನೀನೆ ಬೆಳೆದ ಬಯಕೆ ಬಳ್ಳಿ ! ಮಂದಭಾಗೈ, ಹುಸಿಯಿತೊಲವು; ಬಯಕೆಗಾದೆ ತಿರುಗಿ ತೆರವು. ದೇವಗೆಂಥದಮ್ಮ ಧರ್ಮ?
ಏವೇಳ್ವೆ ನಿನ್ನ ಕರ್ಮ !
೦೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಅಹಲ್ಯೆಗೆ ಬಂದಿರುವವನು ತನ್ನ ಪತಿಯಲ್ಲ ಎಂದು ಅರಿವಾಯಿತು. ಇಂದ್ರ ತನ್ನ ನಿಜರೂಪ ತಾಳಿದನು. ನೀನು ನನ್ನನ್ನು ನೆನೆದೆ. ಅದಕ್ಕೆ ನಾನು ಬಂದೆ ಎಂದನು. ಅಹಲ್ಯೆಗೆ ದಿಗಿಲು. ಯಾರು ನೀನು? ಮುನಿಯ ಸತಿಯನ್ನು ಹೀಗೆ ಕೆಣಕಲು ಎಷ್ಟು ಧೈರ್ಯ ? ಎನ್ನುವಳು. ಒಲವಿನ ಸೆಳೆತಕ್ಕೆ ಸಿಕ್ಕ ಸುರರ ದೊರೆ ತಾನು ಎನ್ನುವನು.
ಪರರ ಸತಿಗೆ ಆಶಿಸುವುದು ಸಲ್ಲದು ಎಂದು ಅಹಲ್ಯೆ ಹೇಳಿದಾಗ ಒಲವು ಎಲ್ಲಕ್ಕಿಂತ ಹಿರಿದು ಎಂದು ಅವನ ಉತ್ತರ. ಅವಳು ಅವನನ್ನು ಹೋಗಲು ಹೇಳುವಳು. ಆದರೆ ಅವಳ ಎಲ್ಲ ಆಸೆಗಳನ್ನು ಈಡೇರಿಸಬಲ್ಲವನು ತಾನೆನ್ನುವನು. ನಿನ್ನ ಪತಿ ಗೌತಮ ಮರುಳ. ತಪಸ್ಸಿನ ಧ್ಯಾನದಲ್ಲಿ ನಿನ್ನ ಬಯಕೆಗಳನ್ನು ಅರಿಯದಾದನು. ಅವನ ಜೊತೆ ಸುಖವೆನ್ನುವುದು ಕನ್ನಡಿಯ ಗಂಟು. ಬಾ, ನನ್ನೊಂದಿಗೆ. ನಿನ್ನ ಎಲ್ಲಾ ಬಯಕೆಗಳನ್ನೂ ಪೂರೈಸುವೆನು ಎಂದು ಮನವೊಲಿಸುವಂತೆ ನುಡಿಯುವನು.
ನಂದನವನದ ಹೂಗಳನ್ನು ಮುಡಿದು, ಕಲ್ಪಲತೆಯಲ್ಲಿ ಎಲ್ಲ ಸವಿ ಸವಿದು, ಕಿನ್ನರರ ಗೀತವನ್ನು ಆಲಿಸಿ ಮನಸೋಲುತ್ತ ಮೈ ಮರೆತು ಸುಖಿಸಬಹುದು ಬಾ ಎನ್ಬುವನು.
ಅವಳಿಗೆ ಇದೆಲ್ಲ ಏನೋ ಕನಸಿನಂತೆ ಭ್ರಾಂತಿಯೆನಿಸುವುದು. ನಕ್ಷತ್ರಗಳನ್ನು ಮುಡಿಗೆ ಮುಸಿಸುವೆ, ಕ್ಷೀರಪಥವನ್ನೇ ಮೇಖಲೆಯನ್ನಾಗಿಸುವೆ, ಹೆಚ್ಚೇನು, ನನ್ನ ಮುಕುಟವನ್ನೇ ನಿನಗಾಗಿ ಮುಡುಪಿಡುವೆ. ಇದು ಕನಸಲ್ಲ. ಭ್ರಾಂತಿಯಲ್ಲ ಎಂದು ಇಂದ್ರನು ನುಡಿಯುವನು. ಅಲ್ಲದೆ
ಮಂಗ ಮಾಣಿಕ್ಯವನ್ನು ತಿಳಿಯದೆ ಬಿಸುಡುವಂತಾಗಿದೆ ನಿನ್ನ ಸ್ಥಿತಿ. ಬಳಿಗೆ ಬಂದ ಭಾಗ್ಯವನ್ನು ದೂರ ಮಾಡದಿರು ಎಂದನು.
ಅಹಲ್ಯೆ ಅವನಿಗೆ ಶರಣಾದೆನೆನ್ನುವಳು. ಆದರೆ ಸತಿಯನ್ನು ಬಯಸದೆ ಮರೆಯಾಗು ಎನ್ನುವಳು. ಭೂಮಿಯ ಮಡದಿಯರು ಮೊದಲಿಗೆ ನಮಗೆ ಸೇರುವವರು ಎಂದು ಅವನು ಹೇಳಿದಾಗ ಅವಳು ತನ್ನದು ಕನಸಿನ ಆಸೆ. ಅದು ಹಿಂಗಲಿ ಎಂದಾಗ ಇಂದ್ರನು ನೀನು ಒಲಿಯುವ ತನಕ ನಿನ್ನ ಹಂಬಲದಲ್ಲೇ ಇರುವೆನು ಎಂದು ಅಲ್ಲಿಂದ ಮರೆಯಾಗುವನು.
ಅಹಲ್ಯೆಗೆ ಮನಕ್ಕೆ ಕತ್ತಲು ಕವಿಯುವುದು. ಹೃದಯದ ರಾಗವನ್ನು ಶಾಂತವಾಗಿರಿಸಲು ಪ್ರಯತ್ನಿಸುವಳು. ಭ್ರಾಂತ ಸ್ಥಿತಿಯಲ್ಲಿ ಇರುವಾಗ ಯಾರೋ ಪಿಸುಗುಟ್ಟಿದಂತೆ ಮಾತುಗಳು ಕೇಳಿಸುವವು.
ಅಯ್ಯೋ ಮರುಳ ಹೆಣ್ಣೆ, ಎಲ್ಲರೂ ಬಯಸುವ ಸುರರ ಪತಿ ತಾನಾಗಿ ಬಂದಾಗ ದೂರ ಮಾಡಿದೆಯಾ ಮರುಳೆ? ಯುಗಕ್ಕೊಮ್ಮೆ ಬರುವ ಭಾಗವಿದು. ನಿನ್ನ ಬಯಕೆಯ ಬಳ್ಳಿಯನ್ನು ನೀನೆ ಚಿವುಟಿ ಹಾಕಿದೆಯಲ್ಲ..ದೇವರಿಗೆ ಎಂತಹ ಧರ್ಮ? ಮಂದಭಾಗ್ಯೆ...
ಪುತಿನ ಅವರ ಅಹಲ್ಯೆ ಗೀತನಾಟಕ
ನಿರೂಪಣೆ:. ಸುಬ್ಬುಲಕ್ಷ್ಮಿ Lrphks Kolar
ಅಹಲ್ಯೆ13
ಅಹಲ್ಯೆ
ದಿಟ ! ಓ ದಿಟ ಬಾಂದನಿಗಳೆ
ನನ್ನೊಳನುಡಿ ಇಂತೆ
ಮಾರ್ದನಿಗೊಡುವುದು, 'ಮರುಳೆ', ಎಡರಾಯಿತಹಂತೆ !'
ಕದಡಿದ ಬಗೆ ಮದಡಾಯಿತು ಮುಂಗಾಣದೆ ಹೋದೆ; ಒಳಗೊಗೆದೀ ಹೊಸ ಮಿಂಚಿಗೆ ಬೆಚ್ಚಿದೆ ಬೆರಗಾದೆ !
ದಿಟ, ತಿರುಳಿದು, ಬಾಳ್ ಪುರುಳಿದು ಇರವಿನ ನನ್ನಿಯಿದು.
ಮಿಕ್ಕೆಲ್ಲವು ಹುಸಿ ! ಕೋ ಕೋ
ನಿನ್ನದು ನಿನ್ನದಿದು !
ಸಡಿಲಿದ ತೊಟ್ಟಿನ ಕಟ್ಟಿನ
ಅರಳಿದ ಮಲರಂತೆ
ಬಗೆ ಮುದಕಾಯಿತು ಬಾರಾ
ಬಾ, ಬಿರುವೆಲರಂತೆ !
ಬಾ ಸೊಗವೇ ಬಾ ರಾಗವೆ
ಬಾ ನಲವೇ ಕೊಳ್ಳು
ತನುವಂ ಮನವಂ ನಾಣಂ
ಜಾಣಂ ನೀ ಕೊಳ್ಳು !
ಆಸೆಯ ಗಾಳಿಗೆ ಬಿರಿದೀ
ರಾಗದ ಪಂಕೇಜ
ಮುಡಿಪಾಯಿತು ನಿನಗೀ ಬಗೆ-
ಕೊಳ್ಳಿದ ಸುರರಾಜ !
ಇಂದ್ರ
(ಕಾಣಿಸಿಕೊಂಡು)
ಬಂದೆನಿದೋ ಬಂದೆನಿದೋ ತಿರೆಯರಳೇ, ಇಂತೆ
ಉಲ್ಲಸದೊಳು ಬನವೊಲಿಪೀ ಚೈತ್ರಾನಿಲನಂತೆ-
ಕಟ್ಟಿಲ್ಲದೆ ನಿಟ್ಟಿಲ್ಲದೆ
ಬರಿಸೊಗವಪ್ಪನ್ನ
ಸುರಪಥದೊಳು ಸೌರಭದೊಲು
ತೇಲಿಪೆ ಬಾ ನಿನ್ನ !
ಅಹಲೈ
ಬಾರೊಲವೇ ಬಾ ಮುದವೇ
ಬಾ ಬಚ್ಚಿಟ್ಟಾಸೆ-
ಎಲ್ಲವ ಕೊಳ್ಳಿನ್ನಿಲ್ಲೆನೆ
ಎನೆ, ಮುಕ್ತಿ ಇದೈಸೆ.
ನಿನ್ನವಳಾಂ ಇನ್ನಿಲ್ಲಾಂ ಇಂದಳಿದಳಹಹಲ್ಯೆ
ಬಾಳ್ ಮಿಗುವೀ ಅನುರಾಗಕೆ
ಇಗೊ ಮಾಸಲಹ ಲ್ಯೆ!
(ಹೋಗುವರು)
(ಸಂಗೀತವಾಗುತ್ತಿರುವುದು. ಒಂದು ಗಳಿಗೆ ರಂಗಸ್ಥಲವು ನಿರ್ಜನವಾಗಿರುವುದು. ಬಳಿಕ ಗೌತಮನು ಪ್ರವೇಶಿಸುವನು. ಸಂಗೀತವು ಬೇರೆಯ ರಂಗಕ್ಕೆ ಬದಲಾಯಿಸುವುದು.)
ಗೌತಮ
(ಪರ್ಣಶಾಲೆಯನ್ನು ನಿಟ್ಟಿಸುತ್ತಾ)
ಕಂಡಿತೆನ್ನೆಲೆಸಾಲೆ-ನನ್ನೊಲುಮೆ ಕರುಮಾಡ.
ಜೊನ್ನದೀ ಕಡಲಿನೊಳು ನನ್ನಿನಿಯಳಿಹ ಮಾಡ
ಸಿರಿಯನೆಡೆಗೊಂಡಿರುವ ಕಮಲದೊಲು ಕಾಣುತ್ತಿದೆ;
ಈ ನೋಟವೆನ್ನೆದೆಗೆ ಸಮ್ಮುದವ ಬೀರುತಿದೆ
ವಿವಿಧ ರಾಗವ ತೋರಿ. ಹಾರೈಸದೀ ಬರವು,
ಮೊದಮೊದಲ ದಿನದಂತೆ ಪೂರಗೊಂಡೀ ಒಲವು,
ಬೆರಗುಗೊಳಿಸುವುದವಳ, ನಾ ಬಲ್ಲೆ. ಈ ಮುಗುದೆ
ಚಕಿತದೃಷ್ಟಿಯೊಳೆನ್ನ ನೋಡಿ ನುಡಿಸಲು ಬರದೆ,
ಅರಿತು ಮೌನದಿ ತಗ್ಗಿ, ಮಂದಹಾಸವ ಬೀರಿ
ಎಂತು ಸ್ವಾಗತಿಸುವಳು ವಧುವಂತೆ ನಾಣೇರಿ !
ಸಿರಿಗುರುಳ ಪೆರೆನೊಸಲ ಎರಳೆಗಂಗಳ ಚೆಲುವೆ,
ನನ್ನ ವಂಶದ ತಾಯಿ, ನನ್ನಾಸೆ ನನ್ನೊಡವೆ-
ಎಂತಿವಳ ನಾನೊಲಿಪೆ-ಇಂದ್ರನೊಲೆ, ಚಂದ್ರನೊಲೆ ?
ಎನಿತು ಚೆಲುವೀ ಇರುಳು ನಮ್ಮೊಲುಮೆಗಾದವೊಲೆ !
ಅಂಚೆಯಂತೆ ತೇಲುತಿಹನು ಆಗಸದೊಳು ಇಂದುವು;
ಕೊಂಚೆಯಂತೆ ಸಾಲಿಟ್ಟುವು
ಬಿಳಿಯ ಮುಗಿಲ ತಂಡವು
ತಿರೆಯ ಕುಮುದವರಳಿತೆನಲು
ಸೂಸುತಿಹುದು ಸೌಸವಂ
ತುಂಬುತಾಕಾಶವಂ.
ಅದೆಕೊ ಮೇಘವಥದೊಳೆಂತು ಮಿತಿಯಿಲ್ಲದ ಮೋದದಿ
ತೇಲುತಿಹರು ಸುರದಂಪತಿ
ಕೃತಿ ಇಲ್ಲದ ತೋಷದಿ |
ಇಂದ್ರಪುರಿಯ ನಂದನದೊಳು
ಇಂಥ ಸೊಗಸು ಕಾಣದಿರಲು ಬಂದರಿವರು ಮೇಳೈಸಿ
ತಿರೆ ಎಲರಿಗೆ ಹಾರೈಸಿ,
ಆಹಹ !
ರಾಗದಾವೇಗವೆಂತೊ
ಅಂತೆ ಮಲೆವರತ್ತ-
ಕಾಮದೇವನೆಳೆತವೆಂತೊ
ಅಂತೆ ಒಲೆವರಿತ್ತ !-
ಎಳ್ಳರಿತ್ತ ಬೀಳ್ವರತ್ತ
ಕೊನೆಗಿಳವರು ಭೂಮಿಗಿತ್ತ -
ಮಲರ ಜೊತೆಗೆ ಸೊಕ್ಕುತ ಆಳಿ ನೆಲಕುರುಳುವ ಚೆಂದದಲಿ !
(ಕೆಲವು ಹೂವುಗಳನ್ನು ಆರಿಸುತ್ತಾ)
ಎಂಥ ನೋಟ ! ಎಂಥ ಬೇಟ
ಎಂಥ ಮುಕ್ತಿಯಾಟ ! ಮೋದಕೊಂದಕಾಗಲಿಂದು
ಇಂತೆ ನಮ್ಮ ಕೂಟ-
ಬೆಳುದಿಂಗಳ ಈ ಇರುಳೊಳು ನನ್ನಿನಿಯಳ ನಾನೊಲಿಸಲು
ಬಂದುದೆ ಸೈ ತಪಬಿಟ್ಟು
ಮುದಕಿರವನು ಮುಡುಪಿಟ್ಟು.
(ಪರ್ಣಶಾಲೆಯ ಬಾಗಿಲಿಗೆ ಹೋಗಿ)
ಅಹಲ್ಯೆ ! ಅಹಲ್ಯೆ !
(ಬಾಗಿಲನ್ನು ನೂಕಿ ತೆರೆದು )
ತೆರವೀ ಮನೆ, ಬಯಲೀ ಮನೆ:
ಒಂಟಿಯೊಳೀ ಹಸುಳೆ ಮಲಗಿರುವನು-ನಡುವಿರುಳೊಳು ಎಲ್ಲಾದಳು ತರಳೆ ?
ಪವಡಿಸದಂತೀ ಹಾಸಿಗೆ
ತುಸು ಮಾಸದೆ ಇಹುದು
ನನ್ನನೆ ನೆನೆದೀ ವಿರಹಿಣಿ ನಿದ್ದಿಸದಿರಬಹುದು.
ಮನೆ ಹೊರಗಣ ಮೊದಲೊಲುಮೆಯ ಬಳ್ಳಿಯ ಚಪ್ಪರದಿ
ಇರುಳಳೆವಳೊ ಸಹಧರ್ಮಿಣಿ ಸವಿನೆನಪಿನ ನೆವದಿ ?
ಹಸುಳೆ
(ಕನವರಿಸುವುದು)
ನನಗೆ ಭಯವಾಯ್ತಮ್ಮ ನಿನ್ನ ಕಾಣದೆಯೆ !
ಗೌತಮ
ಬೆಚ್ಚರಗೊಳ್ಳದೆ ಕಂದಾ
ಮಲಗಿರು; ನಾ ಭರದೆ
ಇನ್ನಗಲಿಕೆ ಇಲ್ಲದವೊಲು
ತಹೆ ತಾಯಿಯ ಮುದದೆ.
(ಹೊರಗೆ ಬರುವನು -ತೆರೆಯ ಕಡೆ ಸರಿಯುವನು)
೦೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಅಹಲ್ಯೆಗೆ ಬಾಂದನಿಯಿಂದ ಮತ್ತೆ ಆಸೆ ಮೂಡುವುದು. ಬಯಕೆಗೆ ಸೋಲುವಳು. ಒಳಗೊಳಗೇ ಆಕೆಯ ಮನಸ್ಸು ಇಂದ್ರನ ವಶವಾಯಿತು. ಒಲವೊಂದೇ ಸತ್ಯ. ಅದರ ಮುಂದೆ ಇನ್ನೆಲ್ಲವೂ ಸುಳ್ಳು. ತೊಟ್ಟು ಸಡಿಲಿದ ಹೂವಿನಂತಾಯಿತು ನನ್ನ ಸ್ಥಿತಿ. ಬಾ, ಬಾ, ಒಲವೇ, ಬಿರಿವ ಹೂವಂತೆ, ಬೀಸುವ ತಂಗಾಳಿಯಂತೆ ಬಾ. ನನ್ನ ತನು, ಮನ, ಲಜ್ಜೆ ಎಲ್ಲವನ್ನೂ ತೆಗೆದುಕೋ ಬಾ. ಆಸೆಯೆಂಬ ಗಾಳಿಗೆ ಬಿರಿದ ಈ ಕಮಲದ ಹೂವನ್ನು ತೆಗೆದುಕೋ. ಇದು ನಿನಗೆ ಮುಡಿಪು...ಬಾ, ಸುರರಾಜ... ಎಂದು ತೊಳಲುವಳು.
ಇಂದ್ರನು ಬರುವನು. ಬಂದೆನಿದೋ ಎನ್ನುವನು. ಯಾವುದೇ ಕಟ್ಟುಗಳಿಲ್ಲದೆ, ಎಗ್ಗಿಲ್ಲದೆ, ವನದಲ್ಲಿ ಬಲು ಸೊಗಸಾಗಿ ನಿನ್ನನ್ನು ತೇಲಿಸುವೆ ಸುಖದ ಕಡಲಲ್ಲಿ ಎನ್ನುವನು.
ಅಹಲ್ಯೆ ಅವನೆಡೆಗೆ ಸಾರುವಳು. ಇಂದು ನಾನು ಹೊಸಬಳು. ಹಿಂದಿನ ಅಹಲ್ಯೆ ಅಳಿದಳು ಎನ್ನುವಳು. ಇಬ್ಬರೂ ಹೋಗುವರು. ಸಂಗೀತದ ದನಿ.
ಗೌತಮ ಆ ವೇಳೆಗೆ ಪರ್ಣಶಾಲೆಗೆ ಬರುವನು. ತನಗಾಗಿ ಕಾದಿರುವ ಅಹಲ್ಯೆ ಬಗ್ಗೆ ಅವನಿಗೆ ಈಗ ತುಂಬಾ ಪ್ರೀತಿ ಮೂಡಿದೆ. ತಪಸ್ಸನ್ನು ಮುರಿದು ಬಂದಿದ್ದಾನೆ. ಮೊದಮೊದಲಿನ ಒಲವಿನ ದಿನಗಳ ನೆನಪಾಗುತ್ತಿದೆ. ತಾವು ಕ್ರೀಡಿಸಿದ ಜಾಗಗಳ ನೆನಪಾಗುತ್ತಿದೆ. ತನ್ನ ಅಹಲ್ಯೆ ಎಲ್ಲರಿಗಿಂತ ಚೆಲುವೆ. ತನ್ನ ವಂಶದ ತಾಯಿ, ನನ್ನ ಪ್ರೀತಿಯ ಮಡದಿ. ಇಷ್ಟು ದಿನಗಳು ತಪದ ನೆಪದಲ್ಲಿ ಅವಳನ್ನು ಬಿಟ್ಟಿದ್ದು ತಪ್ಪು. ಈ ಚೆಂದದ ಇರುಳಿನಲ್ಲಿ ಅವಳನ್ನು ಒಲಿಸಿಕೊಳ್ಳುವೆನು.
ಆಹಾ ಆಕಾಶದಲ್ಲಿ ಚಂದ್ರನು ಹಂಸದಂತೆ ತೇಲುತ್ತಿರುವನು. ಮೋಡಗಳು ಆಟವಾಡುತ್ತಿವೆ. ಹೂಗಳು ಅರಳುತ್ತಿವೆ. ಅಲ್ಲಿ ದೇವದಂಪತಿಗಳು ಪ್ರೀತಿಯಿಂದ ಕ್ರೀಡಿಸುತ್ತಿದ್ದಾರೆ. ಇಂದ್ರನಗರಿಯಲ್ಲಿ ಈ ಸೊಗಸು ಕಾಣದೇ ಇಲ್ಲಿಗೆ ಬಂದಿರುವರು. ಓಹ್, ಅದರು ಅದೆಷ್ಟು ತನ್ಮಯರಾಗಿ ಒಲೆಯುತ್ತಿದ್ದಾರೆ! ಇತ್ತ ಏಳುತ್ತ, ಅತ್ತ ಬೀಳುತ್ತ ಒಲವಿನಲ್ಲಿ ಮೈ ಮರೆತಿರುವರು. ಎಂತಹ ನೋಟ! ಈ ರೀತಿಯಲ್ಲೇ ಆಗಲಿ ಇಂದು ನಮ್ಮ ಕೂಟ ಎನ್ನುತ್ತ ಕೆಲವು ಹೂಗಳನ್ನು ಆರಿಸಿಕೊಳ್ಳುವನು.
( ಅವರು ಅಹಲ್ಯೆ ಮತ್ತು ಇಂದ್ರ ಎಂದು ಗೌತಮನಿಗೆ ತಿಳಿಯಲಿಲ್ಲ )
ಪರ್ಣಶಾಲೆಗೆ ಬಂದು ಅಹಲ್ಯೆ ಅಹಲ್ಯೆ ಎಂದು ಕೂಗುವನು. ಉತ್ತರವಿಲ್ಲ. ಒಳಗೆ ನೋಡಿದರೆ ಅವಳಿಲ್ಲ. ಹಾಸಿಗೆಯಲ್ಲಿ ಮಗು ಮಲಗಿದೆ.
ಪಾಪ, ತನ್ನ ಚಿಂತನೆಯಲ್ಲಿ ಅವಳಿಗೆ ನಿದ್ರೆ ಬಂದಿಲ್ಲ. ತಮ್ಮ ಮೊದಲ ಪ್ರೀತಿಯ ತಾಣದಲ್ಲಿ ಕುಳಿತಿರಬಹುದು. ನನ್ನನ್ನೇ ನೆನೆಯುತ್ತಿರಬಹುದು...ಮಗು ಕನವರಿಸುವನು. ಅಮ್ಮನಿಲ್ಲದೆ ಭಯ ಎಂದು. ಹೆದರದಿರು, ನಿನ್ನ ಅಮ್ಮನನ್ನು ಕರೆತರುವೆ ಎಂದು ಗೌತಮ ಹೊರಟನು.
ಅಹಲ್ಯೆ 14
ದೃಶ್ಯ ೭
(ಪೂರ್ವೋಕ್ತವಾದ ಬಳ್ಳಿಯ ಚಪ್ಪರದಲ್ಲಿ )
ಅಹಲೈ
ಸೊಗದ ಸುಳಿಗಾಳಿಯೊಳು ತರಗೆಲೆಯ ತೆರದಿ ಬಾನಲೆದು ಬಸವಳಿದೆ, ಪ್ರೇಮಭರದಿ !
ಇಂದ್ರ
ಈ ತೋಳಿನಂದಣದಿ ನನ್ನೊಲವೆ ತಂಗು ಶಶಿಗೆ ಶಶಿಕಲೆಯಂತೆ ಆಗಲೀ ಪಾಂಗು.
ಅಹಲ್ಯೆ
ಮುಟ್ಟಲೊಡೆಯುವ ನೀರ ಹೊಳೆಗುಳ್ಳೆಯಂತೆ ಮೋದವೆಂತಾಯಿತಹ ! ಆದೆ ವಿಭ್ರಾಂತೆ !
ಇಂದ್ರ
ಹೊಸತೆಂದರಾವುದಕು ಬೆಚ್ಚುವುದು ಮನವು-
ಭ್ರಾಂತಿ ಎನಿಸಿತೆ ಕಾಂತೆ ದೇವೇಂದ್ರನೊಲವು ?
ಆಹಲೈ
ಧನ್ಯಳೆನಿಸಿದೆ, ದೇವ, ಒಲುಮೆ ವರವಿತ್ತು. ಪೋ ಇಂದ್ರ, ಸೊಗ ಬೆಳೆಸಲಹುದದುವೆ ಕುತ್ತು.
ಇಂದ್ರ
ಬೇಸರಾಯಿತೆ ನಿನಗೆ ಶಕ್ರನೀ ಸಂಗ-
ಆಸರೇ ನಿನಗೆ ಸಖಿ ಈ ಪರಿಷ್ವಂಗ ?
ಅಹಲ್ಯೆ
ನಲವುಕ್ಕೆ ನಲಿಯಿಸಿದೆ, ಆಸೆ ಹಿಂಗಿಸಿದೆ-
ಹೋಗೀಗ, ನನ್ನೊಲವೆ, ನನ್ನ ಹಂಗಿಸದೆ.
ಇಂದ್ರ
ಇದ್ದಕಿದ್ದ ವೊಲೇಕೆ ಬಗೆ ಬೇರೆಯಾಯ್ತು? ಆವ ಶಂಕೆಗೆ, ಭೀರು, ನಲವರತುಹೋಯ್ತು
ಅಹಲೈ
ಪೋ ದೇವ ನುಡಿಸದೆಯೆ ನಮ್ಮ ನೀ ಹರಸಿ,
ನನ್ನಿಂದ ನಿನಗಾದ ಸಮ್ಮುದವ ಸ್ಮರಿಸಿ.
ಇಂದ್ರ
ಧ್ಯಾನಜಡ ಗೌತಮನ ಭೀತಿ ನಿನಗೇನು? ಇಳೆಯನೇ ಉಳಿವ ಬಾ-ಬಾ, ನಾನು ನೀನು.
ಅಹಲೈ
ಒಲಿದರೆಚ್ಚರದಿಂದ ಒಳ ನೋಟದಿಂದ ಪಳಿಯರಿತು ಮುನಿ ಮುನಿವ ಮುನ್ನ, ಪೋ ಇಂದ್ರ ।
ಆಲಿಸಿಗೊ ! ಪೋ ವೀರ !...ಹಾ ! ಮೀರಿತು!
ರುದ್ರಗೌತಮನಯ್ಯೊ ! ಬಾಳಾರಿತು !
( ಮೂರ್ಛೆ ಹೋಗುವಳು )
ಇಂದ್ರ
ಹಾ ಪ್ರಮಾದ ! ಹೋ ಗೌತಮ !
ಏ ಗತಿ ! ಏ ಗತಿ !
( ನಿಸ್ತೇಜನಾಗುವನು )
( ರುದ್ರವೂ ಕರುಣಾರಸಪೂರಿತವೂ ಆದ ವಾದ್ಯಗಳ ಮೇಳದ ಸಂಗೀತ ಸ್ವಲ್ಪ ಹೊತ್ತು ಮೊಳಗಿ ಶಾಂತವಾಗುವುದು )
ದೃಶ್ಯ _೮
( ಗೌತಮಾಶ್ರಮದಲ್ಲಿ ಒಂದು ಕಡೆ ನತಶಿರನಾದ ಗೌತಮನೂ ಮೈತ್ರೇಯನೂ ಪ್ರವೇಶಿಸುವರು. ವಟುವು ದೂರದಲ್ಲಿ ಇರುವನು. )
ಗೌತಮ
( ಕುಳಿತು, ತನಗೆ ತಾನೆ ನಿಟ್ಟುಸಿರಿಟ್ಟು )
ಇಂತಾಯ್ತು ನನ್ನಾತ್ಮ ಸಂಯಮದ ವೆಚ್ಚ-
ಜಗ ಜಗವೆ ನಗುವಂತೆ ನಾನಾದೆ ತುಚ್ಛ !....
ವ್ರತಗೆಟ್ಟು ಬಂದೆನೀ ಪಾಪಕೂಪಕ್ಕೆ -
ಮಮ ಕಾಮವಾಯಿತೀ ಶಾಪತಾಪಕ್ಕೆ ಎತ್ತ ಹೋಗಲಿ ನಾನು ನನಗೆ ಮರೆ ಎಲ್ಲಿ ?
ಸುಟ್ಟುಕೊಳಲೇ ಬಾಳ ಜಗವುರುಹುತಿಲ್ಲಿ ?
ಮೈತ್ರೇಯ
ಇಂತವಶರಪ್ಪರೇ ನಿನ್ನನ್ನರಯ್ಯ?
ಗೌತಮ
(ತನಗೆ ತಾನೆ)
ತನ್ನ ಪಳಿ ತಾನೊರೆಯುತಳುತಿರಲಿ ಇವಳು-
ಒಬ್ಬರೂ ಇಲ್ಲದಲೆ ಅಯ್ಯೋ ಎಂದೆನಲು ! ಅನ್ನ ನೀರಿಲ್ಲದೆಯೆ ಧೂಳಿನಲಿ ಹೊರಳಿ
ಆರ ಕಣ್ಣಿಗು ಬೀಳದೆ ಗಾಳಿಯಂತಿರಲಿ !
ಗೌತಮ
( ತನಗೆ ತಾನೆ )
ಆಃ | ನೀಚ ಪಾಪಿಷ್ಟ, ಹೋಗಲವ ಕೆಟ್ಟು-
ನಿರ್ನಿರಿಂದ್ರಿಯನಾಗಿ ಕಪಟಿ ದಿಕ್ಕೆಟ್ಟು !
ಮೈತ್ರೇಯ
ಕೋಪವನು ಸಂಹರಿಸು ಶಾಂತನಾಗಣ್ಣ, ಅದುದನು ಚಿಂತಿಸಲು ಬಗೆಗೆ ಬರಿ ಬನ್ನ.
ಗೌತಮ
ಕೆಂಡವನು ಅಂತಿರುವ ಬಟ್ಟೆಯಂತೆನ್ನ
ಈ ಬಾಳಿನೀ ಜೀವ ಸುಡುತಿಹುದೊ ಅಣ್ಣ !
ಏಗೈವೆ ಏಗೈವೆ ಏಗ್ಗೆವೆನೀಗ ? ಏಬಗೆದೆನೆಂತಾಯ್ತು ಈ ತಪದ ತ್ಯಾಗ ! ... ರಾಗಕ್ಕೆ ಈಡಾಗಿ ಮೋಹವಶನಾಗಿ ಕೆಟ್ಟೆನೋ ಕೆಟ್ಟೆನೋ ಆತುಮವ ನೀಗಿ ! (ತುಸು ಮೌನದಿಂದಿದ್ದು ನಿಟ್ಟುಸಿರಿಟ್ಟು,) ದಿಕ್ಕಿಲ್ಲ ದಂತಾದೆ ನಾ ಈ ಲೋಕದೊಳಗೆ ಹರಿಗೋಲು ಮುಳುಗಿತ್ತು ಭವಜಲಧಿಯೊಳಗೆ !
ಮೈತ್ರೇಯ
ನೀ ನಿರೀಹತೆಗಾಗೆ ನಮಗಾರು ದಿಕ್ಕು ? ನೀನೆಮ್ಮ ಬಾಳ್‌ಬೆಳಕು ಇಂದುಮುಂದಕ್ಕು.
ಗೌತಮ
ಕಾಮವಶೀ ಕ್ರೋಧವಶೀ ನಷ್ಟಾತ್ಮಂ ವಿರಸಿ !
ತನ್ನನೆ ತಾ ಗೆಲ್ಲದವರ ಇಕೊ ಈ ಹುಸಿ ತವಸಿ !
ಗತಮತಿಯನು ನಚ್ಚುವರೇ ಭವದುರ್ಗಮ ಪಥದಿ?
ಇನ್ನಿರೆ ನಾನೀ ತಾಣದಿ, ಬೀಳ್ಕೊಡು ಸಮ್ಮತದಿ.
ನನ್ನೆಳೆಯಗೆ ನೀನೇ ಪಿತ, ಮಾಧವಿ ತಾಯಿನ್ನು
ನಮ್ಮನು ಮರೆವಂತವನನು ಕಾಪಿಡಿರೀ ಮುನ್ನು.
ಪಳಿದಾಣವನಿದ ತೊರೆಯುತ ಬೇರೊಂದೆಡೆ ನೆಲಸಿ
ಇಲ್ಲಿಂದಾದುವ ನಿಮ್ಮಯ ಮನದಿಂದಲೆ ಅಳಿಸಿ.
ಮರುಗುವೆ ನಾನೀ ಹೆಣ್ಣಿಗೆ : ಒಲಿದಳು ದೇವತೆಗೆ
ರಾಗಭ್ರಾಂತಿಯೊಳಳಿದಳು ನನ್ನಯ ಮೂಢತೆಗೆ !
ವಿಧಿನಿಯಮವ ಮಾರಿದರಾರ್ ! ಈ ಚೇತನವಿಂತು
ಶುದ್ದಿಗೆ ಬರೆ ತವಿಸುತ್ತಿದೆ ಮಮ ಶಾಪವನಾಂತು.
ಬಾಳ್ ಬಾಳಿಗು ಏನಂತರ ! ಇದ್ದೆವು ಸನಿಯದೊಳೇ-
ಒಬ್ಬರ ಹಂಬಲವೊಬ್ಬರು ತುಸುವೂ ತಿಳಯದಲೇ!
ತಾನೆನ್ನುವ ಮರೆಗಾಗಲು ಆತ್ಮದ ಬೆಳಕಿಂತು.
ತನ್ನಲ್ಲದೆ ಬೇರೊಂದನು ಕಾಣುವ ಬಗೆಯೆಂತು ?
ಹಿಮಗಿರಿಯೇಕಾಂತದ ಗವಿ-ಆತ್ಮವಿಸಂಬೋಧಿ !
ಈ ಬೇಗೆಯ ನಂದಿಸಲಹುದಾ ಶಿಶಿರ ಸಮಾಧಿ !
ಬೀಳ್ಕೊಡು, ಕೆಳೆಯಾ, ಹೋಗುವೆ ನನ್ನೊಳಗನು ತಿಳಿಯೆ
ವಿಶ್ವಾತ್ಮದ ಚಿಂತನೆಯೊಳು ನಾನೆಂಬುದನಳಿಯೆ.
(ಹೋಗುವನು)
(ಮೈತ್ರೇಯನ ಹತ್ತಿರ ವಟುವು ಬರುತ್ತಿರುವನು)
ಮೈತ್ರೇಯ (ತನಗೆ ತಾನೆ)
ಹೋದನು ಗೌತಮ ಎಲ್ಲವ ತೊರೆದು, ಸುತ್ತಲೆತ್ತಲೂ ಬರಿದೋ ಬರಿದು
ಮಸಣವಿದಾಯಿತು ಮಂಗಳ ನಾಡು
ಗಾಳಿಗಳೂಳುವ ಗೋಳಿನ ಬೀಡು !
ಹಾರೈಸಿದುದೇನಾದುದು ತಾನೇಂ ? ಹಿಂಬದಿಯೊಳು ವಿಧಿ ನಕ್ಕುದ ಕಾಣೆಂ.
ಹಸುಳೆ ಬೆಸಗೊಳ್ಳಲೇನೆಂದೊರೆವೆ ?
ಎಂತೀ ತಾಯ್ನೆಲವನು ನಾ ತೊರೆವೆ ?
ಫಕ್ಕನೆ ತುಡುಕಿತು ನಮ್ಮ ವಿಪತ್ತು
ಮುಂದ ತೋರದೋ ಈ ಆಪತ್ತು.
( ಹತ್ತಿರ ಬಂದ ವಟುವನ್ನು ಕುರಿತು )
ಬಾ ಕೌಶಿಕ ಬಾ, ಅಳದಿರು ಕಂದ,
ಇಂದಾಯಿತು ವಿಧಿಯಾಟದ ಚಂದ !
೦೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಅಹಲ್ಯೆ ಮತ್ತು ಇಂದ್ರರು ಉದ್ಯಾನವನದಲ್ಲಿ ವಿಹರಿಸುತ್ತಿರುವರು.ಪರಸ್ಪರ ಪ್ರೀತಿಯಲ್ಲಿ, ಸಂಗಸುಖದ ಅಮಲಿನಲ್ಲಿ ಇರುವರು. ಅಹಲ್ಯೆಗೆ ಸುಖದ ತೀವ್ರತೆ ದಕ್ಕಿದೆ. ಇದು ನಿಜವೋ, ಭ್ರಾಂತಿಯೋ ಎಂಬಂತಾಗಿದೆ. ಇಂದ್ರ ರಮಿಸುತ್ತಾನೆ. ಅಹಲ್ಯೆಗೆ ಏನೋ ಕಾತುರ ಆರಂಭವಾಗುತ್ತದೆ. ನನಗೆ ಸುಖವಿತ್ತೆ. ಇನ್ನು ಹೊರಡು ಎನ್ನುತ್ತಾಳೆ. ಗೌತಮನು ಧ್ಯಾನದಲ್ಲಿ ಜಡನಾಗಿದ್ದಾನೆ. ಅವನ ಬಗ್ಗೆ ಹೆದರದಿರು ಎಂದು ಇಂದ್ರ ಹೇಳುತ್ತಾನೆ. ಅಷ್ಟರಲ್ಲಿ ಅವಳಿಗೆ ಆ ಕಡೆಗೆ ಗೌತಮನು ಬರುತ್ತಿರುವುದು ಕಾಣಿಸುತ್ತದೆ. ಅತ್ಯಂತ ಭೀತಳಾಗಿ ಮೂರ್ಛೆ ಹೋಗುತ್ತಾಳೆ. ಇಂದ್ರನಿಗೂ ಭಯವಾಗಿ ಇನ್ನೇನು ಗತಿ ಎಂದು ನಿಸ್ತೇಜನಾಗುತ್ತಾನೆ.
ರುದ್ರ ಮತ್ತು ಕರುಣರಸಗಳಿಂದ ಕೂಡಿದ ಸಂಗೀತ ಸ್ವಲ್ಪ ಹೊತ್ತು ಅಲ್ಲಿ ತುಂಬುತ್ತದೆ.
ದೃಶ್ಯ ೮
ಸಂತಪ್ತನಾದ ಗೌತಮ ಮೈತ್ರೇಯನೊಂದಿಗೆ ಮಾತನಾಡುತಿದ್ದಾನೆ. ತನಗೆ ತಾನೆ ಕೆಲವು ಮಾತುಗಳನ್ನು ಹೇಳಿಕೊಳ್ಳುತ್ತಾನೆ. ನನ್ನ ಬಾಳು ಹೀಗಾಯಿತಲ್ಲ...ನನ್ನ ತಪಸ್ಸನ್ನು, ವ್ರತವನ್ನು ಬಿಟ್ಟು ಬಂದೆನಿಲ್ಲಿಗೆ. ಎಲ್ಲವೂ ಹಾಳಾಯಿತು.
ಅದೇ ಆವೇಗದಲ್ಲಿ ಅಹಲ್ಯೆಗೆ ಶಪಿಸುತ್ತಾನೆ. ಒಬ್ಬರೂ ಅಯ್ಯೋ ಎನ್ನುವವರು ಇಲ್ಲದೆ ಒಬ್ಬಳೇ ನರಳುತ್ತ ಅನ್ನ ನೀರಿಲ್ಲದೆಯೆ ಧೂಳಿನಲ್ಲಿ ಹೊರಳುತ್ತ ಯಾರ ಕಣ್ಣಿಗೂ ಬೀಳದೆ ಗಾಳಿಯಂತೆ ಇರಲಿ. ಎಂದು ಶಪಿಸುತ್ತಾನೆ.
ಮೈತ್ರೇಯ ಸಮಾಧಾನಿಸಲು ಪ್ರಯತ್ನ ಪಡುತ್ತಾನೆ. ಅಂತಹಾ ಇಂದ್ರ ನೇ ನೀತಿ ಬಿಟ್ಟರೆ ಇವಳೇನು ಮಾಡುತ್ತಾಳೆ ಎನ್ನುವಾಗ ಗೌತಮ ಇಂದ್ರನೂ ನಿರಿಂದ್ರಿಯನಾಗಿ ದಿಕ್ಕೆಟ್ಟು ಹೋಗಲಿ ಎಂದು ಶಪಿಸುತ್ತಾನೆ. ಕೋಪವನ್ನು ಬಿಟ್ಟು ಶಾಂತನಾಗು ಎಂದು ಮೈತ್ರೇಯ ಹೇಳುವನು. ಗೌತಮನಿಗೆ ಅಪಾರವಾದ ಆಘಾತವಾಗಿದೆ. ಮಾಡುತ್ತಿದ್ದ ತಪಸ್ಸೂ ವ್ಯರ್ಥವಾಯಿತು. ಮಡದಿ ಹೀಗೆ ನೀತಿ ಬಿಟ್ಟಿದ್ದಾಳೆ. ಎತ್ತ ಹೋಗಲಿ, ಏನು ಮಾಡಲಿ ಎಂದು ಹಲುಬುತ್ತಾನೆ. ಕಾಮಕ್ಕೆ, ಕ್ರೋಧಕ್ಕೆ ವಶನಾದ ನಾನು ಎಂತಹ ಮುನಿ? ಎಂದು ತೊಳಲುತ್ತಾನೆ. ತನ್ನ ಮಗನನ್ನು ನೀನೇ ಸಲಹು. ಮಾಧವಿ ತಾಯಿಯಂತೆ ಕಾಪಾಡಲಿ ಎನ್ನುವನು
ಅಲ್ಲಿಂದ ಮರೆಯಾಗಿ ಎಲ್ಲಿಗಾದರೂ ಹೋಗಿಬಿಡಬೇಕೆಂದು ನಿಶ್ಚಯಿಸುತ್ತಾನೆ. ವಿಧಿಯನ್ನು ಮೀರುವರಾರು? ಶಾಪಕ್ಕೆ ಗುರಿಯಾದ ಈ ಜೀವ ಎಂತು ಶುದ್ಧಿಗೆ ಬರುವುದೋ, ಒಬ್ಬರನ್ನೊಬ್ಬರು ಪರಸ್ಪರ ಹಂಬಲ ತಿಳಿಯದೇ ಇದ್ದೆವು ಇಷ್ಟು ದಿನ. ಆತ್ಮದ ಬೆಳಕು ದಾರಿ ತೋರಿಸಬೇಕು. ಹಿಮಗಿರಿಯ ಏಕಾಂತದಲ್ಲಿ ಆತ್ಮದ ಬೆಳಕಿಗಾಗಿ ಹೋಗುತ್ತೇನೆ. ನನ್ನನ್ನು ಬೀಳ್ಕೊಡು ಗೆಳೆಯಾ ಎನ್ನುತ್ತ ಅಲ್ಲಿಂದ ಹೊರಡುವನು.
ಮೈತ್ರೇಯನ ಬಳಿಗೆ ವಟು ಕೌಶಿಕ ಬರುವನು. ಮೈತ್ರೇಯ ತನಗೆ ತಾನೇ ಗೌತಮರ ಬಗ್ಗೆ ಮರುಗುವನು. ಇಂತಹ ವಾತಾವರಣ ಇಂದು ಮಸಣದಂತಾಯಿತು ಎಂದು ಮರುಗುವನು. ಇಲ್ಲಿಂದ ನಾವು ಹೋಗಲೇಬೇಕಿದೆ. ಈ ಆಪತ್ತಿಗೆ ಕೊನೆಯು ಎಂತೋ ಎಂದು ಚಿಂತಿಸುವನು. ಕೌಶಿಕನನ್ನು ಸಮಾಧಾನ ಪಡಿಸುತ್ತ ಹೊರಡುವನು.
ಅಹಲ್ಯೆ 15
ಮಧ್ಯಮಾಂಕ
ದೃಶ್ಯ ೧
(ಸ್ವರ್ಗದಲ್ಲಿ ಸ್ಥಾನ, ಅಪ್ಸರೆಯರು ಸಲ್ಲಾಪದಲ್ಲಿ ತೊಡಗಿದ್ದಾರೆ)
ಒಬ್ಬಳು
ಸ್ವರ್ಗದೊಳೆ ಸೊಗವಿಲ್ಲ, ಸುರರಿಗುಲ್ಲಸವಿಲ್ಲ, ನಂದನದೊಳಾನಂದವರತುಹೋಯ್ತು. ಸಲ್ಲಾಪಕೆಡೆಯಿಲ್ಲ, ಸಂಗೀತಕೆಡರಾಯ್ತು, ನಮ್ಮ ಕಲಿಕೆಗಳೆಲ್ಲ ಮರೆತೆಹೋಯ್ತು.
ಎರಡನೆಯವಳು
ಚೆಲುವ ನೋಡುವರಿಲ್ಲ, ಕೊರಲನಾಲಿಪರಿಲ್ಲ.
ಕಡೆಗಣ್ಣ ನೋಟಕ್ಕು ಕರಗುವವರಿಲ್ಲ. ರೂಪು ಕುಂದಿದೆನೇನೋ ಎಂದು ಶಂಕಿಸಿ ನಾನು
ಕನ್ನಡಿಯ ಮುಂಗಡೆಯ ಕಳೆವೆ ಹೊತ್ತೆಲ್ಲ !
ಮೂರನೆಯವಳು
ನೋಡುವೊಲು ನೋಡನು, ಆಡುವೊಲು ಆಡನು
ಇರುತಿಹನು ಸದಾ ಮರವಟ್ಟವನಂತೆ; ಮೊಗಕೊಟ್ಟು ನುಡಿಯನು ಮಂದಿಯೊಡಗೂಡನು,-
ಏನೆ ಸಖಿ, ದೇವೇಂದ್ರ ದೊರೆಗೇನು ಚಿಂತೆ ?
ನಾಲ್ಕನೆಯವಳು
ನೂರು ಚಿಂತೆಗಳುಂಟು ಜಗವಾಳುವರಸನಿಗೆ
ನಾವೆಂತು ಬಲ್ಲೆವೇ ಏಚಿಂತೆಯೆಂದು ?
ಮೊದಲನೆಯವಳು
ಅಗೊ ನಮ್ಮನರಸುತ್ತ ರಂಭೆ ಬರುತಿಹಳಿತ್ತ
ಆವುದೋ ಕೌತುಕದ ಬೇಹ ತಂದು.
(ರಂಭೆ ಸಡಗರದಿಂದ ಪ್ರವೇಶಿಸುತ್ತಾಳೆ)
ರಂಭೆ
ಬನ್ನಿ ಬನ್ನಿ ಪ್ರೇಮದೇವನನೆಚ್ಚರಿಸುವ ಬನ್ನಿ :
ವೀಣೆ ತನ್ನ ತಾಳ ತನ್ನಿ ಮದನ ಪರಾಕೆ.
ದಿವದ ಬಾಳ ಕವಿದ ಬನ್ನದಿರುಳು ಜಾರಲೆಂದು,
ಸುಪ್ರಭಾತ ಗೀತವೆನ್ನಿ-ಒಲವೆ ಎಚ್ಚರೆಂದು.
ಅಗ್ನಿ ಎರೆಯೆ ಶಮಿತವಾಯ್ತು, ಪಿತಾಮಹನ ಕೋಪ;
ರಾಹು ಶಶಿಯ ಬಿಡುವ ತೆರದಿ ಹರಿಯಿತಿಂದ್ರ ಶಾಪ.
ತಿರೆಯ ಹೆಣ್ಣಿಗನುತಪಿಸುವ ದೊರೆಯ ಚಿಂತೆ ನೀಗೆ,
ಬನ್ನಿ ಉದಯಗೀತವೆನ್ನಿ ಒಲವಿಗೆಚ್ಚರಾಗೆ.
ಎರಡನೆಯ ಅಪ್ಸರೆ
ಏನು ಮಾತೆಂಬೆ ರಂಭೆ, ಎಚ್ಚರಿಸುವುದಾರನು ?
ನಿದ್ದಿಪುದೇ ಲೇಸು ಲೇಸು ಈ ಕುಚೋದ್ಯಗಾರನು.
ಆತನಿಂದ ದೊರೆಗೆ ಬನ್ನ-ದಿವವೆ ಆಯ್ತು ಖಿನ್ನ;
ಅವನ ಮಾತನೆತ್ತದಿರೌ ಇದಿರೊಳಿನ್ನು ಮುನ್ನ.
ನಾಲ್ಕನೆಯ ಅಪ್ಸರೆ
ದೂರಬೇಡ ಒಲವ ಗೆಳತಿ. ಅವನದೇನು ತಪ್ಪು ?
ಆಸೆಮಿಂಚು ಕೋರೈಸಲು ತಪ್ಪಿತವನ ನೆಪ್ಪು.
ಬಾನೊಳೆದ್ದು ಬಾಲಚುಕ್ಕಿ ಇದ್ದಕಿದ್ದ ರೀತಿ ತಾರೆ ಮರೆಸಿ ಇರುಳ ಮೋಹಿಪಂತೆ ಇವರ ಪ್ರೀತಿ.
ರಂಭೆ
ತಪ್ರೊ ನೆಪ್ರೊ ತರ್ಕವೇಕೆ, ಬನ್ನಿ ಸಖೀ ಬನ್ನಿ
ಪ್ರೇಮಸುಪ್ತ ಜಗದಿ ಮೋದ ಸುಪ್ತವಾಯಿತೆನ್ನಿ,
ಜೀವ ಜೀವರೊಬ್ಬರೊಬ್ಬರೊಳಗನರಿಯದಂತೆ ವಿರಸತೆಯೊಳು ತೊಳಲುತಿಹರು ಒಲವೆ ಮಲಗಲಿಂತೆ.
ತಿಲೆಯ ಬಾಳೊಳಾಯಿತೊಂದು ಭೀಮ ಕಾಮ ಭೂತ.
ಬಾಳ ಬಾಳ ಹಿಂಡುತಿಹುದು, ಸೃಷ್ಟಿಯಾಯ್ತು ಭೀತ;
ಮೊರೆಯು ಮುಟ್ಟಿತಿಲ್ಲಿ ಗಾದೊಡರಸು ಕಿವುಡನಂತೆ
ಉದಾಸೀನನಾಗಿಹನೌ, ಆತಗದೇ ಚಿಂತೆ.
ಮಿಥಿಲೆಬನದೊಳೇಕಾಕಿನಿ ಅನುತಾಪವಿಹೀನೆ
ತಮ್ಮ ತಿಶುಚಿ ಬಾಷ್ಪಮುಚೆ ಪರಿತಾಪವಿದೀನೆ
ಗೌತಮಸತಿ; ಅವಳ ಕೊರಗು ವಜ್ರಮನಕೆ ತಟ್ಟಿ ಕಾರ್ಯವಿಮುಖನಾಗಿಸಿಹುದು ಉತ್ಸಾಹವ ಮೆಟ್ಟಿ.
ಚೈತ್ರನಂಜಿ ಹೊಗದ ತಾಣ, ಮಂದಿಯುಸಿರ ಕಟ್ಟಿ
ಸನ್ನೆಯಿಂದ ತೋರ ತಾಣ, ಅಲ್ಲೆ ದೊರೆಯ ದೃಷ್ಟಿ.
ಧರ್ಮನೊರೆದ : "ಬರುವನಗೋ ಅತ್ತ ಮಹಾಧೀರ;
ಬಂದು ಮರುಕವೆರೆವನಹುದು ಸತಿಗೆ ನಿಸ್ತಾರ.
"ಜನಕಯಾಗವಾರ್ತೆ ಹರಡಲಿಳೆಯ ತವಸಿ ಮಂದಿ,
ಮಿಥಿಲೆಯತ್ತ ಸಾಲಿಟ್ಟಿದೆ ತಣಿವಿನಾಸೆಯೊಂದಿ.
ಮಗಳ ಚೆಲುವಿಗೆಳಸಿ ಪಣದ ಶಿವನ ಬಿಲ್ಲ ಗೆಲ್ಲೆ,
ಹಮ್ಮಿನಿಂದ ನೆರೆದರಯ್ಯ ಕಾಮಿಯರಸರಲ್ಲೆ.
"ಅಶ್ವಿನಿಸುತರೊಪ್ಪೆ ಕೆಲದಿ ನಡೆವನಗ್ನಿ ಎಂತು
ದಾಶರಥಿಗಳೊಂದಿ ಬಹನು ಕುಶಿಕತನಯನಂತು.
ಉದಯದಲ್ಲಿ ಸೂರ್ಯಕಿರಣಕಳಿವ ಮಬ್ಬಿನೋಲು
ಇವರ ತೇಜ ಬದುಕ ಮುಟ್ಟೆ ಹರಿವುದಿವಳ ಗೋಳು.
"ಚಿಂತೆಯ ಬಿಡು, ಚೈತ್ರನಟ್ಟು; ಸಿಂಗರಿಸಲಿ ಕಾಡ,
ನಂದನದೊಲು ಅಂದಗೈಯೆ ಸತಿಯ ತಪದ ಬೀಡ;
ಇತ್ತ ಹಾದಿ ಎಂದು ತೋರುವಂತೆ ಬನದ ದೇವಿ
ಅಲರು ತಳಿರು ಬಗೆಯಕೊಳಲಿ ದಾರಿಯಳಲ ಸೋವಿ.
"ಎಬ್ಬಿಸೊಲವ ದಿವದ ಹೆಂಗಳಿಂದ : ಅವನ ದೃಷ್ಟಿ
ಸುರಿಯಲೆಲ್ಲ ಜೀವರೊಳಗು ಶಾಂತಿ ಪುಷ್ಟಿ ತುಷ್ಟಿ,
ಬಾಳ ಬಾಳ ಬೀಳುಗೈವ ಸೋಗಿನೊಲವ ಕಾಮ
ಅಂಜಿ ನಾಚಿ ಅಡಗುವಂತೆ, ಎದೆಯೊಳಾಗೆ ಪ್ರೇಮ.''
-ಎನ್ನಲರಸನಾಣೆಗೊಂಡು ಬಂದೆ ಸಖೀ ಬನ್ನಿ,
ವೀಣೆ ತನ್ನಿ ತಾಳ ತನ್ನಿ ಒಲವೆ ಎಚ್ಚರೆನ್ನಿ; ಮಂಜಿನೊಳಗೆ ಕಮಲದಂತೆ ಕೊರಗುವಿಳೆಗೆ ಮೇಲ
ಎಸಗಲೊಲುಮೆ ಉದಯವಾಗೆ ಹಸನಾಗಿಸೆ ಬಾಳ.
ಮೊದಲನೆಯವಳು
ಅರಸರಾಣೆ ಇಂತೆ ಸಖಿ ! ಬನ್ನಿರೆಲ್ಲ ಬನ್ನಿ, ವೀಣೆ ತನ್ನಿ ತಾಳ ತನ್ನಿ ಉದಯಗೀತವೆನ್ನಿ.
ಮಾರ ಪರಾಕೆನ್ನಿ
ಒಲವೆ ಎಚ್ಚರೆನ್ನಿ !
(ಎಲ್ಲರೂ ಹೊರಡುತ್ತಾರೆ)
೦೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಸ್ವರ್ಗದಲ್ಲಿ ಅಪ್ಸರೆಯರು ಪರಸ್ಪರ ಮಾತನಾಡುತ್ತಿದ್ದಾರೆ. ಒಬ್ಬಳು ಹೇಳುತ್ತಾಳೆ. ಈಗ ಸ್ವರ್ಗದಲ್ಲಿ ಗೆಲುವೇ ಇಲ್ಲ. ಸುರರಿಗೆ ಉಲ್ಲಾಸವಿಲ್ಲ. ಸಂಗೀತ ನಾಟಕ ನೃತ್ಯ ಸಲ್ಲಾಪ ಯಾವುದೂ ಇಲ್ಲ. ನಮಗೆ ಕಲಿತದ್ದೆಲ್ಲ ಮರೆಯುತ್ತಿದೆ ಎಂದು.
ಅದಕ್ಕೆ ಇನ್ನೊಬ್ಬಳು ದನಿಗೂಡಿಸುತ್ತಾಳೆ. ನಮ್ಮ ಚೆಲುವನ್ನು ನೋಡುವವರಿಲ್ಲ. ನಮ್ಮ ರೂಪವೇ ಕೆಟ್ಟಿದೆಯೇನೋ ಎಂದು ಕನ್ನಡಿಯ ಮುಂದೆ ಬಹಳ ಹೊತ್ತು ಕಳೆಯುತ್ತಿದ್ದೇವೆ.
ಮೂರನೆಯವಳು ಅದಕ್ಕೆಲ್ಲ ಕಾರಣ ಇಂದ್ರನ ಉದಾಸೀನ ಎನ್ನುವಳು. ಅವನು ಯಾರನ್ನೂ ನೋಡುತ್ತಿಲ್ಲ. ಮಾತನಾಡಿಸುತ್ತಿಲ್ಲವೆಂದರೆ ಮತ್ತೊಬ್ಬಳು ಅವನಿಗೆ ನೂರೆಂಟು ಕೆಲಸಗಳಿರುತ್ತವೆ. ಅವನ ಚಿಂತೆಯೇನೋ ನಮಗೇನು ಗೊತ್ತು ಎಂದಳು. ಅಷ್ಟರಲ್ಲಿ ರಂಭೆ ಬರುವಳು. ಎಲ್ಲರನ್ನೂ ಕರೆಯುವಳು.
ದೇವೇಂದ್ರನನ್ನು ಎಚ್ಚರಿಸೋಣ. ನಮ್ಮ ಕಡೆಗೆ ಒಲಿಸಿಕೊಳ್ಳಲು ನೋಡೊಣ. ತಾಳ ತಂತಿ ಎಲ್ಲ ತನ್ನಿ ಎನ್ನುವಳು. ನಮ್ಮ ಒಲವಿಗೆ ಎಚ್ಚರವನ್ನು ತರಿಸೋಣ.
ಅದಕ್ಕೆ ಒಬ್ಬಳು ಎಚ್ಚರಿಸಿವುದು ಯಾರನ್ನು? ಮದನನ ಮುಂದೆ ಎಲ್ಲವೂ ಸೋಲುತ್ತದೆ. ಇನ್ನೊಬ್ಬಳು ಅವನದೇನು ತಪ್ಪು? ಆಸೆಯ ಮಿಂಚು ಕೋರೈಸಿತು. ಅವನು ಮೋಹಕ್ಕೆ ಒಳಗಾದನು ಎಂದಳು.
ರಂಭೆಯು ಮಾತ್ರ ಎಲ್ಲರನ್ನೂ ಉತ್ತೇಜಿಸುವಳು ತಪ್ಪೋ, ಸರಿಯೋ ತರ್ಕ ಬೇಡ. ಈ ಪ್ರಪಂಚದಲ್ಲಿ ಎಲ್ಲರೂ ಪ್ರೇಮಕಾತರರು. ತೊಳಲುತ್ತಿರುವರು. ನಮ್ಮ ಒಲವೇ ಮಲಗಿದ್ದರೆ ಹೇಗೆ? ಎಚ್ಚರಿಲೇಬೇಕು ನಾವು ಎನ್ನುವಳು.
ಭೂಮಿಯಲ್ಲಿ ಆಗಿರುವ ಕಾಮನ ಪ್ರಚೋದನೆಯಿಂದ ಅಹಲ್ಯೆಗೆ ಶಾಪ ಉಂಟಾಗಿದೆ. ಬನದಲ್ಲಿ ಏಕಾಕಿನಿಯಾಗಿ ಇದ್ದಾಳೆ. ಅದರಿಂದ ಇಂದ್ರನಿಗೆ ಉತ್ಸಾಹ ತಗ್ಗಿದೆ. ಬೇಸರವಾಗಿದೆ. ಧರ್ಮನು ಅವಳ ಶಾಪಕ್ಕೆ ಪರಿಹಾರವನ್ನು ಹೇಳಿಹನು. ಜನಕನ ಯಾಗಕ್ಕೆ ಎಲ್ಲ ಸಿದ್ಧತೆಗಳಾಗಿವೆ. ಶಿವನ ಬಿಲ್ಲನ್ನು ಗೆದ್ದವರಿಗೆ ಸೀತೆಯಂತೆ. ಆಸೆಯಿಂದ, ಹಮ್ಮಿನಿಂದ ಎಲ್ಲರೂ ನೆರೆದಿರುವರು.
ಈ ಮಧ್ಯ ಅಶ್ವನಿದೇವತೆಗಳಂತೆ ಕಾಣುವ ಇಬ್ಬರೊಂದಿಗೆ ಕುಶಿಕತನಯ ಇತ್ತಲೇ ಬರುತ್ತಿರುವನು. ಅವರ ತೇಜಸ್ಸಿನಿಂದ ಅಹಲ್ಯೆಯ ಶಾಪ ಅಳಿಯುವುದು.
ಆದುದರಿಂದ ಚಿಂತೆ ಬೇಡ. ಚೈತ್ರನನ್ನು ಕಳಿಸಿ ವನವನ್ನು ಸಿಂಗರಿಸಲು ಹೇಳು. ವನದೇವಿ ಸಿಂಗಾರಗೊಳ್ಳಲಿ. ದಾರಿ ತೋರಲಿ.
ದಿವಿಜರೊಲವಾದ ಇಂದ್ರನನ್ಬು ಎಬ್ಬಿಸಿ. ಎಲ್ಲ ಜೀವಗಳಿಗೂ ಶಾಂತಿ, ಪುಷ್ಟಿ, ತುಷ್ಟಿಗಳು ದೊರೆಯಲಿ. ಬದುಕನ್ನು ಬೀಳುಗೊಳಿಸದೆ ಎದೆಯಲ್ಲಿ ಉಳಿಯಲಿ ಕಾಮ.
ಬನ್ಬಿ ಬನ್ನಿ ಎಂದು ಎಲ್ಲರೂ ಹೇಳುವರು. ಹಾಡುತ್ತ ಹೊರಡುವರು.
ಅಹಲ್ಯೆ 16
ದೃಶ್ಯ ೨
( ಮನ್ಮಥನ ಅಂತಃಪುರ. ಕಾವಲುಗಾರನು ತಿರುಗಾಡುತ್ತಿರುವನು. ಅಪ್ಸರೆಯರು ಗಾನವಾರಂಭಿಸಿದ್ದಾರೆ-ತೆರೆ
ಏಳುತ್ತದೆ )
ಅಪ್ಸರೆಯರು
(ಮರೆಯಲ್ಲಿ)
ಎಚ್ಚರೆಚ್ಚರು ಮಾರ ಮೂಜಗದ ಸಿಂಗಾರ ಮನಮನದ ಬಂಗಾರ ಎಚ್ಚರೆ ಏಳ್ಳೆ.
(ಕಾವಲುಗಾರನು ಬೆರಗಿನಿಂದ ಆಲಿಸಿ ಭ್ರುಕುಟಿಯನ್ನು ರಚಿಸಿ ಸಿಟ್ಟನ್ನು ತೋರಿ ಅತ್ತ ಇತ್ತ ನೋಡುವಾಗ ಅಪ್ಸರೆಯರು ಹಾಡಿಕೊಂಡು ಪ್ರವೇಶಿಸುತ್ತಾರೆ)
ಒಲವರಸೆ ಚೆಲುವರಸೆ ನನೆಗೋಲ ಬಿಲ್ಲರಸೆ
ಸಕಲ ಸಮ್ಮುದದರಸೆ ಎಚ್ಚರೆ ಏಳ್ಳೆ.
ಕಾವಲುಗಾರ
ಸದ್ದು ಮಾಡದಿರಿ ಗಲಗು ಮಾಡದಿರಿ ನಿದ್ದೆ ಗೈಯುತಿಹರರಸರು;
ಬುದ್ದಿ ಇಲ್ಲವೇನಪ್ರಬುದ್ಧರೇ ? ಎದ್ದರೊಡೆಯರೇಗೈಯರು !
ತಾಳ ತಂಬೂರಿ ಮೇಳ ಚೆನ್ನಾಯ್ತು
ವೇಳೆ ನಿಮಗೆ ಒಂದಿಲ್ಲವೆ ? ನಿಮ್ಮನಿತ್ತೆಡೆಗೆ ಬಿಟ್ಟವರದಾರು ?
ಹೇಳ್ವ ಕೇಳ ಜನವಿಲ್ಲವೆ ?
ರಂಭೆ
ಕೋಪಗೊಳ್ಳದಿರು, ದ್ವಾರಪಾಲಣ್ಣ ಸಮಯವೇನೆಂಬೆ ಈಗ ನೀ ?-
ಮಾಗಿ ಮುಗಿದಾಯ್ತು ಮಂಜು ಮುರಿದಾಯ್ತು
ಹೊಚ್ಚ ಹೊಸದಾಯ್ತು ಕುಂಭಿನೀ.
ಜುಗ್ಗ ಮಾಗಿ ಬಚ್ಚಿಟ್ಟ ಸಂಪತ್ತು ಮಾಸಲಾಯಿತೋ ಮಧುವಿಗೆ. ಬನಬನದ ಕಂಪು ಹಕ್ಕಿ ಕೊರಲಿಂಪು ಸೂರೆ ಹೋಯಿತೋ ಮರುತಗೆ.
ರಂಗುರಂಗಾಗಿ ರಾಗಕಿಂಬಾಗಿ
ಜನದ ಬಗೆಯಾಯೊ ಬಯಕೆಗೆ;
ಹೆಣ್ಣ ಕಣೋಟ ತಿಣ್ಣವಾಯ್ತಣ್ಣ.
ಮಲಗೆ ಮಾನವೇ ಒಲವಿಗೆ?
ಕಾವಲುಗಾರ
ಇಂತೆಯೇ ಕೆಳದಿ, ಮಾಗಿ ಮಗ್ಗಿತೇ ಸುಗ್ಗಿಯಾಯಿತೇ ತಿರೆಯೊಳು ? ಅತ್ತಣರಿವು ಎಂತಕ್ಕ ನಮಗಹುದು-
ಅಂತವುರದೊಳಗೆ ಕಾವಲು.
ಒಡೆಯರೆಚ್ಚರಿಸೆ ತಕ್ಕುದೀ ವೇಳೆ ಉದಯರಾಗವಂ ಹಾಡಿರೌ,
ನಿದ್ದೆ ಕನಸಾಗೆ ಕನಸು ನನಸಾಗೆ
ಮೃದುಳಗಾನವಂ ಗೆಯಿರೌ.
ಅಪ್ಸರೆಯರು
(ಹಾಡುತ್ತಾರೆ)
ಎಚ್ಚರೆಚ್ಚರು ಮಾರ ಮೂಜಗದ ಸಿಂಗಾರ ಮನಮನದ ಬಂಗಾರ ಎಚ್ಚರೆ ಏಳ್ಳೆ. ಒಲವರಸೆ ಚೆಲುವರಸೆ ಸಕಲ ಸಮುದದರಸೆ
ಜಗದ ನಲ್ ಬಾಳ್ ಬೆಳಸೆ ಎಚ್ಚರೆ ಏಳ್ಳೆ.
ತಿರೆಯ ಕಾಡಿನ ಮಡಿಯೊಳಲರಂಬು ಚೆಲುವಾಯ್ತು
ಕರಿಮುಗಿಲು ಜೊನ್ನವನು ತಳೆದಂತೆ ಏಳ್ಳೆ. ದುಂಬಿ ಹೆದೆಗನುವಾಗಿ ಝೇಂಕಾರ ಗೈಯುತಿದೆ,
ಮಾಗಿ ಮಗ್ಗಿತು ಸುಗ್ಗಿಯಾಯಿತೈ ಏಳ್ಳೆ.
ಪದುಮ ಪಾದರಿ ಮೊಲ್ಲೆ ಮಲ್ಲಿಗೆಯ ಪರಿಮಳದಿ
ಈಸಿ ಕೈಬೀಸಿಹನು ಮಾರುತನು ಏಳ್ಳೆ. ಹೊಂಗೆ ಹೂವಿಂ ಗೈದ ರಂಗವಲ್ಲಿಯ ಹಸೆಯೊ-
ಳೋಲಗವ ಕೊಡೆ ಚೈತ್ರ ಕರೆಯುತಿಹನೇಳೈ.
ಗಿಳಿವಿಂಡ ಹೂಡಿಕೆಯ ಬಂದ ಮಾವಿನ ತೇರು
ಸಿಂಗಾರವಾಗಿಹುದು ಎಚ್ಚರೆ ಏಳ್ಳೆ. ಕೋಗಿಲೆಯ ನಿಡುಕೊಂಬು ಸನ್ನೆಯನು ಗೈಯುತಿದೆ
ನೀ ಬಿಜಯಗೈವೆಯೆಂದೆಚ್ಚರಿಕೆ ಏಳ್ಳೆ.
ಹೊಸ ಹುಟ್ಟಿನುಲ್ಲಸವ ಸಫಲವಾಗಿಸೆ ಬಾರ,
ಹಸಿದ ಪಟು ಕರಣಗಳ ತಣಿಸಿ ಬಾರ, ಹುಸಿ ನೀತಿ ನೇತಿಗಳ ಕೋಟಲೆಯ ಕಳೆ ಬಾರ,
ಒಸಗೆಯಾಗಲಿ ನಿಯತಿಗೇಳಯ್ಯ ಮಾರ.
ಎಚ್ಚರೆಚ್ಚರು ಮಾರ ...
(ಶಯ್ಯಾಗಾರದ ಬಾಗಿಲನ್ನು ತೆರೆದು, ಹಾಡುತ್ತಾ ಮದನ ಪ್ರವೇಶಿಸುತ್ತಾನೆ : ಉಜ್ಜಲರೂಪು, ಮಂದಸ್ಮಿತ ವದನ, ನೋಡಿಯೂ ನೋಡದ ನೋಟ)
ಮದನ
ಕಂಪೊಳಹೊಮ್ಮಲು ದಳ ಬಿರಿವಂತೆ ಇರುಳೊಳಬಾಗಿಲ ದಿನ ತೆರೆವಂತೆ
ನಿದ್ರಾಮುದ್ರಿತಮಾದೆನ್ನಾತ್ಮವು ಎಚ್ಚರಕರಳಿತಿಕೊ-
ಸುಂದರಮಂಗಳ ಸುಪ್ರಭಾತ ಎಂತಾಯ್ತನಗಿದೆಕೋ !
(ಜಯ ಜಯ ಎಂದು ನಮಸ್ಕರಿಸುವ ಅಪ್ಸರೆಯರನ್ನು ನೋಡಿ ತಲೆವಾಗಿ ನಗುತ್ತಾ)
ಕಂಗಳ ತೆರೆಯಲು ಸುಂದರ ರೂಪದ ಕಿವಿಗಳ ತೆರೆಯಲು ಮೃದುಳಾಲಾಪದ-
ಸುಂದರ ಮಂಗಳ...
(ತಿರೆಯ ಕಡೆ ನೋಡಿ ಆಘ್ರಾಣಿಸಿ)
ನಲಿವ ಹಳುವು ಸೆರೆಗಳೆವೀ ಕಂಪಿನ ಮಾಗಿಯೊಗೆದ ಮಧುಮಾಸದ ಪೆಂಪಿನ-ಸುಂದರ ಮಂಗಳ......
(ಅಪ್ಸರೆಯರನ್ನು ನಗೆಬಗೆಯಿಂದ ನೋಡಿ ಅವರ ಹೃದಯವನ್ನು ಅರಿತಂತೆ)
ಹೃದಯತೃಷೆಗೆ ಪ್ರೇಮವ ಕರೆ ಎನುವಾ ಬಯಲುಬಗೆಗೆ ಸ್ನೇಹವ ಬಿತ್ತೆನುವಾ ಸುಂದರ ಮಂಗಳ.....
(ರಂಭೆಯ ಗಲ್ಲವನ್ನು ಹಿಡಿದು ಅಲುಗಿಸಿ)
ಆರಿತರಿತೆನು ಸುಂದರಿ ನಿನ್ನೊಳಗ
ಇದೊ ಹೊರಟೆನು ನಲಿಯಲಿ ಸುರಬಳಗ ಸುಂದರ ಮಂಗಳ....
ಕಾಮತಪ್ತ ಚೇತನ ನಿಷ್ಕೃತಿಗೆ ಭೋಗದೃಪ್ತ ದುರ್ಜನ ಧಿಕೃತಿಗೆ-
ಸುಂದರ ಮಂಗಳ....
ತಾಮಸರಿಗೆ ರಾಗದ ಬೆಳಕೀಯೆ ವಿರಸಗಾಗೆ ಸಂಸಾರದ ಮಾಯೆ-
ಸುಂದರ ಮಂಗಳ....
(ಅಂತರ್ಮುಖನಾಗಿ ತನ್ನನ್ನುದ್ದೇಶಿಸಿ)
ವಿಧಿಯ ಕನಸು ಸರಸದಿ ನನಸಾಗೆ ಋತದ ರೀತಿ ನೆಲೆಗೆಡದಲೆ ಸಾಗೆ-
ಸುಂದರ ಮಂಗಳ....
(ಹೊರಟು ಹೋಗುವನು)
(ಈ ತೆರದ ಹೊಸ ರೀತಿಯ ಮಾರನನ್ನು ಬೆರಗುಗಣ್ಣುಗಳಿಂದ ನೋಡುತ್ತಿರುವ ಅಪ್ಸರೆಯರು ಸಂತೋಷಾಧಿಕ್ಯದಿಂದ
ಹಾಡುತ್ತಾರೆ)
ಅಪ್ಸರೆಯರು
ಸುಂದರ ಮಂಗಳ ಸುಪ್ರಭಾತ ಒಲುಮೆಗಾಯ್ತಿದೆಕೋ-ಜಗದಾ ನಲುಮೆಗಾಯ್ತಿದೆಕೋ !
ಸ್ವರ್ಗದಿ ಸುದ್ದಿಯ ಸಾರುವ ಬನ್ನಿ
ಇಂದು ತಿರೆಗೆ ಮಂಗಳವಾಯ್ತನ್ನಿ ನಂದನದಿಂ ಸುರಸುಮಗಳ ತನ್ನಿ.
ಸುಂದರ ಮಂಗಳ ಸುಪ್ರಭಾತ ಒಲುಮೆಗಾಯ್ತಿದೆಕೋ-ಜಗದಾ ನಲುಮೆಗಾಯ್ತಿದೆಕೋ!
(ಹಾಡುತ್ತಾ ನಿಷ್ಕ್ರಮಿಸುತ್ತಿರುವ ಅಪ್ಸರೆಯರ ಮೇಲೆ ತೆರೆ)
೦೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಇಂದ್ರನ ಉದಾಸೀನ ಕಳೆಯಬೇಕು. ಜೊತೆಗೆ ಭೂಮಿಯಲ್ಲಿ ಅಹಲ್ಯೆಯ ನೋವಿಗೆ ಮುಕ್ತಿ ಬರುವ ಸಮಯವಾಗಿದೆ. ವನವನ್ನು ಸಿಂಗರಿಸಲು ಮನ್ಮಥನ ಸಹಾಯವೂ ಬೇಕಿದೆ. ಅದಕ್ಕೆ ಅವನನ್ನು ಎಚ್ಚರಿಸಲು ಅಪ್ಸರೆ ಯರು ಹಾಡುವರು. ಇಲ್ಲಿ ಮನ್ಮಥನನ್ನು ಒಲವು ಎಂದೇ ಕರೆಯಲಾಗುತ್ತಿದೆ. ಅವನನ್ನು ಎಚ್ಚರಿಸಲು ಅವನ ಭವನದ ಮುಂದೆ ಅಪ್ಸರೆ ಯರು ನೆರೆದು ಹಾಡುತ್ತಿದ್ದಾರೆ. ಕಾವಲುಗಾರನು ಅವರನ್ನು ಬೆದರಿಸುವನು. ನಿದ್ರಿಸುತ್ತಿರುವ ಒಲವಿನ ಅರಸನನ್ನು ಎಚ್ಚರಿಸಲು ಬಂದು ಗದ್ದಲ ಮಾಡಲು ನಿಮಗೆ ಹೇಳಿದವರಾರು ಎಂದು ಕನಲುವನು.
ಆಗ ರಂಭೆಯು ಅವನಿಗೆ ಸಮಾಧಾನ ಹೇಳುವಳು. ಈಗ ಸುಗ್ಗಿಯ ಕಾಲ. ಎಲ್ಲೆಲ್ಲೂ ಸೌಂದರ್ಯ ತುಂಬಿದೆ. ಮಂಜು ಮರೆಯಾಗಿ ಬಗೆಬಗೆಯ ಹಕ್ಕಿಗಳು ಕೂಗುತ್ತಿವೆ. ಹೆಣ್ಣುಗಳಲ್ಲಿ ಬಯಕೆಯು ಚಿಗುರುವ ಸಮಯದಲ್ಲಿ ಮಾರನು ಮಲಗುವುದು ಸರಿಯೆ? ಎನ್ನುವಳು.
ಇದಾವುದೂ ಒಳಗೆ ಕಾವಲಿರುವ ತನಗೆ ತಿಳಿಯದೆಂದು ಹೇಳಿ ಅಪ್ಸರೆಯರಿಗೆ ಹಾಡಲು ಹೇಳುವನು ಕಾವಲುಗಾರ.
ಅವರು ಹಾಡತೊಡಗುವರು.
ಓ, ಮಾರನೆ, ಎಚ್ಚರವಾಗು. ಜಗದಲ್ಲಿ ನಲಿವು ಮಾಡಲು ನೀನು ಎಚ್ಚರವಾಗು. ಭೂಮಿಯ ಕಾಡುಗಳಲ್ಲಿ ಹೂವುಗಳು ಅರಳಿವೆ. ಮಾಗಿಯ ಚಳಿ ಮುಗಿದು ಸುಗ್ಗಿ ನುಗ್ಗುತಿದೆ. ಪಾದರಿ, ಕಮಲ, ಮೊಲ್ಲೆ ಮಲ್ಲಿಗೆ ಇತ್ಯಾದಿ ಹೂವುಗಳ ಸುಗಂಧ ಹೊರಹೊಮ್ಮುತ್ತಿದೆ. ಹೊಂಗೆ ಹೂವುಗಳಲ್ಲಿ ದುಂಬಿಗಳ ಗುಂಜಾರವ ಕೇಳುತ್ತಿದೆ. ಕೋಗಿಲೆಯು ನಿನಗೆ ಸ್ವಾಗತ ಬಯಸುತ್ತಿದೆ. ನೀನು ಎಚ್ಚರಗೊಳ್ಳು. ಎಲ್ಲರನ್ನೂ ತಣಿಸು. ಉಲ್ಲಾಸವನ್ನು ಹುಟ್ಟಿಸು ಬಾ. ಒಸಗೆಯಾಗಲಿ ಜಗಕೆ ಬಾರಾ ಎಂದು ಹಾಡುವರು.
ಶಯ್ಯಾಗೃಹದ ಬಾಗಿಲು ತೆರೆದು ಮಾರನು ಹಾಡುತ್ತ ಬರುವನು. ಸುಂದರ ಶರೀರ.
ಸುಂದರವಾದ ಮಂಗಳಕರವಾದ ಸುಪ್ರಭಾತ ನನಗಾಯಿತು. ಅಪ್ಸರೆಯರ ಸುಂದರ ರೂಪದ ದರ್ಶನವಾಯಿತು. ನಿಮ್ಮ ಹೃದಯದ ಭಾವ ಅರ್ಥವಾಯಿತು ಎಂದು ರಂಭೆಗೆ ಸಮಾಧಾನ ಹೇಳುವನು.ನಿನ್ನ ಒಳಗು ಅರಿತೆನು. ಇದೋ ಹೊರಟೆ. ತಾಪಸಿಗಳಿಗೆ ಅನುರಾಗದ ಅರಿವು ಮೂಡಿಸಲು. ತಪ್ತ ಜೀವಗಳಿಗೆ ಚೇತನ ನೀಡಲು , ವಿಧಿಯ ಕನಸು ನನಸಾಗಲು ಹೊರಟೆ ಎಂದು ಹೊರಡುವನು.
ಅಪ್ಸರೆಯರು ಸಂತಸದಿಂದ ಈ ಸುದ್ದಿಯನ್ನು ಇಡೀ ಸ್ವರ್ಗಕ್ಕೆ ತಿಳಿಸಲು ಹೊರಡುವರು. ಸುಂದರ ಮಂಗಳಕರ ಸುಪ್ರಭಾತ ಒಲವಿಗಾಯಿತು. ಆ ಮೂಲಕ ಇಡೀ ಜಗತ್ತಿಗಾಯಿತು ಎಂದು ಹಾಡುವರು
ಪುತಿನ ಅವರ ಅಹಲ್ಯೆ ಗೀತನಾಟಕ
ನಿರೂಪಣೆ:. ಸುಬ್ಬುಲಕ್ಷ್ಮಿ Lrphks Kolar
ಅಹಲ್ಯೆ 17
ದೃಶ್ಯ ೩
(ಹಿಮವತ್ಪರ್ವತದ ಗವಿಯೊಂದರ ಬಾಗಿಲು. ಗೌತಮನು ಒಳಗೆ ತಪಸ್ಸಿನಲ್ಲಿದ್ದಾನೆ. ಮುಂಜಾನೆಯ ನಸುಕಿನಲ್ಲಿ ಸಿದ್ದನೊಬ್ಬನು ಪ್ರವೇಶಿಸುತ್ತಾನೆ).
ಸಿದ್ದ
ಬಾಳ್ ಕಡಲೊಳು ಮುನ್ ನಲ್ಮೆಯ ಕಂಡು
ಕೊನೆಗಲ್ಲೊಗೆದಾ ಪೊಲ್ಲಮೆಯುಂಡು ನಿರೀಹರಾದವರೆಷ್ಟೋ ಮಂದಿ.
ಆಣ್ಮನ ಹಿಮವಂತನ ಶರದೊಂದಿ ನಂಜಳಿದರ್ ನೆಮ್ಮದಿಯನು ಪಡೆದರ್ ನಚ್ಚಾನುತ ಮರಳಿರವಂ ಕಡೆದರ್ ಹೊರಗಲೆಯುವ ಪ್ರಾಣಗಳಂ ಸೆಳೆದರ್ ಹೊಳೆಗಳ ಕಡಲಂತೆದೆಯೊಳು ಹಿಡಿದರ್ ಒಳಗಿನಾಳವನು ತಾವಳೆವಂತೆ ಆತ್ಮವಿಭೂತಿಯ ತಾವರಿವಂತೆ ಅಮೃತಾನಂದವನೆದೆಯಿಂ ತೆಗೆವೊಲು ಭವವೊಡೆದೇಳುವ ಬಾಳಂ ಪಡೆವೊಲು.
ಇಂತು ಮುಕ್ತಿ ಆನಂದವನೊಂದಿ ಸಿದ್ದಿಯನೈದಿದರೆಷ್ಟೋ ಮಂದಿ.
ಇವರೀ ಸಾಧನೆ ಹಿಮರಾಜನಿಗೆ ಆದರವಿಷಯಂ; ನೇಮಿಪನೆಮಗೆ ಎಡರಾಗದವೊಲು ಕಾಪಿಡಿರೆಂದು ಸಾಫಲ್ಯದ ಬೇಹಂ ಕೊಡಿರೆಂದು.
ದಿನ ದಿನ ನೊಂದೀ ಗೌತಮಮುನಿಯಂ ಕುರಿತೆನ್ನಂ ಬೆಸವನು ಇನಿಯಂ. ದರಿಯಡರಿದವಂ ಹೊರ ಬರಲಿಲ್ಲ ಧ್ಯಾನಾಸಕ್ತಂ ಎಚ್ಚರಲಿಲ್ಲ; ತನಗಿವನಾದನು ತಾನೆ ಸಮಾಧಿ. ಎಂದರಿವಾನುವನಾತ್ಮ ವಿಬೋಧಿ ? ಅಂದಾ ದಾಕ್ಷಾಯಣಿ ಪತಿಯಂತೆ
ಇಹನೀ ಮಾಮುನಿ ಒಂದೊಗಟಂತೆ. ಅಂಜುವೆನೀತನ ಗವಿಯಂ ಹೊಗಲು ತವಸಿಯ ಬಗೆಯಂ ಹೊಂಚಿ ನೋಡಲು. ಆದೊಡೆ ಮುನಿಪರಿಚರ್ಯಗೆ ದೊರೆಯಿಂ
ನಿಯಮಿತನಾಗಿಹನೆನ್ನಯ ಕೆಳೆಯಂ; ಬಹುಸತ್ಯನಿವಂ; ಮಾನವಮನವಂ ಅಲ್ಲಾಗುವ ಬಗೆಬಗೆ ಸೋಜಿಗವಂ ಅದೃಶ್ಯನಾಗಿಯೆ ನಿರುಕಿಸಬಲ್ಲಂ, ಕೇಳಬಲ್ಲನೊಳಮೊಳಗುವ ಸೊಲ್ಲಂ.
ನನ್ನ ಪುಣ್ಯ ! ಅಗೊ ಗವಿಯಿಂ ಹೊರಗೆ ಬರುತಿಹನೀತಂ ನಾನಿಹ ಕಡೆಗೆ.
(ಮತ್ತೊಬ್ಬ ಸಿದ್ದನು ಗೌತಮನ ಗವಿಯಿಂದ ಹೊರಕ್ಕೆ ಬರುವನು.)
ಭೋ ಭೋ ಮಿತ್ರ, ದೃಷ್ಟಿಕೊಡಿತ್ತ.
ಎರಡನೆಯ ಸಿದ್ದ
ಓಹೋ ನೀನೇ, ಹದುಳವೆ ?
ಸ್ವಾಗತ.
ಮೊದಲನೆಯ ಸಿದ್ದ
ನಾ ನೆನೆದೊಡನೆಯೇ ನೀ ತೋರಿದೆ ಮೊಗ !
ಏನು ಸುದ್ದಿ, ಮುನಿ ಏಬಗೆ, ನೇಹಿಗ?
ಎರಡನೆಯ ಸಿದ್ಧ
ವಿಷಾದಮಾನಸನಸಕ್ತಿಗಾದಂ ವಿರಾಗಿಯಾಗುತ ದ್ವಂದ್ವವನುಳಿದಂ.
ತಾವರೆಯೆಲೆ ಹನಿ ಕಾಸಾರವನು
ಈಕ್ಷಿಪ ತೆರದೊಳು ಲೋಕವನಿವನು ತನ್ನಂ ಪ್ರತ್ಯೇಕಿಸಿ ನೋಡುತಿಹ, ಸಾಧರ್ಮ್ಮವನಿನಿತೂ ಕಾಣದಿಹಂ. ಭವಿಗಳಿಗಾಯಿತು ಇವನನುಕಂಪಂ ಸತಿಯಳಲಿಗೆ ಎದೆಯೊಳು ಪ್ರತಿಕಂಪಂ. ಆದೊಡೆ ಕರ್ಮದ ಬಂಧವನೊಲ್ಲಂ ತನ್ನೊಳಗಿನ ಅರಕೆಯ ತಾ ಬಲ್ಲಂ. ಹಲವು ನುಡಿಗಳಿಂದೇನು ನೇಹಿಗ-
ಕೇತು ತುಡುಕಲು ರವಿಯ, ತೆರವಾದ ತನ್ನಿರವ
ನೂರು ತಾರಗೆಕಣ್ಣ ತೆರೆದು ಹಗಲು ನೋಡುವೊಲು,
ಗೌತಮನು ತನ್ನೊಳಗ ನೋಡುವನು ಆರಕೆ ಏನೆಂಥದಿದು ಎಂದರಿವೊಲು.
ಮೊದಲನೆಯ ಸಿದ್ಧ
ಚೆಲುವು ಮಾತು ನಿನಗೆ ಬರದೆ?
ಭವವ ಕುರಿತು ಆವ ತೆರದೆ ಮುಂಬರಿಯಿತು ಮುನಿಯ ಚಿಂತೆ, ಬಂದಳಾವ ಗತಿಗೆ ಕಾಂತೆ?
ಬಿತ್ತರದೊಳು ಹೇಳು ಕೆಳೆಯ ಬಗೆವನೆಂತು ಸಹಚರಿಯ?
ಎರಡನೆಯ ಸಿದ್ಧ
ಬಗೆವನೆಂತು ಸಹಚರಿಯ
ಎಂತು ಪೇಳಲೀ ಪರಿಯ ? ಮನವನೊಳಗೆ ಸಂಧಿಸುವಂ
ಪ್ರಾಣಗಳಂ ಬಂಧಿಸುವಂ ಧ್ಯಾನಶಾಂತಿಗಾಗುವಂತೆ
ಕದಡು ಬಗೆಯನೊಂದಿಸುವಂ
ಆದೊಡೇನು-ಕಳೆಗೂಡುವ ಬಿಂಬದೊಳ್ ತೋರ ಶಶಿ ಕಳಂಕದೊಲ್
ಮುನಿಯ ಬಗೆಯನಂಕಿಪಳಹ
ಸತಿ ಕಂಬನಿದುಂಬಿದೊಲ್.
ಎಂತಾಯಿತೊ ಈ ದುಷ್ಕೃತಿ
ಎಂತಹುದೋ ಮಮ ನಿಷ್ಕೃತಿ
ಎಂದಳಲುವ ಕಾಂತೆಯಳಲ
ಹೊಳಲಿಗಾಯ್ತು ಮುನಿಯ ಮತಿ.
ನೆನೆವ ಮೊದಲ ದಿನಗಳಂ
ಆದ ತಮ್ಮ ಸೊಗಗಳಂ
ಮುನಿ ಕೃತಜ್ಞನಾಗಿ, ಹೆರಳು
ತನ್ನಳಾದ ತೆರಗಳಂ.
'ದಾರು ದಾರು ಮಥಿಸಲು
ಮೊದಲು ಬಂದ ಕಿಡಿಯೊಲು
ನಮ್ಮ ಬಾಳೊಳೊಲುಮೆಯಾಯ್ತು ಬಳಿಕ ಹೊಗೆವ ತೆರದೊಳು.
'ಅನುರಾಗದ ಕೆಂಬೆಳಕೊಳು
ಎಲ್ಲೆಡೆ ತನ್ನನೆ ಕಂಡಳು,
ಹೆರರ ನೆಚ್ಚಿ ಬಾಳ ಬಯಕೆ
ತೀರಿತೆಂದ ಮುಗುದೆ ಇವಳು.'"
ಮುನಿ ಇಂತಾಲೋಚಿಸುವಂ
ಬಗೆಬಗೆ ಬನ್ನದ ಭವವಂ
ಕಾಮದ ಬಲೆಯೊಳು ಮುಲುಗುವ
ದೀನ ಮರ್ತ್ಯಜೀವಿತವಂ.
ಗಹಗಹಿಸುತ ಮರೆಯೊಳಗೆ
ಜಗವ ನಗುವ ತೆರದೊಳಗೆ
ಭೀಮನಾಗಿ ಮಾರ ಕಾಂಬ-
ನಿವನ ವೃಥಿತ ಮನದೊಳಗೆ.
ವಿಧಿಗೆಂತಿವನುಪಯೋಗಂ
ಎಂತಿವನಿಂ ಶಿವಯೋಗಂ
ಸೃಷ್ಟಿಯ ಕರ್ಮಕೆ ? - ಎನ್ನುತ
ಚಿಂತಿಪನೀ ಗತರಾಗಂ
ಒಮ್ಮೆಗೆ ತಾನಾರೆನುವಂ ಅಹಲೈಯೋ-ಭ್ರಮೆಗೊಳುವಂ ತಾನಾರಿವಳಾರೆನ್ನುತ
ಆತ್ಮದ ಚಿಂತೆಗೆ ಸಲುವಂ.
ಗಹನ ತತ್ತ್ವಸಕ್ತ ಯತಿ
ಇಂತಪ್ಪನು ಭವವಿರತಿ
ಮುಂಜಾನೆಯ ಮುನ್ನಿರುಳೊಲು
ಗಹನಮಪ್ಪು ದಿವನ ಮತಿ.
೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಗೌತಮನು ಹಿಮಾಲಯದಲ್ಲಿ ತಪಸ್ಸಿನಲ್ಲಿದ್ದಾನೆ. ಅವನ ಬಳಿಗೆ ಒಬ್ಬ ಸಿದ್ಧ ಬರುತ್ತಾನೆ. ಅವನು ಗೌತಮನ ಬಗ್ಗೆ ಯೋಚಿಸುತ್ತಾನೆ.
ಬಾಳಿನಲ್ಲಿ ಏನೇನೋ ನಿರೀಕ್ಷಿಸಿ, ಭಂಗ ಪಟ್ಟು ಬರುವವರು ಎಷ್ಟೋ ಮಂದಿ.ಇಲ್ಲಿ ಹಿಮವಂತನ ನೆರಳಿನಲ್ಲಿ ತಪದಲ್ಲಿ ನೆಮ್ಮದಿಯನ್ನು ಪಡೆಯುವವರು ಬಹಳ ಮಂದಿ. ಇಂದ್ರಿಯಗಳನ್ನು ಅಂತರ್ಮುಖ ಮಾಡಿಕೊಂಡು ನಿಯಮದಿಂದಿರುವರು. ಒಳಗಿನಾಳವನು ತಲುಪುವರು.
ಈ ಗೌತಮನಾದರೋ ದಿನದಿನವೂ ನೊಂದು ಬೆಂದು ಹೋಗಿರುವನು. ತನಗೆ ತಾನೇ ಸಮಾಧಿಯನ್ನು ಹೊಂದುವನು. ಈ ಮಹಾಮುನಿಯು ಒಂದು ಮಹಾ ಒಗಟಿನಂತೆ ಇರುವನು. ಇವನ ಹತ್ತಿರ ಹೋಗಲು ಹೆದರಿಕೆಯಾಗುತ್ತದೆ. ಅವನ ಪರಿಚರ್ಯೆಗೆ ನಿಯೋಜಿತನಾಗಿರುವ ನನ್ನ ಗೆಳೆಯನ ಮೂಲಕ ಅರಿಯುವೆನು. ಬಹಳ ಚತುರನಿವನು. ಮಾನವರ ಮನಸ್ಸಿನ ಭಾವಗಳನ್ನು ಅರಿಯುವಲ್ಲಿ ನಿಪುಣನು. ಅಲ್ಲಿನ ಸಂಗತಿಗಳನ್ನು ಅದೃಶ್ಯವಾಗಿಯೆ ನೋಡಬಲ್ಲನು. ಓಹೋ...ನನ್ನ ಪುಣ್ಯ. ಅವನೇ ಗವಿಯ ಒಳಗಿನಿಂದ ಬರುತ್ತಿರುವನು.
ಅವನನ್ನು ಇವನು ಮಾತನಾಡಿಸುವನು. ಆ ಎರಡನೆಯ ಸಿದ್ಧನನ್ನು ಮುನಿಯ ಬಗೆಯನ್ನು ತಿಳಿಸಲು ಕೇಳುವನು. ಅವನು ಹೇಳತೊಡಗುವನು.
ತಾವರೆಯೆಲೆಯ ಮೇಲಿನ ನೀರಿನಂತೆ ಈ ಮುನಿ ತಪದಲ್ಲಿದ್ದು ವಿಷಯಾಸಕ್ತಿಯನ್ನು ಗೆಲ್ಲುವ ಬಗ್ಗೆ ಚಿಂತಿಸಿರುವನು. ಸತಿಯ ಅಳಲಿಗೆ ಹೃದಯದಲ್ಲಿ ಅನುಕಂಪ ತೋರುವನು. ಎಲ್ಲವೂ ಕರ್ಮಫಲವೆಂದು ಭಾವಿಸುವನು. ತನ್ನ ಮನದ ಕೊರತೆ ಏನೆಂದು ತನ್ನೊಳಗನ್ನೇ ನೋಡುವವನು ಇವನು ಶಕ್ತಿಶಾಲಿ.
ಎಲ್ಲ ವಿವರಗಳನ್ನೂ ವಿಸ್ತಾರವಾಗಿ ತಿಳಿಸು, ಇವನ ಕಾಂತೆ ಹೇಗಿರುವಳು? ಇವನ ದಿನಚರಿಯೇನು? ಎಂದು ಮೊದಲನೆಯವನು ಕೇಳಲು ಸಿದ್ಧನು ಹೇಳತೊಡಗುವನು.
ಕಂಬನಿದುಂಬಿ ಚಂದ್ರನ ಕಲಂಕದಂತೆ ಇರುವಳು. ಇತ್ತ ಗೌತಮನೂ ಈ ರೀತಿ ಏಕಾಯಿತು, ಹೇಗಾಯಿತು ಎಂದು ಅಳಲುತ್ತಿರುವನು.ತಮ್ಮ ಪ್ರೀತಿಯ ಮೊದಲ ದಿನಗಳನ್ನು ನೆನೆಯುವನು. ಮರಕ್ಕೆ ಮರ ಉಜ್ಜಿದಾಗ ಬರುವ ಮೊದಲ ಕಿಡಿಯಂತೆ ನಮ್ಮ ಬಾಳಿನಲ್ಲಿ ಬೆಳಕು ಕತ್ತಲೆಯಾಗಿ ಹೊಗೆಯಾಯಿತಲ್ಲ ಎಂದು ಕೊರಗುವನು. ಪಾಪ, ಮುಗ್ಧಳಾದ ಸತಿ ಅನುರಾಗದ ಬೆಳಕಿನಲ್ಲಿ ಎಲ್ಲೆಲ್ಲೂ ತನ್ನನ್ನೇ ಕಂಡವಳು ಆಸೆಯ ಬಲೆಗೆ ಸೋತವಳು. ಹೀಗೆ ಮುನಿಯು ಬೇರೆ ಬೇರೆ ರೀತಿಯಲ್ಲಿ ಯೋಚಿಸುವನು. ಇದೆಲ್ಲಕ್ಕೂ ಕಾರಣನಾದ ಮನ್ಮಥನು ಮರೆಯಲ್ಲಿ ನಿಂತು ಗಹಗಹಿಸಿ ನಗುವನು. ವಿಧಿಗೆ ಹೀಗೆಲ್ಲ ಮಾಡುವುದರಿಂದ ಏನು ಉಪಯೋಗವೆಂದು ಚಿಂತಿಸುವನು. ಒಮ್ಮೊಮ್ಮೆ ತನ್ನನ್ನೇ ತಾನು ಮರೆತು ಯಾರು ನಾನು ಎನ್ನುವನು. ಅಹಲ್ಯೆಯ ಭ್ರಾಂತಿಯಲ್ಲಿ ಇರುವನು. ಕೆಲವೊಮ್ಮೆ ಗಹನವಾದ ತತ್ತ್ವ ಕುರಿತು ತಪದಲ್ಲಿ ಮಗ್ನನಾಗುವನು...ಹೀಗೆ ಗೌತಮನ ಬಗೆಯನ್ನು ವಿವರಿಸುತ್ತಾನೆ.
ಅಹಲ್ಯ 18
ಮೊದಲನೆಯ ಸಿದ್ದ
ಇಂತೆಯೆ ? ಮಾಮುನಿ ಸಿದ್ಧಿಯ ಹಾದಿಯ ಕಾಣ.ತರ್ಕದಿ ತೊಳಲುವನೆಂದಿವಗಾತ್ಮ ಜ್ಞಾನ
ಎರಡನೆಯ ಸಿದ್ಧ
ಅಂತಲ್ಲವು ಸೋಜಿಗವಾಯ್ತಿ ವನೆದೆಯೊಳಗೆ,
ಇರುಳರಳಿಸಿ ಬಹ ಮುಂಬೆಳಗಿನ ತೆರದೊಳಗೆ.
ಇಂದಿವ ತನ್ನೊಳು ಕಂಡದ್ಭುತವೇನೆಂಬೆ ! ನಾ ಹೇಳಲು ಇದ ನೀ ನಂಬೆ !
ಮೊದಲನೆಯ ಸಿದ್ಧ
ಓಹೋ, ನಾ ಮುನ್ನವೆ ಬಗೆದಂತಾಯಿತಿದು.
ಮುಂದೇನಾಯಿತು ಪೇಳೈ, ಮನ ತವಿಸಿಹುದು.
ಎರಡನೆಯ ಸಿದ್ದ
ಹಿಮಗಿರಿಯೇಕಾಂತಸಮಾಧಿಯೊಳುದ್ಭವಿಸಿತು ದರ್ಶನ ಕಾಮೋತ್ತರಮಾದೊಲವಿನ ಸಂಭೂತಿಯ ಸಂದರ್ಶನ.
ಸೃಷ್ಟಿಯ ಮೂಲದ ತತ್ವವೆ ದನಿಗೂಡಿದ ತೆರನಾಯಿತು
ಮಂಗಳ ಮಂಜುಳ ವಾಣಿಯೊಳೆಲೆ ಮಾಮುನಿ ಕೇಳೆಂದಿತು :
''ಪ್ರೇಮಶ್ರುತಿ ಜೀವಸ್ವರ ಮೇಳನದಿಂ ಶಿವಗೀತಂ
ನಡೆವುದಲಾ ನಿರಂತರಂ ವಿಧಿಚಿರಹರ್ಷೋತಂ.
ಇದಕೊಂದದ ಬಾಳಿಲ್ಲವು, ಒಂದುವನಕ ಬಿಡುವಿಲ್ಲವು.
ಸ್ವಚ್ಛಂದವನುಳಿದೀ ಶ್ರುತಿಗಳವಡುವುದೆ ಪುರುಳಿನಿರವು.
ತಾನ್ ತನಗಿದು ಎಂದೆನ್ನುವ ಬಾಳೊಲುಮೆಯ ಶ್ರುತಿಗೂಡದು
ರಾಗದ ಭೋಗದ ದುಃಖದ ಸಂಸ್ಕಾರಕೆ ಮೈಗೊಡುವುದು.
ತನ್ನಳಿದಿಹ ಹಿರಿಮತಿ ನೀ ತತ್ತ್ವದರ್ಶಿ, ತ್ವದ್ದರ್ಶನ
ಇನ್ನು ಮುನ್ನು ಸರಸವಾಯ್ತು ನಿನ್ನಿರವೆಲೆ ನಿರಮರ್ಷಣ.
ಹಿರಿದಾಯಿತು ನಿಮ್ಮಳಲಿಂ ನನ್ನನುಭವ ವಿಧಿಯನುಭವ
ನಾವೆಳಸುವ ನವಹರ್ಷಕೆ ಹದನಾಯಿತು ನಿಮ್ಮಾ ಭವ.
ಬಗೆರಜವನು ನಿಡುಸುಯ್ಲಿಂ ಎದೆರಾಗವ ಕಂಬನಿಯಿಂ
ಬಾಳ್‌ಕಿಲುಬನು ಕಳೆದಾಯಿತು ಪರಿತಾಪದ ದಳ್ಳುರಿಯಿಂ.
ಹೊಸ ತೇಜವು ಸೋಕಿದ ಕ್ಷಣ ಮೂಡುವುದೆಮ್ಮಿಾ ಸತ್‌ಕೃತಿ
ವೈರಸ್ಯದಿ ನೀನಳಿಸಿದ ನಿನ್ನೊಲವಿನ ನವನಿರ್ಮಿತಿ.
ಜಗಜಗವೇ ಬಯಸುತ್ತಿದೆ ನಿಮ್ಮಿಬ್ಬರ ಸಂಗತಿಯನು
ಶಿವೆಯಂ ಶಿವನೆಂತಂತೆಯೆ ಹೊಂದೆಲೆ ಮುನಿ ನಿನ್ನೊಲವನು.
ಸಂದೆಗವುಳಿದೆಚ್ಚರು ಮುನಿ ಶ್ರುತಿಗೂಡಿದ ರಾಗದೋಲ್
ಸತಿಗೂಡುತ ಪೂರ್ಣನಾಗು ಸುಷ್ಣುಸ್ವರ ಮಂತ್ರದೋಲ್
ಸೃಷ್ಟಿಯ ಮೂಲದ ತತ್ವವೆ ದನಿಗೂಡುತ ಇಂತೆಂದೆನೆ
ಗೌತಮ
ತ್ಯಜ್ಜೀವನಪೂರಣಕಾರಣಮಾಯ್ಕೆಂದನೆ
ಸೋಜಿಗಗೊಂಡೆಚ್ಚತ್ತನು ಗೌತಮನೀ ಗಿರಿ ದರಿಯೊಳು
ತನ್ನಾ ಧ್ಯಾನದೊಳುದಿಸಿದ ನನ್ನಿಯ ನಸುಕಿನ ಬೆಳಕೊಳು.
ಶಾಪಾಂತದ ನವಸಂಗಮದಾಕಾಂಕ್ಷೆಯೊಳೊಂದರೆಚಣ
ಮರಳಿಯು ಭವವೇ ತನಗೆಂದಾಶಂಕೆಯೊಳೊಂದರೆಚಣ
ಅನಾಸಕ್ತ ಗತರಾಗನ ಬಗೆ ಉಯ್ಯಲೆಯಾಡುತಿಹುದು
ನಿರ್ಧಾರಕೆ ಸಲಲ್ಲೊಲ್ಲದೆ ಎಚ್ಚತ್ತಿಹುದೆರೆಯುತಿಹುದು.
(ಗೌತಮನು ಗವಿಯುಳಿದು ಹೊರಕ್ಕೆ ಅವುದೋ ಕಣಸನ್ನು ಅರಸುವಂತೆ ಬರುವನು)
ಎರಡನೆಯ ಸಿದ್ಧ
ಗೌತಮ ಬಹನಿಗೊ, ನಿರುಕಿಸು ನೇಹಿಗ,
ಧ್ಯಾನಂ ಕಣಸೊಳು ಮುಗಿಯಿತೆನೆ. ಮರೆಗಾಗುವ ಬಾ, ಅಲ್ಲಿಂ ನಿರುಕಿ ತವಸಿಯ ಮುಂದಿನ ಮಾಟವನೆ.
ಮೊದಲನೆಯ ಸಿದ್ಧ
ಅಹಹ ದಿಟ ! ನೇಹಿಗ, -ಇತ್ತಲೇ ಬರುತಿಹನು
ಗೌತಮನು ಗವಿಯುಳಿದು ನೀನೊರೆದೊಲು,
ಮೂಡ ಗವಿ ಬಾಗಿಲೊಳು ಮಧುಮುದಿತ ಲೋಕವನು
ಕಣಸಿನಂತೀಕ್ಷಿಸುವ ಈ ರವಿಯೊಲು.
(ಮರೆಗೆ ನಿಲ್ಲುವರು )
ಗೌತಮ
ಬಗೆಯ ಮಲರ ಬ್ರಹ್ಮನಂತೆ
ಧ್ಯಾನದಿಂದ ಮೂಡುತ
ಬಗೆಯೊಳಾದ ಕನಸಿನುಲಿವಿ-
ಗಿಂತು ಹೊಳಲ ನೀಡುತ
ದೃಷ್ಟಿಗೊಂಡ ನೀನ್ಲೈ-
ಎಲೆ ಕಣಸೇ ನೀನೆಲ್ಲೈ ?
ಬಾಳ ಬಾಳ ಪದರ ತೆರೆದು
ಮರುಕೊಳಿಸುತೆ ಭವವನು
ಹಗೆಯೆ ದೂರ ಸರಿದ, ಒಲಿಯೆ
ಸನಿಯಕಾದ, ಜಗವನು
ಮನದೊಳುಯ್ಯಲಾಡಿಸುತ್ತ
ಮಾತಿನಿಂದ ಮೋಹಿಸುತ್ತ
ದೃಷ್ಟಿಗೊಂಡ ನೀನೆಲ್ಲೈ_
ಎಲೆ ಕಣಸೇ ನೀನೆಲ್ಲೈ?
೦೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಗೌತಮನ ಬಗ್ಗೆ ಮೊದಲ ಸಿದ್ಧನಿಗೆ ಕನಿಕರ ಮೂಡುತ್ತದೆ. ಮತ್ತೆ ಎರಡನೆಯವನು ಮಾತನಾಡುವನು. ಇಂದು ಗೌತಮನಲ್ಲಿ ಉಂಟಾದ ಪರಿವರ್ತನೆ ಹೇಳಿದರೆ ನೀನು ನಂಬಲಾರೆ ಎನ್ನುವನು. ಮುಂದಿನದನ್ನು ಕೇಳುವಾಸೆಯಾಗುವುದು.
ಹಿಮಗಿರಿಯಲ್ಲಿ ಗೌತಮನಿಗೆ ಒಲವಿನ ದೇವನ ಧ್ವನಿ ಕೇಳಿಸಿತು. ದರ್ಶನವಾಯಿತು. ಸೃಷ್ಟಿಯಲ್ಲಿ ಪ್ರೇಮದ ಸ್ತುತಿಯನ್ಬು ಬಿಟ್ಟು ಉಳಿದ ಬಾಳಿಲ್ಲ. ಕೇವಲ ತಾನು ತನ್ನದು ಎಂದರೆ ಅದು ಸಲ್ಲದು. ರಾಗ ಭೋಗಗಳು ದು:ಖದ ಸಂಸ್ಕಾರಕ್ಕೆ ಶ್ರುತಿಯಾಗುವವು. ನಿನ್ನ ಶಕ್ತಿಯಲ್ಲಿ ನನ್ನನುಭವ ವಿಧಿಯ ಮಾಯೆ. ಮುಂದೆ ಬರುವ ಹರ್ಷಕ್ಕೆ ಇಂದಾಯಿತು ಕಂಬನಿಯ ಭವ ಕಳೆಯಿತು. ಬಾಳಿನ ಕಿಲುಬು ಕಳೆದು ನಿರ್ಮಲವಾಯಿತು. ಪರಿತಾಪದ ದಳ್ಳುರಿಯಲ್ಲಿ ಎಲ್ಲವೂ ಸುಟ್ಟುಹೋಯಿತು.
ಹೊಸ ತೇಜಸ್ಸು ಮೂಡಿದ ಕ್ಷಣವಿದು. ಇಡೀ ಜಗತ್ತು ನಿಮ್ಮಿಬ್ಬರ ಸಾಂಗತ್ಯವನ್ಬು ಬಯಸುತ್ತಿದೆ. ಇನ್ನು ಯಾವ ಸಂದೇಹವೂ ಬೇಡ. ಹೀಗೆ ಹೇಳಲು ಗೌತಮನಿಗೆ ಪುನರ್ಜನ್ಮ ಬಂದಂತ ಭಾವ. ಆಸೆ ನಿರಾಸೆ, ಅನುಮಾನಗಳಲ್ಲಿ ಅವನು ತೊಳಲುವನು. ( ಗವಿಯಿಂದ ಗೌತಮ ಹೊರಬರುವನು. )
ಇವರಿಬ್ಬರೂ ಅವನು ಏನು ಮಾಡುವನೆಂಬ ಕುತೂಹಲದಿಂದ ಮರೆಯಲ್ಲಿ ನಿಂತು ನೋಡಲು ಬಯಸುವರು.
ಗೌತಮನು ಯಾವುದೋ ಕನಸು ಕಂಡವನಂತೆ ತೋರುತ್ತಿರುವನು. ತನ್ನ ಬಗೆಯನ್ನೇ ಹಿಡಿದು ಅಲ್ಲಾಡಿಸಿದ ಈ ಭಾವ ಯಾವುದು? ಎಲ್ಲಿದೆ? ಬಾಳಿನ ಬೆಳಕಿಗೆ ಹರಡಿದ್ದ ಕತ್ತಲ ಪರದೆಯನ್ನು ಸರಿಸಿದ, ಮನದಲ್ಲಿ ಒಲವಿನ ಉಯ್ಯಾಲೆಯನ್ನು ಆಡಿಸಿದ, ಮಾತಿನಿಂದ ಮೋಹಪಡಿಸಿದ ದೃಷ್ಟಿಯೇ, ಬೆಳಕೇ, ನೀನೆಲ್ಲಿರುವೆ? ಓ ಕನಸೇ, ನೀನೆಲ್ಲಿರುವೆ ಎನ್ನುತ್ತ ಬರುವನು.
ಅಹಲ್ಯೆ 19
(ತುಸುಕಾಲ ಧ್ಯಾನಮೌನದೊಳಿದ್ದು ಹಕ್ಕಿಗಳ ಕಲರವದಿಂದೆಚ್ಚತ್ತು ಕಿವಿ ತೆರೆದು, ಸುತ್ತಲೂ ಹರಿಯುತ್ತಿರುವ ಕೆಂಬೆಳಕಿನ ಸುಂದರ ಪ್ರಭಾತವನ್ನು ನಿರೀಕ್ಷಿಸಿ ನವಸೃಷ್ಟಿಯೊಂದನ್ನು ಕಂಡಂತೆ ಹಾಡುವನು )
ಆಹಹ-
ಇದೆಕೊ ಬಹಿರ್ಮುಖನಾದಂ
ತವಸಿ ನಿಯತಿ ಎಂಬಂದಂ
ನಗುವ ಜಗವು ತೋರುತಿಹುದು ನವಜನ್ಮದ ಹರ್ಷದಿ.
ಕೋಟಿಸ್ಟನವೇಕಶ್ರುತಿಗುಲಿವ ಮಹಾಮೇಳದೊಲ್
ನಿರ್ಝರಗಳ ನಿಹ್ರ್ರಾದಂ ಧ್ವನಿತುಮುಲಂ ವಿಪಿನದೊಳ್.
ಇಂದುವರೆಗು ಶಿಶಿರವಿರಸ,
ಇನ್ನು ಮುನ್ನು ಮಧುರಸರಸ-
ಮುಗಿದ ಸೃಷ್ಟಿಯರಳಿದೊಲ್ ಉಕ್ಕಿಬರಲು ಬದುಕು, ಪ್ರಕೃತಿ
ತನ್ನ ಚಿಪ್ಪ ಬಿರಿದವೊಲ್.
(ಹತ್ತಿರ ಹರಿಯುತ್ತಿರುವ ಹಿಮಮುಕ್ತ ನದಿಯ ಪೂರವನ್ನು ಸಹಾನುಭೂತಿಯಿಂದ ನೋಡಿ ನುಡಿಸುವಂತೆ )
ತಿರೆಯ ಹರಡುವಂತೆ ಹರಿವ ಅದ್ಯಮುಕ್ತ ಗಿರಿಧುನೀ
ಮಂಜುವೆಟ್ಟ ಕೊಟ್ಟ ಗೂಢಶಾಂತಿಯುಳಿದು ಹೊರಟೆ ನೀ
ಇಂದು ತನಕ ಹಿಮದ ಬಂಧ
ನಿನಗೆ ಮುಂದೆ ಸ್ವಚ್ಛಂದ
ನಿನ್ನ ನೀನು ಹುಡುಕುವೊಲ್
ಹರಿವೆ ತಣಿವೆ, ತಣಿಯುವೆಯಾ ವಿಪುಳಾರ್ಣವ ಬಂಧದೊಳ್ ?
(ತನ್ನ ಹತ್ತಿರ ತಳಿತು ನಿಂತ ಮರವನ್ನು ನೋಡಿ ಸ್ನೇಹದಿಂದ)
ತನಗೆ ತಾನೆ ಸಾಕೆನ್ನುತ ಎನ್ನೊಲಿದ್ದ ಎಲೆ ತರುವೇ,
ಕೆಂದಳಿರಿನ ಸಿಂಗರವಾಂತಾವ ಬಾಳ ನೀನೆರೆವೆ ?
ಮಲರ ತಳೆವೆ ದುಂಬಿ ಕರೆವೆ
ಬಂದೆಲರಿಗೆ ಕಂಪ ತೆರುವೆ
ನಿನ್ನ ಬಾಳ ಹರಡುವೋಲ್ :
ಹಕ್ಕಿ ಹಿಂಡ ಬಳಿಗೆ ಸೆಳೆವೆ
ಒಂಟಿತನವ ಸಹಿಸದೋಲ್.
(ತನಗೆ ತಾನು)
ಇಂದುವರಗು ಸೃಷ್ಟಿಯಿತ್ತು ಆತ್ಮವಿಶ್ರಾಂತಿಯೊಳ್
ತನ್ನಷ್ಟಕೆ ತಾನು ಪೂರ್ಣವೆಂಬ ವಿಭ್ರಾಂತಿಯೊಳ್.
ಒಂದಕೊಂದು ಹಂಗ ತೋರಿ ಮತ್ತೊಂದರ ಹಂಗ ಕೋರಿ
ಒಂದೆ ಬದುಕ ತುಂಬುವೋಲ್,
ಇಂದು ಎಲ್ಲ ಹೊಂದುತಿಹುವು. ಸೂತ್ರದಲ್ಲಿ ಕೋದವೋಲ್.
ಅಹಹ ! -
ಆಡಿ ಕಾಡಿ ಬೇಡಿ ನೀಡಿ, ಒಲಿದೊ ಹಗೆದೊ ಅರಕೆಯೊಳ್
ತನ್ನ ಪೂರ್ಣತೆಯನೆ ತೋರಿ, ಹೊಂದಿ ಬಾಳ್ವ ಹರಕೆಯೊಳ್
ತನ್ನ ಬಾಳ ಮುಂಚಿ ಹರಿದು ಮಹಾಬಂಧಕೊಂದಕೊಲಿದು ನಡೆಯುವಂತೆ, ಸೃಷ್ಟಿಯ
ಚೋದಿಸುತಿಹ ಚೋದ್ಯಶಕ್ತಿ ಕೊಳುತಲಿಹುದು ದೃಷ್ಟಿಯ !
(ಮನ್ಮಥನು ಈ ದೃಶ್ಯವನ್ನು ಅವರಿಸುವ ಮಧುರವಾದ ಗಾನದ ಸಾರದಂತೆ ಮೂಡುವನು-ಹಾಡುವನು )
ಮನ್ಮಥ
ರಾಗದ ಹಂಬಲವೂ ಇರವೇ-ಅಂತೆಯೆ ತ್ಯಾಗದ ಹಂಬಲವೂ ಇರವೇ.
ರಾಗದಿ ತುಸ ನಡೆ, ತ್ಯಾಗವಿ ತುಸ ನಡೆ, ಹಿರಿಯಿರವಿನ ನಲವೆಲ್ಲರ ನಿಲುಗಡೆ. ರಾಗದ ಹಂಬಲವೂ ಇರವೇ-ಅಂತೆಯೆ ತ್ಯಾಗದ ಹಂಬಲವೂ ಇರವೇ ॥ಪ ॥
ತಳಿರಿನ ಬೆಡಗಿಂದಲರಿನ ಸೊಬಗಿಂ ಖಗರುತಿಯಿಂದಳಿಕುಲ ಝಂಕೃತಿಯಿಂ ನಾನಿಹೆನಿದೆಕೋ ಎನ್ನುವ ವನವಿದು ಫಲಮುಕ್ತಿಯೊಳೂ ಹಿರಿದಾಗಿಹುದೆಲೆ-
ರಾಗದ ಹಂಬಲ....
ಸುತ್ತಣ ನೀರ್ ಸೆಳೆದೆತ್ತರಕೇರುತ ಮತ್ತಮಾರುತನ ಹೆಡೆಯಿಂ ಹೋರುತ ಕಡಲೇ ತಾನೆಂದೇಳ್ವುದು ಹಿರಿಯಲೆ ಕಡಲ ಹರಹಿಗೂ ಹರಡುವುದಕ್ಕೆಲೆ-
ರಾಗದ ಹಂಬಲ...
ಜಗ ತನಗೆಂಬುದು ಹಿರಿಬಾಳಾಳಲು,
ತಾ ಜಗಕೆಂಬುದು ಅದನೂ ಮಾರಲು ಕೊಡುಕೊಳ್ಳೆನ್ನುವ ಗತಿಗಿರವಿನ ನಡೆ. ಸಮಗತಿಯಾಗಿದರಂದವನರಿವೊಡೆ-
ರಾಗದ ಹಂಬಲ....
ಪ್ರೇಮ ಶ್ರುತಿ, ರತಿ ವಿರತಿಯೆ ತಾನಂ, ವೃಷ್ಟಿ, ವೃಷ್ಟಿ, ಸ್ವರ, ಸೃಷ್ಟಿಯೆ ಗಾನಂ. ಇಂತು ಹೊಮ್ಮಿತೋ ವಿಧಿಯ ಸುಮಾನಂ,
ಇರುವಾನಂದವೆ ಇದರವಸಾನಂ. -
ರಾಗದ ಹಂಬಲವೂ ಇರವೇ-ಅಂತೆಯೆ ತ್ಯಾಗದ ಹಂಬಲವೂ ಇರವೇ
ರಾಗದಿ ತುಸ ನಡೆ, ತ್ಯಾಗದಿ ತುಸ ನಡೆ, -ಅಸಂಗನಾಗಿದರಂದವನರಿವೊಡೆ ರಾಗದ ಹಂಬಲ....
ಗೌತಮ
( ಕಂಡು ಕೇಳಿ ಭ್ರಾಂತನಾಗಿ )
ಎಂದೊ ಕೇಳಿದಂಥ ಕೊರಲು
ಸುಳಿದುಹೋದ ರೂಪವು
ನನ್ನಿಯಂತೆ ಕಂಡ ಹೊಳಹು
ನಲ್ಮೆಯಾಲಾಪವು;
ಕೇಳ್ವೆನಿಕೋ ಕಾಂಬೆನಿಕೋ_
ಎಲೆ ಕಣಸೇ ನೀನಾರೈ
ಎಲೆ ಮೋಹನ ನೀನಾರೈ ?
೦೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಈ ಭಾಗದಲ್ಲಿ ಪ್ರಕೃತಿಯ ಸುಂದರ ರೂಪವಿದೆ. ಹರಿವ ನದಿ, ಹಕ್ಕಿಗಳ ಕಲರವ, ಚಿಗುರಿದ ಮರ ಎಲ್ಲದರ ಚೆಲುವನ್ನು ಕಂಡು ಗೌತಮನು ಬಹಿರ್ಮುಖನಾಗಿ ಎಲ್ಲವನ್ನೂ ಅಚ್ಚರಿಯಿಂದ ನೋಡುತ್ತ ನಲಿಯುವನು.
ಮಧುರವಾದ ವಸಂತಮಾಸ ಬಂದಿದೆ. ಉಕ್ಕಿ ಬರುವ ಸಂತಸದಲ್ಲಿ ಒಲವು ಬಿರಿದಂತೆ, ಪ್ರಕೃತಿಯು ತನ್ನ ಚಿಪ್ಪಿನಿಂದ ಹೊರಬಂದು ಚೆಲುವನ್ನು ಹರಡಿದಂತೆ ತೋರುತ್ತಿದೆ. ಅಂತೆಯೇ ಗೌತಮನ ಮನವೂ ಅರಳಿದೆ. ಇದುವರೆಗೂ ತಾನು ಹಿಮಗಿರಿಯಲ್ಲಿ ಇದ್ದು ಕೈಗೊಂಡ ತಪಸ್ಸು ಕೊನೆಗೊಂಡು ಮತ್ತೆ ತನ್ನ ಒಲವಿನ ನೆನಪಾಗಿದೆ. ತನ್ನನ್ಬು ತಾನು ಅರಿತ ಭಾವ.ಆ ನದಿಯಂತಾಗಬೇಕು, ಈ ಮರದಂತಾಗಬೇಕು. ಚಿಗುರು ತಾಳಿ ಹಕ್ಕಿಗಳನ್ನು ಕರೆದು ಆಸರೆಯಾಗುವ ಈ ಮರದ ಬಾಳು ಅದೆಷ್ಟು ಚಂದ! ಇಲ್ಲಿ ಎಲ್ಲವೂ ಒಂದಕ್ಕೊಂದು ಹೊಂದಿ ಬಾಳುತ್ತಿವೆ. ಸಂತಸದಿಂದ ಹಾಡುವನು.
ಮನ್ಮಥನು ಈ ಸುಂದರವಾದ ದೃಶ್ಯಕ್ಕೆ ಪೂರಕವಾಗುವಂತೆ ಹಾಡುತ್ತ ಬರುವನು.
ರಾಗ ಮತ್ತು ತ್ಯಾಗಗಳೆರಡರ ಸಮ್ಮಿಲನದಲ್ಲಿ ಹೊಸ ಅನುರಾಗ ಮೂಡುತ್ತಿದೆ. ಈ ರಾಗದ ಅಂದರೆ ಪ್ರೀತಿಯ ಹಂಬಲವೂ ಇದೇ ಆಗಿದೆ. ಸೌಂದರ್ಯದಿಂದ ಕೂಡಿರುವ ಈ ವನ ರಾಗದ ಹಂಬಲಕ್ಕೆ ಪೂರಕವಾಗಿದೆ.ಈ ಜಗತ್ತು ತನ್ನದೆನ್ನುವುದೊಂದು ಭಾವವಾದರೆ ತಾನೇ ಜಗತ್ತು ಎಂಬ ವಿಸ್ತ್ರತ ಭಾವ ಹಿರಿದಾದುದು. ಪ್ರೇಮದ ಶ್ರುತಿಯಲ್ಲಿ ಈ ಸೃಷ್ಟಿಯ ಗಾನ ತುಂಬಿದೆ.ರಾಗವನ್ನು ತ್ಯಾಗದೊಡನೆ ಮೇಳವಿಸಿ ನಡೆದರೆ ಅದೇ ಸಹಜಗತಿ.
ಗೌತಮನು ಎಲ್ಲೋ ಕೇಳಿದಂತೆ ಎನಿಸುವ ಈ ಗಾನವನ್ನು ಕೇಳುತ್ತ ಭ್ರಾಂತನಾಗುವನು. ಹಿಂದೊಮ್ಮೆ ಸುಳಿದುಹೋದ ರೂಪ ಕಣ್ಣ ಮುಂದೆ ಬಂದಂತಾಗಿ ಮನಸ್ಸು ಉಲ್ಲಸಿತವಾಗುವುದು. ತಾನು ಕಂಡುದು, ಕೇಳಿದುದು ಕನಸೇ ಅಥವಾ ಮೋಹಕ ರೂಪವೇ ಎಂದು ಪ್ರಶ್ನಿಸಿಕೊಳ್ಳುವನು. ಇದಕ್ಕೆಲ್ಲ ಪ್ರೇರಕನಾಗಿರುವ ನೀನಾರು? ಎಂದು ಕೇಳುವನು.
ಅಹಲ್ಯೆ 20
ಮದನ
(ನಗುತ್ತಾ)
ಬಾಳದುರ ಸಂಸ್ಕರಿಸಲಾದ ತಾಪವು ನಾನು
ಕಾಮಧೂಮವನುರಿಪ ಜ್ವಾಲೆ ನಾನು. ವ್ಯಕ್ತಿಯಂ ಬ್ರಹ್ಮದೊಳು ಕರಗಿಸುವ ಕಲೆ ನಾನು
ಸೃಷ್ಟಿಯಮೃತಾನಂದ ಸ್ಫೂರ್ತಿ ನಾನು.
ಗೌತಮ
ನಾನರಿಯಲಾರದಿಹ ಮಾತಿನಿಂದೊರೆಯುತಿಹೆ
ಎಲೆ ಕಣಸೆ, ದರ್ಶನದೊಳೆನ್ನ ನೀ ಮೋಹಿಸಿಹೆ.
ಭವವ ಮಾರುವ ಮುಕ್ತಿಗೆರೆವ ಸಾಧಕ ನಾನು
ಮರುಳಮಾತಿನ ರೂಪ, ನಿನಗೆನ್ನ ಹಂಗೇನು ?
ಮದನ
ಸ್ವರದ ಹಂಗುಳಿದಿರಲುಬಲ್ಲುದೇ ನಾಡು, ಪ್ರೇಮಕೆರವಪುದೇ ಜೀವಜೀವದ ಪಾಡು?
ಗೌತಮ
ಪ್ರೇಮಕಾಮವ ಕಳೆದ ಭವವಿರತಿಯಿಂದಾನು
ಭವದ ಹಂಗುಳಿದವಗು ಈ ಪ್ರಲೋಭನವೇನು ?
ಮದನ
(ನಗುತ್ತಾ)
ಏನೊರೆವೆಯೊ ಮುನಿ ಮರುಳರ ಮಾತಂ
ಹೊಳಪುಳಿದಿರುವನೆ ಆನೂರುಸೂತಂ? ಜೀವನಧರ್ಮವೆ ಪ್ರೇಮವನ್ನೊಡೆ ಅದನುಳಿದೆಲ್ಲಿದೆ ನಿನ್ನಿರವಿಗೆ ಎಡೆ ?
ಬೀಜದಿ ಹದುಗಿಹ ಮರದಾಸೆಯೊಲು ಹರಿಯುವ ನೀರಿನ ಕಡಲಾಸೆಯೋಲು ಎಲ್ಲ ಬಾಳೊಳು ಹದುಗಿದೆ ಪ್ರೇಮ ಸಚ್ಚಿದಾನಂದ ತುಂಬುವ ಕಾಮ
ತುಸು ನೀರಿನ ಹೊನಲದ ಇದ ಬಿಟ್ಟು ಹರಿವುದು ಅದಕಿದೆ ತಗ್ಗಿನ ನಿಟ್ಟು. ನೆರೆಗೊಳ್ಳುವ ಹೊನಲಿಗೆ ಹೊರತೇನು?-
ಎಲ್ಲವ ಮುಳುಗಿಸಿ ಹರಿವುದು ತಾನು.
ಜಗವಂ ತುಂಬುತ ಮಿಕ್ಕಿಹ ವಿಭುವಂ ಹೊಗಲೆಳೆಸುವೆಯಾ ಹೇಸುತ ಭವವಂ ? ಇನಿದಾವುದು ಮುನಿ, ಹೊರತೇನವಗೆ? ನಿನಗೀ ಹೊರತಿರೆ ಮುಕ್ತಿ ಏಬಗೆ ?
ಸಕ್ತಿಜಿಹಾಸೆಗಳೆಲ್ಲೆಯನಿತ್ತು ಆಗುವುವಾತ್ಮದ ಬಳವಿಗೆ ಕುತ್ತು; ಪ್ರೇಮದ ಸಾಧನೆಯಿಂದಿವನೊತ್ತು, ನಿನಗಪ್ಪೋಡೆ ವಿಶ್ವಾತ್ಮದ ಗೊತ್ತು.
ಧರ್ಮವ ಬೀಡು ನೀ, ಅಧರ್ಮ ಬಿಡು ನೀ,
ಸತ್ಯವನೂ ಅನೃತವನೂ, ಬಿಡು ನೀ, ಬಿಡುತೆ, ಏತರಿಂ ಬಿಡುವೆಯೊ ಬಿಡು ಅದ:
ಇದೆ ಆನಂದವನಾವರಿಸುವ ಹದ
ಈ ಎಡೆ ಆ ಎಡೆ ಮರುಚಣ ಬೇರೆಡೆ
ಆವ ನೇರಕ್ಕೂ ಸಲ್ಲದ ಸಮನಡೆ,
ಕುಶಲ ನರ್ತಕನ ನಾಟ್ಯದ ಗತಿಯೊಲು ಜಗದೊಳೆ ಬಾಲ್ನಡೆಗಾಗಲಿ ಹಂಬಲು.
(ಹಾಡುವನು)
ಪ್ರೇಮ ಶ್ರುತಿ, ರತಿ ವಿರತಿಯ ತಾನಂ, ವೃಷ್ಟಿ, ವೃಷ್ಟಿ, ಸ್ವರ, ಸೃಷ್ಟಿಯೆ ಗಾನಂ. ಇಂತು ಹರಿಯಿತೋ ಶಿವದ ಸುಮಾನಂ, ಇರುವಾನಂದವೆ ಇದರವಸಾನಂ -
ರಾಗದ ಹಂಬಲವೂ ಇರವೇ-ಅಂತೆಯೆ ತ್ಯಾಗದ ಹಂಬಲವೂ ಇರವೇ.
ರಾಗದಿ ತುಸ ನಡೆ, ತ್ಯಾಗದಿ ತುಸ ನಡೆ,-
ಹಿರಿಯಿರವಿನ ನಲವೆಲ್ಲರ ನಿಲುಗಡೆ, ರಾಗದ ಹಂಬಲ......
(ಹಾಡುತ್ತಾ ಮದನನು ಅಂತರ್ಧಾನವಾಗುವನು)
ಗೌತಮ
(ತನಗೆ ತಾನು)
ಜಗವೆಲ್ಲವ ತುಂಬುತ ಮಿಕ್ಕಿಹಗೆ ಹೊರತಾವುದು ಇನಿದಾವುದು ವಿಭುಗೆ !... ಓ
ಸಕ್ತಿಜಿಹಾಸೆಗಳೆಲ್ಲೆಯುಳ್ಳವಂ ವಿಶ್ವಾತ್ಮನನೆಂತೊಳಗೆ ಕೊಳ್ಳುವಂ!... ನಿದ್ದೆಯೋ – ಎಚ್ಚರವೋ, ಇದು ಕನಸೋ-ನನಸೋ ?
ನನ್ನ ಸಾಧನೆ ಮುಗಿದು ಸಿದ್ದಿಯೈದಿದ ಪರಿಯೊ,
ನಾನೆ ಅರಿಯದ ಕಾಮ ಇಂತು ತರ್ಕಿಪ ಪರಿಯೊ?
ಕಂಡು ಕಣ್ ತಣಿಯಿತಹ, ಕೇಳಿ ಕಿವಿ ನಲಿಯಿತಹ,
ಸಂಶಯದ ಕತ್ತಲೂ ಕರಗಿ ಬೆಳಕಾಯಿತಹ…
ಕರಣಗಳ ಪಳಗಿಸಿದೆ ವಿಷಯಕೆಳಸದ ರೀತಿ
ಮನವನಲೆದಾಡದೊಲು ನಿಲ್ವ, ರೀತಿ, ಬುದ್ದಿಯುದ್ದೀಪಿಸಿದೆ ಒಳಗ ಬೆಳಗುವ ರೀತಿ,
ಎದೆಯ ತೊಳೆದೆನು ರಾಗವಳಿನ ರೀತಿ. ಇನ್ನು ಭವಭೀತಿಯೇ ! -ಭೀತಿಯಿರೆ ಮುಕ್ತಿಯೆಂ-
ತೆನ್ನ ಸಿದ್ದಿಯ ನಿಕಷ ಜಗವಾಗಲಿ.
ಲೋಕಕರ್ತನ ದಿವ್ಯಲೀಲಾವಿಭೂತಿಯೊಳು
ಕೌಶಲದಿ ಹೊಂದಿ ನಡೆವಿರವಾಗಲಿ. ನಲ್ಮೆಯೊದನೆ ಕಾಂಬ ಕುಶಲ ದೃಷ್ಟಿ, ನೋವು ನಲವೆನ್ನದಿಹ ಪೂರ್ಣ ತುಷ್ಟಿ, (ಹೋಗುವನು)
ಮೊದಲನೆಯ ಸಿದ್ಧ
ಕಂಡು ಕೇಳಿದೆನಬ್ಬ ! ಅರಸರಿಗೆ ಹಿರಿ ಸುದ್ದಿ !
ಎರಡನೆಯ ಸಿದ್ಧ
ಜಗದ ಮಂಗಳಕಾಯ್ತು ಗೌತಮನ ಈ ಸಿದ್ದಿ.
೦೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಮದನನು ತಾನು ಯಾರು ಎಂಬ ಬಗ್ಗೆ ಹೇಳುವನು. ಕಾಮನ ಧೂಮವನ್ನು ತೋರುವ ಅಗ್ನಿ, ವ್ಯಕ್ತಿಯನ್ನು ಬ್ರಹ್ಮದಲ್ಲಿ ಮುಳುಗಿಸುವ ಶಕ್ತಿ, ಸೃಷ್ಟಿಯ ಅಮೃತಮಯ ಸ್ಪೂರ್ತಿ ನಾನು ಎನ್ನುವನು.
ಅದಕ್ಕೆ ಗೌತಮನು ನಿನ್ನ ಹಂಗು ನನಗಿಲ್ಲ ಕನಸೆ ಎನ್ನುವನು. ದರ್ಶನದಲ್ಲಿ ನೀನು ನನ್ನ ಮೋಹಿಸಿರುವೆ, ನಾನು ಅರಿಯಲಾರದ ಮಾತುಗಳನ್ನು ಆಡುತ್ತಿರುವೆ. ಆದರೆ ನಾನು ಭವವನ್ನು ಮೀರಿದ ಸಾಧಕನು. ನನಗೆ ನಿನ್ನ ಹಂಗಿಲ್ಲ.
ಪ್ರೇಮಕಾಮಗಳ ನಲ್ವಾಡಿನಲ್ಲಿ ಸ್ವರದ ಹಂಗು ಉಳಿಯದು ಎನ್ಬುವನು ಮದನ. ಪ್ರೇಮಕ್ಕೆ ಹೊರತಾದ ಜೀವಗಳಿಲ್ಲ. ಆದರೆ ಗೌತಮನು ಅದನ್ನು ತಾನು ಮೀರಿರುವೆನೆಂದನು.
ಮದನನು ನಗುತ್ತ ಮರುಳು ಮಾತುಗಳನ್ನು ಆಡಬೇಡ ಎನ್ನುವನು. ಬೀಜದಲ್ಲಿ ಹುದುಗಿರುವ ಮರದ ಆಸೆಯಂತೆ ಪ್ರತಿ ಜೀವದಲ್ಲೂ ಪ್ರೇಮ ಅಡಗಿದೆ.ಈ ಪ್ರವಾಹಕ್ಕೆ ತಡೆಗಳಿಲ್ಲ. ಇದನ್ನು ತೊರೆದು ಹೊಗಬಯಸುವೆಯಾ? ಆತ್ಮದ ಒಳದನಿಗೆ ಕಿವಿಗೊಡು. ಧರ್ಮಾಧರ್ಮಗಳ ಜಿಜ್ಞಾಸೆಗಳನ್ಬು ಬಿಡು. ಸತ್ಯಾಸತ್ಯಗಳ ಗೊಂದಲಗಳನ್ನು ಬಿಡು. ನಿನ್ನ ಅತ್ಮದ ಮಾತಿನಂತೆ ನಡೆ. ಇದೇ ಆನಂದದ ಮೂಲವಾಗಿದೆ. ಪ್ರೇಮದ ಶ್ರುತಿಗೆ ರತಿ ಕಾರಣ. ಸೃಷ್ಟಿಯ ಗಾನ ಕಾರಣ. ಹೀಗೆ ಸತಿ ಪತಿಯರ ಸಂಗಮ ಶಿವನಿಗೆ ಸಮಾನ. ರಾಗ ಮತ್ತು ತ್ಯಾಗಗಳ ಹಂಬಲವೇ ಇದಾಗಿದೆ. ಎಂದು ಹಾಡುತ್ತ ಮದನ ಕಾಣದಾಗುವನು.
ಗೌತಮನಿಗೆ ಈ ಪ್ರೀತಿಯ ಹೊರತಾದದ್ದು ಜಗತ್ತಿನಲ್ಲಿ ಯಾವುದೂ ಇಲ್ಲವೆಂದು ಅರಿವಾಗಿದೆ. ಇದುವರೆಗೆ ಕೇಳಿದ್ದು ಕನಸೋ ನನಸೋ ಎಂದು ಗೊಂದಲ.
ನನ್ನ ಸಾಧನೆ ಮುಗಿದು ಸಿದ್ಧಿ ಹೊಮದಿದ ಪರಿಯೇ ಇದೋ, ನಾನರಿಯದ ಕಾಮನ ತರ್ಕವೋ ಎಂದು ಚಿಂತಿಸುತ್ತಾನೆ.ಸುತ್ತಲೂ ಆವರಿಸಿದ್ದ ಕತ್ತಲು ದೂರವಾಗಿ ಬೆಳಕು ಮೂಡಿದ ಭಾವ. ಬುದ್ಧಿಯು ಒಳಗನ್ನು ಉದ್ದೀಪಿಸಿದೆ. ಕರಣಗಳನ್ನು ಪಳಗಿಸಿದೆ. ಇನ್ನು ಭವಭೀತಿಗಳಿಲ್ಲ. ಇದ್ದರೆ ಮುಕ್ತಿಯು ಹೇಗೆ ಸಿಗುವುದು? ತನ್ನ ಸಿದ್ಧಿಯ ಬೆಳಕು ಜಗತ್ತಿಗಾಗಲಿ. ರಾಗದ್ವೇಷಗಳು ಅಳಿಯಲಿ.ನೋವು ನಲಿವುಗಳೆನ್ನದೆ ಪೂರ್ಣ ದೃಷ್ಟಿಯು ಎಲ್ಲೆಡೆಗೆ ಹರಡಲಿ. ನನ್ನ ತಪದ ಪೂರ್ಣತೆ ಜಗತ್ತಿಗೆ ಶಾಂತಿಯನ್ನು ನೀಡಲಿ ಎನ್ನುತ್ತ ಅಲ್ಲಿಂದ ಹೊರಡುವನು. ಸಿದ್ಧರಿಬ್ಬರಿಗೂ ಸಂತಸವಾಗುವುದು. ಜಗತ್ತಿಗೆ ಮಂಗಳ ಉಂಟುಮಾಡುವ ಈ ವಿಷಯವನ್ನು ರಾಜನಿಗೆ ತಿಳಿಸಲು ಹೊರಡುವರು.
ಅಹಲ್ಯೆ 21
ಉತ್ತರಾಂಕ
ದೃಶ್ಯ ೧
(ಮಿಥಿಲೆಯ ಬನದ ಒಂದು ಹಾದಿ. ಮೈತ್ರೇಯನ ಆಶ್ರಮದ ವಟುಗಳು ದರ್ಭೆ ಮತ್ತು ಸಮಿತ್ತಿನ ಹೊರೆಗಳನ್ನು ಹೊತ್ತುಕೊಂಡು ಪ್ರವೇಶಿಸುತ್ತಾರೆ)
ಒಬ್ಬ
ಹೊಂಗೆಯ ಮರ ಚೆಂದ, ಮಂಗನಾಟವು ಚಂದ
ಸಂಗಡವಿರೆ ನೀ ಬಲು ಚೆಂದ –
(ಹೊರೆಯನ್ನು ಎತ್ತಿ ಹಾಕಿ ಹೊಂಗೆಯ ಮರದ ನೆರಳಿನಲ್ಲಿ ಮಲಗುವುದಕ್ಕೆ
ಅಣಿಯಾಗುತ್ತಾ)
ಸಂಗಡವಿರೆ ನೀ ಬಲು ಚೆಂದ-ನೆಳಲೊಳು ಅಂಗಾತ ಮಲಗೆ ಬಲು ಚೆಂದ.
(ಇನ್ನೊಬ್ಬ ತಾನೂ ಹಾಗೆ ಮಾಡಿ)
ವೇದ ಕಲಿಯಲು ಹೋದ ಹೈದನ ಕತೆ ಕೇಳಾ
ಐದ್ದಟ್ಟಿ, ತುರುವ ಹಳುವೊಳು-ಕಾಯುತ್ತ ಓದಾಯ್ತು ಎಂದ ವನದೊಳು.
ಒಬ್ಬ
ಹೊಂಗೆಯ ನೆಳಲೊಳು ಅಂಗಾತ ಬಿದ್ದವನೆ
ಹಂಗಿಲ್ಲದೆ ವಿದ್ಯೆ ಕಲಿವನೆ-ನನ ಕೆಳೆಯ ಸಂಗಡಲೆ ಇಹಳೊ ಸರಸತಿ.
ಇನ್ನೊಬ್ಬ
ಪರರ ಜರೆದೊಡೆ ನಿನಗೆ ನರಕ ತಪ್ಪದು ಕಾಣೋ
ಗುರುವಾಕ್ಯ ನೆನೆಯೊ ನೇಹಿಗನೆ-
ದರ್ಭೆಯ
ಹೊರೆಯೆತ್ತಿ ನಡೆಯೋ ಮುನಿದಾರು.
ఒబ్బ
ಹೊತ್ತಾರೆ ತುರುವಟ್ಟಿ ಇತ್ತಲೆ ಹೋದವರು ನೆತ್ತಿಗೇರಿದರು ದಿನದೇವ-ಗೆಳೆಯರು
ಎತ್ತ ಹೋಗಿಹರೊ ಬರಲಿಲ್ಲ.
ಇನ್ನೊಬ್ಬ (ಎದ್ದು ಕುಳಿತು)
ದೌಡುಗೌಡೆನ್ನುತ್ತ ಓಡೋಡಿ ಬಹರಾರು ಕಾಡ ಹುಲಿ ಬೆಂಬತ್ತಿ ಬಂದಂತೆ-ಬರುವ ನೋಡಣ್ಣ ನಮ್ಮ ಗೆಳೆಯರ
(ಮತ್ತಿಬ್ಬರು ವಟುಗಳು ಏದಿಕೊಂಡು ಓಡಿಬರುತ್ತಾರೆ)
ಬಂದವರು
ಕಂಡೆವು !
ಮೊದಲನೆಯ ವಟು
ಏನನು?
ಎರಡನೆಯವನು
ಏನನೊ ?
ಬಂದವರು
ಕಂಡೆವು
ಬಂದವರು
ಕಂಡೆವುಕಂಡೆವು ಕಂಡೆವು ವಿಶ್ವಾಮಿತ್ರರ ಆ ಆಶ್ರಮದೆಡೆ ಇದೆ ಈಗ
ಹವಿ ಹೊಗೆಗೂಡಿದ ಅಗ್ನಿಯ ತೆರದೊಳು ಜಡೆಗೊಂಡಾತನ ಮೊಗವೀಗ !
ಮೊದಲ ವಟುಗಳು
ಮಹರ್ಷಿ ಕೌಶಿಕರೈತಂದಿಹರೇ, ಅವರನು ಬಲ್ಲಿರಾ-ಇದು ದಿಟವೇ?
ಬಂದವರು
ದಿಟ ದಿಟ, ಮುನಿಗಳನರಿಯೆವೆ ! - ನಡೆಯಿರಿ ಗುರುಗಳಿಗರುಹುವ ಈ ಕ್ಷಣವೇ
(ಎಲ್ಲರೂ ಹೋಗುವರು )
ದೃಶ್ಯ ೨
(ತೆರೆ ಎದ್ದು ಮೈತ್ರೇಯನ ಆಶ್ರಮದ ಒಂದು ಭಾಗವನ್ನು ತೋರಿಸುವುದು. ಮಾಧ್ಯಾಹ್ನಿಕವನ್ನು ಪೂರೈಸಿಕೊಂಡು ಮೈತ್ರೇಯ ಕೌಶಿಕರು ಆಶ್ರಮಕ್ಕೆ ಬರುತ್ತಿರುವಾಗ-)
ಮೈತ್ರೇಯ
ಅಹಹ ದಿನದ ಚೆಲುವೆನಿತು
ಎಂದೂ ಕಾಣೆ ಸೊಗವಿನಿತು ॥ಪ ॥
ರವಿ ಹೊಳೆವನು ತಿಳಿನೀಲವ
ಹೊಸ ಹೊಗರಿಂದಭಿಷೇಚಿಸಿ ತಳಿರೊಡೆದಿಹ ಮಲರಿಡಿದಿಹ
ಬನದ ಚೆಲುವನವಲೋಕಿಸಿ ॥ ಅಹಹ ದಿನದ
ಸಿರಿಮೌನದ ಕುಸುರಿನಂತೆ ಖಗದಿಂಚರ ವನದಂಚೊಳು
ನಾನಾಲಿಸೆ ಸವಿನೆನಪನೆ ತರುತಿರುವುದು ಬಗೆಯಂಚೊಳು ॥ ಅಹಹ ದಿನದ.
ನನ್ನಾಲಿಗಳರಸುತ್ತಿವೆ ಈ ದಂಪತಿ ಇಲ್ಲಿ ಹರೆನೆ
ದೆಸೆದೆಸೆಗಳ ನಿಟ್ಟಿಸುತಲಿ ಹಿಂದಾದುದು ಬರಿ ಕನಸೆನೆ || ಅಹಹ ದಿನದ
ನೋಡಾ ತರು ನಾಗೇರಿದ ವಧುವಿನಂತೆ; ಅದರಡಿಯೊಳು
ಭ್ರಮಿಸುವೆ ನಾ ನವದಂಪತಿ ನುಡಿದಾಡುವರೆನ್ನುವವೊಲು || ಆಹಹ ದಿನದ
ಚಣಚಣಕೂ ಕಿವಿ ತೆರೆವುದು ಗೌಮತನಿವನೆಂದಾಲಿಸಿ
ಬರಿ ಭ್ರಮೆ ಇದು ಹುಸಿ ಎನ್ನುವ ನಂಬಿಕೆಯನೆ ಹುಸಿ ಎನ್ನಿಸಿ || ಅಹಹ ದಿನದ ...
ಅದೆ ಬಾನದೆ ಬೆಳಕಾ ರಸ-
ದುನುಭೂತಿಯ ಪಡೆದಿದೆ ಮನ ಮೊದಲೊಲಿದರ ಮುದಮುದ್ರಿತ-
ವಾದಾ ದಿನದಂತೀ ದಿನ || ಅಹಹ ದಿನದ ...
ಕೌಶಿಕ
ಪ್ರಿಯದರ್ಶನವಾದೀ ಜಗ ಪ್ರಿಯದರ್ಶನಕಾಗದಿಹುದೆ ?
ಶಾಪಾಂತ್ಯದ ಪುನರಾಗಮ-
ನಾಕಾಂಕ್ಷೆಯೊಳಿದೆ ನನ್ನೆದೆ || ಅಹಹ ದಿನದ ...
ಮಾಧವಿ
(ಸಂಭ್ರಮದಿಂದ ಪ್ರವೇಶಿಸಿ)
ಆಲಿಸು ಕೌಶಿಕ, ಹಳುವಿಂದೈತಂ-
ದೀ ವಟುಗಳ ಬೇಹ
ಶುಭಶುಭವೆನ್ನುತೆ ನನ್ನೆದೆ ನುಡಿಯಿತು-
ಆಲಿಸಿರೀ ಬೇಹ.
ಮೈತ್ರೇಯ
ಏನದು ವಟುಗಳೇ ?
ವಟುಗಳು
ಕ್ಷಮಿಸಿರಾರ್ಯ, ತುಸವೆಚ್ಚರ ತಪ್ಪಿರೆ ತುರು ಹಿಡಿದುವು ಹಳುವಿನ ದಾರಿ; ಅವನರಸುತ ನಾವೈದಿದೆವಲ್ಲಿಗೆ ನಿಮ್ಮಂಕೆಯ ಮೀರಿ
ಕೌಶಿಕ
(ಆ ಹುಡುಗನ ಬೆನ್ನು ತಟ್ಟಿ ನಗುತ್ತ)
ಆಟದ ಹಂಬಲು ನಿಮಗಿರೆ, ಓಟದ ಹಂಬಲು ತುರುಗಾಯ್ತು.
ಕ್ಷಮಿಸಿಹರಿದ ಗುರು; ಹಳುವೊಳು ಏನಂ
ಕಂಡಿರಿ, ಏನಾಯ್ತು ?
ವಟುಗಳು
ತರುವೇರಿರೆ ನಾಬಡಿಯೊಳು ಕಂಡೆವು
ವಿಶ್ವಾಮಿತ್ರರ ಇದೆ ಈಗ
ಹವಿಹೊಗೆಗೂಡಿದ ಅಗ್ನಿಯ ತೆರದೊಳು
ಜಡೆಗೊಂಡಾತನ ಮೊಗವೀಗ
೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಮಿಥಿಲೆಯ ದಾರಿಯಲ್ಲಿ ವಟುಗಳಿಬ್ಬರು ಸಮಿತ್ತನ್ನು ಆಯ್ದು ಹೊರೆ ಹೊರುತ್ತಾ ಹೋಗುವಾಗ ಹೊಂಗೆಯ ಮರದ ನೆರಳಿನಲ್ಲಿ ಸ್ವಲ್ಪ ವಿಶ್ರಮಿಸುತ್ತಿರುವರು. ತ್ರಿಪದಿಯ ಜಾನಪದ ಮಟ್ಟಿನಲ್ಲಿ ಅವರ ಮಾತುಗಳು ಸೊಗಸಾಗಿದೆ. ಗೇಯತೆಯನ್ನು ಹೊಂದಿವೆ.
ವೇದ ಕಲಿಯಲು ಹೋದವನ ಬಗ್ಗೆ ಹಾಸ್ಯ ಮಾಡುವರು. ನಮ್ಮ ಸಂಗಡವೇ ಸರಸ್ವತಿ ಇರುವಳೆನ್ನುವರು. ಮತ್ತೊಬ್ಬನು ಇನ್ನೊಬ್ಬರನ್ಬು ಟೀಕಿಸಬಾರದೆನ್ನುವ ಗುರು ವಾಕ್ಯವನ್ನು ಹೇಳುವನು. ಮೊದಲನೆಯವನು ಬೆಳಿಗ್ಗೆಯೇ ಹಸುಗಳನ್ನು ಕಟ್ಟಿಕೊಂಡು ಹೋದ ಗೆಳೆಯರು ಇನ್ನೂ ಬರಲಿಲ್ಲವೆನ್ನುವನು. ಆಗ ಆ ಗೆಳೆಯರು ಬೇಗ ಬೇಗ ಓಡುತ್ತ ಬರುವುದು ಕಾಣಿಸುವುದು. ಏನಾIಯ್ತು? ಎಂಬ ಪ್ರಶ್ನೆಗೆ ಕಂಡೆವು ಕಂಡೆವು ಎನ್ನುವರು.
ಅವರು ವಿಶ್ವಾಮಿತ್ರ ರನ್ನು ಕಂಡೆವು ಎನ್ನುವರು. ಹೋಮಾಗ್ನಿಯ ಹೊಗೆಯಿಂದ ಜಡೆಗಟ್ಟಿದವನನ್ನು ಕಂಡೆವು ಎಂದಾಗ ಅವರನ್ನು ನೀವು ಬಲ್ಲಿರಾ ಎಂಬ ಪ್ರಶ್ನೆಗೆ ಅರಿತಿರುವೆವು ಎನ್ನುತ್ತ ಗುರುಗಳಿಗೆ ಈ ವಿಷಯ ತಿಳಿಸಲು ಎಲ್ಲರೂ ಅವಸರದಿಂದ ಸಾಗುವರು.
ಮೈತ್ರೇಯನ ಆಶ್ರಮ. ಪ್ರಕೃತಿಯ ಸೊಬಗನ್ನು ಕೂಡ ಮೈತ್ರೇಯ ಎಷ್ಟು ಸೊಗಸು ಎಂದು ಹಾಡತೊಡಗುವನು. ಎಲ್ಲೆಲ್ಲೂ ಚಿಗುರು ನಳನಳಿಸುತ್ತಿದೆ. ರವಿ ಹೊಳೆಯುತ್ತಿದ್ದಾನೆ. ಹಕ್ಕಿಗಳ ಇಂಚರ ಇಂಪಾಗಿದೆ. ನವದಂಪತಿಗಳು ಇಲ್ಲಿ ಓಡಾಡುತ್ತಿರುವಂತೆ ಇದೆ. ಹೂ ತುಂಬಿದ ವೃಕ್ಷ ನಾಚಿದ ವಧುವಿನಂತೆ ಭಾಸವಾಗುತ್ತಿದೆ. ಇದು ಭ್ರಮೆಯೋ, ಕನಸೋ, ನಿಜವೋ ತಿಳಿಯದಾಗಿದೆ.
ಕೌಶಿಕನು ಇದು ಶಾಪದ ಅಂತ್ಯದಸೂಚನೆಯಿರಬಹುದು ಎನ್ನುತ್ತಾನೆ. ಇಬ್ಬರಿಗೂ ಅದು ಹೌದೆನಿಸುತ್ತದೆ. ಅಷ್ಟರಲ್ಲಿ ಮಾಧವಿ ಬೇಗನೆ ಅಲ್ಲಿಗೆ ಬರುತ್ತಾಳೆ. ಈ ವಟುಗಳು ಹೇಳುತ್ತಿರುವುದನ್ನು ಕೇಳಿರಿ ಎನ್ನುತ್ತಾಳೆ. ಆಗ ವಟುಗಳು ನಿಮ್ಮ ಮಾತನ್ಬು ಮೀರಿ ಸ್ವಲ್ಪ ಮೈಮರೆತಿದ್ದೆವು. ಮರವೇರಿ ಆಟ ಆಡುತ್ತಿರುವಾಗ ದಾರಿಯಲ್ಲಿ ವಿಶ್ವಾಮಿತ್ರರು ಬರುತ್ತಿರುವುದನ್ಬು ಕಂಡೆವು. ಈಗ ತಾನೇ ಕಂಡೆವು. ಹೋಮದ ಹೊಗೆಯಿಂದ ಜಡೆಗಟ್ಟಿದ ಮುನಿಯನ್ನು ಕಂಡೆವು ಎನ್ನುತ್ತಾರೆ.
ಅವರೊಡನೆ ಇಬ್ಬರು ತೇಜಸ್ವಿಗಳಾದ ವಟುಗಳಿದ್ದರು. ತಾವರೆಯಂತಹ ಕಣ್ಣುಗಳು, ಚಂದ್ರನಂತಹ ಮುಖ, ಗೂಳಿಯ ಹೆಣಲಿನಂತಹ ಹೆಗಲು, ಸಿಂಹದ ಗಾಂಭೀರ್ಯ, ಎಳೆಹರೆಯದ ನಿಗಿ ಮುಖ, ಕಣ್ಣುತುಂಬುವ ಮೈಕಟ್ಟು...ಆಹಾ ಎಂತಹ ಸುಂದರರು! ಎಂದು ಬಣ್ಣಿಸುತ್ತಾರೆ.
ಗೌತಮನು ಅಹಲ್ಯೆಗೆ ನೀಡಿದ್ದ ಶಾಪದ ಅಂತ್ಯಕ್ಕೆ ಇವರ ಬರವೇ ಕಾರಣವೇನೋ ಎಂದು ಮೈತ್ರೇಯ ನುಡಿಯುವನು. ಮಿಥಿಲಾ ನಗರದ ಹಾದಿಯಿಂದ ಇತ್ತ ಕಡೆಗೆ ಇವರು ಬರುತ್ತಿರಬೇಕಾದರೆ ಇದು ಮಂಗಳಸೂಚಕವಾಗಿ ಕಾಣುತ್ತದೆ. ನಡೆ, ಅವರನ್ಬು ಸತ್ಕರಿಸಬೇಕಿದೆ ಎಂದು ಹೊರಡುವನು. ಎಲ್ಲರೂ ಹೊರಡುವರು.
ಶ್ರೀರಾಮನ ಹೃದಯ ಆಲಿಸಿದ ಅಳಲು
ಅಹಲ್ಯೆ 22
ದೃಶ್ಯ ೩
(ಗೌತಮಾಶ್ರಮ ರಾಮಲಕ್ಷ್ಮಣ ಸಮೇತನಾಗಿ ವಿಶ್ವಾಮಿತ್ರನು ಪ್ರವೇಶಿಸುತ್ತಾನೆ)
ವಿಶ್ವಾಮಿತ್ರ
ವತ್ಸ ರಾಮಾ ವತ್ಸ ಲಕ್ಷ್ಮಣ, ಬಂದೆವೆಮ್ಮಯ ಪಯಣದಂತಕೆ.
ಅತ್ತ ನೋಡಿರಿ, ಪಡುವ ದೆಸೆಯೆಡೆ ಸುತ್ತಣಾಶ್ರಮವನದ ನಡುಗಡೆ ನಿಯಮರಕ್ಷಿತ ಧರ್ಮದಂದದಿ
ಮೆರೆವ ಹೊಳಲೇ ಮಿಥಿಲೆಯು.
ರಾಮ
ಜನಕರಾಯನ ನಗರ ಇದುವೆ? ಆಯ್ಯನಾಳುವ ನಮ್ಮ ಯೋಧ್ಯೆಯ ಕಂಡ ತೆರದೊಳು ಮನಕೆ ಸಂತಸ-
ವಾಗುತ್ತಿರುವುದು ಲಕ್ಷ್ಮಣ !
ಲಕ್ಷ್ಮಣ
ಅಹುದು ಅಣ್ಣಾ ಅಹುದು ! ನನಗೂ ನೂರು ಕಳಸವ ಮೆರಸುತಿರುವೀ ಹೊಳಲು ಹರುಷವ ಬೀರುತಿಹುದೈ
ನಮ್ಮ ನಗರದ ತೆರದೊಳು.
ವಿಶ್ವಾಮಿತ್ರ
ಕುಲದಿಂ ಶೀಲದಿ ಧರ್ಮದಾಳ್ವೆಯೊಳು ಅಂತೆಯ ಜಸದೊಳು ದಶರಥಗೆ ಸಾಟಿಯೆನಿಸುವೀ ರಾಜರ್ಷಿಯ ಪುರ ತಕ್ಕುದು ನಿಮ್ಮಯ ಭಾವನೆಗೆ.
ದಣಿದಿರಿ ಮಕ್ಕಳೆ, ಹಳುವಿನ ಹಾದಿಯ ಸರಿಹೊತ್ತಿನವರೆ ನಡೆನಡೆದು; ತೋಪೊಳು ಬಿಡುವಂ ಕೊಳ್ಳಿರಿ ಬರುವೆನು
ಧ್ಯಾನದ ನೇಮವ ನಾ ನಡೆದು.
(ಹೋಗುವನು)
ಲಕ್ಷ್ಮಣ
ದಿನದಿನ ನಾವಲೆದಾಡಿದ ಕುರುಚಲ ಕಾಡೆತ್ತ,
ನಿಡು ಬೆಳೆದಿಹ ಹೆಮ್ಮರದೀ ತೋಪಿನ ತೆರನೆತ್ತ !
ನೋಡ್ಕ ಅಣ್ಣಾ, ಬಾನನೆ ವಾಮನನಡಿಯಂತೆ
ಅಳೆದಿಹುದೀ ತರುವೊಂದೇ ನೋಟವೆ ಸೋಲ್ವಂತೆ !
ನೀನೆನ್ನುತ ತಾನೆನ್ನುತ ಹೋದರೆ ಅನುವರಿತು
ಗಿಡುಮರಗಳು ಬಾಳುತ್ತಿವೆ ನಲೆಯ ಹವಣರಿತು ;
ಮೆಳೆಗುತ್ತಿಯ ನೈಷ್ಟುರದ ಜೀವನವಿಲ್ಲಿಲ್ಲಿ; ತುಂಬಿದ ಬಾಳ್ವೆಯ ಸಂತಸ ಹೊರಹೊಮ್ಮಿದೆ ಇಲ್ಲಿ.
ನಡುಗಿಡದೊಳು ನಡುಗುತ್ತಿಹ ಹೊಗಭಯವ ನೀಡಿ.
ನೆಲದಗಲಕು ಹರಡಿರುವೀ ಗರುಕೆಯ ಕಣ್ಣೋಡಿ,
ಬನದೆಲೆಯೀ ಕಿವಿಸವಿದನಿ, ಕುಂಜದ ಖಗದುಲಿವು
ಬಗೆಗಾವುದೊ ವಿಶ್ರಾಂತಿಯ ಭಾವವ ತಂದಿಹವು.
ಕಣ್ಮನಗಳ ತರ್ಪಿಸುವೀ ಬನದೇವಿಯ ಸಿರಿಗೆ
ಮಣಿಯಿತು ಬಗೆ; ಅಳಲಾಯಿತು ನೆನಪಿನ ತೆರೆಮರೆಗೆ
ಆದೊಡೆ ಅಣ್ಣಾ, ನೀನೂ ನನ್ನುತ್ಸಾಹದೊಳು
ಬೆರೆಯದೆ ದೂರದ ಮನದಿಂ ನಿಂತಿಹೆ ಚಿಂತೆಯೊಳು !
ರಾಮ
ದಿಟ ತಮ್ಮಾ ದಿಟ ಲಕ್ಷ್ಮಣ, ಬನ ಸುಂದರವಹುದು;
ದಣಿದಿಹ ದಾರಿಗಮಂದಿಗೆ ಸೊಗವಂ ತರಬಹುದು.
ಆದೊಡೆ ನನಗಿದು ಸೋಜಿಗ-ನಿರ್ಜನವೀ ತಾಣ
ಧ್ಯಾನಾಧ್ಯಯನಾಸಕ್ತ ಜನಾವಾಸವಿಹೀನ !
ಜ್ಞಾನಕು ನೇಮಕು ತಕ್ಕುದು ನೆರೆಯ ತಿಳಿವೊನಲು,
ಪಾಠ ಪ್ರವಚನಕಾದುದು ತೋಪಿನ ತಣ್ಣೆಳಲು
ಮೇಣಿದದೂರಗ್ರಾಮ, ತೃಣಕಾಷ್ಠ ಸಮೃದ್ಧ :
ಇಂತಿದ್ದರು ಏಕತಮಾಯ್ತಿದು ವಿಪ್ರನಿಷಿದ್ದ ?
ಆಗೊ ಆ ಎಡೆ ಬಿಟ್ಟಲೆವನೆ ಎಂತಿಳೆಗೊರಗಿಹುದು
ತರುತಲದೀ ವೇದಿಕೆಯೂ ನೆಲಸಮ ಕುಸಿದಿಹುದು :
ಪಿಂತಿದು ಮುನಿಜನಸೇವಿತಮಿದು ನಿಸ್ಸಂದೇಹ;
ಇಂದಾದೊಡೆ ಎನಗೆನಿಪುದು ಇದು ಗಾಳಿಯ ಗೇಹ
ತಪ್ಪಾತ್ಮರ ನಿಡುಸುಯ್ಯಲು ಈ ಬನದಲೆ ಹುಯಿಲು,
ದುಃಖಿಗಳಾರ್ತಾಕ್ರಂದನವೀ ಕೋಕಿಲ ಕುಕಿಲು;
ಈ ಹಳುವಿನ ಮರೆಗಾರೋ ಪೊರೆ ಪೊರೆ ಶರಣೆಂದು
ಮೌನದೊಳೆನ್ನೆರೆವಂತಿದೆ ನನ್ನಯ ಕಿವಿಗಿಂದು.
ಲಕ್ಷ್ಮಣ
(ಹುಸಿನಗೆಗೊಂಡು)
ತಾಟಕೆಯನು ಕೊಂದಾಮೊದಲಣ್ಣಾ, ನಿನ್ನ ಮನ
ಸ್ವಾಸ್ಥ್ಯವನುಳಿದಿಂತಾಯಿತು ದುಶ್ಚಿಂತಾಸದನ
ಕುಸಿದಲೆವನೆ ಈ ಕಾಡೊಳದೇಂ ನಿತ್ಯದ ನೋಟ
ಅದಕೀ ಪರಿ ಪರಿಭಾವಿಸೆ ಅದು ಹುಸಿಬಗೆಯಾಟ.
ಇದಮಂಗಳವಾಗಿದ್ದೊಡೆ ಎಚ್ಚರಿಕೆಯ ಕೊಡದೆ
ಕರೆತರುತಿದ್ದರೆ ನಮ್ಮನು ಮುನಿವರರೀ ತೆರದೆ?
ಎಂತಿದ್ದರು ಇರಲೀ ಪರಿ; ಈ ಬನದೇವತೆಗೆ
ಶರಣೆಂದೆನ್ನು ಬಿಡುವಂ ಕೊಳುವುದೆ ತರವೆಮಗೆ.
ರಾಮ
ನಿನ್ನಿಚ್ಛೆಯ ತೆರನಾಗಲಿ ಲಕ್ಷ್ಮಣ, ಮಚ್ಚಿತ್ತ ವಿಭ್ರಾಂತಿಗೆ ಸಿಲುಕಿರಬಹುದಾ ದುಗುಡ ನಿಮಿತ್ತ.
ಬಿಡುವಂ ಕೊಳ್ಳುವ ನೆಳಲೊಳು ಮುನಿಯ್ಯತಹವರೆಗೆ
ಮಲರರ್ಘ್ಯವ ಸಲಿಸುತಲೀ ಬನಸಿರಿ ದೇವತೆಗೆ.
(ಪುಷ್ಪವನ್ನು ಆರಿಸುತ್ತಿರುವರು)
(ತೆರೆಯ ಮರೆಯಲ್ಲಿ ಅದೃಶ್ಯಳಾದ ಅಹಲೈ ಅಮಾನುಷವೂ ದೀನವೂ ಸ್ಪಷ್ಟಾಸ್ಪಷ್ಟವೂ ಆದ ವಾಣಿಯಿಂದ ಹಾಡುವಳು)
ಕೆಟ್ಟಿನಲಾ ಒಲವೇ ಒಲವೇ
ಸುಟ್ಟೆಯಲಾ ಸುಟ್ಟೆಯಲಾ ನಲವೇ ನಲವೇ
ಗಾಳಿಯ ತೆರನಾದೆನಲಾ
ಈ ಬಾಳಂ ಬಾಳೆನಲಾ
ಹಾ ನಲವೇ ಒಲವೇ-
ರಾಮ
(ಆಲಿಸಿ, ಭ್ರಾಂತನಾಗಿ)
ಲಕ್ಷ್ಮಣಾ ಅತ್ತಗುತ್ತಿಯಸನಿಯ ಆಲಿಸಾಲಿಸುದನಿಯ !
ಲಕ್ಷ್ಮಣ
ಏನು ದನಿಯದು, ಎತ್ತ ?
ಅಹಲ್ಯೆ
ರವಿ ಬೆಳಗದ ತಿರೆ ಧರಿಸದ
ಎಲರೂ ಸೋಕದ ಬದುಕು
ಇರವಿಲ್ಲದ ಸಾವೊಲ್ಲದ
ಬರಿಬರಿ ಅಳಲಿನ ನಸುಕು
ವಿಶ್ವಕೆ ನಾನೇಕಾಕಿನಿ
ಪಾತಕಿ ಅಯ್ಯೋ ಶಾಕಿನಿ
ಅಸತಿ ಆನಾತ್ಮ ಭ್ರಷ್ಟ, ಹೇಸಿಕೆ ಎಲ್ಲರ ಮನಕು ॥ ಕೆಟ್ಟಿನಲಾ..
ರಾಮ
ಕೇಳಿತೇ ಲಕ್ಷ್ಮಣ ?
೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ವಿಶ್ವಾಮಿತ್ರರು ರಾಮ ಲಕ್ಷ್ಮಣರೊಂದಿಗೆ ಗೌತಮರ ಆಶ್ರಮಕ್ಕೆ ಬರುತ್ತಾರೆ. ತಾವು ಮಿಥಿಲೆಗೆ ಹತ್ತಿರವಾಗಿದ್ದೇವೆಂದು ಹೇಳುತ್ತಾರೆ. ಜನಕರಾಜನ ಮಿಥಿಲೆ ಇದುವೆ? ನಮ್ಮ ಅಯೋಧ್ಯೆಯ ಹಾಗೇ ಭಾಸವಾಗುವುದು ಎಂದನು ರಾಮ. ಲಕ್ಷ್ಮಣನೂ ಅದನ್ನು ಒಪ್ಪುವನು. ಧರ್ಮ, ಕುಲ, ಶೀಲ ಹಾಗೂ ಯಶಸ್ಸಿನಲ್ಲಿ ಇದು ನಿಮ್ಮ ಭಾವನೆಗೆ ತಕ್ಕಂತೆ ಇದೆ. ದಶರಥನಿಗೆ ಸರಿಸಮನಾಗಿರುವನು ಜನಕ ಎಂದು ವಿಶ್ವಾಮಿತ್ರ ಹೇಳುತ್ತ ಇವರಿಬ್ಬರಿಗೂ ಅಲ್ಲಿ ಸ್ವಲ್ಪ ಕಾಲ ವಿಶ್ರಮಿಸಲು ತಿಳಿಸಿ ತಾನು ತನ್ನ ಧ್ಯಾನ ಮತ್ತು ಅನುಷ್ಠಾನಗಳಿಗೆ ಹೋಗುವನು.
ಲಕ್ಷ್ಮಣ ಆ ಕಾಡನ್ನು ಕಂಡು ವಿಸ್ಮಿತನಾಗುತ್ತಾನೆ. ಅಲ್ಲಿ ಸಾಕಷ್ಟು ಪೊದೆಗಳು ಬೆಳೆದಿವೆ. ಬಾನೆತ್ತರದ ಮರಗಳು. ನೆಲದಲ್ಲಿ ಗರುಕೆಗಳು ಹರಡಿವೆ. ಹೂಗಳು ಅರಳಿವೆ. ತುಂಬು ಜೀವನದ ಹೊಳಪು ಇಲ್ಲಿದೆ. ನಾವು ಇದುವರೆಗೂ ನೋಡಿದ ಕುರುಚಲು ಕಾಡಿಗಿಂತ ಇದು ಭಿನ್ನವಾಗಿದೆ. ಕಣ್ಣು ಮನಗಳನ್ನು ತಣಿಸುತ್ತಿದೆ. ಮನಸ್ಸಿಗೆ ಸಂತೋಷವಾಗುತ್ತಿದೆ. ಆದರೆ, ಅಣ್ಣಾ, ನೀನು ನನ್ನ ಉತ್ಸಾಹದಲ್ಲಿ ಬೆರೆಯದೆ ಏನೋ ಚಿಂತಿಸುವಂತೆ ಇರುವೆಯೇಕೆ?
ಅದಕ್ಕೆ ರಾಮ ಉತ್ತರಿಸುತ್ತಾನೆ. ನಿಜ, ಈ ಸ್ಥಳವು ಸುಂದರವಾಗಿದೆ. ಆದರೆ ಇದು ನಿರ್ಜನವಾಗಿದೆ. ಇಲ್ಲಿ ಧ್ಯಾನ ಅಧ್ಯಯನ ಮಾಡುವವರಾರೂ ಕಾಣುತ್ತಿಲ್ಲ.
ಅಲ್ಲಿ ಒಂದು ಕುಟೀರ ಕಾಣುತ್ತಿದೆ ನೋಡು.ಅದು ಕುಸಿಯುವಂತಿದೆ. ಹಳುಬೆಳೆದು ಹಾಳಾಗಿದೆ. ತಪ್ತ ಹೃದಯಗಳ ನಿಟ್ಟುಸಿರು ಇಲ್ಲಿ ತುಂಬಿರುವ ಹಾಗೆ ತೋರುತ್ತಿದೆ. ನೊಂದ ಜೀವಗಳ ಆರ್ತನಾದ ರಕ್ಷಿಸು ರಕ್ಷಿಸು ಎಂದು ಬೇಡುವಂತಿದೆ ಎನ್ನುವನು.
ಅದಕ್ಕೆ ಲಕ್ಷ್ಮಣ ಒಪ್ಪುವನು. ಆದರೆ ಇದು ಅಮಂಗಳಕರ ಸ್ಥಳವಾಗಿದ್ದಿದ್ದರೆ ಗುರುಗಳು ಎಚ್ಚರಿಕೆ ಕೊಡದೆ ಇರುತ್ತಿರಲಿಲ್ಲ. ಆಗಲಿ, ಅದೇನೇ ಇರಲಿ. ಈ ವನದೇವತೆಗೆ ನಾವು ಪೂಜೆ ಸಲ್ಲಿಸುವಾ ಎಂದನು. ರಾಮನೂ ಒಪ್ಪುವನು. ಏನೋ ನನ್ನ ಮನಸ್ಸು ಭ್ರಾಂತವಾಗಿರಬಹುದು . ಮುನಿಗಳು ಬರುವ ತನಕ ಇಲ್ಲಿಯ ಮರದ ನೆರಳಿನಲ್ಲಿ ವನದೇವತೆಗೆ ಹೂಗಳ ಅರ್ಘ್ಯ ಅರ್ಪಿಸುವಾ ಬಾ ಎಂದು ಹೇಳುವನು. ಇಬ್ಬರೂ ಹೂಗಳನ್ನು ಆರಿಸುವರು.
ಆಗ ಒಂದು ಅಸ್ಪಷ್ಟ, ರೋಧನ ಗೀತ ಕೇಳಿಸುವುದು. ಅಹಲ್ಯೆ ನೋವಿನಿಂದ ಹಾಡುತ್ತಿರುವಳು. ಪ್ರೀತಿಯ ಮೋಹದಲ್ಲಿ ನಾನು ಕೆಟ್ಟೆ. ಗಾಳಿಯ ತೆರದಂತಾಯಿತು ನನ್ನ ಬಾಳು ಎಂದು ಗೋಳಿಡುತ್ತಿರುವಳು. ರಾಮ ಲಕ್ಷ್ಮಣರು ಅದನ್ನು ಆಲಿಸಿ ಬೆರಗಾಗುವರು.
ರವಿ ಬೆಳಗದ, ಗಾಳಿಯೂ ಸುಳಿಯದ, ಇದ್ದರೂ ಸತ್ತಂತಹ ಬಾಳಿದು ನನ್ನದು. ಇಡೀ ವಿಶ್ವದಲ್ಲಿ ನಾನು ಏಕಾಂಗಿ, ಪಾಪಿ ಎಂದು ನರಳುವಳು.
ಲಕ್ಷಣನು ಅದನ್ನು ಗಾಳಿಯ ಶಬ್ದವೆಂದೂ ರಾಮನ ಭ್ರಮೆಯೆಂದೂ ಭಾವಿಸುವನು. ಆದರೂ ರಾಮನು ಅತ್ತಲೇ ಆಲಿಸುವನು.
ಅಹಲ್ಯೆ 23
ಅಹಲ್ಯೆ
ಇಂಧನವುಳಿದಳಿಪೊಗೆಯನೆ
ನೆಮ್ಮುವ ಉರಿಯಂತೆ
ಕಾಮುಕ ದೇವನ ವಿಭ್ರಮ-
ಕಾದೆನು ನಾನಿಂತೆ.
ಹೂವೆಂದುದೆ ಹಾವಾಯಿತು
ಕಾವುದೆ ನನ್ನಂ ಕೊಂದಿತು
ಹಾ ಒಲವೇ ಹುಸಿ ನಲವೇ ಹಾ ನಿರಂತ ಚಿಂತೆ || ಕೆಟ್ಟೆನಲಾ ||
ಲಕ್ಷ್ಮಣ
ಕೌತುಕದ ನಾದಗಳ ಬೀಡಣ್ಣ ಈ ಕಾಡು : ಮನುಜರಳುವನೆ ಪೋಲ್ತುದೀ ಬಿದಿರಮಳೆ ಹಾಡು |
ಅಹಲ್ಯೆ
ನನ್ನೆದೆಯನೆ ನಾನರಿಯದೆ ನಡೆಯಂ ಮಾರಿದೆನೇ ಹುಲುಬಯಕೆಯ ತುಸ ರಾಗಕೆ ನನ್ನನೆ ಮಾರಿದೆನೇ ನಾ ಬೆಂದೆನೆ ಬಯಲಾದೆನೆ ನೆನೆದೆಡೆ ಮೈಲಿಗೆಯಾದೆನೆ
ಮಾಮುನಿಸತಿಗೀ ಬಾಳೆ ಹಾ ಮುಂಗತಿ ಕಾಣೆ ಕೆಟ್ಟೆನಲಾ..
ಲಕ್ಷ್ಮಣ
ಕಣ್ ಕಾಣದು ಕಿವಿಯಾಲಿಪು
ದೇನೀ ಭ್ರಾಂತಿ ಇದು ?
ನಮ್ಮನು ವಂಚಿಸಲೀ ತೆರ
ರಕ್ಕಸ ಮಾಯೆಯಿದು !
ಏನೋ ಹುಯಿಲೇನೋ ದನಿ, ಅರಿಯದು ಇದರೊಳಗು
( ರಾಮನು ಪರವಶತೆಯಿಂದ ಧ್ವನಿಯ ಕಡೆ ತೆರೆಯ ಮರೆಗೆ ಹೋಗುವನು )
ತುಸ ತಡೆ ರಾಮ ಮಾಮುನಿ ಐತಹವರೆಗು.
ವಿಶ್ವಾಮಿತ್ರ
( ಪ್ರವೇಶಿಸಿ )
ಏನಾಯಿತು ಸೌಮಿತ್ರಿ?
ಲಕ್ಷ್ಮಣ
ಗಾಳಿ ಗೋಳಿಡುತಿಹುದು ಈ ಹಳುವಿನೊಳಗೆ,
ಬೇಡವೆಂದರು ಹೋದ ರಾಮನತ್ತೆಡೆಗೆ, ಆಲಿಸಿರಿ ಮುನಿವರಾ, ಹೃಥ್ವಿದಾರಿಣಿ ವಾಣಿ ?
ಶೋತ್ರಗೋಚರಮಾಗಲಿಲ್ಲವೇ ಈ ವಾಣಿ ?
ಅಹಲ್ಯೆ
ಉಸಿರೆಳೆಯುವೆ ನಾನೆಂದಿಗೆ ಮಾನಿಸರಂತೆ
ಪಳಿಯಳಿಯುವೆ ನಾನೆಂದಿಗೆ
ನೀಗುತ ಚಿಂತೆ ಕೊನೆ
ಎಂದಿಗೆ ಈ ಶಾಪಕೆ
ತಂಪೆಂದಿಗೆ ಈ ತಾಪಕೆ
ಸೊಗವಡೆವಳು ಇನ್ನೆಂದಿಗೆ ಗೌತಮ ಕಾಂತೆ ॥ ಕೆಟ್ಟೆನಲಾ.......
ವಿಶ್ವಾಮಿತ್ರ
ನನ್ನ ಸಖ ಗೌತಮನ ಪುಣ್ಯಮಯಿ ಸತಿ ಈಕೆ
ಕೃತಕರ ನಿಷ್ಕೃತಿಗೆ ಪರಿತಪಿಪಳಿಂತು; ಅನುತಾಪವರೆಸುತ್ತ ಕಾಡಲೆಯುವೀ ಗೋಳ-
ನಾಲಿಸುತ ನನ್ನೆದೆಯು ಕರಗುತಿಹುದೆಂತು !
ಕಳವಳವ ಕೊಳ್ಳದಿರು ಸೌಮಿತ್ರಿ, ಶುಭವಹುದು.
(ರಾಮ ಹೋದ ಕಡೆಯನ್ನು ನೋಡಿ)
ನಡೆ ರಾಮ, ಮರುಕದಿಂ ಸ್ನಾತಾಂತರಂಗದಿಂ-
ದಾರ್ತರುತ್ತರಣಕ್ಕೆ ತಕ್ಕನಾದೆ. ತೇಜೋಭಿರಾಮನೇ-ನಡೆ, ವೇಳೆಯೊದಗಿಹುದು
ಧೂತಕಲ್ಮಷೆ ತನ್ನ ಬಾಳನೈದೆ.
( ವಿಶ್ವಾಮಿತ್ರನು ಅಂತರ್ಮುಖನಾಗಿ ಆವುದೋ ಮಂತ್ರವನ್ನು ಜಪಿಸುತ್ತ ತೆರೆಯ ಮರೆಗೆ ಹೋಗುವನು. -ಲಕ್ಷಣನು ಆತನನ್ನು ಹಿಂಬಾಲಿಸುವನು. ಆತನು ಅತ್ತ ಹೋಗಲು ಇತ್ತ ರಂಭೆ ಮೊದಲಾದ ಅಪ್ಸರೆಯರು . ಕರುಣಾಜನಕವಾದ ಮೇಳದ ಸಂಗೀತವು ಕ್ರಮೇಣ ಗೆಲುವಿನ ರಾಗಕ್ಕೆ ತಿರುಗುವುದು.)
ರಂಭೆ
ನೋಡಿ ಸಖಿಯರೆ ನೋಡಿರೇ ಅಹ ಕೂಡುತಿರುವಚ್ಚರಿಯನು-ಅಹ ಮೂಡಿಬರುವಚ್ಚರಿಯನು-
ದನಿಯನಾಲಿಸಿ ನಿಲ್ವನೊಮ್ಮೆಗೆ
ಧೀರ ಮುಂದಕೆ ನಡೆವನು-ನೆನೆ-
ದಿಷ್ಟದೈವವನೆರೆವನು
ಕಾಳಮೇಘವ ಹೊಗುವ ರವಿಯೊಲು ಪಾಳುಗುಡಿಸಲ ಹೊಗುವನು
ಮೇ-ಣೆಮ್ಮ ದೃಷ್ಟಿಯ ಮಿಗುವನು.
ಮತ್ತೊಬ್ಬಳು
ಮುಗಿಲಿನೊಳತೆರೆ ತೆರೆದ ರೀತಿಗೆ ಗುಡಿಸಲೊಳಗೆಂತಾಯಿತೇ-ಆ ಕಾಳವೆಂತಹ ಮಾಗಿತೇ
ಇರುಳ ಹಳುವೊಳು ನಸುಕು ಸಮವಾ ಹಗಲ ಹಾದಿಯೋಲಾಯಿತೇ-ಅಗೊ ಬಲಿವ ಬೆಳಕದು ತೋರಿತೇ !
ಮತ್ತೊಬ್ಬಳು
ಏನು ಸೋಜಿಗ ಮೂಡಿ ಬರುವೀ ರೂಪುವೊಂದನು ನೋಡಿರೇ-ಎಂ
ದಿಲ್ಲದದ್ಭುತ ಕಾಣಿರೇ
ಹೊಗೆಯ ಮುಸುಕಿಂದೊಗೆವ ಅಗ್ನಿಯ ಶಿಖೆಯ ತೆರದೊಳು ಜ್ವಲಿಸುವೀ -ನನ ನೇತ್ರಜಾಡ್ಯವ ಹರಿಸುವೀ.
ಇನ್ನೊಬ್ಬಳು
ಹರಿವ ಹೊನಲೊಳು ಕಣ್ಣುಕುಕ್ಕುವ ರವಿಯ ನೀಟದ ಬಿಂಬದೊಲ್-ಬರಿ ಬೆಳಕೆ ಮೈಯನು ತುಂಬಿದೊಲ್ ದೇವದೇವರೆ ನೋಡೆ ಹಿಂಜರಿ-
ವಂಥ ಚೆಲುವಿನ ಓಜದೊಳ್-ಬಲ್ ತಪದ ದುರ್ಭರ ತೇಜದೊಳ್.
ರಂಭೆ
ದಿವ್ಯ ದರ್ಶನ ದಿವ್ಯದರ್ಶನ
ಬನ್ನಿರೇ ಸಖಿ ಬನ್ನಿರೇ_ ಸೋ_
ಬಾನೆ ಎನ್ನಲು ಬನ್ನಿರೇ
ಬನ್ನಿ ಹೂಮಳೆಗರೆದು ಮರಳುವ
ದಿವಕೆ ಸುದ್ದಿಯ ತಿಳಿಸುವ...ನ
ಮ್ಮರಸರುಬ್ಬೆಗ ಕಳೆಯುವ
( ಹೊರಡುವರು )
೦೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಅಹಲ್ಯೆ ತನ್ನ ಬಾಳಿನ ದುಸ್ಥಿತಿಯನ್ನು ಹಳಿಯುತ್ತ ಬರುವಳು. ಇಂಧನ ಮುಗಿದ ಮೇಲೆ ಬರೀ ಹೊಗೆ ತುಂಬಿರುವಂತೆ ಆಗಿದೆ ನನ್ನ ಬಾಳು. ಹೂವು ಎಂದುಕೊಂಡಿದ್ದು ಹಾವಾಯಿತು. ಕಾಮುಕ ದೇವನ ಮೋಹಕ್ಕೆ ಸಿಕ್ಕು ಹಾಳಾದೆ ಎಂದು ಕೊರಗುವಳು.
ಬಿದಿರಮೆಳೆಯ ಶಬ್ದವೂ ಮನುಜರ ಅಳುವಿನಂತೆ ಲಕ್ಷ್ಮಣ ನಿಗೆ ಭಾಸವಾಗುತ್ತಿದೆ. ಮತ್ತೆ ಅಹಲ್ಯೆಯ ಕೊರಲಿನ ದನಿ. ಮುನಿಸತಿಯಾಗಿದ್ದ ನನಗೆ ಎಂತಹ ಪಾಡು...ಹುಲುಬಯಕೆಗೆ ಬಲಿಯಾದೆನಲ್ಲಾ ಎಂದು ಕೊರಗುವಳು.
ಲಕ್ಷ್ಮಣ ಬೆರಗಾಗುವನು. ಇದು ರಕ್ಕಸರ ಮಾಯೆಯಿರಬಹುದೇ ಎಂದು ಯೋಚಿಸುವನು. ಹೃದಯವು ಕಲಕುತ್ತಲಿದೆ. ಆಗ ಸದ್ದು ಬರುತ್ತಿದ್ದೆಡೆಗೆ ರಾಮನು ತೆರಳುವನು. ವಿಶ್ವಾಮಿತ್ರ ಮುನಿ ಬರುವ ತನಕ ತಾಳು ಎಂದರೂ ಕೇಳದೆ ರಾಮತೆರಳುವನು.
ವಿಶ್ವಾಮಿತ್ರ ಬಂದು ಏನಾಯಿತೆಂದು ಕೇಳುವನು. ಗಾಳಿಯೇ ಗೋಳಿಡುತ್ತಿರುವಂತೆ ಭಾಸವಾಗುತ್ತಿದೆಯೆನ್ನಲು ಮತ್ತೆ ಅಹಲ್ಯೆಯ ಧ್ವನಿ ಕೇಳುವುದು. ಎಂದಿಗೆ ತನ್ನ ಈ ಸ್ಥಿತಿ ಕೊನೆಯಾಗುವುದೋ, ಈ ತಾಪಕ್ಕೆ ಕೊನೆ ಎಂದಿಗೋ, ಗೌತಮನ ಈ ಕಾಂತೆಯ ತಾಪ ನೀಗಿ ತಂಪು ಮೂಡುವುದು ಎಂದಿಗೋ... ಎಂದು ಗೋಳಿಡುತ್ತಿರುವಳು.
ವಿಶ್ವಾಮಿತ್ರರಿಗೆ ಈ ಧ್ವನಿ ತಿಳಿಯಿತು. ನನ್ನ ಮಿತ್ರ ಗೌತಮನ ಸತಿಯಿವಳು ಎನ್ನುವರು. ವಿಧಿಯ ಆಟಕ್ಕೆ ಸಿಕ್ಕು ಪರಿತಪಿಸುತ್ತಿರುವಳು. ಇವಳ ಗೋಳಿಗೆ ನನ್ನೆದೆ ಕರಗುತ್ತಿದೆ. ಕಳವಳಪಡದಿರು ಸೌಮಿತ್ರಿ, ಮುಂದೆ ಎಲ್ಲ ಒಳ್ಳೆಯದಾಗುವುದು ಎಂದು ಹೇಳಿ ರಾಮ ಹೋದಕಡೆಗೆ ನೋಡುವರು.
ಯಾವುದೋ ಮಂತ್ರವನ್ನು ಜಪಿಸುವರು. ನಡೆ, ರಾಮ ಸಮಯ ಬಂದಿದೆ. ದೋಷ ನಿವಾರಣೆಗೆ. ಸತಿ ತನ್ನ ಬಾಳನ್ನು ಮರಳಿ ಪಡೆಯುವ ವೇಳೆ ಬಂದಿದೆ ಎನ್ನುತ್ತ ಲಕ್ಷ್ಮಣನೊಂದಿಗೆ ತೆರಳುವರು. ಇತ್ತ ರಂಭೆ ಮೊದಲಾದವರು ಕರುಣಾಜನಕವಾದ ರಾಗದಲ್ಲಿ ಹಾಡುತ್ತ ಬರುವರು. ಅದು ಕ್ರಮೇಣ ಗೆಲುವಿನ ರಾಗಕ್ಕೆ ತಿರುಗುವುದು.
ರಂಭೆಯು ಹೇಳುವಳು. ನೋಡಿ ಸಖಿಯರೆ, ಅಚ್ಚರಿಯನ್ನು ನೋಡಿರಿ. ಧ್ವನಿಯನ್ನು ಆಲಿಸಿ ನಿಲ್ಲದೆ ಆ ಪಾಳು ಗುಡಿಸಲ ಕಡೆಗೆ ನಡೆದನು ಆ ರಾಮನು. ಕಪ್ಪು ಮೋಡವನ್ನು ಛೇದಿಸುವ ಸೂರ್ಯನಂತೆ ತೋರುತ್ತಿರುವನು.
ಇನ್ನೊಬ್ಬಳು ಅದನ್ನು ಅನುಮೋದಿಸುವಳು. ಕತ್ತಲೆ ಕಳೆದು ಬೆಳಕು ಮೂಡಿದೆ. ಇರುಳು ಕಳೆದು ಬೆಳಗಾಗಿದೆ. ಗುಡಿಸಲೊಳಗೆ ಕಾಂತಿ ತುಂಬಿದೆ.
ಮತ್ತೊಬ್ಬಳು ಮುಂದುವರಿಸುವಳು. ಹೊಗೆಯ ನಡುವಿನಿಂದ ಬೆಳಗುವ ಅಗ್ನಿಯಂತೆ ಜ್ವಲಿಸುತ್ತಿರುವ ಆ ಧೀರ ಗಂಭೀರ ಮಂಗಳ ರೂಪನ್ನು ಕಾಣಿರಿ ಎನ್ನುವಳು.
ಆ ತೇಜಸ್ಸು ಕಣ್ಣುಗಳನ್ನು ಕುಕ್ಕುತ್ತಿದೆ. ಏನೂ ತೋರದಂತಾಗಿದೆ. ಆ ರೂಪು, ಆ ಚೆಲುವು ದೇವರ ದೇವರಿರಬಹುದು ಎನ್ನುವಳು. ಮತ್ತೆ ರಂಭೆಯು ದಿವ್ಯದರ್ಶನ, ದಿವ್ಯದರ್ಶನ ಎಂದು ಎಲ್ಲರನ್ನೂ ನೋಡಬನ್ನಿ ಎಂದು ಕರೆಯುವಳು. ಬನ್ನಿ ಹೂಮಳೆಗರೆಯುವಾ, ನಮ್ಮ ಮನದ ಉಬ್ಬೆಗ ಕಳೆಯುವಾ. ಸ್ವರ್ಗಕ್ಕೆ ಸುದ್ದಿ ಮುಟ್ಟಿಸುವಾ. ಸತಿಯ ತಾಪ ತಪ್ಪಿಸಿದ ಈ ದಿವ್ಯ ಚೇತನಕ್ಕೆ ನಮಿಸುವಾ...
ಎಲ್ಲರೂ ಹೊರಡುವರು.
ಅಹಲ್ಯೆ 24
ದೃಶ್ಯ ೪
(ಜೀರ್ಣಪರ್ಣಶಾಲೆಯ ಹೊರಗೆ ತಪಸ್ಸಿನಿಂದ ತೇಜಸ್ವಿನಿಯೂ ದಗ್ಧ ಕಾಮೆಯೂ ಶುದ್ಧೆಯೂ ಆದ ಅಹಲೈ ಹೊರಟುಬರುತ್ತಾಳೆ. ರಾಮನು ದೂರದಲ್ಲಿ ಬೆರಗುಗೊಂಡವನಂತೆ ಸ್ತಬ್ಧನಾಗಿ ನಿಂತಿದ್ದಾನೆ )
ಅಹಲೈ
ಇದೆ ಕನಸೋ ಅದೆ ಕನಸೋ
ನಾನರಿಯೆ ಅಚ್ಚರಿಯೆ ||ಪ ||
ತಮವಿಡಿದಾ ಯಾಮಿನಿಯೊಳ್
ಬಾನಲೆವಾ ಗಾಳಿಯವೊಲ್ ನನ್ನುಳಿದಿನ್ನೊಂದಿರದ
ಬಾಳ್ಮುಗಿಯಿತೆ ಗೋಳ್ತನದ ॥ ಇದೆ ಕನಸೋ...
ಬತ್ತಲ ಬಾನಿನ ಬಿಲವಂ
ತುಳುಕಿರುವೀ ಬೆಳಕಂತೆ
ಥಟ್ಟನೆ ಬಾಳುಕ್ಕಿ ಬರೆ
ಕನಸೆನ್ನದೆ ನಂಬುವರೆ || ಇದೆ ಕನಸೋ...
ಇನಿದನಿಗಳ ಕಿವಿ ಕೊಂಡಿದೆ
ಬಾನ್‌ವರೆಗೂ ಕಣ್ ಹರಡಿದೆ
ಬನದಲರಿನ ನರುಗಂಪಂ
ನಾಸಿಕವರಿತಿದೆ ಸೊಂಪಂ ॥ ಇದೆ ಕನಸೋ.
ಕರ್ಣಿಕೆ ನಾ ಜಗವರಳು
ಅರಳಿದೆನೋ ಇಂತೆನಲು
ಹೊರವಾಯಿತು ನನ್ನಿರವು
ಕೊರಗಳಿಯಿತು ನನ್ನರಿವು ॥ ಇದೆ ಕನಸೋ...
ಅಹ ಅಚ್ಚರಿ ಪರಿತಾಪಂ
ಶಾಪದ ದಳ್ಳುರಿ ತಾಪಂ
ಜನ್ಮಾಂತರ ವಾರ್ತೆ ಇದು
ಎನಿಸುವ ನವಜನ್ಮವಿದು || ಇದೆ ಕನಸೋ....
ಮಾಂತ್ರಿಕನೊಂದಾದಟದದೊಳ್
ಕ್ರಾಂತಿಯಾಯಿತೆನ್ನಿರವೊಳ್
ತಣಿದಿಂದ್ರಿಯ ತಣಿದೊಳಗು
ಬೆಳಬೆಳಕೇ ಒಳಹೊರಗು || ಇದೆ ಕನಸೋ...
( ರಾಮನನ್ನು ನೋಡಿ ಮುಂದುವರಿದು )
ನನ್ನಿದಿರೊಳು ನಿಂತಿಹ ಹೇ
ಮಂಗಳಸುಂದರ ರೂಹೇ
ನನ್ನೆದೆಯೇ ಈ ಮಾಟಂ
ಮರಳಿಯುನಾನಿರುವಾಟಂ || ಇದೆ ಕನಸೋ...
ರಾಮ
ಈ ತಿರೆಯೇ ಗೋಳಿಡುವೊಲ್
ದನಿ ಮೊಳಗಿತು ಈ ಬನದೊಳ್
ನಾಬಂದೆಂ ಇದನರಿಯೆ
ಕಾಂಬೆನದೇನಚ್ಚರಿಯೇ || ಇದೆ ಕನಸೋ...
ಪಂಚಭೂತವೊಗ್ಗೂಡಿ '
ಇದಿರೇ ಆಯ್ಕೆ ಮೋಡಿ ಎನೆ ಬಯಲಿಂ ಮೂಡಿ ಬಹೆ ಮನಕೆ ಬೆರಗ ತರುತಲಿಹೆ || ಇದೆ ಕನಸೋ...
ಇದೆ ಕನಸೋ...
(ರಾಮನನ್ನು ನೋಡಿ ಮುಂದುವರಿದು)
ನನ್ನಿದಿಯೊಳು ನಿಂತಿಹ ಹೇ ಮಂಗಳಸುಂದರ ರೂಪೇ ನನ್ನದೆಯೇ ಈ ಮಾಟಂ ಮರಳಿಯು ನಾನಿರುವಾಟಂ ॥ ಇದೆ ಕನಸೋ...
ರಾಮ
ಈ ತಿರೆಯೇ ಗೋಳಿಡುವೊಲ್ ದನಿ ಮೊಳಗಿತು ಈ ಬನದೊಳ್ ನಾಬಂದಂ ಹದನರಿಯೆ ಕಾಂಬೆನದೇನಚ್ಚರಿಯೇ || ಇದೆ ಕನಸೋ...
ಪಂಚಭೂತವೊಗ್ಗೂಡಿ ಇದಿರೇ ಆಯ್ಕೆ ಮೋಡಿ ಎನೆ ಬಯಲಿಂ ಮೂಡಿ ಬಹೆ ಮನಕೆ ಬೆರಗ ತರುತಲಿಹೆ || ಇದೆ ಕನಸೋ...
ದೇವತೆಯೊಲು ಕಂಗೊಳುವೆ ಮಾತೆಯವೊಲು ಬಗೆಗೊಳುವೆ.
ಹೇ ಮಂಗಳೆ ಶರಣಾದೆ ಹರಸವ್ವಾ ಮಗನಾದಂ || ಇದೆ ಕನಸೋ...
ಅಹಲೈ
ಸುಂದರ ಶುಭಕರ ಮೃತಸಂಜೀವಕ ಪತಿತೋದ್ಧಾರಕ ಚೇತನಮೇ ಏಳೇಳ್ಳೆ ಮಹಿಮಾನ್ವಿತ ಬಾಲಕ ನಮೋ ನಮೋ ನಿನಗೋ ಶಿವಮೇ
ಇರುಳಿನ ಕುರುಡನು ಕಳೆವ ಸುಧಾಕರ-ಸಮ ಮುಖಮಂಡಲ ಚೆನ್ನಿಗನೇ ತಿರೆಮುಗುಳರಳಿಸಿ ಆಗಸದರಕೆಯ ತುಂಬುವ ದಿನಕರದರ್ಶನನೇ !
ಕಾಮಹತಳು ನಾನಕಾಮೆಯಾದೆನು, ಬಿದ್ದವಳೆದ್ದೆನು ಹಗುರಾಗಿ ಆಸೆಯ ಋಣ ತೀರಿತು ಹೊರೆ ಇಳಿಯಿತು, ನಿನಗೊಪ್ಪಿಪೆನಿದ ತಲೆಬಾಗಿ.
(ರಾಮನಿಗೆ ನಮಿಸುವಾಗ ವಿಶ್ವಾಮಿತ್ರ-ಲಕ್ಷ್ಮರು ಪ್ರವೇಶಿಸುವರು)
ವಿಶ್ವಾಮಿತ್ರ
ಒಳ್ಳೆತು ವತ್ಸ-ಒಳ್ಳೆತಾಯಿತೈ, ಒಳ್ಳೆತಾಯಿತೌ ಕಲ್ಯಾಣಿ ಎಲರನುಕೂಲಿಸೆ ಇದ್ಮಗತಾಜ್ಯವು ಜ್ವಲಿಸುವ ತೆರನಿರವಾಂತೆಯೆ ನೀ.
ದಗ್ಧ ಕಾಮೆ ಓ ದುಗ್ಧತಪಃಫಲೆ
ಶುದ್ದೆ ನಿರ್ಮುಕ್ತ ಓ ತಾಯೆ
ತ್ರಿಜಗದ್ವಂದಿತೆ ನಾಮಪಾವನೆ
ಇಂದಹಲ್ಯೆ, ಗೌತಮಜಾಯೆ
(ಹೂಮಳೆಗೆರೆಯುವುದು ಅಹಲೈ ಹರಕೆಯನ್ನು ಸೂಡಿ ತನಗೆರಗಿದ ಲಕ್ಷ್ಮಣನನ್ನು ಎತ್ತಿ ಸಂತೈಸಿ_)
ಅಹಲೈ
ಧನ್ಯಳಾದೆನೈ ಮೌನಿವರೇಣ್ಯಾ
ಧನ್ಯಳಾದೆ ನಾ ಬಾಲಕರೆ
(ತನಗೆ ತಾನು ಹೇಳಿಕೊಳ್ಳುವಂತೆ)
ದಿಟ ನಾ ಶುದ್ಧಳು; - ಆರೊಪ್ಪಿಗೆಯಿಂ ? ಅಳಿಸುವರಾರೀ ಬಾಲ ಕರೆ !
ತನುವೆನಗೊಪ್ಪಿಸಿ ಮನವೆನಗೊಪ್ಪಿಸಿ
ತಪವಂ ಗಳಿಸೆನ್ನೊಪ್ಪಿತಕೆ
ಒಲಿದ ಮಹಾತ್ಮನ ಸತ್ವಷ್ಟವನೂ
ವಿಕ್ರಯಿಸಿದೆ ಹಾ ವಿಭ್ರಮಕೆ |
ಯಾಚಿಪೆ ಕ್ಷಮೆಯಂ ಸತ್ವ ಭೂತಗಳೆ
ಓ ವನದೇವತೆ ಓ ಎಲರೇ
ತಿರೆಯಧಿದೇವತೆ ಜಲದಧಿದೇವತೆ
ಓ ಮಜೀವನಕಾರಣರೆ :-
ಕರುಣೆಯ ಹೊನಲೇ ಒಮ್ಮೆಂದೆನ್ನಯ ಮೊರೆಯನು ಸಕಲರ ಹೃದಯಕ್ಕೆ ಮಜ್ಜೀವೇಶನ ನಿಗೂಢವಾಸಕೆ
ಈ ಬಾಳೆನಗೂ ಲೇಸಕ್ಕೆ !
ಗೌತಮ
(ಪ್ರವೇಶಿಸಿ)
ಕ್ಷಮಿಸುವರಾರ್, ಆರ್ ಕ್ಷಮೆಗೆ ?
ದುಗುಡವ ಬಿಡು ಕಾಂತೆ
ಭವಿತವ್ಯತೆಗೇಕೀ ವ್ಯಥೆ
ಓ ಪರಿತಾಪಶ್ರಾಂತೆ |
ತನ್ನರಿವನು ತಾ ಪಡೆಯುವ
ಚೇತನಕೀ ಕ್ರಾಂತಿ
ಸಾಜಮೆ ಸರಿ, ತತ್ಪಲವೀ
ವಿಪಾಕ ವಿಶ್ರಾಂತಿ.
ಭವಶುಕ್ತಿಯ ಮುಕ್ತಾಫಲ -
ವೆನೆ ನಳೆಗೊಂಡು
ಹೊರಬರೆ ನೀ ಕೊಳೆಯಳಿಯುತ ಮುದವಾಂತನು ಕಂಡು
ಇನ್ನಾಯಿತು ನಮಗೀ ಜಗ ತಾವರೆಯೆಲೆಯಂತೆ
ಋತವರಿಯುತ ನಿಸ್ಪೃಹತೆಯೊ -
ಇರಬಲ್ಲೆವು ಕಾಂತೆ.
ವಿಶ್ವಾಮಿತ್ರ
ಅಹ_ಗೌತಮನೇ ಬಂದನಿಗೋ
ಮಂಗಳಪೂರ್ಣತೆಗೆ
ನಲ್ವಾತಿನ ಸೊದೆಗರೆಯುತ
ನಮ್ಮೆಲ್ಲರ ಕಿವಿಗೆ !
( ವಿಶ್ವಾಮಿತ್ರ ಗೌತಮರು ಆಲಂಗಿಸುವರು. ರಾಮ ಲಕ್ಷ್ಮಣರು ಮಣಿವರು.)
೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ
ಅದುವರೆಗೂ ಗೋಳಾಡುತ್ತಿದ್ದ ಅಹಲ್ಯೆಗೆ ಯಾವುದೋ ಬೆಳಕಿನ ಭಾವ ಗೋಚರವಾಗಿದೆ. ಗಾಳಿಯಲ್ಲಿ ಕಂಪು ತುಂಬಿದೆ. ಸವಿ ನುಡಿಗಳು ಕೇಳಿಸಿವೆ. ತನ್ನ ಗೋಳಿನ ಜೀವನಕ್ಕೆ ಮುಕ್ತಾಯ ಬರುತ್ತಿದೆಯೆಂಬ ಭಾವವಿದೆ. ಇದು ಕನಸೋ, ನನಸೋ ಅರಿಯದ ಅಹಲ್ಯೆ ಭ್ರಮಿಸುತ್ತಿದ್ದಾಳೆ.
ಮನದಲ್ಲಿದ್ದ ಕೊರಗು ಅಳಿದು ನೆಮ್ಮದಿ ಮೂಡಿದೆ. ಇದುವರೆಗೂ ಪಟ್ಟ ಪರಿತಾಪ ಯಾವುದೋ ಜನ್ಮದಲ್ಲಿ ಅನುಭವಿಸಿದ್ದು ಎಂಬಂತಾಗಿದೆ. ಯಾರೋ ಮಂತ್ರ ಹಾಕಿದಂತೆ, ತನ್ನ ಮನದ ಅಳಲು ಮುಗಿದಂತೆ ತೋರಿದೆ. ತನು ಮನಗಳು ಹಗುರಾಗಿವೆ. ಅಷ್ಟರಲ್ಲಿ ರಾಮನನ್ನು ನೋಡುತ್ತಾಳೆ.
ರಾಮನಿಗೂ ಇದು ಕನಸೋ ಎಂಬ ಭ್ರಮೆ.
ಇದುವರೆಗೂ ಭೂಮಿಯೇ ಗೋಳಿಡುತ್ತಿರುವಂತೆ ತೋರುತ್ತಿದ್ದದ್ದು ಈಗ ನಿಂತಿದೆ. ಪಂಚಭೂತಗಳೊಂದಾಗಿ ಸೇರಿ ರೂಪುಗೊಂಡ ಆಕೃತಿ ಬಯಲಿನಿಂದ ಮೂಡಿ ಬಂದಂತೆ ತೋರಿ ಮನದಲ್ಲಿ ಬೆರಗು ತಂದಿದೆ. ಇದೆಲ್ಲ ಕನಸಿರಬಹುದೆ?
ದೇವತೆಯಂತೆ ಕಂಗೊಳಿಸುತ್ತಿರುವ ಮಾತೆಯೇ ನಾನು ನಿನ್ನ ಮಗನಂತೆ. ನನ್ನನ್ನು ಹರಸು ಎಂದು ನಮಸ್ಕರಿಸುತ್ತಾನೆ.
ಸುಂದರ ಬಾಲಕನೇ, ಪತಿತೋದ್ಧಾರಕನೇ, ಸತ್ತವರನ್ನು ಮತ್ತೆ ಬದುಕಿಸುವ ಸಂಜೀವಿನಿ ನೀನು. ಬಾಲಕನೇ, ನಿನಗೆ ಶುಭವಾಗಲಿ. ಮಂಗಳವಾಗಲಿ. ನಿನ್ನನ್ಬು ತೋರಿಸಿದ ಶಿವನಿಗೆ ನಮಸ್ಕಾರಗಳೆನ್ನುವೆ. ಹೀಗೆ ರಾಮನ ದರ್ಶನ ಮಾತ್ರದಿಂದ ಅವಳು ಶಾಪವಿಮುಕ್ತಳಾದಳು.
ರಾತ್ರಿಯ ಕತ್ತಲನ್ನು ಕಳೆಯುವ ಚಂದ್ರನಂತೆ, ಹಗಲಿನ ಬೆಳಕನ್ನು ಬೀರಿ ಭೂಮಿಯನ್ನು ಅರಳಿಸುವ ಸೂರ್ಯನಂತೆ ತೋರಿದ್ದಾನೆ ರಾಮ ಅಹಲ್ಯೆಗೆ. ಕಾಮಕ್ಕೆ ಒಳಗಾಗಿದ್ದ ತಾನು ಇಂದು ಕಾಮರಹಿತಳಾದೆ. ಬಿದ್ದವಳು ಎದ್ದೆ. ನಿನಗೆ ತಲೆಬಾಗಿ ನಮಿಸುವೆ ಎನ್ನುವಳು. ಆ ವೇಳೆಗೆ ಅಲ್ಲಿಗೆ ವಿಶ್ವಾಮಿತ್ರ ಮತ್ತು ಲಕ್ಷ್ಮಣ ಬರುವರು.
ಎಲ್ಲವೂ ಒಳ್ಳೆಯದಾಯಿತು ಎನ್ನುವರು. ಗಾಳಿಯು ಬೀಸಿದಾಗ ಕಿಡಿಯು ಜ್ವಲಿಸಿ ಉರಿಯುವಂತೆ ನಿನಗೆ ಮುಸುಕಿದ್ದ ಶಾಪವು ದೂರವಾಗಿ ರಾಮನ ದರ್ಶನದಿಂದ ಮತ್ತೆ ಪ್ರಜ್ವಲಿಸಿದೆಯೆನ್ನುವರು. ಇಂದು ಅಹಲ್ಯರ ಮತ್ತೆ ಗೌತಮನ ಸತಿಯಾಗಿ ಮರುಹುಟ್ಟು ಪಡೆದಂತಾಗಿದೆ. ಅವಳ ಕಲ್ಮಶ ದೂರವಾಗಿದೆ. ಪವಿತ್ರಳಾಗಿದ್ದಾಳೆ. ಆಗ ಆಕಾಶದಿಂದ ಹೂಮಳೆ ಸುರಿಯುವುದು. ಲಕ್ಷ್ಮಣನು ಅಹಲ್ಯೆಗೆ ನಮಸ್ಕರಿಸುವನು. ಅವಳು ಅವನನ್ನು ಹರಸುವಳು.
ತಾನು ಧನ್ಯಳಾದೆ, ಶುದ್ಧಳಾದೆ. ಆದರೆ ಇದನ್ನು ಒಪ್ಪುವವರಾರು? ಈ ಬಾಲ ಕರೆಯನ್ನು ಅಳಿಸುವವರಾರು? ತನು, ಮನಗಳನ್ನು ಒಪ್ಪಸಿದ್ದ ಆ ಮಹಾತ್ಮನನ್ನು ಕ್ಷಮಿಸೆಂದು ಕೇಳಲೂ ಸಹಿತ ನಾನು ಶಕ್ತಳಲ್ಲ.ಆದರೂ ಯಾಚಿಸುವೆ. ವನದೇವತೆಗಳೇ, ಗಾಳಿಯೇ, ತರುಲತೆಗಳೇ, ಸರ್ವಭೂತಗಳೇ, ನನ್ನ ಮೊರೆಯನ್ನು ನನ್ನ ಜೀವೇಶನೆಡೆಗೆ ಎಂದು ಗೋಳಿಡುವಳು. ಆ ವೇಳೆಗೆ ಗೌತಮರು ಅಲ್ಲಿಗೆ ಬರುವರು.
ಅಹಲ್ಯೆಗೆ ಸಮಾಧಾನ ಹೇಳುವರು. ಕ್ಷಮಿಸಲು ನಾನು ಯಾರು, ಎಲ್ಲವೂ ವಿಧಿಲಿಖಿತ. ಈ ದುಗುಡವನ್ನು ಬಿಡು.ಭವಿತವ್ಯಕ್ಕೆ ಈ ವ್ಯಥೆ ಉಳಿಯದಿರಲಿ. ತನ್ನನ್ನು ತಾನು ಅರಿಯುವುದೇ ಕ್ರಾಂತಿ. ಪಶ್ಚಾತ್ತಾಪದಲ್ಲಿ ಮಿಂದು ಪರಿಶುದ್ಧಳಾಗಿ ಹೊಳೆದ ನಿನ್ನನ್ನು ಕಂಡು ಮುದವಾಗಿದೆ ಎನ್ನುವನು. ಇನ್ನು ನಮಗೆ ಈ ಜೀವನ ತಾವರೆಯೆಲೆಯಂತೆ. ಯಾವುದಕ್ಕೂ ಅಂಟದೆ ಪರಿಶುದ್ಧತೆಯಿಂದ ಬಾಳೋಣ. ಸತ್ಯವನ್ನು ಅರಿಯುತ್ತ ನಿ:ಸ್ಪೃಹತೆಯಿಂದ ನಡೆಯೋಣ ಎಂದು ಸತಿಯನ್ನು ಸಮಾಧಾನಿಸುವನು.
ವಿಶ್ವಾಮಿತ್ರರು ಗೌತಮರನ್ನು ಆಲಂಗಿಸಿ ಈ ಮಂಗಳದ ಸಮಯಕ್ಕೆ ನಲ್ಮಾತಿನ ಸೂರೆಗೈಯುತ್ತ ಬಂದ ಈ ಬಾಲಕರು ಕಾರಣ ಎಂದು ಹೇಳುವರು. ರಾಮ ಲಕ್ಷ್ಮಣರು ನಮಿಸುವರು.
ಅಹಲೈ 25
ಅಹಲ್ಯೆ
(ಪತಿಯ ಆಗಮನದಿಂದ ಬೆರಗುಗೊಂಡು, ತನಗೆ ತಾನೆ)
ಇದೆ ಕನಸೋ ಅದೆ ಕನಸೋ ನಾನರಿಯೆ-ಅಚ್ಚರಿಯೇ !
ರುದ್ರನ ಕಂಡಾ ಅಳಿವು
ಭದ್ರನ ಕಾಂಬೀ ಉಳಿವು !
ಅಂದು ಬಯಕೆ ಸಂದಾ ತೆರ !
ಇಂದು ಬಯಕೆ ಸಲುವೀ ತೆರ !
ಅಂದಿನ ಅಳಲೇ ದಿಟವೋ !
ಇಂದಿನ ನಲವೇ ದಿಟವೋ !
(ಹತ್ತಿರ ಬಂದ ಗೌತಮನ ಪದತಲಕ್ಕೆ ಕುಸಿಯುತ್ತಾ)
ಕುಸಿಯಿತಂದು ಪೊಲ್ಲಮೆ ಹೊರೆ ಕುಸಿವುದಿಂದು ನಿಯ ಹೊರೆ.
ಗೌತಮ
(ಆಕೆಯನ್ನು ಸಂತೈಸಿ)
ಏಳೆ ಸಖಿ-ದುಸ್ವಪ್ನಕೆ
ಬೆಚ್ಚು ತಲೆಚ್ಚತ್ತಂತೆ
ನಾವೆದ್ದೆವು ನಲ್ಲಿಳಿವಿಗೆ.
ಏಳಾ, ಬಾ, ಬಿಡು ಚಿಂತೆ.
ನಮ್ಮಾಶ್ರಮವೈದಿರುವೀ
ಮಹಿಮರ ನಾವಾದರಿಸೆ
ಅರ್ಘಾದಿಗಳನಣಿಗೈಯಲು
ಸಹಚರಿ ಸಮಯವಿದ್ಯೆಸೆ.
ಅಹಲೈ
(ಮೆಲ್ಬನಿಯಲ್ಲಿ)
ಬಯಸುವೆ ನಾ ಗಂಗೆಯ ತೆರ
ಪದದಿ ಕರಗಿ ಹರಿಯ,
ಇಲ್ಲದಿರಲು ಹಗುರವಾಗಿ
ಕಂಪಿನಂತೆ ಸರಿಯೆ.
ಮೈಯೆ ಭಾರ ಮನವೆ ಭಾರ
ಬದುಕೆ ಭಾರವೆಂಬ
ಆಸರೆಯೇ ಬೇಡದಂಥ
ನಲವೆ ನನ್ನ ತುಂಬ.
ಗೌತಮ
ಧಮ್ಮರತಿಗು ಕರ್ಮಗತಿಗು
ಮಿಕ್ಕುಸ್ವಚ್ಛಂದ
ಇನ್ನು ಮುನ್ನು ನನ್ನ ನಿನ್ನ
ಆತ್ಮದಾನಂದ !
ವಿಶ್ವಾಮಿತ್ರ
ಸತಿಯು ಪೂರ್ಣ ಪತಿಯು ಪೂರ್ಣ ಜೋಡಿಯೊಂದಿ ಪೂರ್ಣ,
ಆತ್ಮರತಿಗೆ ಆತ್ಮವಾಯ್ತು
ಕಾಮವಾಯ್ತು ತೀರ್ಣ
ಇದೆ ಮಂಗಳ ಇದೆ ಮಧುರ
ಈ ವಿಪಾಕ ಸುಂದರ;
ಅರಿವು ಇರವು ಸ್ವಸ್ಥವಿರುವ
ಆನಂದ ಮಂದಿರ !
ಆಹಲೈ
ಇರುಳದತ್ತ ಬೆಳಕಿದೆತ್ತ
ಸಾವುಜೀವವೆತ್ತ !
ಒಂದೆ ಬಾಳಿನಲ್ಲಿ ಇವನು
ಕೋದ ಮರ್ಮವೆತ್ತ !
ಗೌತಮ
ಹಡ್ಕೊಳು ಸಿಹಿ ಕಾಯೊಳು
ಕಹಿ ಮರದ ರಸವದೆಂತು ಅರೆಬಳವಿಯೊಳಾನಂದವೆ ನೋವೆನಿಸುವುದಿಂತು !
ಅಹಲೈ
ಅಂತೊ ಎಂತೊ !-ಅಂತು ಕಂಡೆ
ಭವಸಾಗರ ಪಾರವಂ;
(ಪತಿಯನ್ನು ನೋಡಿ ಮುಗುಳ್ಳಗೆಗೂಡಿ)
ನಮ್ಮ ನಮ್ಮ ಮಾತಿನಲ್ಲಿ ಮರೆತೆವತಿಥಿಕಾರ್ಯವಂ !
(ಎಂದು ತೆರೆಯ ಮರೆಗೆ ಹೋಗುವಳು)
(ದೂರದಲ್ಲಿ ಆಶ್ರಮವಾಸಿಗಳು ಸ್ವಾಗತ ಗೀತವನ್ನು ಹಾಡಿಕೊಂಡು ಬರುತ್ತಿರುವ ಗೀತದ ಪಲ್ಲವಿಯಾದ 'ಸ್ವಾಗತ ಮುನಿಗೆ-ವರವಿಶ್ವಾಮಿತ್ರನಿಗೆ' ಎಂಬ ಚರಣವು ಸ್ಪುಟವಾಗಿ ಕೇಳಿಬರುತ್ತದೆ. ಮಿಕ್ಕವು ಮಂಕಾಗಿ ಕೇಳಿಬರುತ್ತವೆ. )
ಗೌತಮ
ಮರೆತ ಕಾರವೆಚ್ಚರಿಸುತ
ಸ್ವಾಗತವನು ಮಾಡುತ
ನಮ್ಮ ಮಂದಿಯ್ಕೆತಂದರು
ಮುನಿನುತಿಯನೆ ಹಾಡುತ !
(ಒಂದು ಕಡೆಯಿಂದ ಕೌಶಿಕ-ಮೈತ್ರೇಯರೊಡಗೂಡಿ ಆಶ್ರಮವಾಸಿಗಳು ಪ್ರವೇಶಿಸುವರು )
ಸ್ವಾಗತ ಸ್ವಾಗತ ಮುನಿಗೆ
ವರವಿಶ್ವಾಮಿತ್ರನಿಗೆ || ಪ ||
ಮೈತ್ರೇಯ
ಶಾಂತ ಸುಗುಣ ಗಂಭೀರಗೆ
ಭವದ ಪಾರ ಕಂಡವನಿಗೆ
ಬಾಳ ಕಡಲ ಕಡೆದು ದಿವ್ಯ ಮೋದಾಮೃತವುಂಡವನಿಗೆ ...
ಸ್ವಾಗತ
ಕೌಶಿಕ
ಧರ್ಮದ ಗತಿ ಗಹನವೆಂದು
ಒಂದೇ ಹಾದಿಯೊಲ್ಲದವಗೆ
ಹಲವು ತೆರದಿ ಬಾಳ ತುಳಿದು
ಚಿತ್ರಚರಿತನಾದ ಋಷಿಗೆ ಸ್ವಾಗತ...
(ವಿಶ್ವಾಮಿತ್ರನು ರಾಮಲಕ್ಷ್ಮಣರೊಡನೆ ಮುಂದೆ ಬಂದು ಆಶ್ರಮವಾಸಿಗಳ ಪ್ರಣಾಮಗಳನ್ನು ಸ್ವೀಕರಿಸುವಾಗ, ಹಿಂದಿನಿಂದ)
೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತರೂಪ
ಅಹಲ್ಯೆಗೆ ಈಗಲೂ ಗೊಂದಲ. ಆ ಅಳಲು ಸತ್ಯವೋ ಈ ನಲವು ಸತ್ಯವೋ ಎಂದು. ಅವಳಿಗೆ ಮನದಲ್ಲಿ ಅಚ್ಚರಿ. ಹತ್ತಿರ ಬಂದ ಗೌತಮರ ಪಾದಲ್ಲೆ ನಮಿಸುವಳು. ಅಂದು ಪಾಪದಹೊರೆಯಿಂದ ಕುಸುದೆ. ಇಂದು ನಲ್ಮೆಯ ಹೊರೆಯಿಂದ ಕುಸಿದೆನೆನ್ನುವಳು.
ಗೌತಮರು ಅವಳನ್ನು ಸಂತೈಸುವರು. ನಮ್ಮ ಆಶ್ರಮಕ್ಕೆ ಬಂದಿರುವ ಮಹಿಮರನ್ನು ಅರ್ಘ್ಯ ಪಾದಗಯಾದಿಗಳಿಂದ ಸತ್ಕರಿಸಬೇಕಿದೆ ಎನ್ನುವರು. ಅಹಲ್ಯೆಯು ಮೈಮನಗಳು ಭಾರವಾಗಿವೆಯೆನ್ನುವಳು. ಗಂಗೆಯ ರೀತಿ ಕರಗಿ ಹರಿಯಬೇಕಾಗಿದೆ ಎನ್ನುವಳು. ಆಗಿದ್ದೆಲ್ಲ ಮರೆತುಬಿಡು. ಇನ್ನು ಮುಂದೆ ನನ್ನ ನಿನ್ನ ಆತ್ಮಗಳ ಆನಂದ ಒಂದೇ ಎಂದು ಗೌತಮರು ಸತಿಯನ್ನು ಸಂತೈಸುವರು.
ವಿಶ್ವಾಮಿತ್ರರು ಸತಿಯೂ ಪತಿಯೂ ಪೂರ್ಣರಾದರು. ಕಾಮನು ಅಳಿದು ಆತ್ಮರತಿ ಉಳಿಯಿತು. ಇದೇ ಮಂಗಳ. ಇದೇ ಮಧುರ. ಇದೇ ಸುಂದರ ಕ್ಷಣ. ಅರಿವು ಇರವನ್ನು ಸೃಷ್ಟಿಸಿರುವ ಅನಂದದ ಕ್ಷಣವಿದು ಎನ್ನುವರು.
ಅಹಲ್ಯೆಯು ಆ ಇರುಳಿನ ಕತ್ತಲೆಯೆಲ್ಲಿ, ಈ ಬೆಳಕಿನ ಹೊನಲೆಲ್ಲಿ..ಒಂದೇ ಬಾಳಿನಲ್ಲಿ ಎಲ್ಲವನ್ನೂ ಅನುಭವಿಸಿದೆನಲ್ಲ ಎಂದು ಯೋಚಿಸುವಳು.
ಗೌತಮರು ಅದಕ್ಕೆ ಒಂದೇ ಮರದ ಕಾಯಿಯಲ್ಲಿ ಕಹಿ, ಹಣ್ಣಿನಲ್ಲಿ ಸಿಹಿ ತುಂಬಿರುವುದಲ್ಲವೆ? ಹಾಗೆಯೆ ಈ ಜೀವನ ಅನಂದವೇ ನೋವಾಗಿ ನೋವುನಲಿವಾಗಿ ಬದಲಾಗುವುದು ಎನ್ನುವಾಗ ಅಹಲ್ಯೆಯು ಹೇಗೋ ಒಟ್ಟಿನಲ್ಲಿ ಭವಸಾಗರದ ಪಾರವನ್ನು ಕಂಡೆವು ಎನ್ನುತ್ತ ತಮ್ಮ ಮಾತಿನಲ್ಲಿ ಮುಳುಗಿ ಅತಿಥಿಸತ್ಕಾರ ಮರೆತೆವು ಎಂದು ಎಚ್ಚರಿಸಿ ಹೊರಡುವಳು.
ದುರದಲ್ಲಿ ಆಶ್ರಮವಾಸಿಗಳು ಸ್ವಾಗತಗೀತೆಯನ್ನು ಹಾಡಿಕೊಂಡು ಬರುವರು. ವಿಶ್ವಾಮಿತ್ರನಿಗೆ ಸ್ವಾಗತ ಎಂಬುದು ಗಟ್ಟಿಯಾಗಿ ಕೇಳಿಸುತ್ತದೆ. ಗೌತಮರು ಎಚ್ಚರವಾಗುವರು. ಮೈತ್ರೇಯ ಕೌಶಿಕರು ಉಳಿದವರೊಡನೆ ಹಾಡುತ್ತ ಬರುವರು.
ಬಾಳಿನ ಕಡಲನ್ನು ಕಡೆದು ದಿವ್ಯವಾದ ಅಮೃತವನ್ನು ಉಂಡವನಿಗೆ ಸ್ವಾಗತ. ಶಾಂತ ಸುಗುಣ ಗಂಭೀರನಿಗೆ ಸ್ವಾಗತ.ಹಲವು ಹಾದಿ ತುಳಿದರೂ ಚಮಚಲನಾಗದೆ ಧರ್ಮದ ಹಾದಿಯೇಸ್ಥಿರವೆಂದು ನಡೆದ ಋಷಿಗೆ ಸ್ವಾಗತ ಎಂದು ಸ್ವಾಗತ ಗೀತೆಯನ್ನು ಮುಂದುವರಿಸುವರು.
( ಮುಂದುವರೆಯುತ್ತದೆ )


























ಕಾಮೆಂಟ್‌ಗಳು