ಎಸ್. ಮಾಲತಿ
ಎಸ್. ಮಾಲತಿ
ಎಸ್. ಮಾಲತಿ ಅವರು ರಂಗಕರ್ಮಿಯಾಗಿ ಮತ್ತು ಬರಹಗಾರ್ತಿಯಾಗಿ ಹೆಸರಾಗಿದ್ದರು.
ಮಾಲತಿ ಅವರು 1952ರ ಮೇ 1ರಂದು ಶಿವಮೊಗ್ಗದಲ್ಲಿ ಜನಿಸಿದರು. ತಾಯಿ ಉಮಾ ಶೇಷಗಿರಿ ಪೈ, ತಂದೆ ಶೇಷಗಿರಿ ಪೈ. ಸಾಗರದವರಾದ ಮಾಲತಿ ಅವರು ಮಂಗಳೂರಿನಲ್ಲಿ ವಾಣಿಜ್ಯದಲ್ಲಿ ಪದವಿ ಪಡೆದ ನಂತರ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ದೆಹಲಿಯ ರಾಷ್ಟ್ರೀಯ ನಾಟಕಶಾಲೆಯಲ್ಲಿ ಪದವಿ ಪಡೆದಿದ್ದ ಮಾಲತಿ ಅವರು ಮ್ಯಾಕ್ಸಿಮ್ ಗಾರ್ಕಿ ಅವರ 'ಮದರ್' ರೂಪಾಂತರವಾದ 'ತಾಯಿ' ಮೂಲಕ 'ಸಮುದಾಯ' ತಂಡದೊಂದಿಗೆ ನಾಟಕಕ್ಕೆ ಪಾದಾರ್ಪಣೆ ಮಾಡಿದರು. ನಾಟಕ ರಚನೆ, ಪುಸ್ತಕ ವಿಮರ್ಶೆ, ನಾಟಕ ನಿರ್ದೇಶನ ಹೀಗೆ ಅವರು ಸದಾ ಚಟುವಟಿಕೆಗಳಲ್ಲಿದ್ದರು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 'ಅಂತರಂಗ' ಅಂಕಣ ಮೂಡಿಸಿದ್ದರು.
ಮಾಲತಿ ಅವರು ಕೆರೆಗೆ ಹಾರ, ಸಿರಿ ಸಂಪಿಗೆ, ಯಯಾತಿ, ಹಯವದನ, ಹ್ಯಾಮ್ಲೆಟ್, ಸ್ವಪ್ನ ಸಾರಸ್ವತ ಮುಂತಾದ 40ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸುವುದರ ಜೊತೆಗೆ ಸ್ವತಃ ನಾಟಕ, ಸಾಕ್ಷ್ಯಚಿತ್ರ, ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು.
ಜೀವನವೆಂಬ ನಾಟಕ ರಂಗ, ದಲಿತ ಲೋಕ, ಭೀಮಕಥಾನಕ, ಸೀತಾಚರಿತೆ ಮುಂತಾದವು ಮಾಲತಿ ಅವರ ಸ್ವರಚಿತ ನಾಟಕಗಳು. ಇದಲ್ಲದೆ ರೋಶೋಮನ್, ಜನತೆಯ ಶತ್ರು, ಒಂದು ಪಯಣದ ಕಥೆ ಮುಂತಾದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.
ಮಾಲತಿ ಅವರು ಭಾವ ಕೋಶ, ಆನು ಒಲಿದಂತೆ ಹಾಡುವೆ, ಕ್ಷಣಿಕವಲ್ಲದ ಕ್ಷಣಗಳು, ಹೇಳಬೇಕೆನಿಸಿದ್ದು, ನನ್ನ ಪ್ರಿಯತಮನ ಬಾಳು ಮುಂತಾದ ಸಂಕಲನಗಳನ್ನು ಪ್ರಕಟಿಸಿದ್ದರು.
ಮಾಲತಿ ಅವರ ಕ್ಷಣಿಕವಲ್ಲದ ಕ್ಷಣಗಳು ಸಂಕಲನಕ್ಕೆ ಮುಂಬಯಿ ಕನ್ನಡ ಸಂಘದ ಪೇಜಾವರ ಸದಾಶಿವ ರಾವ್ ಪ್ರಶಸ್ತಿ ಸಂದಿತ್ತು. ಅವರು ಸಾಗರ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಗೌರವಾನ್ವಿತರಾಗಿದ್ದರು. ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ , ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಕ್ಕಳ ರಂಗಭೂಮಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಇಂದಿರಾ ವಾಣಿರಾವ್ ದತ್ತಿ ಬಹುಮಾನ, ರಾಜ್ಯದ ಚಂದನ ವಾಹಿನಿ ಜೀವಮಾನ ಸಾಧನೆಗೆ ನೀಡುವ 'ಚಂದನ' ಪ್ರಶಸ್ತಿಗಳೂ ಇವರಿಗೆ ಸಂದಿದ್ದವು.
ಮಾಲತಿ ಅವರು 2019ರ ಏಪ್ರಿಲ್ 1ರಂದು ನಿಧನರಾದರು.

ಕಾಮೆಂಟ್ಗಳು