ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಜಾನನ ಶರ್ಮ

ಗಜಾನನ ಶರ್ಮ


ಡಾ. ಗಜಾನನ ಶರ್ಮ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಪ್ರಮುಖ ಕಾದಂಬರಿಕಾರರು, ನಾಟಕಕಾರರು, ನಿರ್ದೇಶಕರು, ಚಿತ್ರಕಥೆ - ಸಂಭಾಷಣೆಕಾರರು, ಅನುವಾದಕರು ಹಾಗೂ ಸಂಶೋಧಕರು. ಅವರ ರಚನೆಯಾದ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಎಂಬ ಭಾವತುಂಬಿದ ಗೀತೆ ಇಂದಿನ ಯುಗದಲ್ಲಿನ ಕೋಟ್ಯಾಂತರ ಹೃದಯಗಳಲ್ಲಿ ಮೂಡಿಸಿರುವ ಸಂಚಲನ ಅಪರಿಮಿತವಾದದ್ದು.

ಗಜಾನನ ಶರ್ಮ ಅವರು ಸಾಗರ ತಾಲ್ಲೂಕಿನ ಹುಕ್ಕಲು ಗ್ರಾಮದಲ್ಲಿ 1954ರ ಫೆಬ್ರವರಿ 27ರಂದು
ಜನಿಸಿದರು.  ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದಿ, ಮೈಸೂರಿನ ಎನ್ಐಇ ಕಾಲೇಜಿನಿಂದ ಎಂ. ಟೆಕ್ ಪದವಿ ಪಡೆದರು. ಇದಲ್ಲದೆ ಮೈಸೂರಿನ ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ  ಎಂ.ಎ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದರು.

ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL)ದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಅವರು, ಸಾಹಿತ್ಯ ಮತ್ತು ರಂಗಭೂಮಿಯ ಮೇಲಿನ ಅಪಾರ ಆಸಕ್ತಿಯಿಂದ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಮಕ್ಕಳ ನಾಟಕಗಳು, ಸಾಮಾಜಿಕ ನಾಟಕಗಳು, ಐತಿಹಾಸಿಕ ಕಾದಂಬರಿಗಳು, ಜೀವನಚರಿತ್ರೆಗಳು,  ಅನುವಾದಗಳು, ಪ್ರವಾಸ ಕಥನಗಳ ಮೂಲಕ ಅವರ ಸಾಹಿತ್ಯ ಪ್ರಭೆ ಅನೇಕ ಕ್ಷೇತ್ರಗಳಲ್ಲಿ ಪ್ರಕಾಶಿಸಿದೆ. 

ಗಜಾನನ ಶರ್ಮ ಅವರ ‘ಪುನರ್ವಸು’ ಕಾದಂಬರಿ ಶರಾವತಿ ಮುಳುಗಡೆಯಿಂದ ಉಂಟಾದ  ಸಂತ್ರಸ್ತರ ಕಣ್ಣೀರು, ಮಲೆನಾಡಿಗಾದ ನಷ್ಟ, ಅಲ್ಲಿನ ಹಸಿರು, ಜನರ ಬದುಕು ಮತ್ತು ಮಾನವ ಸಂಬಂಧಗಳ ಮೇಲಿನ ಪರಿಣಾಮಗಳನ್ನು ಬಿಂಬಿಸುತ್ತದೆ. ಇವರ 'ಪ್ರಮೇಯ' ಕಾದಂಬರಿ ಬ್ರಿಟಿಷರ ಕಾಲದಲ್ಲಿ ಭಾರತದ ಭೂಮಿ ಹಾಗೂ ಭೌಗೋಳಿಕ ಅಳತೆ ಮಾಡಿದ (ಮಹಾಮಾಪನ) ರೋಚಕ ಇತಿಹಾಸವನ್ನು ಆಧರಿಸಿದೆ.   ಹೀಗೆ ಅದು ತನ್ನ ಕೃತಿಯ ಉಪಶೀರ್ಷಿಕೆಯಂತೆ "ಇದು ಆಳಿದ ರಾಜರ ಕಥೆಯಲ್ಲ, ಬದಲಿಗೆ ದೇಶವನ್ನು ಅಳೆದವರ ಕಥೆಯಾಗಿದೆ".  ಇವರ ಐತಿಹಾಸಿಕ ಕಾದಂಬರಿ "ಚೆನ್ನಭೈರಾದೇವಿ" ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ ರಾಣಿ ಚೆನ್ನಭೈರಾದೇವಿಯ ಅಕಳಂಕ ಚರಿತೆಯನ್ನು ಸಂಶೋಧನಾತ್ಮಕ ಆಳದಿಂದ ತೆರೆದಿಟ್ಟಿದೆ. 'ರಾಜಮಾತೆ ಕೆಂಪನಂಜಮ್ಮಣಿ ಮಾದರಿ ಮೈಸೂರಿನ ತಾಯಿಬೇರು' ಕೃತಿ ಮೈಸೂರು ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ಬದುಕು ಹಾಗೂ ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಅವರು ನೀಡಿದ ಮಹಾನ್ ಕೊಡುಗೆಗಳ ಆಳವನ್ನು ಬಿಂಬಿಸುವ ಐತಿಹಾಸಿಕ ಕಥನವಾಗಿದೆ. ಗಜಾನನ ಶರ್ಮರು ತಮ್ಮ ಕಾದಂಬರಿಗಳಿಗಾಗಿ ದಾಖಲೆಗಳ ಆಧಾರದ ಮೇಲೆ ನಡೆಸಿದ ಆಳವಾದ ಅಧ್ಯಯನ, ಪ್ರಾಮಾಣಿಕತೆ ಮತ್ತು ಕಲಾತ್ಮಕ ನಿರೂಪಣೆ ಅವರ ಬರವಣಿಗೆಯ ವೈಶಿಷ್ಟ್ಯವಾಗಿದೆ. ಚರಿತ್ರೆಯ ನೈಜತೆಯನ್ನು ಉಳಿಸಿಕೊಂಡೇ ರೋಚಕ ಕಥನವನ್ನು ಹೆಣೆಯುವ ಅಪರೂಪದ ಸಾಮರ್ಥ್ಯ ಅವರ ಕೃತಿಗಳಲ್ಲಿ ಎದ್ದುಕಾಣುತ್ತದೆ.

ಮಕ್ಕಳ ರಂಗಭೂಮಿಯ ಕ್ಷೇತ್ರದಲ್ಲಿಯೂ ಡಾ. ಗಜಾನನ ಶರ್ಮರ ಸೇವೆ ಗಮನಾರ್ಹವಾಗಿದೆ. ‘ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ’ ಎಂಬ ಮಹಾಪ್ರಬಂಧಕ್ಕಾಗಿ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇದು ಕನ್ನಡ ಮಕ್ಕಳ ರಂಗಭೂಮಿಯ ಬೆಳವಣಿಗೆಗೆ ಮಹತ್ವದ ಕೊಡುಗೆಯಾಗಿದೆ. 'ನಾಣಿ ಭಟ್ಟನ ಸ್ವರ್ಗದ ಕನಸು', 'ಗೊಂಬೆ ರಾವಣ', 'ಮೃಗ ಮತ್ತು ಸುಂದರಿ', 'ಹಂಚಿನಮನೆ ಪರಸಪ್ಪ', 'ಪುಸ್ತಕ ಪಾಂಡಿತ್ಯ' ಇವರ ಮಕ್ಕಳಿಗಾಗಿನ ನಾಟಕ ಕೃತಿಗಳಲ್ಲಿ ಸೇರಿವೆ. 'ಕನ್ನಂಬಾಡಿಯ ಕಟ್ಟದಿದ್ದರೆ', 'ದ್ವಂದ್ವ ದ್ವಾಪರ', 'ಬೆಳ್ಳಿ ಬೆಳಕಿನ ಹಿಂದೆ' ಮುಂತಾದವು ಇವರ ಇತರ ನಾಟಕ ಕೃತಿಗಳಾಗಿವೆ. 

ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಆತ್ಮಕಥೆಯನ್ನು ‘ನನ್ನ ವೃತ್ತಿ ಜೀವನದ ನೆನಪುಗಳು’ ಎಂಬ ಶೀರ್ಷಿಕೆಯಲ್ಲಿ ಹಾಗೂ ಮತ್ತೋರ್ವ ಮೈಸೂರಿನ ಹೆಸರಾಂತ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರ ವೃತ್ತಿ ಜೀವನದ ಕುರಿತಾಗಿ  'ನನ್ನ ಸಾರ್ವಜನಿಕ ಬದುಕು' ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿರುವುದು ಅವರ ಮತ್ತೊಂದು ಗಮನಾರ್ಹ ಸಾಧನೆ.

ಮೈಸೂರು ವಿಶ್ವವಿದ್ಯಾಲಯದ ರೂವಾರಿ ಸರ್ ಎಂ. ವಿಶ್ವೇಶ್ವರಯ್ಯ, ಬೆಳಕಾಯಿತು ಕರ್ನಾಟಕ, ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ, ಕರೆಂಟಿನ ಕಥೆ ಹಾಗೂ ಪ್ರವಾಸ ಕಥನಗಳಾದ ಕೈಲಾಸ ಮಾನಸ ದೇವಭೂಮಿಗೊಂದು ಪಯಣ, ಗೋಮುಖ ಕರಗಿ ಹೋಗುವ ಮುನ್ನ ಕಣ್ತುಂಬಿಕೊಳ್ಳೋಣ
ಮುಂತಾದವು ಗಜಾನನ ಶರ್ಮರ ಇತರ ಕೃತಿಗಳಲ್ಲಿ ಸೇರಿವೆ.

ಗಜಾನನ ಶರ್ಮ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ, ಗೌರವ, ವಿಮರ್ಶೆಗಳಿಂದ ಪ್ರಖ್ಯಾತವಾದ ಗಿರೀಶ್ ಕಾಸರವಳ್ಳಿ  ನಿರ್ದೇಶನದ  "ದ್ವೀಪ" ಮತ್ತು "ನಾಯಿ ನೆರಳು" ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ.

ಡಾ. ಗಜಾನನ ಶರ್ಮ ಅವರಿಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, 'ಚೆನ್ನಭೈರಾದೇವಿ' ಕೃತಿಗೆ ಮಾಸ್ತಿ ಕಾದಂಬರಿ ಪುರಸ್ಕಾರ, ಕನ್ನಡ ಸುಗಮ ಸಂಗೀತ ಪ್ರತಿಭೆ ಗರ್ತಿಕೆರೆ ರಾಘಣ್ಣ ಅವರ ಜೀವನದ ಕುರಿತಾದ "ಕಾಡು ಕಣಿವೆಯ ಹಾಡು ಹಕ್ಕಿ" ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಸೇರಿದಂತೆ ಹಲವು ಗೌರವಗಳು ಸಂದಿವೆ. 2012 ಮತ್ತು 2016 ರಲ್ಲಿ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Gajanana Sharma Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!