ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎ.ವಿ.ನರಸಿಂಹಮೂರ್ತಿ

ಮಂದಹಾಸದ ಮೇರು ಸಾಧಕ 
ಎ.ವಿ.ನರಸಿಂಹ ಮೂರ್ತಿ ಇನ್ನಿಲ್ಲ
ಲೇಖಕರು:Sreedhara Murthy 

ನಾನು ಬಹಳ ಇಷ್ಟಪಡುತ್ತಿದ್ದ ಹಿರಿಯರು, ನಾಡು ಕಂಡ ಅಪರೂಪದ ವಿದ್ವಾಂಸರೂ ಆಗಿದ್ದ ಡಾ.ಎ.ವಿ.ನರಸಿಂಹ ಮೂರ್ತಿಯವರು ಇನ್ನಿಲ್ಲ ಎನ್ನುವ ಧಾರಣ ಸುದ್ದಿ ಬಂದಿದೆ. 

ಅಲಂಬಡ ವೆಂಕಟಶಾಸ್ತ್ರಿ ನರಸಿಂಹ ಮೂರ್ತಿಯವರು ಜನಿಸಿದ್ದು 1935ರ ಮೇ 15ರಂದು. ಇತಿಹಾಸವನ್ನು ಹೇಗೆ ದಾಖಲಿಸ ಬೇಕು ಎನ್ನುವುದಕ್ಕೆ ಮಾದರಿ ಎನ್ನುವಂತಿದ್ದ ನರಸಿಂಹ ಮೂರ್ತಿಗಳು ಅಪರೂಪದ ನಾಣ್ಯಶಾಸ್ತ್ರದಲ್ಲಿ ಪರಿಣಿತರಾಗಿದ್ದರು. ದಕ್ಷಿಣ ಭಾರತ ಮತ್ತು ಭಾರತದ ನಾಣ್ಯಶಾಸ್ತ್ರ ಮಂಡಳಿ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು. ಚಲನಚಿತ್ರ ಇತಿಹಾಸ ದಾಖಲಾತಿಗೆ ನನ್ನನ್ನು ಪ್ರೇರೇಪಿಸಿದ್ದು ಮಾತ್ರವಲ್ಲ ಅದು ಹೇಗೆ ಇರಬೇಕು ಎನ್ನುವುದನ್ನು ಶಾಸ್ತ್ರಬದ್ದವಾಗಿ ಅವರು ಕಲಿಸಿದ್ದರು ಈ ಕಾರಣಕ್ಕಾಗಿ ಅವರಿಗೆ ನಾನು ಜೀವನಪೂರ್ತಿ ಕೃತಜ್ಞನಾಗಿರುತ್ತೇನೆ.

ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಪುಲ್‌ ಬ್ರೈಟ್‌ ಸ್ಕಾಲರ್‌ ಶಿಪ್‌ ಪಡೆದು ಸಂಶೋಧನೆ ನಡೆಸಿದ್ದರು ಕೊನೆಯವರೆಗೂ ಅವರಿಗೆ ಜಾಗತಿಕ ಇತಿಹಾಸಜ್ಞರ ನಿಕಟ ಪರಿಚಯ ಇತ್ತು. ಸಂಶೋಧನಾ ಸಹಯೋಗ ಕೂಡ ಇತ್ತು. ಆಂದ್ರ ವಿಶ್ವವಿದ್ಯಾಲಯದಿಂದ 1969ರಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದ ನರಸಿಂಹ ಮೂರ್ತಿ ವೃತ್ತಿಯನ್ನು ಆರಂಭಿಸಿದ್ದು ಪುರಾತತ್ವ ಇಲಾಖೆಯಲ್ಲಿ , ಆಂದ್ರ ಪ್ರದೇಶದ ವಾಲ್ಟರ್‌ನಲ್ಲಿ ಉಪನ್ಯಾಸಕರಾದ ನಂತರ 1965ರಿಂದ 1995ರವರೆಗೆ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಮುಂದೆ ಫೆಲೋ ಆಗಿ 1997ರವವರೆಗೂ ವಿಶ್ವವಿದ್ಯಾಲಯ ಅವರ ಸೇವೆಯನ್ನು ಮುಂದುವರೆಸಿತ್ತು.  ಅವರ ಸಂಶೋಧನೆ ಮತ್ತು ಮಾರ್ಗದರ್ಶನಗಳು ಹೊಸ ಪರಂಪರೆಯನ್ನೇ ಆರಂಭಿಸಿದ್ದವು. ಯು.ಜಿ.ಸಿ ಶ್ರೇಣಿಯ ಹಿರಿಯ ಎಮೆರೇಟ್ಸ್‌  ಫೆಲೋ ಆಗಿದ್ದ ಅವರ ಮಾರ್ಗದರ್ಶನದಲ್ಲಿ ದಾಖಲೆಯ  48 ವಿದ್ಯಾರ್ಥಿಗಳು ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ ಎನ್ನುವುದು ಅವರ ಹಿರಿತನ ಮತ್ತು ವಿಷಯತಜ್ಞತೆಗೆ ನಿದರ್ಶನವಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಪುರಸ್ಕಾರ, ಎ.ಎಸ್.ಅಲಸ್ಕರ್‌ ಚಿನ್ನಪದ ಪದಕ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ, ಕುಂದ ಕುಂದ ಪ್ರಶಸ್ತಿ, ಬೆಂಗಳೂರಿನಲ್ಲಿ  ನಡೆದ ಮೂರನೆಯ ರಾಜ್ಯ ನಾಣ್ಯ ಶಾಸ್ತ್ರ ಸಮ್ಮೇಳನದ ಅಧ್ಯಕ್ಷತೆ, ವಾರಣಾಸಿಯಲ್ಲಿ ನಡೆದ 70ನೆಯ ನಾಣ್ಯಶಾಸ್ತ್ರ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪುರಾತನವತಾರ ಪ್ರಶಸ್ತಿ ಹೀಗೆ ಅವರಿಗೆ ದೊರೆತ ಪುರಸ್ಕಾರಗಳ ಪಟ್ಟಿ ದೊಡ್ಡದು. ಭಾರತ ಸರ್ಕಾರ ಅವರನ್ನು ಭಾರತೀಯ ನಾಣ್ಯ ಮುದ್ರಣ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಬನವಾಸಿ, ಕೊಪ್ಪ, ಹೆಗ್ಗಡೆಹಳ್ಳಿ, ತಲಕಾಡುಗಳಲ್ಲಿ ಅವರು ನಡೆಸಿದ ಉತ್ಖನನ ಭಾರತೀಯ ಇತಿಹಾಸಕ್ಕೆ ಹೊಸ ತಿರುವನ್ನು ನೀಡಿದ್ದವು, ಅಮೆರಿಕಾ, ಇಂಗ್ಲೇಡ್‌, ಜಪಾನ್‌, ಥೈಲ್ಯಾಂಡ್‌, ಫಿಲಿಫೈನ್ಸ್‌, ರೋಮ್‌, ಈಜಿಪ್ಟ್‌ ಸೇರಿದಂತೆ ದೇಶ-ವಿದೇಶಗಳ ಇನ್ನೂರಕ್ಕೂ ಹೆಚ್ಚು ವಿದ್ವತ್‌ ಸಭೆಗಳಲ್ಲಿ ಅವರು ತಮ್ಮ ಪ್ರಬಂಧವನ್ನು ಮಂಡಿಸಿದ್ದಾರೆ. 

ಭಾರತೀಯ ವಿದ್ಯಾಭವನದ ಮೈಸೂರು ಕೇಂದ್ರದ ಚೇರ್ಮನ್‌ ಆಗಿ ಸಂಸ್ಥೆಯನ್ನು  ಕಟ್ಟಿ ಬೆಳೆಸುವಲ್ಲಿ, ಅಲ್ಲಿನ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವಲ್ಲಿ ಅವರ ಪಾತ್ರ ಮಹತ್ವವಾದದ್ದು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ರಚಿತವಾದ ನಲವತ್ತಕ್ಕೂ ಹೆಚ್ಚು ಕೃತಿಗಳಲ್ಲಿ ಏಳು ಸಂಪುಟಗಳಲ್ಲಿ ಬಂದ ʼಸ್ಟಡೀಸ್‌ ಆನ್‌ ಸೌತ್‌ ಇಂಡಿಯನ್‌ ಕಾಯಿನ್ಸ್‌ʼ ಬಹಳ ಮುಖ್ಯವಾದದ್ದು, ಭಾರತೀಯ ವಿದ್ವಾಭವನದ ಸ್ಥಾಪಕರಾದ ಕೆ.ಎಂ.ಮುನ್ಷಿಯವರ ಕೃತಿಗಳನ್ನು ಕನ್ನಡಕ್ಕೆ ತಂದ ನರಸಿಂಹ ಮೂರ್ತಿ, ಡಾ.ಕೆ.ಮುನ್ಷಿ ಮತ್ತು ಡಾ.ಆರ್.ಸಿ.ಮಜುಂದಾರ್‌ ಅವರು ರಚಿಸಿದ್ದ ʼಭಾರತೀಯ ಇತಿಹಾಸ ಮತ್ತುಸಂಸ್ಕೃತಿಯ ಸಂಪುಟಗಳನ್ನು ಕನ್ನಡಕ್ಕೆ ತಂದಿರುವುದು ನಾಡಿಗೆ ನೀಡಿದ ದೊಡ್ಡ ಕೊಡುಗೆಯಾಗಿದೆ.  ಮೈಸೂರು ವಿಶ್ವವಿದ್ಯಾಲಯದ ಜ್ಞಾನಕೋಶಕ್ಕೆ ನಾಲ್ಕುನೂರಕ್ಕೂ ಹೆಚ್ಚು ಲೇಖನಗಳನ್ನು ನೀಡಿದ್ದ ಅವರು ಹಲವು ಇತಿಹಾಸದ ಕುರಿತ ಉದ್ಗಂಥಗಳ ಸಂಪಾದಕರಾಗಿ, ಸಂಪಾದಕ ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸಿದ್ದರು. 

ಹಲವು ವರ್ಷಗಳಿಂದ ನನಗೆ ಮಾರ್ಗದರ್ಶಕರಾಗಿದ್ದ ನರಸಿಂಹ ಮೂರ್ತಿಯವರೊಂದಿಗೆ ನೇರವಾಗಿ, ಪೋನ್‌ ಮೂಲಕ ಗಂಟೆಗಟ್ಟಲೆ ಮಾತನಾಡಿದ್ದೇನೆ, ಪ್ರತಿ ಸಂದರ್ಭವೂ ನನ್ನನ್ನು ಬೆಳೆಸಿದೆ. ಅವರನ್ನು ನೋಡದ ನನ್ನ ಮೈಸೂರು ಭೇಟಿ ಯಾವಾಗಲೂ ಅಪೂರ್ಣ ಎನ್ನಿಸುತ್ತಿತ್ತು!  ನಾನು ʼಮಲ್ಲಿಗೆ ಮಾಸ ಪತ್ರಿಕೆʼಗೆ ಕರ್ನಾಟಕದ ನಾಣ್ಯ ಪರಂಪರೆಯ ಕುರಿತು ಅಂಕಣವನ್ನು ಬರೆಸಿದ್ದ. ಅಪರೂಪದ ವಿಷಯವನ್ನು ಓದುಗರು ಮೆಚ್ಚಿ ಕೊಂಡಿದ್ದರು. ಚಿತ್ರಗೀತೆಗಳ ಕುರಿತು ಅವರಿಗೆ ಅಪಾರ ಆಸಕ್ತಿ, ಅದರ ಇತಿಹಾಸದ ಕುರಿತೂ ಕೂಡ. ಅವರು ನನ್ನ ಜೊತೆಗೆ ಹೆಚ್ಚು ಮಾತನಾಡುತ್ತಿದ್ದದ್ದು ಈ ವಿಷಯದ ಕುರಿತೇ, ಅವರ ಸಾಹಿತ್ಯದ ಓದು ಬಹಳ ಸೂಕ್ಷ್ಮವೂ ಸಮಗ್ರವೂ ಆಗಿತ್ತು. ಡಾ.ಹಾ.ಮಾ.ನಾಯಕರ ಪಕ್ಕದ ಮನೆಯವರಾಗಿದ್ದ ಅವರ ಮನೆಗೆ,  ಹಾಮಾನಾ ನೋಡಲು ಬಂದ ಬರಹಗಾರರು ಅವರ ಸಿಗದೆ, ಇಲ್ಲವೆ ಬೇರೆಯವರಿದ್ದರೆ ನೇರವಾಗಿ ನರಸಿಂಹ ಮೂರ್ತಿಗಳ ಮನೆಗೆ ಬರುತ್ತಿದ್ದರಂತೆ ಇದರಿಂದ ನನಗೂ ಸಾಹಿತ್ಯದಲ್ಲಿ ಅಭಿಲಾಷೆ ಬೆಳೆಯಯಿತು ಎಂದು ಅವರು ವಿನೋದದಿಂದ ಹೇಳುತ್ತಿದ್ದರು. ನನ್ನ ವೈಯಕ್ತಿಕ ಬದುಕಿನಲ್ಲಿ ಹಲವು ಸಲ ನೆರವು ಮಾರ್ಗದರ್ಶನ ನೀಡಿದ್ದ ಅವರಿಗೆ ನಾನು ಮೈಸೂರಿನ ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದ ತರಗತಿಗಳನ್ನು ಆರಂಭಿಸಲಿ ಎನ್ನುವ ತೀವ್ರ ಅಭಿಲಾಷೆ ಇತ್ತು. ಅದಕ್ಕಾಗಿ ಒಪ್ಪಂದವೂ ಆಗಿತ್ತು. ಕಾರಣಾಂತರದಲ್ಲಿ ಅದು ಸಾಧ್ಯವಾಗಲಿಲ್ಲ. ಅವರ ಸಹಿ ಇರುವ ಒಪ್ಪಂದದ ಪ್ರತಿ ಇಂದಿಗೂ ನನ್ನ ಬಳಿ ಇದ್ದು,  ಇನ್ನು ಮುಂದೆ ಅವರ ನೆನಪಾಗಿ ನನ್ನ ಬಳಿ ಶಾಶ್ವತವಾಗಿ ಉಳಿಯಲಿದೆ. 

ಕೃತಜ್ಞತೆ: ಎನ್.ಎಸ್.ಶ್ರೀಧರ ಮೂರ್ತಿ

(ಪೋಟೋ ನರಸಿಂಹ ಮೂರ್ತಿಯವರಿಗೆ ಬಹಳ ಇಷ್ಟವಾಗಿದ್ದ ಅವರ ಪ್ರಿಯಶಿಷ್ಯ ನಾಗರಾಜ ಶರ್ಮ ಅವರು ತೆಗದಿದ್ದು)


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!