ಶುಕ್ರವಾರ, ಆಗಸ್ಟ್ 30, 2013

ಎತ್ತರಕ್ಕೇರಿದವರ ಅಂತಃಕರಣ

ಎತ್ತರಕ್ಕೇರಿದವರ ಅಂತಃಕರಣ

ಒಂದು ದಿನ ಡಾ. ದ.ರಾ ಬೇಂದ್ರೆ ಹಾಗೂ ಸುರೇಶ ಕುಲಕರ್ಣಿಯವರು ಕುದುರೆಗಾಡಿ ಮಾಡಿಕೊಂಡು ದತ್ತಾತ್ರೇಯ ಗುಡಿಗೆ ಹೋದರು.

ದೇವರಿಗೆ ನಮಸ್ಕಾರ ಮಾಡಿ ಹೊರಗೆ ಬಂದಾಗ ಕುದುರೆಗಾಡಿ ಇರಲಿಲ್ಲ. `ಮತ್ತೊಂದು ಗಾಡಿ ತೆಗೆದುಕೊಂಡು ಬರಲಾ' ಎಂದು ಕೇಳಿದಾಗ,  `ಬೇಡ ನಡೆದೇ ಮುಂದೆ ಹೋಗೋಣ. ಅಲ್ಲಿಯೇ ಟಾಂಗಾ (ಕುದುರೆಗಾಡಿ) ಸಿಗುತ್ತದೆಎಂದರು ಬೇಂದ್ರೆ. ಇಬ್ಬರೂ ನಡೆದು ಕೆ ಸಿ ಸಿ ಬ್ಯಾಂಕಿನ ಹತ್ತಿರ ಬಂದರು. ಅಲ್ಲೊಬ್ಬ ರಸ್ತೆಯ ಬದಿಯಲ್ಲಿ ಚಪ್ಪಲಿ ಹೊಲಿಯುತ್ತ ಕುಳಿತಿದ್ದ. ಇವರ ಚಪ್ಪಲಿಯ ಉಂಗುಷ್ಠ ಹರಿದದ್ದನ್ನು ನೋಡಿ, `ಅಜ್ಜಾವ್ರ, ಉಂಗುಷ್ಠ ಹಚ್ಚಿಕೊಡತೇನಿ ಕೊಡ್ರಿ' ಎಂದ.

ಆತು ಹಚ್ಚಿಕೊಡುಎಂದು ಅವನ ಕಡೆಗೆ ಹೋದರು. ತಮ್ಮ ಚಪ್ಪಲಿ ತೆಗೆದುಕೊಡುವಾಗ ಆ ರಿಪೇರಿ ಮಾಡುವವ ಹೇಳಿದ, `ಬಿಸಲಾಗ ಕಾಲು ಸುಡತಾವ, ಇದರ ಮೇಲೆ ಕಾಲು ಇಡ್ರಿಎಂದು ಮತ್ತೊಂದು ಚಪ್ಪಲಿಯನ್ನು ಅವರ ಕಾಲಿನ ಹತ್ತಿರ ಇಟ್ಟ. ಅವನ ಪ್ರೀತಿ ಕಂಡು ಬೇಂದ್ರೆಯವರಿಗೆ ಅಂತಃಕರಣ ತುಂಬಿ ಬಂತು.

ಅಲ್ಲೋ ನನ್ನ ಕಾಲು ಸುಡೋದರ ಬಗ್ಗೆ ನಿನಗೆ ಕಾಳಜಿ ಅದ. ಆದರೆ ಸುಡೋ ಬಿಸಿಲೊಳಗ ನೀನು ಕೂತಿ. ನಿನ್ನ ಮೈ ಸುಡೋದರ ಬಗ್ಗೆ ಎಚ್ಚರ ಇಲ್ಲಾಎಂದು ತಮ್ಮ ಕೊಡೆಯನ್ನು ಬಿಚ್ಚಿ ಅವನ ತಲೆಯ ಮೇಲೆ ಹಿಡಿದು ನಿಂತರು. ಆತ ಇವರ ಚಪ್ಪಲಿ ರಿಪೇರಿ ಮಾಡುತ್ತಿದ್ದ. ಅದು ಮುಗಿದ ಮೇಲೆ,  `ಪಾಲೀಶ್ ಮಾಡಲೇನ್ರಿ?'  ಎಂದು ಕೇಳಿದ. ಇವರು ಹೂಂ' ಎಂದು ಮಾತಿಗಿಳಿದು ಅವನ ಮನೆತನದ ಇತಿಹಾಸವನ್ನೆಲ್ಲ ತಿಳಿದರು.

ಎಷ್ಟು ಮಕ್ಕಳು ನಿನಗ?

ಎರಡು

ದಿನಕ್ಕ ಎಷ್ಟು ಹಣ ದುಡಿತೀ?

ಹತ್ತು ರೂಪಾಯಿ, ಒಮ್ಮಮ್ಮೆ ಹೆಚ್ಚು ಕಡಿಮೆ ಆಗತೈತಿ .
ಶೆರೆ ಕುಡಿತೀ ಏನು?

ಇಲ್ಲ, ಯಾವಾಗರೇ ಒಮ್ಮಮ್ಮೆ .

ಮನ್ಯಾಗ ಛತ್ರಿ (ಕೊಡೆ) ಅದ ಏನು?

ಇದೇರಿ

ಇಷ್ಟು ಮಾತು ಆಗುವುದರೊಳಗೆ ಚಪ್ಪಲಿ ರಿಪೇರಿ ಕೆಲಸ ಮುಗಿದಿತ್ತು. ` ಎಷ್ಟು ಆತು?'  ಬೇಂದ್ರೆ ಕೇಳಿದರು.

ಆತ ಕ್ಷಣ ವಿಚಾರ ಮಾಡಿ,  `ಒಂದೂವರೆ ರೂಪಾಯಿ ಆತ್ರಿಎಂದ. ಇವರು ಹತ್ತು ರೂಪಾಯಿ ತೆಗೆದು ಕೊಟ್ಟರು. ಆತ  `ನನ್ನ ಕಡೆಗೆ ಚಿಲ್ರೆ ಇಲ್ಲರಿ' ಎಂದಾಗ ಬೇಂದ್ರೆ,  `ನೀನು ದಿನಕ್ಕೆ ಹತ್ತು ರೂಪಾಯಿ ದುಡೀತಿ. ಇದು ಇವತ್ತಿನ ಗಳಿಕೆ. ಮೊದಲು ಮನೆಗೆ ಹೋಗಿ ಕೊಡೆ ತೊಗೊಂಡು ಬಾ. ನೆರಳು ಮಾಡಿಕೊಂಡು ದುಡಿ. ನಿನ್ನ ಹಿಂದ ಹೆಂಡತಿ ಮಕ್ಕಳು ಅವಲಂಬಿಸಿದ್ದಾರೆ ಎಂಬುದನ್ನು ಮರೀಬ್ಯಾಡ. ಅವರಿಗೆ ಹಣ್ಣು ಹಂಪಲು ಒಯ್ಯಿ, ಕುಡೀಬ್ಯಾಡಾಎಂದರು. ಅವರ ಅಂತಃಕರಣದ ಮಾತಿಗೆ, ನೀಡಿದ ಹಣಕ್ಕೆ ಅವನ ಕಣ್ಣು ಒದ್ದೆಯಾದವು.

ಆತ ಕೇಳಿದ,  `ಅಜ್ಜಾವ್ರ, ನಿಮ್ಮ ಮನೆ ಎಲ್ಲಿ ಐತಿ?'. `ಸಾಧನಕೇರಿಯೊಳಗ' ಎಂದರು ಬೇಂದ್ರೆ.. `ಬೇಂದ್ರೆಯವರ ಮನೀ ಹತ್ತಿರ ಏನ್ರಿ?' ಎಂದು ಕೇಳಿದ.

ಇವರು  `ಹೂಂಎನ್ನುತ್ತ ಟಾಂಗಾ ನಿಲ್ದಾಣದ ಕಡೆಗೆ ನಡೆದರು. ಅನಂತರ ಆ ಚಪ್ಪಲಿ ರಿಪೇರಿ ಮಾಡುವವ ಆಗಾಗ ಬೇಂದ್ರೆಯವರ ಮನೆಗೆ ಬಂದು ಹೋಗುತ್ತಿದ್ದನಂತೆ.

ನಿಜವಾಗಿಯೂ ಎತ್ತರಕ್ಕೇರಿದವರು ಯಾವ ಹಂತಕ್ಕಾದರೂ ಇಳಿದು ಹೃದಯವಂತಿಕೆಯನ್ನು ತೋರಬಲ್ಲರು.

ಇದನ್ನು  ಸುರೇಶ ಕುಲಕರ್ಣಿಯವರು ತಮ್ಮ  ಬೇಂದ್ರೆ ಬೆಳಕು' ಕೃತಿಯಲ್ಲಿ ಬರೆದಿದ್ದಾರೆ.  ಇದರ ಬೆಳಕು ನಮಗೆ ಕಂಡಿದ್ದು ಡಾ. ಗುರುರಾಜ ಕರ್ಜಗಿ ಅವರ ಪ್ರಜಾವಾಣಿಯ ಕರುಣಾಳು ಬಾ ಬೆಳಕೆಅಂಕಣದಲ್ಲಿ.


ಬೇಂದ್ರೆ ಅಜ್ಜನಿಗೆ, ಇದನ್ನು ನಮಗೆ ಉಣಬಡಿಸಿದ ಸುರೇಶ್ ಕುಲಕರ್ಣಿ ಮತ್ತು ಡಾ. ಗುರುರಾಜ ಕರ್ಜಗಿ ಅವರಿಗೆ ನಮಿಸೋಣ.

Tag: ettarakkeridavara antahkarana

1 ಕಾಮೆಂಟ್‌:

manjunath ಹೇಳಿದರು...

ಅವರು ಬಡತನವನ್ನೇ ಸಂಭ್ರಮಿಸಿದ ವ್ಯಕ್ತಿ....ನಿಜವಾಗಲೂ ಈ ವೃತ್ತಾಂತ ಮನ ಕಲಕುತ್ತದೆ. ಅವರ ಹೃದಯ ವೈಶಾಲ್ಯತೆಯನ್ನು ಹೊರಗೆಡವುತ್ತದೆ.