ಭಾನುವಾರ, ಸೆಪ್ಟೆಂಬರ್ 1, 2013

ಮಲ್ಲಿಕಾರ್ಜುನ ಮನಸೂರ

ಮಲ್ಲಿಕಾರ್ಜುನ ಮನಸೂರ

ಡಾ. ಮಲ್ಲಿಕಾರ್ಜುನ ಮನಸೂರ ಅವರು ಡಿಸೆಂಬರ್ 31, 1910ರ ವರ್ಷದಲ್ಲಿ ಜನಿಸಿದರು. ಅವರ 103ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರೇ ಪ್ರಸ್ತುತ ಪಡಿಸಿರುವ ಅವರ ಆತ್ಮಚರಿತ್ರೆಯನ್ನು ತಮ್ಮ ಮುಂದೆ ತೆರೆದಿಡುತ್ತಿದ್ದೇನೆ.

ನನ್ನಪ್ಪ ಭೀಮರಾಯಪ್ಪನವರು ಮನ್ಸೂರ ಗ್ರಾಮದ ಗೌಡರಾಗಿದ್ದು ಅವರಿಗೆ ನಾಟಕ, ಸಂಗೀತ ದೊಡ್ಡಾಟಗಳಲ್ಲಿ ಅಪಾರ ಆಸಕ್ತಿ.  ಪರವೂರಿನಿಂದ ಮೇಳಗಳನ್ನು ಕರೆಯಿಸಿ ಅವರ ಕಾರ್ಯಕ್ರಮಗಳು, ಪ್ರದರ್ಶನವನ್ನು ಏರ್ಪಡಿಸುತ್ತಿದ್ದರು.  ತಾಯಿಗೂ ಹಾಗೆಯೇ ಸಂಗೀತವೆಂದರೆ ಜೀವ.  ಆಕೆಗೆ ಅದೆಷ್ಟೋ ಬೀಸುವ ಹಾಡುಗಳು, ಜೋಗುಳ ಹಾಡು, ಭಜನೆಗಳು ಕಂಠಗತವಾಗಿದ್ದು ಅವುಗಳನ್ನು ಇಂಪಾಗಿ ಹಾಡುತ್ತಿದ್ದಳು.  ನಾನು ಎರಡನೆಯ ವರ್ಗದಲ್ಲಿದ್ದಾಗ ನನ್ನ ತಂದೆ ಅಪ್ಪಯಸ್ವಾಮಿ ಎಂಬ ಸಂಗೀತಗಾರರನ್ನು ಕರೆತಂದರು.  ಅವರು ತಂಜಾವೂರಿನಲ್ಲಿ ಕರ್ನಾಟಕ ಸಂಗೀತ ಕಲಿತು ಬಂದಿದ್ದರು.  ನಮ್ಮೂರಿನ ಎಳೆಯರಿಗೆ ಅವರು ಸೈರಂಧ್ರಿ ನಾಟಕ ಕಲಿಸುತ್ತಿದ್ದರು.  ಅವರ ಕಂಠ ಮಧುರವಾಗಿತ್ತು.  ಅವರು ಹಾಡುವಾಗ ಇದ್ದಕ್ಕಿದ್ದಂತೆ ನನ್ನ ಕಣ್ಣು ಹನಿಗೂಡುತ್ತಿದ್ದವು.  ಮನೆಕೆಲಸ ಮುಗಿಸಿ ತಾಯಿಯು ರಾತ್ರಿ ಭಜನೆಯನ್ನೋ ಗೀತವನ್ನೋ ಹಾಡುವಾಗಲೂ ನನ್ನ ಹೃದಯದಲ್ಲಿ ಏನೋ ವಿಚಿತ್ರವಾದ ಮಧುರ ವೇದನೆಯ ಅನುಭವವಾಗುತ್ತಿತ್ತು.  ಕರೆವ್ವನ ಗುಡಿಯಲ್ಲಿ ಗಂಟೆ ಮೊಳಗಿದಾಗ ನನ್ನ ಅಂತರಾಳದಲ್ಲಿ ಅದು ಮಾರ್ದನಿಗಯ್ಯುವಂತಿತ್ತು.  ಹೀಗೆ ಬಾಲ್ಯದಲ್ಲಿಯೇ ನನ್ನ ಮನಸ್ಸಿನಲ್ಲಿ ಹೊಕ್ಕು ನೆಲೆಸಿತ್ತು ಸಂಗೀತದ ಬೀಜ.

ನಮ್ಮೂರಿನ ಗಾಂವಟೀ ಶಾಲೆಯ ಶಿಕ್ಷಣ ಮುಗಿಸಿ ಧಾರವಾಡಕ್ಕೆ ಬರಬೇಕಾಯಿತು.  ಆದರೆ ನಾನು ನಮ್ಮಣ್ಣ ಸೇರಿದ ವಿಶ್ವಗುಣಾದರ್ಶ ನಾಟಕ ಮಂಡಲಿಯ ಬಾಗಿಲು ತಟ್ಟಿದೆ.  ಸುದ್ದಿ ತಲಪುವುದೇ ತಡ ನನ್ನನ್ನು ನಾಟಕ ಕಂಪನಿಯಿಂದ ಬಿಡಿಸಿ ನನ್ನಪ್ಪ ಮತ್ತೆ ಶಾಲೆಯಲ್ಲಿ ಸೇರಿಸಿದರು.  ನನ್ನ ದಾರಿ ಯಾವುದೆಂದು ನನ್ನ ಒಳಗೊಳಗೇ ಖಾತರಿಯಾಗಿತ್ತು.  ದಾರಿ ತುಳಿಯದ ಹೊರತು ಗುರಿಯನ್ನು ಸೇರಲಾಗದೆಂಬ ಅರಿವೂ ನನ್ನಲ್ಲಿ ಮೂಡಲಾರಂಭಿಸಿತು.  ತಿರುಗಿ ಕಂಪೆನಿಗೆ ಹೋಗಿ ಸೇರಿದೆ.  ಆಗ ಏನಾದರೂ ಮಾಡಿಕೊಳ್ಳಲಿ ಎಂದು ನನ್ನ ದಾರಿಗೆ ನನ್ನನ್ನು ಬಿಟ್ಟುಕೊಟ್ಟರು.

ಅಲ್ಲಿ ಪಾಂಡೋಬಾ ಮತ್ತು ಸಂಗಬಸಪ್ಪನವರು  ನನಗೆ ಪದಗಳನ್ನು ಕಲಿಸುತ್ತಿದ್ದರು.  ಹಾಗೆಯೇ ಬಾಯಿಪಾಠ ಮಾಡಿದ ಹಾಡುಗಳ ಮೂಲಕ ಶ್ರೋತೃಗಳ ಹೃದಯ ಸ್ಪರ್ಶಿಸುವ ಹದವನ್ನು ಅರಿತುಕೊಂಡೆ.  ದಿನ ಬೆಳಗಾದರೆ ಅದೇ ಅದೇ ಹಾಡುಗಳನ್ನೇ ಹಾಡಬೇಕಾಗುತ್ತಿತ್ತು ನಿಜ, ಆದರೆ ಯಾವ ಹಾಡಿನಲ್ಲೂ ಯಾಂತ್ರಿಕತೆಯಾಗಲೀ ಏಕತಾನತೆಯಾಗಲೀ ಬರಕೂಡದು.  ಪ್ರತಿಯೊಂದು ಹಾಡೂ ಆಗತಾನೇ ಅರಳಿದ ಹೂವಿನಂತೆ ಸೌರಭ ಸೂಸುವಂತಾಗಬೇಕೆಂದು ನನಗೆ ಒಳಗೊಳಗೇ ಅನ್ನಿಸುತ್ತಿತ್ತು.  ಹೀಗೆ ಎಳೆತನದಲ್ಲಿಯೇ ನನ್ನ ಮೇಲಾದ ಸಂಸ್ಕಾರಗಳು ಹಾಗೂ ರಂಗಭೂಮಿಯ ಮೇಲೆ ನಾನು ಕಲಿತ ಪಾಠಗಳು ನನ್ನೊಳಗಿನ ಕಲಾಪ್ರೇಮಕ್ಕೆ ಸಾಣೆ ಹಿಡಿಯಲು ನೆರವಾದವು. 

ಒಮ್ಮೆ ನಮ್ಮ ಕಂಪನಿ ಬಾಗಲಕೋಟೆಯಲ್ಲಿರುವಾಗ ಶ್ರೀ ಶಿವಬಸವಸ್ವಾಮಿಗಳ ಜೊತೆ ಪಾಂಡೋಬಾ ಮಾಸ್ತರರ ಗುರುಗಳಾದ ನೀಲಕಂಠಬುಬಾ ಮೀರಜಕರ್ ಅವರು ನಿಮ್ಮ ಕಂಪನಿಯೊಳಗೆ ಒಬ್ಬ ಹುಡಗ ಪಸಂದಾಗಿ ಹಾಡ್ತಾನಂತಲ್ಲ? ಅಂವ ಎಲ್ಲಿದ್ದಾನೆ?” ಎಂದು ಮಾಸ್ತರರನ್ನು ಕೇಳಿದರಂತೆ.  ಅವರ ಮುಂದೆ ನಾನು ಹಾಡಿದೆ.  ಈ ಹುಡುಗನನ್ನು ನನ್ನ ಕಡೆಗೆ ಕೊಟ್ಟುಬಿಡ್ರಿ ಒಬ್ಬ ಒಳ್ಳೆಯ ಸಂಗೀತಗಾರನನ್ನು ತಯಾರಿಸುವೆ.  ಇವನು ನಾಟಕ ಕಂಪನಿಯಲ್ಲಿ ಇದ್ದು ತನ್ನ ಪ್ರತಿಭೆಯನ್ನು ಹದಗೆಡಿಸಬಾರದುಎಂದರು.  ಬುವಾರೊಡನೆ ಮೀರಜದ ದಾರಿ ಹಿಡಿದುದೇ ನನ್ನ ರಸಯಾತ್ರೆಯ ಮಹತ್ವದ ಹಂತ.

ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೆ ಗುರುಗಳು ನನಗೆ ಸ್ವರಜ್ಞಾನವನ್ನು ಮಾಡಿಕೊಡುತ್ತಿದ್ದರು.  ತಂಬೂರಿಯನ್ನು ಶ್ರುತಿಗೂಡಿಸಿ ಮೊದಲು ಕೆಲವು ಹೊತ್ತು ಷಡ್ಜವನ್ನು ತುಂಬಿಸುತ್ತಿದ್ದರು.  ಯಾವುದಾದರೂ ಸ್ವರ ಖಚಿತವಾಗಿ ತಾಗದಿದ್ದರೆ ಗುರುಗಳು ನನಗೆ ಷಡ್ಜವನ್ನು ಹಾಡಲು ಹೇಳಿ, ತಿರುಗಿ ತಪ್ಪಿದ ಸ್ವರ ಹಚ್ಚಲಿಕ್ಕೆ ಹೇಳಿದಾಗ ಆ ಸ್ವರವೂ ನಿಷ್ಕಳಂಕ ಹಾಗೂ ಖಚಿತವಾಗಿ ತಾಗುತ್ತಿತ್ತು.  ಕೆಲವು ಕಾಲ ಗುರುಗಳ ಸಾನಿಧ್ಯದಲ್ಲಿ ಈ ತರಹ ಸಾಧನೆಯನ್ನು ಮಾಡುತ್ತಿದ್ದಾಗ ನನಗೆ ಎಷ್ಟೋ ಮಹತ್ವದ ಸಂಗತಿಗಳು ಹೊಳೆದವು.  ಎಲ್ಲ ವಿಷಯಗಳನ್ನು ನೇರವಾಗಿ ಹೇಳದೆ ಶಿಷ್ಯನಿಗೆ ವಿಚಾರ ಮಾಡಿ ತಂತಾನೆ ಕಂಡುಹಿಡಿಯಲು ಪ್ರೇರೇಪಿಸುವುದು ತಜ್ಞನಾದ ಗುರುವಿನ ಲಕ್ಷಣ.

ನಾಟಕದಲ್ಲಿ ಹಾರ್ಮೋನಿಯಂ ಪಿಟೀಲುಗಳೊಂದಿಗೆ ಮಾತ್ರ ಹಾಡಿ ರೂಢಿಯಿದ್ದ ನನಗೆ ತಂಬೂರಿಯ ಮಹತಿಯು ತಿಳಿಯಿತು.  ತಂಬೂರಿಯೆಂದರೆ ಸಂಗೀತಗಾರನ ಬೋಧೀವೃಕ್ಷ.  ಅದರಡಿಯಲ್ಲಿ ಕುಳಿತು ಧ್ಯಾನ ಮಾಡದೆ ಸ್ವರಸಾಕ್ಷಾತ್ಕಾರ ಅಸಂಭವ.  ಸಾಧನೆಯನ್ನು ಮಾಡುತ್ತ ಮಾಡುತ್ತ ನನಗೆ ಷಡ್ಜದ ಅರ್ಥವೂ ಅಂಗೈಯ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ಗೋಚರವಾಯಿತು.  ಎಲ್ಲ ಸ್ವರಗಳೂ ಷಡ್ಜದ ಆವಿರ್ಭಾವ ಹಾಗೂ ಎಲ್ಲ ರಾಗಗಳು ಷಡ್ಜದ ಪ್ರವಾಹವೆಂಬುದು ಮನದಟ್ಟಾಯಿತು. ನನ್ನ ದೃಷ್ಟಿಯಲ್ಲಿ ಸಾದ ಧ್ಯಾನವೇ ಸಾಧನೆ.

ಗುರುಗಳು ನನಗೆ ಪ್ರಥಮ ಕಳಿಸಿದ್ದು ಭೈರವ ರಾಗ.  ಹಲವಾರು ರಾಗಗಳಲ್ಲಿ ಛೋಟಾಖ್ಯಾಲ ಕಲಿಸಿದ ನಂತರ ಕ್ರಮೇಣ ಬಡಾಖ್ಯಾಲವನ್ನು ಕಲಿಸಿದರು.  ಅದರಲ್ಲಿ ತಾಲದೊಂದಿಗೆ ಹೇಗೆ ರಾಗದ ಬೆಳವಣಿಗೆಯನ್ನು ಮಾಡಬೇಕೆಂಬುದನ್ನು ಕಲಿಸಿದರು.  ಆರು ವರ್ಷಗಳಲ್ಲಿ ಬಿಹಾಗ, ಮಾಲಕಂಸ, ಭೂಪ, ಕಾಮೋದ, ತೋಡಿ, ದರಬಾರಿ, ಯಮನ, ಕೇದಾರ, ಪೂರಿಯಾ, ಮಾರವಾ, ಬಿಲಾವಲ ಲಲಿತ, ಇತ್ಯಾದಿ ನಲ್ವತ್ತು ಐವತ್ತು ರಾಗಗಳನ್ನು ವಿಸ್ತಾರವಾಗಿ ಹಾಡಲು ನಾನು ಸಮರ್ಥನಾದೆನು.

ಬೇರೆ ಬೇರೆ ರಾಗಗಳಲ್ಲಿ ಹಲವಾರು ಅಸ್ಥಾಯಿಗಳನ್ನು ಕಲಿಯುವಾಗ ಆ ರಾಗಗಳ ಸುಮಧುರವಾದ ಸ್ವರರೇಖೆಗಳು, ಸೌಂದರ್ಯಸ್ಥಳಗಳು ಮನಸ್ಸಿನಲ್ಲಿ ಮೂಡುವುದಲ್ಲದೆ ಗಮಕ’, ‘ಮೀಂಡ’, ‘ಖಟಕಾಆದಿ ಗಾನಕ್ರಿಯೆಗಳು ಕಂಠವಾಗುತ್ತಿದ್ದವು.  ಆಸ್ಥಾಯಿಯ ಕಡೆಗೆ ನೋಡುವ ನನ್ನ ದೃಷ್ಟಿಯೇ ಮಾರ್ಪಟ್ಟು ಆಸ್ಥಾಯಿಯೆಂದರೆ ರಾಗವೆಂಬ ಚಿನ್ನವನ್ನೂಳಗೊಂಡ ಅದಿರು ಎನಿಸತೊಡಗಿತು.  ರಾಗದ ತಾತ್ವಿಕ ವಿವೇಚನೆಯನ್ನು ಶಬ್ದದಲ್ಲಿ ಮಾಡುವುದಕ್ಕಿಂತ ಅಧಿಕವಾಗಿ ಒಂದು ಮೌಲಿಕ ಆಸ್ಥಾಯಿಯು ಆ ರಾಗವನ್ನು ಸ್ಪಷ್ಟವಾಗಿ ಕೂಲಂಕಷವಾಗಿ ಚಿತ್ರಿಸಬಲ್ಲದು.

ನಮ್ಮ ಗುರುಗಳ ಕಂಠವು ಅತ್ಯಂತ ಸುರೇಲವಾಗಿತ್ತು.  ಅದು ತಂಬೂರಿಯ ತಂತಿಯಲ್ಲಿ ಏಕಜೀವವಾಗಿ ಕೂಡುತ್ತಿತ್ತು.  ಸುಮಧುರ ಅನನ್ಯಸದೃಶವಾದ ಹಾಡುಗಾರಿಕೆಯ ಜೊತೆಗೆ ಪ್ರಚುರವಾದ ಪಾಂಡಿತ್ಯವನ್ನು ಪಡೆದಿದ್ದರೂ ಅವರು ಎಲೆಯ ಮರೆಯ ಹೂವಿನಂತೆ ತಮ್ಮ ಸೌರಭವನ್ನು ಏಕಾಂತದಲ್ಲಿ ಅರಳಿಸುತ್ತಾ ಜನಜಂಗುಳಿಯಿಂದ ದೂರವಾಗುಳಿದರು.  ಅದಕ್ಕೆ ಕಾರಣವೆಂದರೆ ಅಂದಿನ ಲಿಂಗಾಯತ ಸಮಾಜವು ಸಂಗೀತವೆಂದರೆ ಹೀನಾಯವಾಗಿ ಕಾಣುತ್ತಿದ್ದು, ನಮ್ಮ ಗುರುಗಳಿಗೆ ಅಂದಿನ ಸಮಾಜದಿಂದ ಪ್ರೋತ್ಸಾಹ ಸಿಗಲಿಲ್ಲ.  ಇದಲ್ಲದೆ ನಮ್ಮ ಗುರುಗಳು ಬಹಳ ಸಂಕೋಚ ಸ್ವಭಾವದವರು.

ಮೀರಜದಲ್ಲಿ ನಾನು ಕಲಿಯುತ್ತಿರುವಾಗ ಒಮ್ಮೆ ಉಸ್ತಾದ್ ಕರೀಂಖಾನರು ಮಿರಾ ಸಾಹೇಬರ ದರ್ಗಾದ ಹತ್ತಿರ ಒಂದು ಮರದಡಿಯಲ್ಲಿ ಕುಳಿತು ತೋಡಿರಾಗವನ್ನು ಹಾಡುತ್ತಿದ್ದರು.  ಅವರ ಹಾಡಿನಲ್ಲಿ ಅಪೂರ್ವವಾದ ಭಾವಪರವಶತೆ ಹಾಗೂ ಮಧುರ ವೇದನೆಯಿದ್ದು ಕೇಳುವವರನ್ನು ಮುಗ್ಧಗೊಳಿಸುವ ಶಕ್ತಿಯಿತ್ತು.  ಅವರ ಸಂಗೀತವನ್ನು ಕೇಳಿದಾಗ ಇಡೀ ಮಾನವ ಕುಲವನ್ನು ಪೀಡಿಸುವ ನೋವಿನುಂದುಂಟಾದ ಮರುಕವೇ ಅವರ ಹಾಡಿನಲ್ಲಿ ಹುದುಗಿತ್ತೆಂದು ನನಗನ್ನಿಸುತ್ತಿತ್ತು.

ಗುರುಕುಲದಲ್ಲಿ ಸಂಗೀತ ವ್ಯಾಸಂಗ ಮಾಡುತ್ತಿರುವ ದಿನಗಳಲ್ಲಿ ಕೇಳಿದ ಇನ್ನೊಂದು ಮೆಹಫಿಲನನ್ನ ಎಳೆಯ ಮನಸ್ಸಿನ ಮೇಲೆ ವಿಲಕ್ಷಣವಾದ ಪ್ರಭಾವ ಬೀರಿತು.  ಸಾಂಗಲಿಯ ಸಾಂಬಾರೆ ವೈದ್ಯರ ಮನೆಯಲ್ಲಿ ಗಣೇಶೋತ್ಸವದ ಸಮಯದಲ್ಲಿ ಸಂಗೀತ ಸಾಮ್ರಾಟ ಅಲ್ಲಾದಿಯಾ ಖಾನ್ ಸಾಹೇಬರು ಹಾಡಿದರು.  ಅವರ ಹಾಡನ್ನು ಕೇಳಿದಾಗ ನನಗಾದ ಅನುಭವವನ್ನು ಬಣ್ಣಿಸಲಳವಳ್ಳ.  ಆ ಸಂಗೀತಕ್ಕೆ ಸಾಗರದ ಆಳ ಮತ್ತು ಬಿತ್ತರವಿದ್ದಂತೆ ತೋರಿತು.  ತೆರಪಿಲ್ಲದ ತೆರೆಯ ಮೇಲೆ ತೆರೆಯು ಒಂದರ ಹಿಂದಿನ್ನೊಂದು ಎದ್ದು ಭೋರ್ಗರೆದು ನೋಡುವವರನ್ನು ವಿಸ್ಮಯಗೊಳಿಸಿ ಅಡಿಕೀಳಲಾರದೆ ಹಿಡಿದು ನಿಲ್ಲಿಸುವಂತೆ ಅವರ ಸಂಗೀತದಲ್ಲಿ ಉಪಜ ಅಂಗದ ತಾನ್ ಮತ್ತು ಬೋಲತಾನಗಳು ಒಂದೇ ಸಮನೆ ಹ್ರುದ್ಯದಾಳದಿಂದ ಹೊರಹೊಮ್ಮಿ ಬರುತ್ತಿದ್ದವು.  ಈ ಹಾಡುಗಾರಿಕೆ ನನ್ನ ಬುದ್ಧಿಯನ್ನು ಮಂಕುಗೊಳಿಸಿತು.  ಮಾತಿಗೆ ಮೌನದ ಬೀಗ ತೊಡಿಸಿತು.  ಅಲ್ಲಾದಿಯಾಖಾನ್ ಸಾಹೇಬರ ಹಾಡುಗಾರಿಕೆಯನ್ನು ಕೇಳಿದಾಗ, ನನ್ನ ಮನಸ್ಸನ್ನು ಸೆಳೆದದ್ದು ಅದರಲ್ಲಿಯ ಬುದ್ಧಿಯ ಪ್ರಖರತೆ, ತಂತ್ರದ ಸಂಕೀರ್ಣತೆ ಮತ್ತು ಸೃಜನಶೀಲತೆಯ ನಿತ್ಯ ನವೋನ್ಮೇಷ.  ಅದನ್ನು ಕೇಳಿದ ಮೇಲೆ ನಾನೂ ಹಾಗೆಯೇ ಹಾಡಬೇಕೆಂಬ ಆಸೆಯು ನನ್ನ ಮನಸ್ಸಿನಲ್ಲಿ ಅಂಕುರಿಸಿತು.

ನನಗೆ ಸುಮಾರು ಹದಿನಾರು ವರ್ಷ ತುಂಬಿದಾಗ ನನ್ನ ಧ್ವನಿ ಒಡೆಯಿತು.  ಎರಡು ಮೂರು ತಿಂಗಳು ಧ್ವನಿಯ ಈ ಪಾಡಿನಲ್ಲಿ ಅದನ್ನು ಹೆಚ್ಚು ದಣಿಸದೆ ನಾನು ಪದೇ ಪದೇ ಚೀಜುಗಳ ಪುನರಾವೃತ್ತಿಯನ್ನು ಮಾಡುವುದರಲ್ಲಿ ಕಳೆದೆ.  ಆಮೇಲೆ ನಾನು ಎಂದಿಲ್ಲದ ರಭಸದಿಂದ ರಿಯಾಜ್ ಮಾಡಲಾರಂಭಿಸಿದೆ.  ರಾತ್ರಿ 9 ಗಂಟೆಗೆ ಆರಂಭಿಸಿದ ರಿಯಾಜು ಬೆಳಿಗ್ಗೆ 6 ಗಂಟೆಯವರೆಗೂ ನಡೆಯುತ್ತಿತ್ತು.  ಮೂರು ವರ್ಷಗಳಲ್ಲಿ ಮೆಹನತ್ತಿನ ಮೂಲಕ ನನ್ನ ಧ್ವನಿಯಲ್ಲಿ ಸ್ಥಿರತೆ, ಕಸುವು ಮತ್ತು ಲವಣಿಕತೆ ಒಳಗೊಂಡು ಅದಕ್ಕೊಂದು ಹೊಸ ಮೆರುಗು ಬಂದಂತೆ ಭಾಸವಾಯಿತು.

ನಾನು ಸಂಗೀತ ಸಾಧನೆಯನ್ನು ಮಾಡುತ್ತಿರುವ ಸಮಯದಲ್ಲಿಯೆ ಧಾರವಾಡ ಹಾಗೂ ಈ ನಗರಗಳ ಸುತ್ತುಮುತ್ತಲಿನ ಪ್ರದೇಶದಲ್ಲಿ ಉತ್ತರ ಹಿಂದೂಸ್ಥಾನಿ ಸಂಗೀತದ ಪ್ರಚಾರಕ್ಕೆ ಅನುಕೂಲಕರವಾದ ವಾತಾವರಣವೊಂದು ಸಿದ್ಧವಾಗಿತ್ತು.  ಇದಕ್ಕೆ ಮುಖ್ಯ ಕಾರಣವೆಂದರೆ ಹಿಂದೂಸ್ಥಾನಿ ಸಂಗೀತದಲ್ಲಿ ಅಭಿರುಚಿಯುಳ್ಳ ಕೆಲವು ಜನರು ವಾಸವಾಗಿದ್ದರು.  ಇನ್ನು ಕೆಲವರು ಪುಣೆಯಲ್ಲಿ ಕಾಲೇಜು ಕಲಿಯುತ್ತಿರುವಾಗ ಒಳ್ಳೆಯ ಸಂಗೀತವನ್ನು ಕೇಳಿ ಕೇಳಿ ಸಂಸ್ಕಾರಹೊಂದಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದರು.  ಕಲಾವಿದರು, ಅವರ ಶಿಷ್ಯರು ಹಾಗೂ ಕಲಾ ಪೋಷಕರು ಕೂಡಿ ಮಾಡಿದ ಸಂಗೀತ ಪ್ರಚಾರದ ಮೂಲಕ ಈ ಭಾಗದಲ್ಲಿ ಒಂದು ಚಿಕ್ಕದಾದ ಉತ್ತಮ ಶ್ರೋತೃವರ್ಗವು ನಿರ್ಮಾಣವಾಗಿತ್ತು.

ಈ ಮಧ್ಯದಲ್ಲಿ ವಾಣೀವಿಲಾಸ ಕಂಪನಿಯು ಅಗ್ನಿಗೆ ಆಹುತಿಯಾಗಿ ನನ್ನ ನಾಟ್ಯಜೀವನಕ್ಕೆ ತೆರೆಬಿದ್ದ ನಂತರ ನನ್ನೆದುರು ಹೊಸದೊಂದು ದಾರಿ ತೆರೆಯಿತು.  ನನಗಾಗಿಯೇ ಕಾದುಕೊಂಡಿದ್ದ ದಾರಿ.  ನನ್ನ ಆತ್ಮೀಯ ಗೆಳೆಯರಾಗಿದ್ದ ಬಳ್ಳಾರಿ ವೀರಭದ್ರಪ್ಪ ಈಶ್ವರಪ್ಪಾ ಬೆಂಡಿಗೇರಿ ಮುಂತಾದವರು ಕೂಡಿ ಹಿಸ್ ಮಾಸ್ಟರ್ಸ್ ವಾಯ್ಸ್ಕಂಪೆನಿಯ ಮೂಲಕ ನನ್ನ ಹಾಡಿನ ರಿಕಾರ್ಡ್ ಮಾಡಿಸುವ ಉದ್ದೇಶದಿಂದ ಆ ಕಂಪನಿಯ ಮುಖ್ಯಸ್ಥರಾದ ಶ್ರೀ ರೂಪಜಿ ಎಂಬುವರನ್ನು ಮುಂಬಯಿಯಿಂದ ಗದುಗಿಗೆ ಕರೆಯಿಸಿ ನನ್ನ ಸಂಗೀತದ ಏರ್ಪಾಟು ಮಾಡಿದರು.  1933ರಲ್ಲಿ ಮುಂಬಯಿಯಲ್ಲಿ ನನ್ನ ಧ್ವನಿಮುದ್ರಿಕೆಯು ಬಿಡುಗಡೆಯಾಗಿ ಅದು ಮಹಾರಾಷ್ಟ್ರದ ಮರ್ಮಜ್ಞ ರಸಿಕರ ಮೆಚ್ಚುಗೆಯನ್ನು ಪಡೆಯಿತು.  ಇದರ ಪರಿಣಾಮವಾಗಿ ನನಗೆ ಆಕಾಶವಾಣಿಯ ಬೇರೆ ಬೇರೆ ಕೇಂದ್ರಗಳಿಂದಲೂ, ಸಂಗೀತ ಸಭೆಗಳಿಂದಲೂ ಆಮಂತ್ರಣಗಳು ಬರತೊಡಗಿದವು. 

1935ರ ಆರಂಭದಲ್ಲಿ ನನ್ನ ಜೀವನದ ಮಹತ್ವದ ಘಟನೆಯೊಂದು ಒದಗಿತು.  ಒಂದು ಸಾಯಂಕಾಲ ನಾನು ಸಂತ ತುಕಾರಾಮಖ್ಯಾತಿಯ ವಿಷ್ಣುಪಂತ ಪಾಗನಿಸರ ಅಂಗಡಿಯಲ್ಲಿ ಕುಳಿತು ಅವರೊಡನೆ ಮಾತನಾಡುತ್ತಿರುವಾಗ ಆಕಸ್ಮಿಕವಾಗಿ ಮಂಜೀಖಾನ ಸಾಹೇಬರು ಅಲ್ಲಿಗೆ ಬಂದರು.  ನನ್ನ ಪರಿಚಯವನ್ನು ಖಾನ್ ಸಾಹೇಬರಿಗೆ ಮಾಡಿಕೊಡುತ್ತಾ ಪಾಗನಿಸರು ಕಲಿಯುವ ಪಿಪಾಸೆಯಿಂದ ಬಳಲುತ್ತಿದ್ದಾನೆ ತಮ್ಮಂಥವರು ಇವನ ಶಿರದ ಮೇಲೆ ವರದ ಹಸ್ತವನ್ನಿಟ್ಟು ಇವನಿಗೆ ವಿದ್ಯೆಯನ್ನು ಕೊಟ್ಟರೆ ಇವನು ಲಾಜವಾಬ ಗಾಯಕನಾಗಬಲ್ಲಎಂದು ನುಡಿದರು.  ಇವನ ರೆಕಾರ್ಡನ್ನು ಒಮ್ಮೆ ಕೇಳಬೇಕುಎಂದು ಖಾನಸಾಹೇಬರು ಹೇಳಿದಾಗ ನನ್ನ ಗೌಡಮಲ್ಹಾರ ಮತ್ತು ಆಠಾಣಾವನ್ನು ಪಾಗನಿಸರು ಕೇಳಿಸಿದರು.  ಮಂಜೀಖಾನ್ ಸಾಹೇಬರು ಈ ಹುಡುಗ ನಿಶ್ಚಿತವಾಗಿ ನನ್ನ ಸಂಗೀತ ಹಾಡಬಲ್ಲಎಂದು ಹೇಳಿದರು.  15 ದಿನಗಳ ಮೇಲೆ ಗಂಡಾ ಸಮಾರಂಭವನ್ನು ಆಚರಿಸಿ ತಾಲೀಮನ್ನು ಕೊಡಲಾರಂಭಿಸುವೆಎಂದು ಉತ್ತರವಿತ್ತರು.

ದೀಕ್ಷಾ ಸಮಾರಂಭದ ಅಂಗವಾಗಿ ನನಗೆ ಭೀಮಪಲಾಸ ರಾಗವನ್ನು ಹಾಡಿ ಕಲಿಸಲಾರಂಭಿಸಿದರು.  ಅವರ ಹಾಡಿಕೆಯ ಬೆಡಗು ಬಣ್ಣಿಸಲಸದಳ.  ಪ್ರತಿಯೊಂದು ಸ್ವರರೇಖೆಯಲ್ಲಿ ರಾಗದ ರೂಪ ಅಚ್ಚಳಿಯದೆ ಕಾಣುತ್ತಿತ್ತು.  ರಾಗದ ಸ್ವರಗಳನ್ನು ಹಾಡುವುದು ಮತ್ತು ಸ್ವರಗಳಲ್ಲಿ ರಾಗವನ್ನರಳಿಸುವುದು ಇವುಗಳಲ್ಲಿಯ ನವಿರಾದ ಅಂತರ ನನಗಂದು ವಿಶದವಾಯಿತು.  ಅವರು ಷಡ್ಜದ ಜೊತೆಗೆ ನಿಶಾದದ ಆಂದೋಲನ ಮಾಡಿದ ಬಗೆ ನನ್ನ ಬುದ್ಧಿಗೆ ಎಟುಕಲಿಲ್ಲ.  ನಾನು ಹುಚ್ಚನಂತಾದೆ.  ಮಧ್ಯಮದಿಂದ ಷಡ್ಜಕ್ಕೆ ಬಾಗುವ ಮೀಂಡುಅತ್ಯಂತ ಮೋಹಕವಾಗಿತ್ತು.  ಹಾಡಿಕೆಯಲ್ಲಿ ಎಲ್ಲೂ ಖಂಡವಿಲ್ಲದೆ, ಸ್ವರಗಳು ಒಂದಕ್ಕೊಂದು, ಒಂದರಲ್ಲೊಂದು ಹೊಂದಿಕೊಂಡಂತೆ ಕಾಣುತ್ತಿತ್ತು.  ಶ್ವಾಸವು ಎಲ್ಲಿ ಮುಗಿಯುತ್ತಿತ್ತೆಂಬುದು ಗೊತ್ತಾಗುತ್ತಿರಲಿಲ್ಲ.  ಅದು ಷಡ್ಜದಲ್ಲಿ ವಿಶ್ರಮಿಸುತ್ತಿತ್ತು.  ಒಂದೇ ಅಲಂಕಾರ ದಾಂಗುಡಿ ಬಿಟ್ಟು ಹೂ ತಳೆದು ಚಲ್ಲವರಿದಂತಿತ್ತು ಅವರ ಫಿರತ್’.  ಕಲಾಕಾರನ ಅಂತರಾಳದಲ್ಲಿ ಸಂಗೀತವು ಸೆಲೆಯೊಡೆದು ನಿರರ್ಗಳವಾಗಿ ಹರಿಯುತ್ತಿರುವಾಗ ಹೊರಗೆ ಕೇಳಿಬರುವ ಸಂಗೀತ ಅವರ ಪ್ರತಿಬಿಂಬವಾಗಿಬಿಡುತ್ತದೆ.  ಆ ಸಂಗೀತ ಎಂದೂ ಮಡುವುಗಟ್ಟಿ ನಿಲ್ಲುವುದಿಲ್ಲವೆಂದು ಅಂದು ನನಗೆ ಮನದಟ್ಟಾಯಿತು. ಪ್ರತಿ ಶ್ವಾಸವೂ ಸಂಗೀತಮಯವಾದಾಗ ಹಾಡುವ ಕ್ರಿಯೆ ಬೇರೆಯಾಗಿ ಉಳಿಯದೆ ಹಾಡಿದ್ದೆಲ್ಲ ಪವಾಡವಾಗುತ್ತದೆ.  ಆ ಶುಭದಿನ ನನ್ನ ಹೃದಯಾಂತರಾಳದಿಂದ ಮಲ್ಲಿಕಾರ್ಜುನನ ಪುನರ್ಜನ್ಮ ಆಯಿತೆಂದರೆ ಅತಿಶಯೋಕ್ತಿಯಲ್ಲ.

ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾದ ತಾಲೀಮು ಒಂದು ಗಂಟೆಯವರೆಗೆ ನಡೆಯುತ್ತಿತ್ತು.  ಮೊದಲು ನನಗೆ ಚೀಜು ಹೇಳಿಕೊಟ್ಟು ಆಮೇಲೆ ಸ್ವತಃ ಡಗ್ಗೆಯ ಮೇಲೆ ಠೇಕಾ ಹಿಡಿದು ನನಗೆ ತಮ್ಮ ಜೊತೆಗೆ ಹಾಡಿಸುತ್ತಿದ್ದರು.  ಅವರ ಉಪಜವೆಂದರೆ ಎಣೆಯಿಲ್ಲದ್ದು ಕೊನೆಯಿಲ್ಲದ್ದು.  ರಾಗದ ಸಮಗ್ರ ದೃಷ್ಟಿಯಿಂದ ತಾಳದ ಆವರ್ತನದಲ್ಲಿ ತದೇಕಚಿತ್ತವಾಗಿ, ಲಯದ ವಿಧವಿಧವಾದ ಗತಿಗಳಲ್ಲಿ ಅದ್ವೈತವಾಗಿ ಹೊಮ್ಮುವಂತಹುದು ಆ ಉಪಜ.  ಒಂದು ರಾಗ ಎಷ್ಟು ದಿವಸ ನಡೆಯುತ್ತಿದ್ದರೂ ಅದು ಪ್ರತಿಯೊಮ್ಮೆ ಹೊಸಹುಟ್ಟು ಪಡೆದು ಬರುತ್ತಿತ್ತು.  ಹಾಡಿಕೆಯ ವೈಖರಿ ದಿನವೂ ಬೇರೆಯೇ, ಹೊಸತೇ.
ಈ ತಾಲೀಮು ಶುರುವಾದ ನಂತರ ನನ್ನ ವ್ಯಕ್ತಿತ್ವದಲ್ಲಿಯೇ ಪರಿವರ್ತನೆಯಾಗಲಾರಂಭಿಸಿತು.  ಸಂಗೀತದ ಹೊರತು ಇನ್ಯಾವುದೂ ಬೇಡವೆಂದೆನಿಸಿತು.  ಬಾಯಾರಿದ್ದವನಿಗೆ ಅಮೃತ ಸಿಕ್ಕಂತಾಯಿತು.  ಖಾನ್ ಸಾಹೇಬರಿಂದ ನನಗೆ ಶಿವಮತ್ ಭೈರವ, ಲಲಿತ್, ದೇಶ್ ಕಾರ್, ನಟಬಿಹಾಗ ಮುಂತಾದ ರಾಗಗಳಲ್ಲಿ ತಾಲೀಮು ದೊರಕಿತು.  ಎಷ್ಟೋ ಬಾರಿ ಬಡೇಖಾನ್ ಸಾಹೇಬರು ಬರುತ್ತಿದ್ದು, ‘ವಾಹ, ವಾಹ, ಜೀತೆ ರಹೋಎಂದು ಉದ್ಗರಿಸಿ ತಮ್ಮ ಪ್ರಸನ್ನತೆಯನ್ನು ವ್ಯಕ್ತಪಡಿಸುತ್ತಿದ್ದರು. 

ನಾನು 1936ರಲ್ಲಿ ಧಾರವಾಡಕ್ಕೆ ಬಂದಾಗ ಪೂಜ್ಯ ಗುರು ನೀಲಕಂಠಬುವಾ ಅವರು ತೀರಿಕೊಂಡ ವಾರ್ತೆ  ನನ್ನ ಕಿವಿಗೆ ಬಿದ್ದಿದ್ದು ತಡವಾಗಿಯೇ.  ನಿದ್ರೆಯಲ್ಲಿದ್ದವನು ಬಳಿಯಲ್ಲಿದ್ದ ನಿಧಿಯನ್ನು ಅರಿಯದೇ ಕಳೆದುಕೊಂಡಂತಾಯ್ತು ನನ್ನ ಸ್ಥಿತಿ.  1937ರಲ್ಲಿ ಮಂಜೀಖಾನ್ ಸಾಹೇಬರು ನಮ್ಮನ್ನು ಬಿಟ್ಟು ಹೋದರು.  ನನ್ನ ತಲೆಯ ಮೇಲೆ ಆಕಾಶವೇ ಕುಸಿದು ಬಿದ್ದಂತಾಯಿತು.  ತುಟಿಗೊತ್ತಿ ಹಿಡಿದ ಅಮೃತ ಪಾತ್ರೆ ಕೈಯಿಂದ ಜಾರಿ ಬಿದ್ದಂತಾಯಿತು.  ನಾನು ಕಂಡ ಹೊಂಗನಸು ಹಳವಂಡವಾಯಿತು.

ದುಃಖದ ಸಾಂದ್ರತೆ ಕಡಿಮೆಯಾದಾಗ ಗುರುವೆಂದರೆ ಯಾವನೊಬ್ಬ ವ್ಯಕ್ತಿಯ ಶರೀರ ಮಾತ್ರವಲ್ಲ.  ಅವನಿತ್ತ ಪ್ರೇರಣೆ, ಹೊತ್ತಿಸಿದ ದೀಪವೆಂದು ಮನವರಿಕೆಯಾಯಿತು.  ಆ ದೀಪ ಆರಕೂಡದು.  ಅಗಲಿದ ಗುರುವನ್ನು ಹೃದಯದಲ್ಲಿ ಪ್ರತಿಷ್ಠಾಪಿಸಬೇಕೆಂದು ನಿರ್ಧರಿಸಿದಾಗ ನನ್ನ ರಿಯಾಜಿಗೆ ಹೊಸ ಚೈತನ್ಯ ಕೂಡಿಕೊಂಡಿತು. ಗುರುವಿನ ಸ್ಮರಣೆ ನನ್ನ ಅಂತರಂಗದಲ್ಲಿ ಅಂತರಗಂಗೆಯಾಗಿ ಹರಿಯುತ್ತಲೇ ಇತ್ತು.

ಆದರೆ ಇನ್ನೂ ಶೇಷವಾಗಿ ಉಳಿದಿರುವ ಜಯಪುರ ಘರಾಣೆಯ ಗಾಯಕಿಯನ್ನು ಪೂರ್ತಿಯಾಗಿ ಗ್ರಹಿಸಬೇಕೆಂಬ ಹಂಬಲವು ತೀವ್ರವಾಗಿ ನಾನು ಮುಂಬೈಗೆ ಹೋದೆ.  ಪರಮಗುರು ಅಲ್ಲಾದಿಯಾಖಾನ್ ಸಾಹೇಬರನ್ನು ಭೇಟಿಯಾಗಿ ಇನ್ನು ನನ್ನ ಮುಂದಿನ ಗತಿಯೇನು?” ಎಂದು ಕೇಳಿದಾಗ ಭುರ್ಜಿಖಾನ್ ಹತ್ತಿರ ಕಲಿ.  ಏನೂ ಚಿಂತೆ ಮಾಡಬೇಡಎಂದರು.  ಮರುದಿನವೇ ನನ್ನ ತಾಲೀಮು ಪ್ರಾರಂಭವಾಯಿತು.  ಆದರೆ ಹಲವಾರು ಕಾರಣದಿಂದ ತಾಲೀಮು ಸರಿಯಾಗಿ ನಡೆಯದೇ ಹೋದಾಗ ನಾನು ಹೋಗುವುದನ್ನು ನಿಲ್ಲಿಸಿದೆ.  ಎರಡು ವರ್ಷಗಳ ನಂತರ ಅವರು ಕೊಲ್ಹಾಪುರದಲ್ಲಿ ಇರಹತ್ತಿದಾಗ ಅಲ್ಲಿಗೆ ಹೋಗಿ ಕಲಿಯಲಾರಂಭಿಸಿದೆ.

1939ರಲ್ಲಿ ಧರಮಪುರ ಮಹಾರಾಜರ ಅಧ್ಯಕ್ಷತೆಯಲ್ಲಿ ಜರುಗಿದ ಕಾನ್ಫರೆನ್ಸಿನಲ್ಲಿ ಪರಮಗುರು  ಅಲ್ಲಾದಿಯಾಖಾನ್ ಸಾಹೇಬರು ನನಗೂ ಕೂತು ಹಾಡಲು ಅಪ್ಪಣೆಯಿತ್ತರು.  ಅವರು ಅಂದು ಹಾಡಿದ ಬಿಹಾಗಡಾ, ಸೋಹನಿ, ಫರಜ ನಾನೆಂದೂ ಮರೆಯುವಂತಿಲ್ಲ.  ಲಯದ ವಿವಿಧ ಗತಿಗಳಲ್ಲಿ ಅವರು ಶಬ್ಧಗಳನ್ನು ತೇಲಿಸುವ ರೀತಿ ಹಾಗೂ ತಾನದ ಜಟಿಲತೆ ಇವು ಈ ಶ್ರೇಷ್ಠ ಗಾಯಕನಿಗೇ ಮೀಸಲು.  ಈ ಸಂದರ್ಭದಲ್ಲಿ ತಮ್ಮ ಜೊತೆಗೆ ಹಾಡಲು ಅವರು ನನ್ನನ್ನು ಕೇಳಿಕೊಂಡಿದ್ದು ನನ್ನ ಭಾಗ್ಯವೆಂದು ತಿಳಿದಿದ್ದೇನೆ.  ಇನ್ನೊಂದು ಸಲ ನಾನು ಅಲ್ಲಾದಿಯಾ ಖಾನ್ ಸಾಹೇಬರ ಜೊತೆಗೆ ಹಾಡಿದ್ದೆಂದರೆ ಪುಣೆಯಲ್ಲಿ.  ನಾನು ನನ್ನ ಗುರು ಬುರ್ಜಿಖಾನ್ ಸಾಹೇಬರು, ದೊಡ್ಡ ಸಾಹೇಬರ ಜೊತೆಗೆ ಹಾಡಲು ಕುಳಿತುಕೊಂಡದ್ದಾಯಿತು.  ಶುದ್ಧನಟದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.  ನಡು ನಡುವೆ ಖಾನ್ ಸಾಹೇಬರು ನನಗೆ ಹಾಡಲು ಹೇಳುತ್ತಿದ್ದರು.  ಒಮ್ಮೆ ನಾನು ಒಂದು ತಾನು ಪೂರ್ತಿಗೊಳಿಸಿ ಸಮಕ್ಕೆ ಎರಗಿದಾಗ ಉಸ್ತಾದರು ಹಿಂತಿರುಗಿ ನೋಡಿ ಮೆಚ್ಚಿ ನಕ್ಕರು.  ಅವರ ಜೊತೆಗೆ ಫರಜಹಾಡುವಾಗ ನಾನು ಮೇಲಿನ ಸ್ವರಗಳಲ್ಲಿ ತಾನ ಹಾಡಿದೆ.  ಆದರೆ ಕೆಳಗಿಳಿದು ಮುಖಡೆಯನ್ನು ಹಿಡಿಯುವ ಅವಧಾನವಿರಲಿಲ್ಲ.  ಖಾನ್ ಸಾಹೇಬರು  ನಾನು ಬಿಟ್ಟಲ್ಲಿ ದನಿಗೂಡಿಸಿ ತಾನನ್ನು ಪೂರ್ತಿಮಾಡಿ ಮತ್ತೊಮ್ಮೆ ನಕ್ಕರು.  ಆ ಎರಡೂ ನಗೆಗಳ ರೀತಿ ಬೇರೆ ಬೇರೆ.  ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಸ್ಮರಿಸುವಾಗ ನನಗೆ ಅಲಾದಿಯಾಖಾನ್ ಸಾಹೇಬರ ಮಾತು ಮಂಜೀಖಾನ್ ಸಾಹೇಬರ ಸ್ವರಗುಂಜನ ಕೇಳಿಸುತ್ತದೆ. 

ತಾಲದಲ್ಲಿಯ ಬಂದಿಶ್ ಮತ್ತು ಉಪಜ ಇವು ನನ್ನ ನಿರಂತರ ಚಿಂತನೆಯ ವಿಷಯವಾಗಿದ್ದವು.  ಒಂದು ದಿನ ಧಾರವಾಡದ ಹಲಗೇರಿಯ ಕೆರೆಯ ಹತ್ತಿರ ಹಾದುಹೋಗುವಾಗ ಎಂದಿನಂತೆ  ಮೆಲುದನಿಯಲ್ಲಿ ಹಾಡುತ್ತ ನಡೆದಿದ್ದೆ.  ತಾಲದ ಆವರ್ತನದಲ್ಲಿ ಹಾಡುತ್ತಿರುವಾಗ ಉಪಜಗಳು ಲಯದ ವಿವಿಧ ಗತಿಗಳಲ್ಲಿ ರೂಪುಗೊಂಡು, ಇಡೀ ಇಡೀ ಆವರ್ತನೆಯು ತುಂಬ ಸಹಜವಾಗಿ ಚಲಿಸುತ್ತ ಅದೇ ಓಟದಲ್ಲಿ ಮುಖಡೆಯಿಂದೊಡಗೂಡಿ ಆಕರ್ಷಕವಾದ ರೀತಿಯಲ್ಲಿ ಸಮ್ಮಿನಲ್ಲಿ ಕೊನೆಗೊಂಡವು.  ನನಗಾದ ಆನಂದ ಹೇಳುವಂತಿಲ್ಲ.  ಬಾಯಾರಿದವನಿಗೆ ಒಮ್ಮೆಲೆ ನೀರು ಕಂಡಷ್ಟು ಆನಂದವಾಯಿತು.  ಒಂದೊಂದು ಕಾಸಿಗೆ ಚಡಪಡಿಸುವವನಿಗೆ ಬಂಗಾರದ ಗಣಿಯೇ ಸಿಕ್ಕಂತಾಯಿತು.  ಉಪಜನಿರ್ಮಿತಿಯ ಈ ದೃಷ್ಟಿಯನ್ನು ನನಗಿತ್ತ ಗುರುಗಳಾದ ಭುರ್ಜಿಖಾನರಿಗೆ ನಾನು ಚಿರಋಣಿಯಾಗಿದ್ದೇನೆ.  ಶಿಷ್ಯನ ಗುಣಾವಗುಣಗಳನ್ನು ತಿಳಿದು ಅವನಿಗೆ ಏನು ಬೇಕಾಗಿದೆ ಎಂಬುದನ್ನರಿತು, ಅದನ್ನೇ ನೀಡುವಾತ ನಿಜವಾದ ಗುರು.  ಮಂಜೀಖಾನ್ ಸಾಹೇಬರು ಸಂಗೀತ ಪ್ರಪಂಚದ ಅನಂತವಾದ ಆಕಾಶವನ್ನು ತೋರಿಸಿದ್ದರು.  ಪರಿಶುದ್ಧವಾದ ಶ್ರುತಿಯೊಂದಿಗೆ ರಾಗವನ್ನು ವಿಸ್ತರಿಸುವುದು ಹಾಗೂ ಅದರ ಜೊತೆಗೆ ರಾಗಹಾನಿಯಾಗದೆ ತಾನಿನಿಂದ ರಾಗವನ್ನು ವಿಸ್ತರಿಸುವುದು ಹೇಗೆಂಬುದನ್ನು ಹಾಡಿ ಮತ್ತು ನನ್ನಿಂದ ಹಾಡಿಸಿ ರೂಢಿಗೊಳಿಸುತ್ತಿದ್ದರು.  ಒಂದು ರಾಗ ಹೇಗೆ ಬೆಳೆಯುತ್ತದೆ ಎಂದು ಮಂಜೀಖಾನ್ ಸಾಹೇಬರು ಹೇಳಿದ ಮಾತು ನೆನಪಾಗುತ್ತದೆ.  ತಾಲದ ಗತಿಯಲ್ಲಿ ರಾಗ ವಿಸ್ತಾರ ಹೊಂದುತ್ತದೆ.  ಬೇರೆ ಬೇರೆ ಗತಿಗಳು ತಾಲದಲ್ಲಿ ಅಡಕವಾಗಿದ್ದ ಕಾರಣ ತಾಳಾಂಗ ಗಾಯಕಿಯಿಂದ ರಾಗ ಪ್ರಸಾರಕ್ಕೆ ಹೆಚ್ಚಿನ ಅವಕಾಶ ದೊರಕಿದಂತಾಗಿ ಹೊಸ ಹೊಸ ಸಾಂಗೀತಿಕ ಸಂದರ್ಭಗಳು ಹುಟ್ಟುತ್ತಿದ್ದಂತೆ ರಾಗವು ಒಂದು ಅನಂತ ಕಲ್ಪನಾವಿಲಾಸವಾಗಿಬಿಡುತ್ತದೆ.  ಪ್ರತಿ ಕ್ಷಣದ (ಮಾತ್ರೆ) ಗರ್ಭದಿಂದ ಹೊಸ ಹುಟ್ಟು ಸಂಭವಿಸುವುದರಿಂದ ರಾಗದ ಬೆಳವಣಿಗೆಯಲ್ಲಿ ಲಯತಾಲಗಳ ಪ್ರಯೋಜನವನ್ನು ತಿಳಕೊಳ್ಳುವುದು ಮಹತ್ವದ್ದು.  ಜಯಪುರ ಗಾಯಕಿಯಲ್ಲಿ ಲಯತಾಲಗಳ ವಿಶಿಷ್ಟ ಆವಿಷ್ಕಾರವು ಧ್ರುಪದದ ಸಂಸ್ಕಾರದ ಕುರುಹಾಗಿದೆ.  1950ರಲ್ಲಿ ಬುರ್ಜಿಖಾನ್ ಸಾಹೇಬರು ತೀರಿಕೊಂಡಾಗ ನನ್ನ ಜೀವನದ ಇನ್ನೊಂದು ದೀಪಸ್ತಂಬ ಕಳಚಿಬಿದ್ದಂತಾಯ್ತು.

ಈ ನಡುವೆ ನನಗೆ ವಚನ ಹಾಡಲು ಪ್ರೇರಣೆಯಿತ್ತವರು ನನ್ನ ಆತ್ಮೀಯ ಸ್ನೇಹಿತರಾದ ಅ. ನ. ಕೃಷ್ಣರಾಯರು ಮತ್ತು ಬಸವನಾಳ ಮಾಸ್ತರರು.  ವಚನವನ್ನು ಕಾವ್ಯವಾಚನದ ರೀತಿಯಲ್ಲಿ ಹೇಳಬೇಕೆ ಅಥವಾ ತಾಲಕ್ಕೆ ಜೋಡಿಸಿ ಹಾಡಬೇಕೆ ಎಂಬ ವಾದವು ನಡೆಯುತ್ತಿದ್ದಾಗ, ನಾನು ಅವುಗಳ ಅರ್ಥ ಹಾನಿಯಾಗಗೊಡದೆ ರಾಗ ತಾಳಗಳಲ್ಲಿ ಹಾಡಲಾರಂಭಿಸಿದೆ.  ಆಗ ವಚನಗಳನ್ನೋದಿ ಅವುಗಳ ಅರ್ಥ ಅರಿತುಕೊಳ್ಳಬೇಕಾಯಿತು.  ಏಕೆಂದರೆ ತಿಳಿಯದೆ ಹಾಡಿದ ಹಾಡು ಪ್ರಾಣಹೀನ ಹಾಗೂ ನೀರಸವಾಗಿ ಶ್ರೋತೃಗಳ ಮೇಲೆ ಪ್ರಭಾವ ಬೀರಲಾರದು.  ನನ್ನನ್ನು ಕಲಕದೆ ಇದ್ದದ್ದು ಕಲೆಯಾಗಲಾರದು.

ಒಬ್ಬ ಸಾಧಕನ ತಾಲೀಮು ಸಫಲವಾಗುವುದು ರಿಯಾಜು ಮಾಡಿದಾಗ.  ಅವು ವರ್ಷಗಟ್ಟಲೆ ನಡೆದ ನಂತರ ಸಾಧಕನು ಕೆಲಕಾಲ ಅಂತರ್ಮುಖಿಯಾಗಿ ಆತ್ಮ ನಿರೀಕ್ಷಣೆ ಮಾಡಬೇಕಾಗುತ್ತದೆ.  ಸಾಧಕನು ಸ್ವರತ್ರಾಟಕ ಸಿದ್ಧಿಯನ್ನು ಪಡೆದು, ತಾಲದ ಆವರ್ತನೆಯನ್ನು ತನ್ನ ರಕ್ತಾಭಿಸರಣದಲ್ಲಿಯೇ ಕಂಡು, ತನ್ನ ನಾಡಿಯ ಮಿಡಿತದಲ್ಲಿಯೇ ಲಯದ ಗತಿಗಳನ್ನು ಅನುಭವಿಸಿ, ತನ್ನ ಅಂತರಾಳದಲ್ಲಿ ರಾಗದ ಸಮಗ್ರ ಪರಿಕಲ್ಪನೆಯನ್ನು ಮಾಡಿಕೊಳ್ಳಬೇಕಾಗುತ್ತದೆ.  ರಾಗದಲ್ಲಿಯೇ ಅನುರಾಗ-ವಿರಾಗಗಳನ್ನು ಕಂಡಾಗ ಸಂಗೀತ ಕೇವಲ  ಇಂದ್ರೀಯ ವಿಷಯವಾಗಿರದೆ ಅದೊಂದು ಆಧ್ಯಾತ್ಮಿಕ ರಸಾನುಭಾವವೆಂದು ನನಗೆ ಮನದಟ್ಟಾಯಿತು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1976ರಲ್ಲಿ ಸಂಗೀತದ ಸ್ನಾತಕೋತ್ತರ ವಿಭಾಗ ಆರಂಭಿಸಲಾಯಿತು.  ನನ್ನನ್ನು ಈ ವಿಭಾಗದ ಪ್ರಪ್ರಥಮ ಗೌರವ ನಿರ್ದೇಶಕ ಎಂದು ನೇಮಿಸಲಾಯಿತು.  ಹಾಡುವುದು ಮತ್ತು ಹಾಡುಗಾರಿಕೆಯನ್ನು ಕಲಿಸುವುದು ಎರಡೂ ಭಿನ್ನವಾದವು.  ಒಳ್ಳೆಯ ಸಂಗೀತಗಾರ ಒಳ್ಳೆಯ ಶಿಕ್ಷಕನಾಗಬಲ್ಲನೆಂದು ಹೇಳಲಾಗುವುದಿಲ್ಲ.  ಸಂಗೀತದ ಸಮಗ್ರ ದೃಷ್ಟಿಯನ್ನು ಪಡೆಯಲು ಪ್ರಾಯೋಗಿಕ ಪಕ್ಷದೊಂದಿಗೆ ಅದರ ಐತಿಹಾಸಿಕ ಹಿನ್ನೆಲೆ ಹಾಗೂ ಶಾಸ್ತ್ರೀಯ ಪಕ್ಷವನ್ನರಿಯುವುದು ಅವಶ್ಯಕ.  ಈ ದೃಷ್ಟಿಯಿಂದ ಅಧ್ಯಾಪನ ಕಾರ್ಯವು ನನಗೆ ಹೆಚ್ಚಿನ ಅಧ್ಯಯನದ ಸುಯೋಗವನ್ನು ಒದಗಿಸಿಕೊಟ್ಟಿತು.  ನನ್ನ ಸಂಗೀತ ಸಾಧನೆಗೆ ಅಧ್ಯಾಪನದ ಹೊಸ ಆಯಾಮ ದೊರೆಯುವಂತೆ ಪ್ರೇರೇಪಿಸಿತು.

ನಿಮ್ಮ ಉತ್ತಮ ಮೆಹಫಿಲ್ಲುಗಳು ಯಾವುವು ಎಂಬ ಶ್ರೋತೃಗಳ ಪ್ರಶ್ನೆಗೆ ನನ್ನ ಉತ್ತರವೊಂದೇ:  ಆ ಮಹಾರಸಿಕ ಶಿವನೇ ಬಲ್ಲ.  ಮೆಹಫಿಲ್ಲುಗಳಲ್ಲಿ ಸಂಗೀತದ ಸೃಷ್ಟಿಗೆ ಕುಳಿತಾಗ ಯಾವ ಸಭೆಯು ಹೆಚ್ಚು ಯಶಸ್ವಿಯಾಯಿತು ಎಂಬುದು ಶ್ರೋತೃಗಳೇ ಹೇಳಬೇಕಾದ ವಿಷಯ.  ತಂಬೂರಿಯ ಧ್ವನಿಯು ನಮ್ಮೀ ನಿತ್ಯವ್ಯವಹಾರದ ಲೋಕದ ಮೇಲೆ ತೆರೆಯನ್ನು ಹಾಕುತ್ತಲೇ ನಾನು ನೋಡುವುದು ಸ್ವರಸೃಷ್ಟಿಯನ್ನಷ್ಟಲ್ಲದೆ ಇನ್ಯಾವುದೂ ಅಲ್ಲ.  ಸಂಗೀತದಲ್ಲಿ ಮುಳುಗಿದ ಬಳಿಕ ಅಲ್ಲಿ ಹಾಗಾಯಿತು.  ಇಲ್ಲಿ ಹೀಗಾಯಿತು ಎಂದು ಹೇಳಲು ಎಚ್ಚರವೇ ಉಳಿಯುವುದಿಲ್ಲ.  ನನ್ನ ಹಾಡು ಆರಂಭವಾದ ನಂತರ ಯಾರು ಬಂದು ಕೂತರು, ಯಾರು ಎದ್ದು ಹೋದರು ಎಂಬುದು ನನಗೆ ಗೊತ್ತೇ ಇರುವುದಿಲ್ಲ.  ನಮ್ಮ ಮನಸ್ಸಿನಲ್ಲಿಯೇ ತಾಸುಗಟ್ಟಲೆ ಮೆಹಫಿಲ್ಲು ನಡೆಯುತ್ತಿರುತ್ತದೆ.  ಆದ್ದರಿಂದ ನನ್ನ ಮೆಹಫಿಲ್ಲುಗಳ ವಿಷಯ ಹೇಳಬೇಕಾದದ್ದು ಶ್ರೋತೃಗಳ ಪಾಲಿಗೆ ಸೇರಿದ್ದು.

ಮನಸೂರರ ಪುತ್ರ ರಾಜಶೇಖರ ಮನ್ಸೂರರ ಮುಂದುವರಿಕೆ:  ಮೇ 1991ರಲ್ಲಿ ನಮ್ಮ ತಂದೆಗೆ ಮೂತ್ರಪಿಂಡದ ತೊದರೆ ಪ್ರಾರಂಭವಾಯಿತು.  ಬೆಂಗಳೂರು ಕಿಡ್ನಿ ಫೌಂಡೇಶನ್ನಿನ ಡಾ. ತಲವಾಲ್ಕರರು ಅವರನ್ನು ನೋಡಿಕೊಳ್ಳುತ್ತಿದ್ದರು.   ರಕ್ತ ಶುದ್ಧಿಗೊಳಿಸಲು ಆವರ ಧಮನಿಗಳ ಮೂಲಕ ರಕ್ತವು ಹೋಗುತ್ತಿದ್ದಾಗ, “ಮಗನೇ ಭೈರವಿ ರಾಗದ ದುಃಖ ದೂರ ಕರಿಯೇ ಎಂಬ ಬಂದಿಶ್ ಹಾಡುಎಂದರು.  ಅದನ್ನು ಹಾಡಿದಾಗ ಅದನ್ನು ತಿದ್ದಿ ಸರಿಮಾಡಿ ನನ್ನನ್ನು ಇನ್ನೂ ಹಾಡುವಂತೆ ಪ್ರೋತ್ಸಾಹಿಸಿದರು.  ಅವರ ಜೀವನಾಡಿಯಲ್ಲಿ ಸಂಗೀತವೇ ಹರಿಯುತ್ತಿತ್ತೇನೋ.  ವಾಸಿಯಾದ ಮೇಲೂ ತಾವು ಸರಿಹೊಗಿದ್ದೇನೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಲು ಸಂಗೀತವೇ ಅವರಿಗೆ ಒರೆಗಲ್ಲಾಯಿತು.  ತಂಬೂರಿಯನ್ನು ತರಿಸಿಕೊಂಡು ಆಸ್ಪತ್ರೆಯಲ್ಲಿ ಹಾಡಿ ಸಮಾಧಾನವಾದ ನಂತರ ಮನೆಗೆ ಹೋದರು.  ವಾಸಿಯಾದ ನಂತರ ಮೊದಲಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಇತರರಿಗೆ ಗಾಬರಿ ಹುಟ್ಟಿಸುವಂತೆ ದೇಶದಾದ್ಯಂತ ಹಲವಾರು ಮೆಹಫಿಲ್ಲುಗಳನ್ನು ನೀಡಿದರು.  1992ರಲ್ಲಿ ಅವರ ಜೀವನದುದ್ದಕ್ಕೂ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿ, ಉತ್ಕೃಷ್ಟ ಸಂಗೀತವನ್ನು ಸೃಷ್ಟಿಸಿದ್ದ ಶ್ವಾಸಕೋಶಕ್ಕೆ ಕ್ಯಾನ್ಸರ್ ಬಂದಿತ್ತು.  ಅವರಿಗೆ ಆ ವಿಷಯವನ್ನು ಹೇಳುವ ಧೈರ್ಯ ನಮಗ್ಯಾರಿಗೂ ಇರಲಿಲ್ಲ.  ಅವರ ಸಾವಿಗೆ ಇನ್ನು 25 ದಿನಗಳಿದ್ದಾಗ ಮುರುಘಾಮಠದಲ್ಲಿ ವಾರ್ಷಿಕ ಸಂಗೀತ ಸೇವೆಯನ್ನು ಮಾಡುವ ಆಸೆಯನ್ನು ವ್ಯಕ್ತಪಡಿಸಿದರು.  ನಾವೆಲ್ಲರೂ ಕಂಗಾಲಾದೆವು.  ಆದರೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡು ಆಗಸ್ಟ್ 17. 1992ರಂದು ಅವರನ್ನು ಕರೆದೊಯ್ದೆವು.  ಹೇಮನಟರಾಗದಲ್ಲಿ ತುಂಬಾ ಅರ್ಥಪೂರ್ಣವಾದ ತುಮ್ ಬಿನ್ ಮೈಕೊ ಕಲನ ಪರತ ಹೈ, ಬೀತ್ ಗಯೆಇವುಗಳನ್ನು ಹಾಡಿದರು.  ಈವರೆಗೆ ನಾವ್ಯಾರೂ ಕೇಳದಿದ್ದ ವಚನವೊಂದನ್ನು ಹಾಡಿ ತಮ್ಮ ಸೇವೆಯನ್ನು ಮುಗಿಸಿದರು.  ಸೆಪ್ಟಂಬರ್ 12ರಂದು ಅಪ್ಪ ತಮ್ಮ ಕೊನೆಯುಸಿರೆಳೆಯಲು ಪ್ರಾರಂಭಿಸಿದಾಗ ನಾನು ಅವರ ತಲೆಯನ್ನು ನನ್ನ ಮಡಿಲಿನಲ್ಲಿ ಇರಿಸಿಕೊಂಡು ತಂಬೂರಿಯನ್ನು ಮೀಟಲಾರಂಭಿಸಿದೆ.  ಬದುಕಿನುದ್ದಕ್ಕೂ ಅವರ ಜೀವದ ಗೆಳೆಯನಾಗಿದ್ದ ತಂಬೂರಿಯ ನಾದ ತಮಗೆ ಕೇಳುತ್ತಿದೆ ಎನ್ನುವ ಕ್ಷೀಣವಾದ ಸೂಚನೆಯು ವ್ಯಕ್ತವಾಗುತ್ತಿತ್ತು.  ಅದನ್ನು ಕೇಳುತ್ತಲೇ ತುಂಬಾ ಶಾಂತವಾಗಿ ತಮ್ಮ ಸಂಗೀತ ರಸಯಾತ್ರೆಯನ್ನು ಅಪ್ಪ ಮುಗಿಸಿದರು


ಈ ಮಹಾನ್ ಸಂಗೀತ ತಪಸ್ವಿ ಡಾ. ಮಲ್ಲಿಕಾರ್ಜುನ ಮನಸೂರ ಚೇತನಕ್ಕೆ ನಮ್ಮ ನಮನಗಳು.

Tag: Mallikarjun Mansur

ಕಾಮೆಂಟ್‌ಗಳಿಲ್ಲ: