ಸೋಮವಾರ, ಸೆಪ್ಟೆಂಬರ್ 2, 2013

ಅರವಿಂದ ಅಡಿಗ

ಅರವಿಂದ ಅಡಿಗ

ತಮ್ಮ ದಿ ವೈಟ್ ಟೈಗರ್ಕಾದಂಬರಿಗೆ 2008ರ ವರ್ಷದ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದು ವಿಶ್ವಪ್ರಸಿದ್ಧರಾದ ಅರವಿಂದ್ ಅಡಿಗರು ಜನಿಸಿದ ದಿನ ಅಕ್ಟೋಬರ್ 23, 1974.  ಅರವಿಂದ್ ಅಡಿಗರು ಜನಿಸಿದ್ದು ಚನ್ನೈನಲ್ಲಿ.  ಶಾಲೆಯಲ್ಲಿ ಓದಿ ಬಾಲ್ಯ ಕಳೆದದ್ದು ಮಂಗಳೂರಿನಲ್ಲಿ.  ಮುಂದೆ ಮನೆಯವರೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ ಅರವಿಂದ್  ಅಲ್ಲಿನ ಜೇಮ್ಸ್ ರುಸ್ ಅಗ್ರಿಕಲ್ಚರಲ್ ಕಾಲೇಜಿನಲ್ಲಿ ಮುಂದಿನ ಶಿಕ್ಷಣವನ್ನು ಪಡೆದರು.  ಕೋಲಂಬಿಯಾ ವಿಶ್ವವಿದ್ಯಾಲಯ, ನ್ಯೂಯಾರ್ಕ ಮತ್ತು ಮ್ಯಾಗ್ಡಲೀನ್ ಕಾಲೇಜು, ಆಕ್ಸಫೋರ್ಡನಲ್ಲಿ ಆಂಗ್ಲ ಸಾಹಿತ್ಯವನ್ನು ಅಭ್ಯಸಿಸಿದರು.

2006ರ ವರ್ಷದಿಂದೀಚೆಗೆ ಪತ್ರಿಕೆಗಳಲ್ಲಿ ಅಂಕಣಕಾರರಾದ ಅರವಿಂದ್ ಅಡಿಗರು ಟೈಮ್ಸ್, ತೆಹೆಲ್ಕಾ, ದಿ ಡೈಲಿ ಬೀಸ್ಟ್, ದಿ ಫೈನಾನ್ಷಿಯಲ್ ಟೈಮ್ಸ್, ದಿ ಇಂಡಿಪೆಂಡೆಂಟ್, ಮಿಂಟ್, ದಿ ಹಿಂದೂಸ್ಥಾನ್ ಟೈಮ್ಸ್ ಮುಂತಾದ ಅಂತರಾಷ್ತ್ರೀಯ ಪತ್ರಿಕೆಗಳಲ್ಲಿ ತಮ್ಮ ಅಂಕಣಗಳಿಂದ ಪ್ರಸಿದ್ಧಿ ಪಡೆಯುವುದರ ಜೊತೆಗೆ ಕತೆಗಾರರಾಗಿ ಸಹಾ ಪ್ರಸಿದ್ಧರಾದರು.  ‘An Extract from AA's new novel, Last Man in Tower’, "The Elephant",  "The Sultan's Battery", "Smack" ಅರವಿಂದ್ ಅಡಿಗರ ಪ್ರಮುಖ ಕಥೆಗಳು. 

2008ರ ವರ್ಷದಲ್ಲಿ ಪ್ರಕಟಗೊಂಡ ದಿ ವೈಟ್ ಟೈಗರ್ಕೃತಿ ವಿಶ್ವದಾದ್ಯಂತ ಅಸಂಖ್ಯಾತ ಓದುಗರ ಮೆಚ್ಚುಗೆ ಗಳಿಸುವುದರ ಜೊತೆಗೆ ಆ ವರ್ಷದ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಗಳಿಸಿತು.  ಯುವ ಬರಹಗಾರನೊಬ್ಬನ ಪ್ರಥಮ ಪುಸ್ತಕಕ್ಕೆ ಬಂದ ಈ ಗೌರವ ಗಮನಾರ್ಹವಾದದ್ದು.  ಅದಕ್ಕೂ ಮಿಗಿಲಾದದ್ದು ಈ ಪುಸ್ತಕ  ವಿಶ್ವದಾದ್ಯಂತದ ಪತ್ರಿಕೆಗಳು ಮತ್ತು ಮಹನೀಯರಿಂದ ಪಡೆದ ಪ್ರಶಂಸೆ.  ವಿ. ಎಸ್. ನೈಪಾಲರಂತಹ ಮಹನೀಯರು  ಮ್ಯಾಜಿಕಲ್ ಥಿಂಕಿಂಗ್ಎಂದು ಅಡಿಗರ ಸಾಮರ್ಥ್ಯವನ್ನು  ಪ್ರಶಂಸಿಸಿದರು.

ಅರವಿಂದ ಅಡಿಗರ ಮುಂದೆ ಬಂದ ಪುಸ್ತಕಗಳು 2008ರ ವಾರ್ಷದಲ್ಲಿ ‘ಬಿಟ್ವೀನ್ ದಿ ಅಸಾಸಿನೆಶನ್ಸ್’ ಹಾಗೂ 2011ರ ವರ್ಷದಲ್ಲಿ  ಲಾಸ್ಟ್ ಮ್ಯಾನ್ ಇನ್ ಟವರ್ದಿ ವೈಟ್ ಟೈಗರ್ಮೂಲಕ ನಾವು ಕಂಡೂ ಕಾಣದಂತೆ ಬೇಕಾಬಿಟ್ಟಿಯಾಗಿ ಬಿಟ್ಟುಬಿಟ್ಟಿರುವ ಭಾರತ, ಭಾರತೀಯತೆ ಎಂಬ ಮುಸುಕು ಹಾಕಿಕೊಂಡಿರುವ ಅಂತಃಪ್ರಜ್ಞೆಗಳನ್ನು ಮುಕ್ತವಾಗಿ ತೆರೆದಿಟ್ಟು ನಾವು ನಮಗೇ ಬಣ್ಣಬಳಿದುಕೊಂಡು ಬಿಳಿ ಹುಲಿಗಳಾಗಿರಿಸಿಕೊಂಡಿರುವ ನಮ್ಮತನವನ್ನು ನಮಗೇ ಹುಡುಕಿಕೊಟ್ಟಿರುವ ಅರವಿಂದ ಅಡಿಗರು ಒಬ್ಬ ಹೊಸರೀತಿಯ ಬರಹಗಾರನಾಗಿ ಭರವಸೆಯನ್ನು ಹುಟ್ಟಿಸಿದ್ದಾರೆ.  

ಅರವಿಂದ ಅಡಿಗರು ಕನ್ನಡದಲ್ಲೂ ಕೆಲವೊಂದು  ಲೇಖನಗಳನ್ನು ಬರೆದಿದ್ದಾರೆ.


ಅರವಿಂದ್ ಅಡಿಗರ ಸಾಮರ್ಥ್ಯ ಇನ್ನೂ ಹೆಚ್ಚು ಪ್ರಜ್ವಲಿಸಲಿಉತ್ತಮ ಕೃತಿಗಳನ್ನು ಮೂಡಿಸಲಿ. ಅವರ ಬದುಕು ಸುಂದರವಾಗಿರಲಿ ಎಂದು ಹಾರೈಸುತ್ತಾ ಅವರಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸೋಣ. 

Tag: Aravind Adiga

ಕಾಮೆಂಟ್‌ಗಳಿಲ್ಲ: