ಬುಧವಾರ, ಸೆಪ್ಟೆಂಬರ್ 4, 2013

ಹಾರೈಕೆ

ಹಾರೈಕೆ
  
ಬಯಸುತಿರುವೆನು ನಿಮಗೆ ಶುಭವಾಗಲಿ
ಬರುವ ಭಾಗ್ಯದ ಸಿರಿಯು ನಿಮಗಾಗಲಿ.

ಅಂಗಳದಿ ರಂಗೋಲಿ ನಗುನಗುತಲಿರಲಿ
ಮಂಗಳದಾ ಘಂಟೆ ತಾ ಮೊಳಗುತಿರಲಿ.

ನಡುಮನೆಯೊಳು  ತೊಟ್ಟಿಲು ತೂಗುತಲಿರಲಿ
ಈ ಜೋಗುಳದಿ ಜಗವೆಲ್ಲ ಮೈ ಮರೆಯಲಿ.

ನಗುವ ನಂದಾದೀಪ ಬೆಳಗುತಲಿರಲಿ
ಅಂತರಾಳವನೀ ಬೆಳಕು ತೊಳೆಯುತಲಿರಲಿ.

ನೆಲದಾಯಿ ಹೂಮುಡಿದು ನಸುನಗುತಲಿರಲಿ
ಮುಗಿಲೆದೆಗೂ ಈ ಗಂಧ ಸೂಸುತಲಿರಲಿ.

ಮಲ್ಲಿಗೆಯ ಹಂದರದಲಿ ಚಂದಿರ ತೂಗಾಡಿ
ತಾರೆಗಳು ಆರ್ತರನು ಸಂತೈಸುತಿರಲಿ.

ದೂರತೀರದಾ ಕನಸು ಕೈಗೂಡಲಿ
ತೀರದಾ ಬಯಕೆಗಳು ಬಾಗಿಲಿಗೇ ಬರಲಿ.

ಗುಡಿಗಳಲಿಹ ದೇವರು ಕಣ್ಣುತೆರೆಯಲಿ
ಗುಡಿಸಲಿಗೂ ಸಮೃದ್ಧಿ ತಂದು ಸುರಿಯಲಿ.

ಎದೆಯಾಳದಾ ಪ್ರೀತಿಯಾರತಿ ಆರದೇ ಇರಲಿ
ಇದು ಬಾಳ ಬೆಳಗುವ ಹೊಂಜ್ಯೋತಿಯಾಗಿ ಬರಲಿ.

ಸಾಹಿತ್ಯ: ಶಶಿಕಲಾ ವೀರಯ್ಯಸ್ವಾಮಿ


Tag: Haaraike

ಕಾಮೆಂಟ್‌ಗಳಿಲ್ಲ: