ಭಾನುವಾರ, ಅಕ್ಟೋಬರ್ 27, 2013

ವಾಸುದೇವಾಚಾರ್ಯರ ‘ನಾ ಕಂಡ ಕಲಾವಿದರು’ಮೊನ್ನೆ ತಾನೇ ಸಂಗೀತ ಲೋಕದ ಶ್ರೇಷ್ಠ ವಾಗ್ಗೇಯಕಾರರಲ್ಲೊಬ್ಬರಾದ ಮೈಸೂರು ವಾಸುದೇವಾಚಾರ್ಯರ ‘ನೆನಪುಗಳು’ ಕೃತಿಯನ್ನು ಓದಿದ ಬಗ್ಗೆ ಬರೆದಿದ್ದೆ.  ಅದೇ ಗುಂಗಿನಲ್ಲಿ ಅವರ ‘ನಾ ಕಂಡ ಕಲಾವಿದರು’ ಪುಸ್ತಕವನ್ನೂ ಓದಿದೆ.

ಶ್ರೇಷ್ಠರ ಬಗ್ಗೆ ಶ್ರೇಷ್ಠರಿಂದಲೇ ಕೇಳಿದರೇ ಚೆನ್ನ.  ಆದರೆ ಸಾಮಾನ್ಯವಾಗಿ ಅದು ಆಗಿ ಬರುವುದು ಅಪರೂಪ.  ಅದೂ ಸಮಕಾಲೀನ ವಿದ್ವಾಂಸರ ಬಗ್ಗೆಯಂತೂ ಅದು ಇಲ್ಲವೇ ಇಲ್ಲವೆನ್ನುವಷ್ಟು!  ಕಲಾವಿದ ತನ್ನ ಕ್ಷೇತ್ರದ ಮತ್ತೊಬ್ಬ ಕಲಾವಿದನನ್ನು  ತನ್ನ ಪ್ರತಿಸ್ಪರ್ಧಿಯಾಗಿ ಪ್ರತಿಷ್ಠೆಯ ಮನೋಭಾವದಿಂದ ಕಾಣುವುದು ಮಾನವೀಯ ಸಹಜಗುಣವೆಂಬಂತೆ ಸರ್ವೇ ಸಾಮಾನ್ಯವಾದ ವಿಚಾರ.  ಆದರೆ ಮೈಸೂರು ವಾಸುದೇವಾಚಾರ್ಯರ ‘ನಾ ಕಂಡ ಕಲಾವಿದರು’ ಇದಕ್ಕೊಂದು ಅಪವಾದವಾದಂತಹ ಹೃದಯಂಗಮ ಕೃತಿ.  ಅವರಿಗೆ ತಮ್ಮ ಹಿರಿಯರು ಮಾತ್ರವಲ್ಲದೆ,  ಸಮಕಾಲೀನ ಕಲಾವಿದರು, ಕಿರಿಯರ ಬಗ್ಗೆ ಇದ್ದ ಗೌರವ, ಕಲೆ ಮತ್ತು ಕಲಾ ಪೋಷಕರ ಬಗೆಗಿದ್ದ ಪೂಜ್ಯಭಾವ ಇಲ್ಲಿ ಎದ್ದು ಕಾಣುತ್ತದೆ.

ಈ ಕೃತಿಗೆ ಮುನ್ನುಡಿ ಬರೆದಿರುವ ಡಿ. ವಿ. ಜಿ ಅವರ ಮಾತುಗಳು ಈ ಕೃತಿಯ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತವೆ.  “ ಶ್ರೀ ವಾಸುದೇವಾಚಾರ್ಯರಿಗೆ ಭಗವತ್ಕೃಪೆಯಿಂದ ಬಂದಿರುವ ಭಾಗ್ಯಗಳಲ್ಲಿ ಮಹಾಪುರುಷ ಮೈತ್ರಿಯೂ ಒಂದು. ಅವರ ಜೀವಮಾನದಲ್ಲಿ ನಾಲ್ಕಾರು ಮಂದಿ ಪ್ರಸಿದ್ಧ ವಿದ್ವದ್ಗಾಯಕರ ಸ್ನೇಹ ವಾತ್ಸಲ್ಯಗಳನ್ನು ಸಂಪಾದಿಸಿ ಅವರ ವ್ಯಕ್ತಿ ಸ್ವರೂಪವನ್ನು ಬಹು ಹತ್ತಿರದಿಂದ ಕಂಡು ಗ್ರಹಿಸುವ ಅವಕಾಶ ಅವರ ಪಾಲಿಗೆ ಬಂದಿತ್ತು.  ಈ ಅವಕಾಶಗಳ ಫಲಿತಾಂಶ ಈ ಗ್ರಂಥ.  ಇದರಲ್ಲಿಯ ವ್ಯಕ್ತಿ ಚಿತ್ರಣಗಳು ವಿಶದಗಳಾದ ಅಂಗಾಂಗ ಭಂಗಿಗಳಿಂದ ಹೃದಯಂಗಮಗಳಾಗಿವೆ.  ಅಂತಸ್ಫೂರ್ತಿ ಜೀವಿಗಳಾದ ಕಲಾ ವ್ಯಾಸಂಗಿಗಳ ಮನಸ್ಸು ಹೇಗೆ ಹೇಗೆ ಹಾರಾಡುತ್ತದೆ, ಲೋಕದ ಚೇಷ್ಟೆಗಳಿಗೆ ಅವರ ಸ್ವಭಾವ ಹೇಗೆ ಚೇಷ್ಟೆ ಮಾಡುತ್ತದೆ ಎಂಬುದನ್ನಿಲ್ಲಿ ಚೆನ್ನಾಗಿ ಕಾಣಬಹುದು.”

ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ, ರಾಮನಾಡ್ ಶ್ರೀನಿವಾಸ ಅಯ್ಯಂಗಾರ್, ಮೂಗೂರು ಸುಬ್ಬಣ್ಣ, ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್, ಮೈಸೂರು ಸದಾಶಿವರಾಯರು, ಪದ್ಮನಾಭಯ್ಯನವರು, ಬೆಂಗಳೂರು ನಾಗರತ್ನಮ್ಮ, ಕೆಂಪೇಗೌಡ, ಮಹಾ ವೈದ್ಯನಾಥ ಅಯ್ಯರ್, ತಿರುಕ್ಕೋಡಿಕಾವಲ್ ಕೃಷ್ಣಯ್ಯ,  ಟೈಗರ್ ವರದಾರ್ಯರು ಮತ್ತು ಮುತ್ತಯ್ಯ ಭಾಗವಂತರಂತಹ ಚರಿತ್ರಾರ್ಹ ಶ್ರೇಷ್ಠ ವಿದ್ವಾಂಸರ ಕಥಾನಕಗಳು ಇಲ್ಲಿವೆ.  ಇಂಥಹ ಮಹನೀಯರ ಬಗ್ಗೆ ತಿಳಿದುಕೊಳ್ಳುವುದೇ ಒಂದು ಸೌಭಾಗ್ಯ.  ಮೈಸೂರು ವಾಸುದೇವಾಚಾರ್ಯರ ಸುಲಲಿತ, ಹಾಸ್ಯಪೂರ್ಣ, ಆಕರ್ಷಕ ಬರಹದಲ್ಲಿ ಇದನ್ನು ಓದಲು ದಕ್ಕಿದ್ದು ಕನ್ನಡಿಗರಾದ ನಮ್ಮ ಪುಣ್ಯ. 


 Tag: Na Kanda Kalavidaru

ಕಾಮೆಂಟ್‌ಗಳಿಲ್ಲ: