ಶುಕ್ರವಾರ, ಅಕ್ಟೋಬರ್ 25, 2013

ಮೈಸೂರು ವಾಸುದೇವಾಚಾರ್ಯರ ಕೃತಿ ‘ನೆನಪುಗಳು’


ಸಂಗೀತ ಕ್ಷೇತ್ರದಲ್ಲಿ ಅಜರಾಮರರಾದ ಮೈಸೂರು ವಾಸುದೇವಾಚಾರ್ಯರ ‘ನೆನಪುಗಳು’ ಎಂಬ ಪುಟ್ಟ ಕೃತಿಯನ್ನು ಓದಿ ಅತ್ಯಂತ ಸಂತಸವಾಯಿತು.  ಈ ಪುಸ್ತಕ ಶ್ರೇಷ್ಠ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರ ಬದುಕಿನ ಪ್ರಮುಖ ಗಳಿಗೆಗಳನ್ನು ಗುರುತಿಸುವುದರ ಜೊತೆಗೆ, ಒಂದು ಕಾಲದ ಮೈಸೂರೆಂಬ ಅದ್ಭುತ ನಗರಿಯನ್ನು, ಆ ಕಾಲದ ರಾಜ ಮನೆತನವನ್ನು, ವೈಭವವನ್ನು, ಕಲಾ ಲೋಕವನ್ನು, ಸಾಂಸ್ಕ್ರತಿಕ ಶ್ರೇಷ್ಠತೆಯನ್ನು ಮನಮುಟ್ಟುವಂತೆ ಪರಿಚಯಿಸುತ್ತದೆ.  ಮೈಸೂರು ವಾಸುದೇವಾಚಾರ್ಯರ ಶ್ರೇಷ್ಠ  ಹಾಸ್ಯ ಪ್ರಜ್ಞೆ ಈ  ಪುಸ್ತಕದ ಓದನ್ನು, ಒಂದು ಪುಟ್ಟ ರಸಯಾತ್ರೆಯಂತೆ ಮಾಡುತ್ತದೆ.  ಪುಟ್ಟ ರಸಯಾತ್ರೆ ಏಕೆಂದರೆ ಇದು ಸುಮಾರು ನೂರು ಪುಟಗಳ ಪುಟ್ಟ ಪುಸ್ತಕ.  ಈ ಪುಸ್ತಕ ಬಂದಾಗ ಪ್ರಜಾವಾಣಿಯಲ್ಲಿ ಈ ಪುಸ್ತಕದ ಅಭಿಪ್ರಾಯ ಹೀಗಿದೆ:  “ಓದಿದ ಮೇಲೆ ಎನಿಸುವ ಒಂದೇ ಕೊರತೆ ಎಂದರೆ ನೂರು ಪುಟದ ಈ ಪುಸ್ತಕ ಸಾವಿರ ಪುಟವಾಗಬಾರದಿತ್ತೆ ಎಂಬುದು;  ಇಂತಹ ರಸಕವಳವನ್ನು ನೀಡಲು ಆಚಾರ್ಯರನ್ನು ವಿಧಿ ಉಳಿಸಲಿಲ್ಲವೆಂಬುದು”.

“ಮೂರನೆಯ ತ್ಯಾಗರಾಜರೆಂದು ಖ್ಯಾತರಾದ ವಾಸುದೇವಾಚಾರ್ಯರು ಸಣ್ಣ ಮಗುವಾಗಿರುವಾಗಲೇ ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನವನ್ನು ಪ್ರವೇಶಿಸಿದರು.  ಚಾಮರಾಜ ಒಡೆಯರ ಆಶ್ರಯದಿಂದ ಸಂಗೀತ ವಿದ್ಯಾಸಂಪನ್ನರಾದರು.  ನಾಲ್ವಡಿ ಕೃಷ್ಣರಾಜರ ಆಸ್ಥಾನ ಗೌರವಕ್ಕೆ ಪಾತ್ರರಾದರು.  ಶ್ರೀಮಜ್ಜಯಚಾಮರಾಜ ಒಡೆಯರಿಗೆ ಗುರುಗಳಾದರು.  ಹೀಗೆ ಮೈಸೂರಿನ ನಾಲ್ವರು ಅರಸರ ಕಾಲದ ಪರಿಸರದಲ್ಲಿ ಬೆಳೆದ ಆಚಾರ್ಯರು ತಾವು ಕಂಡ ಮಹಾನ್ ಕಲಾವಿದರುಗಳನ್ನೂ ಮೈಸೂರಿನಲ್ಲಿ ತಮಗೆ ಹಿರಿಯರೂ ಸಮಸ್ಕಂದರೂ ಆದ ಪ್ರಸಿದ್ಧ ವೈಣಿಕ ಗಾಯಕರನ್ನೂ ಪ್ರಸ್ತಾಪತ್ವೇನ ತಮ್ಮ ಬದುಕಿನಲ್ಲಿ ತಾವು ಕಂಡು ಉಂಡ ಹಲವಾರು ಕಹಿಸಿಹಿಗಳನ್ನೂ ‘ನಾ ಕಂಡ ಕಲಾವಿದರು’ ಮತ್ತು ಈ ‘ನೆನಪುಗಳು’ ಎಂಬ ಎರಡು ಪುಸ್ತಕಗಳಲ್ಲಿ ಅಹಂಕಾರ ಮಮಕಾರಗಳ ಲೇಪವಿಲ್ಲದಂತೆ ಚಿತ್ರಿಸಿದ್ದಾರೆ.  ಈ ಎರಡೂ ಚಿತ್ರಶಾಲೆಗಳನ್ನು ಹೊಕ್ಕು ನೋಡಿದರೆ ಅವುಗಳ ಸಮ್ಮೋಹಕತೆಯಿಂದ ವಿಸ್ಮಯವಾಗುತ್ತದೆ.  ಆಚಾರ್ಯರು ಸಂಸ್ಕೃತ ಮತ್ತು ತೆಲುಗಿನಲ್ಲಿ ಅಮೂಲ್ಯವಾದ ಕೀರ್ತನೆಗಳನ್ನು ರಚಿಸಿದರು.  ‘ಕನ್ನಡದಲ್ಲಿಯೂ ಹಾಗೆಯೇ ರಚಿಸಿಕೊಟ್ಟಿದ್ದರೆ!’ ಎಂದುಕೊಳ್ಳುತ್ತಿದ್ದವರ ಹಂಬಲವನ್ನು ಹೋಗಲಾಡಿಸುವುದಕ್ಕಾಗಿಯೋ ಎಂಬಂತೆ ಆಚಾರ್ಯರು ತಮ್ಮ ಕಡೆಯ ಕಾಲದಲ್ಲಿ ಈ ಎರಡು ಗದ್ಯಕಾವ್ಯಗಳನ್ನು ನಮಗೆ ಅನುಗ್ರಹಿಸಿದರು.” ಎಂದಿದ್ದಾರೆ ಜಿ. ಪಿ. ರಾಜರತ್ನಂ.  ಮುಂದಿನ ಬಹಳಷ್ಟು ಮಾತುಗಳಲ್ಲಿಯೂ ಜಿ. ಪಿ. ರಾಜರತ್ನಂ ಅವರು ಈ  ಪುಸ್ತಕದ ಕುರಿತಾಗಿ ಹೇಳಿರುವ  ಮಾತುಗಳನ್ನು ಸಂಕ್ಷಿಪ್ತವಾಗಿ ನಿರೂಪಿಸುವ ಪ್ರಯತ್ನ ನನ್ನದಾಗಿದೆ.

ಈ ಪುಸ್ತಕಗಳನ್ನು ಬರೆಯಲು ಪ್ರೇರಣೆಯಾದವರು ಡಿ. ವಿ. ಜಿ ಎಂದು ಮೈಸೂರು ವಾಸುದೇವಾಚಾರ್ಯರು ತಮ್ಮ ಮೊದಲ ಮಾತುಗಳಲ್ಲಿ ನುಡಿದಿದ್ದಾರೆ. 

“ನೆನಪುಗಳು” – ಎಂಟು ಅಚ್ಚುಕಟ್ಟಾದ ಪರಿಚ್ಛೇದಗಳ ಪುಸಕ.  ಮೊದಲನೆಯ ಎರಡು ಪರಿಚ್ಛೇದಗಳಲ್ಲಿ ಆಚಾರ್ಯರ ಬಾಲ್ಯ ವಿದ್ಯಾರ್ಜನೆಗಳ ಚಿತ್ರವಿದೆ;  ಉತ್ಕಟವಾದ ಹಂಬಲದಿಂದಲೂ ದೃಢವಾದ ದೈವಭಕ್ತಿಯಿಂದಲೋ ಪ್ರಭುಗಳ ಕೃಪಾಶ್ರಯವನ್ನು ಪಡೆದು, ಸದ್ಗುರುವಿನ ಅನುಗ್ರಹದಿಂದ ಸಂಗೀತವಿದ್ಯಾಪಾರಂಗತರಾಗಿ, ಮೈಸೂರು ಅರಮನೆಯನ್ನು ಸೇರಿದ ಕತೆಯಿದೆ; ಅರಮನೆಯಲ್ಲಿ ನೋಡಿದ ಗಂಭೀರ ಜೀವನ, ರಸಿಕ ಜೀವನ, ಹಾಸ್ಯ ಜೀವನ, ವೈಭೋಗ ಜೀವನಗಳ ವರ್ಣನೆಯಿದೆ.  ಲವಲವಿಸುತ್ತಿರುವ ಹಲವಾರು ವ್ಯಕ್ತಿಚಿತ್ರಗಳಿವೆ.

ಹಳೇ ಮೈಸೂರಿನ ಕೋಟೆ ಪೇಟೆ ಅಗ್ರಹಾರಗಳ ವರ್ಣನೆಗೆ ಮೀಸಲಾದದ್ದು ಮೂರನೆಯ ಪರಿಚ್ಛೇದ.  ಇದನ್ನು ಓದಿದ ಇಂದಿನ ಕಾಲದ ನಮಗೆ ಅಪರಿಚಿತವಾದ ಮಾಯಾಲೋಕದಲ್ಲಿ ವಿಹರಿಸಿದ ಹಾಗಾಗುತ್ತದೆ.  ಮುಂದಿನ ಎರಡು ಪರಿಚ್ಛೇದಗಳಲ್ಲಿ ಆಗಿನ ಕಾಲದ ನಾಟಕ ಕಂಪನಿಗಳನ್ನು ಪ್ರಸ್ತಾಪಿಸುತ್ತಾರೆ.  ಪ್ರಮುಖರಾದ ನಟರ ಪರಿಚಯ ಮಾಡಿಕೊಡುತ್ತಾರೆ.  ನಾಟಕರಂಗದಲ್ಲಿ ತಾವು ಕಂಡು ವಿನೋದಿಸಿದ ಕೆಲವು ವಿನೋದದ ಪ್ರಕರಣಗಳನ್ನು ಸ್ಮರಿಸುತ್ತಾರೆ.  ಇವುಗಳನ್ನು ಓದುವಾಗ ನಮಗೆ ನಗು ಉಕ್ಕೇರುವಂತಾಗುತ್ತದೆ.   ಮೈಸೂರಿನ ನಾಟಕ ಕಲೆಗೆ ಕೀರ್ತಿ ತಂದ ಉದಾತ್ತ ನಾಯಕ ನಟ ವರದಾಚಾರ್ಯರಿಗೂ ಅವರ ಜೊತೆಯ ವಿದೂಷ ನಟ ಕೃಷ್ಣಮೂರ್ತಿ ಅವರಿಗೂ ಸಂಬಂಧಿಸಿದ ಅನೇಕ ಆಂತರ್ಯದ ವಿಚಾರಗಳು ಇಲ್ಲಿ ವರ್ಣಿತವಾಗಿವೆ.

ಉಳಿದ ಮೂರು ಪರಿಚ್ಛೇದಗಳಲ್ಲಿ ಎರಡು ವಾಸುದೇವಾಚಾರ್ಯರು ‘ಕೇಳಿದ ಕೆಲವು ಕಥೆಗಳು’ ಮತ್ತು ಅವರಿಗೆ ಪ್ರಿಯರಾದ ‘ರಸಿಕರ ಸರಸ’.  ಇಲ್ಲಿ ಹೇಳಿರುವ ಒಂದೊಂದು ಬಿಡಿ ನೆನಪೂ ಒಂದು ಮುಕ್ತಕ.  ಮಿತವಾದ ಮಾತುಗಳಲ್ಲಿ, ಉಚಿತವಾದ ವಿವರಣೆಗಳೊಂದಿಗೆ, ಕಾಲ ದೇಶ ಪರಿಸ್ಥಿತಿಗಳ ಆವರಣವನ್ನು ಕಲ್ಪಿಸುವ ಸಾಮರ್ಥ್ಯ ಇಲ್ಲಿನ ಕಥೆಗಳಲ್ಲಿ ಸುವ್ಯಕ್ತವಾಗಿದೆ.

ಮೈಸೂರು ವಾಸುದೇವಾಚಾರ್ಯರು ತಾವು ರಚಿಸಿದ ಸಂಗೀತ ಕೃತಿಗಳಿಗೆ ಒದಗಿದ ಪ್ರೇರಣೆಗಳಾದ ಸ್ನೇಹ, ಕೆಲವೊಂದು ಕುಟಿಲ ಮಾತು, ನೋಡಿದ ನಾಟಕದ ಸನ್ನಿವೇಶ, ಸ್ನೇಹ, ಪ್ರೀತಿಯ ಆಹ್ವಾನದ ವಾತಾವರಣ, ದೈವಕೃಪೆ ಮುಂತಾದವುಗಳನ್ನು ಮನಮುಟ್ಟುವಂತೆ ಎಂಟನೆಯ ಪರಿಚ್ಛೇದದಲ್ಲಿ ಹೇಳಿದ್ದಾರೆ.

ಮೈಸೂರಿನ ರಾಜಮನೆತನದ, ಜನಜೀವನದ, ಸಂಗೀತಕಲಾಪ್ರಪಂಚದ ಸಾಂಸ್ಕೃತಿಕ ಇತಿಹಾಸವನ್ನು ತಿಳಿಯಲು ಬಯಸುವವರಿಗೆ ಆಚಾರ್ಯರ ‘ನೆನಪುಗಳು’ ಒಂದು ಉಜ್ವಲವಾದ ಉಪಕರಣ.

ಆಚಾರ್ಯರು ಈ ಪುಸ್ತಕವನ್ನು ಬರೆದದ್ದು 97ರ ವಯಸ್ಸಿನಲ್ಲಿ.  ಈ ಪುಸ್ತಕ ಪ್ರಕಟವಾಗುವುದರರೊಳಗಾಗಿ ಆಚಾರ್ಯರು ಪರಮಪದವನ್ನು ಪಡೆದದ್ದರಿಂದ ಪುಸ್ತಕದ ಕೊನೆಗೊಂದು ‘ಕೊನೆಯನುಡಿ’ ಬಂದಿದೆ. ದೊಡ್ಡ ರೀತಿಯಲ್ಲಿ ಬದುಕಿದವರು ಮರಣಕಾಲದಲ್ಲಿಯೂ ಅದೇ ದೊಡ್ಡ ರೀತಿಯಿಂದ ದೇಹ ತ್ಯಾಗಮಾಡುತ್ತಾರೆ ಎಂಬುದು ಇಲ್ಲಿ ಅನುಭವವಾಗುತ್ತದೆ. 

ಆಚಾರ್ಯರ ಸಂಗೀತಕಲಾಪ್ರತಿಭೆಗೆ, ಸಂಗೀತಶಾಸ್ತ್ರಪಾಂಡಿತ್ಯಕ್ಕೆ ಅವರ ಕಛೇರಿಗಳೂ ಅವರ ಕೃತಿಗಳೂ ಸಾಕ್ಷಿಗಳೆಂದು ತಜ್ಞರು ಒಪ್ಪಿಕೊಂಡಿರುತ್ತಾರೆ.  ಸಂಸ್ಕೃತದಲ್ಲಿ ಅವರು ರಚಿಸುತ್ತಿದ್ದ ಆಶುಕವಿತೆಗಳ ಚಮತ್ಕಾರವನ್ನು ರಸಿಕರು ಮೆಚ್ಚಿಕೊಂಡಿದ್ದರು.  ತಮ್ಮ ಬದುಕಿನ ರಸಾನುಭವಗಳನ್ನು ಅಭಿನಯಪೂರ್ವಕವಾಗಿ ಅವರು ನಿರೂಪಿಸುತ್ತಿದ್ದರಂತೆ.  ಇದನ್ನು ಅವರ ‘ನೆನಪುಗಳು’ ಕೃತಿಯೂ ಮನದಟ್ಟು ಮಾಡಿಕೊಡುವಂತಿದೆ.  ಸಂಗೀತಪ್ರಿಯರ ಗೋಷ್ಠಿಯಲ್ಲಿ ವಾಸುದೇವಾಚಾರ್ಯರ ಹೆಸರು ಪ್ರಸಿದ್ಧ ವಾಗ್ಗೇಯಕಾರರೆಂದು ಹೇಗೆ ಶಾಶ್ವತವಾಗಿರುವುದೋ ಹಾಗೆಯೇ ಸಾಹಿತ್ಯಪ್ರಿಯರ ಗೋಷ್ಠಿಯಲ್ಲಿ ‘ನೆನಪುಗಳು’ ಕೃತಿಯೂ ಚಿರಕಾಲ ನಿಲ್ಲುವಂತದ್ದು. 

Tag: Nenapugalu

1 ಕಾಮೆಂಟ್‌:

Manjunath Manooru ಹೇಳಿದರು...

ಇದರ ಪ್ರತಿಗಳು ಸಿಗುತ್ತವೆಯೇ...?