ಶುಕ್ರವಾರ, ಡಿಸೆಂಬರ್ 27, 2013

ಹೀಗಾಗುತ್ತೆ


ಹೀಗಾಗುತ್ತೆ

ಜೀವನದಲ್ಲಿ ಬಹಳಷ್ಟು ವೇಳೆ ಹೀಗಾಗುತ್ತೆ.  ಕಳೆದ ವಾರ ಶಿರ್ಡಿ ದೇಗುಲದಲ್ಲಿದ್ದಾಗ ಸುಮಾರು ಜನರ ಒಂದು ದೊಡ್ಡ ಕ್ಯೂ.  ಎಷ್ಟು ಹೊತ್ತಿಗೆ ದರುಶನವೋ ಎಂಬ ದುಗುಡದಲ್ಲಿಯೇ ಸರದಿಯಲ್ಲಿ ಹೆಜ್ಜೆ ಸಾಗುತ್ತಿತ್ತು.  ಸುಮಾರು ಹೊತ್ತು ಹೀಗೇ ಸರದಿಯಲ್ಲಿ ಸಾಗುತಿದ್ದಾಗ, ನಮಗಿಂತ ಎಷ್ಟೋ ಹಿಂದಿದ್ದವರನ್ನು ನಮ್ಮ ಸರಳುಗಳ ಹಿಂದಿನ ಬೀಗ ತೆಗೆದು ನಮಗಿಂತ ನಾಲ್ಕು ಸರಳುಗಳ ಆಚೆ ಮುಂದೆ ಮುಂದೆ ಬಿಡಲಾಗುತ್ತಿತ್ತು.  ಕೊನೆಗೆ ಯಾರು ಮೊದಲು, ಯಾರು ಕೊನೆ ಎಂಬಂತಹ ವೆತ್ಯಾಸವಿಲ್ಲದೆ ದರುಶನ ಪಡೆದು ಹೊರಬಂದೆವು!  ಬದುಕಿನಲ್ಲಿ ಹಲವಾರು ವಿಚಾರಗಳಲ್ಲಿ ಹೀಗಾಗುವುದುಂಟು.  ಈ ನಿಟ್ಟಿನಲ್ಲಿ ನಿನ್ನೆಯ ದಿನ ಜಿ. ಪಿ. ರಾಜರತ್ನಂ ಅವರು ಬರೆದಿರುವ ‘ಯೇಸು ಕ್ರಿಸ್ತ’ ಪುಸ್ತಕವನ್ನು ಓದುತ್ತಿದ್ದಾಗ ಈ ಕಥೆ ಮನಸೆಳೆಯಿತು.

ಒಬ್ಬನಿಗೆ ಒಂದು ದ್ರಾಕ್ಷೆ ತೋಟವಿತ್ತು.  ಅವನು ಒಂದು ದಿನ ಬೆಳಿಗ್ಗೆ ತೋಟಕ್ಕೆ ಕೂಲಿಗಾರರನ್ನು ಗೊತ್ತು ಮಾಡಲು ಹೋದನು.  ದಿನಕ್ಕೆ ‘ಒಂದು ಹಣ’ ಕೂಲಿಯನ್ನು ಗೊತ್ತುಮಾಡಿ ಅವರನ್ನು ತೋಟಕ್ಕೆ ಕಳಿಸಿದನು.

ಮೂರುಗಂಟೆ ಕಳೆಯಿತು.  ಪೇಟೆಯಲ್ಲಿ ಸೋಮಾರಿಗಳಾಗಿ ಕೆಲವರು ನಿಂತಿದ್ದರು.  ‘ತೋಟದಲ್ಲಿ ಕೆಲಸಕ್ಕೆ ಹೋಗಿ, ಕೊಡಬೇಕಾದದ್ದು ಕೊಡುತ್ತೇನೆ’ ಎಂದು ತೋಟಗಾರನು ಅವರನ್ನು ಕಳಿಸಿದನು.

ಆರುಗಂಟೆ ಕಳೆಯಿತು, ಇನ್ನು ಕೆಲವರನ್ನು ಕಳಿಸಿದನು.  ಒಂಬತ್ತು ಗಂಟೆಯಾಯಿತು; ಇನ್ನೂ ಕೆಲವರನ್ನು ಕಳಿಸಿದನು.  ಹನ್ನೊಂದು ಗಂಟೆಯೂ ಕಳೆಯಿತು.  ಆಗಲೂ ಕೆಲವರು ಕೂಲಿಯಿಲ್ಲದೆ ನಿಂತಿದ್ದರು.  ತೋಟಗಾರನು ‘ನನ್ನ ತೋಟಕ್ಕೆ ಹೋಗಿ ಕೆಲಸಮಾಡಿ.  ನ್ಯಾಯವಾದುದನ್ನು ಕೊಡುವೆನು’ ಎಂದು ಅವರನ್ನೂ ಕಳಿಸಿದನು.

ಸಂಜೆಯಾಯಿತು.  ಕೂಲಿಗಾರರಿಗೆ ಅವರ ಕೂಲಿಯನ್ನು ತೋಟಗಾರನು ಕೊಡಹೇಳಿದನು.  ಕಟ್ಟಕಡೆಗೆ ಬಂದವರು ‘ಒಂದು ಹಣ’ ಕೂಲಿ ಪಡೆದರು.  ಮೊತ್ತಮೊದಲು ಬಂದವರು ತಮಗೆ ಹೆಚ್ಚು ಕೂಲಿ ಬರುವುದೆಂದುಕೊಂಡರು;  ಆದರೆ ಅವರಿಗೂ ಒಂದೇ ಹಣ ದೊರಕಿತು.  ಆಗ ಅವರು ತೋಟಗಾರನನ್ನು ದೂರಿ ಗೊಣಗುಟ್ಟಿದರು; ‘ಮೊದಲು ಬಂದವರಿಗೂ ಒಂದೇ, ಕಡೆಗೆ ಬಂದವರಿಗೂ ಒಂದೇ’ ಎಂದರು.

ಅದಕ್ಕೆ ತೋಟಗಾರನು ‘ಅಯ್ಯಾ, ನಿಮಗೇನು ಅನ್ಯಾಯವಾಯಿತು?  ಒಂದು ಹಣಕ್ಕೆ ತಾನೆ ನೀವು ಒಪ್ಪಿ ಬಂದದ್ದು? ನಿಮ್ಮ ಕೂಲಿ ಏನೋ ಅದನ್ನು ತೆಗೆದುಕೊಂಡು ಹೋಗಿ.  ನಿಮಗೆ ಕೊಟ್ಟಷ್ಟೇ ಕಡೆಯವನಿಗೂ ಕೊಡುವೆನು.  ನನ್ನ ಹಣವನ್ನು ನನ್ನ ಮನಸ್ಸಿಗೆ ಬಂದಂತೆ ನಾನು ಕೊಡಬಹುದಲ್ಲವೆ?  ನನ್ನ ಒಳ್ಳೆಯತನ ನಿಮಗೇಕೆ ಕಣ್ಣುಚುಚ್ಚಬೇಕು’ ಎಂದನು.


“ಹೀಗೆ ದೇವರ ರಾಜ್ಯದಲ್ಲಿ ಕಡೆಗೆ ಬಂದವರು ಮೊದಲಾಗುವರು, ಮೊದಲು ಬಂದವರು ಕೊನೆಗಾಗುವರು” ಎನ್ನುತ್ತಾರೆ ಏಸು ಕ್ರಿಸ್ತ.  

ಕಾಮೆಂಟ್‌ಗಳಿಲ್ಲ: