ಅರ್ನೆಸ್ಟ್ ಹೆಮಿಂಗ್‍ವೇ
ಅರ್ನೆಸ್ಟ್ ಹೆಮಿಂಗ್‍ವೇ
ಅರ್ನೆಸ್ಟ್ ಹೆಮಿಂಗ್‍ವೇ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ಅಮೆರಿಕದ ಪ್ರಸಿದ್ಧ ಕಾದಂಬರಿಕಾರರು. ಇಂದು ಅವರ ಸಂಸ್ಮರಣಾ ದಿನ.
ಅರ್ನೆಸ್ಟ್ ಹೆಮಿಂಗ್‍ವೇ ಇಲಿನಾಯ್ಸ್‍ನ ಓಕ್ ಪಾರ್ಕ್ ಎಂಬಲ್ಲಿ 1899 ಜುಲೈ 21ರಂದು ಜನಿಸಿದರು. ಬೇಟೆಯ ಬಗ್ಗೆ ಇವರಿಗೆ ಅಪಾರ ಆಸಕ್ತಿ. ಆಫ್ರಿಕದಲ್ಲಿ ಅನೇಕ ದೊಡ್ಡ ಬೇಟೆಗಳಲ್ಲಿ ಭಾಗವಹಿಸಿ ಮರಣಾಂತಕ ಆಕಸ್ಮಿಕಗಳಿಂದ ಪಾರಗಿದ್ದರು.
ಅರ್ನೆಸ್ಟ್ ಹೆಮಿಂಗ್‍ವೇ ಒಂದನೆಯ ಮಹಾಯುದ್ಧದಲ್ಲಿ ಆ್ಯಂಬುಲೆನ್ಸ್ ದಳ ಸೇರಿ, ಯುದ್ಧ ವರದಿಗಾರರಾಗಿ ದುಡಿದರು. ಪ್ಯಾರಿಸ್‍ನಲ್ಲಿ ದೇಶತ್ಯಾಗಿಗಳ ಸಂಪರ್ಕಕ್ಕೆ ಬಂದು ಎಜ್ರಾಪೌಂಡ್ ಮತ್ತು ಗೆರ್ಟೂಡ್ ಸ್ಪೈನ್‍ರಿಂದ ಪ್ರಭಾವಿತರಾದರು.
ಅರ್ನೆಸ್ಟ್ ಹೆಮಿಂಗ್‍ವೇ ಬಾಲ್ಯದಲ್ಲಿ ತಂದೆಯೊಡನೆ ಬೇಟೆಗೆ ಹೋಗುತ್ತಿದ್ದಾಗ ಆದ ಸಾವಿನ ದರ್ಶನ ಮುಂದೆ ಇವರ ಬರೆವಣಿಗೆಯ ಮೇಲೆ ಪ್ರಭಾವಬೀರಿತು. 1923-24ರ ಅವಧಿಯಲ್ಲಿ ಈತ ಬರೆದ ಸಣ್ಣಕಥೆಗಳು(ಇನ್ ಅವರ್ ಟೈಮ್ಸ್) ಯುದ್ಧದ ಫಲವಾಗಿ ಜೀವನಶ್ರದ್ಧೆ ನಶಿಸಿಹೋಗಿ ನರಳುತ್ತಿದ್ದ ಜನತೆಯ ಬದುಕನ್ನು ಯಶಸ್ವಿಯಾಗಿ ಚಿತ್ರಿಸಿವೆ. ಮೆನ್ ವಿದೌಟ್ ಉಮೆನ್ (1927), ವಿನ್ನರ್ ಟೇಕ್ ನಥಿಂಗ್(1933)-ಇವು ಇವರ ಇನ್ನೆರಡು ಸಣ್ಣಕಥಾ ಸಂಕಲನಗಳು.
ಅರ್ನೆಸ್ಟ್ ಹೆಮಿಂಗ್‍ವೇ ದಿ ಸನ್ ಆಲ್ಸೊ ರೈಸಸ್ (1926), ಎ ಫೇರ್‍ವೆಲ್ ಟು ಆರ್ಮ್ಸ್(1929) ಎಂಬ ಕೃತಿಗಳಿಂದಾಗಿ ಪ್ರಪಂಚದ ಕಾದಂಬರಿಲೋಕದಲ್ಲಿ ಹೆಸರು ಗಳಿಸಿದರು. ಫೇರ್‍ವೆಲ್ ಟು ಆರ್ಮ್ಸ್ ಕಾದಂಬರಿ ಅಮೆರಿಕದ ಸೈನ್ಯಾಧಿಕಾರಿಯೊಬ್ಬ ಯುದ್ಧ ಹಾಗೂ ಪ್ರಣಯದಲ್ಲಿ ಅನುಭವಿಸಿದ ದುರಂತದ ಸೋಲನ್ನು ಚಿತ್ರಿಸುತ್ತದೆ. ದಿ ಸನ್ ಆಲ್ಸೊ ರೈಸಸ್ ಕಾದಂಬರಿ ಯುದ್ಧದಿಂದ ಹತಾಶರಾದ ದೇಶತ್ಯಾಗಿಗಳ ನೀತಿಪತನವನ್ನೂ, ಫಾರ್ ಹೂಮ್ ದಿ ಬೆಲ್ ಟೋಲ್ಸ್ (1940) ಎಂಬ ಕಾದಂಬರಿ ವ್ಯಕ್ತಿಗೆ ಅವಲಂಬನೆ ಹೇಗೆ ಅನಿವಾರ್ಯ ಎಂಬುದನ್ನೂ ನಿರೂಪಿಸುತ್ತದೆ. ಡೆತ್ ಇನ್ ದಿ ಆಫ್ಟರ್‍ನೂನ್ (1932) ಗೂಳಿಕಾಳಗದ ಬಗ್ಗೆ ಬರೆದ ಸಾಹಿತ್ಯೇತರ ಕೃತಿ.
ಅರ್ನೆಸ್ಟ್ ಹೆಮಿಂಗ್‍ವೇ ಅವರ ಮಹತ್ತ್ವಾಕಾಂಕ್ಷೆಯ ಕೃತಿ ದಿ ಓಲ್ಡ್ ಮ್ಯಾನ್ ಅಂಡ್ ದಿ ಸೀ(1952). ಇದಕ್ಕೆ 1954ರಲ್ಲಿ ನೊಬೆಲ್ ಪ್ರಶಸ್ತಿ ಸಂದಿತು. ಕ್ಯೂಬದ ಸಾಂಟಿಯಾಗೊ ಎಂಬ ವೃದ್ಧಬೆಸ್ತ ಮರ್ಲಿನ್ ಎಂಬಾತ ಮೀನು ಹಿಡಿಯಲು ಎಂಬತ್ತನಾಲ್ಕು ದಿನಗಳ ಕಾಲ ಸಮುದ್ರದ ಮೇಲೆ ತೋರಿದ ಸಾಹಸವೇ ಇಲ್ಲಿಯ ಕಥೆ. ಇದು ಮನುಷ್ಯ ಮತ್ತು ಪ್ರಕೃತಿಯ ನಡುವೆ ನಡೆಯುವ ಸತತ ಹೋರಾಟವನ್ನೂ ಅದರಲ್ಲಿ ಮಾನವ ತೋರುವ ಧೈರ್ಯ ಸಂಯಮಗಳನ್ನೂ ಅರ್ಥಗರ್ಭಿತವಾಗಿ ನಿರೂಪಿಸುತ್ತದೆ. ಮೊದಲು ಮಾನೋಲಿನ್ ಎಂಬ ಹುಡುಗನೊಡನೆ ಹಿಂದಿನ ಉತ್ತಮ ದಿನಗಳ ವಿಷಯವನ್ನೂ ಬೇಸ್‍ಬಾಲ್ ಆಟದ ಸೊಗಸನ್ನೂ ಹೇಳುತ್ತ ಸಾಗಿದ ಆ ಮುದುಕ ಬೆಸ್ತ ಕೊನೆಗೆ ಒಂಟಿಯಾಗಿ ಸಮುದ್ರದಲ್ಲಿ ಬಲುದೂರ ಸಾಗುತ್ತಾನೆ. ಭಾರಿ ಮೀನೊಂದನ್ನು ಗಾಳ ಹಾಕಿ ಹಿಡಿದರೂ ಅದು ಜಗ್ಗದೆ ಎರಡು ದಿನಗಳ ಕಾಲ ಅವನೊಡನೆ ಹೋರಾಡುತ್ತದೆ. ಎರಡನೆಯ ರಾತ್ರಿ ಕಳೆದಮೇಲೆ ಮುದುಕನ ಕೈಯೇ ಮೇಲಾಗಿ ಮೀನು ಅವನ ಈಟಿಗೆ ಬಲಿಯಾಗುತ್ತದೆ. ಅದನ್ನು ತನ್ನ ದೋಣಿಗೆ ಕಟ್ಟಿಕೊಂಡು ದಂಡೆಯ ಕಡೆಗೆ ಸಾಗುತ್ತಾನೆ. ಮಧ್ಯೆ ಶಾರ್ಕ್‍ಗಳು ಅವನ ಬೇಟೆಯನ್ನು ತಿನ್ನಲು ಅಟ್ಟಿಸಿಕೊಂಡು ಬರುತ್ತವೆ. ತನ್ನ ಚುಕ್ಕಾಣಿಯಿಂದಲೇ ಮುದುಕ ಅವುಗಳೊಡನೆ ಕಾದುತ್ತಾನೆ. ದಡ ಸಮೀಪಿಸಿದಾಗ ಮೀನಿನ ಅಸ್ಥಿಪಂಜರ ಮಾತ್ರ ಉಳಿದಿರುತ್ತದೆ. ಆದರೂ ತನ್ನ ಬೇಟೆಯನ್ನು ಪಡೆದು ಬಂದೆನೆಂಬ ಹೆಮ್ಮೆಯಿಂದ ಸಾಂಟಿಯಾಗೊ ದೋಣಿಯ ಪಟ ಇಳಿಸುತ್ತಿರಲು ಮನೊಲಿನ್ ಮತ್ತು ಇತರ ಬೆಸ್ತರು ಬೆರಗಾಗಿ ನೋಡುತ್ತಾರೆ. ದಣಿದ ಮುದುಕ ಮಲಗಿ ಮತ್ತೆ ತನ್ನ ಗತ ಅನುಭವಗಳ ಕನಸು ಕಾಣತೊಡಗುತ್ತಾನೆ. ಈ ಕಾದಂಬರಿ ಸೋತುಗೆದ್ದವನು ಎಂಬ ಹೆಸರಿನಲ್ಲಿ ಎಸ್. ದಿವಾಕರ್ Somathanahalli Diwakar
ಸಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ.
ಎ ಮೂವಬಲ್ ಫೀಸ್ಟ್ ಎಂಬ ಅರ್ನೆಸ್ಟ್ ಹೆಮಿಂಗ್‍ವೇ ಅವರ ಆತ್ಮಕಥೆ ಅವರ ನಿಧನಾನಂತರ ಪ್ರಕಟವಾಯಿತು(1964). ಇದರಲ್ಲಿ ಈತ 1920ರ ದಶಕದಲ್ಲಿಯ ತಮ್ಮ ಪ್ಯಾರಿಸ್ ಅನುಭವಗಳನ್ನು ನಿರೂಪಿಸಿದ್ದಾರೆ.
ಅರ್ನೆಸ್ಟ್ ಹೆಮಿಂಗ್‍ವೇ 1954ರಲ್ಲಿ ಎರಡು ದಿನ ವಿಮಾನ ಅಪಘಾತಕ್ಕೀಡಾಗಿ ಮರಣದಿಂದ ಸ್ವಲ್ಪದರಲ್ಲೇ ಪಾರಾದರೂ ಅಪಾರ ನೋವು, ಹಿಂಸೆ, ಅನಾರೋಗ್ಯಗಳಿಗೆ ಸಿಲುಕಿ ಉಳಿದ ಆಯುಷ್ಯ ಕಳೆಯಬೇಕಾಯಿತು. 1961 ಜುಲೈ 2ರಂದು ಆತ್ಮಹತ್ಯೆ ಮಾಡಿಕೊಂಡರು.
On death anniversary of Ernest Hemingway
ಕಾಮೆಂಟ್‌ಗಳು