ಭಾನುವಾರ, ಡಿಸೆಂಬರ್ 29, 2013

ಬನ್ನೀ ಹೋಗೋಣ ಕವಿಶೈಲಕ್ಕೆ

ಬನ್ನೀ ಹೋಗೋಣ ಕವಿಯ ಮನೆಗೆ.  ಜ್ಞಾನದ ಅಪೂರ್ವ ಶಿಖರವಾದ ಕವಿಶೈಲಕ್ಕೆ.

ತೀರ್ಥಹಳ್ಳಿಯಿಂದ ಕೊಪ್ಪ ಮಾರ್ಗವಾಗಿ ಹದಿನೈದು ಕಿ.ಮೀ ಕ್ರಮಿಸಿದರೆ ಎಡಕ್ಕೆ ಕುವೆಂಪು ಅವರ ಕುಪ್ಪಳ್ಳಿಗೆ ಹೋಗುವ ದಾರಿ ಸಿಗುತ್ತದೆ.  ಅಲ್ಲಿಂದ ಒಂದು ಕಿ.ಮೀ ದೂರದಲ್ಲಿ ಕವಿಮನೆಯಿದೆ. ಮನೆಯ ಪಕ್ಕದಲ್ಲಿ ಕುವೆಂಪು ಅವರ ಪ್ರಿಯವಾದ ಅಧ್ಯಯನ ಆಧ್ಯಾತ್ಮಗಳ ತಾಣವಾಗಿದ್ದ ಕವಿಶೈಲದಲ್ಲಿ ಕುವೆಂಪು ಅವರ ಸ್ಮಾರಕ ನಿರ್ಮಾಣವಾಗಿದೆ.   ಕುವೆಂಪು ಅವರ ಹಿರಿಯರು ಕಟ್ಟಿದ್ದ ಸುಮಾರು ಇನ್ನೂರು ವರ್ಷಗಳ ಹಿಂದಿನ ಮನೆ ಆಧುನಿಕಗೊಂಡು ಹಳೆಯ ತಲೆಮಾರು ಬಾಳಿದ ಆ ಹಿರಿಯ ಮನೆಯನ್ನೂ, ಹಿರಿತನದ ಜೀವಗಳು ಜೀವಿಸಿದ ಕಂಪನ್ನೂ, ಕುವೆಂಪು ಎಂಬ ಅಗಾಧತೆಯ ಅವಲೋಕನವನ್ನೂ ನಾವುಗಳು ಅನುಭಾವಿಸುವ ಸೌಭಾಗ್ಯ ಕೊಡುವಂತಿದೆ.  ತಪ್ಪದೆ ನೀವೂ ಹೋಗಿ ಬನ್ನಿ.  ಜೊತೆಗೆ ಸುಮಾರು ನಲವತ್ತು ಕಿ.ಮೀ ಆಸುಪಾಸಿನಲ್ಲಿ ಶೃಂಗೇರಿ, ಆಗುಂಬೆ, ಹೊರನಾಡು ಮುಂತಾದ ಹಲವಾರು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಿಗೆ ಕೂಡಾ ಹೋಗಿಬರಬಹುದು.


ಇಲ್ಲಿಗೆ ನಾನು ಜೂನ್ 2011ರ ವರ್ಷದಲ್ಲಿ ಭೇಟಿ ನೀಡಿದಾಗ ಸೆರೆಹಿಡಿದ ಚಿತ್ರಗಳ ಜೊತೆಗೆ, ಅಲ್ಲಿ ಒಳಾಂಗಣದಲ್ಲಿ ಫೋಟೋ ತೆಗೆಯುವ ಸೌಲಭ್ಯವಿಲ್ಲದ ಕಾರಣ, ಆಸ್ತಕರಿಗೆ ತೋರುವ ಇಚ್ಚೆಯಿಂದ ಮುದ್ರಿತ ಪ್ರಕಾರದಲ್ಲಿ ಲಭ್ಯವಿರುವ ಚಿತ್ರಗಳನ್ನು ಸ್ಕ್ಯಾನ್ ಮಾಡಿ ಪ್ರಕಟಿಸಿದ್ದೇನೆ. ಬನ್ನೀ ಈ ಮಹಾನ್ ಕವಿ ಬಾಳಿ ಸ್ಫೂರ್ತಿ ಪಡೆದು ಲೋಕಕ್ಕೆ ಸ್ಫೂರ್ತಿ ಹಂಚಿದ ಈ ತಾಣವನ್ನು ಮನಸ್ಸಿನಲ್ಲಿ ಮೂಡಿಸಿಕೊಳ್ಳಲು ಪ್ರಯತ್ನಿಸೋಣ.

ಕಾಮೆಂಟ್‌ಗಳಿಲ್ಲ: