ಸೋಮವಾರ, ಸೆಪ್ಟೆಂಬರ್ 2, 2013

ಪ್ರೊ. ಎಸ್. ಕೆ. ರಾಮಚಂದ್ರ ರಾವ್

ಪ್ರೊ. ಎಸ್. ಕೆ. ರಾಮಚಂದ್ರ ರಾವ್

ನಮ್ಮ ಜೀವಿತ ಕಾಲದಲ್ಲಿ ಇಂತಹ ಅಪ್ರತಿಮ ವಿದ್ವಾಂಸರಿದ್ದರು ಎಂದರೆ ಅಚ್ಚರಿಹುಟ್ಟಿಸುವಷ್ಟು ಶ್ರೇಷ್ಠರಾದವರು  ಪ್ರೊ. ಎಸ್. ಕೆ. ರಾಮಚಂದ್ರರಾವ್ ಅವರು.  ನಮ್ಮ ನಾಡು ಕಂಡ ಅಪ್ರತಿಮ ವಿದ್ವಾಂಸವರೇಣ್ಯರಲ್ಲೊಬ್ಬರಾದ ಈ ಮಹನೀಯರು ಸೆಪ್ಟೆಂಬರ್ 4, 1925ರಂದು ಹಾಸನದಲ್ಲಿ ಜನಿಸಿದರು.  ಅವರ ತಂದೆ ಶ್ರೀ ಕೃಷ್ಣ ನಾರಾಯಣ ರಾವ್ ಅವರು ಕಾವೇರಿ ನದಿ ತೀರದ ಹನಸೊಗೆ ಗ್ರಾಮಕ್ಕೆ ಸೇರಿದವರು.  ಅಲ್ಲಿನ ಮುಖ್ಯಪ್ರಾಣ ದೇಗುಲವು ಅವರ ಮನೆತನಕ್ಕೆ ಸೇರಿದುದಾಗಿತ್ತು. ಅವರ ತಾಯಿ ಕಮಲಾಬಾಯಿಯವರು   ಅಂದಿನ ಮೈಸೂರು ಸಂಸ್ಥಾನದ  ಸಾರ್ವಜನಿಕ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಶ್ರೀ ಕೆ. ನಾರಾಯಣ ರಾವ್ ಅವರ ಪುತ್ರಿ. ಬೆಂಗಳೂರಿನಲ್ಲಿದ್ದ ಈ ತಾತನ ಮನೆಯಲ್ಲಿಯೇ ರಾಮಚಂದ್ರ ರಾವ್ ಅವರ ಪ್ರಾರಂಭಿಕ ವಿದ್ಯಾಭ್ಯಾಸ ನೆರವೇರಿತು.

ರಾಮಚಂದ್ರ ರಾಯರ ತಾತನವರಾದ  ನಾರಾಯಣ ರಾವ್ ಅವರು ನಿವೃತ್ತರಾದ ನಂತರದಲ್ಲಿ ಉತ್ತರಾದಿ ಮಠದ ಶ್ರೀ ಅಗ್ನಿಹೋತ್ರಿ ಯಜ್ಞವಿಠ್ಠಲಾಚಾರ್ಯರಿಂದ ಸಂಸ್ಕೃತ ಅಭ್ಯಾಸ ಮಾಡತೊಡಗಿದರು.  ಇದನ್ನು ಆಸಕ್ತಿಯಿಂದ ಕೇಳುತ್ತಿದ್ದ ಬಾಲಕ ರಾಮಚಂದ್ರ ಸಹಾ ಸಂಸ್ಕೃತದ ಜ್ಞಾನವನ್ನು ಸುಲಭವಾಗಿ ರೂಢಿಗೊಳಿಸಿಕೊಂಡರು.  ತಮ್ಮ ತಾತನವರು ನಿಧನರಾದ ಕಾರಣ ಹನ್ನೆರಡು ವಯಸ್ಸಿನ ಬಾಲಕ ರಾಮಚಂದ್ರ ರಾವ್ ಅವರು ತಮ್ಮ ತಂದೆ ತಾಯಿಯರಿದ್ದ ನಂಜನಗೂಡಿಗೆ ಬಂದು ಅಲ್ಲಿಯ ಪಾಠಶಾಲೆಯಲ್ಲಿ ತಮ್ಮ ಸಂಸ್ಕೃತಾಭ್ಯಾಸವನ್ನು ಮುಂದುವರೆಸಿದರು.  ಅದಾದ  ಒಂದು ವರ್ಷದಲ್ಲಿ ಅವರಿಗೆ ಶೃಂಗೇರಿಯ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳ ದರ್ಶನ ದೊರಕಿ, ಅವರ ಬದುಕಿನ ಮೇಲೆ ಹೊಸದಾದ ಬೆಳಕನ್ನೇ ತಂದಿತು.  ಮೂಲತಃ ಮಧ್ವ ಸಂಪ್ರದಾಯದ ಮನೆತನಕ್ಕೆ ಸೇರಿದ್ದರೂ, ಬಾಲಕ ರಾಮಚಂದ್ರರು ಜಗದ್ಗುರಗಳ ಬಳಿ ಆದಿ ಗುರು ಶ್ರೀ ಶಂಕರಾಚಾರ್ಯರ ಮೂಲ ರಚನೆಗಳನ್ನು ಓದುವ ಅಭಿಲಾಷೆ ವ್ಯಕ್ತಪಡಿಸಿದರು.   ಅದರಿಂದ ಸಂತೋಷಗೊಂಡ ಯತಿವರ್ಯರು ರಾಮಚಂದ್ರ ರಾವ್ ಅವರಿಗೆ ತಕ್ಷಣವೇ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ವೇದಾಂತದ ಬೋಧಕರಾಗಿದ್ದ ಶ್ರೀ ಪಾಲ್ಗಾಟ್ ನಾರಾಯಣ ಶಾಸ್ತ್ರಿಗಳಿಂದ ಶ್ರೀ ಶಂಕರಾಚಾರ್ಯರ ಪ್ರಸ್ಥಾನತ್ರಯವನ್ನು ಕಲಿಯುವ ವ್ಯವಸ್ಥೆ ಕಲ್ಪಿಸಿಕೊಟ್ಟರು. ಈ ಕಲಿಕೆಯನ್ನು ರಾಮಚಂದ್ರ ರಾಯರು ಹಲವಾರು ವರ್ಷಗಳ ಕಾಲ ಶ್ರದ್ಧೆಯಿಂದ ನಡೆಸಿದರು.

ರಾಮಚಂದ್ರ ರಾವ್ ಅವರು ತಮ್ಮ ಹೈಸ್ಕೂಲಿನ ವಿದ್ಯಾಭ್ಯಾಸದ ನಂತರದಲ್ಲಿ ಮೈಸೂರಿನ ಯುವರಾಜಾ ಕಾಲೇಜು ಹಾಗೂ ಮಾನಸ ಗಂಗೋತ್ರಿಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಅಂದಿನ ದಿನಗಳಲ್ಲಿ ತಮ್ಮ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಪ್ರೊ. ಎಂ. ಹಿರಿಯಣ್ಣ, ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಪ್ರೊ. ರಾಘವಾಚಾರ್, ಪ್ರಾಕೃತ ಹಾಗೂ ಸಂಗೀತ ಶಾಸ್ತ್ರದ ಬೋಧಕರಾಗಿದ್ದ ಶ್ರೀ ರಾಳಪಲ್ಲಿ ಅನಂತಕೃಷ್ಣ ಶರ್ಮ ಅವರ ಕುರಿತು ರಾಮಚಂದ್ರ ರಾವ್ ಅವರಿಗೆ ಅಪಾರ ಅಭಿಮಾನ ಮತ್ತು ಭಕ್ತಿಭಾವಗಳಿತ್ತು.  ಪ್ರೊ. ಎಸ್. ಕೆ ರಾಮಚಂದ್ರ ರಾವ್ ಅವರಿಗೆ ಸಂಗೀತ ಮತ್ತು ಸಂಗೀತಶಾಸ್ತ್ರಗಳಲ್ಲಿನ ಆಳವಾದ ಪರಿಜ್ಞಾನ  ತಂದೆಯವರಿಂದ ಬಂದ ಬಳುವಳಿಯಾಗಿತ್ತು.

ಪದವಿ ಪಡೆದ ನಂತರದಲ್ಲಿ ರಾಮಚಂದ್ರ ರಾಯರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಇಂಡಸ್ಟ್ರಿಯಲ್ ಸೈಕಾಲಜಿ ವಿಭಾಗದಲ್ಲಿ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಸೇರಿ ಅಲ್ಲಿ  ಡಾಕ್ಟರ್ ಎನ್. ಎಸ್ ಶ್ರೀನಿವಾಸ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರು. ತಾವು ಓದಿದ್ದು ವೇದಾಂತ ಮತ್ತು ಅದಕ್ಕೆ ಸಂಬಂಧಪಟ್ಟ ಗ್ರಂಥಗಳಾದರೂ, ರಾಮಚಂದ್ರ ರಾವ್ ಅವರಿಗೆ ವೇದಾಂತದ ಪರಿಧಿಯಾಚೆಗಿನ ಬೌದ್ಧ ಮತ್ತು ಜೈನ ಧರ್ಮಗಳ ಬಗ್ಗೆ ಅಧ್ಯಯನ ಮಾಡಬೇಕೆಂಬ ಅಭಿಲಾಷೆಯಿತ್ತು.  ಅವರ ಸ್ನೇಹಿತರೊಬ್ಬರು, ಸಿಂಹಳದ ಬೌದ್ಧ ಬಿಕ್ಷುಗಳೊಬ್ಬರು ಮಹಾಬೋಧಿ ಸೊಸೈಟಿಯಲ್ಲಿ ಚಾತುರ್ಮಾಸ್ಯದ ಆಚರಣೆಗೆ ಬಂದಿದ್ದಾರೆ, ಅವರನ್ನು ಭೇಟಿಯಾಗಿ ನೋಡಿ ಎಂದರು.  ಹೀಗಾಗಿ ರಾಮಚಂದ್ರ ರಾವ್ ಅವರು ಪ್ರಸಿದ್ಧ ಬೌದ್ಧ ಭಿಕ್ಷುಗಳಾದ ಸಿಂಹಳದ ಭದ್ರಾಂತ ನಾರದ ಮಹಾತೇರ ಅವರನ್ನು ಭೇಟಿ ಮಾಡಿ ಅವರಿಂದ ಪಾಲಿ ಭಾಷೆಯನ್ನು ಅಭ್ಯಾಸ ಮಾಡಿದರಲ್ಲದೆಅವರ ಮಾರ್ಗದರ್ಶನದಲ್ಲಿ ಬೌದ್ಧ ಧರ್ಮದ ಮೂಲ ಬೋಧನೆಗಳುಳ್ಳ ತ್ರಿಪಿಟಕಗಳ ಅಧ್ಯಯನ ಮಾಡಿದರು.  ಇದಲ್ಲದೆ ಮಾರನೆಯ ವರ್ಷದಲ್ಲಿ ಪುನಃ ಬೆಂಗಳೂರಿಗೆ ಬಂದ ಶ್ರೀ ನಾರದ ಮಹಾತೇರರಿಂದ ಸುತ್ತ ಪಿಟಕಗಳ ಹಲವಾರು ಭಾಗಗಳನ್ನೂ ಕಲಿತರು. ಬೌದ್ಧ ಧರ್ಮದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ರಾಮಚಂದ್ರ ರಾವ್ ಅವರಿಗೆ ಒಮ್ಮೆ ಬೌದ್ಧ ಬಿಕ್ಷುವಾಗಬೇಕು ಎಂಬ ಇಚ್ಚೆಯೂ ಉಂಟಾಗಿತ್ತಂತೆ.  ಯಾವುದನ್ನೇ ಆಗಲಿ ಅತ್ಯಂತ ಆಳ ಶ್ರದ್ಧೆಗಳಿಂದ ಅಭ್ಯಸಿಸುವ ರಾಮಚಂದ್ರ ರಾಯರ ಪ್ರವೃತ್ತಿಯೇ ಅಂತಹದು.   ಇದೇ ಸರಿಸುಮಾರು ಅವಧಿಯಲ್ಲಿ ರಾಮಚಂದ್ರ ರಾಯರು ಅರ್ಧಮಾಗಧಿ ಮತ್ತು ಅಪಭ್ರಂಶ ಮತ್ತು ಆಗಮಗಳ ಕುರಿತಾದ ಜೈನ ಗ್ರಂಥಗಳನ್ನೂ ಅಧ್ಯಯನ ಮಾಡಿದರು.

ಎಸ್ ಕೆ ರಾಮಚಂದ್ರ ರಾವ್ ಅವರಿಗೆ ಶಾಲಾ ದಿನಗಳಲ್ಲೇ ಚಿತ್ರಕಲೆ ಮತ್ತು ಶಿಲ್ಪಕಲೆಗಳಲ್ಲಿ ಆಸಕ್ತಿ ಉಂಟಾಗಿತ್ತು.  ಹೀಗಾಗಿ ಮೇಣ, ಸಾಬೂನು ಮುಂತಾದವುಗಳಲ್ಲಿ ಶಿಲ್ಪಗಳನ್ನು ಮಾಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು.  ಪೆನ್ಸಿಲ್ ಮತ್ತು ಕಾರಾಕೊಲ್ಗಳಲ್ಲಿ ಚಿತ್ರಬಿಡಿಸುವ ಕಲೆ ಕೂಡಾ ಅವರಿಗೆ ಹಸ್ತಗತವಾಗಿತ್ತು.  ಮುಂದೆ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಮಲ್ಲೇಶ್ವರದಲ್ಲಿ ವಾಸಿಸುತ್ತಿದ್ದ ಪ್ರಸಿದ್ಧ ಕಲಾವಿದರಾದ ಶ್ರೀ ವೆಂಕಟಪ್ಪನವರ ಮನೆಗೆ ಹೋಗಿ ಬರುತ್ತಾ, ಅವರ ಬಳಿ ಕಲಿಯುವುದಕ್ಕೆ ಅವಕಾಶ ಸಿಕ್ಕುವುದೇ ಎಂದು ವ್ಯಾಕುಲರಾಗಿದ್ದರು.  ಆದರೆ ವೆಂಕಟಪ್ಪನವರು ರಾಮಚಂದ್ರ ರಾವ್ ಅವರಿಗೆ ಅವರು ಮಾಡುತ್ತಿರುವ ಕೆಲಸ ಬಿಟ್ಟು ಪೂರ್ಣವಾಗಿ ಕಲಾ ಲೋಕಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ ಮನಸ್ಸಿದ್ದರೆ ಮಾತ್ರ ಶಿಷ್ಯತ್ವ ನೀಡುವುದಾಗಿ ಹೇಳಿದರು.  ಅಂದಿನ ಪರಿಸ್ಥಿತಿಯಲ್ಲಿ ರಾಮಚಂದ್ರ ರಾವ್ ಅವರಿಗೆ ಹಾಗೆ ಕೆಲಸ ಬಿಡುವುದು ಸಾಧ್ಯವಿರಲಿಲ್ಲ.  ಹೀಗಿದ್ದರೂ ರಾಯರು ವೆಂಕಟಪ್ಪನವರ ಬಳಿ ಹೋಗುತ್ತಿದ್ದ ಸೀಮಿತ  ಸಮಯಗಳಲ್ಲೇ ಚಿತ್ರರಚನೆಯ ಕುರಿತಾಗಿನ ಹಲವಾರು ನೈಪುಣ್ಯತೆಗಳನ್ನು ಕಂಡುಕೊಂಡರು.  ಮಾತ್ರವಲ್ಲದೆ ತಮಗೆ ಬಿಡುವು ದೊರಕಿದ ಸಮಯದಲ್ಲೆಲ್ಲಾ ರಾಮಚಂದ್ರ ರಾಯರು ಕಲಾ ಲೋಕದಲ್ಲಿ ಸಾಕಷ್ಟು ಸಾಧನೆ ಮಾಡಿದ್ದರು. ಅವರ ಸಾಧನೆಗಳ ಹಲವೊಂದು ಪ್ರದರ್ಶನಗಳೂ ಕೂಡಾ ಏರ್ಪಾಡಾಗಿದ್ದವು.

1954ರ ವರ್ಷದಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಸಂಸ್ಥೆ ಪ್ರಾರಂಭಗೊಂಡಾಗ ಆ ಸಂಸ್ಥೆಯ ನಿರ್ದೇಶಕ ಹುದ್ಧೆಯನ್ನು ವಹಿಸಿದ್ದ  ಡಾ. ಎಂ. ವಿ. ಗೋವಿಂದಸ್ವಾಮಿ ಅವರು ಪ್ರೊ. ಎಸ್. ಕೆ ರಾಮಚಂದ್ರ ರಾವ್ ಅವರಿಗೆ  ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಹುದ್ಧೆಯ ಆಹ್ವಾನ ನೀಡಿದರು.  ಇಲ್ಲಿನ ಪಠ್ಯ ಬೋಧನೆಗಳಲ್ಲಿ   ಭಾರತೀಯ ತತ್ವಚಿಂತನೆಗಳ ವಿಚಾರವೂ ಒಳಗೊಂಡಿತ್ತು.  ಇದರಿಂದ ಪ್ರೇರಿತರಾದ ರಾಯರು    1962ರ ವರ್ಷದಲ್ಲಿ ದಿ ಡೆವೆಲಪ್ಮೆಂಟ್ ಆಫ್ ಸೈಕಲಾಜಿಕಲ್ ಥಾಟ್ ಇನ್ ಇಂಡಿಯಾಎಂಬ ಗ್ರಂಥವನ್ನು ರಚಿಸಿದರು.  ತಮ್ಮ ಆಳವಾದ ಸಂಶೋಧನೆಗಳ ಮೂಲಕ ರಾಯರು ಭಾರತೀಯ ಮಾದರಿಯ T.A.T ಕಾರ್ಡ್ ಗಳನ್ನು ಸಿದ್ಧಪಡಿಸಿದರಲ್ಲದೆ  ಅವುಗಳ ಉಪಯುಕ್ತತೆಯನ್ನು ನಿರೂಪಿಸುವ   ಯಶಸ್ವೀ ಪ್ರಯೋಗಗಳನ್ನೂ ನಡೆಸಿದರು.  ಪ್ರೊ. ಎಂ. ವಿ. ಗೋವಿಂದಸ್ವಾಮಿ ಅವರ ನಿಧನಾನಂತರದಲ್ಲಿ ಪ್ರೊ. ಎಸ್ ಕೆ ರಾಮಚಂದ್ರ ರಾವ್ ಅವರು ಡಿಪಾರ್ಟ್ಮೆಂಟ್ ಆಫ್ ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥ ಜವಾಬ್ಧಾರಿಯನ್ನು ನಿರ್ವಹಿಸಿದರು. ಮಿಥಿಕ್ ಸೊಸೈಟಿಯಲ್ಲಿಯೂ  ಕ್ರಿಯಾಶೀಲರಾಗಿದ್ದ ಅವರು ಅಲ್ಲಿನ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಭಾರತೀಯ ದರ್ಶನ ಶಾಸ್ತ್ರಗಳ (Indology) ಮೇಲೆ ಬೆಳಕು ಚೆಲ್ಲುವ ಹಲವಾರು ವಿದ್ವತ್ಪೂರ್ಣ  ಲೇಖನಗಳನ್ನು ಪ್ರಕಟಿಸಿದರು.

1959ರ ವರ್ಷದಲ್ಲಿ ಪ್ರೊ ರಾಮಚಂದ್ರ ರಾವ್ ಅವರು ಕ್ಲಿನಿಕಲ್ ಸೈಕಾಲಜಿ ಅಭ್ಯಾಸ ಮಾಡಿದ ರಮಾದೇವಿ ಅವರನ್ನು ವಿವಾಹವಾದರು.  ಅವರ ಪುತ್ರಿ ಹೋಮಿಯೋಪತಿ ವೈದ್ಯರಾಗಿದ್ದರೆ ಅವರ ಪುತ್ರ ಆಯುರ್ವೇದದ ವೈದ್ಯರು.

1965ರ ವರ್ಷದಲ್ಲಿ ತಮ್ಮ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್  ಸೇವೆಯಿಂದ ಹೊರಬಂದ ರಾಮಚಂದ್ರರಾಯರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ ಹಲವಾರು ವಿದ್ಯಾಸಂಸ್ಥೆಗಳಲ್ಲಿ ಮನಃಶಾಸ್ತ್ರ, ತತ್ವಶಾಸ್ತ್ರ, ಭಾರತೀಯ ದರ್ಶನ ಶಾಸ್ತ್ರಗಳನ್ನು  ಬೋಧಿಸುವುದರ ಜೊತೆಗೆ  ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ವಿಷಯಗಳಲ್ಲಿ  ತಮ್ಮನ್ನು ತೊಡಗಿಸಿಕೊಂಡರು.  1968ರಿಂದ 1972ರ ವರ್ಷದವರೆಗೆ  ಅವರು  ಬೆಂಗಳೂರಿನಲ್ಲಿದ್ದ ಕಾಲಿಸನ್ ಕಾಲೇಜ್ ಸ್ಟಡಿ ಸೆಂಟರ್ ಆಫ್ ಯೂನಿವರ್ಸಿಟಿ ಆಫ್ ಪೆಸಿಫಿಕ್ (ಕ್ಯಾಲಿಫೋರ್ನಿಯ, ಯು ಎಸ್ ಎ) ಸಂಸ್ಥೆಯಲ್ಲಿ ಭಾರತೀಯ ಸಂಸ್ಕೃತಿ ವಿಭಾಗದ ಮುಖ್ಯಸ್ಥರಾಗಿದ್ದರು.  ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್  (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್)  ಸಂಸ್ಥೆಯ ಸೀನಿಯರ ಅಸೋಸಿಯೇಟ್ ಆಗಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯ ಆಹ್ವಾನಿತ ಪ್ರಾಧ್ಯಾಪಕರಾಗಿಯೂ ಅವರು ಸೇವೆ ಸಲ್ಲಿಸಿದರು.

ಇದಲ್ಲದೆ ಪ್ರೊ. ಎಸ್. ಕೆ ರಾಮಚಂದ್ರ ರಾವ್ ಅವರು 35 ವರ್ಷಗಳಿಗೂ ಹೆಚ್ಚು ಕಾಲ ಆಸಕ್ತರಿಗೆ ಭಗವದ್ಗೀತೆ, ಉಪನಿಷತ್ತು, ಶಿವ ಸೂತ್ರ, ಬ್ರಹ್ಮ ಸೂತ್ರ, ಪತಂಜಲಿ ಯೋಗ ಸೂತ್ರ, ವಾಖ್ಯಪದೀಯ, ಶಿಲ್ಪಶಾಸ್ತ್ರ, ತ್ರಿಪುರ ರಹಸ್ಯ, ಭಾರತೀಯ ತತ್ವಶಾಸ್ತ್ರ, ಆಗಮ-ಶಾಸ್ತ್ರ, ದರ್ಶನ ಶಾಸ್ತ್ರ ಮುಂತಾದ ಅಮೂಲ್ಯ  ವಿಷಯಗಳ ಬಗ್ಗೆ ತರಬೇತಿ ನೀಡಿದರು.  ಅವರ ಉಪನ್ಯಾಸಗಳು ಸ್ಪಷ್ಟತೆ ಮತ್ತು ವಿದ್ವತ್ಪೂರ್ಣತೆಗಳಿಗಾಗಿ ಪ್ರಖ್ಯಾತವಾಗಿದ್ದವು.

ಪ್ರೊ.ಎಸ್. ಕೆ ರಾಮಚಂದ್ರ ರಾವ್ ಅವರು ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿ ಮತ್ತು ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಸಹಾ ಸೇವೆ ಸಲ್ಲಿಸಿದರು.  ಕರ್ನಾಟಕ ರಾಜ್ಯದ ಆಗಮ ಬೋರ್ಡ್ಸಂಸ್ಥೆಯಲ್ಲಿ ಸಹಾ ಅವರು ಸೇವೆ ಸಲ್ಲಿಸಿದರು.  ತಿರುಮಲ ತಿರುಪತಿ ದೇವಸ್ಥಾನದ ಸಲಹಾ ಸಮಿತಿಯಲ್ಲೂ ಅವರ ಸೇವೆ ಸಂದಿತ್ತು.

ಪ್ರೊ. ಎಸ್. ಕೆ. ರಾಮಚಂದ್ರರಾವ್ ಅವರಿಗೆ 1986ರ ವರ್ಷದ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೇ ಅಲ್ಲದೆ ನೂರಾರು ಪ್ರಶಸ್ತಿ ಗೌರವಗಳು ಸಂದಿವೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ಅರ್ಪಿಸಿವೆ.   ಮುಂಬೈನ ಸ್ವಾಮಿ ಗಂಗೇಶ್ವರಾನಂದಜೀ ಟ್ರಸ್ಟ್ ಅವರಿಗೆ ವೇದರತ್ನಎಂಬ ಗೌರವ ಅರ್ಪಿಸಿದೆ.  ನಿಡುಮಾಮಿಡಿ ಶ್ರೀಶೈಲ ಮಠ ವಿದ್ಯಾಲಂಕಾರ’, ತಿರುಪತಿಯ ರಾಷ್ಟೀಯ ಸಂಸ್ಕೃತ ವಿದ್ಯಾಪೀಠ ವಾಚಸ್ಪತಿ’, ಗಾಯನ ಸಮಾಜ ಸಂಗೀತ ಕಲಾ ರತ್ನಹೀಗೆ ನೂರಾರು ಸಂಸ್ಥೆಗಳು ಅವರಿಗೆ ಬಿರುದು ಸಮ್ಮಾನಗಳನ್ನು ನೀಡಿ ಗೌರವಿಸಿವೆ. ಉಜ್ಜೈನಿಯ ಮಹರ್ಷಿ ಸಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನವು ಅವರಿಗೆ 2000ದ ವರ್ಷದಲ್ಲಿ ತನ್ನ ಪ್ರತಿಷ್ಟಿತ ಪ್ರಶಸ್ತಿಯನ್ನು ಸಲ್ಲಿಸಿದೆ. 

ಪ್ರೊ. ಎಸ್. ಕೆ ರಾಮಚಂದ್ರ ರಾವ್ ಅವರು ಚಿತ್ರಕಾರರು, ಕಲಾವಿದರು, ಶಿಲ್ಪಿ, ಸಂಗೀತ ಶಾಸ್ತ್ರಜ್ಞರೂ ಹೌದು.  ಗ್ರಂಥಕರ್ತರಾಗಿ ಅವರು ಮಾಡಿದ ಸಾಧನೆ ಅತ್ಯಮೂಲ್ಯವಾದುದು. ಕನ್ನಡದಲ್ಲಿ ಅವರು 90ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಷ್ಟೇ ಸಂಖ್ಯೆಯ ಇಂಗ್ಲಿಷ್ ಗ್ರಂಥಗಳೂ ಕೂಡಾ ಅವರಿಂದ ಹೊರಹೊಮ್ಮಿವೆ.   ಇದಲ್ಲದೆ ಸಂಸ್ಕೃತದಲ್ಲಿ ಪೌರವ ದಿಗ್ವಿಜಯ’, ಮತ್ತು ಪಾಲಿ ಭಾಷೆಯಲ್ಲಿ ವಿಶುದ್ಧಿಮಗ್ಗದ ಬುದ್ಧ ಘೋಶನ ಕುರಿತಾದ ವಿಶುದ್ಧಿಮಗ್ಗಭಾವಿನಿಗ್ರಂಥಗಳನ್ನು ರಚಿಸಿದ್ದಾರೆ.  ಪಾಲಿಯ ಸುಮಂಗಲ-ಗಾಥಾಬಗ್ಗೆ ಅವರು ಬರೆದಿರುವ ವಿಶ್ಲೇಷಣಾತ್ಮಕ  ಬರಹವು 1957ರ ವರ್ಷದಲ್ಲಿ ಪ್ರಖ್ಯಾತ ಪ್ರಕಟಣೆಯಾದ  ದಿ ಲೈಟ್ ಆಫ್ ಧಮ್ಮಾದಲ್ಲಿ ಪ್ರಕಟಗೊಂಡಿತ್ತು.

ಅಭಿನವ ಗುಪ್ತ, ಆದಿಕವಿ ವಾಲ್ಮೀಕಿ, ಆಳ್ವಾರರ ನುಡಿ ಮುತ್ತುಗಳು, ಆನಂದ ಕುಮಾರಸ್ವಾಮಿ, ಆಂಜನೇಯನ ಕಲ್ಪನೆಗಳಲ್ಲಿ ಸ್ವಾರಸ್ಯ, ಅಣ್ಣಪ್ಪ ದೈವ, ಅತೀಂದ್ರಿಯ ಅನುಭವ, ಅವಧೂತ , ಅಂತರ್ಯಜ್ಞ, ಆಯುರ್ವೇದ ಪರಿಚಯ, ಆಯುರ್ವೇದದಲ್ಲಿ ನಾಡೀ ವಿಜ್ಞಾನ, ಬದುಕಿಗೆ ಬೆಳಕು, ಬೆಂಗಳೂರಿನ ಕರಗ, ಭಾರತದ ದೇವಾಲಯ, ಭರತಮುನಿಯ ನಾಟ್ಯಶಾಸ್ತ್ರ, ಭಾರತದ ದೇವಾಲಯಗಳ ಜಾನಪದ ಮೂಲ, ಬೋಧಿ ಧರ್ಮ, ಬೋಧಿಯ ಬೆಳಕಿನಲ್ಲಿ, ಚುಂಚುನಕಟ್ಟೆ ಸಾಲಿಗ್ರಾಮ ಹನಸೊಗೆ, ದರ್ಶನ ಪ್ರಬಂಧ, ದಾಸ ಸಾಹಿತ್ಯ ಮತ್ತು ಸಂಸ್ಕೃತಿ, ದೀಪಂಕರ, ಗಣಪತಿಯ ಕಲ್ಪನೆ, ಗಣಪತಿಯ ರೂಪಗಳು, ಗಾಂಧೀಜಿಯ ಧಾರ್ಮಿಕ ದೃಷ್ಟಿ, ಗೀತೆಗೊಂದು ಕೈಪಿಡಿ, ಗೊಮ್ಮಟೇಶ್ವರ, ಹಣ ಪ್ರಪಂಚ, ಹಿರಿಯ ಹೆಜ್ಜೆಗಳು, ಜಯದೇವನ ಗೀತ ಗೊವಿಂದ, ಈಶಾವಾಸ್ಯ ಉಪನಿಶತ್ , ಕೆ. ವೆಂಕಟಪ್ಪ, ಕಲಾನುಭವದಲ್ಲಿ ಸಾಹಸ, ಕನ್ನಡ ನಾಡಿನ ಧಾರ್ಮಿಕ ಪರಂಪರೆ, ಕನ್ನಡ ನಾಡಿನಲ್ಲಿ ಆಯುರ್ವೇದ, ಕನಕದಾಸರು, ಮಹಾಕವಿ ಅಶ್ವಘೋಶ, ಮಹರ್ಷಿ ದೈವರಾತರು, ಮನಃಶಾಸ್ತ್ರ ಪ್ರವೇಶಿಕಾ, ಮಂಗಳೂರಿನ ಬುದ್ಧಿವಂತರು ಮತ್ತು ಇತರ ಕಥೆಗಳು, ಸಂಗೀತ ಸಾಮ್ರಾಜ್ಞಿ ಎಮ್.ಎಸ್.ಸುಬ್ಬುಲಕ್ಷ್ಮಿ, ನಗೆಯ ನೆಲೆ , ನಮ್ಮ ಸಂಗೀತ ಮತ್ತು ವಾಗ್ಗೇಯಕಾರರು, ಓಂ ಪರಮಪದ, ಪರಿಮಾನಸ ಶಾಸ್ತ್ರ, ಪ್ರಾಚೀನ ಸಂಸ್ಕೃತಿ, ಪ್ರತಿಭೆ ಎಂದರೇನು?, ಪುರಂದರ ಸಾಹಿತ್ಯ ದರ್ಶನ, ಪುರುಷ ಸರಸ್ವತಿ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮ, ಪೂರ್ಣಪ್ರಜ್ಞ  ಪ್ರಶಸ್ತಿ, ರಾಘವೇಂದ್ರ ಸ್ವಾಮಿಗಳು, ಶ್ರೀ ರಾಮಕೃಷ್ಣ ಪರಮಹಂಸರ ಮಾತುಕತೆಗಳು, ಸಂಪ್ರದಾಯಕ ಚಿತ್ರಕಲೆ, ಸಂಪ್ರದಾಯ ಶಿಲ್ಪಕಲೆ, ಸಂಗೀತದ ಇತಿಹಾಸ, ಸಂಗೀತರತ್ನ ಚೌಡಯ್ಯ, ಶಂಕರ ವಾಣಿ, ಸೌಂದರನಂದ, ಶಾಂತಲ, ಶ್ರೀ ಕೃಷ್ಣನ ವ್ಯಕ್ತಿತ್ವ, ಶ್ರೀ ಶಂಕರ ಸಂದೇಶ, ಶ್ರೀ ಶಾರದಾ ಪೀಠದ ಮಾಣಿಕ್ಯ, ಶ್ರೀಸೂಕ್ತ, ಶ್ರೀ ತತ್ತ್ವನಿಧಿ, ಶ್ರೀ ಮಧ್ವಾಚಾರ್ಯರು, ಶ್ರೀ ಚಂದ್ರಶೇಖರ ಭಾರತಿ. ಸುಖ ಪ್ರಾರಬ್ಧ, ಟಿಬೆಟ್ಟಿನ ಯೋಗಿ ಮಿಲರೇಪ, ಟಿಬೆಟ್ಟಿನಲ್ಲಿ ತಾಂತ್ರಿಕ ಸಂಪ್ರದಾಯ, ತಿರುಚಿ ಸ್ವಾಮಿಗಳ ಬದುಕು ಬೆಳಕು, ತಿರುಪತಿ ತಿಮ್ಮಪ್ಪ, ತ್ಯಾಗರಾಜರು, ವೈದ್ಯಕ ಹಿತೋಪದೇಶ, ವೈವಸ್ವತ ಮನು, ವಾಲ್ಮೀಕಿ  ಪ್ರತಿಭೆ, ವರ್ಧಮಾನ ಮಹಾವೀರನಾದಾಮೃತಂ, ವೈದ್ಯಸಾರ ಸಂಗ್ರಹ, ವೇದ ವಾಜ್ಜ್ಮಯ ಮತ್ತು ಉಪನಿಷತ್ತುಗಳು, ವೈಶಾಖ ಪೂರ್ಣಿಮೆ, ವಿಚಾರ ಲಹರಿ, ವಿವಾಹ ಪದ್ಧತಿಗಳು, ವ್ಯಕ್ತಿಯ ಪ್ರವೃತ್ತಿಗಳು ಮತ್ತು ವಿನ್ಯಾಸಗಳು, ಯಂತ್ರಗಳು, ಗೀತ ಗೋವಿಂದ, ಭದ್ರಬಾಹುಸ್ವಾಮಿ, ಝಣ ಝಣ ಹಣ, ಬ್ರಾಹ್ಮ ಧರ್ಮ, ಚಿತ್ರ  ರಾಮಾಯಣ, ಕರ್ನಾಟಕದ ಕಲೆಗಳು, ಮೂರ್ತಿ ಶಿಲ್ಪ-ನೆಲೆ,ಹಿನ್ನೆಲೆ, ರಾಮಾನುಜ ದರ್ಶನ, ಹರಿದಾಸರು, ಶ್ರೀ ಪುರಂದರ ದಾಸರು, ದಂಡಿಯ ಅವಂತಿ ಸುಂದರೀ, ವೇದದಲ್ಲಿನ ಕಥೆಗಳು ಇವೇ ಮುಂತಾದವು ಪ್ರೊ. ಎಸ್. ಕೆ. ರಾಮಚಂದ್ರ ರಾಯರ ಅಸಂಖ್ಯಾತ ಕನ್ನಡ ಬರಹಗಳಲ್ಲಿ ಸೇರಿವೆ.

ಅವರ ಪ್ರಮುಖ ಆಂಗ್ಲ ಪ್ರಬಂಧಗಳಲ್ಲಿ   A Note on the Hindu Approach to Death,  A Tantrik Poem on Sri Sarada of Sringeri,  An Essay in Psychological Axiomatics,  Buddhism in Burma,  Chos: the Unique Dharma of Tibet, Conception of Stress in Indian Thought,  Crime And Punishment,  Human Situation,  Indian Cultural Heritage,  Introducing Sanskrit (Grammar),  Introduction to Mathematical Psychology,  Lam Rim Chen Mo, A Tibetan classic,  Mahavir Jayanti Speech,  Mind in Bhela Samhita,  Psychological Speculations of Sankara,  Psychology of Laya,  Religion and Fine Arts,  Rgveda: First Hymn,  Specimens of Panini’s Poetry,  The Conception of Nadi, Its Examination,  The Conception of Saraswati,  The Essentials of Indian Culture, The Essentials of Indian Culture,  The Human Situation,  The Iconography Of Saraswati,  The Indian Background of Tibetan Religion,  Thoughts on Medical Ethics,  Tibetan Medicine,  Tibetan Outlook on Monastic Life,  Tyagaraja,  Professor M. Hiriyanna and Jivanmukti ಮುಂತಾದವು ಸೇರಿವೆ.

ಅವರ ಆಂಗ್ಲ ಗ್ರಂಥಗಳೆಂದರೆ  Adhyatma Rasa Ranjani,  Agama Kosha in 12 volumes,  Art And Architecture Of Indian Temples,   Bhavanopanishad,  Buddha’s First Discourse, Chitra Ramayana,  Consciousness in Advaita,   Darshanodaya or Early Indian Thought,  Development Of Psychological Thought In India,   Dhyanashataka,  Dhyana and Zen,   Early Hoysala Art,   Elements of Early Buddhist Psychology,   Encyclopaedia Of Indian Iconography,  Encyclopedia of Indian Medicine -  3 Volumes,  Enlightenment Of Asthavakra,  Essential Values Of Indian Culture for Management,  Folk Origins Of Indian Temples,   Human Values In Tibetan Tradition,  Icons And Images of Indian Temples,  Indian Iconography,  Indian Temple Traditions,  Internal Yajna,  Jainism in South India,  Jeevamukti in Advaita,  Jinabhadra’s Manual of Meditation,   Mandalas in Temple Worship,   Mirror Of Self Realisation,  Mysore Chitramala,    Om – The Ultimate Word,  Origins of Indian Thought,  Prathima Kosha,  Principles Of Yagnavidhi, Purushasukta,  Rgveda Darshana,  Saligrama Kosha,  Shankara – A psychological study,  Shankara and Adhyasa Bhashya,   Social Institutions Among the Hindus, Sri Chakra – Its Yantra, Tantra and Mantra,    Studies in Indian Psychology,   Tantrik Practices In Srividya,  Tantrik Traditions In Tibet, Telakataha Gatha,  Temple Rituals,  Temples: Icons and Rituals,   The Compendium On Ganesha,  The Gommata Colossus,  The Hill Shrine Of Vengadam,  The Hill Shrine Of Tirupati,  The Idea of Sarvodaya,  The Teachings of the Buddha,   The Vital Force in Health and Disease, The Vital Force,  Tibetan Meditation,  Tibetan Tantric Tradition, Vastu Shilpa Kosha,  K. Venkatappa, Vrukshayurveda,    The Three Acharyas: Shankara, Ramanuja and Madhwa,  Teachings of the Buddha,   Writings on Sankara’s Advaita ಮುಂತಾದವು.

ಈ ಅಸಾಮಾನ್ಯ ಪ್ರತಿಭಾವಂತ ವಿದ್ವಾಂಸರು ಫೆಬ್ರುವರಿ 2, 2006ದಂದು ಈ ಲೋಕವನ್ನಗಲಿದರು.  ಅವರ ಕಾಲದಲ್ಲಿ ನಾವು ಜೀವಿಸಿದ್ದೆವು.  ಅವರ ಮಾತುಗಳನ್ನು ಕೇಳಿದ್ದೆವು , ಅವರು ಬರೆದ ಕೆಲವೊಂದು ಬರಹಗಳನ್ನು ದೃಷ್ಟಿಸಿದ್ದೆವು ಎಂಬ ಪುಣ್ಯ ನಮ್ಮದು.  ನಾವು ಈ ಮಹಾನ್ ಚೇತನಕ್ಕೆ ನಮ್ಮ ಸಾಷ್ಟಾಂಗ ಪ್ರಣಾಮಗಳು.

Tag: S. K. Ramachandra Rao

ಕೃಷ್ಣಮೂರ್ತಿ ಪುರಾಣಿಕ

ಕೃಷ್ಣಮೂರ್ತಿ ಪುರಾಣಿಕ


ಕನ್ನಡದ ಕಾದಂಬರಿ ಲೋಕದ ಪ್ರಮುಖರಲ್ಲಿ  ಕೃಷ್ಣಮೂರ್ತಿ ಪುರಾಣಿಕರು ಸದಾ ವಿರಾಜಮಾನರು.  ಜನಪ್ರಿಯತೆ, ಗಾತ್ರ ಮತ್ತು ಗುಣಾತ್ಮಕ ಅಂಶಗಳ ವಿವಿಧ ತುಲನೆಗಳಲ್ಲಿ ಕೃಷ್ಣಮೂರ್ತಿ ಪುರಾಣಿಕರು ಮಹತ್ವದ ಹೆಸರಾಗಿದ್ದಾರೆ.  ಅವರ ಕಾದಂಬರಿಗಳ ಸಂಖ್ಯೆಯೇ ಎಂಭತ್ತರ ಸಂಖ್ಯೆಯನ್ನು ಮೀರಿದ್ದು.  ಅವರ ಇತರ ಕೊಡುಗೆಗಳಾದ ಸಣ್ಣಕಥೆ, ಕವನ, ನಾಟಕ, ಮಕ್ಕಳ ಸಾಹಿತ್ಯ, ವಿಮರ್ಶೆ ಇತ್ಯಾದಿಗಳು ಕೊಡಾ ಗಣನೀಯವಾದವು.

ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಗಳು ಜನಸಾಮಾನ್ಯರ ಆದರಣೆಯ ಓದಿಗೆ ಪಾತ್ರವಾದಂತೆಯೇ ಕನ್ನಡ ಚಿತ್ರರಂಗದ ಸಾಮಾಜಿಕ ಕಾದಂಬರಿ ಆಧಾರಿತ ಚಿತ್ರಗಳ ನಿಟ್ಟಿನಲ್ಲಿ ಪ್ರಮುಖ ಕೊಡುಗೆಗಳೂ ಹೌದು.  ಕೃಷ್ಣಮೂರ್ತಿ ಪುರಾಣಿಕರ ಪ್ರತಿಭೆ ಕರುಣೆಯೇ ಕುಟುಂಬದ ಕಣ್ಣು’, ‘ಕುಲವಧು’, ‘ಸನಾದಿ ಅಪ್ಪಣ್ಣ’ , ‘ಹಾಲುಂಡ ತವರುಮುಂತಾದ ಉತ್ತಮ ಚಿತ್ರಕಥಾನಕಗಳಿಂದ ಚಿರಸ್ಮರಣೀಯವಾಗಿ ಉಳಿದಿದೆ. 
 
ಕೃಷ್ಣಮೂರ್ತಿ ಪುರಾಣಿಕರು ಬಾಗಲಕೋಟೆ ಜಿಲ್ಲೆಯ ಬೀಳಗಿಯವರು, ಆದರೆ ನೆಲೆಸಿದ್ದು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ. ಕೃಷ್ಣಮೂರ್ತಿ ಪುರಾಣಿಕರು ಸೆಪ್ಟೆಂಬರ್ 5, 1911ರಲ್ಲಿ ಜನಿಸಿದರು.    ತಾಯಿ ಲಕ್ಷ್ಮೀಬಾಯಿ. ತಂದೆ ತಮ್ಮಣ್ಣಭಟ್ಟರು. ಪುರಾಣಿಕರು ವೈದಿಕ ವೃತ್ತಿಯ ಸುಸಂಸ್ಕೃತ ಮನೆತನದಲ್ಲಿ ಸದಾ ಪುರಾಣ-ಪುಣ್ಯ ಕತೆಗಳ ಪರಿಸರದಲ್ಲಿ ಬೆಳೆದವರು.  ಕೃಷ್ಣಮೂರ್ತಿ ಪುರಾಣಿಕರು ಬಿ.ಎ.ಬಿ.ಟಿ ಪದವಿ ಪಡೆದ ಬಳಿಕ ಗೋಕಾಕ ಪ್ರೌಢಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದರು.

ಮನೆಯಲ್ಲಿ ಸಾಹಿತ್ಯದ ಬಗ್ಗೆ ರುಚಿ ತೋರಿಸಿದವರು ತಂದೆ ತಾಯಿಗಳಾದರೆ ಹೊರಗೆ ರಂ.ಶ್ರೀ. ಮುಗಳಿ, ಭಾವಗೀತೆಗಳಲ್ಲಿ ಬೇಂದ್ರೆ, ಸರಳ ರಗಳೆಯ ನಾಟಕಗಳಿಗೆ ಕುವೆಂಪುರವರು ಮಾರ್ಗದರ್ಶಕರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿದ್ದಾಗಲೇ ಕತೆ, ಕವನಗಳ ರಚನೆ ಮಾಡಿದ್ದರು. ವಾರಾನ್ನದ ಹುಡುಗನಾಗಿ ಬಾಗಲಕೋಟೆಯ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ, ಊಟಮಾಡುತ್ತಿದ್ದ ಮನೆಯಲ್ಲಿದ್ದ ಹದಿಹರೆಯದ ಹುಡುಗಿಯೊಬ್ಬಳು ಮದುವೆಯಾದ ವರ್ಷವೇ ವಿಧವೆಯಾಗಿ ಬಂದವಳನ್ನು ಕತ್ತಲೆ ಕೋಣೆಯಲ್ಲಿ ಕೂಡಿಹಾಕಿದ್ದರಂತೆ.  ಅಚಾನಕವಾಗಿ ಇವರ ಕಣ್ಣಿಗೆ ಬಿದ್ದ ಆಕೆ, ‘ಕೃಷ್ಣ ಕೊಂಚ ವಿಷ ತಂದು ಕೊಡು, ಬದುಕು ಬೇಡವಾಗಿದೆಎಂದಳಂತೆ. ಅವಳ ದುಃಖದ ಜೀವನವು ಇವರನ್ನು ಹಿಂಡಿ ಹಿಪ್ಪೆಮಾಡಿ, ಮನದಾಳದಲ್ಲಿ ಮೂಡಿದ ದುಃಖ

ಸುಡು ಸುಡಲೇ ಸುಡುಜೀವ
ಸುಡುಗಾಡು ಸೇರಿಹಳು ಹುಡುಕದಿರು
ಸಂತಸದ ಬಾಳಿನಲಿ…..
ಎಂದು ಕವನವಾಗಿ ಹೊಮ್ಮಿತಂತೆ. ಆದರ್ಶದ ಕನಸು ಕಾಣುತ್ತಿದ್ದ ಯುವಕನಿಗೆ ಬಾಳಿನ ನೋವಿನ ದರ್ಶನವಾದಂತೆಲ್ಲ ಬರೆದದ್ದು ಹಲವಾರು ಕತೆಗಳು ಹಾಗೂ ಕವಿತೆಗಳು. ಹೀಗೆ ಬರೆದ ಕತೆ, ಕವನಗಳು ಕನ್ನಡಿಗ, ಕರ್ನಾಟಕ ವೈಭವ, ಜಯಕರ್ನಾಟಕ, ಜಯಂತಿ, ವಸಂತ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು.  ಇವರ ಮೊದಲ ಗದ್ಯಕೃತಿ ರಾಮೂನ ಕತೆಗಳುಪ್ರಕಟವಾದದ್ದು  1946ರಲ್ಲಿ. ಮೊದಲ ಕವನ ಸಂಕಲನ ಬಾಳ ಕನಸು’ 1947ರಲ್ಲಿ.


ಒಮ್ಮೆ ಶಿವರಾಮಕಾರಂತರು, ದ.ಬಾ. ಕುಲಕರ್ಣಿಯವರು ಗೋಕಾಕಕ್ಕೆ ನಾಡಹಬ್ಬದ ಸಲುವಾಗಿ ಬಂದಾಗ, ಇವರ ಮನೆಗೂ ಬಂದರು. ಪುರಾಣಿಕರು ಹೊಸದಾಗಿ ಬರೆದ ಕವನವನ್ನು ಹಾಡಿ ತೋರಿಸಿದರು. ಕಾರಂತರು  ಕೇಳಿ ಮೆಚ್ಚಿದರು. ಜೊತೆಗೆ ಮತ್ತೊಂದು ಮಾತನ್ನೂ ಸೇರಿಸಿದರು. ನಾವು ಬರೆಯುವುದು ಜನರಿಗೆ ಮುಟ್ಟಬೇಕು, ಅವರಲ್ಲಿ ಜಾಗೃತಿಯನ್ನುಂಟುಮಾಡಬೇಕು, ಇದು ಕಾವ್ಯದಿಂದ ಆಗುವುದೆಂದು ಅನ್ನಿಸುವುದಿಲ್ಲ. ನೀವು ಗದ್ಯದಲ್ಲೇ ಬರೆಯಲು ಪ್ರಾರಂಭಿಸಿಎಂದರಂತೆ.


ಸಮಾಜ ಜೀವನದಲ್ಲಿರುವ ಅಂಕುಡೊಂಕುಗಳು, ಏರು-ಪೇರುಗಳು, ಕಷ್ಟ-ಕಾರ್ಪಣ್ಯಗಳೇ ಇವರ ಕಾದಂಬರಿಗಳ ವಸ್ತುವಾಗಿ ಬರೆದ ಮೊದಲ ಕಾದಂಬರಿ ಮುಗಿಲಮಲ್ಲಿಗೆ’ (1948) ಪ್ರಕಟಗೊಂಡಾಗ ಕನ್ನಡ ಜನತೆ ಸಂತಸದಿಂದ ಬರಮಾಡಿಕೊಂಡಿತು.  ಒಮ್ಮೆ ಅ.ನ.ಕೃ.ರವರು ಪ್ರಕಾಶಕರೊಬ್ಬರೊಡನೆ ಮಾಡಿಕೊಂಡ ಒಪ್ಪಂದದಂತೆ ಕಾದಂಬರಿಯೊಂದನ್ನು ಬರೆದು ಕೊಡಬೇಕಿತ್ತು. ಆದರೆ ಬರವಣಿಗೆ ಸಾಗದಿದ್ದಾಗ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಯನ್ನು ಶಿಫಾರಸ್ಸು ಮಾಡಿದರು. ಇದರಿಂದ ಅ.ನ.ಕೃ ರವರ ಕಾದಂಬರಿಯನ್ನು ಕಾಯುತ್ತಿದ್ದವರು ಪುರಾಣಿಕರ ಕಾದಂಬರಿಯನ್ನು ಓದಿ ಇವರ ಕಾದಂಬರಿಗಳಿಗಾಗಿ ಕಾಯುವಂತಾಯಿತು. ಕತೆ, ಕಾದಂಬರಿ ಓದುವುದೇ ಮುಖ್ಯ ಮನರಂಜನೆಯಾಗಿದ್ದ ಕಾಲದಲ್ಲಿ ಸುಸಂಸ್ಕೃತ ಬರಹದ ಕಾದಂಬರಿಗಳಿಗೆ ಬಹುಬೇಡಿಕೆ ಇತ್ತು. ಒಂದಾದಮೇಲೊಂದರಂತೆ ಬರೆದ ಪುರಾಣಿಕರ ಕಾದಂಬರಿಗಳಿಗೆ ಹಳೆಯ ಮೈಸೂರು ಪ್ರದೇಶದ ಓದುಗರಿಂದಲೂ ಅಭೂತಪೂರ್ವ ಸ್ವಾಗತ ದೊರೆಯಿತು. ಪುರಾಣಿಕರು ಓದುಗರ ಮನೆಮಾತಾದರು.


ಅಂದಿನ  ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ  ಕೀಳುದರ್ಜೆಯ ಕಾದಂಬರಿಗಳ ಪ್ರಕಟಣೆಯೂ ಪ್ರಾರಂಭವಾಗಿದ್ದು ಓದುಗರಿಗೆ ಆಯ್ಕೆಯೂ ಕಷ್ಟಕರವಾಗಿತ್ತು.  ರಂ.ಶ್ರೀ. ಮುಗಳಿಯವರು ಒಮ್ಮೆ ಪುರಾಣಿಕರನ್ನು ಪರಿಚಯಿಸುತ್ತಾ, “ಸಾಮಾನ್ಯವಾಗಿ ನಾನು ಮೊದಲು ಕಾದಂಬರಿಯನ್ನು ಓದಿ ನಂತರ ಮನೆಯವರ ಕೈಲಿಡುತ್ತೇನೆ. ಆದರೆ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಯನ್ನು ನೇರವಾಗಿ ಮಗಳಿಗೆ ಕೊಡುತ್ತೇನೆಎಂದಿದ್ದರಂತೆ.  ಇದು ಪುರಾಣಿಕರ ಕಾದಂಬರಿಗಳ ಬಗ್ಗೆ, ಅವರ ಸುಸಂಸ್ಕೃತ ಬರಹದ ಬಗ್ಗೆ ಇದ್ದ  ಸದಭಿಪ್ರಾಯ. ಹೀಗೆ ಪ್ರಾಚೀನ ಪರಂಪರೆ, ಜೀವನ ಮೌಲ್ಯಗಳು, ಹೆಣ್ಣಿನ ದುಃಖ-ದುಮ್ಮಾನ ಮೊದಲಾದವುಗಳೇ ಅವರ ಕಾದಂಬರಿಗಳ ವಸ್ತುವಾಗಿದ್ದರಿಂದ ಮನೆಯವರೆಲ್ಲರೂ ಓದುವುದಷ್ಟೇ ಅಲ್ಲದೆ ಕುಳಿತು ಚರ್ಚಿಸಬಲ್ಲ ಸಹ್ಯ ಸಾಹಿತ್ಯ ಸೃಷ್ಟಿಸಿದರು.


ಸುಮಾರು 80 ಕಾದಂಬರಿಗಳು, 11 ಗೀತನಾಟಕಗಳು, 12 ಸಣ್ಣಕಥಾ ಸಂಕಲನಗಳು, 4 ಕವನ ಸಂಕಲನಗಳು, 8 ಶಿಶು ಸಾಹಿತ್ಯ ಕೃತಿಗಳು ಸೇರಿ ಕೃಷ್ಣಮೂರ್ತಿ ಪುರಾಣಿಕರು  ಒಟ್ಟು 115 ಕೃತಿಗಳನ್ನು ರಚಿಸಿದ್ದಾರೆ.
ಕಾಲೇಜು ದಿನಗಳಲ್ಲೇ ಬರೆದ ಸೈರಂಧ್ರಿಸುಂದರ ಸರಳ ರಗಳೆಯ ನಾಟಕ. ಇದು ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಗೊಂಡ ನಂತರ ರಂಗಭೂಮಿಯ ಮೇಲೂ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಸರಳ ರಗಳೆಯ ಕೃತಿ ರಚನೆಯಲ್ಲಿ ಪುರಾಣಿಕರಿಗೆ  ಕುವೆಂಪುರವರೇ ಆದರ್ಶ. ಕುವೆಂಪುರವರ ಕೆಲ ಕೃತಿಗಳನ್ನು ಸಾರ್ವಜನಿಕವಾಗಿ ವಾಚನ ಮಾಡತೊಡಗಿದ ನಂತರ, ಇದರಿಂದ ಸ್ಫೂರ್ತಿಗೊಂಡು ರಚಿಸಿದ್ದು ಮಗನ ಗೆಲುವು’, ‘ಸೈರಂಧ್ರಿ’, ‘ರಾಧೇಯ’, ‘ರತಿವಿಲಾಸ’, ‘ಜಯಭೇರಿ’, ‘ವಾಸವದತ್ತಮೊದಲಾದ ಕೃತಿಗಳು.  ಅಂದಿನ ದಿನಗಳಲ್ಲೇ  ಸೈರಂಧ್ರಿಯ ಎಪ್ಪತ್ತು ಸಾವಿರ ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿತು.


ಹೀಗೆ ಕೃಷ್ಣಮೂರ್ತಿ ಪುರಾಣಿಕರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ದುಡಿದಿದ್ದರೂ ಕಾದಂಬರಿಕಾರರೆಂದೇ ಪ್ರಸಿದ್ಧರಾಗಿದ್ದಾರೆ. ಗೃಹಿಣಿಯರಿಗೆ ಪಥ್ಯವಾಗುವ ರೀತಿಯಲ್ಲಿ ಕಾದಂಬರಿ ರಚಿಸಿರುವೆ.   ಸೀತಾ, ದ್ರೌಪದಿ, ಕುಂತಿ ಮುಂತಾದವರು ಪಟ್ಟ ಕಷ್ಟ, ತೋರಿದ ಎದೆಗಾರಿಕೆ ಇಂದಿನ ಮಹಿಳೆಯರಿಗೆ ಬೇಕಾಗಿದೆ. ಹೀಗೆ ಚಿತ್ರಿಸುವಾಗ ವಿವೇಕ, ಕಲಾವಂತಿಕೆಯನ್ನೂ ತೋರಿಸುವ ಶಕ್ತಿ ನಿನ್ನಲ್ಲಿದೆ, ಮುಂದುವರೆಸುಎಂದು ಬೇಂದ್ರೆಯವರು ಹಾರೈಸಿದರಂತೆ.


ಅದರಂತೆ ಯಾವಾಗಲೂ ಅನುಕಂಪದ ಪನ್ನೀರಿನಲ್ಲಿ ಅದ್ದಿ ಬರೆದ ಪುರಾಣಿಕರ ಲೇಖನಿಯಿಂದ ಮುತ್ತೈದೆ, ಮಣ್ಣಿನ ಮಗಳು, ಧರ್ಮದೇವತೆ, ಮಂಗಳಾಕ್ಷತೆ, ಗಂಧದ ಬಳ್ಳಿ, ಕಣ್ಣು ತುಂಬಿದ ಕರುಣೆ, ಹಿಮಗಿರಿಯ ಗೌರಿ, ಹಾಲುಂಡ ತವರು ಮುಂತಾದ ಕಾದಂಬರಿಗಳು ಓದುಗರಿಗೆ ಮೆಚ್ಚುಗೆಯಾದವು.


ಚಿತ್ರೋದ್ಯಮಿಗಳು ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ನಿರ್ಮಿಸತೊಡಗಿದ್ದೂ ಪುರಾಣಿಕರ ಕಾದಂಬರಿಗಳಿಂದಲೇ. ಪ್ರಥಮ ಚಲನಚಿತ್ರವಾದ ಕಾದಂಬರಿ ಧರ್ಮದೇವತೆಯು ಕರುಣೆಯೇ ಕುಟುಂಬದ ಕಣ್ಣುಎಂಬ ಹೆಸರಿನಿಂದ 1962ರ ವರ್ಷದಲ್ಲಿ  ಚಲನಚಿತ್ರವಾಗಿ ಜನಪ್ರಿಯವಾಯಿತು. ಸುಮಾರು 11 ಕಾದಂಬರಿಗಳು  ಚಲನಚಿತ್ರವಾಗಿ ಕೃಷ್ಣಮೂರ್ತಿ ಪುರಾಣಿಕರಿಗೆ ಖ್ಯಾತಿಯನ್ನು ತಂದು ಕೊಟ್ಟವು.


ಮಗಳ ಮದುವೆಯ ಸಂದರ್ಭದಲ್ಲಿ ಕಡಿಮೆಬಿದ್ದ ಒಂದೂವರೆ ಸಾವಿರ ರೂಪಾಯಿಗೆ ಭಗವಂತನ ಮೇಲೆ ಭಾರ ಹಾಕಿ ಪ್ರಾರ್ಥಿಸುತ್ತಿದ್ದರಂತೆ.  ಆ ಸಂದರ್ಭದಲ್ಲಿ  ತಮಿಳಿನ ಎ.ವಿ.ಎಂ. ಪಿಕ್ಚರ್ಸ್ ಪ್ರತಿನಿಧಿ ಮುತ್ತೈದೆತಮಿಳು ತರ್ಜುಮೆಯ ಚಿತ್ರೀಕರಣಕ್ಕೆ ಮುಂಗಡ ಹಣವೆಂದು ಒಂದೂವರೆ ಸಾವಿರ ರೂಪಾಯಿ ಕೊಟ್ಟು ಹೋದರಂತೆ.  ಕನ್ನಡದಲ್ಲಿ ಮುತ್ತೈದೆ ಹಸೆಗೆ ಬರುವುದರ ಮೊದಲೇ ತಮಿಳು ಚಿತ್ರರಂಗದವರು ಆರತಿ ಬೆಳಗಿದ್ದು ಸ್ವಾರಸ್ಯಕರ ಸಂಗತಿಎಂದು ಎಚ್ಚೆಸ್ಕೆ ಬರೆಯುತ್ತಾರೆ.


ಹೀಗೆ ಚಲನಚಿತ್ರಗಳಾದ ಕಾದಂಬರಿಗಳೆಂದರೆ ಧರ್ಮದೇವತೆ (1962), ಕುಲವಧು(1963), ಭಾಗೀರಥಿ(1969), ಮಣ್ಣಿನ ಮಗಳು (1974), ಪಾವನ ಗಂಗಾ ಮತ್ತು ಸನಾದಿ ಅಪ್ಪಣ್ಣ (1977) ಮುಂತಾದವುಗಳಲ್ಲದೆ ಮುತ್ತೈದೆ, ದೇವರ ಕೂಸು, ಮೌನಗೌರಿ ಬೆವರಿನಬೆಲೆ, ಮಂಗಳಾಕ್ಷತೆವಸಂತಲಕ್ಷ್ಮಿ ಮುಂತಾದ ಕಾದಂಬರಿಗಳು ರಜತ ಪರದೆಯನ್ನೇರಿದವು. ಸನಾದಿ ಅಪ್ಪಣ್ಣಚಿತ್ರವಂತೂ ಭಾರತರತ್ನ ಬಿಸ್ಮಿಲ್ಲಾ ಖಾನ್ ಅವರ ಶಹನಾಯಿ ವಾದನ, ರಾಜ್ ಕುಮಾರ್ ಅವರ ಪ್ರಬುದ್ಧ ಅಭಿನಯ, ಜಯಪ್ರದಾ ಅವರ ಮನಮೋಹಕ ನೃತ್ಯಪ್ರದರ್ಶನದಂತಹ ಶ್ರೇಷ್ಠ ಕಲಾ ಸಮ್ಮಿಲನಕ್ಕೆ ಒಂದು ವೇದಿಕೆಯನ್ನೇ ಸೃಷ್ಟಿಸಿತು.  ಹಾಲುಂಡ ತವರುಕಾದಂಬರಿ ವಿಷ್ಣುವರ್ಧನ್ ಅವರ ಉತ್ತಮ ಅಭಿನಯದ ಚಿತ್ರಗಳಲ್ಲಿ ಒಂದೆನಿಸಿದ್ದುತನ್ನ ಕಥಾನಕ ಮೌಲ್ಯಗಳಿಂದ ಕನ್ನಡದ ಜನತೆಯ ಮನಸೂರೆಗೊಂಡಿತು.  ಕನ್ನಡದ ಪ್ರಥಮ ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಣೆಗೆ ಆಯ್ಕೆಗೊಂಡ ಕನ್ನಡದ ಮಹತ್ವದ ಕೃತಿಗಳಲ್ಲಿ ಹಾಲುಂಡ ತವರುಕೃತಿಯೂ ಒಂದು.  

ಕನ್ನಡದಲ್ಲಿ ಗದ್ಯಸಾಹಿತ್ಯವನ್ನು ಬೆಳೆಸಿದ್ದಲ್ಲದೆ ಕನ್ನಡಿಗರಲ್ಲಿ ವಾಚನಾಭಿರುಚಿಯನ್ನು ಬೆಳೆಯುವಂತೆ ಮಾಡಿದ ಕೃಷ್ಣಮೂರ್ತಿ ಪುರಾಣಿಕರಿಗೆ ಸಂದ ಪ್ರಶಸ್ತಿ ಗೌರವಗಳೂ ಹಲವಾರು.  ಕೆ.ವಿ. ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ 1957ರಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಕವನ ವಾಚನ, ‘ಮಣ್ಣಿನ ಮಗಳುಕಾದಂಬರಿಗೆ ಮೈಸೂರು ರಾಜ್ಯ ಸರಕಾರದ ಮೊದಲ ಬಹುಮಾನ, ಶ್ರೀ ತರಳಬಾಳು ಜಗದ್ಗುರುಗಳಿಂದ ಕಾದಂಬರಿ ಶ್ರೀಬಿರುದು. ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ಧಾರವಾಡದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಜರುಗಿದ ಕಾದಂಬರಿ ಮತ್ತು ಚಲನಚಿತ್ರಗೋಷ್ಠಿಯ ಅಧ್ಯಕ್ಷತೆ, ಶೃಂಗೇರಿ ಜಗದ್ಗುರುಗಳಿಂದ ಶಾರದಾಂಬ ಚಿನ್ನದ ಪದಕ, ವಿಜಾಪುರ, ಸೊಲ್ಲಾಪುರ ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮುಂತಾದ ಪ್ರಶಸ್ತಿ ಗೌರವಗಳ ಜೊತೆಗೆ 1974ರಲ್ಲಿ ಶಿಷ್ಯರು, ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ಕಾದಂಬರಿ ದರ್ಶನ’,


ಅಕ್ಕಮಹಾದೇವಿ ನೀಲಾಂಜನ ಅವರು ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಗಳು:  ಒಂದು ಅಧ್ಯಯನಎಂಬ ಪ್ರೌಢ ಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದ್ದಾರೆ (1995). 

ಮುತ್ತೈದೆ’, ‘ಮಣ್ಣಿನ ಮಗಳು’, ‘ಧರ್ಮದೇವತೆ’, ‘ಕಣ್ಣು ತುಂಬಿದ ಕರುಣೆ’, ‘ವೇಷಧಾರಿ’, ‘ಮಂಗಳಾಕ್ಷತೆ’, ‘ಮಂದಾರ ಮಂದಾಕಿನಿ’, ‘ಗಂಧದ ಬಳ್ಳಿ’, ‘ಹಾಲುಂಡ ತವರು’, ‘ಬೆವರಿನ ಬೆಲೆ’, ‘ಹಿಮಗಿರಿಯ ಗೌರಿ’, ‘ಚಂದ್ರ ಚಂದ್ರಾನನೆ’, ‘ಕಾಂಚನ ಕಸ್ತೂರಿ’, ‘ದೇವರಕೂಸು’, ‘ಶಾಂತಿಸುಧಾ’, ‘ಬಯಲುಗಾಳಿ’, ‘ಹಬ್ಬಿದ ಬಳ್ಳಿ’, ‘ಸನಾದಿ ಅಪ್ಪಣ್ಣಮುಂತಾದವು ಪುರಾಣಿಕರ ಕೆಲವೊಂದು ಕಾದಂಬರಿಗಳು.    ಬಾಳ ಕನಸು’, ‘ಜೀವನಾದಕವನ ಸಂಕಲನಗಳು.  ಸೈರಂಧ್ರಿ’, ‘ಜಯಭೇರಿನಾಟಕಗಳು.  ಸಾಹಿತ್ಯ ಪ್ರಬಂಧಗಳುವಿಮರ್ಶಾ ಸಂಗ್ರಹ.  ಬೆಳವಾಡಿ ಮಲ್ಲಮ್ಮ’, ‘ಅಳಿಯ ದೇವರ ಆಟಮಕ್ಕಳ ಕೃತಿಗಳು. 


ಮಧ್ಯಮವರ್ಗದ ಜನಸಾಮಾನ್ಯರ ದೈನಂದಿನ ಬದುಕಿನ ಚಿತ್ರಣವನ್ನೇ ತಮ್ಮ ಕಾದಂಬರಿಗಳ ಮೂಲ ದ್ರವ್ಯವಾಗಿಸಿಕೊಂಡು ಹಲವಾರು ಕಾದಂಬರಿಗಳನ್ನೂ ರಚಿಸಿ ಅ.ನ.ಕೃ.ರವರಂತೆ ಕನ್ನಡಿಗರಲ್ಲಿ ಓದುವ ಹವ್ಯಾಸವನ್ನೂ ಬೆಳೆಸಿದ ಪುರಾಣಿಕರು ನವೆಂಬರ 13, 1985ರಂದು ಈ ಲೋಕವನ್ನಗಲಿದರು.  ಅವರು ನೀಡಿದ ಹಲವಾರು  ಸ್ಮರಣೀಯ ಕೃತಿಗಳಿಂದ ಕನ್ನಡ ಕಥಾಲೋಕದಲ್ಲಿ ಅಮರರಾಗಿದ್ದಾರೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: Krishnamurthi Puranika

ಡಾ. ಎಸ್. ರಾಧಾಕೃಷ್ಣನ್

ಡಾ. ಎಸ್. ರಾಧಾಕೃಷ್ಣನ್

ಆದರ್ಶ ಶಿಕ್ಷಕ, ವಿಶ್ವ ವಿಖ್ಯಾತ ತತ್ವಜ್ಞಾನಿ, ಭಾರತದ ಎರಡನೆಯ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು  1888ನೇ ಇಸವಿಯ ಸೆಪ್ಟಂಬರ್ 5ರಂದು ತಮಿಳುನಾಡಿನ ತಿರುತ್ತಣಿಯಲ್ಲಿ ಜನಿಸಿದರು. ತಂದೆ ವೀರಸಾಮಯ್ಯ ತಹಸೀಲ್‌ದಾರರಾಗಿದ್ದರು. ತಿರುಪತಿ, ವೆಲ್ಲೂರು ಮತ್ತು ಮದರಾಸಿನಲ್ಲಿ ವಿದ್ಯಾರ್ಜನೆ ಮಾಡಿದ ರಾಧಾಕೃಷ್ಣನ್ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿ. ಪ್ರತಿಯೊಂದು ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ಅವರಿಗೇ ಕಟ್ಟಿಟ್ಟದ್ದು. ಆಕಸ್ಮಿಕವಾಗಿ ನೆಂಟರೊಬ್ಬರು ಓದಲು ಕೊಟ್ಟ ಮೂರು ಪುಸ್ತಕಗಳು ಅವರ ಬಾಳಿನ ಗುರಿಯನ್ನೇ ನಿರ್ಧರಿಸಿಬಿಟ್ಟವು. ಅವುಗಳಿಂದ ಪ್ರಭಾವಿತರಾಗಿ, ಉನ್ನತ ಶಿಕ್ಷಣಕ್ಕಾಗಿ ತತ್ವಶಾಸ್ತ್ರವನ್ನು ಆರಿಸಿಕೊಂಡು ಬಿ.ಎ.  ಮತ್ತು ಎಂ.ಎ. ಪದವಿಗಳನ್ನು ಪಡೆದರು. ಇಪ್ಪತ್ತನೆಯ ವಯಸ್ಸಿನಲ್ಲೇ ವೇದಾಂತದ ನೀತಿಸಾರಗಳ ಕುರಿತಾಗಿ ಮಹಾಪ್ರಬಂಧವನ್ನು ಬರೆದರು.

ಚಿಕ್ಕ ವಯಸ್ಸಿನಿಂದಲೂ ರಾಧಾಕೃಷ್ಣನ್ ಪುಸ್ತಕ ಪ್ರಿಯರು. ವೇದ, ಉಪನಿಷತ್ತುಗಳನ್ನು ಒಳಗೊಂಡ  ಸಂಸ್ಕೃತವನ್ನು ಮಾತ್ರವಲ್ಲದೆ ಹಿಂದಿ ಭಾಷೆಯನ್ನೂ ಕಲಿತರು. ಪೌರ್ವಾತ್ಯ ಪಾಶ್ಚಿಮಾತ್ಯ ತತ್ವಶಾಸ್ತ್ರಗಳೆರಡರಲ್ಲಿಯೂ ಅವರಿಗೆ ಅಗಾಧ ಪಾಂಡಿತ್ಯವಿತ್ತು. ಪಾಶ್ಚಿಮಾತ್ಯ ರೀತಿಯ ಶಿಕ್ಷಣ ಸಂಸ್ಥೆಗಳಲ್ಲಿದ್ದ  ಶಿಸ್ತು, ಸಮಯ ಪರಿಪಾಲನೆ, ನಡೆನುಡಿಗಳಲ್ಲಿನ ಗಾಂಭೀರ್ಯ ಮೊದಲಾದವು ಅವರಲ್ಲಿ ರೂಪುಗೊಂಡಿತ್ತಾದರೂ, ಆ ಸಂಸ್ಥೆಗಳಲ್ಲಿ ಬೇರೂರಿದ್ದ  ಹಿಂದೂ ಧರ್ಮದ ಬಗೆಗಿನ ತಪ್ಪು ತಿಳುವಳಿಕೆಗಳನ್ನು ಗಮನಿಸಿದ್ದ ಅವರಿಗೆ  ಇಂತಹ ಸೀಮಿತ ಚಿಂತನೆಗಳನ್ನು ತಿದ್ದಬೇಕೆಂಬ ಹಂಬಲ ಪುಟಿದೇಳತೊಡಗಿತು. ಅವರ ಹಂಬಲಕ್ಕೆ ಸ್ವಾಮಿ ವಿವೇಕಾನಂದರ ಚಿಂತನೆಗಳು ಒತ್ತಾಸೆಯಾದವು.  ಹೀಗೆ ಹಿಂದೂ ಧರ್ಮ, ಸಮಗ್ರ ಭಾರತೀಯ ಚಿಂತನ ಪರಂಪರೆ ಮತ್ತು ತತ್ವಶಾಸ್ತ್ರಗಳ ಆಳವಾದ ಅಧ್ಯಯನವನ್ನು ಕೈಗೊಂಡ ಅವರು ಮುಂದೆ  ಅವುಗಳ ಬಗೆಗಿನ  ನಿಖರವಾದ ನಿರೂಪಣೆಗಳಿಂದ ಕೂಡಿದ ನೂರಾರು  ಲೇಖನ ಹಾಗೂ ಪುಸ್ತಕಗಳನ್ನು  ಪ್ರಕಟಪಡಿಸಿದರು.

ರಾಧಾಕೃಷ್ಣನ್ ಅವರ ವೃತ್ತಿ ಜೀವನವು 1909ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಿರಿಯ ಉಪನ್ಯಾಸಕರಾಗಿ ಆರಂಭಗೊಂಡಿತು. ಮರುವರ್ಷ, ಆ ಕಾಲದಲ್ಲಿ ಶಿಕ್ಷಕರಿಗೆ ಕಡ್ಡಾಯವಾಗಿದ್ದ. ಎಲ್. ಟಿ  ಪದವಿ ಗಳಿಸಲು ಶಿಕ್ಷಕರ ತರಬೇತಿ ಕಾಲೇಜಿಗೆ ವಿದ್ಯಾರ್ಥಿಯಾಗಿ ಸೇರಿದರು. ಆದರೆ, ತತ್ವಶಾಸ್ತ್ರದಲ್ಲಿ ಇವರಿಗಿದ್ದ ಜ್ಞಾನದ ಆಳವನ್ನು ಕಂಡುಕೊಂಡ ಅಲ್ಲಿನ ಪ್ರಾಧ್ಯಾಪಕರು, ಇವರು ಪಾಠ ಕಲಿಯುವ ಅವಶ್ಯಕತೆ ಇಲ್ಲಅದರ ಬದಲು, ತಮ್ಮ ಸಹ ವಿದ್ಯಾರ್ಥಿಗಳಿಗೆ ಪಾಠ ಕಲಿಸಲಿ ಎಂದು ತೀರ್ಮಾನಿಸಿದರು. ಇವರು ಕಲಿಸುವ ರೀತಿ ಎಷ್ಟು ವಿಶಿಷ್ಟವಾಗಿತ್ತೆಂದರೆಅವರ ಬೋಧನೆಯಲ್ಲಿ ಕಬ್ಬಿಣದ ಕಡಲೆಯಂತಹ ತತ್ವಶಾಸ್ತ್ರ ಕೂಡಾ ಮೃದು ಮಧುರವಾಗಿರುತ್ತಿತ್ತು  ಎಂದು ಪ್ರಖ್ಯಾತಿಪಡೆದಿತ್ತು.   1917ರಲ್ಲಿ ರಾಜಮಹೇಂದ್ರಿಯಲ್ಲಿ ಅವರು ಉಪನ್ಯಾಸಕರಾದರು.

1918ರಿಂದ 1921ರವರೆಗ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ರಾಧಾಕೃಷ್ಣನ್, ಅಲ್ಲಿಂದ ಮುಂದೆ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಅಂದಿನ  ದಿನಗಳಲ್ಲಿ ಕವಿ ರವೀಂದ್ರರ ಸಂಪರ್ಕ ಅವರಿಗೆ ಲಭಿಸಿತ್ತು. ಆನಂತರ, ಇಂಗ್ಲೆಂಡಿನ ಆಕ್ಸಫರ್ಡ್ ವಿಶ್ವವಿದ್ಯಾಲಯವೂ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅವರು  ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.   ಆಂಧ್ರ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳ ಉಪಕುಲಪತಿಯಾಗಿ, ದಿಲ್ಲಿ ವಿಶ್ವವಿದ್ಯಾಲದ ಕುಲಪತಿಯಾಗಿ ಆಡಳಿತದಲ್ಲೂ ತಮ್ಮ ಪ್ರಾವೀಣ್ಯವನ್ನು ರಾಧಾಕೃಷ್ಣನ್ ಮೆರೆದಿದ್ದಾರೆ. ಯನೆಸ್ಕೋದ ಅಧ್ಯಕ್ಷ ಸ್ಥಾನ, ಬ್ರಿಟಿಷ್ ಅಕಾಡೆಮಿಯ ಫೆಲೋಷಿಪ್, ಬ್ರಿಟನ್ನಿನ ರಾಣಿಯಿಂದ ದತ್ತವಾದ ಆರ್ಡರ್ ಆಫ್ ಮೆರಿಟ್, ಬ್ರಿಟಿಷ್ ಚಕ್ರಾಧಿಪತ್ಯದ ನೈಟ್‌ಹುಡ್, ಟೆಂಪಲಟನ್ ಅವಾರ್ಡ್, ವಿವಿಧ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್, ಜರ್ಮನಿಯ ಪುಸ್ತಕ ಮಾರಾಟಗಾರರ ಕೂಟದ ಶಾಂತಿ ಪುರಸ್ಕಾರ - ಇವು ಅವರಿಗೆ ಸಂದ ಕೆಲವು ಪ್ರಮುಖ ಗೌರವಗಳು. 1954ರಲ್ಲಿ ಭಾರತದ ಅತ್ಯುಚ್ಚ ಪುರಸ್ಕಾರವಾದ ಭಾರತ ರತ್ನಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.

1915ರಲ್ಲೇ ಡಾ. ರಾಧಾಕೃಷ್ಣನ್ ಗಾಂಧೀಜಿಯವರನ್ನು ಭೇಟಿಯಾಗಿದ್ದರು. ಅವರ ಚಿಂತನೆ ಮತ್ತು ಕಾರ್ಯವಿಧಾನಗಳನ್ನು ಸಮರ್ಥಿಸಿ ಲೇಖನಗಳನ್ನೂ ಬರೆದಿದ್ದರು. ಭಾರತವು ಸ್ವತಂತ್ರ ರಾಷ್ಟ್ರವಾಗಬೇಕೆಂದು ಹಂಬಲಿಸುತ್ತಿದ್ದರು. 1947ರಲ್ಲಿ ಭಾರತವು ಸ್ವತಂತ್ರವಾದಾಗ ನೇಮಕಗೊಂಡ ಸಂಸತ್ತಿನ ಸದಸ್ಯರಾದರು. ಅನಂತರ ಸ್ವತಂತ್ರ ಭಾರತದ ರಾಯಭಾರಿಯಾಗಿ ಸೋವಿಯಟ್ ರಷ್ಯಾದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. 1952 ರಿಂದ 1962ರವರೆಗೆ 5 ವರ್ಷಗಳ ಎರಡು ಅವಧಿಗೆ ಇವರು ಉಪರಾಷ್ಟ್ರಪತಿಯಾಗಿ ನಿಯುಕ್ತರಾದರು. ಉಪರಾಷ್ಟ್ರಪತಿಗಳೇ ರಾಜ್ಯಸಭೆಯ ಅಧ್ಯಕ್ಷರೂ ಆಗಿರುವುದರಿಂದ ಅಲ್ಲಿನ ಕಾರ್ಯಕಲಾಪಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು. 1962ರಲ್ಲಿ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿ ಮೇ, 13ನೆಯ ತಾರೀಖು ಅಧಿಕಾರ ವಹಿಸಿಕೊಂಡರು. ಅವರು ರಾಷ್ಟ್ರಪತಿಗಳಾಗಿದ್ದ ಕಾಲದಲ್ಲಿ, ಚೀನಾ ಮತ್ತು ಪಾಕಿಸ್ಥಾನಗಳೆರಡರೊಂದಿಗೂ ಯುದ್ಧಗಳಾದವು. ಪ್ರಧಾನಿ ನೆಹರೂ, ನಂತರ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ-ಇಬ್ಬರೂ ನಿಧನರಾದರು. ಆ ಕಷ್ಟದ ದಿನಗಳಲ್ಲಿ ದೇಶದ ಆಡಳಿತ ಸುಸೂತ್ರವಾಗಿ ನಡೆಯಲು ಅವರು ಪ್ರಧಾನಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. 1967ರಲ್ಲಿ ಮತ್ತೆ ರಾಷ್ಟ್ರಪತಿಗಳಾಗಬೇಕೆಂಬ ಒತ್ತಡಕ್ಕೆ ಮಣಿಯದೆ, ನಿವೃತ್ತರಾಗಿ ಮದರಾಸಿನಲ್ಲಿ ನೆಲೆಸಿದರು. ಹಲವು ಕಾಲದ ಅನಾರೋಗ್ಯದಿಂದಾಗಿ 1975ರಲ್ಲಿ ನಿಧನರಾದರು.

ಡಾ.  ರಾಧಾಕೃಷ್ಣನ್ ಅವರು ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ, ಅವರ  ಶಿಷ್ಯರೊಬ್ಬರು ಹೆಚ್ಚಿನ ಶಿಕ್ಷಣ ಪಡೆಯಲು ನೀವು ವಿದೇಶಕ್ಕೆ ಹೋಗುತ್ತೀರಾ?” ಎಂದು ಕೇಳಿದರಂತೆ. ಅದಕ್ಕೆ ಅವರು ಇಲ್ಲ, ಹೋಗುತ್ತೇನೆ, ಆದರೆ ಶಿಕ್ಷಣ ಪಡೆಯಲಲ್ಲ, ಶಿಕ್ಷಣ ನೀಡಲು ಹೋಗುತ್ತೇನೆಎಂದು ಉತ್ತರಿಸಿದರು. ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ದಿ ಹಿಂದೂ ವ್ಯೂ ಆಫ್ ಲೈಫ್ಎಂಬ ವಿಷಯವಾಗಿ ಅವರು ಉಪನ್ಯಾಸ ಮಾಡಿದಾಗ ಅವರ ಭವಿಷ್ಯವಾಣಿ ನಿಜವಾಯಿತು. ಬ್ರಿಟಿಷ್ ಚಕ್ರಾಧಿಪತ್ಯದ ವಿಶ್ವವಿದ್ಯಾಲಯಗಳ ಸಮ್ಮೇಳನ ಹಾಗೂ ಹಾರ್ವರ್ಡನಲ್ಲಿ ಅಂತರ್ರಾಷ್ಟ್ರೀಯ ತತ್ವಶಾಸ್ತ್ರ ಸಮ್ಮೇಳನ ಇವುಗಳಲ್ಲಿ ಭಾಗವಹಿಸಲು ಯುರೋಪ್ ಮತ್ತು ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾಗಿ ವಿಶ್ವದ ಅನೇಕ ಪ್ರಮುಖ ರಾಷ್ಟ್ರಗಳಿಗೆ ಸೌಹಾರ್ದ ಭೇಟಿ ನೀಡಿದ್ದರು. ಅವರು ಹೋದಲ್ಲೆಲ್ಲ, ಭಾರತೀಯ ಚಿಂತನೆ ಹಾಗ ತತ್ವಶಾಸ್ತ್ರಗಳ ಸಾರವನ್ನು ಅಲ್ಲಿಯ ಜನತೆಗೆ ತಿಳಿಹೇಳುತ್ತಿದ್ದರು. ಡಾ. ರಾಧಾಕೃಷ್ಣನ್ ಬರೆದ ಲೇಖನಗಳು ಮತ್ತು ಪುಸ್ತಕಗಳು ಸೇರಿ ಸುಮಾರು 150ಕ್ಕೂ ಹೆಚ್ಚು ಪ್ರಕಟಣೆಗಳಿವೆ. ಬೌದ್ಧಿಕ ಪ್ರಪಂಚದಲ್ಲಿ ತತ್ವಶಾಸ್ತ್ರವನ್ನು ಅವರಷ್ಟು ಸರಳವಾಗಿ, ನಿಖರವಾಗಿ ಪ್ರತಿಪಾದಿಸಿದವರು ವಿರಳ.  ಅವರ ಇಂಡಿಯನ್ ಫಿಲಾಸಫಿಎಂಬ ಬೃಹದ್ ಗ್ರಂಥ ಇಂದಿಗೂ ಒಂದು ಗೌರವಯುತ ಕೃತಿಯಾಗಿದೆ.

ಡಾ|| ರಾಧಾಕೃಷ್ಣನ್ ಒಬ್ಬ ಸರಳ, ಮಾನವೀಯ ವ್ಯಕ್ತಿ. ಅವರ ವೇಷ ಭೂಷಣವೂ ಅಷ್ಟೇ ಸರಳ. ಶುಭ್ರವಾದ ಪಂಚೆ, ಉದ್ದನೆಯ ಕೋಟು, ಬಿಳಿಯ ಪೇಟಾ, ಎತ್ತರದ ನೇರ ನಿಲುವು, ನೋಡಿದ ಕೂಡಲೆ ಗೌರವ ಹುಟ್ಟಿಸುವ ವ್ಯಕ್ತಿತ್ವ. ವಿದ್ವತ್ತಿನ ಭಾರ ಅವರ ಸರಳತೆಯನ್ನು ಮರೆಮಾಡಲಿಲ್ಲ. ಚರ್ಚೆಯ ವಿಷಯ ಎಷ್ಟೇ ಲಘುವಾಗಿರಲಿ, ಕಠಿಣವಾಗಿರಲಿ, ಅವರು  ವಿದ್ಯಾರ್ಥಿಗಳೊಂದಿಗೆ ಬೆರೆತು ಮುಕ್ತವಾಗಿ ಚರ್ಚಿಸಬಲ್ಲವರಾಗಿದ್ದರು.

ರಾಷ್ಟ್ರಪತಿಯಾಗಿ ಅವರಿಗೆ ಸಲ್ಲುತ್ತಿದ್ದ ಮಾಸಿಕ ಸಂಬಳವನ್ನು 10,000 ರೂ.ಗಳಿಂದ ರೂ.2000ಕ್ಕೆ ಸ್ವ-ಇಚ್ಚೆಯಿಂದ ಇಳಿಸಿಕೊಂಡದ್ದು ಅವರ ಋಜು ಸ್ವಭಾವಕ್ಕೆ ಸಾಕ್ಷಿ.

ಡಾ. ರಾಧಾಕೃಷ್ಣನ್ ಅವರ ಬಹುಮುಖ ಪ್ರತಿಭೆಯನ್ನು ವಿಶ್ವದ ಅನೇಕ ಗಣ್ಯರು ಪ್ರಶಂಸಿಸಿದ್ದಾರೆ.  ಮಹಾನ್ ತತ್ವಜ್ಞಾನಿ, ಶಿಕ್ಷಣವೇತ್ತ, ಮಹಾಮಾನವತಾವಾದಿಯಾದ ಇಂತಹ ಒಬ್ಬ ಶ್ರೇಷ್ಠ ವ್ಯಕ್ತಿ ನಮ್ಮ ರಾಷ್ಟ್ರಪತಿಯಾಗಿರುವುದೇ ನಮ್ಮ ಸೌಭಾಗ್ಯಎಂದು ಪಂಡಿತ್ ಜವಹರಲಾಲ್ ನೆಹರೂ ಹೇಳಿದ್ದರು. ಆಧುನಿಕ ಯುಗದ ಮಹಾ ತತ್ವಜ್ಞಾನಿ ಬರ್ಟ್ರಂ ಡ್ ರಸಲ್, “ಭಾರತವು ಒಬ್ಬ ತತ್ವಜ್ಞಾನಿಯನ್ನು ತನ್ನ ರಾಷ್ಟ್ರಪತಿಯಾಗಿ ಆಯ್ಕೆಮಾಡಿಕೊಂಡಿರುವುದೇ  ಆ ದೇಶದ ಹೆಗ್ಗಳಿಕೆಎಂದು ಬಣ್ಣಿಸಿದ್ದರು.

ವಾಕ್ಪಟುತ್ವದಲ್ಲಿ ರಾಧಾಕೃಷ್ಣನ್ ಅವರನ್ನು ಸರಿದೂಗಿಸುವವರು ಇಡೀ ಜಗತ್ತಿನಲ್ಲಿಯೇ ವಿರಳವೆಂದು ಹೇಳಲಾಗುತ್ತಿತ್ತು.  ಭಾರತೀಯ ಪರಂಪರೆಗಳನ್ನು ತನ್ನ ಶಿಕ್ಷಕವರ್ಗ ಮಾತ್ರವಲ್ಲದೆ ಇಡೀ ಜಗತ್ತಿಗೇ ತಿಳಿಯಹೇಳುವುದರಲ್ಲಿ ಮಹತ್ಕಾರ್ಯ ಕೈಗೊಂಡ ಪ್ರಮುಖರಲ್ಲಿ ಡಾ. ರಾಧಾಕೃಷ್ಣನ್ ಅವರ ಸಾಧನೆಗಳು ಚಿರಂತನವಾಗಿವೆ. 

ಮೈಸೂರಿನಲ್ಲಿ ಡಾ. ರಾಧಾಕೃಷ್ಣನ್ ಅವರು ಮಹಾರಾಜಾಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಸಂದರ್ಭದಲ್ಲಿ  ಅಪಾರ ಪ್ರಖ್ಯಾತಿಯನ್ನು ಸಂಪಾದಿಸಿದ್ದರು.  ಅತ್ಯುತ್ತಮ ಪ್ರಾಧ್ಯಾಪಕರೆಂದೂ ಮಹಾವಿದ್ವಾಂಸರೆಂದೂ ಗೌರವವನ್ನು ಗಳಿಸಿದ್ದ ಅವರು ಪೌರಾಣಿಕ ವ್ಯಕ್ತಿಯಂತೆ ಕಂಗೊಳಿಸುತ್ತಿದ್ದರು. ರಾಧಾಕೃಷ್ಣನ್ ಅವರು 1921ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ, ಅವರನ್ನು ಅವರ ವಿದ್ಯಾರ್ಥಿಗಳೇ ಬೀಳ್ಕೊಂಡ ಸನ್ನಿವೇಶವನ್ನು ಪ್ರೊ. ಎ. ಎನ್. ಮೂರ್ತಿರಾಯರು ಚಿತ್ರವತ್ತಾಗಿ ವರ್ಣಿಸಿದ್ದಾರೆ.  ಕೋಚ್ ಗಾಡಿಯನ್ನು ಹೂವಿನಿಂದ ಅಲಂಕರಿಸಿ ರಾಧಾಕೃಷ್ಣನ್ ಕುಳಿತ ಆ ಗಾಡಿಯನ್ನು ವಿದಾರ್ಥಿಗಳೇ ಎಳೆದುಕೊಂಡು ಹೋದರಂತೆ.  ದೈವಮಂದಿರವನ್ನು ಭಕ್ತರು ಅಲಂಕರಿಸುವಂತೆ ರೈಲುಗಾಡಿಯನ್ನು ವಿದಾರ್ಥಿಗಳು ಅಲಂಕರಿಸಿದ್ದರಂತೆ.  ವಿದಾರ್ಥಿಗಳ ಜೈಕಾರ ಮೊಳಗುತ್ತಿತ್ತು.  ರಾಧಾಕೃಷ್ಣನ್ ಅವರಿಗೆ ಗುಡ್ ಬೈಹೇಳಲು ಹಿರಿಯ ಅಧ್ಯಾಪಕರೇ ವಿದ್ಯಾರ್ಥಿಗಳ ಸಹಾಯದಿಂದ ಅವಕಾಶವನ್ನು ಕಲ್ಪಿಸಿಕೊಳ್ಳಬೇಕಾಯಿತು.  ವಿದ್ಯಾರ್ಥಿಗಳನೇಕರು ಭಾವೋದ್ರೇಕದಿಂದ ಅತ್ತರು.  ರಾಧಾಕೃಷ್ಣನ್ ಅವರ ಕಣ್ಣಿನಲ್ಲಿಯೂ ನೀರು ಬಂದಿರಬೇಕು.  ಇಂಥ ವಿಶ್ವಾಸವನ್ನು ಗಳಿಸಿದ ಅಧ್ಯಾಪಕರಿಂದ ವಿದ್ಯೆಗಳಿಸುವ ಸದವಕಾಶವನ್ನು ಪಡೆದ ವಿದ್ಯಾರ್ಥಿಗಳೇ ಧನ್ಯರು. (ಉಲ್ಲೇಖ: ಪ್ರೊ. ಜಿ. ವೆಂಕಟಸುಬ್ಬಯ್ಯನವರ ಸಿರಿಗನ್ನಡ ಸಾರಸ್ವತರು’). 


ಹೀಗೆ ಎಲ್ಲ ರೀತಿಯಲ್ಲೂ ಗೌರವಯುತರಾದ ಗುರುವರ್ಯರಾದ ಅವರ ಹುಟ್ಟಿದ ಹಬ್ಬ ಶಿಕ್ಷಕರ ದಿನಾಚರಣೆಯಾಗಿ ಆಚರಣೆಗೊಳ್ಳುತ್ತಿರುವುದು ಸಮರ್ಪಕವೆನಿಸಿದೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: Dr. S. Radhakrishnan

ಟೆಲಿವಿಷನ್

ಟೆಲಿವಿಷನ್

ಸೆಪ್ಟೆಂಬರ್ 7  ಟೆಲಿವಿಷನ್ ಜನ್ಮದಿನವಂತೆ.   ಟೆಲಿವಿಷನ್ ಬಗೆಗಿನ ಪ್ರಯೋಗಗಳು ವಿವಿಧ ರೀತಿಯಲ್ಲಿ 19ನೆಯ ಶತಮಾನದ ಕೊನೆಯ ದಶಕಗಳಲ್ಲೇ ಮೊದಲ್ಗೊಂಡವಾದರೂ, 1927ರಲ್ಲಿ ಅಮೆರಿಕದ ಸಂಶೋಧಕ ಫಿಲೋ ಟಿ ಫ್ರಾನ್ಸ್ ವರ್ಥ್ ಎಂಬಾತ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ `ಇಮೇಜ್ ಡಿಸೆಕ್ಟರ್' ಎಂಬ ಉಪಕರಣವನ್ನು ಬಳಸಿ ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಮೂಲಕ ಚಿತ್ರವನ್ನು ರವಾನಿಸುವಲ್ಲಿ ಯಶಸ್ವಿಯಾಗುವುದರೊಂದಿಗೆ ಅದಕ್ಕೊಂದು ಸ್ಪಷ್ಟ ರೂಪ ಬಂತು ಎಂಬುದು ತಿಳಿದವರ ಅಂಬೋಣ.  ಆ ಪ್ರಯೋಗ ಯಶಸ್ವಿಯಾದ ಸಂದರ್ಭದಲ್ಲಿ ಫಿಲೋ ಟಿ ಫ್ರಾನ್ಸ್ ವರ್ಥ್ ಅವರು ತಮ್ಮ ಜೋಡಣೆಯನ್ನುದ್ದೇಶಿಸಿ  'ನೀನು ಎಲೆಕ್ಟ್ರಾನಿಕ್ ಟೆಲಿವಿಷನ್!' ಎಂದು  ಅದಕ್ಕೊಂದು ನಾಮಕರಣ ಮಾಡಿದರಂತೆ.

ಸ್ವಲ್ಪ ವಿಜ್ಞಾನ ನನ್ನ ತೆಲೆಗೆ ಹೋಗುವುದು ಕಷ್ಟ.   ನನ್ನಂತಹವ  ಕೂಡಾ ಇದನ್ನು ಉಪಯೋಗಿಸುತ್ತಾನೆ  ಎಂಬುದನ್ನು  ಮುಂದಾಲೋಚನೆ ಮಾಡಿಯೇ ಬಹುಷಃ ಪಂಡಿತರು ಇದನ್ನು  ‘ಮೂರ್ಖರ ಪೆಟ್ಟಿಗೆ’ ಎಂದು ವಿಶ್ಲೇಷಿಸಿರಬೇಕು!    ನಾನು ಮೊದಲು ಈ ಪೆಟ್ಟಿಗೆಯನ್ನು ನೋಡಿದ್ದು ಇಂದು ಮೈಸೂರು  ಮೆಡಿಕಲ್ ಕಾಲೇಜಿನ ಭಾಗವಾಗಿರುವ ಕಟ್ಟಡದಲ್ಲಿ ಅಂದು ನಡೆಯುತ್ತಿದ್ದ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ.    ಈಗಲೂ ಚೆನ್ನಾಗಿ ನೆನೆಪಿದೆ ಒಂದು ತಳುಕು ಬಳುಕಿನ ಪೆಟ್ಟಿಗೆಗೆ ಮುಂದೆ ಗಾಜು ಹಾಕಿತ್ತು. ಅದರ ಮುಂದೆ ಟೆಲಿವಿಷನ್ ಎಂದು ಎಲ್ಲರೂ ಓದುವ ಹಾಗೆ ಒಂದು ಫಲಕ ಬರೆದಿದ್ದರು.  ಅದರ ಮುಂದಿದ್ದ ಗಾಜಿನಲ್ಲಿ ಸಾಲಾಗಿ ಬರುತ್ತಿದ್ದ ನಮ್ಮ ಮುಖಗಳೆಲ್ಲ ಕಾಣುತ್ತಿದ್ದವಾದ್ದರಿಂದ ನನಗೆ ತಕ್ಷಣ ಹೊಳೆದ ವಿಚಾರವೆಂದರೆ “ಒಂದು ಪೆಟ್ಟಿಗೆಯ ಮುಂದೆ ಕನ್ನಡಿಯನ್ನು ಜೋಡಿಸಿದರೆ” ಅದು ಟೆಲಿವಿಷನ್ ಆಗುತ್ತೆ!

ಕೊನೆಗೊಂದು ದಿನ ನಮ್ಮೂರಲ್ಲೂ ಟೆಲಿವಿಷನ್ ಬಂತು.  ಟೆಲಿವಿಶನ್ ಅಂಗಡಿ ಮುಂದೆ, ಮೊದ ಮೊದಲು ಕೊಂಡ ಶ್ರೀಮಂತರ ಮನೆಗಳಿಗೆ ನಾವು ಧಾವಿಸಿದ್ದೇ ಧಾವಿಸಿದ್ದು.  ಕೊನೆಗೊಂದು ದಿನ ಇದನ್ನು ಕೊಳ್ಳದಿದ್ದರೆ ನಮಗೆ ಘನತೆ ಎಂಬುದಿಲ್ಲ ಎಂದು ನಮ್ಮ ಮನೆಯವರಿಗೆಲ್ಲಾ ಅರಿವಾದ್ದರಿಂದ ನಮ್ಮ ಮನೆಗೂ ಬಂತು.  ಅಂದಿನಿಂದ ಕಚೇರಿಯಲ್ಲಿ ಓವರ್ ಟೈಂ ಎಲ್ಲಾ ಬಂದ್.  ಆರು ಗಂಟೆಗೆ ದೂರದರ್ಶನ ಕಾರ್ಯಕ್ರಮ ಪ್ರಾರಂಭ ಸೂಚಕವಾಗಿ ಅಳೋ ರಾಗದ ಹಿನ್ನೆಲೆಯಲ್ಲಿ ಚಕ್ರ ಸುತ್ತುತ್ತಾ  ಬರುತ್ತಿದ್ದ ಪ್ರಾರಂಭಕ್ಕೂ ಮುಂಚಿತವಾಗಿಯೇ ಉದ್ದುದ್ದ ಕಾಣುತ್ತಿದ್ದ ಗೆರೆಗಳಿಂದ ಹಿಡಿದು ಅದು ಮುಕ್ತಾಯದವರೆಗೆ ನಾವು ನೋಡಿದ್ದೂ ನೋಡಿದ್ದೇ.  ಆ ಮಹಾರಾಯ್ತಿ ಇಂದಿರಾಗಾಂಧಿ, ರಾಜೀವ್ ಗಾಂಧಿಯನ್ನು ದೂರದರ್ಶನದಲ್ಲಿ ಎಷ್ಟು ನೋಡಿ ಈ ಕಣ್ಣುಗಳು ಹಾಳಾದವೋ ಗೊತ್ತಿಲ್ಲ.  ಒಮ್ಮೆ ಆರ್ ಕೆ ಲಕ್ಷ್ಮಣ್ ಒಂದು ಸುಂದರ ಕಾರ್ಟೂನು ಬರೆದಿದ್ರು.  ಅದರಲ್ಲಿ ಒಬ್ಬ ಮನೆಯಲ್ಲಿ ರಾಜೀವ್ ಗಾಂಧಿ ಫೋಟೋನೇ ನೋಡ್ತಾ ಕೂತಿದ್ದ.  ಇದೇನು ಹೀಗೆ ಎಂದು ಪ್ರಶ್ನಾರ್ಥಕವಾಗಿ ನೋಡಿದ ಮಿಸ್ಟರ್ ಸಿಟಿಜನ್ಗೆ ದೊರೆತ ಉತ್ತರ “ಪಾಪ, ಅವನ ಟಿ.ವಿ. ಕೆಟ್ಹೋಗಿದೆ!”.  ಈಗ್ಲೂ ನಾನು ಆಗಾಗ ಅಂದುಕೊಳ್ತೇನೆ, “ಜನ ಮೊದ ಮೊದಲು ಆತನ ಸುಂದರ ಮುಖ ನೋಡಿ ನೋಡಿ ಓಟು ಹಾಕಿದ್ರು.  ನಂತರ ಆತನ ಮುಖ ನೋಡಿದ್ದೇ ನೋಡಿ ಜಿಗುಪ್ಸೆಯಾಗಿ ಆತನ ವಿರುದ್ಧವಾಗಿ ಮತ ಹಾಕಿದ್ರು” ಅಂತ.

ಮುಂದೆ ರಾಮಾಯಣ, ಮಹಾಭಾರತ ನೋಡಿ ನಮ್ಮ ಜನ ದಿನಾ ಆರತಿ ತಟ್ಟೆ ತೊಗೊಂಡು ಕಾಯ್ತಾ ಇದ್ದದ್ದು, ಭಾನುವಾರ ದೂರದರ್ಶನದಲ್ಲಿ ಸಿನಿಮಾ ಬರುತ್ತೆ ಅಂದ್ರೆ ರಸ್ತೆ ಖಾಲಿ ಖಾಲಿ ಆಗಿರೋದು ನೋಡೋಕೆ ಎಷ್ಟು ಚಂದದ ಸಮಯ ಅನ್ಸೋದು ಇವೆಲ್ಲಾ ನೆನೆಸ್ಕೊಂಡ್ರೆ ಸಂಭ್ರಮ ಆಗುತ್ತೆ.   ಆಸ್ಟ್ರೇಲಿಯಾ, ಇಂಗ್ಲೆಂಡ್ನಲ್ಲಿ ಕ್ರಿಕೆಟ್ ವಾತಾವರಣ ಎಷ್ಟು ಸುಂದರವಾಗಿರುತ್ತೆ, ವಿಂಬಲ್ಡನ್ ಅಂದ್ರೆ ಅದೆಂತಹ ಸುಮಧುರ ವಾತಾವರಣ, ಫುಟ್ಬಾಲ್ ಅಂದ್ರೆ ಮೋಹನ್ ಬಗಾನ್ ಈಸ್ಟ್ ಬೆಂಗಾಲ್ ನಡುವೆ ನಡೆಯೋ ಡ್ರಾ ಪಂದ್ಯ ಅಲ್ಲ ಇವೆಲ್ಲಾ ಅರ್ಥ ಆದದ್ದು ದೂರದರ್ಶನದಿಂದ.  ದೇಶದಲ್ಲಿ ಎಂತೆಂಥಹ ಕಲಾ ಪ್ರತಿಭೆಗಳಿವೆ ಅಂತ ಅರ್ಥ ಆಗಿದ್ದು ಮಾಲ್ಗುಡಿ ಡೇಸ್, ಯೇ ಜೋ ಹೈ ಜಿಂದಗಿ, ಕಥಾ ಸಮಯ್, ಕ್ವಿಜ್ ಟೈಂ, ವಿವಿಧ ಭಾಷಾ ಕಲಾತ್ಮಕ ಚಿತ್ರಗಳು , ಸಂಗೀತ ಕಾರ್ಯಕ್ರಮಗಳು, ಸಂಗೀತ ಸ್ಪರ್ಧೆಗಳು ಮುಂತಾದವಿಂದ.  ಅಂದಿನ ದಿನಗಳಲ್ಲಿ ಈ ಒಳ್ಳ ಒಳ್ಳೆಯ ಕಾರ್ಯಕ್ರಮಗಳೆಲ್ಲ  ದೂರದರ್ಶನದ ಇಂಗ್ಲಿಷ್ ವಾರ್ತೆ, ಹಿಂದಿ ವಾರ್ತೆ, ಕನ್ನಡ ವಾರ್ತೆ, ಉರ್ದು ವಾರ್ತೆ, ಕಿವುಡು ಮೂಖರ ವಾರ್ತೆ, ಪ್ರಧಾನಿ ಭಾಷಣ, ರಾಷ್ಟ್ರಪತಿ ಭಾಷಣ, ಪುಢಾರಿಗಳ ಚುನಾವಣಾ ಪ್ರಚಾರ ಭಾಷಣ, ಅಡಚಣೆಗಾಗಿ ಕ್ಷಮಿಸಿ, ಹಲವಾರು ಜಾಹೀರಾತು ಇವುಗಳ ಜೊತೆಗೆ ಸ್ಪರ್ಧಿಸಬೇಕಿತ್ತು.  ಆದರೂ ಅಂತಹ ಸುಂದರತೆಗೆ ಕಾಯುವುದು ಧನ್ಯತೆಯಂತಿತ್ತು.  ಇಂದೂ ಅನಿಸುತ್ತದೆ.  ನಾವು ಸವಿದದ್ದು ಧನ್ಯತೆಯ ಕ್ಷಣಗಳೇ ಅಂತ.

ಆದ್ರೆ.... ಆದ್ರೆ..... ತಂತ್ರಜ್ಞಾನ ಮುಂದುವರೆದಂತೆಲ್ಲಾ ಹೆಚ್ಚು ಹೆಚ್ಚು ಚಾನೆಲ್ಲುಗಳು ಬಂದಂತೆಲ್ಲಾ ಅವುಗಳ ಬಕಾಸುರ ಹೊಟ್ಟೆ ತುಂಬಿಸಲು ಕಾರ್ಯಕ್ರಮಗಳು ನಿರ್ಮಾಣವಾಗತೊಡಗಿದಂತೆಲ್ಲಾ ಅದು ತಲೆ ನೋವಾಗಿ ಪರಿಣಮಿಸುತ್ತಿವೆ.  ಇತ್ತೀಚೆಗೆ ಮಹಿಳಾ ಸಾಹಿತ್ಯ ಗೋಷ್ಠಿಯಲ್ಲಿ ಒಬ್ಬರು ಹಿರಿಯ ಬರಹಗಾರ್ತಿ  ಹೇಳಿದರು “ಇಂದಿನ ಮಹಿಳೆ ಬೆಳಿಗ್ಗೆ ವಿವಿಧ ರೀತಿಯ ಕಾಸ್ಟ್ಯೂಮ್ಗಳಲ್ಲಿ ಕಾಣಿಸಿಕೊಳ್ಳುವ ಚಿತ್ರ ವಿಚಿತ್ರ ವ್ಯಕ್ತಿಗಳು ಹೇಳುವ  ಭವಿಷ್ಯ ಮತ್ತು ರಾತ್ರಿ ಬರುವ ಕ್ರೈಂ ಟೈಂ ಇವೆರಡರ ನಡುವೆ ಕಳೆದು ಹೋಗುತ್ತಿದ್ದಾಳೆ” ಎಂದು.  ಹಾಗೆ ನೋಡಿದರೆ ಅದು ಮಹಿಳೆಗೆ ಮಾತ್ರ ಸಂಬಂಧಿಸಿದ್ದಲ್ಲ.  ದೂರದರ್ಶನ ನೋಡುವವರ ಕತೆಯೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಇಂತೆಯೇ ಬದುಕಾಗಿದೆ.  ದಿನ ಬೆಳಗಾದರೆ ದೂರದರ್ಶನದಲ್ಲಿ ಬಗೆ ಬಗೆಯಲ್ಲಿ ಹಲವಾರು ಜಾಹೀರಾತುಗಳ ಮಧ್ಯೆ ಸುಪ್ರಭಾತ, ಪುರಾಣ ಪ್ರವಚನ ಹೇಳುವಂತಹ  ಫಿಲಂ ಸ್ಟಾರುಗಳನ್ನು ಮೀರಿಸುವ ಪುರೋಹಿತ ವರ್ಗ ಸೃಷ್ಟಿಯಾಗುತ್ತಿದೆ.  ಕೇಳಿದ್ದನ್ನೆಲ್ಲಾ ಕೊಡುವ ದೇವಸ್ಥಾನಗಳು, ಪರೀಕ್ಷೆಯಲ್ಲಿ ಪಾಸು ಮಾಡಿಸುವ ದೇವಸ್ಥಾನಗಳ ಮಹಿಮೆಯ ಪ್ರಚಾರ ಕೂಡಾ ದಿನಂಪ್ರತಿ ನಡೆಯುತ್ತಿದೆ.   ಸಾಂಸ್ಕ್ರತಿಕ ಕಾರ್ಯಕ್ರಮಗಳಾಗಬೇಕಿದ್ದ ಸಂಗೀತ ಸ್ಪರ್ಧೆಗಳು ರಾಜ ಮಹಾರಾಜರ ಕಾಲದಲ್ಲಿನ ಯುದ್ಧ ಸ್ಪರ್ಧೆಗಳನ್ನೂ ಮೀರಿಸುತ್ತವೆ.  ಧಾರಾವಾಹಿಗಳಂತೂ ಹೇಗೆ ಅನೈತಿಕವಾಗಿ ಬದುಕಬೇಕೆಂಬುದನ್ನು ಬಿಡಿ ಬಿಡಿಯಾಗಿ ಹೇಳಿಕೊಡುತ್ತಾ ಸಾಗಿವೆ.  ಇನ್ನು ರಾಜಕಾರಣಿಗಳ ನಡತೆಯಂತೂ ನಮ್ಮ ದೇಶ ಎಂದೂ ಉದ್ಧಾರವಾಗುವಂತದ್ದಲ್ಲ ಎಂಬುದನ್ನೂ ಕ್ಷಣ ಕ್ಷಣಕ್ಕೂ ನಮ್ಮ ಯುವ ಹೃದಯಗಳಲ್ಲಿ ಕೆತ್ತುತ್ತಾ, ನೀನೂ ಅವಕಾಶವಾದಿಯಾಗು ಇಲ್ಲದಿದ್ದರೆ ನಿನಗೆ ಉಳಿಗಾಲವಿಲ್ಲ ಎಂದು ಮನದಟ್ಟುಮಾಡಿಕೊಡುತ್ತಾ ಸಾಗಿವೆ.

ಒಟ್ನಲ್ಲಿ ಯಾವುದು ನಮ್ಮ ಮನಸ್ಸಿಗೆ ಸಂತೋಷ ಕೊಡಲಿಕ್ಕೆ ಅಂತ ಹುಟ್ಟಿಕೊಳ್ಳುತ್ತಾ ಅದೇ ನಮ್ಮ ಮನಸ್ಸನ್ನು ಕುಲಗೆಡಿಸುವಂತದ್ದು ಎಂಬುದಕ್ಕೆ ದೂರದರ್ಶನಕ್ಕಿಂತ ಬೇರೆ ನಿರ್ದರ್ಶನ ಮತ್ತೊಂದಿಲ್ಲ.

ಹೀಗಾಗಿ ಜೀವನ ದರ್ಶನ ಬೇಕೆನ್ನುವವರು ಈ ದರ್ಶನ ಯಂತ್ರದಿಂದ ದೂರ ಇರುವುದೊಳಿತು ಎಂಬ ಅನಿಸಿಕೆ ದಿನೇ ದಿನೇ  ಹೆಚ್ಚು ಹೆಚ್ಚು ಹತ್ತಿರವಾಗುತ್ತಿವೆ.  ಆದ್ದರಿಂದ ಈ ಟೆಲಿವಿಷನ್ ಎಂಬ  ದೂ....ರ.....ದರ್ಶನಕ್ಕೆ ದೂರದಿಂದಲೇ ಒಂದು ದೊಡ್ಡ ನಮಸ್ಕಾರ.

Tag: Television

ಬಿ. ದಾಮೋದರ ಬಾಳಿಗ

ಬಿ. ದಾಮೋದರ ಬಾಳಿಗ

ಕನ್ನಡ ನಾಡು ನುಡಿಯ ಮೌನ ಸೇವಾವ್ರತಿ, ಸಾಮಾಜಿಕ ಸೇವಾಕರ್ತ, ಸಾಹಿತಿ, ಪ್ರಕಾಶಕ  ದಾಮೋದರ ಬಾಳಿಗರವರು ಸೆಪ್ಟೆಂಬರ್ 7, 1908ರಂದು  ಪುತ್ತೂರಿನಲ್ಲಿ ಜನಿಸಿದರು. ಇವರ ವಂಶಸ್ಥರು ದ.ಕ. ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ರಾಯಿಗ್ರಾಮದವರು. ತಂದೆ ಅಣ್ಣಪ್ಪ ಬಾಳಿಗ, ತಾಯಿ ರಾಧಾಬಾಯಿ. ಬಡತನದಲ್ಲಿ ಹುಟ್ಟಿ ಬೆಳೆದ ಬದುಕು ಅವರದು. ಪ್ರಾರಂಭಿಕ ಶಿಕ್ಷಣವನ್ನು ಪುತ್ತೂರಿನಲ್ಲಿ ನಡೆಸಿ  ಕೊಂಬೆಟ್ಟಿನ ಬೋರ್ಡ್ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ಓದಿದರು. ಹಿಂದಿ, ಇಂಗ್ಲಿಷ್, ಕನ್ನಡ, ಕೊಂಕಣಿ ಭಾಷೆಗಳಲ್ಲಿ  ಪ್ರಾವೀಣ್ಯತೆ ಗಳಿಸಿದರಲ್ಲದೆಮಂಗಳೂರಿನ ಸರ್ಕಾರಿ ಮತ್ತು ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ  ಬಿ.ಎ. ಪದವಿ ಪಡೆದರು.

ಅಂದು ದೇಶದ ತುಂಬೆಲ್ಲಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿದ್ದ ಕಾಲ. ಬಾಳಿಗರು ಗಾಂಧೀಜಿಯವರ ಅಸಹಕಾರ ಚಳವಳಿಯಿಂದ ಪ್ರೇರಿತರಾಗಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಟೆಕ್ಸ್ ಟೈಲ್ ಇನ್‌ಸ್ಟಿಟ್ಯೂಟಿನಲ್ಲಿ ತರಬೇತು ಪಡೆದು ಕೆನರಾ ಡೈಯಿಂಗ್ ಅಂಡ್ ಪ್ರಿಂಟಿಂಗ್ ಎಂಬ ಹೆಸರಿನ ಸ್ವ-ಉದ್ಯೋಗ ಪ್ರಾರಂಭ ಮಾಡಿದರು. ಅಡಿಕೆ ಕೊಳೆ ರೋಗ ನಿವಾರಣೆಗಾಗಿ ಗುಡಿ ಕೈಗಾರಿಕೆ ಸ್ಥಾಪನೆ ಮಾಡಿದರು. ಪ್ರವಾಹ ಬಂದು ಜನಸ್ತೋಮಕ್ಕೆ ಭಾರಿ ನಷ್ಟ ಉಂಟಾದಾಗ ಫ್ಲಡ್ ರಿಲೀಫ್ ಕಮಿಟಿ ಸ್ಥಾಪಿಸಿದರು. ಹೀಗೆ ಅವರು ನಾನಾ ರೀತಿಯ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ದಾಮೋದರ ಬಾಳಿಗರಿಗೆ ಎಳೆವೆಯಿಂದಲೇ ಸಾಹಿತ್ಯಾಸಕ್ತಿ ಬೆಳೆದುಬಂತು.   ಮೊಳಹಳ್ಳಿ ಶಿವರಾಯರಿಂದ ಅವರಲ್ಲಿ ಸಾಹಿತ್ಯ ಪ್ರೇರಣೆ ಸ್ಪುರಿಸಿತು. ವಯಸ್ಕರ ಶಿಕ್ಷಣಕ್ಕಾಗಿ ಸೇವೆ ಮಾಡಿದರು. ಪುತ್ತೂರಿನ ಶಾರದಾ ವಾಚನಾಲಯದ ಲೈಬ್ರರಿಯನ್ ಆಗಿ ಕೆಲಕಾಲ ಕಾರ್ಯನಿರ್ವಹಿಸಿದರಲ್ಲದೆ  ಮಂಗಳೂರು ರಥ ಬೀದಿಯಲ್ಲಿ  ಪುಸ್ತಕ ಮಳಿಗೆ ತೆರೆದರು. ಜೊತೆಗೆ ಅಲೈಡ್ ಪಬ್ಲಿಷಿಂಗ್ ಹೌಸ್ ಹೆಸರಿನಿಂದ ಪುಸ್ತಕ ಪ್ರಕಾಶನದ ಉದ್ಯಮ ಪ್ರಾರಂಭಿಸಿದರು. 1938ರಲ್ಲಿ ತೆರೆದ ಬಾಳಿಗ ಅಂಡ್ ಸನ್ಸ್ ಸಂಸ್ಥೆಯ ಅಡಿಯಲ್ಲಿ ಮತ್ತು 1942ರಲ್ಲಿ ತೆರೆದ ನವನಿಪ್ರಕಾಶನದಿಂದ ಹಲವಾರು ಪುಸ್ತಕ ಪ್ರಕಟಣೆ ಮಾಡಿದರು. ಇವುಗಳಲ್ಲಿ ಸುಬ್ರಾಯ ಉಪಾಧ್ಯಾಯರ ಗಿಲಿಗಿಟಿ’ (ಶಿಶುಗೀತೆ ಸಂಕಲನ) ಮೊದಲ ಪ್ರಕಟಣೆ. ಗೋವಿಂದ ಪೈಗಳ ಗೋಲ್ಗೊಥಾ, ವೈಶಾಖ, ಹೆಬ್ಬೆರಳು, ಚಿತ್ರಭಾನು ಮುಂತಾದವುಗಳನ್ನು ಪ್ರಕಟಿಸಿದ ಕೀರ್ತಿ ದಾಮೋದರ ಬಾಳಿಗರದ್ದು. ಪೈಗಳ ಗೋಲ್ಗೊಥವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಹೆಮ್ಮೆ  ಕೂಡಾ ಇವರದ್ದು.

ಅಳಿಲುಸೇವೆ, ಅಜ್ಜಿ ಕತೆ, ಅತ್ತೆಯ ಕರಾರು ಮತ್ತು ಇತರ ಕಥೆಗಳು, ಇಲಿಮನೆ ಗಲಿಬಿಲಿ, ಉಂಡಾಡಿ ತೋಳ, ಗೋವಿನ ಕತೆ, ಚಾಡಿ ಮತ್ತು ಇತರ ಕಥೆಗಳು, ನೂಲುವ ತಕಲಿ, ಬೆಲ್ಲದ ಮಲ್ಲ ಮತ್ತು ಇತರ ಕಥೆಗಳು, ಸೀನಿನ ಸೀನ, ಮಾತಾಳಿ ಆಮೆ ಮತ್ತು ಇತರ ಕಥೆಗಳು ಇವರ ರಸವತ್ತಾದ ಮಕ್ಕಳ ಸಾಹಿತ್ಯರಚನೆಗಳು. ಮಕ್ಕಳ ಬೌದ್ಧಿಕ ಮನೋಧರ್ಮ ಅರಿತು ಬಾಸೆಲ್ ಮಿಷನ್‌ರವರೊಡನೆ  ಹಲವಾರು ಪಠ್ಯ ಪುಸ್ತಕಗಳನ್ನು ರಚಿಸಿದರು. ವಿಜ್ಞಾನವನ್ನು ವಿವರಿಸುವ ನಮ್ಮ ಭೂಮಿ’, ಬಹುಮಾನಿತ ಕೃತಿ ಚರಕ-ತಕಲಿ. ಕರಕುಶಲ ಹೊತ್ತಗೆಗಳು, ಗಡಿಗಡಿಗೆ ತುಪ್ಪದ ದೋಸೆ, ಕಟ್ಟುಕತೆಗಳು ಮುಂತಾದವು ಉತ್ತಮ ಚಿಕ್ಕ ಜನಪ್ರಿಯ ಹೊತ್ತಗೆಗಳು. ಭಾರತ ಜ್ಯೋತಿ ಮಹಾತ್ಮಮತ್ತೊಂದು ಮಹತ್ವದ ಕೃತಿ. ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ  ಹಲವಾರು ರಾಷ್ಟ್ರ ಭಕ್ತಿಗೀತೆಗಳ ರಚನೆ ಮಾಡಿದರು. ಇವರು ಕೊಂಕಣಿಯಲ್ಲಿ ರಚಿಸಿದ್ದ ಗೀತೆಗಳನ್ನು ಕನ್ನಡ ಭಾಷಾಂತರದೊಡನೆ ಪ್ರಕಟಿಸಿ ಷಷ್ಟಬ್ದಿ ಸಮಾರಂಭದಲ್ಲಿ ಅರ್ಪಿಸಿದ್ದು ಶಾಂತಿ ಸಾಧನಕೃತಿ.

ಈ ಮಹಾನ್ ಸಾಧಕರು ಮೇ 21, 1985ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಮಾಹಿತಿ ಕೃಪೆ: ಕಣಜ

Tag: B. Damodara Baliga

ಆಶಾ ಬೋಸ್ಲೆ

ಆಶಾ ಬೋಸ್ಲೆ

ಸಂಗೀತ ಲೋಕದ ಮಹಾನ್ ಸಾಮ್ರಾಜ್ಞಿಯಾದ ಆಶಾ ಬೋಸ್ಲೆ ಅವರು ಜನಿಸಿದ್ದು ಸೆಪ್ಟೆಂಬರ್ 8, 1933ರಂದು.  ಎಂಭತ್ತೆರಡು    ತುಂಬಿರುವ ಆಶಾ ಅವರ ಶರೀರಕ್ಕೆ ವರುಷಗಳು ಸೇರ್ಪಡೆಯಾಗುತ್ತಿವೆಯೇ ವಿನಃ.  ಶಾರೀರಕ್ಕಲ್ಲ ಎಂಬುದನ್ನು ಅವರ ಇನಿದನಿ ಈಗಲೂ ನಿರೂಪಿಸುತ್ತಲೇ ಸಾಗಿದೆ.

ದೀನನಾಥ ಮಂಗೇಶ್ಕರ್ ಅವರ ಮಗಳಾಗಿ ಅಕ್ಕ ಲತಾ ಮಂಗೇಶ್ಕರ್  ಜೊತೆಯಲ್ಲಿ  ಸಿನಿಮಾದಲ್ಲಿ ಒಂದಷ್ಟು ಕೂಲಿಗಾಗಿ ಅಭಿನಯ ಮತ್ತು ಗಾಯನಗಳಲ್ಲಿ  ಚಿಕ್ಕಂದಿನಲ್ಲೇ ಆಶಾ ತೊಡಗಿಕೊಂಡರು.  ಬದುಕಿನಲ್ಲಿ ಕವಿದ ಹಲವು ಕಾರ್ಮೋಡಗಳ ಹಿನ್ನಲೆಯಲ್ಲಿ ಆಶಾ ಅವರು  ತಮ್ಮ ಆಶಯಗಳಿಗಾಗಿ ಸಂಗೀತವನ್ನೇ ಸಂಗಾತಿಯನ್ನಾಗಿ ಮಾಡಿಕೊಂಡು ಮುಂದುವರೆದರು.

ಅಂದು ಅಕ್ಕ ಲತಾ ಮಂಗೇಶ್ಕರ್ ಅವರಿಗಿದ್ದ ಅಸಾಮಾನ್ಯ ಪ್ರತಿಭೆ ಮತ್ತು ಬೇಡಿಕೆಗಳ ದೆಸೆಯಿಂದ ಮತ್ತು ಆಶಾ ಅವರ ಧ್ವನಿಯಲ್ಲಿ ಕೆಲವೊಂದು ಸಂಗೀತ ನಿರ್ದೇಶಕರು ಪಡೆದಿದ್ದ ಮಾದಕತೆಯ ಬೆರೆತ ಹಾಡುಗಳಿಗಾಗಿನ ಯಶಸ್ಸುಅವರ ಪ್ರತಿಭೆಯನ್ನು ಬಹಳಷ್ಟು ಕಾಲ ಮಾದಕ ನೃತ್ಯಕ್ಕೆ ಪೂರಕವಾದಂತಹ ಹಾಡುಗಳಿಗೇ ಸೀಮಿತಗೊಳಿಸಿಬಿಟ್ಟಿತ್ತು. ವಿ. ಶಾಂತಾರಾಂ ಅವರ 'ನವರಂಗ್' ಅಂತಹ ಚಿತ್ರದಲ್ಲಿ 'ಮಹೇಂದ್ರ ಕುಮಾರ್' ಅವರೊಂದಿಗೆ ಹಾಡಿದಂತಹ ಸುಶ್ರಾವ್ಯ ಗೀತೆ 'ಆದಾ ಹೈ ಚಂದ್ರಮಾ'ದಂತಹ ಗೀತೆಗಳಿಗೆ ಹೆಚ್ಚು ಪ್ರಚಾರ ಸಿಗದೇ ಇದ್ದದ್ದು ಕೂಡಾ ಅಚ್ಚರಿಯ ವಿಷಯವೇ!

ನಂತರದ ದಿನಗಳಲ್ಲಿ ಸಜ್ಜದ್ ಹುಸೇನ್, ಓ ಪಿ ನಯ್ಯರ್ ಮುಂತಾದ ಸಂಗೀತ ನಿರ್ದೇಶಕರು ಆಶಾ ಅವರಿಗೆ ಪ್ರೋತ್ಸಾಹ ನೀಡಿದರು.  ಮುಂದೆ 'ತೀಸ್ರಿ ಮಂಜಿಲ್' ಚಿತ್ರದ 'ಆಜಾ ಆಜಾ ಮೈ ಹೂಂ ಪ್ಯಾರ್ ತೆರಾ' ಹಾಡು ಆಶಾ ಅವರಿಗೆ ಬಹಳಷ್ಟು ಪ್ರಖ್ಯಾತಿ ತಂದುಕೊಟ್ಟಿತು.    ಮುಂದೆ ಆಶಾ ಅವರಿಗೆ ಜೀವನ ಸಂಗಾತಿಯೂ  ಆದ  ಆರ್. ಡಿ. ಬರ್ಮನ್ ಅವರಿಗೆ  ಮೊದಲ  ಗಣನೀಯ ಯಶಸ್ಸು  ದೊರೆತದ್ದೂ ತೀಸ್ರೀ ಮಂಜಿಲ್ಚಿತ್ರದಲ್ಲೇ.  ಆ ಚಿತ್ರದ 'ಓ ಹಸೀನಾ ಝುಲ್ಫೋನ್‌ವಾಲಿ' ಮತ್ತು 'ಓ ಮೇರ ಸೋನಾ ರೆಹಾಡುಗಳು ಅತ್ಯಂತ ಜನಪ್ರಿಯವಾದವು.  ಕ್ಯಾರವಾನ್ ಚಿತ್ರದ 'ಪಿಯಾ ತೂ ಅಬ್ ತೊ ಆಜಾ', 'ಡಾನ್' ಚಿತ್ರದ 'ಏ ಮೆರಾ ದಿಲ್ ', 'ಯಾದೋಂ ಕಿ ಬಾರಾತ್' ಚಿತ್ರದ 'ಚುರಾಲಿಯಾ ಹೈ ತುಮ್ ನೆ ಜೋ ದಿಲ್ ಕೊ', 'ಶಿಖಾರ್' ಚಿತ್ರದ 'ಪರ್ದೆ ಮೆ ರೆಹನೆ ದೋಮುಂತಾದ ಹಲವಾರು ಹಾಡುಗಳು ಆಶಾ ಅವರನ್ನು ಅತ್ಯಂತ ಜನಪ್ರಿಯವಾಗಿಸಿದವು.

ಸಂಗೀತ ನಿರ್ದೇಶಕ  ಖಯ್ಯಾಮ್ ಅವರು ಆಶಾ ಬೋಸ್ಲೆ ಅವರ ಧ್ವನಿಗೆ ಹೊಸ ತಿರುವು ತಂದವರಲ್ಲಿ ಪ್ರಮುಖರು.  ಅವರ  'ಉಮ್ರಾವ್ ಜಾನ್ ' ಚಿತ್ರ ಎರಡು ರೀತಿಯ ಆಶ್ಚರ್ಯಗಳನ್ನು ಸೃಷ್ಟಿಸಿತ್ತು.  ಮೊದಲನೆಯದುಗ್ಲಾಮರ್ ನಟಿ ರೇಖಾ ಅವರು 'ಉಮ್ರಾವ್ ಜಾನ್' ಆಗಿ ನಟಿಸುತ್ತಾರೆ ಎಂಬುದು.  ಎರಡನೆಯದು, ಆಶಾ ಬೋಸ್ಲೆ ಅವರ ಧ್ವನಿಯಲ್ಲಿ ಈ ಚಿತ್ರಕ್ಕೆ ಬೇಕಾದ  ಸಂಗೀತ ಹೊರಹೊಮ್ಮಲಿದೆಯೇ ಎಂಬ ಪ್ರಶ್ನೆ!   ಖಯ್ಯಾಮ್ ಆ ಚಿತ್ರದ ಹಾಡುಗಳನ್ನು ಆಶಾರಿಂದ  ಹಾಡಿಸುತ್ತೇನೆ ಎಂದಾಗ ಉದ್ಯಮದ ಮಂದಿ ದಂಗಾದರು. ಖಯ್ಯಾಮ್  'ಉಮ್ರಾವ್ ಜಾನ್' ಬಗೆಗಿನ ಪುಸ್ತಕವನ್ನು ಆಶಾರಿಗೆ ಓದಲು ಕೊಟ್ಟರು. 'ಉಮ್ರಾವ್  ಜಾನ್' ಬಗ್ಗೆ ತಿಳಿದುಕೊಳ್ಳಲು ಅದು ನೆರವಾಯಿತು. ಈ ಚಿತ್ರದ ಅಭಿನಯಕ್ಕೆ ರೇಖಾ ರಾಷ್ಟ್ರೀಯ  ಪ್ರಶಸ್ತಿ ಪಡೆದರೆಆಶಾ ಅವರು 'ದಿಲ್ ಚೀಜ್ ಕ್ಯಾ ಹೈ ಆಪ್ ಮೇರಿ ಜಾನ್ ಲಿಜೀಯೆ…'  ಹಾಡಿಗೆ ತಮ್ಮ ಮೊಟ್ಟ ಮೊದಲ ರಾಷ್ಟ್ರಪ್ರಶಸ್ತಿ ಗಳಿಸಿಕೊಂಡರು. ಕೆಲವು ವರ್ಷಗಳ ನಂತರ, 'ಇಜಾಝತ್ಚಿತ್ರದ 'ಮೇರಾ ಕುಚ್ ಸಮಾನ್' ಹಾಡಿಗಾಗಿ ಅವರು ಮತ್ತೊಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು.

ಆಶಾ ಅವರು ತಮ್ಮ 62ನೆಯ ವಯಸ್ಸಿನಲ್ಲಿ ಹಾಡಿದ 'ರಂಗೀಲಾ' ಚಿತ್ರದ 'ತನ್ಹಾ ತನ್ಹಾ', 'ರಂಗೀಲಾರೆ' ಗೀತೆಗಳು ಸಂಗೀತಪ್ರಿಯರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ್ದವು.   ಅವರು  ತಮ್ಮ 72ನೆಯ ವಯಸ್ಸಿನಲ್ಲಿ ಹಾಡಿದ ತಮಿಳು ಚಿತ್ರ 'ಚಂದ್ರಮುಖಿ' ಚಿತ್ರದ  ಹಾಡುಗಳು ಮತ್ತು ಇತ್ತೀಚಿನ ವರ್ಷದಲ್ಲಿ  ಯಶಸ್ಸು ಕಂಡ  'ಲಕ್ಕಿ' ಚಿತ್ರಕ್ಕಾಗಿ ಹಾಡಿದ ಪಾಪ್ ಗಾಯನಗಳು ಅತ್ಯಂತ ಹೆಚ್ಚಿನ ಮಾರಾಟವನ್ನು ಕಂಡ ದ್ವನಿಮುದ್ರಣಗಳಾಗಿವೆ.

ಇಂದು ಆಶಾ ಬೋಸ್ಲೆ ಅವರು ಹಾಡದ ಸಂಗೀತ ವಿಭಾಗವಿಲ್ಲ ಮತ್ತು ಧ್ವನಿ ಹೊರಡಿಸದೆ ಇರುವ ಭಾಷೆಗಳೂ ಇಲ್ಲ. ಅವರು ದಾಟದ ಸಂಗೀತದ ಗಡಿಗಳೇ ಇಲ್ಲ.  ಕನ್ನಡದ 'ಬಂಗಾರದ ಮನುಷ್ಯ' ಮತ್ತು 'ಮತ್ತೆ ಮುಂಗಾರು' ಅಂತಹ  ಚಿತ್ರಗಳಿಗೆ ಅವರು ಅಲ್ಲಲ್ಲಿ ಧ್ವನಿ ನೀಡಿದ್ದಿದೆ. 

ಭಾರತ ಸರ್ಕಾರದ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ, 'ಪದ್ಮವಿಭೂಷಣ', 'ಏಷ್ಯಾದ ಕೋಗಿಲೆ',  'ಗ್ರಾಮಿ' ಪ್ರಶಸ್ತಿಗಳಿಗೆ ಸಂದ ಹಲವು ನಾಮನಿರ್ದೇಶಗಳು ಹೀಗೆ  ವಿಶ್ವದಾದ್ಯಂತದ ಹಲವು ರೀತಿಯ ಪ್ರತಿಷ್ಠಿತ ಗೌರವಗಳು ಅವರನ್ನು ಕೂಗಿ ಕರೆದಿವೆ.  ಈಗಲೂ ಮಾಧ್ಯಮಗಳಲ್ಲಿನ ಎಲ್ಲಾ ರೀತಿಯ ಸಂಗೀತ ಕಾರ್ಯಕ್ರಮಗಳಿಗೆ ಅವರು ನಿರಂತರ ಅತಿಥಿ.  2009ರ ವರ್ಷದಲ್ಲಿ ವರ್ಲ್ಡ್ ರೆಕಾರ್ಡ್ ಅಕಾಡೆಮಿಮತ್ತು  2011ರ  ವರ್ಷದಲ್ಲಿ  ಗಿನ್ನಿಸ್ ವಿಶ್ವ ದಾಖಲೆಸಂಸ್ಥೆಗಳು ಇದುವರೆವಿಗೂ ಅತ್ಯಂತ ಹೆಚ್ಚು ಧ್ವನಿಮುದ್ರಿತ ಗೀತೆಗಳಿಗೆ ಧ್ವನಿ ನೀಡಿರುವವರು ಆಶಾ ಬೋಂಸ್ಲೆ ಎಂದು ಘೋಷಿಸಿವೆ.  


ಬಡತನದ ಬವಣೆಯಿಂದ ಪಾರಾಗಲು ಚಿತ್ರರಂಗಕ್ಕೆ ಬಂದು. ಬದುಕಿನಲ್ಲಿ ಹಲವು ರೀತಿಯ ನೋವು, ಸೋಲು, ಏರಿಳಿತಗಳನ್ನು ಕಂಡು ತಮ್ಮ ಪಾಲಿಗೆ ಬಂದದ್ದನ್ನು ಶ್ರದ್ಧೆಯಿಂದ ತಪಸ್ಸಿನಂತೆ ಮಾಡಿ, ಇಂದು ಯಶಸ್ಸಿನ ಹಿರಿಯ ಶಿಖರವನ್ನು ಏರಿರುವ ಈ ಸಂಗೀತದ ಧ್ರುವತಾರೆಯ ಸಾಧನೆ ಅಭಿನಂದಾರ್ಹವಾದದ್ದು.  ಈ ಮಹಾನ್ ಸಾಧಕಿಯ ಬರಲಿರುವ ದಿನಗಳು ಸಹ್ಯವಾಗಿ ಸಂತಸಕರವಾಗಿರಲಿ ಎಂದು ಶುಭ ಹಾರೈಸುತ್ತಾ ನಮ್ಮ ಗೌರವಗಳನ್ನು ಸಲ್ಲಿಸೋಣ.

Tag: Asha Bhosle

ವಿಶ್ವ ಸಾಕ್ಷರತಾ ದಿನ.

ವಿಶ್ವ ಸಾಕ್ಷರತಾ ದಿನ.

ಎಲ್ಲರೂ ಕಲಿಯುವಂತಾಗಲಿ.
ಬರೀ ಅಕ್ಷರವನ್ನು ಮಾತ್ರವನ್ನಲ್ಲ, ಬದುಕನ್ನು ಕಲಿಯುವಂತಾಗಲಿ.
ಎಲ್ಲರಿಗೂ ಕಲಿಕೆ ಕೈಗೆಟುಕುವಂತಾಗಲಿ.
ಎಲ್ಲರೂ ಬದುಕನ್ನು ಪ್ರೀತಿಸುವಂತಹ ಬಾಳನ್ನು ಕಲಿಯುವಂತಾಗಲಿ.
ನಾವೂ ಬಾಳಿ ಮತ್ತೊಬ್ಬರನ್ನೂ ಬಾಳಿಸುವ ರೀತಿಯನ್ನು ಕಲಿಯುವಂತಾಗಲಿ.
ಮಾನವತೆ ಮನುಜನ ಬಾಳಿನ ಹಿರಿಮೆಯಾಗುವುದನ್ನು ಎಲ್ಲರೂ ಸಾಕ್ಷಾತ್ಕರಿಸಿಕೊಳ್ಳುವಂತಾಗಲಿ.

ಬೆಳಕು ಎತ್ತ ಕಡೆಯಿಂದ ಬಂದರೂ ಅದಕ್ಕೆ ಸ್ವಾಗತ.  ಆ ಜ್ಞಾನದ ಬೆಳಕು ಈ ಜಗತ್ತಿನ ಸಕಲ ಜೀವಿಗಳನ್ನೂ ಉದ್ಧರಿಸಲಿ

Tag: Vishva Saaksharata Dina, World Literacy Day

ಗಂಗಾವತಿ ಪ್ರಾಣೇಶ್

ಗಂಗಾವತಿ ಪ್ರಾಣೇಶ್

ಕನ್ನಡದಲ್ಲಿ ಹಾಸ್ಯ ಎಂಬುದು ಕಾಲಾನುಕಾಲದಿಂದ ನಿರಂತರವಾಗಿ ಪ್ರವಹಿಸುತ್ತ ಸಾಗಿದೆ.  ಈ ನಾಡಿನಲ್ಲಿ ರಾ ನರಸಿಂಹಾಚಾರ್ಯರಿಂದ ಮೊದಲ್ಗೊಂಡು  ಬೀಚಿ, ಕೈಲಾಸಂನಾಡಿಗೇರ ಕೃಷ್ಣ ರಾವ್, ರಾಶಿ, ನಾ ಕಸ್ತೂರಿಸುನಂದಮ್ಮ, ಪಾ. ವೆಂ. ಆಚಾರ್ಯ, ಅ.ರಾ. ಮಿತ್ರ, ನರಸಿಂಹ ಮೂರ್ತಿ, ಭುವನೇಶ್ವರಿ ಹೆಗಡೆ  ಹೀಗೆ ಹಾಸ್ಯದ ಹೊನಲು ನಿರಂತರವಾಗಿ ಹರಿಸಿರುವ ಬರಹಗಾರರ ಸುದೀರ್ಘ ಪರಂಪರೆಯೇ ಇದೆ.    ಕಲಾರಂಗದಲ್ಲಿ ಕೂಡಾ ಹಿರಣ್ಣಯ್ಯ, ನರಸಿಂಹ ರಾಜು, ಬಾಲಣ್ಣ, ದ್ವಾರಕೀಶ್, ಜಗ್ಗೇಶ್, ಕೋಮಲ್  ಅವರಿಂದ ಮೊದಲ್ಗೊಂಡು ಕಾಲಾನುಕಾಲದಲ್ಲಿ ಹಲವಾರು ಕಲಾವಿದರು ರಂಗಭೂಮಿ ಮತ್ತು ಚಲನಚಿತ್ರ ಮಾಧ್ಯಮಗಳಲ್ಲಿ ತಮ್ಮ ಹಾಸ್ಯ ಅಭಿವ್ಯಕ್ತಿಗೆ ಪ್ರಖ್ಯಾತರಾಗಿದ್ದಾರೆ.

ಕೊರವಂಜಿ, ಅಪರಂಜಿ ಪತ್ರಿಕೆಗಳ ಒಕ್ಕೂಟ ಪ್ರಾರಂಭಿಸಿದ ಹಾಸ್ಯಬ್ರಹ್ಮದ ನಗೆ ಕಾರ್ಯಕ್ರಮಗಳು ನೂರಾರು ನಗೆ ಭಾಷಣಕಾರರನ್ನು ಸೃಷ್ಟಿಸಿದ ಹಿನ್ನೆಲೆಯಲ್ಲಿ ಹಾಸ್ಯ  ಕಾರ್ಯಕ್ರಮಗಳಿಗೆ ಜನಪ್ರಿಯತೆ ಇರುವುದನ್ನು ಮನಗಂಡ  ಸಾಂಸ್ಕೃತಿಕ ವೇದಿಕೆಗಳು, ದೂರದರ್ಶನ ಮತ್ತು ರೇಡಿಯೋ ಮಾಧ್ಯಮಗಳು   ಹಲವಾರು ಹಾಸ್ಯ ಮಾತುಗಾರರ ಉದಯಕ್ಕೆ ನಾಂದಿ ಹಾಡಿವೆ.  ಈ ಕಾರ್ಯಕ್ರಮಗಳು ಇಂದು ಕನ್ನಡ ನಾಡಲ್ಲದೆ ಕನ್ನಡಿಗರು ನೆಲೆಸಿರುವ ದೇಶ ವಿದೇಶಗಳಿಗೂ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ.  ಈ ಹಿನ್ನೆಲೆಯಲ್ಲಿ ಕನ್ನಡ ನಾಡು ಕಳೆದ ಹಲವಾರು ವರ್ಷಗಳಲ್ಲಿ ಕಂಡುಕೊಂಡಿರುವ ಪ್ರಮುಖ ಪ್ರತಿಭೆಗಳಲ್ಲಿ ಗಂಗಾವತಿ ಪ್ರಾಣೇಶ್ ಪ್ರಮುಖರು.

ಗಂಗಾವತಿ ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು.  ಸೆಪ್ಟೆಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಯಲಬುರ್ಗಿಯಲ್ಲೂ, ಬಿ. ಕಾಂ ಪದವಿಯನ್ನು ಗಂಗಾವತಿಯಲ್ಲೂ ಪಡೆದರು.  ತಂದೆ ಸ್ವಾತಂತ್ರ್ಯಯೋಧರಾದ ಶ್ರೀ ಬಿ. ವೆಂಕೋಬಾಚಾರ್ಯರು ಶಾಲಾ ಶಿಕ್ಷಕರಾಗಿದ್ದರು.   ತಾಯಿ ಸತ್ಯವತಿಬಾಯಿ ಅವರಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡ ಪ್ರಾಣೇಶ್ 1982ರಿಂದ ಸಾಹಿತ್ಯದ ರಸಾಸ್ವಾದದಲ್ಲಿ ಮೀಯತೊಡಗಿದರು.   

ಬೀchi ಸಾಹಿತ್ಯದಿಂದ ಪ್ರಭಾವಿತರಾದ ಪ್ರಾಣೇಶ್, ಆ ಸಾಹಿತ್ಯದಲ್ಲಿರುವ  ಹಾಸ್ಯವನ್ನು ಮೈಗೂಡಿಸಿಕೊಂಡು ಅದನ್ನೇ ಇತರರಿಗೆ ಹಂಚುವ ಕಾಯಕವನ್ನು 1994ರಿಂದ ಆರಂಭಿಸಿದರು.  ಹಾಸ್ಯಸಂಜೆಎಂಬ ವಿನೂತನವಾದ ಹಾಸ್ಯಕ್ಕೇ ಮೀಸಲಾದ ಕಾರ್ಯಕ್ರಮಗಳನ್ನು ಉತ್ತರ ಕರ್ನಾಟಕದಲ್ಲಿ ಆರಂಭಿಸಿದ ಕೀರ್ತಿ ಪ್ರಾಣೇಶರಿಗೆ ಸಲ್ಲುತ್ತದೆ.  ಗುಲ್ಬರ್ಗಾ ಆಕಾಶವಾಣಿಯಿಂದ ಆರಂಭವಾದ ಇವರ ಹಾಸ್ಯಸಂಜೆ ಕಾರ್ಯಕ್ರಮವು ಇಂದು ದೂರದರ್ಶನದ ವಿವಿಧ ವಾಹಿನಿಗಳಿಗೂ ಹಬ್ಬಿದೆ.  ವಿಶ್ವದ ವಿವಿದೆಡೆಗಳಲ್ಲಿರುವ ಸುಮಾರು  400  ಊರುಗಳಲ್ಲಿ ಪ್ರಾಣೇಶರು ನೀಡಿರುವ ಕಾರ್ಯಕ್ರಮಗಳ ಸಂಖ್ಯೆ ಹಲವು ಸಾವಿರಗಳನ್ನು ಮೀರಿವೆ. 

ಕೇವಲ ಭಾಷಣದಲ್ಲಷ್ಟೇ ಅಲ್ಲದೆ ಪ್ರಾಣೇಶರ ಪ್ರಾವಿಣ್ಯತೆ ತಬಲಾ, ಕೊಳಲು, ಸಂಗೀತಗಳಲ್ಲೂ ಚಾಚಿಕೊಂಡಿದೆ.  ಪ್ರಾಣೇಶರ ವೈಶಿಷ್ಟ್ಯವ್ಯೇ ಅರಳು ಹುರಿದಂತೆ ಉತ್ತರ ಕರ್ನಾಟಕದ ಅಚ್ಚ ಕನ್ನಡದಲ್ಲಿ ಹರಿಸುವ ಅವರ ವಾಗ್ಝರಿ.  ಅವರ ಈ ಮಾತುಗಾರಿಕೆ ವಿಶ್ವವ್ಯಾಪಿಯಾಗಿರುವ ಕನ್ನಡಿಗರೆಲ್ಲರಿಗೂ ಬಲುಪ್ರಿಯ.  ಮಧ್ಯಪ್ರಾಚ್ಯ ದೇಶಗಳು, ಆಸ್ಟ್ರೇಲಿಯಾ, ಸಿಂಗಪೂರ್, ಥೈಲಾಂಡ್, ಮಲೇಶಿಯಾ, ಹಾಂಕಾಂಗ್, ಅಮೆರಿಕ ಮುಂತಾದ ನಗರಗಳಲ್ಲೆಲ್ಲಾ ಅವರ ಕಾರ್ಯಕ್ರಮಗಳು ಜನಪ್ರಿಯಗೊಂಡಿವೆ.

ನಗಿಸುವವನ ನೋವುಗಳುಎಂಬ ಪುಸ್ತಕ ಬರೆದಿರುವ ಪ್ರಾಣೇಶ್ ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ.  ಯೂ ಟ್ಯೂಬ್ ನಂತಹ ಅಂತರ್ಜಾಲ ಮಾಧ್ಯಮಗಳಲ್ಲಿ ಅವರ ಹಲವಾರು ಕಾರ್ಯಕ್ರಮಗಳ ತುಣುಕುಗಳು ನಿರಂತರವಾಗಿ ಜನಪ್ರೀತಿಯನ್ನು ಸಂಪಾದಿಸುತ್ತಿವೆ.  ದೂರದರ್ಶನಕ್ಕಾಗಿನ ಹಲವಾರು ಹಾಸ್ಯ ಪ್ರವಚನಗಳು, ಮಾತಿನ ಮಂಟಪಗಳು, ಚಾವಡಿಗಳು, ಹೊಸ ಹೊಸ ರೀತಿಯಲ್ಲಿನ ಸಾಂಸ್ಕೃತಿಕ ವೇದಿಕೆಗಳು ಮುಂತಾದವೆಲ್ಲಾ ಪ್ರಾಣೇಶರ ಹಾಸ್ಯ ರಸಾಯನವನ್ನು ನಿಂತ ನೀರಾಗಿಸದೆ, ನಿರಂತರ ಲವಲವಿಕೆಯ ನಾದವನ್ನಾಗಿರಿಸಿರುವಲ್ಲಿ ವಿಶಿಷ್ಟ ಪಾತ್ರ ವಹಿಸುತ್ತಿವೆ.

ವಿವಿಧ ಸಂಘ ಸಂಸ್ಥೆಗಳು, ಅಭಿಮಾನಿ ವಲಯಗಳಿಂದ ಪ್ರಾಣೇಶ್ ಹಲವಾರು ಗೌರವಗಳನ್ನು ಸ್ವೀಕರಿಸಿದ್ದಾರೆ.  ಗಂಗಾವತಿ ಪ್ರಾಣೇಶರ ಈ ಮಹತ್ಸಾದನೆ ನಿರಂತರ ಗಂಗೆಯಾಗಿ ಹರಿಯುತ್ತಿರಲಿ.  ಆವರಿಂದ ಹೆಚ್ಚು ಹೆಚ್ಚು ಅರ್ಥಪೂರ್ಣ, ಲವಲವಿಕೆಯ ಹಾಸ್ಯದ ಬುಗ್ಗೆ ನಿರಂತರ ಚಿಮ್ಮುತ್ತಿರಲಿ.  ಅವರ ಬದುಕು ಸುಗಮವಾಗಿರಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಸಲ್ಲಿಸೋಣ.

Tag: Gangavati Pranesh

ಬಿ. ಆರ್. ಲಕ್ಷ್ಮಣರಾವ್

ಬಿ. ಆರ್.  ಲಕ್ಷ್ಮಣರಾವ್

"ಕವಿತೆ ಎಂಬುದು ಒಬ್ಬೊಬ್ಬರಿಗೆ ಒಂದೊಂದು ಅರ್ಥದಲ್ಲಿ ನಿಲುಕುವ ಇಲ್ಲವೇ ನಿಲುಕದ ನಕ್ಷತ್ರ."  ನಾನು ಹೇಳುತ್ತಿರುವುದು ಕವಿತೆಯನ್ನು ನೋಡುವವನ ಮತ್ತು ಕೇಳುವವನ ದೃಷ್ಟಿಯಿಂದ.  ಕವಿತೆಯ ಸೃಷ್ಟಿಕರ್ತನಾದ ಕವಿ ಮಾತ್ರ ಬಹಳಷ್ಟು ಸಮಯದಲ್ಲಿ ಆತನ ಕವಿತೆಯಷ್ಟೇ ನಿಗೂಢ.  ಆತನನ್ನು ಸಮೀಪಿಸಲು ಆತ ಹೋದ ದಾರಿಯಲ್ಲೇ ನಡೆಯಬೇಕಾಗುತ್ತದೆ!  ಇಂತಹ ಕವಿತಾ   ಆಗಸದಲ್ಲಿ  ಅಷ್ಟೊಂದು ನಕ್ಷತ್ರಗಳಿದ್ದರೂ ಅವುಗಳ ಮಧ್ಯೆ ನಮ್ಮನ್ನು ಯಾವುದೋ ಫಳ ಫಳ ಎನ್ನುವ ಹೆಸರು ಗೊತ್ತಿಲ್ಲದ ನಕ್ಷತ್ರವೊಂದು  ಕರೆಯುವಂತೆ, ಕೆಲವೊಂದು ಕವಿತೆಗಳು ನಮ್ಮನ್ನು  ಹತ್ತಿರ ಹತ್ತಿರ ಮಾಡಿಕೊಳ್ಳುತ್ತವೆ.  ಹಾಗಾಗಿ ಅವು ನಮ್ಮಲ್ಲಿ ಅರಳುವ ಪ್ರೀತಿಯ ಹೂಗಳಾಗಿರುತ್ತವೆ.  ಅಂತಹ ಮುದದ  ಕವಿತೆಗಳನ್ನು ನೀಡಿರುವವರಲ್ಲಿ ಬಿ. ಆರ್. ಲಕ್ಷಣರಾವ್ ಒಬ್ಬರು.

ಲಕ್ಷ್ಮಣರಾವ್‌ರವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚೀಮಂಗಲದಲ್ಲಿ 1946ರ ಸೆಪ್ಟಂಬರ್ 9ರಂದು. ತಂದೆ ಬಿ.ಆರ್. ರಾಜಾರಾವ್‌ ಅವರು ಸಂಗೀತಾಸಕ್ತರಾಗಿದ್ದು ವಾದ್ಯಸಂಗೀತ ಹಾಗೂ ಹಾಡುಗಾರಿಕೆಯಲ್ಲಿ ಪರಿಶ್ರಮವಿದ್ದವರು. ತಾಯಿ ವೆಂಕಟಲಕ್ಷ್ಮಮ್ಮನವರು.  ಲಕ್ಷ್ಮಣರಾವ್ ಅವರ ಪ್ರಾರಂಭಿಕ ಶಿಕ್ಷಣ ಚಿಂತಾಮಣಿಯಲ್ಲಿ ನೆರವೇರಿತು. ಬೆಂಗಳೂರು ವಿಶ್ವವಿದ್ಯಾಲಯದಿಂದ  ಬಿ.ಎ. ಮತ್ತು ಬಿ.ಎಡ್‌ ಪದವಿಗಳನ್ನೂ ಹಾಗೂ  ಮೈಸೂರು ವಿಶ್ವವಿದ್ಯಾಲಯದಿಂದ  ಎಂ.ಎ. ಪದವಿಯನ್ನೂ ಪಡೆದರು.

ಲಕ್ಷ್ಮಣರಾವ್ ಅವರು ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಬರೆದ ಹಲವಾರು ಕವನಗಳು ಲಹರಿ, ಗೋಕುಲ, ಸಂಕ್ರಮಣ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು

ಕೆಂಪು ಸಾಗರವೀಜಿ, ಕಾಡುಮೇಡು ದಾಟಿ
ದಣಿದು ಕುಸಿಯದೆ ಮುಂದೆ ಸಾಗಿ ಬರಬೇಕು,
ಸುಲಭವಲ್ಲ!

ಎಂದು ಬರೆದ ಕವಿ ಕಾವ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ನವ್ಯ ಸಾಹಿತ್ಯದ ಚಳವಳಿ ಮೊದಲ್ಗೊಂಡು  ಚುಟುಕು, ವಿಡಂಬನೆ, ಸ್ವಗತ, ಭಾವಗೀತೆ ಮತ್ತು ಇತರ ಎಲ್ಲ ಪ್ರಕಾರಗಳಲ್ಲಿಯೂ ಕವಿತೆ ಬರೆಯುತ್ತಾ ಈಜಿ ಬಂದಿದ್ದಾರೆ.

ಬಿ. ಆರ್. ಲಕ್ಷಣರಾಯರು ಅಂದಿನ ದಿನಗಳಲ್ಲಿ, ಕನ್ನಡ ಕನ್ನಡ ಎಂದು ಕನ್ನಡ ಪ್ರೀತಿಯ ಭಾವದಿಂದ  ಅಡ್ಡಾಡುತ್ತಿದ್ದಮೀಸೆ ಮೊಳೆಯುತ್ತಿದ್ದ ನಮ್ಮಂತಹ ಹುಡುಗರಿಗೆ ಕಾವ್ಯವಾಚನ ಕಾರ್ಯಕ್ರಮಗಳನ್ನು  ಅಥವಾ ದೂರದರ್ಶನದ ಕಾವ್ಯ ಕಾರ್ಯಕ್ರಮಗಳನ್ನು ನೋಡುವಾಗ, ಇವರು ಯಾವಾಗ ಕವನ ಹಾಡುತ್ತಾರಪ್ಪ ಎಂದು ಕಾಯುವಂತೆ ಮಾಡುತ್ತಿದ್ದವರು.  ಅವರ ಸುಬ್ಭಾಭಟ್ಟರ ಮಗಳೇ’, ‘ನಾನು ಚಿಕ್ಕವನಿದ್ದಾಗ ಅಪ್ಪಾ ಹೇಳುತ್ತಿದ್ದರು, ನೀ ನಿಂಬೆಯ ಗಿಡದಿಂದೊಳ್ಳೆಯ ಪಾಠವ ಕಲೀ ಮಗುಅಂತಹ ಅವರ ಕವನ ವಾಚನದಲ್ಲಿ ನಮಗೆ ಅದೆಂತದ್ದೋ ಪ್ರೀತಿ.  ಕಾವ್ಯದ ಹಾದಿಯಲ್ಲಿ ಸವೆಯದ ನಮ್ಮ  ಭಾಷಾ ಹೃದಯಕ್ಕೆ, ಕಾವ್ಯದ ಅಂತರಾತ್ಮಕ್ಕೆ ತಲುಪಲು ಬೇಕಾದ ಹಾದಿ ಹೇಗೆ ಎಂದು ತಿಳಿಯದಿದ್ದರೂ, ಎಲ್ಲೋ ಸುಲಭವಾಗಿ ಇಲ್ಲಿ ಬಂದುಬಿಟ್ಟಿದ್ದೇನೆ ಎಂದು  ಲಕ್ಷಣರಾಯರ ಸವಿ ಗೀತವಾಚನಗಳು.  ಆತ್ಮೀಯವಾಗಿಬಿಟ್ಟವು.   ಈ ಪದ್ಯಗಳು   ಕೆ.ಎಸ್.ನ ಅವರ ಶ್ಯಾನುಭೋಗರ ಮಗಳು’, ‘ರಾಯರು ಬಂದರು ಮಾವನ ಮನೆಗೆಅಂಥಹ ನೇರಸುಖ ಸ್ಪರ್ಶಗಳಿಗೆ ನಮ್ಮನ್ನು ಕೈ ಹಿಡಿದು ಕರೆದಂತಹವು. 

ಕನ್ನಡ ಕಾವ್ಯಲೋಕದಲ್ಲಿ ಪ್ರಮುಖ ಹೆಜ್ಜೆ ಎನಿಸಿದ ಲಂಕೇಶರು ಸಂಪಾದಿಸಿದ ಅಕ್ಷರ ಹೊಸ ಕಾವ್ಯದಲ್ಲಿನ  ಪರಿಚಯ ವಿಭಾಗದಲ್ಲಿ ತಾವು ಕಾವ್ಯ ರಚಿಸಲು ಕಾರಣ ಸಾವು ಮತ್ತು ಬಾಳಿನ ನಿರರ್ಥಕತೆಯ ಬಗ್ಗೆ ಭಯಎಂಬ ಲಕ್ಷ್ಮಣರಾಯರ  ಮಾತಿದೆ.  ತುಂಟನಾಗಿ ಬರೆಯುತ್ತಿದ್ದ  ಒಬ್ಬ ಕವಿಯ ಹೃದಯದಲ್ಲಿ ಇಂಥದ್ದೊಂದು ಆಳವೂ ಇತ್ತು ಎಂಬುದು ನಮಗೆ ತೋಚುವುದಿಲ್ಲ. ಅಥವಾ ಕವನದ ಒಂದೆರಡು ಸಾಲು ಅಥವಾ ಅದು ಹಾಡಿನಲ್ಲಿ ಮೂಡಿದಾಗ ಅದರ ರಾಗಕ್ಕೆ ಸಿಕ್ಕ ತಾಳದಲ್ಲೇ ನಾವು ನಮ್ಮ ಗ್ರಾಹ್ಯತೆಯನ್ನು ಕಟ್ಟಿಹಾಕಿಕೊಂಡುಬಿಡುತ್ತೇವೆ.  ಎಂದೋ ಓದಿದ ಅವರ ಫೋಟೋಗ್ರಾಫರ್ ಕವನ ನೆನಪಾಗಿ ಅದರ ಕೊನೆಯ ಪ್ಯಾರಾವನ್ನು ಹುಡುಕಿ ಬರೆಯುತ್ತಿದ್ದೇನೆ:

ಕೊನೆಗೆ
ಮಾರನೆ ಸಂಜೆ,
ಅವರವರ ಫೋಟೋಗಳನ್ನು ಅವರವರಿಗೆ
ಒಪ್ಪಿಸಿ,
ಮೆಚ್ಚಿಗೆಯ ಕಣ್ಣಾಡಿ ಪರಸ್ಪರ,
ಬಿಕ್ಕಿ, ನಕ್ಕು,
ಅವರವರ ಊರುಗಳಿಗೆ ಅವರೆಲ್ಲಾ ಹೊರಟು
ಬಿಟ್ಟಮೇಲೆ,
ನನ್ನ ಬಳಿ ಉಳಿಯುವುದು
ಅದರೆಲ್ಲರ ಮಾಸುವ ನೆನಪು
ನೆಗೆಟಿವ್ ಗಳು
ಮಾತ್ರ”.

ಹೀಗೆ ಹಲವು ಚಿಂತನೆ, ನೆನಪುಗಳ ನಡುವೆ ಅಡ್ಡಾಡುತ್ತಿದ್ದಾಗ, ರವಿ ಬೆಳಗೆರೆ ಅವರ ನನ್ನನ್ನು ಮೀಟಿದ ಒಂದು ಲೇಖನ ಕೂಡ ದೊರಕಿತು.  ಇವೆಲ್ಲವನ್ನೂ ನಮ್ಮಲ್ಲಿ ಕವಿತೆಯ ಭಾವವನ್ನು ಪ್ರೀತಿಯಾಗಿ ಅರಳಿಸಿದ ಬಿ. ಆರ್. ಲಕ್ಷ್ಮಣರಾಯರ ಕುರಿತಾದ ಆತ್ಮೀಯ ಭಾವದಲ್ಲಿ ನಿಮ್ಮಲ್ಲಿ ನಿವೇದಿಸುತ್ತಿದ್ದೇನೆ.

-----------------------

ಬಿ.ಆರ್. ಲಕ್ಷಣರಾಯರ ಕುರಿತ ರವಿ ಬೆಳಗೆರೆಯವರ ಒಂದು ಬರಹ

------------------------

ಯಾಕೋ ಗೊತ್ತಿಲ್ಲ : ನನ್ನನ್ನು ಬಿ.ಆರ್‌. ಲಕ್ಷ್ಮಣರಾವ್‌ ಬರಹಗಳು ಮೊದಲಿಂದಲೂ ಬೆನ್ನುಬಿದ್ದು ಓದಿಸಿಕೊಂಡಿವೆ.  ಅವರ ಮತ್ತು ಎಚ್‌.ಎಸ್‌.ವೆಂಕಟೇಶಮೂರ್ತಿಯವರ ಕವಿತೆಗಳ ಸಿಡಿ. ಹಾಡೇ ಮಾತಾಡೇಕೈಗೆ ಬಂದಾಗಲೂ ಅಷ್ಟೆ : ಬಿ.ಆರ್‌.ಎಲ್‌. ತುಂಬ ಹಿತವೆನ್ನಿಸಿದರು. ಸ್ವಭಾವತಃ ತುಂಬ ವಾಚಾಳಿಯಲ್ಲದ ಲಕ್ಷ್ಮಣರಾವ್‌ ತಮ್ಮ ಕವಿತೆಗಳಿಗಿಂತ ಡಿಫರೆಂಟು. ಕೊಂಚ ಗಂಭೀರ. ಆದರೆ ಲಕ್ಷ್ಮಣರಾವ್‌ಗೆ ಇತರೆ ಯೂನಿವರ್ಸಿಟಿ ಕವಿಗಳ, ಅಕಡೆಮೀಷಿಯನ್‌ಗಳ, pseudo intellectual ವಿನಾಕಾರಣದ ಶ್ರೀಮದ್ಗಾಂಭೀರ್ಯವಿಲ್ಲ. ಅವರ ಕನ್ನಡಕದ ಹಿಂದಿನ ಕಣ್ಣುಗಳಲ್ಲಿ ಜೀವನಾನುಭವ ಥಳ್ಳೆನ್ನುತ್ತದೆ. ಲಕ್ಷ್ಮಣರಾವ್‌ಗೆ ಉಳಿದ ಅನೇಕ ಕನ್ನಡ ಕವಿಗಳಿಗಿದ್ದಂತಹ secured life ಇರಲಿಲ್ಲ. ಅವರು ಎಲ್ಲೂ ನೌಕರಿ ಮಾಡಲಿಲ್ಲ. ಬೆಂಗಳೂರಿನ ವ್ಯಾಮೋಹಕ್ಕೆ ಬೀಳಲಿಲ್ಲ. ಚಿಂತಾಮಣಿಯಲ್ಲೇ ಉಳಿದರು. ಹೊಟ್ಟೆಪಾಡಿಗಾಗಿ ಫೊಟೋಗ್ರಫಿ, ಟ್ಯೂಷನ್ನು, ಟುಟೋರಿಯಲ್ಲು - ಅದರಲ್ಲೇ ದೊಡ್ಡ ಸಂಸಾರಭಾರ ತೂಗಿಸಿ ಗೆದ್ದ ಜೀವ ಅದು.

ಬಹುಶಃ ನಾನು ಲಕ್ಷ್ಮಣರಾಯರ ಗೋಪಿ ಮತ್ತು ಗಾಂಡಲೀನಮೊದಲ ಬಾರಿಗೆ ಓದಿದಾಗ ಪಿಯುಸಿಯಲ್ಲಿದ್ದೆ . ಅನಂತರದ ದಿನಗಳಲ್ಲಿ ಅವರ ಕವಿತಾಸಂಕಲನ ಟುವಟಾರಓದಿದೆ. He sounded very different. ಅವರ ಪದ್ಯಗಳಲ್ಲಿ ಅವತ್ತಿನ ನವ್ಯ ಕಾವ್ಯಕ್ಕೆ ಇದ್ದ ಭಯ ಹುಟ್ಟಿಸುವಂತಹ ಗಾಂಭೀರ್ಯವಿರಲಿಲ್ಲ. ತುಂಟ ಸಂವೇದನೆಗಳಿದ್ದವು. ನಿಜಕ್ಕೂ ಫ್ರೆಶ್‌ ಅನ್ನಿಸುವಂತಹ ಪ್ರತಿಮೆಗಳಿದ್ದವು. ಆಗಿನ್ನೂ ನಾವು ಕೆ.ಎಸ್‌.ನರಸಿಂಹಸ್ವಾಮಿಯವರ ಶಾನುಭೋಗರ ಮಗಳ, ಸಿರಿಗೆರೆಯ ಕೆರೆ ನೀರಿನ, ಪದುಮಳ ಮುಟ್ಟಿನ-ಮುನಿಸಿನ ಹ್ಯಾಂಗೋವರ್‌ನಲ್ಲಿದ್ದವರು. ನರಸಿಂಹಸ್ವಾಮಿಗಳು ಪಕ್ಕಾ ಬೆಂಗಳೂರಿನಲ್ಲಿದ್ದುಕೊಂಡು, ಹಳ್ಳಿಯ, ನಿಸರ್ಗದ, ಅಗೋಚರಗಳ ನಡುವೆಯ ಪ್ರತಿಮೆಗಳನ್ನು ಹುಡುಕುತ್ತಿದ್ದರೆ ಲಕ್ಷ್ಮಣರಾವ್‌ ಏಕ್ದಂ ನಗರದ ಇಮೇಜಸ್‌ ತಂದು ಎದುರಿಗಿಡತೊಡಗಿದರು. ನಪೋಲಿ ಬಾರು, ಕ್ಯಾಬರೆ ನರ್ತಕಿ ಗಾಂಡಲೀನಾ, ಮದುವೆ ಮನೆಯ ಹುಡುಗಿಯರು, ಅವರ ಮಧ್ಯೆ ಖುದ್ದು ಬಿ.ಆರ್‌.ಎಲ್ ಅವರೇ ಫೊಟೋಗ್ರಾಫರು- ಹೀಗೆ ನಾವು ಕಂಡ, ನಮ್ಮ ಸುತ್ತಲಿನವೇ ಆದ ಇಮೇಜಸ್‌ ಬಳಸಿ ಪದ್ಯ ಬರೆದದ್ದರಿಂದಲೋ ಏನೋ, ಬಿ.ಆರ್‌.ಎಲ್‌. ನನ್ನ ವಯಸ್ಸಿನ ತುಂಟರಿಗೆ ತುಂಬ ಇಷ್ಟವಾಗಿ ಹೋದರು. ಬಹುಶಃ ಆ ದಿನಗಳಲ್ಲಿ ಅವರು ಫೊಟೋಗ್ರಫಿಯನ್ನು ಆ ಪರಿ ಹಚ್ಚಿಕೊಂಡಿದ್ದರಿಂದಲೋ ಏನೋ, ಫೊಟೋಗ್ರಫಿಕ್‌ ಪ್ರತಿಮೆಗಳೇ ಅವರಿಗೆ ದಕ್ಕುತ್ತಿದ್ದವು. ಇವತ್ತಿಗೂ ನನಗೆ ನೆನಪಿದೆ: ಪಿ.ಲಂಕೇಶ್‌ ತಮ್ಮ ಸಂಕಲನದ ಅಕ್ಷರ ಹೊಸ ಕಾವ್ಯದಲ್ಲಿ ಲಕ್ಷ್ಮಣರಾಯರ ಬಗ್ಗೆ ತುಂಬ ಒಳ್ಳೆಯ ಮಾತು ಬರೆದಿದ್ದರು.  ಅದನ್ನು ನಾನು ಮತ್ತು ಅಶೋಕ್‌ ಶೆಟ್ಟರ್‌ ಧಾರವಾಡದ ಕರ್ನಾಟಕ ಯೂನಿವರ್ಸಿಟಿಯ ರಸ್ತೆ ಪಕ್ಕದ ಕಲ್ಲು ಬೆಂಚಿನ ಮೇಲೆ ಕುಳಿತು ಓದಿಕೊಂಡಿದ್ದೆವು.

ಮುಂದೆ ಅದೇ ಲಂಕೇಶರು ಆಲನಹಳ್ಳಿ ಕೃಷ್ಣನ ಪ್ರತಿಭೆಯ ಮುಂದೆ  insecure ಆದಂತೆಯೇ ಲಕ್ಷ್ಮಣರಾಯರ ಪದ್ಯಗಳ ಬಗ್ಗೆಯೂ ಸಿಡಿಮಿಡಿಗುಟ್ಟತೊಡಗಿದರು. ತಮ್ಮ ಕಾವ್ಯಕ್ಕಿಲ್ಲದ sense of humor ಲಕ್ಷ್ಮಣರಾವ್‌ ಕಾವ್ಯಕ್ಕಿದೆ ಎಂಬುದೇ ಲಂಕೇಶರ ಸಿಡಿಮಿಡಿಗೆ ಕಾರಣವಾಗಿತ್ತೇನೋ? ಗೊತ್ತಿಲ್ಲ . ಲಕ್ಷ್ಮಣರಾವ್‌ಗೆ ತುಂಟತನ, ಪೋಲಿತನ- ಎರಡನ್ನೂ ಸಭ್ಯರಿಗೆ ರುಚಿಸುವಂತೆ ಬರೆದು ಓದಿಸುವ ತಾಕತ್ತಿತ್ತು : ಈಗಲೂ ಇದೆ.  ಅವತ್ತಿನ ನವ್ಯರ ಮಧ್ಯದಲ್ಲಿ ಬಿಳಿಗಿರಿ ಶುದ್ಧ ಕಾಮದ ಪದ್ಯ ಬರೆದರು. ಆದರೆ ಬಿ.ಆರ್‌.ಎಲ್‌. undiluted ಕಾಮವನ್ನು ಬದಿಗಿಟ್ಟು, ಆದರ ಜಾಗಕ್ಕೆ ತುಂಟತನ, ಅದರಲ್ಲೇ ಒಂದು ಗೇಲಿ, ಕೈಕೊಟ್ಟ ಹುಡುಗಿಗೆ ಸಣ್ಣ ಛಡಿಯೇಟು, ತಮ್ಮ ಮಧ್ಯಮ ವರ್ಗದ ನಿಸ್ಸಹಾಯಕತೆಗಳ ಬಗ್ಗೆ ತಾವೇ ಮಾಡಿಕೊಳ್ಳುವ ತಮಾಷೆ, ಹೆಂಡತಿಯನ್ನು ಓಲೈಸುವ ಬೇರೆಯದೇ ವಿಧಾನ, ಓಲೈಸುವ ಮಧ್ಯದಲ್ಲೇ ಆಕೆಗೊಂದು ಬುದ್ಧಿವಾದದ ಮಾತು- ಎಲ್ಲವನ್ನೂ ತಮ್ಮ ಕಾವ್ಯಕ್ಕೆ ಬಳಸಿಕೊಂಡರು.

ಮನೆಯ ಬಾಗಿಲಲ್ಲಿ ಒಣಗಿದ್ದರೆ ತೋರಣ
ನಾನೊಬ್ಬನೇ ಅಲ್ಲ ಅದಕ್ಕೆ ನೀನೂ ಕಾರಣ
ಅಕ್ಷಯ ಪಾತ್ರೆಯಲ್ಲಿ ದಾಂಪತ್ಯದ ಒಲವು
ತಂದು ತುಂಬಬೇಕು ನಾನೇ ಪ್ರತಿಸಲವೂ!

ಈ ಸಾಲುಗಳನ್ನು ಯಾರ ಮನೆಯ ಒಳಬಾಗಿಲಲ್ಲಿ ಬರೆದು ತೂಗುಹಾಕಿದರೂ ತಪ್ಪಾಗಲಾರದು: ಲಕ್ಷ್ಮಣರಾವ್‌ ಇದನ್ನು ಯಾವ ಕವಿಸಮಯದಲ್ಲಿ ಬರೆದರೋಅವರ ಪದ್ಯಗಳಲ್ಲಿ ಭಾಷೆ ಜರೀಪೇಟ ಕಿತ್ತೆಸೆದು ಸರಳವಾಯಿತು.  ಸುಬ್ಬಾಭಟ್ಟರ ಮಗಳೇ, ಇದೆಲ್ಲಾ ನಂದೇ ತಗೊಳ್ಳೇಅಂದಾಗ ಕವಿತೆ ನಮ್ಮ ಮನೆಯದಾಯಿತು.  ಬಿಡಲಾರೆ ನಾ ಸಿಗರೇಟು/ಹುಡುಗಿ, ಅದು ನಿನ್ನಂತೆಯೇ ಥೇಟು/ಬಿಡಬಲ್ಲೆನೇ ನಾ ನಿನ್ನಾ/ ಚಿನ್ನಾ, ಹಾಗೆಯೇ ಸಿಗರೇಟನ್ನಅಂತ ಓದಿಕೊಂಡಾಗಲೆಲ್ಲ ಹೊಸ ಸಿಗರೇಟು ಹಚ್ಚಿದ ಹುಡುಗರು ನಾವು. ಆದರೆ ಕೈಬಿಟ್ಟು ಹೋದ ಹುಡುಗಿಯನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ನಿಡುಸುಯ್ಯುವ, ಅವಳನ್ನು ಶಪಿಸುವ, ಪ್ರೀತಿಸುತ್ತಲೇ ಅವಳ ವಂಚನೆಯನ್ನು ಅವಳಿಗೆ ನೆನಪು ಮಾಡಿಕೊಡುವ ಪದ್ಯವೆಂದರೆ, ಬಿ.ಆರ್‌.ಎಲ್‌. ಬರೆದ ಆಟ’.

ಸೋತಳು ನಿನಗೆ ಪಿ.ಟಿ.ಉಷಾ
ಅಡೆತಡೆಗಳ ದಾಟಿ
ಓಡುವ ವೇಗದಲಿ
ನನ್ನ ಕೂಡುವ ತವಕದಲಿ
ಮೀರಿದೆ ನಾನು ಗವಾಸ್ಕರನ
ನೂರುಗಳ ದಾಖಲೆ
ನಿನಗಿತ್ತ ಮುತ್ತಿನಲಿ
ಪಡೆದ ಸಂಪತ್ತಿನಲಿ

ಎಲ್ಲ ಆಟಗಳು ತೀರಿದವು
ಈಗ ಕಣ್ಣಾಮಚ್ಚಾಲೆ
ಎಲ್ಲಡಗಿದೆ ನಲ್ಲೇ?
ಇನ್ಯಾರ ತೆಕ್ಕೆಯಲ್ಲೇ ?
ಉಳಿಸಿ ಹೋದೆಯಾ ನನಗೆ
ಮುಗಿಯದ ಹುಡುಕಾಟ
ಒಲವೇ ನೀನೆಲ್ಲಿ
ಇನ್ಯಾವ ಹೆಣ್ಣಿನಲ್ಲಿ ?

ಬಹುಶಃ ಲಕ್ಷ್ಮಣರಾವ್‌ ಮಾತ್ರ ಹೀಗೆ ಬರೆಯಬಲ್ಲರೇನೋಅವರು ಆಫೀಸಿಗೆ ಬಂದು ಕೂತ ತಕ್ಷಣ ಒಂದು ಸಲ ಆ ಹಾಡು ಹಾಡಿ ಬಿಡಿ’  ಅಂತ ಗಂಟುಬೀಳುತ್ತೇನೆ. ಬರೆದಷ್ಟೇ ಅದ್ಭುತವಾಗಿ ಲಕ್ಷ್ಮಣರಾವ್‌ ಹಾಡುತ್ತಾರೆ.  ಹೇಗೆ ಅವರಲ್ಲಿ ಅನವಶ್ಯಕ ಶ್ರೀಮದ್ಗಾಂಭೀರ್ಯಒಣ ಜಂಭಗಳಿಲ್ಲವೋ, ಹಾಗೆಯೇ ಅವರಲ್ಲಿ ಗುರುವಿನ ಹೆಣಕ್ಕೆ ಹೆಗಲು ಕೊಡುವ ದೈನೇಸಿತನವೂ ಇಲ್ಲ. ಅವರಿಗೆ ಯಾವುದೇ ಕವಿಯ, ಗುಂಪಿನ, ಲಾಬಿಯ ಹಂಗುಗಳಿಲ್ಲ. ಲಕ್ಷ್ಮೀನಾರಾಯಣ ಭಟ್ಟರು, ವೆಂಕಟೇಶಮೂರ್ತಿ, ಈ ಹಿಂದೆ ಗೋಪಾಲಕೃಷ್ಣ ಅಡಿಗರು- ಮುಂತಾದ ಹಿರಿಯರ ಸಾಹಚರ್ಯವಿತ್ತೇ ಹೊರತು, ಲಕ್ಷ್ಮಣರಾವ್‌ ಯಾರದೇ ಕೈ ಹಿಡಿದುಕೊಂಡು ಬೆಳೆದವರಲ್ಲ. ತಮ್ಮ ಕಾವ್ಯದ ಕಸುವೊಂದನ್ನೇ ನಂಬಿಕೊಂಡು ಬೆಳೆದವರು.

ಈಗ ಲಕ್ಷ್ಮಣರಾಯರಿಗೂ ಐವತ್ತೆಂಟಾಗಿದೆಯಂತೆ (ಇದನ್ನು ರವಿಬೆಳಗೆರೆಯವರು ಬರೆದದ್ದು 2004ರ ವರ್ಷದಲ್ಲಿ). ಹೀಗಾಗಿ ಕಾವ್ಯದಲ್ಲೂ ಮೊದಲಿನ ಪೋಲಿತನ ಕಡಿಮೆಯಾಗಿದೆ. ದೇವರಿಗೆ ನಮಸ್ಕಾರದಂತಹ ಕವಿತೆ ಬರೆದವರು ದೇವರೇ ಅಗಾಧ ನಿನ್ನ ಕರುಣೆಯ ಕಡಲು...ತರಹದ ಪ್ರಖರ ವೇದಾಂತದ, ಜೀವನಾನುಭವ ಸೂಸುವ ಕವಿತೆಗಳನ್ನೂ, ಭಾವಗೀತೆಗಳನ್ನೂ ಬರೆಯುತ್ತಿದ್ದಾರೆ. ಅವೆಲ್ಲವುಗಳನ್ನೂ ಮೀರಿ ನನ್ನನ್ನು ತಾಕಿದ್ದು , ತಾಯಿಯ ಬಗ್ಗೆ ಅವರು ಬರೆದಿರುವ ಗೀತೆ. ನೀವೊಮ್ಮೆ ,

ಅಮ್ಮಾ . ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು

- ಕೇಳಿಸಿಕೊಂಡು ನೋಡಿ. ತಾಯಿಯ ಬಗ್ಗೆ ಈತನಕ ಬಂದಿರುವ ಕನ್ನಡ, ತೆಲುಗು, ಹಿಂದಿ ಕವಿತೆ-ಗೀತೆಗಳನ್ನೆಲ್ಲ ನಾನು ಕೇಳಿದ್ದೇನೆ. ಓದಿದ್ದೇನೆ, ಎಲ್ಲ ಬರಹಗಳಲ್ಲೂ ತಾಯಿಯ ಬಗ್ಗೆ ಒಂದು ಧನ್ಯಭಾವ, ಮೆಚ್ಚುಗೆ, ‘ಅಮ್ಮ ಬೇಕುಅನ್ನುವಿಕೆ ಇದ್ದೇ ಇರುತ್ತದೆ. ಆದರೆ ಉಳಿದ್ಯಾವ ಭಾಷೆಯ ಕವಿಗಳ ಅನಿಸಿಕೆಗೂ ನಿಲುಕದ ಒಂದು ಭಾವ ಲಕ್ಷ್ಮಣರಾವ್‌ಗೆ ನಿಲುಕಿದೆ ಈ ಪದ್ಯದಲ್ಲಿ.  ಇಲ್ಲಿ ಕವಿ, ಅಮ್ಮನನ್ನು ಇನ್ನು ನನ್ನ ಕೈ ಬಿಡು, ನಾನು ಹೊಸ ಎತ್ತರಗಳಿಗೇರುತ್ತೇನೆ ಅಂತ ವಿನಂತಿಸುತ್ತಾನೆ. ಬೇಕೆನ್ನಿಸಿದಾಗ ಮತ್ತೆ ನಿನ್ನ ಮಡಿಲಿಗೆ ಹಿಂತಿರುಗುತ್ತೇನೆ ಅನ್ನುತ್ತಾನೆ. ಇದೆಲ್ಲ ಮಾತು ಒತ್ತಟ್ಟಿಗಿರಲಿ:

ಹಾಡೆ- ಮಾತಾಡೆಕೇಳಿದ ಮೇಲೆ ಅವರ ಚಿಂತಾಮಣಿಯ ಮನೆಗೆ ಫೋನು ಮಾಡಿ ಹೇಳಿದೆ:

ರಾಯರೇ, ಈ ಸಲ ಬೆಂಗಳೂರಿಗೆ ಬಂದಾಗ ಕಾಣದೆ ಹೋಗಬೇಡಿ. ಒಂದಿಷ್ಟು ಪದ್ಯ ನಿಮ್ಮದು, ಒಂದಷ್ಟು ಮದ್ಯ ನಮ್ಮದು. ನಿಮ್ಮೊಂದಿಗೆ ನಕ್ಕು, ಅದರ ನೆನಪು ಉಳಿಸಿಕೊಳ್ಳಲಿಕ್ಕೆ ನಮಗೂ ಅವಕಾಶ ಕೊಡಿ’.

ಆಗಲಿ ಅಂದರು ಲಕ್ಷ್ಮಣರಾವ್‌.

-------------------------
ವಯಸ್ಸು ಎಪ್ಪತ್ತೇ ಆದರೂ  ಯುವ ಕವಿ ಎಂದೇ ಕರೆಸಿಕೊಳ್ಳುವ ಲಕ್ಷ್ಮಣರಾವ್‌ರವರಿಗೆ ಸಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಡಾ.ಪು.ತಿ.ನ. ಕಾವ್ಯ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದವುಗಳು. ಅಭಿಮಾನಿಗಳು, ಗೆಳೆಯರು ಅರ್ಪಿಸಿದ ಅಭಿನಂದನ ಗ್ರಂಥ ಚಿಂತಾಮಣಿ2006ರಲ್ಲಿ.


ಈ ಹಲವು ಸವಿಭಾವಗಳೊಂದಿಗೆ ನಮ್ಮ ಪ್ರೀತಿಯ ಬಿ. ಆರ್. ಲಕ್ಷಣರಾಯರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.  ನಿಮ್ಮಲ್ಲಿನ ಪ್ರೀತಿ, ನಿಮ್ಮ ಸವಿ ಸಿಂಚನದಿಂದ ನಿಮ್ಮಲಿರುವ ತುಂಟ ಕವಿತನದ  ಸವಿಯನ್ನೇ ನಮ್ಮ ಮನಸ್ಸುಗಳೂ  ತುಂಬಿ ನಲಿಯುತ್ತಿರುವಂತಾಗಲಿ.  ನಿಮ್ಮ ಬದುಕು  ಸುಖ, ಸಂತಸಗಳಿಂದ ಶ್ರೀಮಂತವಾಗಿರಲಿ.

Tag: B. R. Lakshmana Rao