ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟೆಲಿವಿಷನ್

ಟೆಲಿವಿಷನ್

ಸೆಪ್ಟೆಂಬರ್ 7  ಟೆಲಿವಿಷನ್ ಜನ್ಮದಿನವಂತೆ.   ಟೆಲಿವಿಷನ್ ಬಗೆಗಿನ ಪ್ರಯೋಗಗಳು ವಿವಿಧ ರೀತಿಯಲ್ಲಿ 19ನೆಯ ಶತಮಾನದ ಕೊನೆಯ ದಶಕಗಳಲ್ಲೇ ಮೊದಲ್ಗೊಂಡವಾದರೂ, 1927ರಲ್ಲಿ ಅಮೆರಿಕದ ಸಂಶೋಧಕ ಫಿಲೋ ಟಿ ಫ್ರಾನ್ಸ್ ವರ್ಥ್ ಎಂಬಾತ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ `ಇಮೇಜ್ ಡಿಸೆಕ್ಟರ್' ಎಂಬ ಉಪಕರಣವನ್ನು ಬಳಸಿ ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಮೂಲಕ ಚಿತ್ರವನ್ನು ರವಾನಿಸುವಲ್ಲಿ ಯಶಸ್ವಿಯಾಗುವುದರೊಂದಿಗೆ ಅದಕ್ಕೊಂದು ಸ್ಪಷ್ಟ ರೂಪ ಬಂತು ಎಂಬುದು ತಿಳಿದವರ ಅಂಬೋಣ.  ಆ ಪ್ರಯೋಗ ಯಶಸ್ವಿಯಾದ ಸಂದರ್ಭದಲ್ಲಿ ಫಿಲೋ ಟಿ ಫ್ರಾನ್ಸ್ ವರ್ಥ್ ಅವರು ತಮ್ಮ ಜೋಡಣೆಯನ್ನುದ್ದೇಶಿಸಿ  'ನೀನು ಎಲೆಕ್ಟ್ರಾನಿಕ್ ಟೆಲಿವಿಷನ್!' ಎಂದು  ಅದಕ್ಕೊಂದು ನಾಮಕರಣ ಮಾಡಿದರಂತೆ.

ಸ್ವಲ್ಪ ವಿಜ್ಞಾನ ನನ್ನ ತೆಲೆಗೆ ಹೋಗುವುದು ಕಷ್ಟ.   ನನ್ನಂತಹವ  ಕೂಡಾ ಇದನ್ನು ಉಪಯೋಗಿಸುತ್ತಾನೆ  ಎಂಬುದನ್ನು  ಮುಂದಾಲೋಚನೆ ಮಾಡಿಯೇ ಬಹುಷಃ ಪಂಡಿತರು ಇದನ್ನು  ‘ಮೂರ್ಖರ ಪೆಟ್ಟಿಗೆ’ ಎಂದು ವಿಶ್ಲೇಷಿಸಿರಬೇಕು!    ನಾನು ಮೊದಲು ಈ ಪೆಟ್ಟಿಗೆಯನ್ನು ನೋಡಿದ್ದು ಇಂದು ಮೈಸೂರು  ಮೆಡಿಕಲ್ ಕಾಲೇಜಿನ ಭಾಗವಾಗಿರುವ ಕಟ್ಟಡದಲ್ಲಿ ಅಂದು ನಡೆಯುತ್ತಿದ್ದ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ.    ಈಗಲೂ ಚೆನ್ನಾಗಿ ನೆನೆಪಿದೆ ಒಂದು ತಳುಕು ಬಳುಕಿನ ಪೆಟ್ಟಿಗೆಗೆ ಮುಂದೆ ಗಾಜು ಹಾಕಿತ್ತು. ಅದರ ಮುಂದೆ ಟೆಲಿವಿಷನ್ ಎಂದು ಎಲ್ಲರೂ ಓದುವ ಹಾಗೆ ಒಂದು ಫಲಕ ಬರೆದಿದ್ದರು.  ಅದರ ಮುಂದಿದ್ದ ಗಾಜಿನಲ್ಲಿ ಸಾಲಾಗಿ ಬರುತ್ತಿದ್ದ ನಮ್ಮ ಮುಖಗಳೆಲ್ಲ ಕಾಣುತ್ತಿದ್ದವಾದ್ದರಿಂದ ನನಗೆ ತಕ್ಷಣ ಹೊಳೆದ ವಿಚಾರವೆಂದರೆ “ಒಂದು ಪೆಟ್ಟಿಗೆಯ ಮುಂದೆ ಕನ್ನಡಿಯನ್ನು ಜೋಡಿಸಿದರೆ” ಅದು ಟೆಲಿವಿಷನ್ ಆಗುತ್ತೆ!

ಕೊನೆಗೊಂದು ದಿನ ನಮ್ಮೂರಲ್ಲೂ ಟೆಲಿವಿಷನ್ ಬಂತು.  ಟೆಲಿವಿಶನ್ ಅಂಗಡಿ ಮುಂದೆ, ಮೊದ ಮೊದಲು ಕೊಂಡ ಶ್ರೀಮಂತರ ಮನೆಗಳಿಗೆ ನಾವು ಧಾವಿಸಿದ್ದೇ ಧಾವಿಸಿದ್ದು.  ಕೊನೆಗೊಂದು ದಿನ ಇದನ್ನು ಕೊಳ್ಳದಿದ್ದರೆ ನಮಗೆ ಘನತೆ ಎಂಬುದಿಲ್ಲ ಎಂದು ನಮ್ಮ ಮನೆಯವರಿಗೆಲ್ಲಾ ಅರಿವಾದ್ದರಿಂದ ನಮ್ಮ ಮನೆಗೂ ಬಂತು.  ಅಂದಿನಿಂದ ಕಚೇರಿಯಲ್ಲಿ ಓವರ್ ಟೈಂ ಎಲ್ಲಾ ಬಂದ್.  ಆರು ಗಂಟೆಗೆ ದೂರದರ್ಶನ ಕಾರ್ಯಕ್ರಮ ಪ್ರಾರಂಭ ಸೂಚಕವಾಗಿ ಅಳೋ ರಾಗದ ಹಿನ್ನೆಲೆಯಲ್ಲಿ ಚಕ್ರ ಸುತ್ತುತ್ತಾ  ಬರುತ್ತಿದ್ದ ಪ್ರಾರಂಭಕ್ಕೂ ಮುಂಚಿತವಾಗಿಯೇ ಉದ್ದುದ್ದ ಕಾಣುತ್ತಿದ್ದ ಗೆರೆಗಳಿಂದ ಹಿಡಿದು ಅದು ಮುಕ್ತಾಯದವರೆಗೆ ನಾವು ನೋಡಿದ್ದೂ ನೋಡಿದ್ದೇ.  ಆ ಮಹಾರಾಯ್ತಿ ಇಂದಿರಾಗಾಂಧಿ, ರಾಜೀವ್ ಗಾಂಧಿಯನ್ನು ದೂರದರ್ಶನದಲ್ಲಿ ಎಷ್ಟು ನೋಡಿ ಈ ಕಣ್ಣುಗಳು ಹಾಳಾದವೋ ಗೊತ್ತಿಲ್ಲ.  ಒಮ್ಮೆ ಆರ್ ಕೆ ಲಕ್ಷ್ಮಣ್ ಒಂದು ಸುಂದರ ಕಾರ್ಟೂನು ಬರೆದಿದ್ರು.  ಅದರಲ್ಲಿ ಒಬ್ಬ ಮನೆಯಲ್ಲಿ ರಾಜೀವ್ ಗಾಂಧಿ ಫೋಟೋನೇ ನೋಡ್ತಾ ಕೂತಿದ್ದ.  ಇದೇನು ಹೀಗೆ ಎಂದು ಪ್ರಶ್ನಾರ್ಥಕವಾಗಿ ನೋಡಿದ ಮಿಸ್ಟರ್ ಸಿಟಿಜನ್ಗೆ ದೊರೆತ ಉತ್ತರ “ಪಾಪ, ಅವನ ಟಿ.ವಿ. ಕೆಟ್ಹೋಗಿದೆ!”.  ಈಗ್ಲೂ ನಾನು ಆಗಾಗ ಅಂದುಕೊಳ್ತೇನೆ, “ಜನ ಮೊದ ಮೊದಲು ಆತನ ಸುಂದರ ಮುಖ ನೋಡಿ ನೋಡಿ ಓಟು ಹಾಕಿದ್ರು.  ನಂತರ ಆತನ ಮುಖ ನೋಡಿದ್ದೇ ನೋಡಿ ಜಿಗುಪ್ಸೆಯಾಗಿ ಆತನ ವಿರುದ್ಧವಾಗಿ ಮತ ಹಾಕಿದ್ರು” ಅಂತ.

ಮುಂದೆ ರಾಮಾಯಣ, ಮಹಾಭಾರತ ನೋಡಿ ನಮ್ಮ ಜನ ದಿನಾ ಆರತಿ ತಟ್ಟೆ ತೊಗೊಂಡು ಕಾಯ್ತಾ ಇದ್ದದ್ದು, ಭಾನುವಾರ ದೂರದರ್ಶನದಲ್ಲಿ ಸಿನಿಮಾ ಬರುತ್ತೆ ಅಂದ್ರೆ ರಸ್ತೆ ಖಾಲಿ ಖಾಲಿ ಆಗಿರೋದು ನೋಡೋಕೆ ಎಷ್ಟು ಚಂದದ ಸಮಯ ಅನ್ಸೋದು ಇವೆಲ್ಲಾ ನೆನೆಸ್ಕೊಂಡ್ರೆ ಸಂಭ್ರಮ ಆಗುತ್ತೆ.   ಆಸ್ಟ್ರೇಲಿಯಾ, ಇಂಗ್ಲೆಂಡ್ನಲ್ಲಿ ಕ್ರಿಕೆಟ್ ವಾತಾವರಣ ಎಷ್ಟು ಸುಂದರವಾಗಿರುತ್ತೆ, ವಿಂಬಲ್ಡನ್ ಅಂದ್ರೆ ಅದೆಂತಹ ಸುಮಧುರ ವಾತಾವರಣ, ಫುಟ್ಬಾಲ್ ಅಂದ್ರೆ ಮೋಹನ್ ಬಗಾನ್ ಈಸ್ಟ್ ಬೆಂಗಾಲ್ ನಡುವೆ ನಡೆಯೋ ಡ್ರಾ ಪಂದ್ಯ ಅಲ್ಲ ಇವೆಲ್ಲಾ ಅರ್ಥ ಆದದ್ದು ದೂರದರ್ಶನದಿಂದ.  ದೇಶದಲ್ಲಿ ಎಂತೆಂಥಹ ಕಲಾ ಪ್ರತಿಭೆಗಳಿವೆ ಅಂತ ಅರ್ಥ ಆಗಿದ್ದು ಮಾಲ್ಗುಡಿ ಡೇಸ್, ಯೇ ಜೋ ಹೈ ಜಿಂದಗಿ, ಕಥಾ ಸಮಯ್, ಕ್ವಿಜ್ ಟೈಂ, ವಿವಿಧ ಭಾಷಾ ಕಲಾತ್ಮಕ ಚಿತ್ರಗಳು , ಸಂಗೀತ ಕಾರ್ಯಕ್ರಮಗಳು, ಸಂಗೀತ ಸ್ಪರ್ಧೆಗಳು ಮುಂತಾದವಿಂದ.  ಅಂದಿನ ದಿನಗಳಲ್ಲಿ ಈ ಒಳ್ಳ ಒಳ್ಳೆಯ ಕಾರ್ಯಕ್ರಮಗಳೆಲ್ಲ  ದೂರದರ್ಶನದ ಇಂಗ್ಲಿಷ್ ವಾರ್ತೆ, ಹಿಂದಿ ವಾರ್ತೆ, ಕನ್ನಡ ವಾರ್ತೆ, ಉರ್ದು ವಾರ್ತೆ, ಕಿವುಡು ಮೂಖರ ವಾರ್ತೆ, ಪ್ರಧಾನಿ ಭಾಷಣ, ರಾಷ್ಟ್ರಪತಿ ಭಾಷಣ, ಪುಢಾರಿಗಳ ಚುನಾವಣಾ ಪ್ರಚಾರ ಭಾಷಣ, ಅಡಚಣೆಗಾಗಿ ಕ್ಷಮಿಸಿ, ಹಲವಾರು ಜಾಹೀರಾತು ಇವುಗಳ ಜೊತೆಗೆ ಸ್ಪರ್ಧಿಸಬೇಕಿತ್ತು.  ಆದರೂ ಅಂತಹ ಸುಂದರತೆಗೆ ಕಾಯುವುದು ಧನ್ಯತೆಯಂತಿತ್ತು.  ಇಂದೂ ಅನಿಸುತ್ತದೆ.  ನಾವು ಸವಿದದ್ದು ಧನ್ಯತೆಯ ಕ್ಷಣಗಳೇ ಅಂತ.

ಆದ್ರೆ.... ಆದ್ರೆ..... ತಂತ್ರಜ್ಞಾನ ಮುಂದುವರೆದಂತೆಲ್ಲಾ ಹೆಚ್ಚು ಹೆಚ್ಚು ಚಾನೆಲ್ಲುಗಳು ಬಂದಂತೆಲ್ಲಾ ಅವುಗಳ ಬಕಾಸುರ ಹೊಟ್ಟೆ ತುಂಬಿಸಲು ಕಾರ್ಯಕ್ರಮಗಳು ನಿರ್ಮಾಣವಾಗತೊಡಗಿದಂತೆಲ್ಲಾ ಅದು ತಲೆ ನೋವಾಗಿ ಪರಿಣಮಿಸುತ್ತಿವೆ.  ಇತ್ತೀಚೆಗೆ ಮಹಿಳಾ ಸಾಹಿತ್ಯ ಗೋಷ್ಠಿಯಲ್ಲಿ ಒಬ್ಬರು ಹಿರಿಯ ಬರಹಗಾರ್ತಿ  ಹೇಳಿದರು “ಇಂದಿನ ಮಹಿಳೆ ಬೆಳಿಗ್ಗೆ ವಿವಿಧ ರೀತಿಯ ಕಾಸ್ಟ್ಯೂಮ್ಗಳಲ್ಲಿ ಕಾಣಿಸಿಕೊಳ್ಳುವ ಚಿತ್ರ ವಿಚಿತ್ರ ವ್ಯಕ್ತಿಗಳು ಹೇಳುವ  ಭವಿಷ್ಯ ಮತ್ತು ರಾತ್ರಿ ಬರುವ ಕ್ರೈಂ ಟೈಂ ಇವೆರಡರ ನಡುವೆ ಕಳೆದು ಹೋಗುತ್ತಿದ್ದಾಳೆ” ಎಂದು.  ಹಾಗೆ ನೋಡಿದರೆ ಅದು ಮಹಿಳೆಗೆ ಮಾತ್ರ ಸಂಬಂಧಿಸಿದ್ದಲ್ಲ.  ದೂರದರ್ಶನ ನೋಡುವವರ ಕತೆಯೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಇಂತೆಯೇ ಬದುಕಾಗಿದೆ.  ದಿನ ಬೆಳಗಾದರೆ ದೂರದರ್ಶನದಲ್ಲಿ ಬಗೆ ಬಗೆಯಲ್ಲಿ ಹಲವಾರು ಜಾಹೀರಾತುಗಳ ಮಧ್ಯೆ ಸುಪ್ರಭಾತ, ಪುರಾಣ ಪ್ರವಚನ ಹೇಳುವಂತಹ  ಫಿಲಂ ಸ್ಟಾರುಗಳನ್ನು ಮೀರಿಸುವ ಪುರೋಹಿತ ವರ್ಗ ಸೃಷ್ಟಿಯಾಗುತ್ತಿದೆ.  ಕೇಳಿದ್ದನ್ನೆಲ್ಲಾ ಕೊಡುವ ದೇವಸ್ಥಾನಗಳು, ಪರೀಕ್ಷೆಯಲ್ಲಿ ಪಾಸು ಮಾಡಿಸುವ ದೇವಸ್ಥಾನಗಳ ಮಹಿಮೆಯ ಪ್ರಚಾರ ಕೂಡಾ ದಿನಂಪ್ರತಿ ನಡೆಯುತ್ತಿದೆ.   ಸಾಂಸ್ಕ್ರತಿಕ ಕಾರ್ಯಕ್ರಮಗಳಾಗಬೇಕಿದ್ದ ಸಂಗೀತ ಸ್ಪರ್ಧೆಗಳು ರಾಜ ಮಹಾರಾಜರ ಕಾಲದಲ್ಲಿನ ಯುದ್ಧ ಸ್ಪರ್ಧೆಗಳನ್ನೂ ಮೀರಿಸುತ್ತವೆ.  ಧಾರಾವಾಹಿಗಳಂತೂ ಹೇಗೆ ಅನೈತಿಕವಾಗಿ ಬದುಕಬೇಕೆಂಬುದನ್ನು ಬಿಡಿ ಬಿಡಿಯಾಗಿ ಹೇಳಿಕೊಡುತ್ತಾ ಸಾಗಿವೆ.  ಇನ್ನು ರಾಜಕಾರಣಿಗಳ ನಡತೆಯಂತೂ ನಮ್ಮ ದೇಶ ಎಂದೂ ಉದ್ಧಾರವಾಗುವಂತದ್ದಲ್ಲ ಎಂಬುದನ್ನೂ ಕ್ಷಣ ಕ್ಷಣಕ್ಕೂ ನಮ್ಮ ಯುವ ಹೃದಯಗಳಲ್ಲಿ ಕೆತ್ತುತ್ತಾ, ನೀನೂ ಅವಕಾಶವಾದಿಯಾಗು ಇಲ್ಲದಿದ್ದರೆ ನಿನಗೆ ಉಳಿಗಾಲವಿಲ್ಲ ಎಂದು ಮನದಟ್ಟುಮಾಡಿಕೊಡುತ್ತಾ ಸಾಗಿವೆ.

ಒಟ್ನಲ್ಲಿ ಯಾವುದು ನಮ್ಮ ಮನಸ್ಸಿಗೆ ಸಂತೋಷ ಕೊಡಲಿಕ್ಕೆ ಅಂತ ಹುಟ್ಟಿಕೊಳ್ಳುತ್ತಾ ಅದೇ ನಮ್ಮ ಮನಸ್ಸನ್ನು ಕುಲಗೆಡಿಸುವಂತದ್ದು ಎಂಬುದಕ್ಕೆ ದೂರದರ್ಶನಕ್ಕಿಂತ ಬೇರೆ ನಿರ್ದರ್ಶನ ಮತ್ತೊಂದಿಲ್ಲ.

ಹೀಗಾಗಿ ಜೀವನ ದರ್ಶನ ಬೇಕೆನ್ನುವವರು ಈ ದರ್ಶನ ಯಂತ್ರದಿಂದ ದೂರ ಇರುವುದೊಳಿತು ಎಂಬ ಅನಿಸಿಕೆ ದಿನೇ ದಿನೇ  ಹೆಚ್ಚು ಹೆಚ್ಚು ಹತ್ತಿರವಾಗುತ್ತಿವೆ.  ಆದ್ದರಿಂದ ಈ ಟೆಲಿವಿಷನ್ ಎಂಬ  ದೂ....ರ.....ದರ್ಶನಕ್ಕೆ ದೂರದಿಂದಲೇ ಒಂದು ದೊಡ್ಡ ನಮಸ್ಕಾರ.

Tag: Television

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ