ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಂದಳು ಗೌರಿ ಆಗಲೂ ಈಗಲೂ


ಬಂದಳು ಗೌರಿ ಆಗಲೂ ಈಗಲೂ
-ಮಂಜುಳಾ ರಾಜ್

ಶ್ರಾವಣ ಮಾಸ ಬಂದೊಡನೆ ಹಬ್ಬಗಳ ಸಾಲು ಸಾಲೇ ಆರಂಭವಾಗುತ್ತದೆ. ವರ ಮಹಾಲಕ್ಷ್ಮಿಯ ಹಿಂದೆಯೇ ಗೌರಿಯೂ ಬಂದೇ ಬಿಡುತ್ತಾಳೆ. ವರಲಕ್ಷ್ಮಿ ವ್ರತ ಮುಗಿದೊಡನೆ ಚಿಕ್ಕಮಗಳೂರಿನ ನಮ್ಮ ಮನೆಯಲ್ಲೂ ಅಮ್ಮನ ವರಾತದೊಂದಿಗೆ ಗೌರಿಯ ಆಗಮನಕ್ಕೆ ಸಿದ್ಧತೆ ಪ್ರಾರಂಭವಾಗೇ ಬಿಡುತ್ತಿತ್ತು.

`ಸಂತೆಗೆ ಹೋದಾಗ ಜೋಡಿ ಮೊರಗಳನ್ನು ತಂದು ಬಿಡಿ` ಅಂತ ಅಮ್ಮ ಸಂಭ್ರಮದಲ್ಲೇ ಫರ್ಮಾನು ಹೊರಡಿಸುತ್ತಿದ್ದಳು. ಅದೇನು ಒಂದೇ ಎರಡೇ, ಅಮ್ಮ, ಚಿಕ್ಕಮ್ಮ, ಅಕ್ಕ, ನಾನು, ಇಬ್ಬರು ತಂಗಿಯರು ಹೀಗೆ ಒಟ್ಟು ಆರು ಜನಕ್ಕೆ ತಲಾ ಎರಡು ಜೊತೆಯಂತೆ ಹನ್ನೆರಡು ಜೊತೆ ಬಾಗಿನದ ಮೊರಗಳ ಆಗಮನವಾಗುತ್ತಿತ್ತು.

ಅಮ್ಮ ಮೊರಗಳನ್ನು ತೊಳೆದಿಟ್ಟು, ಒಣಗಿದ ಬಳಿಕ ಅದರ ಮೇಲೆ ಅರಿಶಿನದ ಪಟ್ಟೆ, ಕುಂಕುಮ ಮತ್ತು ಚಂದ್ರದ ಬೊಟ್ಟನಿಡುವ ಕೆಲಸ ನನ್ನದೇ. ಅರಿಶಿನದ ಕೊನೆಯನ್ನು ಮಧ್ಯದಲ್ಲಿ ಕಟ್ಟಿ ಆ ದಾರವನ್ನು ಮೊರದ ಕೆಳ ಭಾಗದ ಕೊನೆಗೆ ಸುತ್ತುವುದರಲ್ಲಿ ಏನೋ ಸಂಭ್ರಮ.

ಅರಿಶಿನದ ಕೊನೆ ಮೊರದ ಮಧ್ಯಕ್ಕೇ ಬರಬೇಕು, ನಂತರ ಅಮ್ಮ ಅದರೊಳಗೆ ಮಂಗಳ ದ್ರವ್ಯ, ಹಣ್ಣುಗಳು ಮತ್ತು ಧಾನ್ಯಗಳನ್ನು ತುಂಬಿಸಿಡುವ ಕೆಲಸ ಮಾಡುತ್ತಿದ್ದಳು. ಹದಿನಾರು ವೀಳ್ಯದ ಎಲೆಗಳನ್ನು ಸುತ್ತಿ ಅದಕ್ಕೆ ದಾರ ಕಟ್ಟಿ ಮೊರದ ಒಳಗೆ ಹಾಕುತ್ತಿದ್ದೆವು. ಹಬ್ಬಕ್ಕೆ ತಿಂಗಳ ಮುಂಚೆಯೇ ಅತ್ತಿಗೆಯ ಜೊತೆ ಸೇರಿ ಹೆಣೆದ ವಿಧ ವಿಧದ ಹತ್ತಿಯ ಹಾರಗಳು, ಗೆಜ್ಜೆ ವಸ್ತ್ರ ಎಲ್ಲವೂ ಸಿದ್ಧವಿರುತ್ತಿತ್ತು.

ಹಬ್ಬದ ಹಿಂದಿನ ದಿನ ಎಳೆಯ ಮಾವಿನ ಎಲೆಗಳನ್ನು ಆರಿಸಿ ಮುಂಬಾಗಿಲಿಗೆ ತೋರಣ ಕಟ್ಟುತ್ತಿದ್ದೆವು. ಇದೆಲ್ಲವೂ ಈಗ ನಡೆದಂತೆ ಅನಿಸುತ್ತಿದೆ. ಆಗೆಲ್ಲಾ ಮಾಡಬೇಕಲ್ಲಾ ಎನ್ನುವ ಬೇಸರವೇ ಇರಲಿಲ್ಲ, ಮಾಡಲೇಬೇಕು ಎನ್ನುವ ಉತ್ಸಾಹ ಮಾತ್ರ ಪುಟಿಯುತ್ತಿತ್ತು.

ನಂತರ ದೇವಸ್ಥಾನದಲ್ಲಿ ಕೂರಿಸುವ ಗೌರಿಯ ಮುಂದೆ ಪೂಜೆಗೆ ಕುಳಿತುಕೊಳ್ಳಲು ಮಣೆ ಹಾಕುವಲ್ಲಿ ಸ್ಪರ್ಧೆ. ಎಲ್ಲರಿಗೂ ಆದಷ್ಟೂ ದೇವಿಯ ಹತ್ತಿರ ಕೂರುವ ಆಸೆ. ಹಿಂದಿನ ದಿನವೇ ಮಣೆಗಳ ಮೇಲೆ ನಮ್ಮ ಇನಿಶಿಯಲ್ಸ್ ಬರೆದಿಟ್ಟು ಬರುತ್ತಿದ್ದೆವು. ಕೆಲವು ಬಾರಿ ನಮ್ಮದನ್ನು ಜರುಗಿಸಿ ಹಿಂದೆ ತಳ್ಳುತ್ತಿದ್ದುದೂ ಉಂಟು.

ಮಾರನೆಯ ದಿನ ಪೂಜೆಯ ತಟ್ಟೆ, ಬಾಗಿನದ ಮೊರಗಳೊಂದಿಗೆ ದೇವಸ್ಥಾನಕ್ಕೆ ಹೆಂಗಳೆಯರ ಸವಾರಿ ಹೋಗುತ್ತಿತ್ತು. ಅಣ್ಣಂದಿರೂ ಸೈಕಲ್‌ನಲ್ಲಿ ಮೊರದ ಬಾಗಿನ ಹಿಡಿದು ತಂದು ಕೊಡುತ್ತಿದ್ದರು. ನಂತರ ಪೂಜೆಯ ಸಂಭ್ರಮ. ಗೌರಿಗೆ ಹದಿನಾರು ಮನೆಗಳವರು ಆರತಿ ಬೆಳಗುವುದು, ಎಲ್ಲರೂ ಬೆಳಗುತ್ತಿದ್ದರೆ ಗೌರಿ ಮನೆಯಲ್ಲಿ ಬೆಳಕು ಚಿಮ್ಮುತ್ತಿತ್ತು. ಸ್ವರ್ಣ ಗೌರಿ ವ್ರತದ ಮಹಿಮೆ ಹೇಳುವ ಕಥೆ ಕೇಳಿ ಪುಣ್ಯ ಸಂಪಾದಿಸುವ ಆಸೆ.

ಅದೇನೋ ಸಂಭ್ರಮ. ಜೊತೆಗೆ ತೆಗೆದುಕೊಂಡು ಹೋದ ಪೂಜಾ ಸಾಮಗ್ರಿಗಳನ್ನು ಜತನ ಮಾಡುವ ಜಾಗ್ರತೆ. ಇಲ್ಲವಾದಲ್ಲಿ ಅಮ್ಮನ ಬೈಗುಳಕ್ಕೆ ಸಿದ್ಧವಿರಬೇಕಲ್ಲಾ, ಅಲ್ಲಿಯೇ ಗೆಳತಿಯರಿಗೆ ಬಾಗಿನ ಕೊಡುವಾಟ. ಹೋದ ವರ್ಷ ಗೀತನಿಗೆ ಕೊಟ್ಟಿದ್ದೆ, ಈ ಸಲ ವಿಜಯಾಗೆ ಕೊಡೋಣ ಎಂದು ಮೊದಲೇ ನಿರ್ಧಾರವಾಗಿರುತ್ತಿತ್ತು. ಅಮ್ಮ ಬೇರೆಯವರಿಗೆ ಕೊಡಲು ಹೇಳಿದರೆ ಮುಖ ಸಪ್ಪಗಾಗಿ ಬಿಡುತ್ತಿತ್ತು.

ಎಲ್ಲ ಮುಗಿಸಿ ಮನೆಗೆ ಬಂದು ತಿಂಡಿ ತಿನ್ನುವ ಹೊತ್ತಿಗೆ ಹನ್ನೊಂದು ಗಂಟೆಯಾಗಿ ಬಿಡುತ್ತಿತ್ತು. ಮುಂಜಾನೆಯೇ ಮಾಡಿಟ್ಟಿದ್ದ ಗರಿ ಗರಿ ಹಾಲು ಹೋಳಿಗೆ ಬಾಯಿಗೆ ಹಾಕಿದರೆ ಕರಗಿ ಹೋಗುತ್ತಿತ್ತು, ಒಂದರ ನಂತರ ಒಂದು ಒಳಗೆ ಹೋಗುತ್ತಲೇ ಇದ್ದವು.

ಅಂತೂ ಗೌರಿ ತವರು ಮನೆಗೆ ಬಂದು ಮಾಡಿಸಿಕೊಳ್ಳುವ ಉಪಚಾರ, ಪೂಜೆ ಒಂದು ಹಂತಕ್ಕೆ ಬಂದಿತೆನ್ನಿ, ಮಾರನೆಯ ದಿನ ತಾಯಿ ಗೌರಿಯನ್ನು ಕರೆದೊಯ್ಯಲು ಮಗ ಗಣೇಶ ಹಾಜರಾಗುತ್ತಾನೆ. ಆದ್ದರಿಂದಲೇ ತಾಯಿ ಮಕ್ಕಳಿಬ್ಬರಿಗೂ ಷೋಡಶೋಪಚಾರ, ನಂತರ ಬೀಳ್ಕೊಡುಗೆ. ಮತ್ತೆ ದೇವಸ್ಥಾನಕ್ಕೆ ಆಟವಾಡಲು ಓಟ.

ಮದುವೆಯ ನಂತರ ಅತ್ತೆಯ ಮನೆ ಅರಕಲಗೂಡಿನಲ್ಲಿ ಗೌರಿ ಹಬ್ಬ. ಅಮ್ಮನ ಮನೆಯಲ್ಲಿ ಆಟವಾಡಿಕೊಂಡು ಮಾಡುತ್ತಿದ್ದುದು. ಇಲ್ಲಿ ಬೆಳಿಗ್ಗೆ ಬೇಗ ಎದ್ದು ಅಡುಗೆ ಮಾಡಿ, ಎಲ್ಲಾ ಅಣಿ ಮಾಡಿಕೊಂಡು ಅತ್ತೆಯ ಜೊತೆ ದೇವಸ್ಥಾನದಲ್ಲೇ ಗೌರಿ ಪೂಜೆಗೆ ಹೋಗುವ ಪರಿಪಾಠ. ಅಲ್ಲಿಂದ ಬೆಂಗಳೂರಿಗೆ ಬಂದ ಮೇಲೆ ಮನೆಯಲ್ಲೇ ಗೌರಿ ಪೂಜೆ. ಬಣ್ಣದ, ಮಣ್ಣಿನ ಗೌರಿ ಬೇಡ, ಪರಿಸರ ಹಾಳಾಗಲು ನಾವೇಕೆ ಕಾರಣರಾಗಬೇಕು ಎಂದುಕೊಂಡು ಮನೆಯ ನಿತ್ಯ ಗೌರಿಯ ವಿಗ್ರಹಕ್ಕೇ ಪೂಜೆ.

ಯಾವುದೂ ನಿಂತಿಲ್ಲ, ಆದರೆ ಉತ್ಸಾಹ ಮಾತ್ರ ಕುಂದಿದೆ. ಆದರೂ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪಾಠ ತಿಳಿಸಲಾದರೂ ಹಬ್ಬಗಳ ಪಾಲನೆ ನಡೆಯುತ್ತದೆ. ಮೊಮ್ಮಗಳ ಜೊತೆ ಕುಳಿತ ಮಗ `ಅಮ್ಮ ನೀನು ಹೇಳುವ ಎಲ್ಲ ಶ್ಲೋಕಗಳಿಗೂ ಅರ್ಥ ಹೇಳು, ಗೌರಿಯ ಮೇಲೆ ಹಾಡು ಹೇಳು` ಎಂದಾಗ,  ‘ಅಮ್ಮ ಹೇಳಿದ್ದನ್ನು ನೀನೂ ಹೇಳು` ಎಂದು ಹೆಂಡತಿಗೆ ಹೇಳುವಾಗ ಉತ್ಸಾಹ ಮತ್ತೆ ಪುಟಿಯುತ್ತದೆ.

ಪುಟಾಣಿ ಮೊಮ್ಮಗಳಿಗೆ ಬಾಗಿನ ಮಾಡಿಸುವ ಉಲ್ಲಾಸ ಮುಂದುವರಿಯುತ್ತದೆ, ವರ್ಷಕ್ಕೊಮ್ಮೆ ಬರುವ ಗೌರಿಯನ್ನು ಆದರದಿಂದ ಬರ ಮಾಡಿಕೊಳ್ಳುವ ಮನೋಬಲ ಹೆಚ್ಚುತ್ತದೆ. ಮನೆಗೆ ಹೆಣ್ಣು ಮಕ್ಕಳು ಬಂದಾಗ ತೋರುವ ಉತ್ಸಾಹವನ್ನು ಗೌರಿಯನ್ನು ಬರಮಾಡಿಕೊಳ್ಳುವಾಗಲೂ ತೋರಬೇಕಲ್ಲವೇ ಎನಿಸುತ್ತದೆ.

ಆದ್ದರಿಂದಲೇ ಹೂವು ಮೂವತ್ತು ರೂಪಾಯಿ ಮೊಳವಾದರೂ, ಬಾಳೆ ಹಣ್ಣು ಕೆ.ಜಿ.ಗೆ ಐವತ್ತಾದರೂ ಅಂಬಾ ಪಾಹಿ ಜಗದಂಬೆ ಶಂಕರಿ` ಎನ್ನುತ್ತಾ ಗೌರಿಗೆ ಆರತಿ ಎತ್ತುವುದು ನಡೆದೇ ಇದೆ. ನಮ್ಮ ಜೀವಕ್ಕಂಟಿದ ಹಬ್ಬ ಹರಿದಿನಗಳು ಮುಂದುವರಿಯುತ್ತಲೇ ಇರುತ್ತವೆ. ಅದೇ ಒಬ್ಬಟ್ಟು, ಅದೇ ಹಾಡು, ಆದರೂ ಹೊಸ ಪೀಳಿಗೆಗೆ ಎಲ್ಲವೂ ಹೊಸತು. ನಮಗೆ ಉತ್ಸಾಹ ಕುಂದಿದರೇನಂತೆ, ವಯಸ್ಸಾದರೇನಂತೆ, ಎಲ್ಲವೂ ಮುಂದುವರಿಯುತ್ತಲೇ ಇರುತ್ತವೆ. ಅದರಂತೆಯೇ ಅದರ ಜೊತೆ ಜೊತೆಗೆ ನಾವೂ ಮೆಲ್ಲಗೆ ಹೆಜ್ಜೆ ಹಾಕಲೇಬೇಕು, ಅದು ಪ್ರಕೃತಿಯ ನಿಯಮವೂ ಹೌದು.

ಕೃಪೆ: ಕಳೆದ ವರ್ಷ ಪ್ರಜಾವಾಣಿಯಲ್ಲಿ ಮೂಡಿಬಂದಿದ್ದು

Tag: Gouri Habba

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ