ಭಾನುವಾರ, ಮಾರ್ಚ್ 1, 2015

ಶಿಲ್ಪ

ಶಿಲ್ಪ

ನಿಮಗೇ ತಿಳಿದಿರುವಂತೆ ಜಕಣಾಚಾರಿ
ಬಹು ದೊಡ್ಡ ಕಲಾವಿದ
ದಯಾಮಯಿ ಭಗವಂತನ ಮೂರ್ತಿಯನ್ನು
ಅದ್ಭುತವಾಗಿ ಕೆತ್ತಿ ಮುಗಿಸಿದ

ಆಳೆತ್ತರದ ಮೂರ್ತಿ ಅದು
ಕಣ್ತುಂಬುವಂತಿತ್ತು ರೂಪ
ಹೆಚ್ಚು ಹೇಳುವುದೇನು ಬಿಡಿ
ಅಂಥ ರೂಪ ಶಿಲ್ಪಕಲೆಯಲ್ಲೇ ಅಪರೂಪ

ತುಟಿಯಿಂದ ಚಿಮ್ಮಿದ ಕರುಣಾಸಾಗರನ ನಗೆ
ಕೆನ್ನೆ ತುಂಬ ಹರಡಿದೆ
ಕಣ್ಣಲ್ಲಂತೂ ಕರುಣೆ ತುಂಬಿ ತುಳುಕುತ್ತಿದೆ
ಬಲಗೈ ಬಂದವರಿಗೆಲ್ಲ ಅಭಯ ನೀಡಿದೆ

ಹಾರ ಕಿರೀಟ ಶಂಖ ಚಕ್ರ ಗದಾ ಪದ್ಮ
ಕೊರಳ ರೇಖೆ ನಾಭಿಕಮಲ
ಹೆಚ್ಚೇನು ಉಗುರಿನ ಕಣ್ಣು ಕೂಡ
ಬಿಡಿಸಿದ್ದಾನೆಂದರೇ ಶಿಲ್ಪಿಯ ಶಕ್ತಿ ಸಾಮಾನ್ಯದ್ದಲ್ಲ

ಆದರೆ ಪಾಪ ಚಾಣವಾಡಿಸುವುದು
ಅಶಕ್ಯವಾದ್ದರಿಂದ ಭಗವಂತನ ಮೈಯೊಳಗೆ
ಕರುಳು ಹೃದಯ ಇತ್ಯಾದಿ ಒಳ ವಿವರಗಳ ಬದಲು
ಕಲ್ಲು ಕಲ್ಲನ್ನೇ ಬಿಟ್ಟು ಬಿಟ್ಟ ತಣ್ಣಗೆ

ಸಾಹಿತ್ಯ -ಎಚ್ ಎಸ್ ವೆಂಕಟೇಶಮೂರ್ತಿ


Photo courtesy: http://www.flickr.com/photos/olderock/4428625266/

Tag: Shilpa

ಕಾಮೆಂಟ್‌ಗಳಿಲ್ಲ: