ರಸಿಕಾ ಪೇಳೋ!
ಕಬ್ಬಿನ ಗಣಿ ಡೊಂಕು, ಅದರ ಹಾಲದು ಡೊಂಕೆ
ರಸಿಕಾ ಪೇಳೋ!
ಹುಬ್ಬಿನ ಗೆರೆ ಡೊಂಕು, ಕಣ್ಣ ನೋಟವು ಡೊಂಕೆ
ರಸಿಕಾ ಪೇಳೋ!
ಬಿಲ್ಲ ಕಂಬಿಯು ಡೊಂಕು, ಬಿಟ್ಟ ಬಾಣವು ಡೊಂಕೆ
ರಸಿಕಾ ಪೇಳೋ!
ಹಲ್ಲ ಸಾಲದು ಡೊಂಕು, ಬಿದ್ದ ಕಿರಣವು
ಡೊಂಕೆ
ರಸಿಕಾ ಪೇಳೋ!
ಚೆಂಬಾಳೆ ಮೈ ಡೊಂಕು, ಅದರ ತಿರುಳದು ಡೊಂಕೆ
ರಸಿಕಾ ಪೇಳೋ!
ಬಿಂಬಾಧರವು ಡೊಂಕು, ಚುಂಬನವು ಡೊಂಕೆ
ರಸಿಕಾ ಪೇಳೋ!
ಬಿದಿಗೆ ಚಂದ್ರಮ ಡೊಂಕು, ಬೆಳದಿಂಗಳದು
ಡೊಂಕೆ
ರಸಿಕಾ ಪೇಳೋ!
ವಿಧಿಯಿತ್ತ ಕುಲ ಡೊಂಕು, ನನ್ನ
ಪ್ರೀತಿಯು ಡೊಂಕೆ
ರಸಿಕಾ ಪೇಳೋ!
ಸಾಹಿತ್ಯ: ಅಂಬಿಕಾತನಯದತ್ತ
Tag: Rasika Pelo
ಕಾಮೆಂಟ್‌ಗಳು